ರೋಗಿಯನ್ನು ಹೊಡೆದು ಸಾಯಿಸಿದ ವಾರ್ಡ್ ಬಾಯ್
ಗಾಝಿಯಾಬಾದ್, ಆ.24: ಇಲ್ಲಿನ ಎಂಎಂಜಿ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಡೆದ ಅಮಾನವೀಯ ಘಟನೆಯೊಂದರಲ್ಲಿ ವಾರ್ಡ್ ಬಾಯ್ ಒಬ್ಬ ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ಅನಾಥ ರೋಗಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ಅದಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಆತ ಘಟನೆ ನಡೆದು ಒಂದು ಗಂಟೆಯೊಳಗೆ ಸಾವಿಗೀಡಾಗಿದ್ದಾನೆ.
ಈ ಘಟನೆಯ ವೀಡಿಯೋವೊಂದನ್ನು ತೆಗೆದಿದ್ದ ಸ್ಥಳೀಯ ಪತ್ರಕರ್ತರೊಬ್ಬರು ಅದನ್ನು ಬುಧವಾರ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದಾಗಲಷ್ಟೇ ಈ ಘಟನೆ ಹೊರಜಗತ್ತಿಗೆ ತಿಳಿದು ಬಂದಿದೆ.
ವಾರ್ಡಿನ ಕಿಟಿಕಿ ಮೂಲಕ ಈ ವೀಡಿಯೋ ತೆಗೆಯಲಾಗಿದ್ದು, ಇದು ಬಹಿರಂಗಗೊಳ್ಳುತ್ತಿದ್ದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಗುತ್ತಿಗೆಯಾಧರಿತ ಉದ್ಯೋಗಿಯಾಗಿದ್ದ ಆ ವಾರ್ಡ್ ಬಾಯ್ ನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ.
ಆಸ್ಪತ್ರೆಯ ಮುಖ್ಯ ದ್ವಾರದಲ್ಲಿ ತೀವ್ರ ಅಸೌಖ್ಯದಿಂದ ಬಿದ್ದುಕೊಂಡಿದ್ದ ಆ ವ್ಯಕ್ತಿಗೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ವಾರ್ಡಿಗೆ ಕರೆತರಲಾಗಿತ್ತು. ಅಲ್ಲಿನ ಉದ್ಯೋಗಿಯೊಬ್ಬರು ಆತನ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಅದಾಗಲೇ ತೀವ್ರ ಅಸ್ವಸ್ಥಗೊಂಡಿದ್ದ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ’’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಜೆ.ಕೆ.ತ್ಯಾಗಿ ತಿಳಿಸಿದ್ದಾರೆ.
ಮಂಗಳವಾರ ವಾರ್ಡಿನ ಉದ್ಯೋಗಿಯೊಬ್ಬ ರಜೆಯಲ್ಲಿದ್ದುದರಿಂದ ಗುತ್ತಿಗೆ ಉದ್ಯೋಗಿ ರಾಕೇಶನನ್ನು ಅಲ್ಲಿಗೆ ನಿಯೋಜಿಸಲಾಗಿತ್ತು. ಆತ ನಂತರ ರೋಗಿಗೆ ಹೊಡೆಯುತ್ತಿದ್ದುದು ಕಂಡುಬಂತು ಎಂದು ಅವರು ಮಾಹಿತಿ ನೀಡಿದ್ದಾರೆ.
ವೀಡಿಯೋದಲ್ಲಿ ವಾರ್ಡ್ ಬಾಯ್ ರೋಗಿಯ ಬಟ್ಟೆ ಬದಲಾಯಿಸುವಾಗ ಆತನ ಅಸಹಕಾರದಿಂದ ಬೇಸತ್ತು ಆತನಿಗೆ ಹೊಡೆಯುತ್ತಿರುವುದು ಕಾಣಿಸುತ್ತದೆ.