ಬೀದಿ ಬದಿಯಲ್ಲೇ ಟ್ಯಾಕ್ಸಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆಯರು !
ಮಾರಾಡ್(ಕೊಚ್ಚಿ), ಸೆ. 21: ಉಬರ್ ಟ್ಯಾಕ್ಸಿ ಚಾಲಕನಿಗೆ ಹಾಡಹಗಲೇ ಹಲ್ಲೆ ನಡೆಸಿದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರನ್ನು ಕಣ್ಣೂರ್ ಆಲಕ್ಕೋಡ್ನ ಏಂಜಲ್ ಬೇಬಿ(30), ಕ್ಲಾರಾ ಸಿಬಿನ್(27),ಪತ್ತನಂತಿಟ್ಟದ ಎಂ.ಶೀಜಾ(30) ಎಂದು ಗುರುತಿಸಲಾಗಿದೆ. ವೈಟಿಲ ಜಂಕ್ಷನ್ನಲ್ಲಿ ಬುಧವಾರ ಬೆಳಗ್ಗೆ 11:30ಕ್ಕೆ ಘಟನೆ ನಡೆದಿದ್ದು, ಕಲ್ಲಿನಿಂದ ತಲೆಗೆ ಹೊಡೆದದ್ದರಿಂದ ಟ್ಯಾಕ್ಸಿ ಚಾಲಕ ಕುಂಬಳೆಯ ಶಫೀಕ್(32) ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಎರ್ನಾಕುಳಂ ಜನರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಸ್ಥಳೀಯರು ಮತ್ತು ಪೊಲೀಸ್ ಟ್ರಾಫಿಕ್ ವಾರ್ಡನ್ ನೋಡುತ್ತಿದಂತೆ ಮಹಿಳೆಯರು ಚಾಲಕನಿಗೆ ಹಲ್ಲೆ ನಡೆಸಿದ್ದರು.
ನಂತರ ಸ್ಥಳೀಯರು ಮಹಿಳೆಯರನ್ನು ಪೊಲೀಸ್ ವಾಚ್ಟವರ್ನಲ್ಲಿ ತಡೆದು ನಿಲ್ಲಿಸಿ, ಮಹಿಳಾ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಶಿನೋಜ್ ಎನ್ನುವವರು ತೃಪ್ಪುಣಿತ್ತುರದ ಕಚೇರಿಗೆ ಹೋಗಲು ಉಬರ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದರು. ವೈಟ್ಟಿಲದಲ್ಲಿ ಉಬರ್ ಟ್ಯಾಕ್ಸಿ ಬುಕ್ ಮಾಡಿ ಮಹಿಳೆಯರು ಕೂಡಾ ಟ್ಯಾಕ್ಸಿಗೆ ಕಾಯುತ್ತಿದ್ದರು. ಅಷ್ಟರಲ್ಲಿ ಬಂದ ಉಬರ್ ಟ್ಯಾಕ್ಸಿಗೆ ಶಿನೋಜ್ ಹತ್ತುವುದನ್ನು ನೋಡಿ ಮಹಿಳೆಯರು ಕೋಪಗೊಂಡು ಚಾಲಕನೊಡನೆ ವಾಗ್ವಾದಕ್ಕಿಳಿದ್ದಾರೆ. ಶಿನೋಜ್ ಮೊದಲು ಬುಕ್ ಮಾಡಿದ್ದರಿಂದ ಅವರನ್ನು ಕೆಳಗೆ ಇಳಿಸಲು ಸಾಧ್ಯವಿಲ್ಲ ಎಂದು ಚಾಲಕ ಶಫೀಕ್ ಈ ಸಂದರ್ಭ ಹೇಳಿದರು. ಶಿನೋಜ್ ತಾನು ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ. ನೀವು ಹಿಂದಿನ ಸೀಟಿನಲ್ಲಿ ಕೂತುಕೊಳ್ಳಿ ಎಂದರೂ ಒಪ್ಪದ ಮಹಿಳೆಯರು ಶಫೀಕ್ನ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಮಹಿಳೆಯರು ಟಿವಿ ಸೀರಿಯಲ್ ನಟಿಯರಾಗಿದ್ದು, ಮಾರಾಡ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ಬಳಿಕ ಜಾಮೀನಲ್ಲಿ ಬಿಡುಗಡೆಗೊಳಿಸಲಾಗಿದೆ. ಮೂವರು ಮಹಿಳೆಯರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಎಸ್ಸೈ ಸುಜಾತನ್ ಪಿಳ್ಳೆ ತಿಳಿಸಿದ್ದಾರೆ.