---

ಗುಜರಾತ್ ಫಲಿತಾಂಶದ ಪ್ರಭಾವ ಕರ್ನಾಟಕದ ಮೇಲೆ ಬಿದ್ದೀತೇ?

ಗುಜರಾತ್‌ನ ಫಲಿತಾಂಶ ಹೊರಬಿದ್ದಿದ್ದು ಭಾಜಪ ಏದುಸಿರುಬಿಡುತ್ತಲೆ ಗೆದ್ದಿದ್ದು, ಕಾಂಗ್ರೆಸ್ ತನ್ನ ಸೋಲಿನಲ್ಲೂ ಸಂಭ್ರಮಿಸಬಹುದಾದ ಸಾಧನೆ ಮಾಡಿದೆ. ಈ ಫಲಿತಾಂಶ ನಮ್ಮ ಕರ್ನಾಟಕದ ಮೇಲೆ ಯಾವ ತೆರನಾದ ಪ್ರಭಾವ ಬೀರಬಹುದೆಂಬುದರ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.

ರಾಜ್ಯದ ಭಾಜಪದ ನಾಯಕರಂತೂ ಈ ಫಲಿತಾಂಶ ಕರ್ನಾಟಕದ ಮತದಾರರ ಮೇಲೆಯೂ ಪ್ರಭಾವ ಬೀರಿ ಮೋದಿಯವರ ನಾಮಬಲದಿಂದಲೇ ತಾವು ಗೆಲ್ಲಬಹುದೆಂಬ ಭ್ರಮೆಯಲ್ಲಿ ಬೀಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್‌ನ ನಾಯಕರು ಗುಜರಾತ್‌ನ ಫಲಿತಾಂಶಗಳ ಪರಿಣಾಮ ನಮ್ಮ ರಾಜ್ಯದಲ್ಲಿ ಆಗುವುದಿಲ್ಲವೆಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಹಾಗಾದರೆ ವಾಸ್ತವ ಏನು ಎನ್ನುವುದನ್ನು ನೋಡುತ್ತ ಹೋದರೆ ಸತ್ಯ ಇವೆರಡರ ನಡುವೆ ಇದೆ. ಆ ಬಗ್ಗೆ ಒಂದಿಷ್ಟು ನೋಡೋಣ:

ಗುಜರಾತ್‌ನ ಪರಿಸ್ಥಿತಿಗೂ ಕರ್ನಾಟಕದ ರಾಜಕೀಯ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಕಳೆದ ಇಪ್ಪತ್ತೆರಡು ವರ್ಷಗಳಿಂದಲೂ ಗುಜರಾತ್‌ನಲ್ಲಿ ಭಾಜಪದ ಆಳ್ವಿಕೆಯಿದ್ದು, ತಳಮಟ್ಟದಲ್ಲಿ ಭಾಜಪ ಗಟ್ಟಿಯಾಗಿ ಬೇರು ಬಿಟ್ಟಿದೆ. ಎರಡು ದಶಕಗಳಿಂದಲೂ ಅಧಿಕಾರವಂಚಿತರಾಗಿರುವ ಕಾಂಗ್ರೆಸ್‌ಗೆ ಅಲ್ಲಿ ತಳಮಟ್ಟದ ಸಂಘಟನೆಯ ಕೊರತೆ ಇತ್ತು. ಆದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಭಾಜಪದ ಸಂಘಪರಿವಾರದ ಅಂಗಸಂಸ್ಥೆಗಳನ್ನು ಹೊರತುಪಡಿಸಿಯೂ, ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ದಂಡೇ ಇದೆ. ಈ ವಿಚಾರದಲ್ಲಿ ಗುಜರಾತ್‌ನಲ್ಲಿದ್ದ ಸಮಸ್ಯೆ ಕರ್ನಾಟಕದಲ್ಲಿ ಇಲ್ಲ.

 ಎರಡನೆಯದಾಗಿ ಗುಜರಾತ್‌ನಲ್ಲಿ ತಮ್ಮಪಕ್ಷ ಗೆಲ್ಲಲಾಗುವುದೇ ಇಲ್ಲವೆನ್ನುವ ಮಟ್ಟಿಗೆ ಕಾಂಗ್ರೆಸ್‌ನ ಕಾರ್ಯಕರ್ತರು ಹತಾಶರಾಗಿದ್ದು, ಈ ಹತಾಶೆ ಮತದಾರರ ಮೇಲೆಯೂ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿದೆ. ಗೆಲ್ಲದ ಪಕ್ಷಕ್ಕೆ ಯಾಕೆ ಮತನೀಡಬೇಕೆಂಬ ಜನರ ಯೋಚನಾ ಲಹರಿಯೇ ಕನಿಷ್ಠ ಒಂದೆರಡು ಪರ್ಸೆಂಟ್ ಮತದಾರರಾದರೂ ಭಾಜಪಕ್ಕೆ ಮತಚಲಾಯಿಸಲು ಕಾರಣವಾಗಿರುವುದಂತೂ ಸತ್ಯ..

ಇನ್ನು ಗುಜರಾತ್ ಪ್ರಧಾನಿ ನರೇಂದ್ರಮೋದಿಯವರ ತವರು ರಾಜ್ಯವಾಗಿದ್ದು, ತಮ್ಮವರೊಬ್ಬರು ಪ್ರಧಾನಿಗಳಾಗಿರುವಾಗ ಆ ಪಕ್ಷವನ್ನು ಸೋಲಿಸುವುದು ತರವಲ್ಲ ಎನ್ನುವ ಜನತೆಯ ಅಭಿಮಾನವೂ ಅಲ್ಲಿ ಭಾಜಪದ ಪರ ಕೆಲಸ ಮಾಡಿದೆ. ಅದಕ್ಕೆ ಪೂರಕವಾಗಿ ಮೋದಿಯವರು ‘‘ನಾನು ನಿಮ್ಮ ಮನೆಯ ಮಗ ನನ್ನ ಕೈಬಿಡಬೇಡಿ’’ ಎಂಬರ್ಥ ಬರುವ ಮತುಗಳನ್ನಾಡಿ ಜನರ ಭಾವನೆ ಕೆರಳಿಸುತ್ತ ಮತದಾರರನ್ನು ಒಲಿಸಿಕೊಳ್ಳಲು ಪ್ರಯತ್ನ ಪಟ್ಟರು. ಆದರೆ ಕರ್ನಾಟಕದಲ್ಲಿ ನರೇಂದ್ರ ಮೋದಿಯವರಿಗೆ ಆ ಅವಕಾಶವಿಲ್ಲ. ಕಾಂಗ್ರೆಸ್‌ನ ಹೈಕಮಾಂಡ್‌ಗೆ ಅಂದರೆ ರಾಹುಲ್ ಗಾಂಧಿ ಕುಟುಂಬಕ್ಕೆ ಕರ್ನಾಟಕದೊಂದಿಗೆ ಇರುವ ಭಾವನಾತ್ಮಕ ಸಂಬಂಧದ (ಎಷ್ಟೇ ಆದರೂ ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಮತ್ತು ಸೋನಿಯಾ ಗಾಂಧಿಯವರನ್ನೂ ಒಮ್ಮೆ ಗೆಲ್ಲಿಸಿ ಕಳಿಸಿದ ರಾಜ್ಯವಿದು) ಮುಂದೆ ಮೋದಿಯವರಿಗೆ ಅಂತಹ ಯಾವುದೇ ಭಾವನಾತ್ಮಕ ಸಂಬಂದವಿಲ್ಲ.. ಹೀಗಾಗಿ ಕರ್ನಾಟಕದಲ್ಲಿ ಜನತೆಯ ಮನ ಗೆಲ್ಲಲು ಮೋದಿಯವರಿಗೆ ವೈಯುಕ್ತಿಕ ಭಾವನಾತ್ಮಕ ನಂಟೇನಿಲ್ಲ.

ಇನ್ನು ಗುಜರಾತ್ ಕಾಂಗ್ರೆಸ್ ಎಷ್ಟರ ಮಟ್ಟಿಗೆ ಸ್ಥಳೀಯ ನಾಯಕರುಗಳಿರದೆ ಸೊರಗಿತ್ತೆಂದರೆ ಒಟ್ಟು 182 ಕ್ಷೇತ್ರಗಳಲ್ಲಿಯೂ ಸ್ವತ; ರಾಹುಲ್ ಗಾಂಧಿಯವರೇ ತಾರಾ ಪ್ರಚಾರಕರಾಗಿ ಕೆಲಸ ಮಾಡಬೇಕಾಗಿ ಬಂತು. ಅದರಲ್ಲೂ ಕೊನೆಯ ಗಳಿಗೆಯಲ್ಲಿ ಅಂದರೆ ಚುನಾವಣೆಗೆ ಎರಡು ತಿಂಗಳುಗಳಿರುವಾಗ ಶಂಕರ್‌ಸಿಂಗ್ ವಘೇಲಾರವರು ಪಕ್ಷ ತೊರೆದು ಹೋದನಂತರ ಹೇಳಿಕೊಳ್ಳಲೂ ಕಾಂಗ್ರೆಸ್‌ಗೆ ಒಬ್ಬನೇ ಒಬ್ಬ ಪ್ರಾದೇಶಿಕ ನಾಯಕ ಇರದಂತಹ ಸ್ಥಿತಿ ಬಂದಿತ್ತು. ಭಾಜಪದಲ್ಲಿದ್ದ ಸ್ಥಳೀಯ ನಾಯಕರುಗಳ ಮುಂದೆ ಕಾಂಗ್ರೆಸನ್ನು ಮುನ್ನಡೆಸುವ ನಾಯಕರೇ ಇರದ ಶೂನ್ಯ ಸ್ಥಿತಿ ಇತ್ತು. ಆದರೆ ಕರ್ನಾಟಕದ ಚಿತ್ರವೇ ಬೇರೆ. ಯಾಕೆಂದರೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಸ್ಥಳೀಯ ನಾಯಕರುಗಳಿಗೇನು ಕೊರತೆಯಿಲ್ಲ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಹಿಡಿದು ಸಂಸತ್‌ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ತನಕ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಹಲವು ಪ್ರಾದೇಶಿಕ ನಾಯಕರು ಇದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್, ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್, ಅಲ್ಪಸಂಖ್ಯಾತ ನಾಯಕರಾದ ಇಬ್ರಾಹೀಂ ಮತ್ತು ಜಾಪರ್ ಷರೀಫ್ ಮುಂತಾದ ಘಟಾನುಘಟಿ ಸ್ಥಳೀಯ ನಾಯಕರುಗಳಿದ್ದು ಮತದಾರರ ಮೇಲೆ ಪ್ರಭಾವ ಬೀರಬಲ್ಲ ಶಕ್ತಿಯುಳ್ಳವರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಎಲ್ಲಾ ಜಾತಿ ಸಮುದಾಯಗಳ ಮೇಲೆ ತಮ್ಮದೇ ಆದ ಪ್ರಭಾವ ಬೀರುವಂತಹ ನಾಯಕರುಗಳಿದ್ದು ಚುನಾವಣಾ ಪ್ರಚಾರ ಕಾರ್ಯದಲ್ಲಿ ರಾಹುಲ್ ಗಾಂಧಿ ಅವರೊಬ್ಬರನ್ನೇ ಅವಲಂಬಿಸಬೇಕಾದ ಸ್ಥಿತಿಯೇನೂ ಇಲ್ಲ. ಅದೂ ಅಲ್ಲದೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ಮತಬ್ಯಾಂಕೊಂದು ಯಾವತ್ತಿಗೂ ಇದೆ. ಇನ್ನು ಪದೇ ಪದೇ ನರೇಂದ್ರ ಮೋದಿಯವರೂ ಸೇರಿದಂತೆ ಭಾಜಪದ ರಾಷ್ಟ್ರೀಯ ನಾಯಕರು ಹೇಳುವ ಭ್ರಷ್ಟಾಚಾರದ ವಿಚಾರ ಕರ್ನಾಟಕದ ಮಟ್ಟಿಗೆ ಅಪ್ರಸ್ತುತವಾಗಲಿದೆ. ಏಕೆಂದರೆ 2008ರಿಂದ 2013ರವರೆಗೂ ಇಲ್ಲಿ ಅಧಿಕಾರ ನಡೆಸಿದ ಭಾಜಪ ಸರಕಾರದ ಹಗರಣಗಳು ಕಾಂಗ್ರೆಸ್‌ನ ಬಗ್ಗೆ ಮಾತಾಡುವ ಭಾಜಪ ನಾಯಕರ ನೈತಿಕತೆಯನ್ನು ಇಲ್ಲವಾಗಿಸಿದೆ.

 ಅದೇ ರೀತಿ ಭಾಜಪದವರ ಅಭಿವೃದ್ಧಿಯ ಮಂತ್ರವೂ ಇಲ್ಲಿ ಕೆಲಸ ಮಾಡುವುದು ಅಸಾಧ್ಯ. ಯಾಕೆಂದರೆ ಗುಜರಾತ್‌ನ ಚುನಾವಣೆಯವರೆಗೂ ಗುಜರಾತ್ ಮಾಡೆಲ್ ಬಗ್ಗೆ ಮಾತನಾಡುತ್ತಿದ್ದ ಮೋದಿಯವರೇ ಸ್ವತ: ಈಗ ಗುಜರಾತ್ ಮಾಡೆಲ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದಂತೆ ಕಾಣುತ್ತಿದೆ. ‘ಗುಜರಾತ್ ಮಾಡೆಲ್’ ಎನ್ನುವುದೇ ಒಂದು ದೊಡ್ಡ ಮಿಥ್ಯೆ ಎನ್ನುವುದನ್ನು ಸ್ವತಃ ಗುಜರಾತಿಗರೇ ತೋರಿಸಿಕೊಟ್ಟಿದ್ದಾರೆ. ಅದೂ ಅಲ್ಲದೆ ಉತ್ತರ ಭಾರತದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದೆ. ಅದರಲ್ಲೂ ಮಹಿಳೆಯರ ಮತ್ತು ಮಕ್ಕಳ ಅಪೌಷ್ಟಿಕತೆಯ ವಿಚಾರದಲ್ಲಿ, ಆಹಾರ ಉತ್ಪಾದನೆಯಲ್ಲಿ ಕರ್ನಾಟಕ ಗುಜರಾತ್‌ನಂತಹ ರಾಜ್ಯಗಳಿಗಿಂತ ಮೇಲಿನ ಸ್ಥಾನದಲ್ಲಿದೆ. ಇನ್ನು ಹೂಡಿಕೆದಾರರ ವಿಚಾರಕ್ಕೆ ಬಂದರೆ ಇವತ್ತಿಗೂ ನಮ್ಮ ರಾಜ್ಯ ಹೂಡಿಕೆದಾರರ ನೆಚ್ಚಿನ ರಾಜ್ಯವೆನಿಸಿದೆ. ಬಹುಶಃ ವಿದ್ಯುತ್ ಹೊರತು ಪಡಿಸಿದರೆ ನಮ್ಮ ರಾಜ್ಯ ಉತ್ತರಭಾರತದ ರಾಜ್ಯಗಳಿಗಿಂತ ಕಳಪೆಯೇನಲ್ಲ. ಮೋದಿಯವರ ‘ಸಬ್ ಕಾ ಸಾಥ್- ಸಬ್‌ಕಾ ವಿಕಾಸ್’ ವಿಷಯದಲ್ಲಿ ನಿಜವಾದ ‘ಸಬ್ ಕಾ ಸಾಥ್’ ನಿಭಾಯಿಸುತ್ತಿರುವುದು ಕರ್ನಾಟಕವೇ ಎನ್ನಬಹುದು.

ಇನ್ನು ಕರ್ನಾಟಕದಲ್ಲಿ ಭಾಜಪಕ್ಕೆ ಗೆಲ್ಲಲು ಉಳಿಯಬಹುದಾದ ಏಕೈಕ ದಾರಿ ಎಂದರೆ ಬಹುಸಂಖ್ಯಾತ ಹಿಂದೂ ಮತಬ್ಯಾಂಕಿನ ಧ್ರುವೀಕರಣವಷ್ಟೆ. ಕಳೆದ ಕೆಲ ತಿಂಗಳುಗಳಿಂದ ಭಾಜಪದ ನಾಯಕರ ಕಾರ್ಯತಂತ್ರವನ್ನು ನೋಡಿದರೆ ಅದು ಎಂದೂ ಮತಬ್ಯಾಂಕಿನ ಧ್ರುವೀಕರಣ ದತ್ತಲೇ ಗಮನ ಕೊಟ್ಟಂತೆ ಕಾಣುತ್ತಿದೆ. ಕರಾವಳಿ ಭಾಗದಲ್ಲಿ ಸಂಘಪರಿವಾರದ ಕಾರ್ಯಕರ್ತರ ಸಾವಿನ ವಿಚಾರದಲ್ಲಿ ಅದು ನಡೆದುಕೊಂಡ ರೀತಿ, ಮೊನ್ನೆ ಹುಣಸೂರಿನಲ್ಲಿ ಹನುಮಜಯಂತಿಯಂದು ಅದು ಕೋಮುಗಲಭೆಯನ್ನು ಹುಟ್ಟು ಹಾಕಲು ನಡೆಸಿದ ಪ್ರಯತ್ನ, ಇತ್ತೀಚೆಗೆ ಶಿರಸಿ ನಗರದಲ್ಲಿ ನಿಷೇಧಾಜ್ಞೆಯನ್ನೂ ಮೀರಿ ಮೆರವಣಿಗೆ ನಡೆಸಲು ಪ್ರಯತ್ನಿಸಿ ಸಮಾಜದ ಸೌಹಾರ್ದಕ್ಕೆ ಬೆಂಕಿ ಹಚ್ಚಿದ ಘಟನೆಗಳನ್ನೆಲ್ಲ ನೋಡಿದರೆ ಇದು ಅರ್ಥವಾಗುತ್ತದೆ.

 ಇವೆಲ್ಲವನ್ನೂ ಗಮನಿಸಿದರೆ ಗುಜರಾತ್‌ನ ರಾಜಕೀಯ ಪರಿಸ್ಥಿತಿಗೂ ಕರ್ನಾಟಕಕ್ಕೂ ಯಾವುದೇ ಹೋಲಿಕೆ ಮಾಡಲಾಗುವುದಿಲ್ಲ. ಹಾಗಾಗಿ ಗುಜರಾತ್‌ನ ಫಲಿತಾಂಶಗಳು ನಮ್ಮ ರಾಜ್ಯದ ಮೇಲೆ ಯಾವುದೇ ಪರಿಣಾಮವನ್ನೂ ಉಂಟುಮಾಡಲಾರದೆಂಬುದು ಖಚಿತ. ಅದೂ ಅಲ್ಲದೆ ಗುಜರಾತ್‌ನಂತೆ ಕರ್ನಾಟಕದಲ್ಲಿ ನೇರಾನೇರಾ ಹಣಾಹಣಿಯಿಲ್ಲ. ಬದಲಿಗೆ ಇವೆರಡೂ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಜನರ ಮುಂದೆ ಜಾತ್ಯತೀತ ಜನತಾದಳ ಇದೆ. ಕಾಂಗ್ರೆಸನ್ನು ತಿರಸ್ಕರಿಸುವ ಜನತೆಗೆ ಭಾಜಪವೇ ಆಗಬೇಕೆಂದೇನೂ ಇಲ್ಲ. ಗುಜರಾತ್‌ನಲ್ಲಿ ಭಾಜಪವನ್ನು ತಿರಸ್ಕರಿಸಿದರೆ ಅವರಿಗಿದ್ದ ಏಕೈಕ ಪರ್ಯಾಯ ಕಾಂಗ್ರೆಸ್ ಮಾತ್ರ.. ಹಾಗಾಗಿ ಕಾಂಗ್ರೆಸನ್ನು ಎಂದೂ ಬೆಂಬಲಿಸದ, ಆದರೆ ಭಾಜಪದ ವಿರುದ್ಧವಾಗಿದ್ದ ಜನತೆ ಅಂತಿಮವಾಗಿ ಭಾಜಪಕ್ಕೇ ಮತಹಾಕಬೇಕಾಗಿ ಬಂದಿತ್ತು. ಕರ್ನಾಟಕದ ಮಟ್ಟಿಗೆ ಮತದಾರರಿಗೆ ಮೂರನೇ ಆಯ್ಕೆಯೊಂದು ಇದ್ದು, ಕಾಂಗ್ರೆಸ್ ವಿರೋಧಿ ಮತಗಳು ಭಾಜಪಕ್ಕೆ ಮಾತ್ರ ಹೋಗುತ್ತವೆಯೆಂದು ನಂಬಿಕೊಳ್ಳುವುದು ಮೂರ್ಖತನ. ಹಾಗಾಗಿ ಗುಜರಾತ್‌ನ ಫಲಿತಾಂಶಗಳಂತೆಯೇ ಇಲ್ಲಿ ಭಾಜಪ ಗೆದ್ದುಬಿಡುತ್ತದೆ ಎಂದು ನಂಬುವುದು ತರವಲ್ಲ.

ಇಷ್ಟಾದರೂ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಮೇಲಿನ ಜನರ ನಂಬಿಕೆಯಿನ್ನೂ ಸಂಪೂರ್ಣ ವಾಗಿ ಇಲ್ಲವಾಗಿಲ್ಲ. ನಾವೇನೇ ಹೇಳಿದರೂ ಬಹುಸಂಖ್ಯಾತ ಅನಕ್ಷರಸ್ಥ ಜನರಿನ್ನೂ ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಮೋದಿಯವರ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಜನತೆಯ ಈ ನಂಬಿಕೆಯನ್ನು ತನಗೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಭಾಜಪ ಯಶಸ್ವಿಯಾದರೆ ಕಾಂಗ್ರೆಸ್‌ಗೆ ಕಷ್ಟವಾಗಬಹುದು.

 ಅದರೆ ಭಾಜಪ ನಡೆಸುತ್ತಿರುವ ‘ಪರಿವರ್ತನಾ ರ್ಯಾಲಿ’ಯ ವಿಫಲತೆಯನ್ನು ಹತಾಶೆಯಿಂದ ನೊಡುತ್ತಿರುವ ಭಾಜಪದ ಕಾರ್ಯಕರ್ತರನ್ನು ಒಂದಿಷ್ಟಾದರೂ ಹುರಿದುಂಬಿಸಲು ಗುಜರಾತ್‌ನ ಫಲಿತಾಂಶಗಳನ್ನು ಅದರ ನಾಯಕರು ಬಳಸಿಕೊಳ್ಳಬಹುದಷ್ಟೆ. ಮಿಕ್ಕಂತೆ ಕರ್ನಾಟಕ ರಾಜ್ಯದ ಚುನಾವಣೆಗಳ ವಿಷಯ ಮತ್ತು ವೈವಿಧ್ಯತೆಯೇ ಬೇರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top