---

‘ನಗರದ ನಕ್ಸಲ’ರೆಂದರೆ ಯಾರು?

ಭಾರತೀಯ ಜನತಾ ಪಕ್ಷದ ನೇತೃತ್ವದ ಸರಕಾರ ಮತ್ತು ಹಿಂದುತ್ವವಾದಿ ರಾಷ್ಟ್ರೀಯವಾದಿಗಳು ತಮ್ಮ ಸಾಂಸ್ಕೃತಿಕ ಮೂಲಭೂತವಾದಕ್ಕಾಗಿ ನಡೆಸುವ ರಕ್ಕಸೀ ಪ್ರಯತ್ನಗಳಿಗೆ ಕೊನೆಮೊದಲಿಲ್ಲ. ಹಿಂದುತ್ವವಾದಿಗಳ ಇಂಥಾ ಎಲ್ಲಾ ನಡೆಗಳಿಗೆ ಬಿಜೆಪಿ ಸರಕಾರದ ಸಂಪೂರ್ಣ ಬೆಂಬಲವಿರುವುದು ತೀವ್ರ ಕಳವಳ ಹುಟ್ಟಿಸುತ್ತದೆ. ಅದೇ ರೀತಿ ಪ್ರಭುತ್ವ ಭಯೋತ್ಪಾದನೆಯ ಮೂಲಕ ತನ್ನ ಅತ್ಯಗತ್ಯ ಶತ್ರುಗಳನ್ನು ‘ನಗರದ ನಕ್ಸಲ’ರೆಂದು ವರ್ಗೀಕರಿಸಿ ನಿಯಂತ್ರಿಸುವ ಭಾರತದ ಪ್ರಭುತ್ವದ ಕ್ರಮಗಳು ಸಹ ಇಷ್ಟೇ ಕಳವಳಕಾರಿಯಾಗಿದೆ. ಅಂಥ ಒಂದು ಕ್ರಮಗಳ ಭಾಗವಾಗಿಯೇ 2018ರ ಜೂನ್ ಮತ್ತು ಆಗಸ್ಟ್‌ನಲ್ಲಿ ಕಾರ್ಯಕರ್ತರ ಬಂಧನಗಳಾಗಿವೆ. ಇದಕ್ಕೆ ಮೊದಲು ಇಂತಹ ದಮನಕಾರಿ ಕ್ರಮಗಳನ್ನು ಮುಸ್ಲಿಮರ ಮೇಲೆ, ದಮನಿತ ರಾಷ್ಟ್ರೀಯತೆಗಳ ಸಮರಶೀಲ ಹೋರಾಟಗಳ ಮೇಲೆ ಹಾಗೂ ಮಾವೋವಾದಿಗಳ ಮೇಲೆ ಪ್ರಯೋಗಿಸಲಾಗುತ್ತಿತ್ತು. ಸರಕಾರದ ವರ್ಗೀಕರಣದ ಪ್ರಕಾರ ‘ನಗರದ ನಕ್ಸಲ’ರೆಂದರೆ ಸಿಪಿಐ (ಮಾವೋವಾದಿ) ಪಕ್ಷದ ಸದಸ್ಯರೆಂದೇ ಭಾವಿಸಲಾಗುವ ವಕೀಲರು, ಮಾನವ ಹಕ್ಕುಗಳ ಹೋರಾಟಗಾರರು, ಕವಿಗಳು, ಬರಹಗಾರರು, ಪತ್ರಕರ್ತರು ಮತ್ತು ಪ್ರೊಫೆಸರುಗಳೇ ಆಗಿದ್ದಾರೆ. 

ಕನಿಷ್ಠ ಪಕ್ಷ ಸರಕಾರದ ಈವರೆಗಿನ ವರ್ಗೀಕರಣ ಇದನ್ನೇ ತೋರಿಸುತ್ತದೆ. ಆಗಸ್ಟ್‌ನಲ್ಲಿ ಬಂಧಿತರಾದ ಐವರ ಮೇಲೆ ಇತರ ಕ್ರಿಮಿನಲ್ ಸೆಕ್ಷನ್‌ಗಳ ಜೊತೆ ಅನ್‌ಲಾಫುಲ್ ಆಕ್ಟಿವಿಟೀಸ್ (ಪ್ರಿವೆನ್ಷನ್) ಆ್ಯಕ್ಟ್ (ಯುಎಪಿಎ- ಕಾನೂನುಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ)ಅನ್ನೂ ಹಾಕಲಾಗಿದೆ. ಈ ನಗರದ ನಕ್ಸಲರ ಮತ್ತು ಸರಕಾರವು ಬೆದರಿಸಬೇಕೆಂದು ನಿರ್ಧರಿಸಿದ್ದ ಇನ್ನಿತರರ ಮನೆ ಮತ್ತು ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ಬಗ್ಗೆ ಅಪಪ್ರಚಾರ ಮಾಡಿ ಅಮಾನ್ಯಗೊಳಿಸುವ ಉದ್ದೇಶದ ಭಾಗವಾಗಿಯೇ ಪ್ರಭುತ್ವದ ಕೆಲವು ಸಾಕು ಮಾಧ್ಯಮಗಳು ಬಂಧಿತರಲ್ಲಿ ಕೆಲವರ ಮೇಲೆ ಮಾಡಲಾಗಿರುವ ಆಪಾದನೆಗಳ ಬಗ್ಗೆ ತಮ್ಮ ಪ್ರೈಂ ಸಮಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದರು. ಕೆಲವು ಮಾಧ್ಯಮಗಳಂತೂ ಅವರನ್ನು ಬಹಿರಂಗವಾಗಿ ಅಪರಾಧಿಗಳೆಂದು ಪರಿಗಣಿಸಿ ಅವರನ್ನು ದೇಶದ್ರೋಹಿಗಳೆಂದೂ, ರಾಷ್ಟ್ರದ ಅಗೋಚರ ಶತ್ರುಗಳೆಂದೂ, ಸಿಪಿಐ (ಮಾವೋವಾದಿ)ಗಳಿಗೆ ಸಹಕರಿಸುತ್ತಿರುವುದರಿಂದ ಭಾರತೀಯ ಪ್ರಜಾತಂತ್ರಕ್ಕೆ ಗಂಭೀರವಾದ ಬೆದರಿಕೆಯನ್ನೊಡ್ಡುತ್ತಿದ್ದಾರೆಂದೂ ಘೋಷಿಸಿಬಿಟ್ಟವು. ‘ರಾಷ್ಟ್ರದ ಅಗೋಚರ ಶತ್ರುಗಳಲ್ಲಿ’ ಮತ್ತು ‘ಭಾರತದ ಪ್ರಜಾತಂತ್ರಕ್ಕೆ ತೀವ್ರತರನಾದ ಬೆದರಿಕೆ ಒಡ್ಡುತ್ತಿರುವವರಲ್ಲಿ’ ‘ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ (ಇಪಿಡಬ್ಲ್ಯೂ) ಪತ್ರಿಕೆಯ ಪ್ರಖ್ಯಾತ ಪತ್ರಕರ್ತರಾದ ಗೌತಮ್ ನವ್ಲಾಖಾ ಸಹ ಒಬ್ಬರು. ಗೌತಮ್ ನವ್ಲಾಖಾ ಅವರು 1980ರ ಮೊದಲ ಭಾಗದಲ್ಲಿ ಇಪಿಡಬ್ಲ್ಯೂವನ್ನು ಸೇರಿಕೊಂಡರು ಮತ್ತು ನಾನು ಕಂಡ ಅತ್ಯುತ್ತಮ ಭಾರತೀಯ ಪತ್ರಕರ್ತರಾದ ರಜನಿ ದೇಸಾಯಿ, ಎಂ.ಎಸ್. ಪ್ರಭಾಕರ ಮತ್ತು ಕೃಷ್ಣರಾಜ್ ಅವರ ಜೊತೆಜೊತೆಗೆ ಕೆಲಸ ಮಾಡಿದರು. ನಂತರ 80ರ ಉತ್ತರಾರ್ಧದಲ್ಲಿ ಅವರು ತಮ್ಮ ವಾಸವನ್ನು ದಿಲ್ಲಿಗೆ ಸ್ಥಳಾಂತರಿಸಿದ ನಂತರವೂ ಇಪಿಡಬ್ಲ್ಯೂನ ಸಂಪಾದಕೀಯ ಸಲಹೆಗಾರರಾಗಿ ತಮ್ಮ ನಂಟನ್ನು ಮುಂದುವರಿಸಿದರು. ಈ ಸಂಬಂಧ 2006ರವರೆಗೂ ಮುಂದುವರಿಯಿತು. ಆದರೆ ತಾವು ದಿಲ್ಲಿಯ ನಾಗರಿಕ ಹಕ್ಕುಗಳ ಸಂಘಟನೆಯಾದ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಪಿಯುಡಿಆರ್)ಗೆ ಹೆಚ್ಚು ಸಮಯ ಕೊಡಬೇಕಾಗಿರುವುದರಿಂದ ಇಪಿಡಬ್ಲ್ಯೂನೊಂದಿಗಿನ ತಮ್ಮ ಈ ಔಪಚಾರಿಕ ಸಂಬಂಧದಿಂದ ಮುಕ್ತಗೊಳಿಸಬೇಕೆಂದು ಆಗಿನ ಸಂಪಾದಕರಾದ ಸಿ. ರಾಮಮೋಹನ ರೆಡ್ಡಿಯವರನ್ನು ನವ್ಲಾಖಾ ಅವರು ಕೋರಿಕೊಂಡರು. ಆ ನಂತರವೂ ಅವರು ಇಪಿಡಬ್ಲ್ಯೂಗೆ ನಿರಂತರವಾಗಿ ಬರೆಯುತ್ತಲೇ ಇದ್ದಾರೆ. 1990ರ ನಂತರದಲ್ಲಿ ಅವರು ಜಮ್ಮು-ಕಾಶ್ಮೀರದ ನಾಗರಿಕ ಸಮಾಜದ ಒಕ್ಕೂಟದೊಡನೆ ಹೆಚ್ಚು ಒಡನಾಟವನ್ನು ಮಾಡುತ್ತಾ ಹಲವಾರು ಸತ್ಯ ಶೋಧನಾ ಸಮಿತಿಗಳಲ್ಲಿ ಭಾಗವಹಿಸುತ್ತಾ, ಅವುಗಳ ಪ್ರಚಾರಾಂದೋಲನ ದಲ್ಲಿ ಭಾಗವಹಿಸುತ್ತಾ, ಅವುಗಳ ವರದಿಗಳನ್ನು ಬರೆಯುತ್ತಾ ಹೋದಂತೆ ಅವರ ಬರಹಗಳಲ್ಲಿ ಒಂದು ಸ್ಪಷ್ಟವಾದ ವ್ಯತ್ಯಾಸ ಬರತೊಡಗಿತು. ಸತ್ಯಕ್ಕೆ ಪರಮ ಬದ್ಧತೆಯನ್ನು ತೋರುತ್ತಿದ್ದ ಗೌತಮ್ ನವ್ಲಾಖಾ ಅವರು ಭಾರತದ ಪ್ರಭುತ್ವವು ಕಾಶ್ಮೀರ ಕಣಿವೆಯ ಗುರುತಿರದ ಗೋರಿಗಳೊಳಗೆ ಬಚ್ಚಿಟ್ಟ ಘನಘೋರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಇಪಿಡಬ್ಲ್ಯೂನಲ್ಲಿ ಹಾಗೂ ಇತರ ಪತ್ರಿಕೆಗಳಲ್ಲಿ ಬಿಚ್ಚಿಡತೊಡಗಿದರು: ಬಲವಂತದ ಕಣ್ಮರೆಗಳು ಮತ್ತು ನಂತರದ ಸುಳ್ಳು ಎನ್‌ಕೌಂಟರಿನಲ್ಲಿ ತಣ್ಣಗೆ ನಡೆಯುತ್ತಿದ್ದ ಬೀಭತ್ಸ ಕೊಲೆಗಳು ಮತ್ತು ಭಾರತೀಯ ಸೇನೆ, ಅರೆಸೇನೆ ಮತ್ತು ಪೊಲೀಸ್ ಅಧಿಕಾರಿಗಳು ನಡೆಸುವ ಈ ಅಕ್ರಮಗಳಿಗಿರುವ ಕಾನೂನಿನ ಸುರಕ್ಷೆ ಇತ್ಯಾದಿಗಳ ಬಗ್ಗೆ ನವ್ಲಾಖಾ ಬರೆಯುತ್ತಲೇ ಹೋದರು.

ಭಾರತೀಯ ಪ್ರಜಾತಂತ್ರದ ಪೊಳ್ಳುತನ ಕಾಶ್ಮೀರದಲ್ಲಿ ಹೇಗೆ ಬೆತ್ತಲಾಗಿದೆ ಎಂಬುದನ್ನು ನವ್ಲಾಖಾ ತೋರಿಸತೊಡಗಿದರು. ಭಾರತದ ದೊಡ್ಡದೊಡ್ಡ ಮಾಧ್ಯಮಗಳು ಪ್ರಭುತ್ವದ ಸಾಕು ಮಾಧ್ಯಮಗಳಾಗಿ ಪ್ರಭುತ್ವದ ತುತ್ತೂರಿಗಳಾಗಿರುವ ಈ ಸಂದರ್ಭದಲ್ಲಿ ನವ್ಲಾಖಾರಂಥವರು ಮಾತ್ರ ಧೈರ್ಯಶಾಲಿಗಳಾಗಿ ನಿರ್ಭೀತ ಪತ್ರಕರ್ತರಾಗಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಮುಂದುವರಿಯಲು ಸಾಧ್ಯ. ಹಿಂಸೆಗೆ ಬಲಿಯಾಗಿರುವವರನ್ನೇ ಹಿಂಸೆಯ ಪ್ರಚೋದಕರೆಂಬಂತೆ ನಿರಂತರ ಪ್ರಚಾರ ಮಾಡುತ್ತಿರುವಾಗ ಕೋಪೋದ್ರಿಕ್ತ ಓದುಗರು ನಿಮಗೆ ಕಿವಿಗೊಡಲೂ ಸಿದ್ಧರಿರುವುದಿಲ್ಲ. ಭಾರತದ ಸಂಸದೀಯ ಎಡಪಂಥಕ್ಕೆ ಸೇರಿದ ಕೆಲವರೂ ಸಹ ನವ್ಲಾಖಾ ಅವರ ಬರಹಗಳನ್ನು ತಿರಸ್ಕರಿಸುತ್ತಾರೆ ಮತ್ತು ಅವರನ್ನು ‘ದಾರಿ ತಪ್ಪಿಸಲಾಗಿದೆ’ ಎಂದು ನಂಬುತ್ತಾರೆ. ಆದರೆ ವಾಸ್ತವಾಂಶಗಳನ್ನು ಮತ್ತು ತರ್ಕಗಳನ್ನು ಬಲವಾಗಿ ಮುಂದಿಡುತ್ತಾ ನವ್ಲಾಖಾ ಅವರು ತಮ್ಮ ಪ್ರತಿಪಾದನೆಯನ್ನು ದೃಢವಾಗಿ ಮಾಡುತ್ತಲೇ ಇದ್ದಾರೆ ಮತ್ತು ಭಾರತೀಯ ನಿಯಂತ್ರಣದಲ್ಲಿರುವ ಕಾಶ್ಮೀರದಲ್ಲಿ ಭಾರತವು ಕಾಶ್ಮೀರವನ್ನು ಆಂತರಿಕ ವಸಾಹತುವನ್ನಾಗಿ ಪರಿಗಣಿಸುತ್ತಿದೆ ಎಂಬ ತಮ್ಮ ಆಪಾದನೆಯನ್ನು ಹಿಂಜರಿಕೆಯಿಲ್ಲದೆ ಪ್ರತಿಪಾದಿಸುತ್ತಿದ್ದಾರೆ.

ಒಬ್ಬ ನಿಜವಾದ ಮಾರ್ಕ್ಸ್‌ವಾದಿ-ಸಮಾಜವಾದಿಯು ಜನಾಂಗೀಯ, ರಾಷ್ಟ್ರೀಯ, ಜಾತಿ, ವರ್ಗ, ಬಣ್ಣ ಅಥವಾ ಲಿಂಗಾಧಾರಿತವಾದ ಎಲ್ಲ ಬಗೆಯ ದಮನಗಳನ್ನು ವಿರೋಧಿಸಬೇಕು. ಇದೇ ಮಾರ್ಕ್ಸ್‌ವಾದಿ-ಸಮಾಜ ವಾದಿ ನೈತಿಕತೆಯ ತಿರುಳಾಗಿದೆ. ಮಾರ್ಕ್ಸ್‌ವಾದವು ತುಳಿತಕ್ಕೊಳಗಾದವರ, ಕಾರ್ಮಿಕವರ್ಗದ ಮತ್ತು ಬಡರೈತರಂತಹ ಅರೆ-ಕಾರ್ಮಿಕವರ್ಗದ ತತ್ವಶಾಸ್ತ್ರವಾಗಿದೆ. ಮಾರ್ಕ್ಸ್‌ವಾದವೆಂಬುದು ಅಧಿಕಾರದ ತತ್ವಶಾಸ್ತ್ರವಲ್ಲ; ಅದು ಸಮಾನತೆಯ ತತ್ವಶಾಸ್ತ್ರವಾಗಿದೆ ಮತ್ತು ಅದನ್ನೇ ನವ್ಲಾಖಾ ಅವರು ಅಂತರಂಗೀಕರಿಸಿಕೊಂಡರು ಮತ್ತು ಆಚರಿಸಿದರು. ಹೀಗೆ ಪತ್ರಕರ್ತನಾಗಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತನಾಗಿ ಅವರು ನಡೆಸುತ್ತಿದ್ದ ಸತ್ಯಶೋಧನೆಯು ಅವರನ್ನು ಮಾವೋವಾದಿ ಬಂಡಾಯವು ಗರಿಗೆದರಿದ್ದ ದಕ್ಷಿಣ ಛತ್ತೀಸ್‌ಗಡಕ್ಕೆ ಕರೆದುಕೊಂಡು ಬಂದಿತು. ಆ ಪ್ರದೇಶದಲ್ಲಿ 2009ರಿಂದ ಆಪರೇಷನ್ ಗ್ರೀನ್ ಹಂಟ್ ಹೆಸರಿನಲ್ಲಿ ಭಾರತದ ಪ್ರಭುತ್ವವು ಕ್ರಾಂತಿ ವಿರೋಧಿ ಪ್ರತಿಯುದ್ಧವನ್ನು ಪ್ರಾರಂಭಿಸಿತ್ತು.

 ಇಲ್ಲಿ ನವ್ಲಾಖಾ ಅವರು 1930ರ ದಶಕದಲ್ಲಿ ಚೀನಾದಲ್ಲಿ ಎಡ್ಗರ್ ಸ್ನೋ ಅವರು ಯಾವ ಪಾತ್ರವನ್ನು ನಿರ್ವಹಿಸಿದರೋ ಅದೇ ಪಾತ್ರವನ್ನು ನಿರ್ವಹಿಸಿದರು. ಎಡ್ಗರ್ ಸ್ನೋ ಅವರು 1930ರ ಮಧ್ಯಭಾಗದಲ್ಲಿ ಚೀನಾದ ಕಮ್ಯುನಿಸ್ಟರ ಹಿಡಿತದಲ್ಲಿದ್ದ ಕೆಂಪು ಪ್ರದೇಶದೊಳಗೆ ಪ್ರವೇಶಿಸಿದರು ಮತ್ತು ಚೀನಾ ಜನತೆಯ ವಿಮೋಚನಾ ಸೇನೆಯ ಬಗ್ಗೆ, ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕರ ಬಗ್ಗೆ ಮತ್ತು ಆ ಪಕ್ಷದ ಕಾರ್ಯಕ್ರಮ ಹಾಗೂ ನೀತಿಗಳ ಬಗ್ಗೆ ತಾವು ಕಂಡದ್ದನ್ನು ಕಂಡಂತೆಯೇ ವರದಿ ಮಾಡಲಾರಂಭಿಸಿದರು.

ಅವರು ಬರೆದ ‘ರೆಡ್ ಸ್ಟಾರ್ ಓವರ್ ಚೀನಾ’ ಎಂಬ ಪುಸ್ತಕವು 1938ರಲ್ಲಿ ಪ್ರಕಟವಾಯಿತು. ನವ್ಲಾಖಾ ಅವರು 2012ರಲ್ಲಿ ಪ್ರಕಟಿಸಿದ ‘ಡೇಸ್ ಆ್ಯಂಡ್ ನೈಟ್ಸ್ ಇನ್ ಹಾರ್ಟ್‌ಲ್ಯಾಂಡ್ ಆಫ್ ರೆಬಲಿಯನ್’ (ಬಂಡಾಯದ ಗುಂಡಿಗೆಯಲ್ಲಿ ಕಳೆದ ದಿನ ರಾತ್ರಿಗಳು) ಎಂಬ ಪುಸ್ತಕವು ದಕ್ಷಿಣ ಛತ್ತೀಸ್‌ಗಡದ ಮಾವೋವಾದಿಗಳ ಗೆರಿಲ್ಲ ನೆಲೆಯಲ್ಲಿ ಅವರು ಕಂಡ ವಾಸ್ತವಾಂಶಗಳನ್ನು ವರದಿ ಮಾಡುತ್ತವೆ. ನವ್ಲಾಖಾ ಅವರು ಅಂತರ್ಯುದ್ಧದ ಬಗ್ಗೆ ತಮ್ಮ ತಿಳುವಳಿಕೆಯನ್ನು ಆಧರಿಸಿ ಭಾರತದ ಪ್ರಭುತ್ವ ಮತ್ತು ಸಿಪಿಐ (ಮಾವೋವಾದಿ) ಪಕ್ಷಗಳೆರಡೂ 1949ರ ಜಿನೇವಾ ಕನ್ವೆನ್ಷನ್ನಿನ 3ನೇ ಸನ್ನದನ್ನು ಮತ್ತು ದೇಶದೊಳಗಿನ ಸಶಸ್ತ್ರ ಸಂಘರ್ಷದ ಬಗೆಗಿನ 1977ರ ಪ್ರೋಟೋಕಾಲ್ 2ರ ಶಿಷ್ಟಾಚಾರವನ್ನೂ ಸಮಾನವಾಗಿ ಪಾಲಿಸಬೇಕೆಂದು ಅಗ್ರಹಿಸುತ್ತಾ ಬಂದಿದ್ದಾರೆ. ಹಾಗಿದ್ದಲ್ಲಿ ‘ನಗರದ ನಕ್ಸಲ್’ ಎಂದರೆ ಯಾರು? ನವ್ಲಾಖಾ ಅವರ ನಂಬಿಕೆ ಮತ್ತು ಆಚರಣೆಗಳನ್ನು ಗಮನಿಸಿದ ನಂತರ ‘ನಾನೂ ನಕ್ಸಲ್’ ಎಂದರೆ ಯಾರು ಎಂಬುದನ್ನು ಹೀಗೆ ಗ್ರಹಿಸುತ್ತೇನೆ: ಯಾರು ಭಾರತದ ಬಹುಪಾಲು ಜನತೆ ಇನ್ನೂ ಹೊಟ್ಟೆ ತುಂಬಾ ಊಟ ಮಾಡಲಾಗದ ಪರಿಸ್ಥಿಯಲ್ಲಿರುವುದನ್ನೂ, ಮೈ ಮುಚ್ಚುವಷ್ಟು ಬಟ್ಟೆಯನ್ನೂ ಧರಿಸಲಾಗದ ಸ್ಥಿತಿಯಲ್ಲಿರುವುದನ್ನೂ, ನಿಲ್ಲಲು ಸುಭದ್ರ ಸೂರಿಲ್ಲದಿರುವುದನ್ನೂ, ಅರೆಬರೆ ಅಕ್ಷರ ಕಲಿಯಲೂ ಪಾಡು ಪಡಬೇಕಿರುವುದನ್ನೂ, ಸರಿಯಾದ ವೈದ್ಯಕೀಯ ಸೌಲಭ್ಯಗಳು ದೊರಕದಂತಿರುವುದನ್ನೂ ಕಂಡರೂ ಕಾಣದಂತೆ ಸುಮ್ಮನಿರಲು ಆಗದ ವ್ಯಕ್ತಿ ಮತ್ತು ಈ ಪರಿಸ್ಥಿತಿಗೆ ಭಾರತದ ದಮನಕಾರಿ ಮತ್ತು ಶೋಷಕ ವ್ಯವಸ್ಥೆಯೇ ಕಾರಣವೆಂದು ಭಾವಿಸಿ ಈ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆಯ ಅಗತ್ಯವಿದೆಯೆಂದು ಭಾವಿಸುವ ವ್ಯಕ್ತಿ. ನಕ್ಸಲರೆಂದರೆ ಇಂಥವರು ಎಂದಾದಲ್ಲಿ ಭಾರತದ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಬದುಕುತ್ತಿರುವ ಬಹುಪಾಲು ಜನ, ನನ್ನಂಥವರೂ ಮತ್ತು ನವ್ಲಾಖಾರಂತಹವರೂ ಕೂಡಾ ನಕ್ಸಲರೇ ಎಂದಾಗುತ್ತದೆ. ಅದಕ್ಕಾಗಿ ಅವರು ಸಿಪಿಐ (ಮಾವೋವಾದಿ) ಪಕ್ಷದ ಸದಸ್ಯರೋ ಅಥವಾ ಬೆಂಬಲಿಗರೇ ಆಗಬೇಕೆಂದಿಲ್ಲ.

(ಬರ್ನಾಡ್ ಡಿಮೆಲ್ಲೋ ಅವರು ಇಪಿಡಬ್ಲ್ಯೂ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿದ್ದಾರೆ ಮತ್ತು ‘ಇಂಡಿಯಾ ಆಫ್ಟರ್ ನಕ್ಸಲ್‌ಬಾರಿ: ಅನ್‌ಫಿನಿಶ್ಡ್ ಹಿಸ್ಟರಿ’ (2018) (ನಕ್ಸಲ್‌ಬಾರಿಯ ನಂತರದ ಭಾರತ- ಮುಗಿಯದ ಇತಿಹಾಸ) ಎಂಬ ಪುಸ್ತಕದ ಲೇಖಕರೂ ಆಗಿದ್ದಾರೆ.

ಕೃಪೆ: Economic and Political Weekly

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top