ವೆನೆಝುವೆಲದ ಜನಸಾಮಾನ್ಯರ ಬದ್ಧತೆಯ ಒಗ್ಗಟ್ಟು! ಫಲ ನೀಡದ ಅಮೆರಿಕ ಮಿತ್ರ ಕೂಟದ ಮಸಲತ್ತು!!! | Vartha Bharati- ವಾರ್ತಾ ಭಾರತಿ

---

ವೆನೆಝುವೆಲದ ಜನಸಾಮಾನ್ಯರ ಬದ್ಧತೆಯ ಒಗ್ಗಟ್ಟು! ಫಲ ನೀಡದ ಅಮೆರಿಕ ಮಿತ್ರ ಕೂಟದ ಮಸಲತ್ತು!!!

ಅಮೆರಿಕ ಮತ್ತದರ ಮಿತ್ರಕೂಟದ ಆರ್ಥಿಕ ನಿರ್ಬಂಧಗಳನ್ನು ವೆನೆಝುವೆಲದ ಜನತೆ ಸವಾಲಾಗಿ ಸ್ವೀಕರಿಸಿ ಸ್ವಾವಲಂಬಿತ ಮಾದರಿಯ ಬದುಕು ಆರಿಸಿಕೊಂಡಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ತಮ್ಮ ರಾಷ್ಟ್ರದ ಮೇಲೆ ಬಾಹ್ಯ ಶಕ್ತಿಗಳು ನಡೆಸುತ್ತಿರುವ ದಾಳಿಗಳನ್ನು ಅಲ್ಲಿನ ಬಹುಸಂಖ್ಯಾತ ಜನಸಾಮಾನ್ಯರು ಸಾಕಷ್ಟು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ತಮ್ಮದೇ ಕ್ರಿಯಾ ಶೀಲ ಪರ್ಯಾಯಗಳನ್ನು ಅನ್ವೇಷಿಸುತ್ತಾ ಅಳವಡಿಸುತ್ತಾ ಸಾಗುತ್ತಿದ್ದಾರೆ. ಪಾಶ್ಚಾತ್ಯ ಮಾಧ್ಯಮಗಳು ಕೂಗುತ್ತಿರುವಂತೆ ಯಾರೂ ಹಸಿವಿಗೆ ಈಡಾಗಿ ಸತ್ತಿಲ್ಲ. ವೆನೆಝುವೆಲದಲ್ಲಿ ಹ್ಯೂಗೋ ಚವೇಝ್ ಕಾಲದಿಂದಲೂ ಭಿಕ್ಷಾಟನೆ ಇರಲಿಲ್ಲ. ಈಗಲೂ ಇಲ್ಲ. ಅಲ್ಲಿ ಈಗಲೂ ಉಚಿತ ಶಿಕ್ಷಣ, ಆರೋಗ್ಯಸೇವೆ ಮೊದಲಾದ ಸವಲತ್ತುಗಳು ಜನಸಾಮಾನ್ಯರಿಗಿವೆ. ದೇಶದ ಜನರು ಈಗಲೂ ಸಾಕಷ್ಟು ಸುರಕ್ಷಿತ ಭಾವದಲ್ಲೇ ಇದ್ದಾರೆ.


ವೆನೆಝುವೆಲದ ಮೇಲೆ ಅಮೆರಿಕ ಮತ್ತದರ ಮಿತ್ರಕೂಟ ನಡೆಸುತ್ತಿರುವ ಪ್ರತ್ಯಕ್ಷ ಹಾಗೂ ಪರೋಕ್ಷ ಅತಿಕ್ರಮಣ ಹಾಗೂ ಆಕ್ರಮಣಗಳು ಈಗಲೂ ಮುಂದುವರಿದಿವೆ. ಆರ್ಥಿಕ ನಿರ್ಬಂಧಗಳನ್ನು ವಿಸ್ತರಿಸಲಾಗುತ್ತಿದೆ. ವೆನೆಝುವೆಲದ ಜೊತೆಗೆ ಯಾವುದೇ ಆರ್ಥಿಕ ವ್ಯವಹಾರ ಮಾಡದಂತೆ ಭಾರತವನ್ನು ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಅಮೆರಿಕ ಮಿತ್ರ ಕೂಟ ಒತ್ತಡ ಹೇರಿದೆ. ಭಾರತ ಸರಕಾರ ಅಮೆರಿಕದ ಒತ್ತಡಕ್ಕೆ ಶರಣಾಗಿ ವೆನೆಝುವೆಲದಿಂದ ಆಮದು ಮಾಡಿಕೊಳ್ಳುತ್ತಿದ್ದ ಪೆಟ್ರೋಲಿಯಂ ತೈಲವನ್ನು ನಿಲ್ಲಿಸಿದೆ. ವೆನೆಝುವೆಲದ ಕೆಲವು ವಿರೋಧ ಪಕ್ಷಗಳನ್ನು ಬುಟ್ಟಿಗೆ ಹಾಕಿಕೊಂಡು ಆಂತರಿಕ ಕ್ಷೋಭೆಯನ್ನು ಸೃಷ್ಟಿಸಿ, ಚುನಾಯಿತ ಮಡುರೊ ಸರಕಾರವನ್ನು ಅಕ್ರಮವೆಂದು ಘೋಷಿಸಿ, ಅಪಪ್ರಚಾರ ನಡೆಸುತ್ತಾ ಉರುಳಿಸುವ ಕುತಂತ್ರಗಳನ್ನು ಶುರು ಮಾಡಿ ಹಲವು ತಿಂಗಳುಗಳೇ ಕಳೆದಿವೆ. ಇದರ ಭಾಗವಾಗಿ ದೊಂಬಿ, ಲೂಟಿ, ಸರಕಾರಿ ಆಸ್ತಿಪಾಸ್ತಿ ನಾಶ, ಸರಕಾರವನ್ನು ಸಮರ್ಥಿಸಿ ದೇಶದ ಪರವಾಗಿ ನಿಂತಿರುವ ಜನರ ಮೇಲೆ ದಾಳಿ, ಅವರ ಮನೆಗಳ ಮೇಲೆ ದಾಳಿಗಳನ್ನು ನಡೆಸಲು ಅಮೆರಿಕ ಬೆಂಬಲಿತ ವಿರೋಧ ಪಕ್ಷಗಳ ಗುಂಪುಗಳು ಪ್ರಯತ್ನಿಸುತ್ತಲೇ ಬರುತ್ತಿದೆ. ಹಲವೆಡೆಗಳಲ್ಲಿ ಆಹಾರ ಸಾಮಗ್ರಿಗಳು, ಕೃಷಿ ಬೆಳೆಗಳನ್ನು ನಾಶ ಮಾಡಲಾಗಿದೆ. ಜನರ ಕಲಕ್ಟೀವ್‌ಗಳು, ಕಮ್ಯೂನುಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆ. ಮಧ್ಯೆ ಒಂದು ಕ್ಷಿಪ್ರ ದಂಗೆಗೆ ಕೂಡ ಪ್ರಯತ್ನಿಸಲಾಗಿತ್ತು. ಆದರೆ ಅಮೆರಿಕ ಮಿತ್ರ ಕೂಟದ ಇಂತಹ ಬುಡಮೇಲು ಕೃತ್ಯಗಳು ಇದುವರೆಗೆ ನಿರೀಕ್ಷಿಸಿದ ಫಲ ನೀಡದೇ ಹೋಗಿವೆ. ವೆನೆಝುವೆಲದ ಆಹಾರ ಸಾಮಗ್ರಿಗಳ ಸರಬರಾಜಿನಲ್ಲಿ ಕೊರತೆ ಕಾಣುತ್ತಿಲ್ಲ.

ಅಮೆರಿಕ ಮತ್ತದರ ಮಿತ್ರ ಕೂಟದ ಆರ್ಥಿಕ ನಿರ್ಬಂಧಗಳನ್ನು ವೆನೆಝುವೆಲದ ಜನತೆ ಸವಾಲಾಗಿ ಸ್ವೀಕರಿಸಿ ಸ್ವಾವಲಂಬಿತ ಮಾದರಿಯ ಬದುಕು ಆರಿಸಿಕೊಂಡಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ತಮ್ಮ ರಾಷ್ಟ್ರದ ಮೇಲೆ ಬಾಹ್ಯ ಶಕ್ತಿಗಳು ನಡೆಸುತ್ತಿರುವ ದಾಳಿಗಳನ್ನು ಅಲ್ಲಿನ ಬಹುಸಂಖ್ಯಾತ ಜನಸಾಮಾನ್ಯರು ಸಾಕಷ್ಟು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ತಮ್ಮದೇ ಕ್ರಿಯಾಶೀಲ ಪರ್ಯಾಯಗಳನ್ನು ಅನ್ವೇಷಿಸುತ್ತಾ ಅಳವಡಿಸುತ್ತಾ ಸಾಗುತ್ತಿದ್ದಾರೆ. ಪಾಶ್ಚಾತ್ಯ ಮಾಧ್ಯಮಗಳು ಕೂಗುತ್ತಿರುವಂತೆ ಯಾರೂ ಹಸಿವಿಗೆ ಈಡಾಗಿ ಸತ್ತಿಲ್ಲ. ವೆನೆಝುವೆಲದಲ್ಲಿ ಹ್ಯೂಗೋ ಚವೇಝ್ ಕಾಲದಿಂದಲೂ ಭಿಕ್ಷಾಟನೆ ಇರಲಿಲ್ಲ. ಈಗಲೂ ಇಲ್ಲ. ಅಲ್ಲಿ ಈಗಲೂ ಉಚಿತ ಶಿಕ್ಷಣ, ಆರೋಗ್ಯಸೇವೆ ಮೊದಲಾದ ಸವಲತ್ತುಗಳು ಜನಸಾಮಾನ್ಯರಿಗಿವೆ. ದೇಶದ ಜನರು ಈಗಲೂ ಸಾಕಷ್ಟು ಸುರಕ್ಷಿತ ಭಾವದಲ್ಲೇ ಇದ್ದಾರೆ. ಈ ಅಂಶಗಳು ಅಲ್ಲಿಗೆ ತೆರಳಿ ನೇರವಾಗಿ ನೋಡಿ ಅಧ್ಯಯನ ಮಾಡಿಬಂದವರು ಮಾಡಿರುವ ವರದಿಗಳು ಹೇಳುತ್ತಿವೆ. ಅದಕ್ಕೇ ವೆನೆಝುವೆಲ ರಾಷ್ಟ್ರದ್ದೇ ಆದ ಹಲವು ಕಾರಣಗಳಿವೆ.

ಜಗತ್ತಿನ ಅತೀ ದೊಡ್ಡ ತೈಲ ಸಂಪತ್ತಿರುವ ರಾಷ್ಟ್ರವಾದ ವೆನೆಝುವೆಲ ಹ್ಯೂಗೋ ಚವೇಝ್ ಅಧ್ಯಕ್ಷರಾಗೋದಕ್ಕೂ ಮುಂಚೆ ಅತಿ ಹಿಂದುಳಿದ ರಾಷ್ಟ್ರಗಳಲ್ಲಿ ಒಂದಾಗಿತ್ತು. ಚವೇಝ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ವೆನೆಝುವೆಲದ ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಿಸಿದರು. ಅಮೆರಿಕ ಬ್ರಿಟನ್, ಫ್ರಾನ್ಸ್‌ಗೆ ಸೇರಿದ ಭಾರೀ ಕಾರ್ಪೊರೇಟ್ ಕಂಪೆನಿಗಳ ಹಿಡಿತದಲ್ಲಿದ್ದ ತೈಲೋದ್ಯಮವನ್ನು ವಶಪಡಿಸಿಕೊಂಡು ರಾಷ್ಟ್ರೀಕರಿಸಿ ಆ ಸಂಪತ್ತನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಿದರು. ಆ ಕ್ರಮದಿಂದಾಗಿ ವೆನಿಜುಯೇಲಾದ ಜನರ ಜೀವನ ಮಟ್ಟದಲ್ಲಿ ಭಾರೀ ಗಮನಾರ್ಹ ಸುಧಾರಣೆಗಳು ಬಂದವು. ಹಸಿವು ಬಡತನಗಳ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡು ಬಂತು. ಅದರಿಂದಾಗಿ ವೆನೆಝುವೆಲದ ಸಂಪತ್ತನ್ನು ಅದುವರೆಗೂ ದೋಚುತ್ತಿದ್ದ ಅಮೆರಿಕ ಮತ್ತದರ ಮಿತ್ರ ಕೂಟಗಳ ಕಣ್ಣುಗಳು ಕೆಂಪಾದವು. ಅಂದಿನಿಂದ ಅಮೆರಿಕ ಮತ್ತದರ ಕೂಟಗಳು ಚವೇಝ್‌ರ ಆಡಳಿತವನ್ನು ಕೊನೆಗೊಳಿಸಲು ಆರ್ಥಿಕ ನಿರ್ಬಂಧಗಳು ಸೇರಿದಂತೆ ಎಲ್ಲಾ ರೀತಿಯ ತೀವ್ರ ತರದ ಪ್ರಯತ್ನಗಳನ್ನು ನಡೆಸತೊಡಗಿದವು. ಅದಕ್ಕೆ ಭಾರೀ ಕಾರ್ಪೊರೇಟ್ ಕೂಟದ ಪೂರ್ಣ ಬೆಂಬಲವೂ ಇತ್ತೆನ್ನಿ.

ಈ ಕೂಟಗಳ ಅಂತಹ ಪ್ರಯತ್ನಗಳು ಯಶಸ್ಸು ಗಳಿಸದೆ ಹೋದಾಗ ಕೊನೆಗೆ ಅಧ್ಯಕ್ಷ ಚವೇಝ್‌ರನ್ನೇ ಅಪಹರಿಸಿ ಕ್ಷಿಪ್ರ ಸೇನಾ ದಂಗೆಯ ಮೂಲಕ ಸರಕಾರವನ್ನೇ ಬೀಳಿಸಿ ಆಡಳಿತವನ್ನು ತಮ್ಮ ಕೈಗೊಂಬೆಗಳ ಮೂಲಕ ನಡೆಸಲು ಒಂದು ಶ್ರಮ ನಡೆಸಿದರು. ಅಮೆರಿಕ ಮತ್ತದರ ಮಿತ್ರ ಕೂಟದ ಪರವಾಗಿರುವ ಅಂತರ್‌ರಾಷ್ಟ್ರೀಯ ಮಾಧ್ಯಮಗಳನ್ನೂ ಕೂಡ ಇದಕ್ಕಾಗಿಯೇ ಭಾರೀ ಮಟ್ಟದಲ್ಲಿ ತೊಡಗಿಸಲಾಗಿತ್ತು. ಇವುಗಳು ವೆನೆಝುವೆಲ ಸರಕಾರದ ಬಗ್ಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಸಿಹಸಿ ಸುಳ್ಳುಗಳನ್ನು ಬಿತ್ತತೊಡಗಿದವು. ಈಗಲೂ ಈ ಕೆಲಸ ಮುಂದುವರಿದಿದೆ. ಆದರೆ ವೆನೆಝುವೆಲದ ಜನರು ರಾಷ್ಟ್ರಾದ್ಯಂತ ದೊಡ್ಡ ಮಟ್ಟದಲ್ಲಿ ಅಮೆರಿಕ ಮತ್ತದರ ಕೂಟದ ಕ್ಷಿಪ್ರ ದಂಗೆಯ ಕುತಂತ್ರದ ವಿರುದ್ಧ ನಿಂತರು. ಹ್ಯೂಗೋ ಚವೇಝ್‌ರ ಅಪಹರಣವನ್ನು ವಿರೋಧಿಸಿ ದೃಢವಾಗಿ ಹೋರಾಟವನ್ನು ನಡೆಸಿದರು. ಕ್ಯೂಬಾ, ಬೊಲಿವಿಯಾದಂತಹ ರಾಷ್ಟ್ರಗಳು ವೆನೆಝುವೆಲದ ಜನರ ಹೋರಾಟಕ್ಕೆ ಬೆಂಬಲ ಸೂಚಿಸಿದವು. ಅಮೆರಿಕ ಮತ್ತದರ ಕೂಟದ ಅಕ್ರಮಗಳನ್ನು ಖಂಡಿಸಿದವು. ಚೀನಾ ಹಾಗೂ ರಶ್ಯಾದಂತಹ ರಾಷ್ಟ್ರಗಳು ಕೂಡ ಅಮೆರಿಕ ಮಿತ್ರಕೂಟದ ವೆನೆಝುವೆಲದ ಆಂತರಿಕ ವ್ಯವಹಾರಗಳಲ್ಲಿ ಅಕ್ರಮವಾಗಿ ಪ್ರವೇಶಿಸುವ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿದ್ದವು. ಕೊನೆಗೆ ಅಮೆರಿಕ ಮತ್ತದರ ಮಿತ್ರ ಕೂಟ ಬೇರೆ ದಾರಿಯಿಲ್ಲದೇ ಎರಡೇ ದಿನಗಳೊಳಗೆ ಚಾವೇಜರನ್ನು ಮುಕ್ತಗೊಳಿಸಬೇಕಾಯಿತು.

ವೆನೆಝುವೆಲದ ಪ್ರಜ್ಞಾವಂತ ಜನಸಮೂಹದ ಒಗ್ಗಟ್ಟಿನ ಮುಂದೆ ಅಮೆರಿಕ ಮಿತ್ರ ಕೂಟದ ಕುತಂತ್ರಗಳು ನಡೆಯದೇ ಹೋದವು. ಆದರೂ ಅಮೆರಿಕ ಮಿತ್ರ ಕೂಟದ ಪ್ರಯತ್ನಗಳು ಮುಂದುವರಿಯಿತು. ಹ್ಯೂಗೋ ಚವೇಝ್ ವೆನೆಝುವೆಲದ ಅಧ್ಯಕ್ಷರಾಗಿ ನಾಲ್ಕು ಬಾರಿ ಸತತವಾಗಿ ಆಯ್ಕೆಯಾದವರು. ನಾಲ್ಕನೇ ಬಾರಿ ಅವರು ಅಧ್ಯಕ್ಷರಾಗಿದ್ದಾಗ ಕ್ಯಾನ್ಸರ್‌ಗೆ ತುತ್ತಾಗಿ ಕೊನೆಯುಸಿರೆಳೆದರು. ತಮ್ಮ ಅಧಿಕಾರಾವಧಿಯಲ್ಲಿ ವೆನೆಝುವೆಲದ ಜನಸಮೂಹವನ್ನು ರಾಷ್ಟ್ರ ಕಟ್ಟುವ ಪ್ರಕ್ರಿಯೆಯಲ್ಲಿ ಹಲವು ರೀತಿಗಳಲ್ಲಿ ತೊಡಗಿಸಿಕೊಂಡರು. ವಿಕೇಂದ್ರೀಕೃತ ಹಾಗೂ ಕೇಂದ್ರಿತವಾಗಿ ಜನಸಮೂಹಗಳನ್ನು ಹತ್ತು ಹಲವು ಸಂಘಟಿತ ರೀತಿಗಳಲ್ಲಿ ತೊಡಗಿಸಿದರು. ಹಳ್ಳಿಹಳ್ಳಿಗಳಲ್ಲಿ ಜನರ ಕಮ್ಯೂನ್ ಗಳನ್ನು ನಿರ್ಮಿಸಿದರು. ಅಗತ್ಯ ಬಂದಾಗ ರಾಷ್ಟ್ರದ ರಕ್ಷಣೆಯಲ್ಲಿ ಜನ ಸಮೂಹ ಭಾಗವಹಿಸುವಂತೆ ಮಾಡಲು ಜನರ ಸುಸಜ್ಜಿತ ದಳಗಳನ್ನು ರಚಿಸಿದರು. ಇದನ್ನು ಆಂಗ್ಲ ಭಾಷೆಯಲ್ಲಿ ಪೀಪಲ್ಸ್ ಮಿಲಿಷಿಯಾ ಎಂದು ಕರೆಯಲಾಗುತ್ತದೆ. ಕೃಷಿ ಸಹಕಾರಿಗಳು, ಕೈಗಾರಿಕಾ ಸಹಕಾರಿಗಳನ್ನು, ಇನ್ನಿತರ ಸಹಕಾರಿಗಳನ್ನು ರಚಿಸಿದರು.

ಅಂತಹ ಸಂಘಟನಾ ರೂಪಗಳಿಗೆ ತಕ್ಕಂತೆ ತರಬೇತಿ ಹಾಗೂ ಶಿಕ್ಷಣ ವ್ಯವಸ್ಥೆ ಮಾಡಿದರು. ಅವರ ಪರಿಭಾಷೆಯಲ್ಲಿ ‘ಬೊಲಿವಿರಿಯನ್ ರೆವಲ್ಯೂಷನ್’(ಬೊಲಿವಿಯಾ ರೀತಿಯ ಕ್ರಾಂತಿ)ನ ಭಾಗವೆಂದು ಇವುಗಳನ್ನೆಲ್ಲಾ ಕರೆದುಕೊಂಡಿದ್ದಾರೆ. ಲ್ಯಾಟಿನ್ ಅಮೆರಿಕ ರಾಷ್ಟ್ರಗಳಾದ ಬೊಲಿವಿಯಾ, ಈಕ್ವೆಡಾರ್, ನಿಕಾರಾಗುವ ಮೊದಲಾದ ರಾಷ್ಟ್ರಗಳಲ್ಲಿ ಈ ರೀತಿಯ ಸಮಾಜವಾದಿ ಕ್ರಾಂತಿಕಾರಿ ಪ್ರಭಾವವಿದೆ. ತಮ್ಮನ್ನು ಸಾಮ್ರಾಜ್ಯಶಾಹಿ ವಿರೋಧಿಗಳೆಂದು ಕರೆದುಕೊಳ್ಳುತ್ತಾರೆ. ಅಮೆರಿಕ ಮತ್ತದರ ಕೂಟದ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಹ್ಯೂಗೋ ಚವೇಝ್ ಪ್ರತಿಪಾದಿಸಿದ ಸೈದ್ಧಾಂತಿಕ ಸಂಘಟನಾತ್ಮಕ ವಿಚಾರಗಳೆಲ್ಲಾ ಒಟ್ಟುಗೂಡಿ ‘ಚಾವಿಸ್ಮಾ’ (chavisma) ಎನಿಸಿಕೊಂಡಿದೆ. ವೆನೆಝುವೆಲದ ಕಮ್ಯೂನುಗಳು ಇನ್ನಿತರ ಸಂಘಟನೆಗಳು ಈ ಚಾವಿಸ್ಮಾ ವಿಚಾರಗಳಡಿ ಕಾರ್ಯ ನಿರ್ವಹಿಸುತ್ತಿವೆ. ವಾಸ್ತವದಲ್ಲಿ ಕಮ್ಯೂನುಗಳು, ಜನ ಮಿಲಿಷಿಯಾ, ಇತ್ಯಾದಿ ಜನ ಸಂಘಟನಾ ರೂಪಗಳು ಕಮ್ಯೂನಿಸ್ಟ್ ಸಮಾಜವಾದಿಗಳ ಕ್ರಾಂತಿಕಾರಿ ಸಂಘಟನಾ ಪರಿಕಲ್ಪನೆಗಳು.

ವೆನೆಝುವೆಲದಲ್ಲಿ 47,000ಕ್ಕೂ ಹೆಚ್ಚು ಕಮ್ಯೂನಲ್ ಕೌನ್ಸಿಲ್‌ಗಳಿವೆ. ಅದಕ್ಕೆಂದೇ ಪ್ರತ್ಯೇಕ ಸಚಿವಾಲಯವೇ ಇದೆ. ಕಮ್ಯೂನ್‌ಗಳು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸಂಘಟನೆಯಾಗಿ ಸ್ಥಳೀಯ ಸ್ವಯಮಾಡಳಿತವಾಗಿ ಎಲ್ಲಾ ಆಗುಹೋಗುಗಳನ್ನು ಸರಕಾರದ ನೇರ ನೆರವಿಲ್ಲದೇ ಕೂಡ ನೋಡಿಕೊಳ್ಳುತ್ತವೆ. ಹತ್ತು ಹಲವು ಉತ್ಪಾದನೆಗಳನ್ನು ಮಾಡುತ್ತವೆ. ಅದರದೇ ಆದಾಯಗಳಿಂದ ಕಮ್ಯೂನ್‌ಗಳು ನಡೆಯುವಂತೆ ನೋಡಿಕೊಳ್ಳಲಾಗುತ್ತದೆ. ತಮ್ಮದೇ ಬ್ಯಾಂಕ್‌ಗಳನ್ನು ನಡೆಸುತ್ತವೆ. ಜನತೆಯ ನಿಜವಾದ ಹಾಗೂ ಮುಖ್ಯ ಮೂಲಭೂತ ಪ್ರಜಾತಾಂತ್ರಿಕ ಘಟಕವಾಗಿ ಕಮ್ಯೂನ್‌ಗಳು ಕಾರ್ಯ ನಿರ್ವಹಿಸುತ್ತವೆ. ಆಯಾ ಮಟ್ಟದಲ್ಲಿ ರಾಜಕೀಯ ಸಾಮಾಜಿಕ ಆಗುಹೋಗುಗಳನ್ನು ಮುಕ್ತವಾಗಿ ಚರ್ಚಿಸಿಕೊಂಡು ಅಲ್ಪಸಂಖ್ಯಾತರು ಬಹುಸಂಖ್ಯಾತರ ನಿರ್ಧಾರಗಳಿಗೆ ಬದ್ಧರಾಗಿರಬೇಕೆಂಬ ಪ್ರಜಾತಾಂತ್ರಿಕ ಗ್ರಹಿಕೆಯೊಂದಿಗೆ ಕಾರ್ಯ ನಿರ್ವಹಿಸುತ್ತವೆ. ಜನಸಮೂಹದ ಮಧ್ಯೆ ಸಾಮೂಹಿಕ ಹಾಗೂ ಪರಸ್ಪರ ಸಹಕಾರಗಳಿಂದ ಕೂಡಿ ಬಾಳುವುದನ್ನು ಕಲಿಸುವುದರ ಜೊತೆಗೆ ಆಯಾ ಪ್ರದೇಶ ವ್ಯಾಪ್ತಿಯ ಸಮಸ್ಯೆಗಳನ್ನು ಚರ್ಚಿಸಿ ಸರಿಪಡಿಸಿಕೊಳ್ಳುವ ಕಾರ್ಯವನ್ನೂ ಮಾಡುತ್ತವೆ.

ಅಂದರೆ ಸರಕಾರದ ನೇರ ಪಾತ್ರವಿಲ್ಲದೆ ಕೂಡ ಇವುಗಳು ಸ್ವಯಂಪೂರ್ಣ ಹಳ್ಳಿ ಇಲ್ಲವೇ ಪ್ರಾದೇಶಿಕ ಆಡಳಿತ ಘಟಕವಾಗಿ ಕೂಡ ಕೆಲಸ ಮಾಡುತ್ತವೆ. ಇವುಗಳು ಸಾಕಷ್ಟು ಉತ್ತಮ ರಾಜಕೀಯ ತಿಳುವಳಿಕೆಯನ್ನು ಹೊಂದಿರುವಂತಹವುಗಳಾಗಿವೆ. ಸರಕಾರ ತಪ್ಪುಮಾಡುವುದು ಕಂಡು ಬಂದರೆ ಸರಕಾರದ ವಿರುದ್ಧ ವಾಗ್ದಂಡನೆ ವಿಧಿಸಿ ಕೆಳಕ್ಕಿಳಿಸುವ ನಿಯಮ ಚವೇಝ್ ಕಾಲದಲ್ಲಿ ಹೊಸದಾಗಿ ರಚಿಸಿದ ವೆನೆಝುವೆಲದ ಸಂವಿಧಾನದಲ್ಲಿ ಅಡಕಗೊಳಿಸಲಾಗಿದೆ. ಇಂತಹ ಪ್ರಕ್ರಿಯೆಗಳಲ್ಲಿ ಕಮ್ಯೂನ್‌ಗಳಿಗೆ ಮಹತ್ವದ ನಿರ್ಣಾಯಕ ಪಾತ್ರವಿದೆ. ಇದೇ ಸಂವಿಧಾನವನ್ನು ಅಮೆರಿಕ ಮಿತ್ರಕೂಟ ವಿರೋಧಿಸುತ್ತಿದೆ. ತನ್ನ ಕೈಗೊಂಬೆ ಸರಕಾರವೊಂದನ್ನು ವೆನೆಝುವೆಲದಲ್ಲಿ ಸ್ಥಾಪಿಸಿ ಅದರ ಮೂಲಕ ತಮ್ಮ ಹಿತಾಸಕ್ತಿಗಳಿಗೆ ಅಡ್ಡಿಯಾಗಿರುವ ಸಂವಿಧಾನವನ್ನು ಬದಲಾಯಿಸಬೇಕೆಂಬ ಧಾವಂತದಲ್ಲಿದೆ. ಚವೇಝ್ ಕಾಲದಲ್ಲಿ ರೂಪಿತವಾದ ವೆನೆಝುವೆಲ ಸಂವಿಧಾನ ಪ್ರಮುಖ ಕೈಗಾರಿಕೆ ಹಾಗೂ ನೈಸರ್ಗಿಕ ಸಂಪತ್ತನ್ನು ರಾಷ್ಟ್ರದ ಸಾಮೂಹಿಕ ಸೊತ್ತು ಎಂದು ಘೋಷಿಸಿದೆ.

ಇದು ಪಾಶ್ಚಾತ್ಯ ಜಾಗತಿಕ ಬಂಡವಾಳಶಾಹಿಗಳಿಗೆ ನುಂಗಲಾಗದ ತುತ್ತಾಗಿದೆ. ಪ್ರಸ್ತುತ ಮದುರೋ ಸರಕಾರದ ವಿರುದ್ಧ ಅಮೆರಿಕ ಮತ್ತದರ ಮಿತ್ರ ಕೂಟದ ಆರ್ಥಿಕ ನಿರ್ಬಂಧಗಳು, ಬುಡಮೇಲು ಕೃತ್ಯಗಳು, ಕುತಂತ್ರಗಳ ಮಧ್ಯೆ ರಾಷ್ಟ್ರ ಹಾಗೂ ಜನಸಾಮಾನ್ಯರಿಗೆ ಅಪಾಯ ಬಾರದಂತೆ ನೋಡಿಕೊಳ್ಳುತ್ತಿರುವುದು ಚವೇಝ್ ಸಂಘಟಿಸಿರುವ ಇಂತಹ ಸ್ವಯಂಪೂರ್ಣ ಹಾಗೂ ಸ್ವಾವಲಂಬಿ ಜನ ಸಂಘಟನಾ ರೂಪಗಳೇ ಆಗಿವೆ. ಹಾಗಾಗಿಯೇ ಅಮೆರಿಕ ಹಾಗೂ ವಿರೋಧ ಪಕ್ಷಗಳು ಮಡುರೊ ಸರಕಾರದ ವಿರುದ್ಧ ಬಂಡೇಳುವಂತೆ ಮಾಡಲು ನೇರ ಹಾಗೂ ಪರೋಕ್ಷ ಹತ್ತು ಹಲವು ಕುತಂತ್ರಗಳನ್ನು ಹೂಡುತ್ತಿದ್ದರೂ ಸೇನೆ ವಿಚಲಿತವಾಗದೇ ರಾಷ್ಟ್ರ ಹಾಗೂ ಜನರ ಪರವಾಗಿ ನಿಲ್ಲಲು ಸಾಧ್ಯವಾಗಿದೆ ಎನ್ನಬಹುದು.

ಅಮೆರಿಕ ಮತ್ತದರ ಮಿತ್ರಕೂಟ ಕೇಂದ್ರಿತ ಪಾಶ್ಚಾತ್ಯ ಮಾಧ್ಯಮಗಳು ಈ ಸಂಘಟನಾ ರೂಪಗಳನ್ನು ಲೂಟಿಕೋರ ಗುಂಪುಗಳು, ಶಸ್ತ್ರ ಸಜ್ಜಿತ ಅರಾಜಕ ಪುಂಡು ಪೋಕರಿಗಳು ಎಂದೆಲ್ಲಾ ಬಿಂಬಿಸಿ ತಮ್ಮ ಅಪಪ್ರಚಾರ ದಾಳಿಗಳನ್ನು ನಡೆಸುತ್ತಿದೆ. ರಾಷ್ಟ್ರಾದ್ಯಂತ ವ್ಯಾಪಕ ಹಿಂಸಾಚಾರಗಳನ್ನು ಈ ಅರಾಜಕ!? ಗುಂಪುಗಳು ನಡೆಸುತ್ತಿವೆ ಎಂದೆಲ್ಲಾ ಹಸಿ ಸುಳ್ಳುಗಳನ್ನು ಹರಡುತ್ತಿವೆ. ಕಮ್ಯೂನ್ ಗಳನ್ನು, ಅವುಗಳ ಕಚೇರಿಗಳನ್ನು ಗುರಿಯಾಗಿಟ್ಟು ಅಮೆರಿಕ ಕೈಗೊಂಬೆ ವಿರೋಧ ಪಕ್ಷಗಳು ದಾಳಿ ನಡೆಸುತ್ತಿವೆ. ವಾಸ್ತವದಲ್ಲಿ ಈ ರೀತಿಯ ಅರಾಜಕತೆಗಳನ್ನು ಸೃಷ್ಟಿಸ ಹೊರಟಿರುವುದು ಅಮೆರಿಕ ಬೆಂಬಲಿತ ವಿರೋಧ ಪಕ್ಷಗಳ ನಾಯಕ.
 
 ಚವೇಝ್ ಸಂಘಟಿಸಿದ ಈ ರೀತಿಯ ಜನರ ಪ್ರಜಾ ತಾಂತ್ರಿಕ ಸಂಘಟನಾ ರೂಪಗಳು ಇಂದಿಗೂ ಬಹಳ ಸಮರ್ಥವಾಗಿ ರಾಷ್ಟ್ರದ ರಕ್ಷಣೆಯ ಕೆಲಸದಲ್ಲಿ ದೃಢವಾಗಿ ನಿಂತಿವೆ. ಅಮೆರಿಕ ಮಿತ್ರಕೂಟದ ಯೋಜನೆಗಳು ಇದುವರೆಗೂ ಅವರೆಣಿಸಿದ ಫಲ ನೀಡದೆ ಇರುವುದು ಇದೇ ಕಾರಣದಿಂದಲೇ. ಪ್ರಸ್ತುತ ವೆನೆಜುಯೇಲದಲ್ಲಿ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ಅಲ್ಲಿನ ಕಮ್ಯೂನುಗಳೇ ನೋಡಿಕೊಳ್ಳುತ್ತಿವೆ. ಕಮ್ಯೂನುಗಳಡಿಯಲ್ಲಿನ ಕೃಷಿ ಇನ್ನಿತರ ಸಹಕಾರಿಗಳು ಅಗತ್ಯದಷ್ಟು ಆಹಾರ ಹಾಗೂ ಮತ್ತಿತರ ವಸ್ತುಗಳನ್ನು ಉತ್ಪಾದಿಸುತ್ತಿವೆ. ಉತ್ಪಾದಿಸಿದ ಅಂತಹ ವಸ್ತುಗಳನ್ನು ಪ್ರತಿಯೊಬ್ಬ ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸಗಳನ್ನು ಕಮ್ಯೂನುಗಳು ಮಾಡುತ್ತಿವೆ. ಮಾರುಕಟ್ಟೆಗಳು, ರಸ್ತೆ ಸಂಚಾರಗಳು ಮಾಮೂಲಿನಂತೆ ಇವೆ. ವಿದ್ಯುತ್ ಉತ್ಪಾದನೆ ಹಾಗೂ ವಿತರಣಾ ವ್ಯವಸ್ಥೆಯ ಮೇಲೆ ಈ ಮಧ್ಯೆ ದಾಳಿ ನಡೆದಾಗಿನಿಂದಲೂ ಅದನ್ನು ರಕ್ಷಿಸಿ ಕಾಯುವ ಕೆಲಸಗಳನ್ನೂ ಕೂಡ ಸೇನೆಯ ಜೊತೆಗೆ ನಿಂತು ಜನ ಮಿಲಿಷಿಯಾ ಮಾಡುತ್ತಿದೆ. ವೆನೆಝುವೆಲದಲ್ಲಿ ತರಬೇತಿ ಹೊಂದಿದ ಜನ ಮಿಲಿಷಿಯಾ ಸಂಖ್ಯೆ ಮಹಿಳೆಯರೂ ಸೇರಿದಂತೆ ಸುಮಾರು 15 ಲಕ್ಷಕ್ಕೂ ಹೆಚ್ಚಿದೆ. ಇದು ರಾಷ್ಟ್ರದ ಬಲವಾದ ರಕ್ಷಾ ಕವಚವಾಗಿ ಕಾರ್ಯ ನಿರ್ವಹಿಸುತ್ತಿದೆ.

ಜೊತೆಗೆ ರಾಷ್ಟ್ರದ ಪರವಾಗಿ, ರಾಷ್ಟ್ರದ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರದ ಪರವಾಗಿ ಅಮೆರಿಕ ಮತ್ತದರ ಮಿತ್ರಕೂಟ ಹಾಗೂ ವಿರೋಧ ಪಕ್ಷಗಳ ವಿರುದ್ಧ ಭಾರೀ ಪ್ರದರ್ಶನಗಳನ್ನು ಸಂಘಟಿಸುವಲ್ಲಿ ಈ ಕಮ್ಯೂನುಗಳದು ಸಕ್ರಿಯ ಪಾತ್ರವಾಗಿದೆ. ಅದರಿಂದಲೇ ಈ ಸಂಘಟನಾ ರೂಪಗಳನ್ನು ದೆವ್ವಗಳಂತೆ ಚಿತ್ರಿಸಿ ಮುಗಿಸಲು ಪಾಶ್ಚಾತ್ಯ ಕಾರ್ಪೋರೇಟ್ ಮಾಧ್ಯಮ ಸಂಸ್ಥೆಗಳು ಭಾರೀ ಕಸರತ್ತುಗಳನ್ನು ಮಾಡುತ್ತಿವೆ. ಅವುಗಳ ವರದಿಗಳೇ ಎಲ್ಲೆಡೆಯೂ ಹರಡುವಂತೆ ನೋಡಿಕೊಳ್ಳಲಾಗುತ್ತಿದೆ. ಭಾರತದ ಮಾಧ್ಯಮಗಳಲ್ಲಿ ಬಹುತೇಕವು ಇದೇ ಕೆಲಸಗಳನ್ನೇ ಮಾಡುತ್ತಿವೆ. ಈ ಮಾಧ್ಯಮಗಳು ಅಮೆರಿಕ ಮಿತ್ರ ಕೂಟದ ಅಪಪ್ರಚಾರ ಯುದ್ಧದ ಸಾಧನಗಳಾಗಿಯೇ ಕೆಲಸ ಮಾಡುತ್ತಿವೆಯೇ ವಿನಃ ಮಾಧ್ಯಮ ನೀತಿಗಳಿಗೆ ಬದ್ಧವಾಗಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿರುವ ವಿಚಾರ.

ಈಗ ಮದುರೋ ಸರಕಾರ ವಿರೋಧ ಪಕ್ಷಗಳ ಜೊತೆಗೆ ಮಾತುಕತೆಗೆ ಮುಂದಾಗಿದೆ. ಇದು ವೆನೆಝುವೆಲ ಜನಸಾಮಾನ್ಯರ ಮಧ್ಯೆ ವಿಮರ್ಶೆಗೆ ಒಳಗಾಗಿದೆ. ಚವೇಝ್‌ರಂತೆ ಮಧುರೋ ದೃಢತೆಯುಳ್ಳ ನಾಯಕರಲ್ಲವೆಂಬುದು ಹಲವರ ಅಭಿಪ್ರಾಯವಾಗಿದೆ. ಆದರೆ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಮದುರೋ ಸರಕಾರವನ್ನು ನಾವು ಬೆಂಬಲಿಸುತ್ತೇವೆ ಎನ್ನುವಲ್ಲಿ ಅವರು ದೃಢ ನಿಲುವು ಪ್ರದರ್ಶಿಸುತ್ತಾರೆ. ವೆನೆಝುವೆಲದ ಜನಸಾಮಾನ್ಯರು ತಮ್ಮ ಹಾಗೂ ರಾಷ್ಟ್ರದ ರಕ್ಷಣೆ ತಮ್ಮದೇ ಮುಖ್ಯ ಕರ್ತವ್ಯ ಎನ್ನುವ ಪ್ರಜ್ಞಾವಂತ ಜನಸಮೂಹವಾಗಿದೆ ಎನ್ನುವುದಕ್ಕೆ ಇವುಗಳು ಸಾಕ್ಷಿಗಳಾಗಿವೆ. ನೈಜ ಜನಪರ ಪ್ರಜಾತಾಂತ್ರಿಕ ಪರ್ಯಾಯವೊಂದು ಅರಳಲು ಅಗತ್ಯವಾದ ಹಲವು ಪಾಠಗಳನ್ನು ವೆನೆಝುವೆಲದ ಉದಾಹರಣೆಯಿಂದಲೂ ಕಲಿಯಬಹುದು.


ಮಿಂಚಂಚೆ: nandakumarnandana67gmail.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top