ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ : ಚಾಲೂಸ್ಥಿತಿಯಲ್ಲಿದ್ದ ಏಸಿ,ಸ್ಟೀರಿಯೊ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಎ.18: ದಕ್ಷಿಣ ದಿಲ್ಲಿಯಲ್ಲಿ ತನ್ನ ಕಾರಿನಲ್ಲಿ ಗುಂಡೇಟಿನಿಂದ ಸತ್ತಿದ್ದ ವ್ಯಕ್ತಿಯ ಶವವು ಪತ್ತೆಯಾಗಿದೆ. ಕಾರಿನ ಇಂಜಿನ್,ಏಸಿ ಚಾಲೂಸ್ಥಿತಿಯಲ್ಲಿಯೇ ಇದ್ದು, ಸಂಗೀತ ಜೋರಾಗಿ ಮೊಳಗುತ್ತಿತ್ತು. ಕಾರಿನ ಬಾಗಿಲನ್ನು ಲಾಕ್ ಮಾಡಿರಲಿಲ್ಲ.
ಪ್ರದೇಶದಲ್ಲಿಯ ಆಸ್ಪತ್ರೆಯೊಂದರ ಬಳಿ ನಿಂತಿದ್ದ ಕಪ್ಪುಬಣ್ಣದ ಮಹೀಂದ್ರಾ ಎಕ್ಸ್ಯುವಿ ವಾಹನದಲ್ಲಿ ಚಾಲಕನ ಶವವವನ್ನು ಕಂಡ ಸ್ಥಳೀಯ ವ್ಯಕ್ತಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದ.
ಮೃತ ವ್ಯಕ್ತಿಯನ್ನು ಜಾಮಿಯಾ ನಗರದ ನಿವಾಸಿ ಮುಹಮ್ಮದ್ ಅಫ್ಝಲ್ (37) ಎಂದು ಗುರುತಿಸಲಾಗಿದೆ.
ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಇದೊಂದು ಕೊಲೆ ಪ್ರಕರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡಸುತ್ತಿದ್ದಾರೆ. ಅಫ್ಝಲ್ಗೆ ಸೇರಿದ್ದ ಫಾಸ್ಟ್ಫುಡ್ ಅಂಗಡಿಯೊಂದನ್ನು ಕೆಲವು ತಿಂಗಳ ಹಿಂದೆ ನೆಲಸಮಗೊಳಿಸಲಾಗಿದ್ದು, ಆತ ಸಾಲದ ಹೊರೆಯಿಂದಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಅಫ್ಜಲ್ನ ಸಾವಿಗೆ ಕಾರಣವಾದ ಘಟನಾವಳಿಗಳ ಬಗ್ಗೆ ತಿಳಿದುಕೊಳ್ಳಲು ಪೊಲೀಸರು ಪ್ರದೇಶದಲ್ಲಿಯ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸುತ್ತಿದ್ದಾರೆ.
ಅಫ್ಝಲ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ಆತನ ಕುಟುಂಬ ಸದಸ್ಯರು ತಳ್ಳಿಹಾಕಿದ್ದಾರೆ. ಆತ ಪ್ರದೇಶದಲ್ಲಿ ಹೊಸ ಅಂಗಡಿ ಆರಂಭಿಸಲು ಜಾಗಕ್ಕಾಗಿ ಹುಡುಕಾಡುತ್ತಿದ್ದ ಎಂದು ಸೋದರ ಪೊಲೀಸರಿಗೆ ತಿಳಿಸಿದ್ದಾನೆ.