ಕೊಡಗು ಅಭಿವೃದ್ಧಿಯೂ ಆಗಲಿ ಪರಿಸರವೂ ಉಳಿಯಲಿ: ಎ.ಕೆ.ಸುಬ್ಬಯ್ಯ

► ಕೊಡಗಿನ ದುರಂತಕ್ಕೆ ನಿರಂತರ ಸುರಿದ ಮಹಾಮಳೆಯೇ ಕಾರಣ

► ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಜನರ ಬದುಕಿಗೆ ಬೆಂಕಿ ಇಡುವ ಕೆಲಸ ನಡೆಯುತ್ತಿದೆ

► ಸರಕಾರದ ಸ್ವಾಧೀನದಲ್ಲಿರುವ ಅರಣ್ಯ ನಾಶದ ಬಗ್ಗೆ ಯಾವ ಪರಿಸರವಾದಿಯೂ ಮಾತನಾಡುತ್ತಿಲ್ಲ.


ಪರಿಸರ ಸಂರಕ್ಷಣೆ ಮತ್ತು ಪರಿಸರ ನಾಶದ ಹೆಸರಿನಲ್ಲಿ ಕೊಡಗಿನ ಜನರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಅವರನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಅವರ ಬದುಕಿಗೆ ಬೆಂಕಿ ಹಾಕುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಆಗಬಾರದು ಎಂಬುದೇ ನನ್ನ ವಾದ.


ಪ್ರಗತಿಪರ ಚಿಂತಕ, ಅಜ್ಜಿಕುಟಿರ ಕಾರ್ಯಪ್ಪಸುಬ್ಬಯ್ಯ ಮೂಲತಃ ಕೊಡಗು ಜಿಲ್ಲೆಯ ಹುದುಕೇರಿ ನಿವಾಸಿ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಹೈಕೋರ್ಟ್‌ನಲ್ಲಿ ಹಲವು ವರ್ಷ ಕೆಲಸ ನಿರ್ವಹಿಸಿರುವ ಅನುಭವವನ್ನು ಹೊಂದಿದವರು. ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಸುಬ್ಬಯ್ಯನವರು ಒಂದು ಅವಧಿಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದವರು. ಇತ್ತೀಚೆಗೆ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪ, ಆ ಬಳಿಕ ಚರ್ಚೆಗೊಳಗಾದ ಜಿಲ್ಲೆಯ ಅಭಿವೃದ್ಧಿ, ಪರಿಸರ ಸಂರಕ್ಷಣೆಯ ಕುರಿತು ಪರಿಸರ ಪ್ರೇಮಿಯೂ ಆಗಿರುವ ಸುಬ್ಬಯ್ಯನವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಕೆಲವು ದಿನಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಉಂಟಾದ ಭಾರೀ ಪ್ರಕೃತಿ ವಿಕೋಪಕ್ಕೆ ಕಾರಣ ಏನು? 

* ಕೊಡಗು ಬೆಟ್ಟಗುಡ್ಡಗಳಿಂದ ಕೂಡಿರುವ ಜಿಲ್ಲೆ. ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಎಂದೂ ಕಂಡು ಕೇಳದಷ್ಟು ಮಹಾಮಳೆ ಸುರಿದಿದೆ. ಪರಿಣಾಮ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಕುಸಿತ ಉಂಟಾಗಿ ಹಲವು ಸಾವು ನೋವು ಸಂಭವಿಸಿವೆ. ಸಾವಿರಾರು ಮನೆಗಳಿಗೆ ಹಾನಿಯಾಗಿದ್ದು, ಸಾವಿರಗಟ್ಟಲೆ ಮಂದಿ ನಿರಾಶ್ರಿತರಾಗಿದ್ದಾರೆ. ಅವರ ನೆರವಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಬಿಟ್ಟು ಎಲ್ಲರೂ ಧಾವಿಸಿರುವುದು ಸಂತೋಷಕರವಾಗಿದೆ. ಜಾಗತಿಕ ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಯೇ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಕಾರಣ.

ಪ್ರಶ್ನೆ: ಕೊಡಗಿನ ಈ ದುರಂತಕ್ಕೆ ಜಿಲ್ಲೆಯಲ್ಲಾಗುತ್ತಿರುವ ಪರಿಸರ ನಾಶವೇ ಕಾರಣ ಎಂದು ಹೇಳಲಾಗುತ್ತಿದೆಯಲ್ಲಾ?

* ಕಳೆದ ಎರಡು ವರ್ಷ ಸಾಕಷ್ಟು ಮಳೆಯಾಗದೆ ಕೊಡಗಿಗೆ ಬರಗಾಲ ಬಂತು. ಮರಗಳನ್ನು ಕಡಿದುದರಿಂದ ಮಳೆಯಾಗಿಲ್ಲ ಎಂದು ಕೊಡಗಿನ ಸ್ವಘೋಷಿತ ಪರಿಸರವಾದಿಗಳು ಬೊಬ್ಬೆ ಹಾಕಿದರು. ಈಗ ಧಾರಾಕಾರ ಮಳೆಯಾಗಿದೆ. ಕಾಡು ನಾಶದಿಂದ ಎರಡು ವರ್ಷ ಬಾರದ ಮಳೆ ಈ ವರ್ಷ ಹೇಗೆ ಬಂತು? ಈ ವರ್ಷವೇ ಧಾರಾಕಾರ ಮಳೆಯಾಗುವಷ್ಟು ಮರಗಳನ್ನು ನೆಟ್ಟವರು ಯಾರು? ಮಳೆ ಬಂದು ಪ್ರಕೃತಿ ವಿಕೋಪ ಸಂಭವಿಸಿದ ಈ ಸಂದರ್ಭದಲ್ಲಿ ಪರಿಸರ ನಾಶದಿಂದ ಮಳೆ ಬಂತು ಎಂದು ಅದೇ ಪರಿಸರವಾದಿಗಳು ಬೊಬ್ಬೆ ಹಾಕುತ್ತಿದ್ದಾರೆ. ಇದರಲ್ಲಿ ಯಾವುದು ಸರಿ? ಮಳೆ ಬಾರದಿದ್ದರೆ ಪರಿಸರ ನಾಶದಿಂದ ಬರಗಾಲ ಬಂತು, ಮಳೆ ಬಂದರೆ ಪರಿಸರ ನಾಶದಿಂದ ಮಳೆ ಬಂತು ಹೇಳುವ ಪರಿಸರವಾದಿಗಳನ್ನು ಹೇಗೆ ನಂಬಬೇಕು.

ಪ್ರಶ್ನೆ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಇಲ್ಲಿನ ಕಾಡುಗಳು ನಾಶ ಹೊಂದುವುದಿಲ್ಲವೇ?

* ಪರಿಸರವನ್ನು ಜನರು ಹಾಳು ಮಾಡಿಲ್ಲ. ಅಭಿವೃದ್ಧಿಯಿಂದಲೂ ಹಾಳಾಗಿಲ್ಲ. ಕೊಡಗಿನ ಮೂಲ ವಾಸಿಗಳು, ಕೃಷಿಕರು ಪರಿಸರವನ್ನು ಉಳಿಸಿಕೊಂಡು ಬಂದವರು. ಕೊಡಗಿನ ಪರಿಸರ ಇಂದು ಉಳಿದಿದ್ದರೆ ಅದು ಅವರಿಂದ ಮಾತ್ರ. ಬೇಸಿಗೆಯಲ್ಲಿ ಹಚ್ಚ ಹಸುರಾಗಿ ಕೊಡಗಿನಲ್ಲಿ ಕಾಣುತ್ತಿರುವುದು ಖಾಸಗಿ ಜಾಗದಲ್ಲಿ. ಪಶ್ಚಿಮ ಘಟ್ಟದಲ್ಲಿ ಪರಿಸರ ನಾಶವಾಗಿರುವುದು ಸರಕಾರದ ಸ್ವಾಧೀನದಲ್ಲಿರುವ ಕಾಡುಗಳಲ್ಲಿ ಮಾತ್ರ. ಖಾಸಗಿ ಜಮೀನುಗಳಲ್ಲಿ ಮರ ಗಿಡ ನಾಶವಾಗುತ್ತಿದ್ದರೆ ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ನಾಡಿಗೆ ಯಾಕೆ ಬರುತ್ತಿವೆ? ತೋಟ, ಕೃಷಿ ಭೂಮಿಗಳಿಗೆ ಯಾಕೆ ದಾಳಿ ಮಾಡುತ್ತಿವೆ? ಸರಕಾರದ ಸ್ವಾಧೀನದಲ್ಲಿರುವ ಕಾಡುಗಳಲ್ಲಿ ಮರ ಗಿಡಗಳ ನಾಶದಿಂದ ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗದೆ ನಾಡಿಗೆ ಲಗ್ಗೆ ಇಡುತ್ತಿವೆ. ಪರಿಸರವನ್ನು ಪೂಜಿಸುತ್ತಾ ಬಂದ ಕೊಡಗಿನ ಮೂಲ ಜನರು, ರೈತರು, ಕೃಷಿಕ ವರ್ಗದವರಿಗೆ ಪರಿಸರವನ್ನು ಉಳಿಸಬೇಕು ಎಂಬ ಪ್ರಜ್ಞೆ ಇಲ್ಲಿನ ಪರಿಸರವಾಸಿಗಳಿಗಿಂತ ಹೆಚ್ಚು ಇದೆ.

ಪ್ರಶ್ನೆ: ಸರಕಾರದ ಸ್ವಾಧೀನದಲ್ಲಿರುವ ಅರಣ್ಯ ನಾಶವಾಗುತ್ತಿರುವುದು ಹೇಗೆ? 

* ಅರಣ್ಯ ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಗಳಿಂದಾಗಿ ಕಾಡಿನಿಂದ ನಿತ್ಯವೂ ಸಾವಿರಾರು ಮರಗಳು ಟಿಂಬರ್ ಮಾಫಿಯಾದ ಪಾಲಾಗುತ್ತಿವೆ. ಪ್ರತೀ ವರ್ಷ ಅರಣ್ಯಕ್ಕೆ ಬೆಂಕಿ ಬಿದ್ದು ಸಾವಿರಾರು ಎಕರೆ ಅರಣ್ಯ ಸುಟ್ಟು ಹೋಗುತ್ತಿದೆ. ಬೆಂಕಿ ಬಿದ್ದು ಅರಣ್ಯ ನಾಶವಾಗುವಾಗ ಈ ಪರಿಸರವಾದಿಗಳು ಎಲ್ಲಿ ಇರುತ್ತಾರೆ. ಅರಣ್ಯಕ್ಕೆ ಬೆಂಕಿ ಬೀಳದಂತೆ, ಬೆಂಕಿ ಬಿದ್ದರೆ ಕೂಡಲೇ ನಂದಿಸುವಂತಹ ಯಾವ ವ್ಯವಸ್ಥೆ ಮಾಡಿದ್ದಾರೆ, ಮಾಡುವಂತೆ ಸರಕಾರವನ್ನು ಎಷ್ಟು ಒತ್ತಾಯಿಸಿದ್ದಾರೆ. ಈ ಬಗ್ಗೆ ಅವರು ತುಟಿ ಪಿಟಿಕ್ ಎನ್ನುತ್ತಿಲ್ಲ. ಯಾರೋ ಮಾಡುತ್ತಿರುವ ತಪ್ಪನ್ನು ಯಾರದ್ದೋ ಮೇಲೆ ಹೇರಳಾಗುತ್ತಿದೆ. ಇದಕ್ಕಿಂತ ದೊಡ್ಡ ತಪ್ಪುಯಾವುದಿದೆ?

ಪ್ರಶ್ನೆ: ಬೆಟ್ಟಗುಡ್ಡಗಳನ್ನು ಅಗೆದು ರಸ್ತೆ, ಹೋಂಸ್ಟೇ, ಹೊಟೇಲ್‌ಗಳ ನಿರ್ಮಾಣವಾಗುತ್ತಿರುವುದು ನೀವು ಗಮನಿಸಿದ್ದೀರಾ?  

* ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪಕ್ಕೂ ಜಿಲ್ಲೆಯ ಅಭಿವೃದ್ಧಿಗೂ ಯಾವುದೇ ಸಂಬಂಧ ಇಲ್ಲ. ರಸ್ತೆ ನಿರ್ಮಾಣದಿಂದ ಭೂಕುಸಿತ ಉಂಟಾಗುತ್ತಿದೆ ಎನ್ನುತ್ತಾರೆ. ಹಾಗಾದರೆ ಮಂಗಳೂರು ಮಡಿಕೇರಿ ರಸ್ತೆ ಕುಸಿದಿದೆ. ಆ ರಸ್ತೆಯನ್ನು ಸರಕಾರ ಬಂದ್ ಮಾಡಲಿ. ಕೊಡಗಿನಲ್ಲಿ ಭೂಕುಸಿತದಿಂದ ಹೆಚ್ಚಿನ ಹಾನಿಯಾಗಿರುವುದು ಹೌದು. ಈ ಹಿಂದೆ ಕಂಡು ಕೇಳದಷ್ಟು ದಿನಕ್ಕೆ 35ರಿಂದ 40 ಇಂಚು ನಿರಂತರ ಒಂದು ವಾರ ಮಳೆಯಾದ ಹಿನ್ನೆಲೆಯಲ್ಲಿ ಭೂಕುಸಿತ ಉಂಟಾಗಿದೆ. ಆ ರೀತಿ ಮಳೆಯಾಗದಿದ್ದರೆ ಭೂಕುಸಿತ ಉಂಟಾಗುತ್ತಿರಲ್ಲ. ಮಳೆ ಸುರಿಯಲು ರಸ್ತೆ, ಹೊಟೇಲ್, ಹೋಂಸ್ಟೇಗಳು ಕಾರಣವೇ? ಭೂಕುಸಿತದಿಂದ ಎಲ್ಲೂ ಹೋಂಸ್ಟೇ ಅಥವಾ ಹೊಟೇಲ್‌ಗಳು ಹಾನಿಗೊಳಗಾಗಿಲ್ಲ. ಜನರ ಗಮನ ಬೇರೆ ಕಡೆ ಸೆಳೆಯಲು ಪರಿಸರವಾದಿಗಳು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚಿಗಿನ ದಶಕಗಳಲ್ಲಿ ಬಾರದಷ್ಟು ಮಳೆ ಈಗ ಯಾಕೆ ಬಂತು ಎನ್ನುವುದರ ಬಗ್ಗೆ ಅಧ್ಯಯನ ನಡೆಸಲಿ. ಜಾಗತಿಕ ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಇರಬಹುದೇ ಹೊರತು ಕೊಡಗಿನ ಅಭಿವೃದ್ಧಿ ಅಲ್ಲ.

ಪ್ರಶ್ನೆ: ಬೆಟ್ಟಗುಡ್ಡಗಳಲ್ಲಿ ನಡೆಯುವ ಅಭಿವೃದ್ಧಿಗಳಿಂದ ಪರಿಸರ ವಿನಾಶಕ್ಕೆ ತುತ್ತಾಗುತ್ತಿವೆ ಎಂಬ ಕೂಗು ಕೇಳಿಬರುತ್ತಿವೆಯಲ್ಲ? 

* ಕೊಡಗಿನ ಅಭಿವೃದ್ಧಿಯಿಂದ ಪರಿಸರ ನಾಶವಾಗಿಲ್ಲ. ಅಭಿವೃದ್ಧಿ ಬೇಡ ಎನ್ನುವುದರ ಪರೋಕ್ಷ ಅರ್ಥ ಕೊಡಗಿನಲ್ಲಿ ಜನರು ಬದುಕಬಾರದು ಎನ್ನುವ ಉದ್ದೇಶವಾಗಿದೆ. ಪರಿಸರ ಸಂರಕ್ಷಣೆ ಮತ್ತು ಪರಿಸರ ನಾಶದ ಹೆಸರಿನಲ್ಲಿ ಕೊಡಗಿನ ಜನರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಅವರನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಅವರ ಬದುಕಿಗೆ ಬೆಂಕಿ ಹಾಕುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಆಗಬಾರದು ಎಂಬುದೇ ನನ್ನ ವಾದ. ಅಭಿವೃದ್ಧಿ ಬೇಡ ಎಂದರೆ ಕೊಡಗಿನಲ್ಲಿ ಜನರು ಇರುವುದೂ ಬೇಡ. ಪರಿಸರ ವಾದಿಗಳ ಮಕ್ಕಳು ನಗರದಲ್ಲಿ ವಾಸಿಸುವ ಹಾಗೆ ಕೊಡಗಿನ ಜನರಿಗೆ ಸರಕಾರ ನಗರಗಳಲ್ಲಿ ಪುನರ್ ವಸತಿ ಮಾಡಿಕೊಡಲಿ.

ಪ್ರಶ್ನೆ: ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಪಶ್ಚಿಮ ಘಟ್ಟವನ್ನು ಸಂರಕ್ಷಿಸಬಹುದಲ್ಲವೇ? 

* ಪರಿಸರವಾದಿಗಳಿಗೆ ಪರಿಸರದ ಮೇಲೆ ನಿಜವಾದ ಪ್ರೀತಿ ಇದ್ದಿದ್ದರೆ ಅವರು ಮರ ಬೆಳೆಸುವುದಕ್ಕೆ ಉತ್ತೇಜನ ನೀಡುತ್ತಿದ್ದರು. ಆದರೆ ಅವರು ಅದನ್ನು ಮಾಡುತ್ತಿಲ್ಲ?. ಕೊಡಗಿನಲ್ಲಿ ಒಂದು ಲಕ್ಷ ಮರ ಕಡಿದರೆ ಎರಡು ಕೋಟಿ ಗಿಡ ನೆಡಲು ಅವಕಾಶ ಇದೆ. ಗಿಡ ನೆಟ್ಟು ಮರ ಬೆಳೆಸುವುದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅದನ್ನು ಮಾಡದೆ ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಮುಂದಾಗಿರುವುದು ಎಷ್ಟು ಸರಿ? ಪರಿಸರಕ್ಕೆ ಹಾನಿಕರವಾದ ಎಸಿ ಮನೆಯಲ್ಲಿ ವಾಸಿಸುವ ಪರಿಸರವಾದಿಗಳು ಕೊಡಗಿನ ಪರಿಸರದ ಬಗ್ಗೆ ಮಾತನಾಡುತ್ತಾರೆ. ಅವರೆಲ್ಲರೂ ಎಸಿ ಕಾರಿನಲ್ಲಿ ಸುತ್ತಾಡುತ್ತಾರೆ. ಪರಿಸರಕ್ಕೆ ಹಾನಿಕರವಾದ ಎಸಿ ಬೇಡ, ಫ್ರಿಡ್ಜ್ ಬೇಡ ಎಂದು ಅವರು ಯಾರೂ ಏಕೆ ಹೇಳುತ್ತಿಲ್ಲ. ಗಿಡ ಮರ ಬೆಳೆಸುವುದಕ್ಕೆ ಅವರು ಯಾವ ಕಾರ್ಯಕ್ರಮವನ್ನೂ ಹಮ್ಮಿ ಕೊಂಡಿಲ್ಲ. ಇಲ್ಲಿನ ಜನರನ್ನು ಒಕ್ಕಲೆಬ್ಬಿಸಿ ಪಶ್ಚಿಮ ಘಟ್ಟದ ಮೇಲೆ ಪ್ರಭುತ್ವ ಸಾಧಿಸುವುದೇ ಅವರ ಗುರಿ ಹೊರತು ಪಶ್ಚಿಮ ಘಟ್ಟದ ಸಂರಕ್ಷಣೆ ಅಲ್ಲ.

ಪ್ರಶ್ನೆ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೂ ಜಿಲ್ಲೆಯ ಪರಿಸರವಾದಿಗಳಿಗೂ ಏನು ಸಂಬಂಧ? 

* ಕಸ್ತೂರಿ ರಂಗನ್ ವರದಿಗೂ ಪ್ರಾಕೃತಿಕ ವಿಕೋಪಕ್ಕೆ ಏನು ಸಂಬಂಧ. ವರದಿ ಅನುಷ್ಟಾನ ಆಗಿದ್ದರೆ ಇಂದು ದುರಂತ ನಡೆಯುತ್ತಿರಲಿಲ್ಲವೇ? ವರದಿಯ ಸಾಕಷ್ಟು ಅಂಶಗಳು ಈಗಾಗಲೇ ಅನುಷ್ಠಾನಗೊಂಡಿವೆ. ಅದರ ಪ್ರಮುಖ ಅಂಶಗಳು ಮಾತ್ರ ಅನುಷ್ಠಾನಕ್ಕೆ ಬಾಕಿ ಇರುವುದು. ಭಾರೀ ಮಳೆ ಬಾರದಿದ್ದರೆ ಯಾವುದೇ ಬೆಟ್ಟ ಕುಸಿಯುತ್ತಿರಲಿಲ್ಲ. ಯಾವುದೋ ಘಟನೆಗೆ ಇನ್ನೇನನ್ನೋ ತೋರಿಸಿ ಜನರ ದಿಕ್ಕು ತಪ್ಪಿಸುವ ಕುತಂತ್ರ ಇದಾಗಿದೆ. ಕೊಡಗಿನಲ್ಲಿ ಪರಿಸರವಾದಿಗಳ ಹೆಸರಿನಲ್ಲಿ 18ಕ್ಕೂ ಹೆಚ್ಚು ಟ್ರಸ್ಟ್‌ಗಳಿವೆ. ವಿದೇಶಗಳಲ್ಲಿ ಅವರ ನೆಟ್‌ವರ್ಕ್‌ಗಳಿವೆ. ಆ ಮೂಲಕ ಟ್ರಸ್ಟ್‌ಗಳಿಗೆ ವಿದೇಶದಿಂದ ಹಣ ಹರಿದು ಬರುತ್ತಿದೆೆ. ಪರಿಸರದ ಹೆಸರಿನಲ್ಲಿ ಹಣ ಮಾಡುವುದೇ ಅವರ ಉದ್ದೇಶ. ಅದರ ಹೊರತು ಅವರಿಗೆ ಪರಿಸರದ ಮೇಲೆ ಯಾವುದೇ ಪ್ರೀತಿ ಇಲ್ಲ. ಅದಕ್ಕೇ ನಾವು ಅವರನ್ನು ಡೋಂಗಿ ಪರಿಸರವಾದಿಗಳು ಎಂದು ಕರೆಯುವುದು.

ಪ್ರಶ್ನೆ: ಅಭಿವೃದ್ಧಿಯೊಂದಿಗೆ ಪರಿಸರವನ್ನು ಉಳಿಸಲು ಹೇಗೆ ಸಾಧ್ಯ?

* ಜಿಲ್ಲೆಯ ಅಭಿವೃದ್ಧಿಯ ಜೊತೆಗೆ ಪರಿಸರವನ್ನು ಉಳಿಸಲು ಸಾಧ್ಯವಿದೆ. ಇದಕ್ಕೆ ಬೇಕಾದ ನೀತಿ, ಯೋಜನೆಗಳನ್ನು ಸರಕಾರ ಜಾರಿಗೆ ತರಬೇಕು. ಅದಕ್ಕೂ ಮೊದಲು ಪ್ರವಾಹ, ಭೂಕುಸಿತದಿಂದ ಸಾವಿರಾರು ಮಂದಿ ಮನೆ, ಜಮೀನು ಕಳೆದುಕೊಂಡಿದ್ದಾರೆ. ಕುಟುಂಬಸ್ಥರ ಮನೆಗಳಲ್ಲಿ, ನಿರಾಶ್ರಿತ ಶಿಬಿರಗಳಲ್ಲಿ ವಾಸವಾಗಿದ್ದಾರೆ. ಅವರಿಗೆ ಏನು ಪರಿಹಾರ? ಅವರಿಗೆ ನೆರವಾಗುವುದು ಹೇಗೆ? ಅವರ ಪುನರ್ ವಸತಿಗೆ ಏನು ಮಾಡುವುದು ಎಂಬುದರ ಬಗ್ಗೆ ಚರ್ಚೆಯಾಗಲಿ. ಅದು ಬಿಟ್ಟು ಪರಿಸರ, ಅಭಿವೃದ್ಧಿಯ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಇದು ಅದಕ್ಕೆ ಇರುವ ಸಮಯವೂ ಅಲ್ಲ. ಎಲ್ಲಾ ನಿರಾಶ್ರಿತರಿಗೆ ಸರಕಾರ ಪುನರ್ ವಸತಿ ಕಲ್ಪಿಸಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top