ಟ್ರಕ್ಗೆ ಕಾರು ಢಿಕ್ಕಿ: ಒಂದೇ ಕುಟುಂಬದ 9 ಮಂದಿ ಮೃತ್ಯು
ಲಕ್ನೊ, ಜೂ.5: ಉತ್ತರಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಕಾರೊಂದು ಟ್ರಕ್ಗೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ 9 ಸದಸ್ಯರುಗಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
"ಬೆಳಗ್ಗಿನ ಜಾವ 5:30ರ ಸುಮಾರಿಗೆ ವಹಿದ್ಪುರ್ ಜಿಲ್ಲೆಯಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಒಟ್ಟು 10 ಮಂದಿ ಕಾರಿನಲ್ಲಿ ರಾಜಸ್ಥಾನದ ಭಿವಾಡಿಯಿಂದ ಬಿಹಾರದ ಭೋಜ್ಪುರಕ್ಕೆ ತೆರಳುತ್ತಿದ್ದರು'' ಎಂದು ನವಾಬ್ಗಂಜ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶೊತೋಶ್ ಕುಮಾರ್ ತ್ರಿಪಾಠಿ ಹೇಳಿದ್ದರೆ.
"ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಲು 10 ಜನರು ಒಂದೇ ಕಾರಿನಲ್ಲಿ ತವರು ಪಟ್ಟಣಕ್ಕೆ ತೆರಳುತ್ತಿದ್ದರು. ನಾವು ಘಟನೆಯ ಕುರಿತು ಕುಟುಂಬ ಸದಸ್ಯರಿಗೆ ತಿಳಿಸಿದ್ದು, ಅವರು ಪ್ರತಾಪಗಢದತ್ತ ಬರುತ್ತಿದ್ದಾರೆ. ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಟಯರ್ ಸ್ಫೋಟ ಅಥವಾ ಬೆಳಗ್ಗಿನ ಜಾವ ಚಾಲಕ ನಿದ್ದೆಗೆ ಜಾರಿದ ಪರಿಣಾಮ ಈ ಘಟನೆ ನಡೆದಿರಬಹುದು'' ಎಂದು ತ್ರಿಪಾಠಿ ಹೇಳಿದ್ದಾರೆ.