ಅಮೆರಿಕ ನೇತೃತ್ವದ ಜಾಗತಿಕ ಭಯೋದ್ಯಮಗಳೂ.. ಕ್ಷಮಾಪಣೆ ಎಂಬ ಕುತಂತ್ರಗಳೂ... | Vartha Bharati- ವಾರ್ತಾ ಭಾರತಿ

ಅಮೆರಿಕ ನೇತೃತ್ವದ ಜಾಗತಿಕ ಭಯೋದ್ಯಮಗಳೂ.. ಕ್ಷಮಾಪಣೆ ಎಂಬ ಕುತಂತ್ರಗಳೂ...

ಜಗತ್ತಿನ ಅತೀ ದೊಡ್ಡ ಭಯೋತ್ಪಾದಕ ಉಸಾಮಾ ಬಿನ್ ಲಾದೆನ್ ಎಂದು ಅಮೆರಿಕ ಬಹಳ ವರ್ಷಗಳಿಂದ ಬಿಂಬಿಸಿಕೊಂಡು ಬಂದಿತ್ತು. ಅಲ್ ಖಾಯಿದಾ ಎಂಬ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕನೆಂದು ಹಾಗೂ ಅದರ ಮುಖ್ಯಸ್ಥನೆಂದು ಆತನ ಮೇಲೆ ಹತ್ತಾರು ಭಯೋತ್ಪಾದಕ ಕೃತ್ಯಗಳ ಆರೋಪಗಳನ್ನು ಅಮೆರಿಕ ಹೊರಿಸಿತ್ತು. ಉಸಾಮಾ ಬಿನ್ ಲಾದೆನ್ ಬಗ್ಗೆ ಬಹುತೇಕ ಜನರು ಅವೇ ಅಭಿಪ್ರಾಯಗಳನ್ನೇ ರೂಪಿಸಿಕೊಂಡಿದ್ದರು. ಜಾಗತಿಕ ಮಾಧ್ಯಮಗಳೂ ಉಸಾಮಾ ಬಿನ್ ಲಾದೆನ್ ಬಗ್ಗೆ ಅಮೆರಿಕ ನಿರ್ದೇಶಿತ ಭಾರೀ ಮಟ್ಟದ ರೋಚಕ ಹಾಗೂ ಭೀಕರವೆನಿಸುವ ವರದಿಗಳನ್ನು ಬಿತ್ತುತ್ತಾ ಬಂದಿದ್ದವು. ಈಗ ಅಮೆರಿಕದ ಸಿಐಎಯೇ ಕ್ಷಮಾಪಣೆ ಕೇಳಿರುವಾಗ ಈ ಮಾಧ್ಯಮಗಳು ಆ ಬಗ್ಗೆ ಬಾಯಿ ಮುಚ್ಚಿಕೊಂಡಿವೆ ಎಂದರೆ ಏನನ್ನಬೇಕು!?.


ಇದೇ 2019ರ ಜನವರಿಯಲ್ಲಿ ಅಮೆರಿಕದ ಜಾಗತಿಕ ಗೂಢಚಾರ ಹಾಗೂ ಬುಡಮೇಲು ಕೃತ್ಯಗಳನ್ನು ನಡೆಸುವ ಸಂಸ್ಥೆ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ)ಯ ನಿರ್ದೇಶಕಿ ಗಿನಾ ಹಾಸ್ಪಲ್ ಸಿಐಎ ಪರವಾಗಿ ಉಸಾಮಾ ಬಿನ್ ಲಾದೆನ್ ಕುಟುಂಬಕ್ಕೆ ಕ್ಷಮಾಪಣೆಯನ್ನು ಬಹಿರಂಗವಾಗಿ ಕೇಳಿದ್ದು ಅಷ್ಟಾಗಿ ಸುದ್ದಿಯಾಗಲೇ ಇಲ್ಲ. 9/11ರ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರಿನ ಮೇಲಿನ ವಿಮಾನ ದಾಳಿಯಲ್ಲಿ ಉಸಾಮಾ ಬಿನ್ ಲಾದೆನ್ ಪಾತ್ರ ಸಾಬೀತಾಗದೇ ಇರುವುದು ಕ್ಷಮಾಪಣೆಗೆ ಕಾರಣವೆಂಬಂತೆ ಬಿಂಬಿಸಲಾಗಿದೆ.

 ಹಾಸ್ಪಲ್ ತಮ್ಮ ಕ್ಷಮಾಪಣಾ ಹೇಳಿಕೆಯಲ್ಲಿ ‘‘ಉಸಾಮಾ ಬಿನ್ ಲಾದೆನ್‌ರ ಪಾತ್ರ ಆ ದಾಳಿಯಲ್ಲಿ ಇರಲಿಲ್ಲ ಎಂಬುದಕ್ಕೆ ಸಾಕ್ಷಿಗಳು ಇವೆ. ನಾವು ನಮ್ಮ ಬಹಳ ಪ್ರಾಮಾಣಿಕವಾದ ಮತ್ತು ಹೃದಯಾಂತರಾಳದ ಕ್ಷಮಾಪಣೆಯನ್ನು ಬಿನ್ ಲಾದೆನ್ ಮಾತ್ರವಲ್ಲದೆ ಅವರ ದುಃಖತಪ್ತ ಕುಟುಂಬಕ್ಕೆ, ಅವರೊಂದಿಗೆ ನಿಂತಿದ್ದ ಹಲವು ಸ್ನೇಹಿತರಿಗೂ ಕೇಳುತ್ತಿದ್ದೇವೆ.’’ ಮುಂದುವರಿದು ‘‘ನಾವು ಪೂರ್ತಿ ತಿಳುವಳಿಕೆ ಹೊಂದದೆ, ತುಂಬಾ ಆತುರದ ತೀರ್ಮಾನಕ್ಕೆ ಬಂದು ತಪ್ಪುಮಾಡಿದೆವು. ಹಾಗೆ ಮಾಡುವ ಮೂಲಕ ಪ್ರೀತಿಸುವ ಗಂಡ, ತಂದೆ, ವ್ಯವಹಾರಸ್ಥ ಮತ್ತು ಉನ್ನತ ಮಟ್ಟದ ಪರಿಣಾಮಕಾರಿ ಸಾಮೂಹಿಕ ಸಂಘಟಕನೊಬ್ಬನ ಜೀವ ತೆಗೆದೆವು. ನಮಗೆ ಗೊತ್ತು, ಉಸಾಮಾರನ್ನು ಮರಳಿ ತರಲು ನಮಗೇನೂ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ನಾವು ಅವರ ನೋವು ಹಾಗೂ ಯಾತನೆಗಳನ್ನು ಪರಿಗಣಿಸಿ ನೀಡುವ ಪರಿಹಾರವಾದ 18 ದಶಲಕ್ಷ ಡಾಲರ್‌ಗಳನ್ನು ಲಾದೆನ್ ಕುಟುಂಬ ಪಡೆಯುತ್ತದೆ ಎಂದು ಆಶಿಸುತ್ತಿದ್ದೇವೆ. ನೀವು ಇದುವರೆಗೂ ಪಟ್ಟ ಪಾಡನ್ನು ಯಾರಿಗೂ ತಾಳಿಕೊಳ್ಳಲು ಸಾಧ್ಯವಿಲ್ಲ’’ ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು. ಸಿಐಎ ಈ ಮಟ್ಟದಲ್ಲಿ, ಅದೂ ಕ್ಷಮಾಪಣೆಯನ್ನು ಬಹಿರಂಗವಾಗಿ ಕೇಳಿದ ಉದಾಹರಣೆ ಇಲ್ಲವೆಂದೇ ಹೇಳಬಹುದೇನೋ.

ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮಾರ ನಿರ್ದೇಶನದಂತೆ ಸಿಐಎ ಪಾಕಿಸ್ತಾನದ ಅಬೋಟಾಬಾದಿನಲ್ಲಿ ಇದ್ದ ಉಸಾಮಾಬಿನ್ ಲಾದೆನ್ ಮತ್ತವರ ಕುಟುಂಬದ ಕೆಲವರನ್ನು ಮೇ 2-2011ರಂದು ಗುಂಡಿಟ್ಟು ಕೊಂದು ಹಾಕಿತ್ತು. ಅಮೆರಿಕದ ಇಂತಹ ನಡೆಗಳು ನಂತರ ಕೇಳಿರುವ ಈ ಮಟ್ಟದ ಕ್ಷಮಾಪಣೆಗಳು ಹಲವಾರು ಪ್ರಶ್ನೆಗಳನ್ನು ಮಾತ್ರ ಹುಟ್ಟುಹಾಕುವಂತಹುದೇ ವಿನಃ ಉತ್ತರಗಳನ್ನಂತೂ ಅಲ್ಲ. ಜಗತ್ತಿನ ಅತೀ ದೊಡ್ಡ ಭಯೋತ್ಪಾದಕ ಉಸಾಮಾ ಬಿನ್ ಲಾದೆನ್ ಎಂದು ಅಮೆರಿಕ ಬಹಳ ವರ್ಷಗಳಿಂದ ಬಿಂಬಿಸಿಕೊಂಡು ಬಂದಿತ್ತು. ಅಲ್ ಖಾಯಿದಾ ಎಂಬ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕನೆಂದು ಹಾಗೂ ಅದರ ಮುಖ್ಯಸ್ಥನೆಂದು ಆತನ ಮೇಲೆ ಹತ್ತಾರು ಭಯೋತ್ಪಾದಕ ಕೃತ್ಯಗಳ ಆರೋಪಗಳನ್ನು ಅಮೆರಿಕ ಹೊರಿಸಿತ್ತು. ಉಸಾಮಾ ಬಿನ್ ಲಾದೆನ್ ಬಗ್ಗೆ ಬಹುತೇಕ ಜನರು ಅವೇ ಅಭಿಪ್ರಾಯಗಳನ್ನೇ ರೂಪಿಸಿಕೊಂಡಿದ್ದರು. ಜಾಗತಿಕ ಮಾಧ್ಯಮಗಳೂ ಉಸಾಮಾ ಬಿನ್ ಲಾದೆನ್ ಬಗ್ಗೆ ಅಮೆರಿಕ ನಿರ್ದೇಶಿತ ಭಾರೀ ಮಟ್ಟದ ರೋಚಕ ಹಾಗೂ ಭೀಕರವೆನಿಸುವ ವರದಿಗಳನ್ನು ಬಿತ್ತುತ್ತಾ ಬಂದಿದ್ದವು. ಈಗ ಅಮೆರಿಕದ ಸಿಐಎಯೇ ಕ್ಷಮಾಪಣೆ ಕೇಳಿರುವಾಗ ಈ ಮಾಧ್ಯಮಗಳು ಆ ಬಗ್ಗೆ ಬಾಯಿ ಮುಚ್ಚಿಕೊಂಡಿವೆ ಎಂದರೆ ಏನನ್ನಬೇಕು!?.

ಅಮೆರಿಕ ತನ್ನ ಅಧೀನದ ನೆಲದಲ್ಲಿ ಬಿನ್ ಲಾದೆನ್ ಅನ್ನು ಕೊಂದುಹಾಕಿದ್ದಲ್ಲ. ಮತ್ತೊಂದು ರಾಷ್ಟ್ರದ ಅಧೀನದಲ್ಲಿದ್ದ ಪ್ರದೇಶದೊಳಗೆ ಆ ರಾಷ್ಟ್ರದ ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಅಕ್ರಮವಾಗಿ ನುಗ್ಗಿ ಸೇನಾ ಕಾರ್ಯಾಚರಣೆ ನಡೆಸಿ ಕೊಂದು ಹಾಕಿದ್ದು. ಮುಖ್ಯವಾಹಿನಿ ಎಂದೆಲ್ಲಾ ಹೇಳಿಕೊಳ್ಳುವ ಮಾಧ್ಯಮಗಳಲ್ಲಿ ಗಮನಾರ್ಹ ಚರ್ಚೆಯ ವಿಚಾರವಾಗಿ ಕಾಣಿಸಿಕೊಳ್ಳದಿರುವುದು ಈ ಮಾಧ್ಯಮಗಳು ಎಷ್ಟು ಮಟ್ಟದಲ್ಲಿ ಅಪ್ರಜಾತಾಂತ್ರಿಕವಾಗಿವೆ, ರಾಷ್ಟ್ರಗಳ ಸ್ವಾತಂತ್ರ್ಯ, ಸ್ವಾಯತ್ತತೆಗಳ ವಿರುದ್ಧವಾಗಿ ನಿಂತಿವೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ 9/11/2001ರ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ವಿಮಾನಗಳಿಂದ ದಾಳಿ ನಡೆದ ಬಳಿಕ ಅದರ ನೆಪದಲ್ಲಿ ಜಾಗತಿಕವಾಗಿ ಭಯೋತ್ಪಾದನೆಯ ವಿರುದ್ಧ ಯುದ್ಧವನ್ನು ಅಮೆರಿಕದ ಜಾರ್ಜ್ ಬುಷ್ ಸರಕಾರ ಸಾರಿತ್ತು. ತನ್ನೊಂದಿಗೆ ಜಗತ್ತಿನ ಹಲವಾರು ರಾಷ್ಟ್ರಗಳ ಸರಕಾರಗಳನ್ನು ಸಂಘಟಿಸಿಕೊಂಡಿತ್ತು. ಆಶ್ಚರ್ಯವೆಂಬಂತೆ ನಂತರ 13/12/2001ರಂದು ಭಾರತದ ಸಂಸತ್ತಿನ ಮೇಲೆ ದಾಳಿಯಾಗಿ ಅದರಲ್ಲಿ ಪಾಲ್ಗೊಂಡ ಎಲ್ಲರನ್ನು ಕೊಂದುಹಾಕಲಾಯಿತು. ಆನಂತರ ಆ ದಾಳಿಯ ಪಾತ್ರಧಾರಿಗಳಲ್ಲಿ ಒಬ್ಬರೆಂದು ಆರೋಪಿಸಿ ಅಫ್ಝಲ್ ಗುರುವನ್ನು 2001ರಲ್ಲಿ ನೇಣಿಗೇರಿಸಲಾಯಿತು. ಅಫ್ಝಲ್ ಗುರುವನ್ನು ನೇಣಿಗೇರಿಸಿದ್ದರ ಬಗ್ಗೆ ಪ್ರತಿಭಟನೆಗಳು ನಡೆದವು. ಪ್ರತಿಭಟನೆಯಲ್ಲಿ ಹಲವಾರು ನ್ಯಾಯವಾದಿಗಳು, ವಿಚಾರವಂತರು, ಬುದ್ಧಿಜೀವಿಗಳು ಸೇರಿದ್ದರು. ಆದರೆ ಅಫ್ಝಲ್ ಗುರು ಸಂಸತ್ ದಾಳಿಯಲ್ಲಿ ಪಾತ್ರ ವಹಿಸಿದ್ದರು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷ್ಯಾಧಾರಗಳು ಇರಲಿಲ್ಲ. ಮರಣ ದಂಡನೆಯಂತಹ ಶಿಕ್ಷೆಯನ್ನು ಪ್ರತ್ಯಕ್ಷ ಸಾಕ್ಷ್ಯಾಧಾರಗಳಿಲ್ಲದ ಪ್ರಕರಣದಲ್ಲಿ ನೀಡಬಹುದೇ ಎನ್ನುವ ಚರ್ಚೆಯನ್ನು ಇದು ಹುಟ್ಟುಹಾಕಿತ್ತು.

ಅಮೆರಿಕ ಪ್ರಸ್ತುತ ಇರಾನ್, ಸಿರಿಯಾ, ಉತ್ತರ ಕೊರಿಯಾ, ವೆನೆಝುವೆಲಾ, ಕ್ಯೂಬಾ, ಬೊಲಿವಿಯಾಗಳಂತಹ ರಾಷ್ಟ್ರಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ಮುಂದುವರಿಸಿದೆ. ಹಿಂದೆ ಇರಾಕ್, ಲಿಬಿಯಾಗಳಂತಹ ರಾಷ್ಟ್ರಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹಲವು ವರ್ಷಗಳವರೆಗೆ ಹೇರಿ ಆ ರಾಷ್ಟ್ರಗಳ ಆರ್ಥಿಕತೆಗಳಿಗೆ, ವ್ಯಾಪಾರ ವ್ಯವಹಾರಗಳಿಗೆ ಭಾರೀ ಹಾನಿ ಮಾಡಿತ್ತು. ನಂತರ ರಾಸಾಯನಿಕ ಅಸ್ತ್ರಗಳನ್ನು ಹೊಂದಿರುವ ಆರೋಪ ಹೊರಿಸಿ ಇರಾಕ್ ಮೇಲೆ ಅಮೆರಿಕ ಮಿತ್ರ ಕೂಟ ಸೇನಾ ಕಾರ್ಯಾಚರಣೆ ನಡೆಸಿ ಅಲ್ಲಿನ ಅಧ್ಯಕ್ಷ ಸದ್ದಾಮ್ ಹುಸೈನ್‌ರನ್ನು ಹಿಡಿದು ವಿಚಾರಣೆಯ ನಾಟಕವಾಡಿ ನೇಣು ಹಾಕಿ ಕೊಂದಿತ್ತು.

ಮತ್ತೊಂದು ಕಡೆ ಅಮೆರಿಕ ಮಿತ್ರ ಕೂಟದ ಇಂತಹ ಹಲವು ನಿರ್ಬಂಧಗಳ ಮಧ್ಯೆಯೇ ಕ್ಯೂಬಾ, ವೆನೆಝುವೆಲಾ, ಬೊಲಿವಿಯಾದಂತಹ ರಾಷ್ಟ್ರಗಳು ತಮ್ಮ ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯಗಳನ್ನು ಕಟ್ಟಿ ನಿಲ್ಲಿಸಿರುವ ಉದಾಹರಣೆಗಳು ನಮ್ಮ ಮುಂದಿವೆ. ಹಲವು ತೀವ್ರ ತರಹದ ಹಾನಿಗಳನ್ನು ತಡೆದುಕೊಳ್ಳುತ್ತಾ ಸ್ವಯಂಪೂರ್ಣ ವ್ಯವಸ್ಥೆಯ ಪ್ರಯೋಗಗಳೊಂದಿಗೆ ಸಾಪೇಕ್ಷ ಸ್ಥಿರತೆಯನ್ನು ಹೊಂದಿ ಮುಂದುವರಿಯುತ್ತಿರುವುದನ್ನು ನಾವು ಗಮನಿಸಬಹುದು. ಕೆಲವು ವರ್ಷಗಳ ಹಿಂದೆ ಅಮೆರಿಕದ ಮಿತ್ರ ರಾಷ್ಟ್ರವಾಗಿ ಇರಾಕ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬ್ರಿಟನ್‌ನ ಹಿಂದಿನ ಪ್ರಧಾನಿ ಟೋನಿ ಬ್ಲೇರ್ ‘‘ಇರಾಕ್ ಬಳಿ ರಾಸಾಯನಿಕ ಅಸ್ತ್ರಗಳೇನೂ ಇರಲಿಲ್ಲ. ತಪ್ಪಾದ ತಿಳುವಳಿಕೆಯಿಂದ ಯುದ್ಧ ನಡೆಸಿದೆವು. ಅದರಿಂದಾಗಿ ನಮ್ಮ ಸಾಕಷ್ಟು ಜನರು ಹಾನಿಗೊಳಗಾಗಿ ನೋವನುಭವಿಸುವಂತಾಯಿತು. ಇರಾಕಿನ ಜನರು ಹಾಗೇಯೇ ಸೇನೆ ಜೊತೆಗೆ ನಮ್ಮ ಸೇನೆಗೆ ಆದ ಹಾನಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ನಮ್ಮ ಗುಪ್ತಚರ ಮಾಹಿತಿಗಳು ತಪ್ಪಾಗಿತ್ತು. ಹಾಗಾಗಿ ನಮ್ಮ ತೀರ್ಮಾನ ಕೂಡ ತಪ್ಪಾದುದಾಗಿತ್ತು. ಇದರ ಸಂಪೂರ್ಣ ಹೊಣೆಯನ್ನು ನಾನು ಹೊರುತ್ತೇನೆ’’ ಎಂದೆಲ್ಲಾ ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಆದರೆ ಇರಾಕಿನ ಅಧ್ಯಕ್ಷ ಸದ್ದಾಮ್ ಹುಸೈನ್‌ರನ್ನು ಹಿಡಿದು ಕೊಂದು ಹಾಕಿದ್ದನ್ನು ಸಮರ್ಥಿಸಿಕೊಂಡಿದ್ದರು. ‘‘ಸದ್ದಾಮ್ ಹುಸೈನ್ ಇಲ್ಲದ ಜಗತ್ತು ಹೆಚ್ಚು ಶಾಂತಿಯುತವಾಗಿದೆ, ಇದ್ದಿದ್ದರೆ ಹೆಚ್ಚು ಭಯೋತ್ಪಾದನೆಗಳು ನಡೆಯುತ್ತಿದ್ದವು’’ ಎಂದೆಲ್ಲಾ ಹೇಳಿದ್ದರು. ಅದೊಂದು ಹಲವು ಹಿತಾಸಕ್ತಿಗಳನ್ನು ಇಟ್ಟುಕೊಂಡು ಹೊರಟ ಅಪ್ರಾಮಾಣಿಕ ಕ್ಷಮಾಪಣೆಯಾಗಿದೆ ಎನ್ನುವುದು ಮೇಲ್ನೋಟದಲ್ಲೇ ಗೊತ್ತಾಗುವಂತಹುದು. ಸ್ವಯಂ ದ್ವಂದ್ವಗಳಿಂದ ಕೂಡಿದ ಹೇಳಿಕೆಯಾಗಿತ್ತು ಅದು. ಆದರೆ ಯುದ್ಧ ನಡೆಸಿದ್ದು ‘ತಪ್ಪಾದ ನಿರ್ಧಾರ’ ಎನ್ನುವುದನ್ನು ಕೆಲವು ವರ್ಷಗಳ ನಂತರವಾದರೂ ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕಾಗಿ ಬಂದಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆದರೆ ತಾವೇ ಮಾಡಿಕೊಂಡ ಹಲವಾರು ಅಂತರ್ ರಾಷ್ಟ್ರೀಯ ನೀತಿ ನಿಯಮಾವಳಿಗಳ ವಿರುದ್ಧವಾಗಿ ಮತ್ತೊಂದು ರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ಮಧ್ಯ ಪ್ರವೇಶ ಮಾಡಿ ಅಲ್ಲಿರುವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕ್ರಮಗಳನ್ನು ಟೋನಿ ಬ್ಲೇರ್ ಸಮರ್ಥಿಸಿಕೊಳ್ಳುತ್ತಾ ಯುದ್ಧ ನಡೆಸಿದ್ದು ಮಾತ್ರ ತಪ್ಪಾದ ನಿರ್ಣಯವಾಗಿತ್ತು ಎಂದರೆ ಅದು ಪ್ರಾಮಾಣಿಕ ಕ್ಷಮಾಪಣೆಯಾಗಲು ಸಾಧ್ಯವಿಲ್ಲ ತಾನೆ.

 ಇದೀಗ ಅಮೆರಿಕದ ರಾಜಕೀಯ ನಾಯಕತ್ವ ನೀಡಬೇಕಿದ್ದ ಕ್ಷಮಾಪಣಾ ಹೇಳಿಕೆಯನ್ನು ತನ್ನ ಒಂದು ಬೇಹುಗಾರಿಕೆ ಹಾಗೂ ತನಿಖಾ ಸಂಸ್ಥೆಯ ಮುಖ್ಯಸ್ಥರ ಮೂಲಕ ಹೇಳಿಸಿರುವುದು ಕೂಡ ಕುತಂತ್ರದ ಭಾಗವೇ ಆಗಿದೆ. ಆ ಕ್ರಮವೇ ಆ ಹೇಳಿಕೆಯ ಪ್ರಾಮಾಣಿಕತೆಯನ್ನು ಕುಬ್ಜಗೊಳಿಸಿಬಿಟ್ಟಿದೆ. ಇಲ್ಲೂ ಮತ್ತೊಂದು ರಾಷ್ಟ್ರವಾದ ಪಾಕಿಸ್ತಾನದ ನೆಲದಲ್ಲಿ ಸೇನಾ ಕಾರ್ಯಾಚರಣೆಯ ಮೂಲಕ ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದು ಅಂತರ್‌ರಾಷ್ಟ್ರೀಯ ನಿಯಮಾವಳಿಗಳಿಗೆ ವಿರುದ್ಧವಾಗಿತ್ತು ಎನ್ನುವುದನ್ನು ಹೇಳಿಕೊಳ್ಳದೇ ಇರುವುದನ್ನು ಗಮನಿಸಬೇಕಾದ ವಿಚಾರ. ತನಗೆ ಇಷ್ಟಬಂದಂತೆ ಅಂತರ್‌ರಾಷ್ಟ್ರೀಯ ನೆಲದಲ್ಲಿ, ಯಾವುದೇ ನಿಯಮಾವಳಿಗಳಿಗೆ ಒಳಪಡದೆ, ಆಯಾ ರಾಷ್ಟ್ರಗಳ ಸ್ವಾತಂತ್ರ್ಯ, ಸ್ವಾಯತ್ತೆೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಾರ್ಯಾಚರಿಸುವುದು ತನಗೇ ಮೀಸಲಾಗಿರುವ ಹಕ್ಕು ಎಂಬಂತೆ ಅಮೆರಿಕದ ಸಮರ್ಥನೆಯಾಗಿದೆ ಇದು.

ಎರಡನೇ ಮಹಾಯುದ್ಧದ ನಂತರ ಅಮೆರಿಕ ನೇತೃತ್ವದಲ್ಲಿ ಕೆಲವು ಜಾಗತಿಕ ರಾಜಕೀಯ, ಹಣಕಾಸು ಹಾಗೂ ಸೇನಾ ಸಂಘಟನೆಗಳನ್ನು ಹುಟ್ಟು ಹಾಕಲಾಗಿತ್ತು. ಅವುಗಳಲ್ಲಿ ಬ್ರೆಟ್ಟನ್ ವುಡ್ ಸಂಸ್ಥೆಗಳೆಂದು ಹೆಸರಾದ ವಿಶ್ವಬ್ಯಾಂಕ್, ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ ಕೂಡ ಸೇರಿವೆ. ಈ ಸಂಸ್ಥೆಗಳು ಜಗತ್ತಿನ ರಾಷ್ಟ್ರಗಳನ್ನು ತಮ್ಮ ಮೂಗಿನ ನೇರಕ್ಕೆ ಕುಣಿಸುವಂತಹ ಅಸ್ತ್ರಗಳನ್ನಾಗಿಯೇ ಉಪಯೋಗಿಸುತ್ತಾ ಬರಲಾಗಿದೆ. ಅದರಲ್ಲೂ ಅಮೆರಿಕದ್ದೇ ಸಿಂಹಪಾಲು. ಅಮೆರಿಕ ಬೇಹುಗಾರಿಕೆ ಮತ್ತು ತನಿಖಾ ಸಂಸ್ಥೆ ಸಿಐಎ ಕೂಡ ಈ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಬಳಸಿಕೊಳ್ಳುತ್ತಾ, ಹಲವಾರು ರಾಷ್ಟ್ರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಅಲ್ಲಿನ ಆರ್ಥಿಕ ಸಂಪನ್ಮೂಲಗಳನ್ನು ಕೈವಶ ಮಾಡುವ ಅಮೆರಿಕದ ಭಾರೀ ಕಾರ್ಪೊರೇಟುಗಳಿಗೆ ಸಹಾಯ ಹಾಗೂ ಸಹಕಾರ ನೀಡುವುದು ಹೊಸ ವಿಚಾರವಲ್ಲ. ಈ ಬಗ್ಗೆ ಸಾಕಷ್ಟು ವರದಿಗಳಿವೆ. ಕೆಲವು ವರದಿಗಳು ಅಮೆರಿಕ ಈ ಜಾಗತಿಕ ಹಣಕಾಸು ಸಂಸ್ಥೆಗಳನ್ನು ತಮ್ಮ ಯುದ್ಧಾಸ್ತ್ರಗಳನ್ನಾಗಿಯೇ ಬಳಸಿಕೊಂಡು ಬಂದಿರುವುದನ್ನು ಹೇಳಿವೆ. ಹತ್ತು ಹಲವು ರೀತಿಗಳಲ್ಲಿ ಸಾಲಗಳ ಸುಳಿಯಲ್ಲಿ ರಾಷ್ಟ್ರಗಳನ್ನು ಸಿಲುಕಿಸುವುದು. ಆಯಾ ರಾಷ್ಟ್ರಗಳ ಸರಕಾರ ಮತ್ತವುಗಳ ಮುಖ್ಯಸ್ಥರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು. ಹತ್ತು ಹಲವು ನಿರ್ಬಂಧಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವುಗಳ ಮೇಲೆ ಹೇರುವುದು. ಆ ಮೂಲಕ ಮೂಗು ಹಿಡಿದು ತಮಗೆ ಬೇಕಾದಂತೆ ಬಗ್ಗಿಸಿಕೊಳ್ಳುವ ಕಾರ್ಯಗಳಿಗೆ ಬೇರೆ ಯುದ್ಧಾಸ್ತ್ರಗಳ ಬಳಕೆಯ ಅವಶ್ಯಕತೆಯನ್ನು ಇದು ಆ ಮಟ್ಟಕ್ಕೆ ಅಮೆರಿಕಕ್ಕೆ ಇಲ್ಲವಾಗಿಸಿದೆ.

ಅದಾಗದಿದ್ದ ಪಕ್ಷದಲ್ಲಿ ಅದು ನೇರ ಯುದ್ಧವೂ ಸೇರಿದಂತೆ ಇನ್ನಿತರ ಅಸ್ತ್ರಗಳನ್ನು ಬಳಸುತ್ತಾ ಬಂದಿದೆ. ಪ್ರಸ್ತುತ ಅಮೆರಿಕದ ಆರ್ಥಿಕತೆಯಲ್ಲಿ ಭಾರೀ ಬಿಕ್ಕಟ್ಟುಗಳು ಮುಂದುವರಿದಿವೆ. ಇತ್ತೀಚೆಗೆ ಅಮೆರಿಕದ ಶೇ. 50ರಷ್ಟು ಜನಸಾಮಾನ್ಯರಿಗೆ ಮನೆಬಾಡಿಗೆಯಂತಹ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಎಂಬ ವರದಿಯಿತ್ತು. ಅಂದರೆ ಅಮೆರಿಕದ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಲೇ ಹೋಗುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ. ಅವೆಲ್ಲದರಿಂದ ಜನಸಾಮಾನ್ಯರ ಗಮನವನ್ನು ಬೇರೆಡೆಗೆ ತಿರುಗಿಸಲು ಮೊದಲಿನಿಂದಲೂ ಬೆಳೆಸುತ್ತಾ, ಬಳಸಿಕೊಂಡು ಬಂದ ಅಸ್ತ್ರವಾದ ಬಾಹ್ಯ ಭಯಗಳನ್ನು ಬಳಸುತ್ತಿದೆ. ಅದನ್ನು ಫೋಬಿಯಾ ಎಂದು ಕರೆಯಲಾಗುತ್ತದೆ. ಅದನ್ನು ಮುಸ್ಲಿಮ್ ಭಯೋತ್ಪಾದನೆ ಎಂಬಂತೆ ಮಾಡಿ ‘ಇಸ್ಲಾಮೋಫೋಬಿಯಾ’ ಎಂದು ಗುರ್ತಿಸುವಂತೆ ಆಗಿದೆ. ಹಲವು ಕುತಂತ್ರಗಳ ಭಾಗವಾಗಿಯೇ ಇದನ್ನು ಕೂಡ ಬಳಸಲಾಗುತ್ತದೆ. ಇರಾಕಿನ ಅಧ್ಯಕ್ಷ ಸದ್ದಾಮ್ ಹುಸೈನ್, ಲಿಬಿಯಾದ ಅಧ್ಯಕ್ಷ ಕರ್ನಲ್ ಗದ್ದಾಫಿ, ಸೌದಿ ಅರೇಬಿಯಾದ ಭಾರೀ ಶ್ರೀಮಂತ ವ್ಯಾಪಾರಿ ಬಿನ್ ಲಾದೆನ್ ಮೊದಲಾದವರನ್ನು ಯುದ್ಧ ಇಲ್ಲವೇ ಕಾರ್ಯಾಚರಣೆಗಳ ಮೂಲಕ ಕೊಂದುಹಾಕಿರುವ ಅಮೆರಿಕದ ಆಳುವ ಶಕ್ತಿಗಳ ಕ್ರಮಗಳು ಇದರ ಭಾಗವೇ ಆಗಿವೆ.

ಅಮೆರಿಕದ ಜನಸಾಮಾನ್ಯರನ್ನು ಭಯಾಂದೋಲನಗಳಿಗೆ ದೂಡಿ ಅವರು ನೈಜವಾಗಿ ವಿರೋಧಿಸಬೇಕಾದವರನ್ನು ಅದರಿಂದ ರಕ್ಷಿಸಿಕೊಳ್ಳುವ ಭಾರೀ ಹುನ್ನಾರ ಇದರ ಹಿಂದೆ ಇದೆ. ಇಂತಹ ಭಯಾಂದೋಲನಗಳನ್ನು ಚಾಲನೆಯಲ್ಲಿಡಲು ಹಾಗೇಯೇ ಇನ್ನಿತರ ಲಾಭಗಳಿಗಾಗಿಯೇ ಅಲ್ ಖಾಯಿದಾ, ಐಎಸ್‌ಐಎಸ್(ಐಸಿಸ್), ತಾಲಿಬಾನ್‌ಗಳಂತಹವುಗಳನ್ನು ಅಮೆರಿಕ ತಾನೇ ಹುಟ್ಟುಹಾಕಿ ತರಬೇತಿ ಶಸ್ತ್ರಾಸ್ತ್ರ ಒದಗಿಸಿ ಕಾರ್ಯಾಚರಣೆಗೆ ಬಿಡುವ ಬಗ್ಗೆ ಹಲವಾರು ವರದಿಗಳು ಬಂದಿವೆ. ಐಎಸ್‌ಐಎಸ್ ಅನ್ನು ಹುಟ್ಟುಹಾಕುವಲ್ಲಿ ಅಮೆರಿಕದ ಮಿತ್ರ ಇಸ್ರೇಲಿನ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್‌ನ ಪಾತ್ರವಿದೆಯೆಂಬ ವರದಿಗಳು ಇತ್ತೀಚೆಗೆ ಬರುತ್ತಿವೆ. ಅಮೆರಿಕದ ಸಿಐಎ ಇತರ ರಾಷ್ಟ್ರಗಳ ಬೇಹುಗಾರಿಕಾ ಸಂಸ್ಥೆಗಳನ್ನು ಕೂಡ ತಮ್ಮ ಅನುಕೂಲಗಳಿಗೆ ಬಳಸಿಕೊಳ್ಳುವುದು ಹೊಸ ವಿಚಾರವಲ್ಲ. ಅದಕ್ಕೆ ಪಾಕಿಸ್ತಾನದ ಐಎಸ್‌ಐ ಆಗಲೀ ಭಾರತದ ಆರ್‌ಎಡಬ್ಲ್ಯೂ (ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಆಗಲೀ ಹೊರತಾದುವುಗಳಲ್ಲವೆನ್ನು ವುದನ್ನು ಇಲ್ಲಿ ಗಮನಿಸಬೇಕು. ಅಂದರೆ ಭಯೋತ್ಪಾದನೆ ಎನ್ನುವುದು ಪ್ರಮುಖವಾಗಿ ಜಾಗತಿಕ ಬಂಡವಾಳಶಾಹಿ ಶಕ್ತಿಗಳ ಉದ್ಯಮವೇ ಹೊರತು ಬೇರೇನಲ್ಲ. ಈಗಲಾದರೂ ನಿಜವಾದ ಭಯೋತ್ಪಾದಕರು ಯಾರು, ಅವರು ಮಾಡುತ್ತಿರುವ ಭಯೋತ್ಪಾದನೆಗಳು ಎಂಥವು ಎನ್ನುವುದನ್ನು ಸರಿಯಾಗಿ ಗ್ರಹಿಸಿ ಅರ್ಥಮಾಡಿಕೊಳ್ಳಬೇಕಾದ ಅಗತ್ಯ ಜನಸಾಮಾನ್ಯರಿಗಿಲ್ಲವೇ?!


ಮಿಂಚಂಚೆ: nandakumarnandana67gmail.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top