ಬಿಹಾರ ಚುನಾವಣೆಯ ಹೊಸ್ತಿಲಲ್ಲಿ ಜೆಡಿಯು ಸೇರ್ಪಡೆಯಾದ ಮಾಜಿ ಪೊಲೀಸ್ ಮುಖ್ಯಸ್ಥ ಪಾಂಡೆ
ಪಾಟ್ನಾ, ಸೆ.27: ಬಿಹಾರದ ಮಾಜಿ ಪೊಲೀಸ್ ಮುಖ್ಯಸ್ಥ ಗುಪ್ತೇಶ್ವರ ಪಾಂಡೆ ಬಿಹಾರ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಆಡಳಿತರೂಢ ಸಂಯುಕ್ತ ಜನತಾದಳ(ಜೆಡಿಯು)ಪಕ್ಷವನ್ನು ರವಿವಾರ ಸೇರ್ಪಡೆಯಾದರು.
ಪಕ್ಷ ಸೇರ್ಪಡೆ ಕಾರ್ಯಕ್ರಮವು ಮುಖ್ಯಮಂತ್ರಿ ನಿತೀಶ ಕುಮಾರ್ ಅವರ ಅಧಿಕೃತ ನಿವಾಸದಲ್ಲಿ ನಡೆಯಿತು. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನಸಂದಣಿ ಸೇರುವುದಕ್ಕೆ ನಿಷೇಧ ಹೇರಲಾಗಿತ್ತು.
ಪಾಂಡೆ ಕಳೆದ ವಾರವಷ್ಟೇ ಪೊಲೀಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ವೇಳೆ ತಕ್ಷಣಕ್ಕೆ ರಾಜಕೀಯ ಸೇರುವ ಸಾಧ್ಯತೆ ತಳ್ಳಿ ಹಾಕಿದ್ದ ಪಾಂಡೆ, "ನಾನು ರಾಜಕೀಯ ಸೇರುವುದರಿಂದ ಯಾವ ಹಾನಿಯಾಗುತ್ತದೆ. ಇದು ಅಸಾಂವಿಧಾನಿಕವೇ, ಅನೈತಿಕವೇ ಅಥವಾ ಕಾನೂನು ಬಾಹಿರವೇ'' ಎಂದು ಪ್ರಶ್ನಿಸುವ ಮೂಲಕ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದರು.
Next Story