ಈ ಪ್ರಸಿದ್ಧ ಬಾಲಿವುಡ್ ನಟನಿಗೆ ‘ನಾಸಾ’ ನೀಡುತ್ತಿದೆ ವಿಶೇಷ ತರಬೇತಿ
ಹೊಸದಿಲ್ಲಿ,ಆ.2: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ಅವರು ಗಗನಯಾತ್ರಿಯ ಪಾತ್ರದಲ್ಲಿ ನಟಿಸುವ ಅವಕಾಶದಿಂದ ತೀರಾ ಸಂತೋಷದಿಂದಿರುವಂತೆ ಕಾಣಿಸುತ್ತಿದೆ. ಅವರು ವಿಕಿ ರಜನಿ ಅವರ ಮುಂಬರುವ ಚಿತ್ರ ‘ಚಂದಾ ಮಾಮ ದೂರ್ ಕೇ’ ಇದರಲ್ಲಿ ಗಗನ ಯಾತ್ರಿಯ ಪಾತ್ರ ನಿರ್ವಹಿಸುತ್ತಿರುವುದರಿಂದ ನಾಸಾ ಅವರಿಗೆ ವಿಶೇಷ ತರಬೇತಿ ನೀಡುತ್ತಿದೆ. ತರಬೇತಿಗಾಗಿ ಬಾಲಿವುಡ್ ನಟರೊಬ್ಬರು ನಾಸಾ ಸಂದರ್ಶಿಸುತ್ತಿರುವುದು ಇದೇ ಮೊದಲಾಗಿದೆ. ಇದಕ್ಕೂ ಮೊದಲು ಶಾರುಖ್ ಖಾನ್ ಅವರು ಸ್ವದೇಶ್ ಚಿತ್ರದಲ್ಲಿ ನಾಸಾದ ಸಂಶೋಧಕ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ಕೆಲ ದೃಶ್ಯಗಳನ್ನು ನಾಸಾ ರಿಸರ್ಚ್ ಸೆಂಟರಿನಲ್ಲಿ ಚಿತ್ರೀಕರಿಸಲಾಗಿತ್ತು.
ಕಳೆದ ತಿಂಗಳು ದೊಡ್ಡ ರಾಕೆಟ್ ಒಂದರಲ್ಲಿ ತಾವು ಇದ್ದ ಚಿತ್ರವೊಂದನ್ನು ಸುಶಾಂತ್ ಶೇರ್ ಮಾಡಿದ್ದರು. ತಮ್ಮ ತಾಯಿ ತನ್ನನ್ನು ಗಗನಯಾತ್ರಿಯಾಗಿ ನೋಡಬಯಸಿದ್ದರು ಎಂದು ಸುಶಾಂತ್ ಟ್ವೀಟ್ ಕೂಡ ಮಾಡಿದ್ದರು.
‘ಚಂದಾ ಮಾಮ ದೂರ್ ಸೇ’ ಚಿತ್ರದಲ್ಲಿ ಸುಶಾಂತ್ ಅವರು ನವಾಝುದ್ದೀನ್ ಸಿದ್ದೀಖಿ ಹಾಗೂ ಆರ್ ಮಾಧವನ್ ಜತೆ ಕಾಣಿಸಲಿದ್ದಾರೆ. ನವಾಝುದ್ದೀನ್ ಅವರು ತಮ್ಮ ‘ಬಾಬುಮೊಶೈ ಬಂದೂಕ್ ಬಾರ್’ ಚಿತ್ರದ ಬಿಡುಗಡೆಗೆ ಕಾದಿದ್ದಾರೆ. ‘ಚಂದಾ ಮಾಮಾ ದೂರ್ ಕೆ’ ಚಿತ್ರದಲ್ಲಿ ನವಾಝುದ್ದೀನ್ ಕೂಡ ಗಗನಯಾತ್ರಿಯಾಗಿ ಕಾಣಿಸುತ್ತಿದ್ದಾರೆ.