ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ಗೆ ಬಿಎಂಡಬ್ಲು ಕಾರು ಗಿಫ್ಟ್
ಹೈದರಾಬಾದ್, ಜು.26: ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಲಂಡನ್ನಿಂದ ಹೈದರಾಬಾದ್ಗೆ ವಾಪಸಾದ ತಕ್ಷಣ ಬಿಎಂಡಬ್ಲು ಕಾರನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ. ಭಾರತದ ಜೂನಿಯರ್ ಕ್ರಿಕೆಟ್ ತಂಡದ ಮಾಜಿ ಮುಖ್ಯ ಆಯ್ಕೆಗಾರ ಹಾಗೂ ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಉಪಾಧ್ಯಕ್ಷ ವಿ.ಚಾಮುಂಡೇಶ್ವರನಾಥ್ ಕ್ರಿಕೆಟ್ ಆಟಗಾರ್ತಿ ಮಿಥಾಲಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಆಂಧ್ರ ಪ್ರದೇಶ ರಣಜಿ ತಂಡದ ಮಾಜಿ ನಾಯಕನಾಗಿರುವ ಚಾಮುಂಡೇಶ್ವರನಾಥ್ ಕಳೆದೆ ಕೆಲವು ವರ್ಷಗಳಿಂದ ವಿವಿಧ ಕ್ರೀಡೆಗಳಲ್ಲಿ ಮಹಾನ್ ಸಾಧನೆ ಮಾಡಿದವರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಾ ಬಂದಿದ್ದಾರೆ. ಮಹಿಳೆಯರ ಐಸಿಸಿ ವಿಶ್ವಕಪ್ನಲ್ಲಿ ತನ್ನ ನಾಯಕತ್ವದಲ್ಲಿ ಭಾರತವನ್ನು ಫೈನಲ್ಗೆ ತಲುಪಿಸಿದ್ದ ಮಿಥಾಲಿಗೆ ಬಿಎಂಡಬ್ಲು ಕಾರನ್ನು ಗಿಫ್ಟ್ ಆಗಿ ನೀಡಲು ಚಾಮುಂಡೇಶ್ವರನಾಥ್ ನಿರ್ಧರಿಸಿದ್ದಾರೆ.
ಕಳೆದ ವರ್ಷ ರಿಯೋ ಒಲಿಂಪಿಕ್ಸ್ನಲ್ಲಿ ಪದಕ ವಿಜೇತರಾದ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು, ಕುಸ್ತಿಪಟು ಸಾಕ್ಷಿ ಮಲಿಕ್ಗೆ ಚಾಮುಂಡೇಶ್ವರನಾಥ್ ಬಿಎಂಡಬ್ಲು ಕಾರನ್ನು ಗಿಫ್ಟ್ ನೀಡಿದ್ದರು. ಹೈದರಾಬಾದ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಹಾಗೂ ಕೋಚ್ ಪಿ.ಗೋಪಿಚಂದ್ಗೆ ಕ್ರಿಕೆಟ್ ಲೆಜಂಡ್ ಸಚಿನ್ ತೆಂಡುಲ್ಕರ್ ಅವರು ಕಾರಿನ ಕೀ ಹಸ್ತಾಂತರಿಸಿದ್ದರು. ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಪಿ. ಕಶ್ಯಪ್ಗೆ ಕೂಡ ಚಾಮುಂಡೇಶ್ವರನಾಥ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.