ವಾಯುಪಡೆ ವಿಮಾನದಲ್ಲೇ ಅವಿತಿದ್ದ ವಿಶೇಷ ಅತಿಥಿ ಯಾರು ಗೊತ್ತೇ?
ಆಗ್ರಾ/ ಬರೇಲಿ, ಜು. 6: ವಾಯುಪಡೆ ವಿಮಾನದಲ್ಲಿ 8 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡು, ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದ ಪ್ರಸಂಗ ಬೆಳಕಿಗೆ ಬಂದಿದೆ.
ಎಎನ್-32 ಸಾರಿಗೆ ವಿಮಾನದ ಕೆಳಭಾಗದ ಸರಕು ತುಂಬುವ ಸ್ಥಳದಲ್ಲಿ ಹೆಬ್ಬಾವು ಪತ್ತೆಯಾಗಿದ್ದು, ವಿಮಾನದ ತೀರಾ ಕಿರಿದಾದ ಜಾಗದಿಂದ ಹಾವನ್ನು ಸುರಕ್ಷಿತವಾಗಿ ಹೊರತೆಗೆಯಲು ಐದು ಗಂಟೆಗಳ ಕಾಲ ಹೆಣಗಾಡಬೇಕಾಯಿತು.
ಹೆಬ್ಬಾವಿನ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದ್ದು, ಆರೋಗ್ಯಸ್ಥಿತಿ ಸರಿ ಇದ್ದಲ್ಲಿ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಯುಪಡೆ ವಿಮಾನದ ಎಂಟು ರೆಕ್ಕೆಗಳ ನಡುವಿನ ಸಂಧಿಯಲ್ಲಿ ಹೆಬ್ಬಾವು ಸಿಕ್ಕಿಹಾಕಿಕೊಂಡಿತ್ತು. ಹೆಬ್ಬಾವನ್ನು ಸುರಕ್ಷಿತವಾಗಿ ಹೊರತೆಗೆಯುವ ಸಲುವಾಗಿ ವಾಯುಪಡೆ ಅಧಿಕಾರಿಗಳು ವನ್ಯಜೀವಿ ವಿಭಾಗಕ್ಕೆ ಮಾಹಿತಿ ನೀಡಿದರು.
ವೈಲ್ಡ್ಲೈಫ್ ಎಸ್ಒಎಸ್ ಎಂಬ ಸ್ವಯಂಸೇವಾ ಸಂಸ್ಥೆಯ ತಂಡ ತಕ್ಷಣ ಧಾವಿಸಿ ಪರಿಹಾರ ಕಾರ್ಯಾಚರಣೆ ಕೈಗೊಂಡಿತು. ಯಾವುದೇ ಗಾಯಗಳಾಗದೇ ಹಾವನ್ನು ಹೊರತೆಗೆಯಲು ಐದು ಗಂಟೆ ಕಾಲ ಸಿಬ್ಬಂದಿ ಶ್ರಮಿಸಿದರು.
"ಆಗ್ರಾ ವಾಯುಸೆನೆಯಲ್ಲಿ ತಂಗಿದ್ದ ಎಎನ್-32 ವಿಮಾನದಲ್ಲಿ ಈ ಹೆಬ್ಬಾವು ಕಂಡುಬಂದಿದೆ. ಜೋರಾಗಿ ಮಳೆ ಸುರಿಯುತ್ತಿದ್ದುದರಿಂದ ಬಹುಶಃ ಹೆಬ್ಬಾವು ವಿಮಾನದ ಅಂಡರ್ಕ್ಯಾರೇಜ್ಗೆ ನುಸುಳಿರಬೇಕು. ತಕ್ಷಣ ಸಿಬ್ಬಂದಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಪರಿಹಾರ ತಂಡ ಹೆಬ್ಬಾವಿಗೆ ನಿದ್ರೆ ಬರುವ ಔಷಧಿ ನೀಡಿ ಅದನ್ನು ಸುರಕ್ಷಿತವಾಗಿ ಹೊರಕ್ಕೆ ತೆಗೆದಿದೆ" ಎಂದು ರಕ್ಷಣಾ ವಿಭಾಗದ ವಕ್ತಾರ ಗಾರ್ಗಿ ಮಲಿಕ್ ಹೇಳಿದ್ದಾರೆ.
"ಇಂಥ ಕಾರ್ಯಾಚರಣೆಗೆ ತಾಳ್ಮೆ ಮತ್ತು ಕೌಶಲ ಅಗತ್ಯ. ನಮ್ಮ ತರಬೇತಿ ಪಡೆದ ನುರಿತ ಸಿಬ್ಬಂದಿ ಇದನ್ನು ಯಶಸ್ವಿಯಾಗಿ ನಿರ್ವಹಿಸಿ, ಹೆಬ್ಬಾವಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಂಡಿದ್ದಾರೆ. ಐಎಎಫ್ ಸಿಬ್ಬಂದಿ ತಕ್ಷಣ ಮಾಹಿತಿ ನೀಡಿ, ಹೆಬ್ಬಾವಿನ ರಕ್ಷಣೆ ಬಗ್ಗೆ ಕಾಳಜಿ ವಹಿಸಿದ್ದು ಅಭಿನಂದನೀಯ" ಎಂದು ಅರಣ್ಯ ಇಲಾಖೆಯ ಸಂರಕ್ಷನಾ ವಿಭಾಗದ ನಿರ್ದೇಶಕ ಬೈಜುರಾಜ್ ಹೇಳಿದ್ದಾರೆ.