---

ಜರ್ಮನಿಯ ಬಿಕ್ಕಟ್ಟು ಮತ್ತು ಹಿಟ್ಲರ್ ಎಂಬ ಸರ್ವಾಧಿಕಾರಿಯ ಹುಟ್ಟು

ಮಹತ್ವಾಕಾಂಕ್ಷಿಯಾಗಿದ್ದ ಹಿಟ್ಲರ್ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುತ್ತಾ ಜರ್ಮನ್ ರಾಷ್ಟ್ರೀಯತೆಯ ನೆಪ ಹಿಡಿದು ನಾಜಿ ಜನಾಂಗೀಯವಾದವನ್ನೇ ವ್ಯಾಪಕಗೊಳಿಸತೊಡಗಿದ. ಅಂದಿದ್ದ ವಸ್ತುಸ್ಥಿತಿಯಲ್ಲಿ ಜನಸಾಮಾನ್ಯರಿಗೆ ತಾನೊಬ್ಬ ಮಹಾ ರಾಷ್ಟ್ರ ಭಕ್ತನೆಂಬಂತೆ ಬಿಂಬಿಸಿಕೊಂಡುಬಿಟ್ಟ. ನಾಜಿವಾದವೇ ನಿಜವಾದ ರಾಷ್ಟ್ರಭಕ್ತಿಯೆಂಬಂತೆ ಆಕ್ರಮಣಕಾರಿಯಾಗಿ ಪ್ರಚಾರಕ್ಕೆ ತಂದ. ಇತರ ಜನಾಂಗಗಳು ನಾಜಿಗಳ ಸೇವೆಗೆ ಮಾತ್ರ ಅರ್ಹರು ಇಲ್ಲದಿದ್ದರೆ ಅವರು ಬದುಕಲೇ ಅನರ್ಹರು ಎನ್ನುವಂತೆ ಪ್ರಚಾರ ಮಾಡಿದ್ದ ಈತ ಸರ್ವಾಧಿಕಾರಿ ಆಗಿದ್ದ.


ಜರ್ಮನಿಯೆಂದಾಕ್ಷಣ ಎರಡು ಜಾಗತಿಕ ಯುದ್ಧಗಳ ನೆನಪು ಹಲವರಿಗೆ ನೆನಪಿಗೆ ಬರಲೇ ಬೇಕು. ಜರ್ಮನಿ ಆಧುನಿಕತೆಯ ಒಂದು ಪ್ರತಿರೂಪ. ಯೂರೋಪ್‌ನಲ್ಲಿ ಇಂದು ಅದು ನಾಯಕತ್ವ ಸ್ಥಾನದಲ್ಲಿದೆ. ಜಾಗತಿಕವಾಗಿಯೂ ಅದರ ಪ್ರಭಾವ ಗಣನೀಯವಾದದ್ದು.

 ಎರಡನೇ ಜಾಗತಿಕ ಯುದ್ಧದ ನಂತರ 1945ರ ಸಮಯದಲ್ಲಿ ಅಖಂಡ ಜರ್ಮನಿ ಎರಡು ಹೋಳಾಗಿ ಹೋಗಿತ್ತು. ಸೋವಿಯತ್ ಒಕ್ಕೂಟದ ಪತನದ ನಂತರ ಪೂರ್ವ ಜರ್ಮನಿ ಪಶ್ಚಿಮ ಜರ್ಮನಿ ಒಂದಾಗಿ ಒಂದೇ ಜರ್ಮನಿಯಾಗಿ ಪುನರ್ ರೂಪಗೊಂಡಿತ್ತು.

ಮೊದಲ ಮಹಾಯುದ್ಧದ ಸೋಲಿನಿಂದಾಗಿ ಜರ್ಮನಿ ಅಪಾರ ಹಾನಿಗೊಳಗಾಗಿದ್ದಲ್ಲದೆ ತೀವ್ರ ತರದ ಆರ್ಥಿಕ ಸಂಕ್ಷೋಭೆಗಳಿಗೆ ಈಡಾಗಿತ್ತು. ಈ ಯುದ್ಧದಲ್ಲಿ 19ರಿಂದ 20ರವರೆಗಿನ ಯುವ ಜರ್ಮನರು ಭಾರೀ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದರು. ಲಕ್ಷಾಂತರ ಜರ್ಮನರು ನಾಶವಾಗಿದ್ದರು. ಮೊದಲ ಮಹಾಯದ್ಧಕ್ಕೆ ಕೂಡ ಕಾರಣ ತೀವ್ರ ತರದ ಜಾಗತಿಕ ಆರ್ಥಿಕ ಸಂಕ್ಷೋಭೆಯೇ ಆಗಿತ್ತು. ಜರ್ಮನಿಯ ಹಣದುಬ್ಬರ ಮುಗಿಲು ಮುಟ್ಟಿತ್ತು. ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಕೆಲಸ ಕಳೆದುಕೊಳ್ಳತೊಡಗಿದ್ದರು. ಮಧ್ಯಮ ವರ್ಗದ ಆದಾಯ ನೆಲಕಚ್ಚಿತ್ತು. ಜರ್ಮನ್ ಬ್ಯಾಂಕುಗಳು ದಿವಾಳಿಯಾಗಿದ್ದವು. 1930ರ ವೇಳೆಗೆ ನಿರುದ್ಯೋಗ ಶೇ. 25 ರವರೆಗೆ ಏರಿತ್ತು. ಕಾರ್ಮಿಕರ ಹೋರಾಟಗಳು ಹಿಂಸಾತ್ಮಕ ತಿರುವುಗಳನ್ನು ಪಡೆದುಕೊಂಡಿದ್ದವು. ಕಳ್ಳತನ ದರೋಡೆಗಳು ಹೆಚ್ಚಾಗಿ ಸಾಮಾಜಿಕ ಹಿಂಸೆಗಳು ತೀವ್ರವಾಗಿದ್ದವು. ಸಾಮಾಜಿಕ ಭದ್ರತೆಯೇ ಕಾಣೆಯಾಗಿರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕೈಗಾರಿಕಾ ಕ್ರಾಂತಿಯ ನಂತರ ಅಗಾಧವಾಗಿ ಬೆಳೆದ ಕಾರ್ಪೊರೇಟ್‌ಗಳು ಪರಸ್ಪರ ಪೈಪೋಟಿಗಿಳಿದು ಮಾರುಕಟ್ಟೆಯ ಅಗತ್ಯಕ್ಕಿಂತಲೂ ನೂರಾರುಪಟ್ಟು ಉತ್ಪಾದಿಸಿ ಗುಡ್ಡೆಹಾಕಿ ಬಿಟ್ಟಿದ್ದರು. ಅವರಿಗೆಲ್ಲಾ ಅವುಗಳನ್ನು ಮಾರಾಟಮಾಡಿ ಲಾಭ ಗಳಿಸುವ ಅನಿವಾರ್ಯತೆ ಇತ್ತು. ಆದರೆ ಇರುವ ಮಾರುಕಟ್ಟೆಯ ವ್ಯಾಪ್ತಿ ಇದೊಂದೇ ಜಗತ್ತು ಮಾತ್ರ. ಅದಕ್ಕಿಂತಲೂ ದೊಡ್ಡ ವ್ಯಾಪ್ತಿ ಸಿಗೋದೆ ಇಲ್ಲ.

 ಇನ್ನೇನು ಇರೋ ಮಾರುಕಟ್ಟೆಯನ್ನೇ ಮರುಹಂಚಿಕೆ ಮಾಡಿಕೊಳ್ಳಬೇಕು. ಹಾಗೆ ಮಾಡುವುದೇನು ಸುಲಭವೇ?. ನಮ್ಮ ಮನೆಯ ಅಗತ್ಯ ಪೂರೈಸಲು ಪಕ್ಕದ ಮನೆಯವರ ಅಂಗಳವನ್ನು ಕಬ್ಜಾ ಮಾಡಲು ಹೊರಟರೆ ಏನಾಗುತ್ತದೆ. ಅದೇ ಅಂದು ಕೂಡ ಜಾಗತಿಕವಾಗಿ ಆಗಿದ್ದು. ಗ್ರೇಟ್ ಬ್ರಿಟನ್‌ನ ಕೈಯೊಳಗಿದ್ದ ಜಾಗತಿಕ ಮಾರುಕಟ್ಟೆಯ ಹಿಡಿತವನ್ನು ತಪ್ಪಿಸಿ ಅಲ್ಲಿ ನೆಲೆಯೂರದೆ ಇದ್ದರೆ ಜರ್ಮನಿಯಂತಹ ರಾಷ್ಟ್ರಗಳ ಕಾರ್ಪೊರೇಟ್‌ಗಳ ಕತೆ ಮುಗಿದು ಹೋಗುತ್ತಿತ್ತು. ಅದಕ್ಕಾಗಿನ ಕಾದಾಟವೇ ಜಾಗತಿಕ ಯುದ್ಧ. ಯಾವುದೋ ನೆಪಗಳನ್ನು ಮಾತ್ರ ಮುಂದೆ ತೋರಿಸುತ್ತಾರೆ ಅಷ್ಟೇ. ಆದರೆ ಜರ್ಮನಿಯೇನೋ ಯುದ್ಧವನ್ನು ಆರಂಭಿಸಿ ಲಾಭ ಮಾಡಬಹುದೆಂದು ಅಂದಾಜಿಸಿದ್ದರು. ಆದರೆ ಗ್ರೇಟ್ ಬ್ರಿಟನ್‌ನ ಕೈಯಲ್ಲಿದ್ದ ಜಾಗತಿಕ ಮಾರುಕಟ್ಟೆಯೇನೋ ತೆರವಾಗಿದ್ದು ಹೌದಾದರೂ ಜರ್ಮನಿಗೆ ಅದರ ಲಾಭ ಆಗಲಿಲ್ಲ. ಅದು ಅಮೆರಿಕ, ಫ್ರಾನ್ಸ್, ಜಪಾನ್‌ನಂತಹ ರಾಷ್ಟ್ರಗಳಿಗೆ ಆಯಿತೆನ್ನಬಹುದು. ಜರ್ಮನಿ ಯುದ್ಧದಲ್ಲಿ ಸೋತದ್ದಲ್ಲದೇ ತನ್ನ ಕೆಲವು ಪ್ರದೇಶವನ್ನು ಕಳೆದುಕೊಂಡಿತ್ತು. ಜೊತೆಗೆ ಯುದ್ಧ ಪ್ರಾರಂಭಿಸಿ ನಷ್ಟ ಉಂಟು ಮಾಡಿದ್ದಕ್ಕಾಗಿ ಭಾರೀ ಪ್ರಮಾಣದ ದಂಡವನ್ನು ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ನೀಡಬೇಕಾದ ಪರಿಸ್ಥಿತಿಗೆ ಒಳಗಾಯಿತು. ಇದೆಲ್ಲದರಿಂದಾಗಿ ಜರ್ಮನಿಯ ಆರ್ಥಿಕತೆ ಮತ್ತಷ್ಟು ಕ್ಷೋಭೆಗೆ ಒಳಗಾಗಬೇಕಾಯಿತು. ಇವೆಲ್ಲಾ ಸೇರಿ ಜರ್ಮನರಲ್ಲಿ ತೀವ್ರ ಅಸಂತೃಪ್ತಿಗಳಿಗೆ ಕಾರಣವಾಗಿತ್ತು.

ಆಳುವವರ ಬಗ್ಗೆ ಸಿಟ್ಟು ಆಕ್ರೋಶಗಳು ಬೆಳೆಯತೊಡಗಿದವು. ಜನರ ಈ ಆಕ್ರೋಶವನ್ನು ಬಳಸಿಕೊಂಡು ನಾಜಿ ಪಕ್ಷ 1920ರಿಂದಲೇ ಬೆಳೆಯತೊಡಗಿತ್ತು. ನಂತರ ಜರ್ಮನ್ ಭಾವನೆಗಳನ್ನು ಚೆನ್ನಾಗಿಯೇ ಬಳಸಿಕೊಂಡಿತ್ತು. ಮೊದಲ ಜಾಗತಿಕ ಯುದ್ಧದಲ್ಲಿ ಜರ್ಮನಿ ಸಹಿ ಹಾಕಿದ್ದ ವರ್ಸೈಲ್ಸ್ ಒಪ್ಪಂದವನ್ನು ರಾಷ್ಟ್ರಕ್ಕಾದ ಅವಮಾನವೆಂದು ವ್ಯಾಪಕ ಪ್ರಚಾರ ಮಾಡಿತ್ತು. ಆ ಮೂಲಕ ಮೊದಲೇ ತೀವ್ರವಾಗಿದ್ದ ವರ್ಸೈಲ್ಸ್ ಒಪ್ಪಂದ ವಿರೋಧಿ ಭಾವನೆಗಳನ್ನು ಚೆನ್ನಾಗಿಯೇ ಬಳಸಿಕೊಂಡಿತು. ಜೊತೆಗೆ ಕಂಗೆಟ್ಟಿದ್ದ ಯುವಜನರಿಗೆ ಉದ್ಯೋಗದ ಭರವಸೆಗಳನ್ನು ನೀಡಿತ್ತು. ಜೊತೆಗೆ ಮೊದಲಿದ್ದ ಜರ್ಮನ್ ಘನತೆಯನ್ನು ಪುನರ್‌ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಹೀಗೆ ಜನಸಾಮಾನ್ಯರ ಭಾವನೆಗಳು ಮತ್ತು ಆಗಿದ್ದ ಭಾರೀ ಬಿಕ್ಕಟ್ಟುಗಳನ್ನು ಬಳಸಿಕೊಂಡು ನಾಜಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆಗಿನ ಸಂದರ್ಭ ಹೇಗಿತ್ತೆಂದರೆ ಜರ್ಮನ್ ಕೈಗಾರಿಕೆಗಳು ಬೆಳೆಯಲಾಗದ ಸ್ಥಿತಿಗೆ ತಲುಪಿತ್ತು. ಒಂದು ಕಡೆ ಮೇಲೇಳದ ಆರ್ಥಿಕತೆ, ಮುಗಿಲು ಮುಟ್ಟಿದ ನಿರುದ್ಯೋಗಗಳು ಬೇರೆ. ಮೊದಲ ಜಾಗತಿಕ ಯುದ್ಧ ಪ್ರಾರಂಭಿಸಿದ್ದರಿಂದಾಗಿ ಜರ್ಮನಿಗೆ ಜಾಗತಿಕ ಪೈಪೋಟಿಗೆ ಅವಕಾಶವೇ ಇಲ್ಲದಂತಹ ಸ್ಥಿತಿ. ಜರ್ಮನಿಗೆ ಇದೊಂಥರ ಉಗುಳಲೂ ಆಗದ ನುಂಗಲೂ ಆಗದ ಸ್ಥಿತಿ. ಇಂತಹ ಸಾಮಾಜಿಕ ಕ್ಷೋಭೆಯ ಕಾಲದಲ್ಲಿ ಜನರ ಅಸಂತೃಪ್ತಿ ಆಕ್ರೋಶಗಳಿಗೆ ದನಿ ನೀಡಿದವನೇ ಜರ್ಮನ್ ಸೇನಾಧಿಕಾರಿ ಅಡೋಲ್ಫ್ ಹಿಟ್ಲರ್. ಮಹತ್ವಾಕಾಂಕ್ಷಿಯಾಗಿದ್ದ ಈತ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುತ್ತಾ ಜರ್ಮನ್ ರಾಷ್ಟ್ರೀಯತೆಯ ನೆಪ ಹಿಡಿದು ನಾಜಿ ಜನಾಂಗೀಯವಾದವನ್ನೇ ವ್ಯಾಪಕಗೊಳಿಸತೊಡಗಿದ. ಅಂದಿದ್ದ ವಸ್ತುಸ್ಥಿತಿಯಲ್ಲಿ ಜನಸಾಮಾನ್ಯರಿಗೆ ತಾನೊಬ್ಬ ಮಹಾ ರಾಷ್ಟ್ರ ಭಕ್ತನೆಂಬಂತೆ ಬಿಂಬಿಸಿಕೊಂಡುಬಿಟ್ಟ.

ನಾಜಿವಾದವೇ ನಿಜವಾದ ರಾಷ್ಟ್ರಭಕ್ತಿಯೆಂಬಂತೆ ಆಕ್ರಮಣಕಾರಿಯಾಗಿ ಪ್ರಚಾರಕ್ಕೆ ತಂದ. ಇತರ ಜನಾಂಗಗಳು ನಾಜಿಗಳ ಸೇವೆಗೆ ಮಾತ್ರ ಅರ್ಹರು ಇಲ್ಲದಿದ್ದರೆ ಅವರು ಬದುಕಲೇ ಅನರ್ಹರು ಎನ್ನುವಂತೆ ಪ್ರಚಾರ ಮಾಡಿದ್ದ ಹಿಟ್ಲರ್ ಸರ್ವಾಧಿಕಾರಿ ಆಗಿದ್ದ. ಆತ ಮುಂದಿಡುತ್ತಿದ್ದ ವಾದಮಂಡನೆಗಳು, ಅದಕ್ಕೆ ಆತ ಬಳಸುತ್ತಿದ್ದ ಆಕ್ರಮಣಕಾರಿ ತಂತ್ರಗಳು. ಸಿಟ್ಟು, ಸುಳ್ಳುಗಳ ಮೇಲೆ ನಿಲ್ಲಿಸುತ್ತಿದ್ದ ತರ್ಕಬದ್ಧ ವಾದಗಳು ಅಸಮಾಧಾನಗಳಿಂದ ಕುದಿಯುತ್ತಿದ್ದ ಒಂದು ವರ್ಗದ ಜನರಿಗೆ ಅಪ್ತವಾಗಿ ಕಾಣತೊಡಗಿದ್ದವು. ಸ್ವಸ್ತಿಕ್ ಚಿನ್ಹೆಯೊಂದಿಗೆ ನಾಜಿ ಜನಾಂಗೀಯವಾದವನ್ನು ಒಂದು ದೊಡ್ಡ ಜನಸಮೂಹದ ಮಧ್ಯೆ ಗಟ್ಟಿಯಾಗಿ ನೆಲೆಯೂರಿಸುವಲ್ಲಿ ಹಿಟ್ಲರ್ ಸಫಲನಾಗಿಬಿಟ್ಟ. ನಾಜಿ ಶ್ರೇಷ್ಠತೆಯನ್ನು ಬಲವಾಗಿ ಪ್ರತಿಪಾದಿಸುತ್ತಾ ಬಂದ. ಇದನ್ನು ಆತ ಜರ್ಮನ್ ಆರ್ಯನ್ ಜನಾಂಗವೆಂದು ಕರೆದ. ಇದು ಇತರ ಎಲ್ಲಾ ಜನಾಂಗಗಳಿಗಿಂತಲೂ ಶ್ರೇಷ್ಠವೆಂದು ಪ್ರತಿಪಾದಿಸುತ್ತಾ ಬಂದ. ಇದಕ್ಕಾಗಿ ಆತ ಯಹೂದಿಗಳನ್ನು ಇತರರಿಂದ ಬೇರ್ಪಡಿಸುತ್ತಾ ಅವರನ್ನು ಎಲ್ಲಾ ರಂಗಗಳಿಂದಲೂ ಹೊರದಬ್ಬತೊಡಗಿದ್ದ. ಪೊಲೀಸ್, ಸೇನೆ, ಸರಕಾರದ ಇತರ ರಂಗಗಳಲ್ಲಿದ್ದ ಯಹೂದಿಗಳನ್ನು ಹೊರದಬ್ಬಿ ಆ ಅವಕಾಶಗಳನ್ನು ಇತರರಿಗೆ ನೀಡುತ್ತಾ ಒಂದು ಜರ್ಮನ್ ರಾಷ್ಟ್ರೀಯ ಸಮುದಾಯವನ್ನು ನಿರ್ಮಿಸುವ ರೀತಿ ಬಿಂಬಿಸಿಕೊಳ್ಳತೊಡಗಿದ್ದ. ತಾನು ಜರ್ಮನ್ ರಾಷ್ಟ್ರೀಯತೆಯ ನಾಯಕ ಹಾಗೂ ಸಂಕೇತವೆಂಬಂತೆ ಬಿಂಬಿಸಿಕೊಂಡು ಬಿಟ್ಟ. ಕೊನೆಗೆ ತನ್ನನ್ನು ತಾನೇ ಜರ್ಮನಿಯ ಪರಮೋಚ್ಚ ನಾಯಕನೆಂದು ಘೋಷಿಸಿಕೊಂಡ. ಆ ಮೂಲಕ ಜರ್ಮನಿಯ ಸರ್ವಾಧಿಕಾರಿಯಾಗಿ ನೆಲೆ ನಿಂತು ವಿಶ್ವದ ಮೇಲೆ ಹಿಡಿತ ಸಾಧಿಸಲು ಮುಂದಾದ. ಮುಸ್ಸೋಲಿನಿ ಆರಂಭಿಸಿದ್ದ ಫ್ಯಾಶಿಸಂ (18ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಬೆಳೆದು ಬಂದ ಬಂಡವಾಳಶಾಹಿ ಪ್ರಜಾಪ್ರಭುತ್ವಕ್ಕೆ ಇದು ಪೂರ್ಣ ತದ್ವಿರುದ್ಧವಾಗಿರುವ ಆಡಳಿತ ಸಿದ್ಧಾಂತವೆನ್ನಬಹುದು) ಅನ್ನು ಸದೃಢೀಕರಿಸಿ ಒಂದು ಆಡಳಿತ ವ್ಯವಸ್ಥೆಯಾಗಿ ಸ್ಥಾಪಿಸಿದ್ದು ಹಿಟ್ಲರ್.

1917ರಲ್ಲಿ ಸಮಾಜವಾದಿ ಕ್ರಾಂತಿಯನ್ನು ಸಾಧಿಸಿದ ಸೋವಿಯತ್ ರಶ್ಯಾದ ಪ್ರಭಾವ ಇತರೆಡೆಗಳಂತೆ ಆಗ ಜರ್ಮನ್ ಜನಸಮೂಹದ ಮಧ್ಯೆ ವ್ಯಾಪಕಗೊಳ್ಳತೊಡಗಿತ್ತು. ಅದು ಅಲ್ಲಿನ ಕಾರ್ಪೊರೇಟ್‌ಗಳಿಗೆ ಭಾರೀ ಬೆದರಿಕೆಗೆ ಕಾರಣವೂ ಆಗಿತ್ತು. ಕಮ್ಯುನಿಷ್ಟರು ಅಲ್ಲಿ ಆಗ ಇದ್ದ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಜನಸಾಮಾನ್ಯರನ್ನು ತಮ್ಮ ಮೇಲೆ ತಿರುಗಿಸಿ ಎಲ್ಲಿ ಜರ್ಮನಿಯಲ್ಲೂ ಸಮಾಜವಾದಿ ಕ್ರಾಂತಿ ಮಾಡಿಬಿಡುತ್ತಾರೋ ಎಂಬ ಆತಂಕ ಅಲ್ಲಿನ ಕಾರ್ಪೊರೇಟ್‌ಗಳದ್ದಾಗಿತ್ತು. ಜನರ ಗಮನವನ್ನು ಸಮಾಜವಾದಿ ಚಿಂತನೆಗಳಿಂದ ಬೇರೆಡೆಗೆ ತಿರುಗಿಸಿ ತಮ್ಮನ್ನು ಉಳಿಸಿಕೊಳ್ಳಲು ಹಿಟ್ಲರ್‌ನನ್ನು ಬೆಂಬಲಿಸಿ ಮುಂದಕ್ಕೆ ತಂದಿದ್ದೇ ಈ ಕಾರ್ಪೊರೇಟ್‌ಗಳಾಗಿದ್ದರು. ಅದಕ್ಕೇ ಹಿಟ್ಲರ್ ಮೊದಲು ಗುರಿ ಮಾಡಿದ್ದು ಕಮ್ಯುನಿಸ್ಟರನ್ನು ಮತ್ತು ಯಹೂದಿಗಳನ್ನು. ಲಕ್ಷಾಂತರ ಸಂಖ್ಯೆಯ ಕಮ್ಯುನಿಸ್ಟರನ್ನು ಹಿಟ್ಲರ್ ಹುಡುಕಿಹುಡುಕಿ ಕೊಂದು ಹಾಕಿದ್ದ. ಯಹೂದಿಗಳನ್ನು ಜನಾಂಗೀಯ ದ್ವೇಷ ಹುಟ್ಟುವಂತೆ ಮಾಡಿ ಬೇರೆಯವರಿಂದ ಪ್ರತ್ಯೇಕಿಸಿ ಕೊಂದು ಹಾಕಿದ್ದ. ಅವರನ್ನು ವಿಷಾನಿಲ ತುಂಬಿದ ಕೊಠಡಿಗಳಿಗೆ (ಗ್ಯಾಸ್ ಚೇಂಬರ್) ದೂಡಿ ಸಾಯುವಂತೆ ಮಾಡಿದ್ದ. ಆದರೆ ಹಿಟ್ಲರ್ ಜರ್ಮನ್ ಜನಸಾಮಾನ್ಯರಲ್ಲಿ ಬಹುಸಂಖ್ಯಾತರ ಬೆಂಬಲ ಪಡೆಯಲು ಸಾಧ್ಯವಾಗಿರಲಿಲ್ಲ. ಆತ ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಆತನ ಜರ್ಮನ್ ರಾಷ್ಟ್ರೀಯ ಸಮಾಜವಾದಿ ಪಕ್ಷ (ನಾಜಿ ಪಕ್ಷ)ಕ್ಕೆ ಸಿಕ್ಕ ಮತಗಳು ಶೇ. 30ರಷ್ಟು ಮಾತ್ರ. ಇದನ್ನು ಜರ್ಮನ್ ಕಾರ್ಮಿಕ ಪಕ್ಷವೆಂದು ಕೂಡ ಬಿಂಬಿಸಿಕೊಂಡಿದ್ದ. ಅದಕ್ಕೆ ಆಗ ಜರ್ಮನರನ್ನು ಪ್ರಭಾವಿಸುತ್ತಿದ್ದ ಸೋವಿಯತ್ ಕ್ರಾಂತಿ ಮುಖ್ಯ ಕಾರಣವಾಗಿತ್ತು.

ಆದರೆ ಹಿಟ್ಲರ್ ಯಾವುದೇ ಚುನಾಯಿತ ಪ್ರತಿನಿಧಿಯಾಗಿರಲಿಲ್ಲ. ಆಗಿನ ಅಧ್ಯಕ್ಷನಾಗಿದ್ದ ಪೌಲ್ ವೊನ್ ಹಿಂಡನ್ ಬರ್ಗ್ ನೇರವಾಗಿ ಹಿಟ್ಲರ್‌ನನ್ನು ಚಾನ್ಸಲೆರ್ ಆಗಿ ಅಧಿಕಾರದಲ್ಲಿ ಕುಳ್ಳಿರಿಸಿದ್ದ. ಕೊನೆಗಾತ ಹಿಂಡನ್ ಬರ್ಗ್ ಕಾಲಾನಂತರ ಮೊದಲಿದ್ದ ಜರ್ಮನ್ ಸಂವಿಧಾನವನ್ನು ಬದಲಿಸಿ ಅಧ್ಯಕ್ಷೀಯ ಚುನಾವಣೆಯನ್ನೇ ರದ್ದು ಪಡಿಸಿ ತನ್ನನ್ನು ಜರ್ಮನಿಯ ಅಧ್ಯಕ್ಷನನ್ನಾಗಿ ಸ್ಥಾಪಿಸಿಕೊಂಡು ಬಿಟ್ಟ.

ಇಂದು ಜಾಗತಿಕವಾಗಿ ಆರ್ಥಿಕ ಸಂಕ್ಷೋಭೆ ಮುಗಿಲು ಮುಟ್ಟಿದೆ. ಮುಂದುವರಿದ ರಾಷ್ಟ್ರಗಳ ಆರ್ಥಿಕತೆಗಳು ಚೇತರಿಸಿಕೊಳ್ಳುವಲ್ಲಿ ಸಫಲವಾಗು ತ್ತಿಲ್ಲ. ಜಾಗತಿಕ ನಿರುದ್ಯೋಗ ಮಿತಿ ಮೀರುತ್ತಿದೆ. ಮೊದಲಿನಿಂದ ಇದ್ದಷ್ಟು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮ ನಿಬಂಧನೆಗಳು ಜಾಗತಿಕ ಕಾರ್ಪೊರೇಟ್ ಶಕ್ತಿಗಳಿಗೆ ಆಗಿಬರುತ್ತಿಲ್ಲ. ಹಾಗಾಗಿ ಆ ಶಕ್ತಿಗಳು ಏಕ ವ್ಯಕ್ತಿ ರೀತಿಯ ಸರ್ವಾಧಿಕಾರಿ ವ್ಯವಸ್ಥೆಗೆ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಹಲವಾರು ಕಾನೂನು ಮತ್ತು ಆಡಳಿತ ಮಾರ್ಪಾಡುಗಳು ಭಾರತವೂ ಸೇರಿದಂತೆ ಪ್ರಪಂಚದ ಹಲವಾರು ದೇಶಗಳಲ್ಲಿ ಆಗತೊಡಗಿದೆ. ಜನಸಾಮಾನ್ಯರೇ ಭವಿಷ್ಯವನ್ನು ನಿರ್ಧರಿಸಬೇಕಾದ ಹೊಣೆ ಹೊರಬೇಕಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top