ರಕ್ತಚಂದನ ಸಾಗಾಟದ ಮಹಿಳಾ ಡಾನ್ ಸಂಗೀತಾ ಚಟರ್ಜಿ ಬಂಧನ
ಕೋಲ್ಕತಾ, ಮಾ.29: ರಕ್ತಚಂದನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪೊಲೀಸರ ಕೈಗೆ ಸಿಗದೆ ತಲೆಮೆರೆಸಿಕೊಂಡಿದ್ದ ಮಾಜಿ ಗಗನ ಸಖಿ, ರೂಪದರ್ಶಿ ಸಂಗೀತಾ ಚಟರ್ಜಿಯನ್ನು ಕೋಲ್ಕತಾದ ಶಾಪಿಂಗ್ ಮಾಲ್ ವೊಂದರಲ್ಲಿ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದ ಶಾಪಿಂಗ್ ಮಾಲ್ ವೊಂದರಲ್ಲಿ ಸಂಗೀತಾ ಚಟರ್ಜಿ ಇರುವುದನ್ನು ಪತ್ತೆ ಮಾಡಿದ ಪೊಲೀಸರು ಕೋಲ್ಕತಾ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಮಂಗಳವಾರ ಆಕೆಯನ್ನು ಬಂಧಿಸಿದ್ದಾರೆ. ಸಂಗೀತಾ ಚಟರ್ಜಿಯನ್ನು ಪೊಲೀಸರು ಚಿತ್ತೂರಿಗೆ ಕರೆ ತಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದಾರೆ. ಆಕೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರಕ್ತ ಚಂದನ ಕಳ್ಳ ಸಾಗಾಟದ ಡಾನ್ ಲಕ್ಷ್ಮಣ್ ಎಂಬಾತನನ್ನು ವಿವಾಹವಾಗಿದ್ದ ಸಂಗೀತಾ ಚಟರ್ಜಿ ಆತನ ರಕ್ತ ಚಂದನ ಕಳ್ಳಸಾಗಣೆ ದಂಧೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಳು. 2016ರಲ್ಲಿ ಲಕ್ಷ್ಮಣ್ ನನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಲಾಗಿತ್ತು.