ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿಯ ಅಧ್ಯಕ್ಷರಾಗಿ ಎಲ್. ಆದಿಮೂಲಂ ಆಯ್ಕೆ
ಹೊಸದಿಲ್ಲಿ, ಸೆ, 26: ದೇಶದ ದಿನಪತ್ರಿಕೆ, ಮ್ಯಾಗಝಿನ್ ಹಾಗೂ ನಿಯತಕಾಲಿಕಗಳ ಪ್ರಕಾಶಕರ ಅತ್ಯುಚ್ಛ ಸಂಸ್ಥೆ ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ (ಐಎನ್ಎಸ್)ಯ ಅಧ್ಯಕ್ಷರಾಗಿ ಎಲ್. ಆದಿಮೂಲಂ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಇಂಡಿಯನ್ ನ್ಯೂಸ್ಪೇಪರ್ ಸೊಸೈಟಿಯ 81ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆದಿಮೂಲಂ (ಹೆಲ್ತ್ ಹಾಗೂ ಆ್ಯಂಟಿಸೆಪ್ಟಿಕ್ ಪ್ರಕಾಶಕರು) ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸೊಸೈಟಿಯ 2020-21ನೇ ಸಾಲಿನ ಸಹ ಅಧ್ಯಕ್ಷರಾಗಿ ಡಿ.ಡಿ. ಪುರಕಾಯಸ್ತ (ಆನಂದ ಬಝಾರ್ ಪತ್ರಿಕಾ), ಉಪಾಧ್ಯಕ್ಷರಾಗಿ ಮೋಹಿತ್ ಜೈನ್ (ಇಕಾನಾಮಿಕ್ಸ್ ಟೈಮ್ಸ್) ಹಾಗೂ ಗೌರವ ಕೋಶಾಧಿಕಾರಿಯಾಗಿ ರಾಕೇಶ್ ಶರ್ಮಾ (ಆಜ್ ಸಮಾಜ್) ಅವರು ನಿಯೋಜಿತರಾಗಿದ್ದಾರೆ ಎಂದು ಐಎನ್ಎಸ್ನ ಹೇಳಿಕೆ ತಿಳಿಸಿದೆ. ಐಎನ್ಎಸ್ನ ಅಧ್ಯಕ್ಷರಾಗಿದ್ದ ‘ಮಿಡ್ಡೇ’ಯ ಶೈಲೇಶ್ ಗುಪ್ತಾ ಅವರ ಉತ್ತರಾಧಿಕಾರಿಯಾಗಿ ಆದಿಮೂಲಂ ನೇಮಕರಾಗಿದ್ದಾರೆ. ಆದಿಮೂಲಂ ಅವರು ಐಎನ್ಎಸ್ನ ಮಾಜಿ ಅಧ್ಯಕ್ಷ ಡಾ. ಆರ್. ಲಕ್ಷ್ಮೀಪತಿ ಅವರ ಪುತ್ರ. ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿ ಮೇರಿ ಪೌಲ್ ಆಯ್ಕೆಯಾಗಿದ್ದಾರೆ ಎಂದು ಐಎನ್ಎಸ್ನ ಹೇಳಿಕೆ ತಿಳಿಸಿದೆ.