ಇವಿಎಂ ನಿಷೇಧಿಸಲೇಬೇಕು
ಮಾನ್ಯರೇ,
ಇವಿಎಂ ಮತ ಯಂತ್ರದ ಬಗ್ಗೆ ಈಗಾಗಲೇ ಅನೇಕ ಸಂಶಯಗಳು ಹುಟ್ಟಿಕೊಂಡಿದ್ದು, ಅದನ್ನು ದೃಢಪಡಿಸುವ ರೀತಿಯಲ್ಲಿ ಮೊನ್ನೆ ಮಹಾರಾಷ್ಟ್ರದ ಭಂಡಾರ ಗೊಂಡಿಯಾದ ಹಲವಾರು ಮತಗಟ್ಟೆಗಳಲ್ಲಿ ಇವಿಎಂಗಳಲ್ಲಿನ ದೋಷದಿಂದಾಗಿ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಇದು ದೇಶದ ಪ್ರಾಮಾಣಿಕ ನಾಗರಿಕರನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಇತ್ತೀಚೆಗೆ ದೇಶದ ರಕ್ಷಣಾ ಸಚಿವಾಲಯದ ವೆಬ್ಸೈಟ್ ಹ್ಯಾಕ್ ಆಗಿರುವಂತಹ ಸುದ್ದಿಯನ್ನು ಕೂಡಾ ಮಾಧ್ಯಮಗಳು ಬಿತ್ತರಿಸಿದ್ದವು. ದುಷ್ಕರ್ಮಿಗಳಿಗೆ ಇಂತಹ ಸುರಕ್ಷಿತವೆನ್ನಬಹುದಾದ ವೆಬ್ಸೈಟ್ಗಳನ್ನೇ ಹ್ಯಾಕ್ ಮಾಡಲು ಸಾಧ್ಯವೆಂದಾದರೆ ಇನ್ನು ಇವಿಎಂ ಯಂತ್ರ ಯಾವ ಲೆಕ್ಕ?
ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಮತ ಯಂತ್ರವನ್ನು ನಿಷೇಧಿಸಿ ಬ್ಯಾಲೆಟ್ ಪೇಪರ್ ಮುಖಾಂತರ ಚುನಾವಣೆಯನ್ನು ನಡೆಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಬೇಕಾಗಿದೆ.
Next Story