ದಿಲ್ಲಿ:ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಹೊಸದಿಲ್ಲಿ,ಜೂ.14: ಇಲ್ಲಿಯ ಬೇಗಂಪುರ ಪ್ರದೇಶದ ಸಾರ್ವಜನಿಕ ಉದ್ಯಾನವನದಲ್ಲಿ ನಾಲ್ವರು ದುಷ್ಕರ್ಮಿಗಳು 16ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಿಂದ ಕೇವಲ 100 ಮೀ.ಅಂತರದಲ್ಲಿ ಈ ಹೇಯ ಕೃತ್ಯ ನಡೆದಿದೆ.
12ನೇ ತರಗತಿಯ ವಿದ್ಯಾರ್ಥಿನಿ ಮಂಗಳವಾರ ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ತನ್ನ ಸ್ನೇಹಿತನೊಂದಿಗೆ ಪಾರ್ಕ್ನಲ್ಲಿ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ.
ಪಾರ್ಕ್ಗೆ ಆಗಮಿಸಿದ್ದ ನಾಲ್ವರು ವ್ಯಕ್ತಿಗಳು ತಮ್ಮಿಂದಿಗೆ ಅನುಚಿತವಾಗಿ ವರ್ತಿಸ ತೊಡಗಿದ್ದರು. ಆಕ್ಷೇಪಿಸಿದಾಗ ಹಿಂಸೆಗಿಳಿದ ಅವರು ತನ್ನ ಸ್ನೇಹಿತನನ್ನು ಒತ್ತೆಯಾಳಾಗಿ ಹಿಡಿದುಕೊಂಡು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ದೂರಿನಲ್ಲಿ ಆಪಾದಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅವರು ಬೆದರಿಕೆಯನ್ನೂ ಒಡ್ಡಿದ್ದರು ಎಂದರು.
ಘಟನೆಯ ಬಳಿಕ ಬಾಲಕಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.