ಜಿಎಸ್ಟಿ ರಿಟರ್ನ್ ಸಲ್ಲಿಕೆಗೆ ಗಡುವು ವಿಸ್ತರಣೆ
ಹೊಸದಿಲ್ಲಿ,ಆ.19: ಭಾರೀ ದಟ್ಟಣೆಯಿಂದಾಗಿ ಜಿಎಸ್ಟಿಎನ್ ಜಾಲತಾಣದಲ್ಲಿ ತಾಂತ್ರಿಕ ಸಮಸ್ಯೆಗಳು ತಲೆದೋರಿದ ಹಿನ್ನೆಲೆಯಲ್ಲಿ ಸರಕಾರವು ಶನಿವಾರ ಜಿಎಸ್ಟಿ ವ್ಯವಸ್ಥೆಯಡಿ ಜುಲೈ ತಿಂಗಳ ರಿಟರ್ನ್ಗಳನ್ನು ಸಲ್ಲಿಸಲು ಮತ್ತು ತೆರಿಗೆ ಪಾವತಿಸಲು ಕೊನೆಯ ದಿನಾಂಕವನ್ನು ಆ.20ರಿಂದ ಆ.25ಕ್ಕೆ ವಿಸ್ತರಿಸಿದೆ. ಜುಲೈ ಜಿಎಸ್ಟಿ ಪಾವತಿಗೆ ಅಂತಿಮ ದಿನಾಂಕವನ್ನು ಆ.25ಕ್ಕೆ ವಿಸ್ತರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಿ ಅಧಿಕಾರಿಗಳನ್ನೊಳಗೊಂಡಿರುವ ಜಿಎಸ್ಟಿ ಜಾರಿ ಸಮಿತಿಯು ನಿರ್ಧರಿಸಿದೆ. ಜಮ್ಮು-ಕಾಶ್ಮೀರದಂತೆ ಕೆಲವು ನೆರೆಪೀಡಿತ ರಾಜ್ಯಗಳೂ ಗಡುವು ವಿಸ್ತರಣೆಯನ್ನು ಕೋರಿದ್ದವು ಎಂದು ವಿತ್ತ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಟಿಆರ್ಎಎನ್ಎಸ್ 1 ಅರ್ಜಿಯನ್ನು ತುಂಬಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ನ ಲಾಭ ಪಡೆದುಕೊಳ್ಳಲು ಬಯಸುವ ತೆರಿಗೆದಾರರಿಗೆ ರಿಟರ್ನ್ಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಆ.28ಕ್ಕೆ ವಿಸ್ತರಿಸಲಾಗಿದೆ.
Next Story