---

ಪ್ರಜಾಪ್ರಭುತ್ವ ಹದಗೆಡುತ್ತಿದೆಯೇ?

 ಮೇಲ್‌ಸ್ತರದ ಪ್ರತಿನಿಧಿಗಳು ಕೋಟ್ಯಧಿಪತಿಗಳಾದರೆ, ಕೆಳ ಮಟ್ಟದ ಪ್ರತಿನಿಧಿಗಳು ಲಕ್ಷಾಧೀಶರಾಗುತ್ತಾರೆ. ಇದು ಇಂದಿನ ರಾಜಕಾರಣ. ಹಾಗಾಗಿ ಶ್ರೀಮಂತ-ಬಡವರ ಅಂತರ ಬೆಳೆಯುತ್ತದೆ. ರಾಜಕಾರಣ ವ್ಯಾಪಾರವಾಗುತ್ತದೆ. ಜನಸೇವಕರೆಲ್ಲ ಜನನಾಯಕರಾಗುತ್ತಾರೆ. ಜನರೆಲ್ಲಾ ಕುರಿಗಳಾಗುತ್ತಾರೆ. ಇಂತಹದೊಂದು ವಿಚಿತ್ರ ಸನ್ನಿವೇಶ ನಮ್ಮೆದುರಿಗಿದೆ. ಇಂದಿನ ಪರಿಸ್ಥಿತಿಯಲ್ಲಿ ರಾಜಕಾರಣವನ್ನು ಭ್ರಷ್ಟಾಚಾರ, ಶೋಷಣೆಯಿಂದ ಮುಕ್ತಗೊಳಿಸಲು ಯಾರಿಂದ ಸಾಧ್ಯ?


ಭಾರತವು 1947ರಲ್ಲಿ ವಿದೇಶಿ ಆಡಳಿತದಿಂದ ಮುಕ್ತವಾಗಿ ಸ್ವತಂತ್ರ ಭಾರತವಾಯಿತು. 1950 ಜನವರಿ 26ರಿಂದ 1935ರ Govt. of India Actನ ಬದಲಿಗೆ ಭಾರತ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಅದರೊಡನೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಸಂವಿಧಾನದಲ್ಲಿ Liberty, Equality and Fraternity(ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ) ಪ್ರಜಾರಾಜ್ಯದ ಧ್ಯೇಯೋದ್ದೇಶವಾಗಿ ಘೋಷಿಸಲಾಯಿತು. ಈ ದೇಶದ ಪ್ರತಿಯೋರ್ವ ಪ್ರಜೆಗೂ ಅವನದೇ ಆದ ಭಾಷೆ, ನಂಬಿಕೆ, ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಂಡು ನೆಮ್ಮದಿಯಿಂದ ಬದುಕುವ ಹಕ್ಕುಗಳನ್ನು ನೀಡಲಾಯಿತು. ಇಂತಹ ವಿಶೇಷ ಗುಣಗಳುಳ್ಳ ಧರ್ಮ ಪ್ರಜಾರಾಜ್ಯವಾಗಿ ರೂಪಿತವಾದ ದಿನವನ್ನೇ ಪ್ರಜಾಪ್ರಭುತ್ವ ದಿನವಾಗಿ ನಾವಿಂದು ಆಚರಿಸುತ್ತಿದ್ದೇವೆ.

ಪ್ರಜಾರಾಜ್ಯವೆಂದರೆ ಪ್ರಜೆಗಲಿಂದಲೇ ಆರಿಸಲ್ಪಟ್ಟ ಪ್ರತಿನಿಧಿಗಳಿಂದ ಆಳಲ್ಪಡುವ ರಾಷ್ಟ್ರ. ಪ್ರಜೆಗಳಿಗಾಗಿ, ಪ್ರಜೆಗಳ ಸ್ವತಂತ್ರ ಬದುಕಿಗಾಗಿ ರೂಪಿತವಾದ ಸರಕಾರ. ಈ ದೇಶವು ಬ್ರಿಟಿಷಾಡಳಿತದ ಮೊದಲು ಸುದೀರ್ಘಕಾಲದ ಏಕಾಧಿಪತ್ಯವನ್ನು ಅನುಭವಿಸಿದೆ. ಅಶೋಕ, ಅಕ್ಬರನಂತಹ ಚಕ್ರವರ್ತಿಗಳು ಆಳಿ ಹೋಗಿದ್ದಾರೆ. ಅಶೋಕನ ಶಾಸನಗಳಲ್ಲಿ, ‘‘ತನ್ನ ರಾಜ್ಯದಲ್ಲಿ ಪಶುಪಕ್ಷಿಗಳೂ ಕೂಡಾ ಆಹಾರವಿಲ್ಲದೆ ಸಾಯಬಾರದು. ಮಧ್ಯರಾತ್ರಿಯಲ್ಲಿ ಕೂಡಾ ಮಹಿಳೆಯರು ಏಕಾಂಗಿಯಾಗಿ ನಿರ್ಭೀತಿಯಿಂದ ನಡೆಯುವಂತಾಗಬೇಕು’’ ಎಂದು ಘೋಷಿಸಿರುವುದನ್ನು ಕಾಣಬಹುದು.

ಚೋಳರಸರ ಶಾಸನಗಳಲ್ಲಿ, ಜನಪ್ರತಿನಿಧಿಗಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಜನಸೇವಕರಾಗಿರಬೇಕು. ವೇದ, ವಿದ್ಯಾಪರಾಂಗತರಾಗಿರಬೇಕು. ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿರಬಾರದೆಂದು ಬರೆದಿರುವುದನ್ನು ಕಾಣಬಹುದು. ಇಂದಿನ ನಮ್ಮದೇ ಆದ ಪ್ರಜಾರಾಜ್ಯ ಹೇಗಿದೆ? ರಾತ್ರಿಯಲ್ಲಿ ಬಿಡಿ, ಹಗಲಿನಲ್ಲೇ ಮಹಿಳೆಯರು ಏಕಾಂಗಿಯಾಗಿ ನಿರ್ಭೀತಿಯಿಂದ ಸಂಚರಿಸುವಂತಿಲ್ಲ. ಪ್ರಜಾಪ್ರತಿನಿಧಿಗಳಿಗೆ ವಿದ್ಯೆಯೇ ಬೇಡ. ಪಂಡಿತನಾಗಬೇಕಿಲ್ಲ. ಕನಿಷ್ಠ ಪದವಿಯೂ ಕೂಡಾ ಬೇಕಿಲ್ಲ. ಜೈಲಿಗೆ ಹೋಗಿ ಬಂದರೂ, ಭ್ರಷ್ಟಾಚಾರ, ಅತ್ಯಾಚಾರಗಳಂತಹ ಗುರುತರ ಆರೋಪಗಳಿದ್ದರೂ ಸಂಸದನಾಗಬಹುದು, ಮಂತ್ರಿಯೂ ಆಗಬಹುದು.

ರಾಜಾಧಿಪತ್ಯದ ಕಾಲದಲ್ಲಿ ಒಂದೇ ರಾಜಕುಟುಂಬದ ಕೆಲವರು ಪ್ರಜೆಗಳ ತೆರಿಗೆಯ ಸಂಪತ್ತನ್ನು ಅನುಭವಿಸುತ್ತಿದ್ದರು. ರಾಜಕುಟುಂಬದ ಸದಸ್ಯರು ಸೀಮಿತವಾಗಿದ್ದರು. ತೆರಿಗೆಗೂ ಮಿತಿ ಇತ್ತು. ನಮ್ಮದೇ ಆದ ಪ್ರಜಾರಾಜ್ಯದಲ್ಲಿ 790 (545+245) ರಾಷ್ಟ್ರೀಯ ಸಂಸದರು ಮತ್ತು ದೇಶಾದ್ಯಂತ ಮೂವತ್ತು ರಾಜ್ಯಗಳಲ್ಲಿ 4,120ಕ್ಕಿಂತ ಹೆಚ್ಚು ಶಾಸಕರು ದೇಶವನ್ನಾಳುತ್ತಿದ್ದಾರೆ. ಇವರಲ್ಲಿ ಪ್ರತಿಯೋರ್ವರೂ ಅನುಭವಿಸುವ ಪ್ರಜಾಸಂಪತ್ತು ಅರ್ಥಾತ್ ಜನರು ನೀಡುವ ತೆರಿಗೆ, ಜನರು ತಿಳಿಯುವಂತಾದರೆ ಬೆಚ್ಚಿ ಬೀಳಬಹುದು.

ಪ್ರತಿಯೋರ್ವ ಸಂಸದೀಯನೂ ಶಾಸಕನೂ ಸಂಬಳ, ಸಭಾ ಭತ್ತೆ, ಕಚೇರಿ ವೆಚ್ಚ, ಉಚಿತ ವಸತಿ, ಉಚಿತ ಫೋನ್, ಉಚಿತ ವಿದ್ಯುತ್, ಉಚಿತ ವೈದ್ಯಕೀಯ ಚಿಕಿತ್ಸೆ, ಉಚಿತ ಪ್ರಯಾಣ ವೆಚ್ಚ, ವಿದೇಶ ಪ್ರಯಾಣ ಸಮೇತ ಎಲ್ಲವೂ ಜನರ ತೆರಿಗೆಯ ಹಣದಿಂದಲೇ. ಪ್ರತೀ ತಿಂಗಳಿಗೂ ಎರಡೂ ಲಕ್ಷಕ್ಕಿಂತಲೂ ಮಿಕ್ಕಿದ ವೆಚ್ಚ ಪ್ರತಿನಿಧಿಗೆ ತಗಲುತ್ತದೆ. ಇದಲ್ಲದೆ ಒಮ್ಮೆ ಐದು ವರ್ಷ ಪ್ರತಿನಿಧೀಕರಿಸಿದರೆ ಸಾಕು. ಆಮೇಲೆ ಜೀವನದುದ್ದಕ್ಕೂ ಪಿಂಚಣೆಗೂ ಅರ್ಹನಾಗುತ್ತಾನೆ. ಹಾಗಾಗಿ ರಾಜಕಾರಣವೆಂಬ ಈ ಮಹಾ ವ್ಯಾಪಾರಕ್ಕೆ ತಾಕತ್ತಿದ್ದವರು ನುಗ್ಗುತ್ತಿದ್ದಾರೆ. ಈ ಹಣ ಸರಕಾರದ ಸಂಪತ್ತಿನಿಂದ ವ್ಯಯಿಸಲ್ಪಡುತ್ತದೆ. ಈ ದೇಶದಲ್ಲಿ ಸಾಲದ ಹೊರೆ ಹೊತ್ತ ರೈತರು ಆತ್ಮಹತ್ಯೆ ಮಾಡುತ್ತಾರೆ, ಅದೆಷ್ಟೋ ಯುವಕರು ಉದ್ಯೋಗವಿಲ್ಲದೆ ಕೊರಗುತ್ತಾರೆ. ಕಾರ್ಮಿಕರು ದುಡಿಮೆಯಿಲ್ಲದೆ ನರಳುತ್ತಾರೆ. ಇವರೆಲ್ಲರೂ ಪ್ರಜಾರಾಜ್ಯದ ಪ್ರಭುಗಳು. ಐಷಾರಾಮಿ ಜೀವನ ನಡೆಸುವ ಜನನಾಯಕರು, ತಮ್ಮ ಸಂಬಳ, ಭತ್ತೆ ವಿಚಾರ ಬಂದಾಗ ಪಕ್ಷಭೇದವಿಲ್ಲದೆ ಒಟ್ಟಾಗುತ್ತಾರೆ. ಆದರೆ ಜನರ ಸಂಕಷ್ಟದ, ಗೋಳಿನ ವಿಚಾರ ಬಂದಾಗ, ಹಣದ ಕೊರತೆ, ಜಾತಿ ಧರ್ಮ ಮೀಸಲು ಹೀಗೆ ಯಾವುದಾದರೂ ನೆಪದಿಂದ ತಳ್ಳಿಹಾಕುತ್ತಾರೆ. ಚುನಾವಣೆ ಬಂದಾಗ ಜನರೇ ಪ್ರಭುಗಳು ಎಂದು ಅತ್ಯಾಕರ್ಷಕ ರೀತಿಯಲ್ಲಿ ಆಮಿಷ ನೀಡಿ ಜನರ ಬಳಿ ಬರುತ್ತಾರೆ. ಯಾಕೆಂದರೆ, ತಮ್ಮ ವ್ಯಾಪಾರದ ಮೂಲ ಅವರೇ.

ವಿದೇಶಿ ಆಡಳಿತವನ್ನು ಹೊರದಬ್ಬಲು ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ದೇಶದ ಎಲ್ಲಾ ಜನರೂ ಒಗ್ಗೂಡಿ ಹೋರಾಡಿದ್ದಾರೆ. ವಿದೇಶಿ ವಸ್ತುಗಳನ್ನು ಸುಟ್ಟದ್ದಿದೆ. ಸ್ವದೇಶಿ ಉದ್ದಿಮೆ, ವಸ್ತುಗಳಿಗಾಗಿ ತ್ಯಾಗಕ್ಕೂ ಸಿದ್ದರಾಗಿದ್ದೆವು. ವಿಪರ್ಯಾಸವೆಂದರೆ ಇಂದಿನ ಪ್ರಜಾರಾಜ್ಯ ರತ್ನಗಂಬಳಿ ಹಾಸಿ, ವಿದೇಶಿಯರನ್ನು ಆಹ್ವಾನಿಸುತ್ತಿದೆ. ಸ್ವದೇಶಿಯಾಗಿ ಏನೂ ಉಳಿದಿಲ್ಲ. ಜನಸಾಮಾನ್ಯರ ಬದುಕಿನ ರಸ್ತೆ ಬದಿ ವ್ಯಾಪಾರಕ್ಕೂ ವಿದೇಶಿಯರನ್ನೇ ಆಹ್ವಾನಿಸುತ್ತಿದ್ದೇವೆ. ಮಧ್ಯಮ ವ್ಯಾಪಾರಿಗಳೂ ಆತ್ಮಹತ್ಯೆ ಮಾಡಿಕೊಳ್ಳಬಹುದಾದ ದುಃಸ್ಥಿತಿಗೆ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ವ್ಯಾಪಾರಿ ರಾಜಕಾರಣ ಒಂದೆಡೆಯಾದರೆ ಅಧಿಕಾರಶಾಹಿತ್ಯ ಪ್ರಜೆಗಳ ಬದುಕಿನ ಮೇಲೆ ಆಟವಾಡುವಂತಿದೆ. ಆರಿಸಲ್ಪಡಲು ಬೇಕಾದ ಎಲ್ಲ ಕುತಂತ್ರಗಳಿಗೂ ಸಜ್ಜುಗೊಳ್ಳುತ್ತಿದೆ. ಧರ್ಮನಿರಪೇಕ್ಷಿತ ರಾಜ್ಯದಲ್ಲಿ ಎಲ್ಲರೂ ಸಮಾನರು. ಜಾತಿ, ಮತ, ಧರ್ಮ, ನಂಬಿಕೆಗಳು ರಾಜಕಾರಣದಲ್ಲಿ ಬರಬಾರದು. ಮಾಧ್ಯಮಗಳ ಚುನಾವಣಾಪೂರ್ವ ಸಮೀಕ್ಷೆಗಳು ಆಮಿಷವೊಡ್ಡುವ ಕುತಂತ್ರಗಳು ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಮಾಧ್ಯಮಗಳು ಪಕ್ಷಾತೀತವಾಗಿರಬೇಕಲ್ಲದೆ ಹಣದಾಸೆ ಪರ-ವಿರೋಧಿ ಪ್ರಚಾರ ಮತದಾರರ ಮನ ನೋಯಿಸುತ್ತದೆ. ಸತ್ತ ಹೆಣಗಳ ಮೇಲೂ ರಾಜಕೀಯ ಮಾಡುವ ರಾಜಕಾರಣಿಗಳು, ಮಾಧ್ಯಮಗಳು, ಜಾತ್ಯತೀತ, ಪ್ರಜಾಪ್ರಭುತ್ವದ ರೂವಾರಿಗಳೆಂಬುದನ್ನು ಮರೆಯಬಾರದು.

ದೇಶದಲ್ಲೆಲ್ಲಾ ಅನೈತಿಕತೆ, ಭ್ರಷ್ಟಾಚಾರ, ಮತೀಯ ಗೊಂದಲಗಳು ತಾಂಡವವಾಡತೊಡಗಿದೆ. ಸ್ವಾತಂತ್ರ ಬಂದು 70 ವರ್ಷಗಳು ದಾಟಿ ಹೋದರೂ ಜನ ಸಾಮಾನ್ಯರಿಗೆ ನೆಮ್ಮದಿಯ ಬದುಕು ತರಲಾಗಲಿಲ್ಲ. ಪ್ರಜಾಪ್ರಭುತ್ವ ಎಲ್ಲದೆ? ಇದು ಪ್ರಜಾ ರಾಜ್ಯವೇ? ಪ್ರಜೆಗಳೇ ಆರಿಸಲ್ಪಟ್ಟ ಜನರು ಈ ರೀತಿ ದಬ್ಬಾಳಿಕೆ ನಡೆಸಲು ಸಾಧ್ಯವೇ? ಸರಕಾರ ಜನರನ್ನು ರಕ್ಷಿಸುವ ಬದಲು, ದೇಶದ ಸಂಪತ್ತನ್ನು ಭಕ್ಷಿಸುವ ಸ್ಥಿತಿಯುಂಟಾಗಿರುವುದು ಎದ್ದು ಕಾಣಿಸುತ್ತಿದೆ. ಹಾಗಾಗಿ ಮುಂದೆ ಬರುವ ಮಹಾಚುನಾವಣೆಯ ಮೊದಲು ಯೋಚಿಸಬೇಕಾದದ್ದು ಬಹಳಷ್ಟಿದೆ.

ಚುನಾಯಿತ ಸರಕಾರದ ವಿಧಿವಿಧಾನಗಳಲ್ಲಿ ಇರುವ ದೋಷವನ್ನು ನಾವು ಕಣ್ಣಾರೆ ಕಂಡರೂ ಸರಕಾರದ ಆಗು ಹೋಗುಗಳು ಸಾಮಾನ್ಯವೆಂದು ಸುಮ್ಮನಿರುತ್ತೇವೆ. ನಿಜವಾದ ಅರ್ಥದ ಪ್ರಜಾ ಸರಕಾರ ಇಂದು ರೂಪುಗೊಳ್ಳುವುದಿಲ್ಲ. ಆರಿಸಲ್ಪಡುವ ಅಭ್ಯರ್ಥಿಗಳು ಬಹುಜನರ ಪ್ರತಿನಿಧಿಗಳಲ್ಲ. ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲೂ ಶೇ.80ಕ್ಕಿಂತ ಹೆಚ್ಚು ಮತದಾನವಾದಂತಿಲ್ಲ. ವಿಜಯಿ ಅಭ್ಯರ್ಥಿಯ ಮತಗಳ ಸಂಖ್ಯೆ ಉಳಿದ ಒಟ್ಟಾರೆ ಮತಗಳ ಸಂಖ್ಯೆಗಿಂತ ಕಡಿಮೆಯಿರುತ್ತದೆ.

ಈ ಉದಾಹರಣೆ ನೋಡಿದರೆ ಚುನಾಯಿತ ಅಭ್ಯರ್ಥಿ ಬಹುಜನರ ಆಯ್ಕೆಯಲ್ಲ. ಅವರು ಒಂದು ಅಲ್ಪಸಂಖ್ಯೆಯ ಗುಂಪಿನ ಪ್ರತಿನಿಧಿ ಮಾತ್ರ. ಇಂತಹ ಪ್ರತಿನಿಧಿಗಳಿಂದ ಬಹುಸಂಖ್ಯಾತ ಜನಸಾಮಾನ್ಯರಿಗೆ ನ್ಯಾಯ ಸಿಗಬಹುದೇ? ಯೋಚಿಸಬೇಕಲ್ಲವೇ? ಪ್ರಜಾಪ್ರಭುತ್ವ ಸರಕಾರದಲ್ಲಿ ಆರಿಸಲ್ಪಟ್ಟ ಜನಪ್ರತಿನಿಧಿಗಳು ಜನರಿಗಾಗಿ, ದೇಶದ, ರಾಜ್ಯದ ಜನರ ಪ್ರಗತಿಗಾಗಿ ಜನರ ಸಂಕಷ್ಟ ನಿವಾರಣೆಗಾಗಿ, ತ್ಯಾಗಿಗಳಾಗಿ ಕೆಲಸ ಮಾಡುವವರಾಗಬೇಕು. ಅಧಿಕಾರ ಯುವಕರಲ್ಲಿದೆಯೋ, ಮುದುಕರಲ್ಲಿದೆಯೋ? ಎಂಬುದು ಮುಖ್ಯವಲ್ಲ. ಯಾರ ಕೈಯಲ್ಲಿದ್ದರೂ ಒಂದೇ. ಜನರು ನೆಮ್ಮದಿಯಿಂದ ಬದುಕುವಂತಾಗಬೇಕು. ಜಾತ್ಯತೀತ ಭಾರತದಲ್ಲಿ ಜಾತೀವಾದದ ಸರಕಾರ ಬರುವುದು ಪ್ರಜಾಪ್ರಭುತ್ವವೇ? ಭ್ರಷ್ಟರು, ನೀತಿಗೆಟ್ಟವರು, ಭಾರತದ ಸಂಸ್ಕೃತಿಯನ್ನೇ ಅವಮಾನಗೊಳಿಸಿದವರು ಜನನಾಯಕರಾಗುವುದು ಪ್ರಜಾಪ್ರಭುತ್ವವೇ? ಈ ದೇಶ ಜಾತೀವಾದದಿಂದ ಮುಕ್ತವಾಗಬೇಕು. ಭ್ರಷ್ಟಾಚಾರದಿಂದ ಮುಕ್ತವಾಗಬೇಕು. ದೇಶದ ಪ್ರತಿಯೋರ್ವ ಪ್ರಜೆಯೂ ಭಾರತೀಯನೇ. ಸಂವಿಧಾನ ನೀಡಿದ ಹಕ್ಕುಗಳನ್ನು ಅನುಭವಿಸಬಹುದಾದ ವಾತಾವರಣಬೇಕು.

ಪ್ರಗತಿ ಎಂಬುದು ಬರೇ ಉದ್ದಿಮೆ, ಸೌಲಭ್ಯಗಳಲ್ಲಿ ಮಾತ್ರವಲ್ಲ, ಜನರ ನೆಮ್ಮದಿಯ ಬದುಕಿನಲ್ಲಾಗಬೇಕು. ನಿರ್ಭಯದ ವಾತಾವರಣ ಉಂಟಾಗಬೇಕು. ಇದನ್ನೇ ರಾಮರಾಜ್ಯ ಎನ್ನುವುದು. ಆದರೆ ಇಂದಿನ ಚುನಾವಣಾ ಪೈಪೋಟಿ ನೋಡಿದರೆ, ಇಡೀ ದೇಶವೇ ಭಯದ ವಾತಾವರಣಕ್ಕೆ ಮುನ್ನುಗ್ಗುವಂತಿದೆ. ಜಾತೀವಾದ, ಭ್ರಷ್ಟಾಚಾರ ಎರಡೂ ಈ ದೇಶವನ್ನು ಸುಡುವ ಬೆಂಕಿಗಳು.

ನಮ್ಮ ದೇಶದಲ್ಲಿ ಚುನಾವಣೆಯಿಂದ ಚುನಾವಣೆಗೆ ಏನು ಬೆಳೆಯುತ್ತಿದೆ ಗೊತ್ತೇ? ಕೋಟ್ಯಾಧಿಪತಿಗಳ ಸಂಖ್ಯೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಬರುವಾಗ ಶೇ.50ರಷ್ಟು ಕೋಟ್ಯಧಿಪತಿಗಳ ಸಂಖ್ಯೆ ಏರುತ್ತಿದೆ. ಕೇವಲ ಹತ್ತಕ್ಕೆ ಮೀಸಲಾಗಿದ್ದ ಬಹುಕೋಟ್ಯಧಿಪತಿಗಳ ಸಂಖ್ಯೆ ಈಗ ಲಕ್ಷ ಸಮೀಪಿಸುತ್ತಿದೆ. ಜನಸಾಮಾನ್ಯರು ಮತ್ತು ಈ ಕೋಟ್ಯಧಿಪತಿಗಳ ಆರ್ಥಿಕ ಅಂತರ ದೇಶಕ್ಕೂ ಮಾರಕ. ದೇಶದ ಜನತೆಯನ್ನು ಗುಲಾಮಗಿರಿಗೆ ತಳ್ಳಿಬಿಡುವ ಅಪಾಯ ಇದ್ದೇ ಇದೆ. ಬಹುಪಾಲು ಜನಪ್ರತಿನಿಧಿಗಳೇ ಕೋಟ್ಯಧಿಪತಿಗಳಾಗುತ್ತಾರೆ. ಯಾಕೆ ಹೀಗಾಗುತ್ತಿದೆ? ಸರಕಾರ ರೂಪುಗೊಳ್ಳುವುದೇ ಒಂದು ವ್ಯಾಪಾರಿ ಸಂಸ್ಥೆಯಾಗಿ. ಪ್ರತಿಯೊಬ್ಬ ಜನಪ್ರತಿನಿಧಿಗೂ ಹಣ ಮಾಡುವ ದುರಾಗ್ರಹ ಇದ್ದೇ ಇರುತ್ತದೆ.

ತಮ್ಮ ಸಂಬಳ, ಐಷಾರಾಮಿ ಬಂಗಲೆ, ಬದುಕು, ಭತ್ತೆಗಳ ವಿಚಾರದಲ್ಲಿ ಪಾರ್ಲಿಮೆಂಟ್‌ನಲ್ಲಿ ಯಾವನೊಬ್ಬ ಸದಸ್ಯನೂ ವಿರೋಧ ಹೇಳುವುದಿಲ್ಲ. ಹೆಚ್ಚಿಸಿದಷ್ಟು ಬೇಕು. ಬಡಜನರ ಭತ್ತೆ, ಸಂಬಳ, ಬೆಲೆ ಏರಿಕೆ ಇತ್ಯಾದಿಗಳಿಗೆ ಎಲ್ಲ ಕಡೆಯಿಂದಲೂ ವಿರೋಧ! ಹಣ ಇಲ್ಲ!. ಕುಟುಂಬಸಮೇತರಾಗಿ, ಸುಳ್ಳು ನೆಪವೊಡ್ಡಿ ವಿದೇಶ ಯಾತ್ರೆಗೆ ಸರಕಾರ ಹಣ ನೀಡುತ್ತದೆ. ಬರ ಪರಿಹಾರಕ್ಕೆ ಸರಕಾರದಲ್ಲಿ ಹಣ ಇಲ್ಲ! ಹೀಗೆ ವ್ಯಯಿಸುವ ಹಣ ಯಾರದ್ದು? ಜನಸಾಮಾನ್ಯರಿಂದ ಕೊಡಿಸಿದ ಹಣ ಅಲ್ಲವೇ? ಇನ್ನು ಅಧಿಕಾರ ಕೈಗೆ ಬಂದಾಗ ಸಿಕ್ಕುವ ಅವಕಾಶಗಳನ್ನು ಕಳೆದು ಬಿಡಲು ಸಾಧ್ಯವೇ? ಮೇಲ್‌ಸ್ತರದ ಪ್ರತಿನಿಧಿಗಳು ಕೋಟ್ಯಧಿಪತಿಗಳಾದರೆ, ಕೆಳ ಮಟ್ಟದ ಪ್ರತಿನಿಧಿಗಳು ಲಕ್ಷಾಧೀಶರಾಗುತ್ತಾರೆ. ಇದು ಇಂದಿನ ರಾಜಕಾರಣ. ಹಾಗಾಗಿ ಶ್ರೀಮಂತ-ಬಡವರ ಅಂತರ ಬೆಳೆಯುತ್ತದೆ. ರಾಜಕಾರಣ ವ್ಯಾಪಾರವಾಗುತ್ತದೆ. ಜನಸೇವಕರೆಲ್ಲ ಜನನಾಯಕರಾಗುತ್ತಾರೆ. ಜನರೆಲ್ಲಾ ಕುರಿಗಳಾಗುತ್ತಾರೆ. ಇಂತಹದೊಂದು ವಿಚಿತ್ರ ಸನ್ನಿವೇಶ ನಮ್ಮೆದುರಿಗಿದೆ. ಇಂದಿನ ಪರಿಸ್ಥಿತಿಯಲ್ಲಿ ರಾಜಕಾರಣವನ್ನು ಭ್ರಷ್ಟಾಚಾರ, ಶೋಷಣೆಯಿಂದ ಮುಕ್ತಗೊಳಿಸಲು ಯಾರಿಂದ ಸಾಧ್ಯ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top