ಗೋರಖ್ ಪುರ್ ಆಸ್ಪತ್ರೆಯಲ್ಲಿ ಮತ್ತೆ 9 ಮಕ್ಕಳು ಮೃತ್ಯು
ಸಾವಿನ ಸಂಖ್ಯೆ 105ಕ್ಕೆ ಏರಿಕೆ
ಗೋರಖ್ ಪುರ, ಆ.19: ಗುರುವಾರ ಮತ್ತು ಶುಕ್ರವಾರದ ನಡುವೆ ಇಲ್ಲಿನ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮತ್ತೆ ಒಂಬತ್ತು ಮಕ್ಕಳು ಮೃತಪಟ್ಟಿದ್ದು, ಆಗಸ್ಟ್ 10ರ ದುರಂತದ ನಂತರ ಈ ಆಸ್ಪತ್ರೆಯಲ್ಲಿ ಸಾವಿಗೀಡಾದ ಮಕ್ಕಳ ಸಂಖ್ಯೆ 105ಕ್ಕೆ ಏರಿದೆ.
ಮತ್ತೆ ಒಂಬತ್ತು ಮಕ್ಕಳ ಸಾವಿನ ವಿಚಾರವನ್ನು ಆಸ್ಪತ್ರೆಯ ಡಾ.ಪಿ.ಕೆ. ಸಿಂಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ದೃಢೀಕರಿಸಿದ್ದಾರೆ. ಈ ಒಂಬತ್ತು ಮಕ್ಕಳಲ್ಲಿ ಐದು ಮಂದಿ ಮಕ್ಕಳ ಸಾವು ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ಸಂಭವಿಸಿದರೆ, ಎರಡು ಮಕ್ಕಳು ಮೆದುಳುಜ್ವರ ವಿಭಾಗದಲ್ಲಿ ಸಾವನ್ನಪ್ಪಿದ್ದಾರೆ. ಉಳಿದ ಇನ್ನಿಬ್ಬರು ಮಕ್ಕಳು ಸಾಮಾನ್ಯ ಪೀಡಿಯಾಟ್ರಿಕ್ ವಾರ್ಡಿನಲ್ಲಿ ಮೃತಪಟ್ಟಿದ್ದಾರೆ.
ಹೆಚ್ಚಿನ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾದಾಗ ಆವರ ಸ್ಥಿತಿ ಗಂಭೀರವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳ ಸಾವಿನ ಬಗೆಗಿನ ವರದಿಯನ್ನು ಆಸ್ಪತ್ರೆ ಸರಕಾರಕ್ಕೆ ಕಳುಹಿಸುವುದು ಎಂದು ತಿಳಿದು ಬಂದಿದೆ.
ಶುಕ್ರವಾರ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಮಹಾನಿರ್ದೇಶಕರಾದ ಡಾ.ಕೆ.ಕೆ. ಗುಪ್ತಾ ಅವರು ಕಾಲೇಜಿನ ಪ್ರಿನ್ಸಿಪಾಲ್ ಜತೆ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರು ಶನಿವಾರ ಆಸ್ಪತ್ರೆಗೆ ಭೇಟಿ ನೀಡುವ ಕಾರ್ಯಕ್ರಮವಿದೆ ಎಂದು ಹೇಳಲಾಗಿದೆ.