‘ಪ್ರಜಾಪ್ರಭುತ್ವದ ಜಯ’ದ ಹಿಂದೆ ಪ್ರಜೆಯ ಸೋಲು!

ಶಾಂತಿಯುತ ಮತದಾನದ ಮಾನದಂಡವೊಂದರಿಂದಲೇ ನಮ್ಮ ಪ್ರಜಾಪ್ರಭುತ್ವದ ಯಶಸ್ಸನ್ನು ಅಳೆಯಬಹುದಾ? ಚುನಾವಣಾ ಪ್ರಕ್ರಿಯೆಯ ಉಳಿದ ಯಾವ ವಿಷಯಗಳಿಗೂ ಇಲ್ಲಿ ಮಹತ್ವವೇ ಇಲ್ಲವೇ?


‘‘ಪ್ರಜಾಪ್ರಭುತ್ವ ಜಯ ಸಾಧಿಸಿದೆ!’’

ಪ್ರತೀ ಚುನಾವಣೆಗಳ ಫಲಿತಾಂಶಗಳು ಹೊರಬಿದ್ದಾಗಲು ನಮ್ಮ ಮಾಧ್ಯಮಗಳ ಮೊದಲ ಪುಟದ ತಲೆಬರಹವೇ ಇದಾಗಿರುವುದನ್ನು ನಾವು ನೋಡುತ್ತಾ ಬಂದಿದ್ದೇವೆ ಮತ್ತು ನಮ್ಮ ಖಾಸಗಿ ಮಾತುಗಳ ನಡುವೆಯೂ ‘‘ಇಂಡಿಯಾದ ಪ್ರಜಾಪ್ರಭುತ್ವದ ನಿಜವಾದ ಗೆಲುವಿರುವುದೇ ಶಾಂತಿಯುತ ಚುನಾವಣಾ ಪ್ರಕ್ರಿಯೆಯಲ್ಲಿ’’ ಎಂದು ಬಡಾಯಿ ಕೊಚ್ಚಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.

ಹಾಗಿದ್ದರೆ ನಿಜಕ್ಕೂ ನಮ್ಮ ಪ್ರಜಾಪ್ರಭುತ್ವ ಗೆಲ್ಲುತ್ತಿದೆಯಾ? ಶಾಂತಿಯುತ ಮತದಾನದ ಮಾನದಂಡವೊಂದರಿಂದಲೇ ನಮ್ಮ ಪ್ರಜಾಪ್ರಭುತ್ವದ ಯಶಸ್ಸನ್ನು ಅಳೆಯಬಹುದಾ? ಚುನಾವಣಾ ಪ್ರಕ್ರಿಯೆಯ ಉಳಿದ ಯಾವ ವಿಷಯಗಳಿಗೂ ಇಲ್ಲಿ ಮಹತ್ವವೇ ಇಲ್ಲವೇ? ಇದು ಹೆಚ್ಚಿನವರನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಈ ಬಾರಿಯ ಚುನಾವಣಾ ಪ್ರಕ್ರಿಯೆಗಳು ಆರಂಭವಾದ ಹಂತದಿಂದಲೇ ನೋಡೋಣ:

ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಚುನಾವಣೆಗಳನ್ನು ನಡೆಸುವ ಹೊಣೆ ಹೊತ್ತಿದ್ದು, ಕೇಂದ್ರ ಸರಕಾರದ ಅಧೀನದಲ್ಲಿದ್ದರೂ ಯಾವ ರಾಜಕೀಯ ಹಸ್ತಕ್ಷೇಪವೂ ಇಲ್ಲದೆ ಚುನಾವಣೆ ನಡೆಸುತ್ತಾ ಬಂದಿವೆಯೆಂದು ಹೇಳಲಾಗುತ್ತಿದೆ. ಚುನಾವಣೆ ನಡೆಸುವ ಸಂಸ್ಥೆಯ ನಿಷ್ಪಕ್ಷಪಾತ ವರ್ತನೆಯೇ ಚುನಾವಣಾ ಯಶಸ್ಸಿನ ಮೊದಲ ಹಂತವೆನ್ನಬಹುದು. ಮಾಮೂಲಿಯಾಗಿ ಒಂದು ರಾಜ್ಯದ ವಿಧಾನಸಭೆಯ ಚುನಾವಣೆಗಳನ್ನು ಮೂವತ್ತು ದಿನಗಳ ಮೊದಲು ಘೋಷಿಸಿ ಚುನಾವಣೆ ನಡೆಸುವುದು ವಾಡಿಕೆ. ಈ ನಿಯಮದ ಅನುಸಾರವಾಗಿ ಮೇ ಹನ್ನೆರಡರಂದು ನಮ್ಮ ರಾಜ್ಯದ ಚುನಾವಣೆ ನಿಗದಿಯಾಗಿದ್ದು ಎಪ್ರಿಲ್ ಹನ್ನೆರಡಕ್ಕೆ ಅಧಿಸೂಚನೆ ಹೊರಬೀಳಬೇಕಿತ್ತು. ಎಲ್ಲರೂ ನಿರೀಕ್ಷಿಸಿದ್ದು ಸಹ ಇದನ್ನೇ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆಯನ್ನು ಇಪ್ಪತ್ತೊಂಬತ್ತು ದಿನಗಳ ಮೊದಲು ಘೋಷಿಸಲಾಗಿದ್ದರೆ, ಗುಜರಾತ್ ಚುನಾವಣೆಯನ್ನು ಸರಿಯಾಗಿ ಮೂವತ್ತು ದಿನಗಳ ಮುಂಚೆ ಘೋಷಿಸಲಾಗಿತ್ತು. ಇವೆರಡು ರಾಜ್ಯಗಳಗೆ ಹೋಲಿಸಿದರೆ ನಮ್ಮ ರಾಜ್ಯದ ಚುನಾವಣೆಯನ್ನು ನಲವತ್ತೇಳು ದಿನಗಳ ಮೊದಲು ಘೋಷಿಸಿ ನೀತಿಸಂಹಿತೆ ಹೇರಲಾಗಿದೆ.

ಯಾಕೀ ತಾರತಮ್ಯ? ಇದರಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಇಲ್ಲವೇ ಇಲ್ಲವೆಂದು ಹೇಳಲಾದೀತೇ? ಎಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಚುನಾವಣೆಗೂ ಮೊದಲು ಮತ್ತಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿ ಜನರನ್ನು ಒಲಿಸಿಕೊಳ್ಳುತ್ತದೆಯೊ ಎನ್ನುವ ಕೇಂದ್ರದ ಭಯವೇ ಈ ಕ್ರಮಕ್ಕೆ ಕಾರಣವೆಂಬುದನ್ನು ಭಾಜಪ ಒಪ್ಪಿಕೊಳ್ಳುತ್ತದೆಯೇ? ಇದಕ್ಕೂ ಮುಂಚೆ ಹಿಮಾಚಲ ಪ್ರದೇಶದ ಜೊತೆಯೇ ನಡೆಯಬೇಕಿದ್ದ ಗುಜರಾತ್‌ನ ಚುನಾವಣೆಯ ದಿನಾಂಕಗಳನ್ನು ಎರಡು ವಾರಗಳ ಕಾಲ ಆಯೋಗ ಮುಂದಕ್ಕೆ ಹಾಕಿದ್ದಕ್ಕೆ ಅದು ನೀಡಿದ ಕಾರಣ, ಗುಜರಾತ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಬಾರದೆಂಬುದಾಗಿತ್ತು. ಯಶಸ್ವಿ ಚುನಾವಣೆಯೊಂದನ್ನು ನಡೆಸಬೇಕಾದ ಆಯೋಗವೊಂದು ಹೀಗೆ ತಾರತಮ್ಯದ ನೀತಿ ಅನುಸರಿಸುತ್ತ ಹೋದರೆ ಚುನಾವಣೆ ಯಶಸ್ವಿಯಾಗಿವೆ ಎಂದು ಹೇಳಲಾಗುತ್ತದೆಯೇ?

ಆಯೋಗದ ಮಾತು ಬಿಡಿ, ಈಗ ಪಕ್ಷ ರಾಜಕಾರಣಕ್ಕೆ ಬರೋಣ. ಪಕ್ಷಗಳು ಹೇಗೆ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಎನ್ನುವುದನ್ನು ನೋಡೋಣ: ಯಾವುದೇ ಪಕ್ಷದಲ್ಲಿಯೂ ಕಾರ್ಯಕರ್ತರ ಮಟ್ಟದಲ್ಲಿ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪದ್ಧತಿ ಇಲ್ಲವೇ ಇಲ್ಲ. ಕೋರ್ ಕಮಿಟಿ-ಕಾರ್ಯಕಾರಿ ಸಮಿತಿ ಎಂದು ಹೆಸರು ಹೊತ್ತ ಹಿರಿಯ ನಾಯಕರ ಗುಂಪು ಒಂದೆರಡು ಹೆಸರುಗಳನ್ನು ಚರ್ಚಿಸಿದಂತೆ ಮಾಡಿ ತಮಗೆ ಬೇಕಾದವರೊಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತವೆ. ಅಭ್ಯರ್ಥಿ ಯಾರಾಗಬೇಕೆಂಬ ಪಕ್ಷದ ನಿರ್ಧಾರಗಳಲ್ಲಿ ಜನರ ಅಭಿಪ್ರಾಯಕ್ಕೆ ಬೆಲೆಯೇ ಇರುವುದಿಲ್ಲ. ಇದನ್ನು ನಾವು ಒಪ್ಪಿಕೊಂಡಿದ್ದೇವೆ.

ಇನ್ನು ಒಂದು ಪಕ್ಷದ ಅಭ್ಯರ್ಥಿಯಾಗಬಯಸಿದ್ದವನು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಚುನಾವಣೆಗೂ ಮುಂಚೆ ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಮಾಡುತ್ತಾನೆ. ಆ ಪಕ್ಷ ಚುನಾವಣೆಯಲ್ಲಿ ಅವನಿಗೆ ಟಿಕೆಟ್ ನೀಡುವ ವಾಗ್ದಾನ ಮಾಡಿದ ಕಾರಣಕ್ಕೇನೇ ಅವನು ಪಕ್ಷಾಂತರಗೊಂಡಿರುತ್ತಾನೆ. ಆದರೆ ಅದುವರೆಗೂ ಆ ಪಕ್ಷದ ಅಭ್ಯರ್ಥಿಯಾಗಲು ಕಾದಿದ್ದ ಅಭ್ಯರ್ಥಿ ಇನ್ನು ತನಗೆ ಟಿಕೆಟ್ ಸಿಗುವುದಿಲ್ಲವೆಂಬುದು ಖಾತ್ರಿಯಾದೊಡನೆ ತನ್ನ ಪಕ್ಷಕ್ಕೆ ಬಂದು ತನಗೆ ಟಿಕೆಟಿಲ್ಲದಂತೆ ಮಾಡಿದವನ ಪಕ್ಷ ಸೇರಿಕೊಂಡು ಅಲ್ಲಿ ಟಿಕೆಟ್ ಪಡೆಯುತ್ತಾನೆ. ಅಲ್ಲಿಗೆ ಇಬ್ಬರು ಅಭ್ಯರ್ಥಿಗಳು ಪಕ್ಷ ಬದಲಾಯಿಸಿದಂತಾಗುತ್ತದೆ. ಇನ್ನು ಮೂರನೆಯ ಪಕ್ಷವೊಂದು ಈ ಪಕ್ಷಗಳಲ್ಲಿ ಟಿಕೆಟ್ ಸಿಗದೆ ಬಂಡಾಯವೇಳುವ ಒಬ್ಬನನ್ನು ಹುಡುಕಿ ಟಿಕೆಟ್ ಕೊಡುತ್ತದೆ. ಅಲ್ಲಿಗೆ ಮತದಾರರ ಮಾತಿರಲಿ ಆ ಪಕ್ಷದ ಕಾರ್ಯಕರ್ತರು ಏನು ಮಾಡಬೇಕು. ನಿನ್ನೆಯವರೆಗೂ ವಿರೋಧಿಸಿದ್ದವನನ್ನೇ ಬೆಂಬಲಿಸಿ ಮತ ಕೇಳಬೇಕು.?

ಪರಿಸ್ಥಿತಿ ಹೀಗಿರುವಾಗ ಮತದಾರನಿಗೆ ಇರುವ ಆಯ್ಕೆ ಏನು? ಅದೇ ಮೂವರು ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಮತಹಾಕಬೇಕು ಆದರೆ ಚಿಹ್ನೆ ಬದಲಾಯಿಸಬೇಕು, ಅಂದರೆ ಸಿದ್ಧಾಂತಗಳನ್ನೇ ಬದಲಾಯಿಸಬೇಕಾಗುತ್ತದೆ. ಇನ್ನು ನೋಟಾ ಚಲಾವಣೆ ಮಾಡುವುದರಿಂದ ಏನೇನು ಬದಲಾವಣೆ ಆಗುವುದಿಲ್ಲ. ನಮ್ಮ ಆಕ್ರೋಶವನ್ನು ಆ ಮೂಲಕ ಹೊರಹಾಕಬಹುದೇ ಹೊರತು ಬೇರೇನೂ ಪ್ರಯೋಜನವಿಲ್ಲ. ನಿಮಗೊಂದು ಸಣ್ಣ ಉದಾಹರಣೆ ಕೊಡುತ್ತೇನೆ. ನಾಗಮಂಗಲದ ಚಲುವರಾಯ ಸ್ವಾಮಿ ಜನತಾದಳ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಅವರು ಹೀಗೆ ಮಾಡುತ್ತಾರೆಂದು ಗೊತ್ತಾದ ಕೂಡಲೇ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಗಳಾಗಿದ್ದ ಶಿವರಾಮೇಗೌಡರು ಮತ್ತು ಸುರೇಶ್‌ಗೌಡರು ಕಾಂಗ್ರೆಸ್ ತೊರೆದು ಜನತಾದಳ ಸೇರಿ ಟಿಕೆಟ್ ಖಾತ್ರಿ ಪಡಿಸಿಕೊಂಡರು. ಇದೀಗ ನಾಗಮಂಗಲದ ಜನತೆಗೆ ಅದೇ ಮೂವರು ಅಭ್ಯರ್ಥಿಗಳು ಹೊಸ ಚಿಹ್ನೆ ಹೊತ್ತು ಮುಂದೆ ಬರುತ್ತಾರೆ. ಮತದಾರ ಪಕ್ಷದ ಚಿಹ್ನೆ ನೋಡಿ ಮತಹಾಕಬೇಕೊ ಇಲ್ಲ ವ್ಯಕ್ತಿ ನೋಡಿ ಮತಹಾಕಬೇಕೊ? ಅಪ್ಝಲ್ ಪುರದ ಮಾಲಿಕಯ್ಯ ಗುತ್ತೆದಾರ್ ಬಿಜೆಪಿಗೆ ಬಂದರೆ, ಬಿಜೆಪಿಯ ಎಂ.ವೈ. ಪಾಟೀಲ್ ಕಾಂಗ್ರೆಸ್‌ಗೆ ಬರುತ್ತಾರೆ. ಝಮೀರ್ ಅಹಮದ್ ಖಾನ್ ಕಾಂಗ್ರೆಸ್‌ಗೆ ಬಂದರೆ ಕಾಂಗ್ರೆಸ್‌ನ ಅಲ್ತಾಫ್ ಜನತಾದಳ ಸೇರುತ್ತಾರೆ. ಇಂತಹ ಗೊಂದಲ ಕರ್ನಾಟಕದ ಸುಮಾರು ಇಪ್ಪತ್ತರಿಂದ ಮೂವತ್ತು ಕ್ಷೇತ್ರಗಳಲ್ಲಿ ಇದ್ದು ಜನತೆಗೆ ಆಯ್ಕೆಯ ಸ್ವಾತಂತ್ರ ನಿಜಕ್ಕೂ ಇದೆಯೇ ಎಂದು ನಾವು ಕೇಳಿಕೊಳ್ಳಬೇಕಿದೆ.

ಇದರ ಜೊತೆಗೆ ನಮ್ಮಲ್ಲಿ ಆಗುವ ಒಟ್ಟು ಮತದಾನದ ಶೇಕಡಾ ಪ್ರಮಾಣವೇ ಹೆಚ್ಚೆಂದರೆ 65ರಿಂದ 70ರಷ್ಟು. ಇದರಲ್ಲಿ ಶೇಕಡಾ ಮೂವತ್ತರಷ್ಟನ್ನು ಪಡೆದವನು ವಿಜಯಿಯಾಗುತ್ತಾನೆ. ಅಲ್ಲಿಗೆ ಒಟ್ಟು ಮತಾದರರ ಶೇಕಡಾ 25ರಷ್ಟು ಜನರ ಸಮ್ಮತಿ ಒಪ್ಪಿಗೆಯನ್ನೂ ಪಡೆಯದವನು ಗೆದ್ದು ಜನಪ್ರತಿನಿಧಿ ಎನಿಸಿಕೊಳ್ಳುತ್ತಾನೆ. ಪ್ರಜಾಪ್ರಭುತ್ವದ ಮೂಲ ಆಶಯವಾದ ಬಹುಮತದ ತತ್ವಕ್ಕೇ ಇದು ವಿರುದ್ಧವಾದುದು ಎಂದು ನಮಗನ್ನಿಸುವುದೇ ಇಲ್ಲವೆಂಬುದು ದೊಡ್ಡ ದುರಂತ. ನೂರು ಜನರಲ್ಲಿ 25 ಜನ ಅವನನ್ನು ಒಪ್ಪಿದ್ದರೆ ಇನ್ನು 75 ಜನ ಅವನ ಬಗ್ಗೆ ಏನನ್ನೂ ಹೇಳಿರುವುದಿಲ್ಲ. ಆದರೂ ಅವನು ನೂರೂ ಜನಕ್ಕೂ ಪ್ರತಿನಿಧಿಯಾಗಿ ಬಿಡುತ್ತಾನೆ.

ಇನ್ನು ಚುನಾವಣೆಗೆ ಕೋಟಿಕೋಟಿ ರೂಪಾಯಿಗಳನ್ನು ಅಭ್ಯರ್ಥಿಗಳು ಖರ್ಚು ಮಾಡುತ್ತಿರುವುದು ಸಾಮಾನ್ಯ ಅನಕ್ಷರಸ್ಥನಿಗೆ ಗೊತ್ತಾದರೂ ಆಯೋಗಕ್ಕೆ ಗೊತ್ತೇ ಆಗುವುದಿಲ್ಲ. ಅದಕ್ಕೆ ಅಧಿಕೃತ ದೂರುಗಳು ಮತ್ತು ಸಾಕ್ಷಿಗಳು ಬೇಕಂತೆ. ಚುನಾವಣೆ ಮುಗಿದ ಮೇಲೆ ಅಭ್ಯರ್ಥಿ ಕೊಡುವ ಚುನಾವಣಾ ಖರ್ಚಿನ ಲೆಕ್ಕವನ್ನದು ಮರು ಮಾತಿರದೆ ಒಪ್ಪಿಕೊಳ್ಳುತ್ತದೆ. ಹಾಗಿದ್ದರೆ ಈ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದೆಯೆ ಎನ್ನುವ ಪ್ರಶ್ನೆಗೆ ಸಾಮಾನ್ಯ ಉತ್ತರ ಇಲ್ಲವೆಂದಾದರೂ ಶಾಂತಿಯುತವಾಗಿ ಚುನಾವಣೆ ನಡೆದ ಒಂದೇ ಕಾರಣದಿಂದಾಗಿ ನಮ್ಮ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದು ಹೇಳುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ.
ನಿಜಕ್ಕೂ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದು ಒಂದೊಮ್ಮೆ ಒಪ್ಪಿಕೊಂಡರೂ ಪ್ರಜೆ ಸೋತಿದ್ದಾನೆ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ,,,,,,,,,,???

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top