ರಾಜಸ್ಥಾನ ಹೈಕೋರ್ಟ್ ವಿಚಾರಣೆ ವೇಳೆ ಹುಕ್ಕಾ ಸೇದಿದ ಹಿರಿಯ ವಕೀಲ: ವಿಡಿಯೋ ವೈರಲ್
ಜೈಪುರ: ರಾಜಸ್ಥಾನ ಹೈಕೋರ್ಟ್ ನ ವರ್ಚುವಲ್ ವಿಚಾರಣೆಯೊಂದರ ಸಂದರ್ಭ ಹಿರಿಯ ವಕೀಲ ರಾಜೀವ್ ಧವನ್ ಅವರು ಹುಕ್ಕಾ ಸೇದುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾಜ್ಯದ ಆರು ಬಿಎಸ್ಪಿ ಶಾಸಕರು ಕಾಂಗ್ರೆಸ್ ಜತೆ ವಿಲೀನಗೊಂಡಿರುವುದರ ವಿರುದ್ಧ ದಾಖಲಾಗಿರುವ ಅಪೀಲಿನ ಮೇಲಿನ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟಿನ ಜೈಪುರ್ ಪೀಠ ಇಂದು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಈ ನಿರ್ದಿಷ್ಟ ವೀಡಿಯೋ ಕ್ಲಿಪ್ ವೈರಲ್ ಆಗಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತಮ್ಮ ವಾದ ಮುಂದುವರಿಸುತ್ತಿರುವಂತೆಯೇ ಇನ್ನೊಬ್ಬ ಹಿರಿಯ ವಕೀಲ ರಾಜೀವ್ ಧವನ್ ಅವರು ತಮ್ಮ ಮುಖಕ್ಕೆ ಅಡ್ಡಲಾಗಿ ಹಲವು ದಾಖಲೆಪತ್ರಗಳನ್ನು ಹಿಡಿದುಕೊಂಡಿದ್ದರು. ತಮ್ಮ ಮುಖ ಅಡಗಿಸಿದ್ದರೂ ಕಾಗದಪತ್ರಗಳ ಎಡೆಯಿಂದ ಹೊಗೆ ಈ ವೈರಲ್ ವೀಡಿಯೋದಲ್ಲಿ ಕಾಣಿಸುತ್ತಿದೆ.
ಸ್ವಲ್ಪ ಹೊತ್ತಿನ ನಂತರ ಅವರು ತಮ್ಮ ಮುಖಕ್ಕೆ ಅಡ್ಡಲಾಗಿ ಹಿಡಿದಿದ್ದ ಕಾಗದಗಳನ್ನು ಆಚೆ ಬದಿ ಇಡುತ್ತಿರುವಂತೆಯೇ ಅವರು ವಿಚಾರಣೆ ವೇಳೆ ಹುಕ್ಕಾ ಸೇದುತ್ತಿದ್ದುದು ದೃಢಪಟ್ಟಿದೆ.
ಈ ವಿಚಾರವನ್ನು ರಾಜಸ್ಥಾನ ಹೈಕೋರ್ಟ್ ಗಮನಿಸಿದೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ.
ಇಂದು ವಿಚಾರಣೆ ಮುಂದುವರಿದಂತೆ ರಾಜೀವ್ ಧವನ್ ಅವರ ವೀಡಿಯೋ ದಿಢೀರನೇ ಕಾಣದಾಯಿತು. ಅವರೇ ವೀಡಿಯೋ ಬಂದ್ ಮಾಡಿದರೇ ಎಂದು ಹೈಕೋರ್ಟ್ ಕೇಳಿದೆ.