ಕಾವ್ಯಮಾಧವನ್ರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ: ಪೊಲೀಸ್
ನಟಿಗೆ ಲೈಂಗಿಕ ಕಿರುಕುಳ ಪ್ರಕರಣ
ಕೊಚ್ಚಿ,ಸೆ.18: ನಟಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಟ ದಿಲೀಪ್ರ ಪತ್ನಿ ಕಾವ್ಯಾ ಮಾಧವನ್ ಮತ್ತು ದಿಲೀಪ್ರ ಗೆಳೆಯ ನಾದಿರ್ಶಾರ ಪಾತ್ರವಿದೆಯೇ ಎನ್ನುವ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೈಕೋರ್ಟಿಗೆ ತಿಳಿಸಿದ್ದಾರೆ.
ಕಾವ್ಯಾ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಗೆ ಉತ್ತರಿಸಿದ ವರದಿಯಲ್ಲಿ, ಪೊಲೀಸರು ಇದೇ ಮೊದಲ ಬಾರಿ ಕಾವ್ಯಾ ಮತ್ತು ನಾದಿರ್ ಶಾರ ಪಾತ್ರದ ಕುರಿತು ತನಿಖೆ ನಡೆಸುತ್ತಿರುವ ವಿಷಯವನ್ನು ದೃಢೀಕರಿಸಿದ್ದಾರೆ.
ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತನಿಖೆ ಈಗಲೂ ಮುಂದುವರಿಯುತ್ತಿದೆ. ಹಲವರ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೈಕೋರ್ಟಿಗೆ ತಮ್ಮ ವರದಿಯಲ್ಲಿ ವಿವರಿಸಿದ್ದಾರೆ. ಪೊಲೀಸರ ಈವರೆಗಿನ ನಡೆಗಳು ನಿಗೂಢವಾಗಿದೆ. ತಾನು ಯಾವ ಕ್ಷಣವೂ ಬಂಧಿಸಲ್ಪಡುವ ಭೀತಿಯಿದೆ ಎಂದು ಕಾವ್ಯಾ ಮಾಧವನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ನಟಿಗೆ ಕಿರುಕುಳ ನೀಡಿದ ಘಟನೆಯಲ್ಲಿ ಮೇಡಂ ಎನ್ನುವ ಒಂದು ಕಲ್ಪಿತ ಪಾತ್ರವನ್ನು ಸೃಷ್ಟಿಸಿ ತನ್ನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾವ್ಯಾ ಹೈಕೋರ್ಟಿಗೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ವಿವರಿಸಲಾಗಿದೆ. ಇದೇ ವೇಳೆ ನಾದಿರ್ ಶಾರಿಗೂ, ಕಾವ್ಯಾರಿಗೂ ಕ್ಲೀನ್ ಚಿಟ್ ನೀಡಲು ಈಗ ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಪೊಲೀಸರು,ದಿಲೀಪ್ರ ಜೊತೆಯಲ್ಲಿ 13 ಗಂಟೆಗಳಕಾಲ ನಾದಿರ್ ಶಾರನ್ನು ವಿಚಾರಣೆ ನಡೆಸಿದ್ದರು. ನಿನ್ನೆ ಮತ್ತೆ ನಾದಿರ್ ಶಾರನ್ನು ಐದೂವರೆ ಗಂಟೆಕಾಲ ವಿಚಾರಣೆ ನಡೆಸಿದ್ದಾರೆ.