---

ರಾಷ್ಟ್ರೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಮತ್ತು ಕೃಷಿ ಕ್ಷೇತ್ರ

ಕಾರ್ಪೊರೇಟ್ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿರುವ ನಮ್ಮ ರಾಜಕೀಯ ಪಕ್ಷಗಳು ದೇಶದ ಸಾರ್ವಭೌಮತ್ವವನ್ನೇ ಕುಗ್ಗಿಸಿ, ಸರಕಾರಗಳು ಕಂಪೆನಿಗಳ ಏಜೆಂಟರಾಗಿ ಕೆಲಸ ಮಾಡುವಂತಹ ಮಟ್ಟಿಗೆ ತಂದಿದ್ದು. ದೇಶದ ಕೃಷಿಕರು ಮತ್ತು ಕಾರ್ಮಿಕರನ್ನು ರಕ್ಷಣೆ ಮಾಡುವ ಶಕ್ತಿಯನ್ನು ಕಳೆದುಕೊಂಡಿವೆ. ಇಂತಹ ಪಕ್ಷಗಳ ಪ್ರಣಾಳಿಕೆಗಳು ಕೇವಲ ಘೋಷಣೆಗಳಾಗಿಯೇ ಉಳಿಯುತ್ತವೆ ಹೊರತು ಇವುಗಳಿಂದ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.


2019ರ ಲೋಕಸಭೆ ಚುನಾವಣೆಗೆ ಪ್ರಮುಖ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜನರ ಮುಂದೆ ತಮ್ಮ ಘೋಷಣಾ ಪತ್ರಗಳನ್ನು ಮಂಡಿಸಿವೆ. ಈ ಘೋಷಣಾ ಪತ್ರದಲ್ಲಿ ಕೃಷಿ ಮತ್ತು ಕೃಷಿಕರಿಗೆ ಸಂಬಂಧಿಸಿದಂತೆ ನೀಡಿರುವ ಆಶ್ವಾಸನೆಗಳನ್ನು ಗಮನಿಸಿದಾಗ ಈ ವಾಗ್ದಾನಗಳು ಇಂದಿನ ಕೃಷಿ ಸಂಕಷ್ಟಕ್ಕೆ ಪರಿಹಾರಗಳನ್ನು ನೀಡಬಲ್ಲವೇ? ಎಂಬುದನ್ನು ಅವಲೋಕಿಸಬೇಕಾಗಿದೆ!

ಕಾಂಗ್ರೆಸ್ ಪಕ್ಷ 15 ಅಂಶಗಳ ವಾಗ್ದಾನಗಳನ್ನು ನೀಡಿದ್ದು ಕೃಷಿಕರು ಮತ್ತು ಕೃಷಿ ಕಾರ್ಮಿಕರಿಗೆ ಸಂಬಂಧಿಸಿದಂತೆ ನೀಡಿರುವ ವಾಗ್ದಾನಗಳಲ್ಲಿ ಕೃಷಿಕರ ಸರ್ವತೋಮುಖ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವುದಾಗಿ ‘‘ಸಾಲ ಮನ್ನಾದಿಂದ ಸಾಲ ಮುಕ್ತಿಯ ಪಥದತ್ತ’’ ಕೊಂಡೊಯ್ಯುವ ದೂರದೃಷಿಯ ಯೋಜನೆಯನ್ನು ರೂಪಿಸುವುದಾಗಿ ಹೇಳಿಕೊಂಡಿದೆ. ಅಲ್ಲದೇ, ಪ್ರೋತ್ಸಾಹಕ ಬೆಲೆ, ಕಡಿಮೆ ಉತ್ಪಾದನೆ ವೆಚ್ಚ ಮತ್ತು ಸಾಂಸ್ಥಿಕ ಸಾಲ ಕೈಗೆಟುಕುವಂತೆ ಮಾಡುವ ಮೂಲಕ ಈ ಗುರಿ ಸಾಧನೆ ಮಾಡುವುದಾಗಿ ಅಲ್ಲದೇ ಪ್ರತಿವರ್ಷ ಪ್ರತ್ಯೇಕವಾಗಿ ರೈತ ಬಜೆಟ್ ಮಂಡನೆ ಮಾಡುವುದಾಗಿ ಮತ್ತು ಕೃಷಿ ಅಭಿವೃದ್ಧಿ ಮತ್ತು ಯೋಜನೆಗಾಗಿ ಶಾಶ್ವತ ರಾಷ್ಟ್ರೀಯ ಆಯೋಗಕ್ಕೆ ಚಾಲನೆ ನೀಡುವುದಾಗಿ ಹೇಳಿಕೊಂಡಿದೆ.

ಮೇಲ್ನೋಟಕ್ಕೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಳ್ಳೆಯ ದೃಷ್ಟಿಕೋನವನ್ನು ಕಾಂಗ್ರೆಸ್ ಪಕ್ಷ ಹೊಂದಿದೆ ಎಂದು ಕಂಡರೂ ನಿಜವಾಗಿಯೂ ಇದನ್ನು ಜಾರಿಗೆ ತರಲು ಆ ಪಕ್ಷ ನಿಜ ದೂರದೃಷ್ಟಿಯ ಆಲೋಚನೆಯನ್ನು ಹೊಂದಿದೆಯೇ ಎಂಬುದು ಚರ್ಚೆಗೆ ಯೋಗ್ಯವಾದುದ್ದಾಗಿದೆ. ಪ್ರತ್ಯೇಕವಾಗಿ ರೈತ ಬಜೆಟ್ ಮಂಡಿಸುವುದು ಆಕರ್ಷಕವಾಗಿ ಕಂಡರೂ ಅದು ನಿಜ ರೂಪದಲ್ಲಿ ಸಾಧ್ಯವಾಗುವುದಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಿದ್ದರು. ಆದರೆ ಅದನ್ನು ಅವಲೋಕಿಸಿದಾಗ ಅದರಲ್ಲಿ ವಿಶೇಷ ಮತ್ತು ಹೊಸತು ಇರಲಿಲ್ಲ ಕಾರಣ ಸಮಗ್ರ ಬಜೆಟ್‌ನಲ್ಲಿ ಕೃಷಿಗೆ ನೀಡುತ್ತಿದ್ದ ಅಂಶಗಳನ್ನೇ ಪ್ರತ್ಯೇಕ ಪುಸ್ತಕದಲ್ಲಿ ಮಂಡನೆ ಮಾಡುತ್ತಿದ್ದುದೇ ವಿಶೇಷವಾಗಿತ್ತು ಹೊರತು ಬೇರೇನೂ ಇದರಲ್ಲಿ ಎದ್ದು ಕಾಣುವಂತಹದ್ದು ಇರಲಿಲ್ಲ. ಪ್ರತ್ಯೇಕ ಬಜೆಟ್ ಮಂಡಿಸಬೇಕಾದರೆ ಅದಕ್ಕೆ ಸಂಬಂಧಿಸಿದಂತೆ ತನ್ನದೇ ಯಾದ ಸಂಪನ್ಮೂಲ ಕ್ರೋಡೀಕರಣ, ದೂರದೃಷ್ಟಿಯ ನೀಲ ನಕ್ಷೆ, ಇದನ್ನು ಜಾರಿಗೆ ತರುವಂತಹ ನೀತಿ ನಿರೂಪಣೆ ಬೇಕಾಗುತ್ತದೆ.

ಸ್ವಾತಂತ್ರ್ಯ ಬಂದ ನಂತರ ಕೃಷಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿ ನಿರೂಪಣೆಗಳೇ ರೂಪುಗೊಂಡಿಲ್ಲದೆ ಇರುವುದನ್ನು ಕಾಣಬಹುದಾಗಿದೆ. ಹೀಗಾಗಿ ಪ್ರತ್ಯೇಕ ರೈತ ಬಜೆಟ್ ಒಂದು ಆಶಾಕಾರಣವಾಗಿ ಗೋಚರಿಸಬಹುದೇ ಹೊರತು ಇದರ ನೈಜ ಜಾರಿಗೆ ಕಾಂಗ್ರೆಸ್ ಸಿದ್ಧವಿದೆಯೇ ಎಂಬುದು ಅಸ್ಪಷ್ಟವಾಗಿದೆ. ಕಾಂಗ್ರೆಸ್ ತನ್ನ ವಾಗ್ದಾನದಲ್ಲಿ ಹೇಳಿಕೊಂಡಿರುವಂತೆ ಕೃಷಿಗೆ ಕಡಿಮೆ ಉತ್ಪಾದನೆ ವೆಚ್ಚಕ್ಕೆ ಒತ್ತು ಕೊಡುವುದಾಗಿ ಮತ್ತು ಪ್ರೋತ್ಸಾಹದಾಯಕ ಬೆಲೆ ನೀಡಿರುವುದಾಗಿ ಹೇಳಿದೆ. ಈ ಅಂಶವನ್ನು ಹೇಳುವಾಗ ತಾನು ಅಧಿಕಾರದಲ್ಲಿ ಇದ್ದಾಗಲೇ ಎಂ.ಎಸ್. ಸ್ವಾಮಿನಾಥನ್ ನೇತೃತ್ವದಲ್ಲಿ ನೇಮಿಸಿದ್ದ ರಾಷ್ಟ್ರೀಯ ಕೃಷಿ ಆಯೋಗವು ನೀಡಿರುವ ಸ್ಪಷ್ಟ ನಿಲುವುಗಳನ್ನು ಮರೆಮಾಚಿದಂತೆ ಕಾಣುತ್ತದೆ. ಪ್ರೋತ್ಸಾಹದಾಯಕ ಬೆಲೆಯೆಂಬುದು ಕೇಂದ್ರ ಸರಕಾರಗಳು ಹೇಳುತ್ತಲೇ ಬೆಲೆ ನೀಡುವಲ್ಲಿ ರೈತರಿಗೆ ಮೋಸ ಮಾಡುತ್ತಾ ಬಂದಿರುವುದನ್ನೇ ನಾವು ಕಂಡಿದ್ದೇವೆ. ರೈತರ ಉತ್ಪನ್ನಗಳಿಗೆ ಕನಿಷ್ಠ ನ್ಯಾಯಯುತ ಬೆಲೆ ದೊರಕಬೇಕಾದಲ್ಲಿ ಸ್ವಾಮಿನಾಥನ್ ವರದಿಯು ಹೇಳಿರುವ ಸಿ2+50 ಶೇ. ಲಾಭದಾಯಕ ಬೆಲೆ ನಿಗದಿ ಮಾಡಿದ್ದಲ್ಲಿ ಮಾತ್ರ ಕನಿಷ್ಠ ನ್ಯಾಯಯುತ ಬೆಲೆ ದೊರಕುವಂತಾಗುತ್ತದೆ.

ಪ್ರತಿ ವರ್ಷವು ಕೃಷಿ ಒಳಸುಳಿಗಳ ಬೆಲೆ ಹೆಚ್ಚುತ್ತಲೇ ಹೋಗುತ್ತದೆ, ಕೃಷಿ ಪರಿಕರಗಳ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತಿದೆ. ಅಮೆರಿಕದ ಒತ್ತಡಕ್ಕೆ ಮಣಿದು ಕೃಷಿಗೆ ಸಬ್ಸಿಡಿಯನ್ನು ನಿರಂತರವಾಗಿ ಕಡಿತಗೊಳಿಸಲಾಗುತ್ತಿದೆ. ಇದರಿಂದ ಕೃಷಿ ವೆಚ್ಚ ತಗ್ಗಿಸುವ ಚಿಂತನೆ ಮರೀಚಿಕೆಯಾಗಿದೆ. ಈ ಬಗ್ಗೆ ಕಾಂಗ್ರೆಸ್ ಯಾವ ಆಧಾರದ ಮೇಲೆ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಸಾಲ ಮನ್ನಾದಿಂದ ಸಾಲ ಮುಕ್ತಿಯ ಪಥದತ್ತ ಕೊಂಡೊಯ್ಯುವ ಕಾಂಗ್ರೆಸ್‌ನ ಘೋಷಣೆಯಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ಕಾರಣ ತನ್ನ ಪಕ್ಷದ ಆಳ್ವಿಕೆಯಲ್ಲೇ ಹೊಸ ಆರ್ಥಿಕ ನೀತಿ, ಮುಕ್ತ ಮಾರುಕಟ್ಟೆ, ನೀತಿ ಉದಾರೀಕರಣ ನೀತಿಯನ್ನು ಜಾರಿಗೆ ತಂದು ಇಡೀ ಕೃಷಿ ವಲಯವನ್ನೇ ದಿಕ್ಕೆಡಿಸಿದ್ದು, ವಿಶ್ವ ವಾಣಿಜ್ಯ ಒಪ್ಪಂದದಿಂದ ಕೃಷಿಕ್ಷೇತ್ರವನ್ನು ಹೊರತಂದಾಗ ಮಾತ್ರ ಕೃಷಿಯನ್ನು ಸರ್ವತೋಮುಖ ಅಭಿವೃದ್ಧಿಗೆ ಕೊಂಡೊಯ್ದು ಕೃಷಿಕರಿಗೆ ನ್ಯಾಯ ಒದಗಿಸಲು ಸಾಧ್ಯವೇ ಹೊರತು ಇಲ್ಲದಿದ್ದಲ್ಲಿ ಘೋಷಣೆಗಳು ಘೋಷಣೆಗಳಾಗಿಯೇ ಉಳಿಯುತ್ತವೆ.

ಭಾರತೀಯ ಜನತಾ ಪಕ್ಷವು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀಡಿರುವ ಘೋಷಣಾ ಪತ್ರವನ್ನು ಅವಲೋಕನ ಮಾಡಿದಾಗ, ತಾನು ನೀಡಿದ್ದ ಭರವಸೆಯನ್ನು ಐದು ವರ್ಷದ ಕೊನೆಯವರೆಗೂ ಈಡೇರಿಸದೇ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ ಅದೇ ಘೋಷಣೆಗಳನ್ನು ಹೊಸರೂಪದಲ್ಲಿ ಪುನರಾವರ್ತಿಸಿ ರೈತರನ್ನು ಮತ್ತೊಮ್ಮೆ ನಯವಾಗಿ ವಂಚಿಸಲು ಹೊರಟಿರುವುದು ಕಂಡು ಬರುತ್ತದೆ. ಭಾರತೀಯ ಜನತಾ ಪಕ್ಷವು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪುನರುಚ್ಚಿಸಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ‘ಮನ್‌ಕಿಬಾತ್’ ಭಾಷಣದಲ್ಲಿ ಹತ್ತಾರು ಸಲ ಇದನ್ನು ಹೇಳಿದ್ದಾರೆ, ಅರುಣ್ ಜೇಟ್ಲಿಯವರು ಕಳೆದ ವರ್ಷ ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ 2022ರ ಒಳಗೆ ರೈತರ ಆದಾಯವನ್ನು ದ್ವಿಗುಣ ಗೊಳಿಸುವುದಾಗಿ ಘೋಷಿಸಿದ್ದಾರೆ.

ವಾಸ್ತವವಾಗಿ ಈ ಸಂಬಂಧ ಕೃಷಿ ಮಂತ್ರಾಲಯದಲ್ಲಿ ಯಾವುದೇ ತಯಾರಿಯೂ ಇಲ್ಲ. ಈ ಬಗ್ಗೆ ಯಾವುದೇ ನೀಲನಕ್ಷೆಯೂ ಇಲ್ಲ! ವಾಸ್ತವವಾಗಿ ಬಿಜೆಪಿ ಸರಕಾರ ತನ್ನ ಆಡಳಿತಾವಧಿಯಲ್ಲಿ ಕೃಷಿ ವೆಚ್ಚವನ್ನು ದ್ವಿಗುಣಗೊಳಿಸಿದ್ದು ಬೆಲೆ ನಿಗದಿಯಲ್ಲಿ ಮೋಸ ಮಾಡಿ ರೈತರ ಇರುವ ಆದಾಯವನ್ನೇ ಕುಗ್ಗಿಸಿದೆ. ಇದೊಂದು ಸುಳ್ಳು ಘೋಷಣೆಯಾಗಿರುತ್ತದೆ. 14 ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ದೊಡ್ಡ ಪ್ರಚಾರವನ್ನೇ ಪಡೆದ ಮೋದಿ, ಮಾರುಕಟ್ಟೆಯಲ್ಲಿ ಅದಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದರೂ ಅದನ್ನು ನೋಡುತ್ತಲೇ ಸುಮ್ಮನಿದ್ದರು. ಬೆಲೆ ನಿಗದಿಯನ್ನು ಶಾಸನಾತ್ಮಕವಾಗಿ ಜಾರಿಗೆ ತಂದಲ್ಲಿ ಮಾತ್ರ ರೈತರನ್ನು ರಕ್ಷಣೆ ಮಾಡಲು ಸಾಧ್ಯವೇ ಹೊರತು ಬೆಂಬಲ ಬೆಲೆ ಘೋಷಣೆ ಮಾಡುವುದರಿಂದ ಸಾಧ್ಯವಿಲ್ಲ. ತಾನೇ ಘೋಷಣೆ ಮಾಡಿದ ಬೆಂಬಲ ಬೆಲೆಯಲ್ಲಿ ಉತ್ಪನ್ನಗಳನ್ನು ಕೊಳ್ಳಲು ಸರಕಾರ ಬಂಡವಾಳವನ್ನೇ ತೊಡಗಿಸಿಲ್ಲ. ಹಾಗೆಯೇ, ರೈತರ ಕಲ್ಯಾಣಕ್ಕಾಗಿ ನೀತಿಗಳನ್ನು ರೂಪಿಸುವುದಾಗಿ ಹೇಳಿದೆ.

60 ವರ್ಷ ತುಂಬಿದ ರೈತರಿಗೆ ಸಾಮಾಜಿಕ ಭದ್ರತೆ ಒದಗಿಸಲು ಮಾಸಾಶನ ಕೊಡುವುದಾಗಿ ತನ್ನ ವಾಗ್ದಾನದಲ್ಲಿ ಹೇಳಿಕೊಂಡಿದೆ. ಇದೂ ಕೂಡ ಪುನರಾವರ್ತನೆಯ ಘೋಷಣೆಯಾಗಿದ್ದು ಕಳೆದ ವರ್ಷ ಮಾಸಿಕ ಭತ್ತೆ ಕೊಡುವುದಾಗಿ ಹೇಳಿದ್ದರೂ ಒಬ್ಬ ರೈತನಿಗೂ ನೀಡಿಲ್ಲ. ಇದರ ಬದಲು ಇನ್ಶೂರೆನ್ಸ್ ಕಂಪೆನಿಗಳು ಮಾಡುವುದನ್ನೇ ಸರಕಾರಿ ಯೋಜನೆ ಎಂದು ರೂಪಿಸಿ ಇಂತಿಷ್ಟು ಪ್ರಿಮಿಯಂ ಕಟ್ಟಿದ್ದಲ್ಲಿ 60 ವರ್ಷ ಆದ ಮೇಲೆ ಇಂತಿಷ್ಟು ಪೆನ್ಷನ್ ದೊರೆಯುತ್ತದೆ ಎಂದು ಬ್ಯಾಂಕುಗಳ ಮೂಲಕ ವಿಮೆಯನ್ನು ಕಟ್ಟಿಸಿಕೊಂಡಿವೆ. ನೀರಾವರಿ ಯೋಜನೆಗಳನ್ನು ವಿಸ್ತ್ತರಿಸಿ ಅದನ್ನು ತ್ವರಿತವಾಗಿ ಮುಗಿಸುವುದಾಗಿ ಬಿಜೆಪಿಯೂ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಕಳೆದ ಸಲ ಕೂಡ ನೀರಾವರಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ. ಒದಗಿಸುವುದಾಗಿ ಹೇಳಿ ಕಳೆದ ಸರಕಾರ ಅರ್ಧಕ್ಕೆ ಬಿಟ್ಟಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗಾಗಿ ಪೂರೈಸುವುದಾಗಿ ಹೇಳಿತ್ತು. ಈ ಸಂಬಂಧ 149 ಯೋಜನೆಗಳನ್ನು ಕೈಗೆತ್ತಿಕೊಂಡು ಇದುವರೆಗೂ ಅದರ ಅರ್ಧದಷ್ಟು ಮುಗಿಸಿಲ್ಲ, ಐದು ವರ್ಷದ ಆಡಳಿತದಲ್ಲಿ ಹೇಳಿದಂತೆ ಹಣಕಾಸನ್ನು ಒದಗಿಸಿಲ್ಲ.

ವಾಪಸ್ ಮಾಡುವ ಗ್ಯಾರಂಟಿಯ ಮೇಲೆ ರೂ. ಒಂದು ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಹೇಳಿದೆ. ಸಾಲ ನೀಡುವುದು ಕೃಷಿ ಚಟುವಟಿಕೆಗೆಗೆ ಹೊರತು ರೈತನ ವೈಯಕ್ತಿಕ ಅಭಿವೃದ್ಧಿಗಲ್ಲ, ಸರಕಾರ ನೀಡುವ ಸಾಲ ವಗೈರೆ, ಸಬ್ಸಿಡಿಗಳು ರೈತರಿಗೆ ಮಾಡುತ್ತಿರುವ ಉಪಕಾರವಲ್ಲ. ಅದು ಅರ್ಧ ಬೆಲೆಗೆ ಬೆಳೆದುಕೊಟ್ಟು ದೇಶದ ಆಹಾರ ಭದ್ರತೆಯನ್ನು ಕಾಪಾಡುತ್ತಿರುವ ರೈತನಿಗೆ ತೀರಿಸಬೇಕಾದ ಬಾಕಿಯಷ್ಟೆ. ಇದನ್ನು ರೈತರಿಗೆ ಮಾಡುತ್ತಿರುವ ಉಪಕಾರವೆಂದು ಬಿಂಬಿಸುವುದು ಒಪ್ಪತಕ್ಕದ್ದಲ್ಲ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಬಂಡವಾಳವನ್ನು ಹೂಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಆದರೆ ತನ್ನ ಆಡಳಿತಾವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಾರ್ವಜನಿಕ ಬಂಡವಾಳವನ್ನೇ ಹೇಳಿದಂತೆ ಹೂಡಿಲ್ಲ ಎಂಬುದನ್ನು ಸರಕಾರದ ಅಂಕಿ ಅಂಶಗಳೇ ಹೇಳುತ್ತದೆ.

ಬಿಜೆಪಿ ತನ್ನ ನೀತಿ ಮತ್ತು ಯೋಜನೆ ರೂಪಣೆಯಲ್ಲಿ ರೈತ ಪರವಾಗಿದೆ ಎಂದು ತನ್ನ ಐದು ವರ್ಷದ ಆಡಳಿತದಲ್ಲಿ ನರೇಂದ್ರ ಮೋದಿಯವರು ಸಾಬೀತು ಪಡಿಸಿಲ್ಲ. ಕೇವಲ ಭಾಷಣಗಳಲ್ಲಿ ಮಾತ್ರ ರೈತರ ಹೊಟ್ಟೆ ತುಂಬಿಸುವ ಮಾತನಾಡಿದರೇ ಹೊರತು ಅದು ಕ್ರಿಯಾತ್ಮಕವಾಗಿಲ್ಲ. ಒಟ್ಟಾರೆ ಬಿಜೆಪಿ ನೀಡಿರುವ ವಾಗ್ದಾನ ಪತ್ರವು ಕೃಷಿ ಮತ್ತು ಕೃಷಿಕರ ಪರವಾಗಿ ಇರುವುದಿಲ್ಲ. ಕಳೆದ ಐದು ವರ್ಷಗಳ ಆಡಳಿತವನ್ನು ಅವಲೋಕಿಸಿದಾಗ ರೈತರಿಗೆ ದೊಡ್ಡ ಪವಾಡವನ್ನೇ ಸೃಷ್ಟಿಸಿದ್ದೇವೆ ಎಂದು ಹೇಳಿಕೊಂಡು ಜಾರಿಗೆ ತಂದ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ ರೈತರಿಗಿಂತ ವಿಮಾ ಕಂಪೆನಿಗಳಿಗೆ ಕೋಟ್ಯಂತರ ಲಾಭ ಮಾಡಿಕೊಟ್ಟಿದೆ. ಕೃಷಿ ತಜ್ಞ ಪಿ. ಸಾಯಿನಾಥ್ ಹೇಳಿರುವಂತೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಗರಣವು ರಫೇಲ್ ಹಗರಣಕ್ಕಿಂತಲೂ ದೊಡ್ಡದಾಗಿದೆ. ಮೋದಿಯವರು ತಮ್ಮ ಆಡಳಿತಾವಧಿಯಲ್ಲಿ ಕೃಷಿ ಉತ್ಪನ್ನ ರಫ್ತಿಗಿಂತ ಆಮದು ಮಾಡಿಕೊಂಡಿರುವುದೇ ಹೆಚ್ಚು. ಇದರಿಂದ ಸ್ಥಳೀಯ ಮೆಣಸು, ಕಾಫಿ, ರೇಷ್ಮೆ, ಕಬ್ಬು ಬೆಳೆಗಾರರು ಮತ್ತು ಎಣ್ಣೆಕಾಳು ಬೆಳೆಯುವ ರೈತರಿಗೆ ತೀವ್ರ ಹೊಡೆತ ಬಿದ್ದಿದೆ. ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಂಡು ಹಾಲು ಉತ್ಪಾದಕರನ್ನು ನಾಶ ಮಾಡಲು ಹೊರಟಿದ್ದು ಸ್ಥಳೀಯ ಡೈರಿಗಳನ್ನೇ ಮುಚ್ಚಿಸುವ ಸ್ಥಿತಿಗೆ ತಂದಿಟ್ಟಿದೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ರೂಪಿಸಿರುವ ಬಹು ಹೆಚ್ಚಿನ ಭಾಗದ ಲಾಭ ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲವಾಗಿದೆ ಹೊರತು ರೈತರು, ಕಾರ್ಮಿಕರು ಮತ್ತು ದೇಶೀಯ ಸಣ್ಣ ಬಂಡವಾಳಗಾರರಿಗೆ ಮೋಸವಾಗಿದೆ.

ನಿರಂತರವಾಗಿ ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಅದನ್ನು ತಡೆಗಟ್ಟಲು ತಲೆ ಕೆಡಿಸಿಕೊಳ್ಳದ ಮೋದಿ ಆಡಳಿತವು ದೊಡ್ಡ-ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಸಾಲ ಮನ್ನಾ ಮಾಡುವುದರ ಜೊತೆಗೆ ಕೋಟ್ಯಂತರ ರೂಪಾಯಿಗಳ ವಿವಿಧ ರೀತಿಯ ರಿಯಾಯಿತಿಗಳನ್ನು ಒದಗಿಸಿಕೊಟ್ಟಿದೆ. ರೈತರ ಭೂಮಿಯನ್ನು ಸುಲಭವಾಗಿ ಬಂಡವಾಳಶಾಹಿಗಳಿಗೆ ಕೈಗೆಟಕುವಂತಹ ಯೋಜನೆಗಳನ್ನು ರೂಪಿಸಿದೆ. ಸ್ವಾತಂತ್ರ್ಯ ಬಂದ ನಂತರ ಯಾವುದೇ ಪಕ್ಷದ ಸರಕಾರಗಳು ಕೃಷಿ ಮತ್ತು ಕೃಷಿಕರ ರಕ್ಷಣೆಗೆ ಯೋಜನೆಗಳನ್ನೇ ರೂಪಿಸಿಲ್ಲ. ಎಲ್ಲಾ ಪಕ್ಷಗಳು ರೈತ ವಿರೋಧಿ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದಿವೆಯೇ ಹೊರತು ರೈತ ಪರ ತೆಗೆದುಕೊಂಡಂತಹ ನಿಲುವುಗಳು ಇಲ್ಲವೇ ಇಲ್ಲ. ವೋಟಿಗೋಸ್ಕರ ಕೆಲವು ಯೋಜನೆಗಳನ್ನು ರೂಪಿಸಿರುವುದು ಮಾತ್ರ ಕಂಡು ಬರುತ್ತದೆ. ವಿಶ್ವ ವಾಣಿಜ್ಯ ಒಪ್ಪಂದ ಜಾರಿಗೆ ಬಂದ ನಂತರ ಹೊಸ ಆರ್ಥಿಕ ನೀತಿ, ಉದಾರೀಕರಣ ನೀತಿ, ಮುಕ್ತ ಮಾರುಕಟ್ಟೆ ನೀತಿಗಳ ಕಾರಣ ರೂಪುಗೊಂಡಿರುವ ಎಲ್ಲಾ ಕಾನೂನುಗಳು ಕೃಷಿಕರ ವಿರುದ್ಧವಾಗಿದ್ದು ರೈತ ಬೀಜ ಸ್ವಾತಂತ್ರ್ಯವನ್ನು ಕಿತ್ತುಕೊಂಡಿವೆ.

ರೈತರ ಭೂಮಿ ಬಂಡವಾಳಶಾಹಿಗಳ ವಶವಾಗುತ್ತಿವೆ, ಜಲ ಖಾಸಗೀಕರಣವಾಗುತ್ತಿದೆ. ಇತ್ತೀಚೆಗೆ ಜಾರಿಗೆ ತರಲು ಒಡಂಬಡಿಕೆ ಆಗಿರುವ ಆರ್.ಸಿ.ಇ.ಎಫ್.ಯು ಕೂಡ ವಿದೇಶಿ ಕೃಷಿ ಉತ್ಪನ್ನಗಳ ಆಮದಿಗೆ ಹೆಚ್ಚು ಶುಲ್ಕ ರಿಯಾಯಿತಿಯನ್ನು ಒದಗಿಸುತ್ತದೆ. ಇದರಿಂದ ಮುಂದೆ ರೈತರು ವ್ಯವಸಾಯವನ್ನೇ ಸಂಪೂರ್ಣವಾಗಿ ತ್ಯಜಿಸುವಂತಹ ವಾತಾವರಣವೇ ನಿರ್ಮಾಣವಾಗಬಹುದು. ಕಾರ್ಪೊರೇಟ್ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿರುವ ನಮ್ಮ ರಾಜಕೀಯ ಪಕ್ಷಗಳು ದೇಶದ ಸಾರ್ವಭೌಮತ್ವವನ್ನೇ ಕುಗ್ಗಿಸಿ, ಸರಕಾರಗಳು ಕಂಪೆನಿಗಳ ಏಜೆಂಟರಾಗಿ ಕೆಲಸ ಮಾಡುವಂತಹ ಮಟ್ಟಿಗೆ ತಂದಿದ್ದು. ದೇಶದ ಕೃಷಿಕರು ಮತ್ತು ಕಾರ್ಮಿಕರನ್ನು ರಕ್ಷಣೆ ಮಾಡುವ ಶಕ್ತಿಯನ್ನು ಕಳೆದುಕೊಂಡಿವೆ. ಇಂತಹ ಪಕ್ಷಗಳ ಪ್ರಣಾಳಿಕೆಗಳು ಕೇವಲ ಘೋಷಣೆಗಳಾಗಿಯೇ ಉಳಿಯುತ್ತವೆ ಹೊರತು ಇವುಗಳಿಂದ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.


ಇ-ಮೇಲ್: badagalapuranagendra200@gmail.com  

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top