ದಲಿತ ಚಳವಳಿಯಲ್ಲಿ ಬಿಕ್ಕಟ್ಟುಗಳಿಲ್ಲ, ರೂಪಾಂತರಗೊಳ್ಳುವುದೂ ಇಲ್ಲ | Vartha Bharati- ವಾರ್ತಾ ಭಾರತಿ

ಪ್ರತಿಕ್ರಿಯೆ

ದಲಿತ ಚಳವಳಿಯಲ್ಲಿ ಬಿಕ್ಕಟ್ಟುಗಳಿಲ್ಲ, ರೂಪಾಂತರಗೊಳ್ಳುವುದೂ ಇಲ್ಲ

ದಲಿತ ಚಳವಳಿ ದಿಕ್ಕೆಟ್ಟಿದೆಯೇ?- (ಜುಲೈ 4, 2019ರ ವಾರ್ತಾಭಾರತಿ) ಎಂಬ ರಘೋತ್ತಮ ಹೊ.ಬ. ಅವರ ಲೇಖನವು ಬಹುಪಾಲು ದಲಿತ ಚಳವಳಿ ಬಗೆಗಿನ ಭರ್ತಿ ಅಜ್ಞಾನ ಮತ್ತು ಪೂರ್ವಾಗ್ರಹ ಪೀಡಿತ ಆಲೋಚನೆಗಳ ಪ್ರತಿರೂಪವೆನ್ನದೆ ವಿಧಿಯಿಲ್ಲ. ದಲಿತ ಚಳವಳಿ ಕುರಿತು ವ್ಯಾಖ್ಯಾನಿಸಬಹುದಾದ ಅನುಭವ ಅಥವಾ ಕೊಡುಗೆಗಳೇನು? ಎಂದು ಅವರನ್ನು ಪ್ರಶ್ನಿಸುವುದು ಅನಿವಾರ್ಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲವೆ ಇತರ ಯಾವುದೇ ರೂಪಗಳಲ್ಲಿ ದಲಿತ ಚಳವಳಿಯಲ್ಲಿ ಬಿಕ್ಕಟ್ಟಿದೆ ಎಂದು ಚರ್ಚೆಗೆ ತೊಡಗಿರುವವರು ಖಂಡಿತವಾಗಿಯೂ ದಲಿತ ಚಳವಳಿಯ ಮೂಲದ್ರವ್ಯ, ಅದರ ಹೋರಾಟಗಳ ವ್ಯಾಪ್ತಿ ಮತ್ತು ಅದರಿಂದಾಗಿರುವ ಸಾಮಾಜಿಕ ಪರಿಣಾಮಗಳನ್ನು ಸಮಗ್ರವಾಗಿ ವಸ್ತುನಿಷ್ಠವಾಗಿ ಗ್ರಹಿಸಿರಲಾರರು. ರಘೋತ್ತಮ ಅವರು ಇಂತಹವರ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದಾರೆಂದು ಅವರ ವಿಶ್ಲೇಷಣೆಯಿಂದಲೇ ತಿಳಿದುಬರುವ ಅಂಶ.
ಈ ವಿಶ್ಲೇಷಣೆಯು ಇಡೀ ದಲಿತ ಚಳವಳಿಯು ಈಗ ರೂಪಾಂತರ ಗೊಂಡಿದೆ ಮತ್ತು ಬಿಎಸ್ಪಿಯ ರಾಜಕೀಯ ಹೋರಾಟದ ಸ್ವರೂಪ ಪಡೆದಿದೆ ಎಂದು ನಿರೂಪಿಸುವ ದುರುದ್ದೇಶ ಹೊಂದಿದೆ. ಆ ಮೂಲಕ ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಸುದೀರ್ಘ ಹೋರಾಟದ ಇತಿಹಾಸವನ್ನು ಬಹುಜನ ಚಳವಳಿ ಎಂದು ಮರುನಾಮಕರಣ ಮಾಡುವ ಪುಢಾರಿ ದರ್ಜೆಯ ಕುಟಿಲ ಚಿಂತನೆಯೊಂದು ಅನಾವರಣಗೊಂಡಿದೆ.
ಮೊದಲ ಸ್ಪಷ್ಟನೆ ಏನೆಂದರೆ, ವಾಸ್ತವವಾಗಿ ಬಿಎಸ್ಪಿಯ ಬಹುಜನ ಚಳವಳಿಗೂ ಮತ್ತು ದಲಿತ ಚಳವಳಿಗೂ ಯಾವ ನೆಲೆಯಿಂದಲೂ ಸಂಬಂಧಗಳಿರುವುದಿಲ್ಲ. ಬಿಎಸ್ಪಿಯದು ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಪುಢಾರಿ ರಾಜಕಾರಣ. ದಲಿತ ಚಳವಳಿಯ ಕೇಂದ್ರ ವಸ್ತು ಸಾಮಾಜಿಕ ಕ್ರಾಂತಿ. ಅದು ಧರ್ಮ, ಜಾತಿ, ಭಾಷೆ, ಸಾಮಾಜಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ- ಹೀಗೆ ಬಹುಮುಖಿಯಾಗಿರುವ ಇಂಡಿಯಾ ದೇಶದ ಎಲ್ಲಾ ಬಗೆಯ ಅಸಮಾನತೆಗಳ ವಿರುದ್ಧದ ನಿರಂತರ ಮಹಾಸಮರ. ಈ ಕಾರಣಕ್ಕಾಗಿ ಇತರ ಜನಪರ ಚಳವಳಿಗಳಿಗೂ, ದಲಿತ ಚಳವಳಿಗೂ ಅಪಾರ ಭಿನ್ನತೆಗಳಿರುವುದನ್ನು ಅವುಗಳ ತೌಲನಿಕ ವಿಶ್ಲೇಷಣೆಯಿಂದ ತಿಳಿಯಬಹುದಾಗಿದೆ. ಈ ತೌಲನಿಕ ಅಧ್ಯಯನ ಇದುವರೆಗೆ ಯಾರಿಂದಲೂ ನಡೆಯದಿದ್ದರೂ ನಮ್ಮೆಲ್ಲರ ಅನುಭವದಲ್ಲಿರುವುದಂತೂ ಸತ್ಯ.
ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಹರಿದುಬಂದಿರುವ ಸಾಮಾಜಿಕ ಸಮಾನತೆಯ ಹಲವು ವಿಚಾರಧಾರೆಗಳು ದಲಿತ ಚಳವಳಿಯ ಹುಟ್ಟು, ಬೆಳವಣಿಗೆಗೆ ಖಚಿತವಾದ ಸೈದ್ಧಾಂತಿಕ ಚೌಕಟ್ಟು ನಿರ್ಮಿಸಿವೆ. ಅದರಲ್ಲೂ ಬುದ್ಧ, ಶೈವ ಪರಂಪರೆ, ವಚನ ಚಳವಳಿ, ಸೂಫಿಗಳು, ತತ್ವಪದಕಾರರು, ಪೆರಿಯಾರ್ ಚಳವಳಿ, ಜಾಗತಿಕ ಕ್ರಾಂತಿಗಳು, ಸಮಾಜವಾದಿ ಆರ್ಥಿಕ ಚಿಂತನೆಗಳು, ಗಣತಂತ್ರ ವ್ಯವಸ್ಥೆಗಳ ಹಿನ್ನೆಲೆಯನ್ನು ಅಲ್ಲಗೆಳೆಯಲಾಗದು. ಇಂತಹ ಎಷ್ಟೋ ವೈಚಾರಿಕ ಪರಂಪರೆಗಳಿಗೆ ಕ್ರಮಬದ್ಧವಾದ, ಸಂಘಟಿತ ವಾದ ಹೋರಾಟದ ರೂಪಕೊಟ್ಟವರು ಅಂಬೇಡ್ಕರ್‌ರವರು.
ಕರ್ನಾಟಕದ ದಲಿತ ಚಳವಳಿಯು ನೇರವಾಗಿ ಅಂಬೇಡ್ಕರ್ ಹೋರಾಟದ ಮಾದರಿಗೆ ಬದ್ಧವಾಗಿರುವಂತಹುದು. ಸಾಮಾಜಿಕ ಕ್ರಾಂತಿಯ ಕುರಿತಾಗಿ ಅವರಿಗಿದ್ದ ಬದ್ಧತೆ, ವೈಚಾರಿಕತೆ, ವಿಫುಲ ಜ್ಞಾನ, ನಾಯಕತ್ವ, ಸಮಗ್ರ ದೃಷ್ಟಿ, ಹೋರಾಟದ ಮನೋಧರ್ಮ, ಪ್ರಾಮಾಣಿಕತೆ, ಗೆಲ್ಲುವ ಮುತ್ಸದ್ಧಿತನ ಇತ್ಯಾದಿಗಳಲ್ಲಿ ಯಾವುದೇ ವಿರೋಧಾಭಾಸಗಳನ್ನು ಕಾಣಲಾಗದು. ಈ ಎಲ್ಲಾ ಗುಣಗಳೂ ದಲಿತ ಚಳವಳಿಗೂ ಇರಬೇಕು ಮತ್ತು ಇವೆ. ಹೇಗೆ ಅಂಬೇಡ್ಕರ್ ಆಲೋಚನೆಗಳಲ್ಲಿ, ಬದುಕು-ಬರಹಗಳಲ್ಲಿ, ಕ್ರಿಯೆಗಳಲ್ಲಿ, ಸಾಧನೆಗಳಲ್ಲಿ ಆಂತರಿಕ ಬಿಕ್ಕಟ್ಟುಗಳಿರಲಿಲ್ಲವೋ ಹಾಗೆಯೇ ದಲಿತ ಚಳವಳಿಯಲ್ಲೂ ಬಿಕ್ಕಟ್ಟುಗಳಿರಲು ಸಾಧ್ಯವಿಲ್ಲ ಎಂದೇ ಎಲ್ಲಾ ಪ್ರಾಮಾಣಿಕ ಚಳವಳಿಗಾರರ ದೃಢ ವಿಶ್ವಾಸ. ಸರಿಯಾಗಿ ಹೇಳಬೇಕೆಂದರೆ, ಅಂಬೇಡ್ಕರ್‌ರವರ ತದ್ರೂಪಿಯಾಗಿದೆ ಕರ್ನಾಟಕದ ದಲಿತ ಚಳವಳಿ.
ದೇಶದ ಇತರ ಭಾಗಗಳಲ್ಲಿ ವಿರಳವಾಗಿರುವ ಅಸಂಘಟಿತವಾದ, ಅಸಮಗ್ರವಾದ, ದಲಿತ ಚಳವಳಿಗಿಂತ ಕರ್ನಾಟಕದ ದಲಿತ ಚಳವಳಿಯು ಸಾಮಾಜಿಕ ಪ್ರಜಾಸತ್ತೆಯ ಮೂಲಕ ಕ್ರಿಯಾಶೀಲವಾಗಿರುವ ಸಾಂಸ್ಕೃತಿಕ ಚಳವಳಿ. ಸಮಾನತೆಯ ಆಶಯಗಳೇ ಅದರ ಕೇಂದ್ರ ಪ್ರಜ್ಞೆ. ಅಸಮಾನತೆಯ ಅನುಭವ, ಆಲೋಚನೆ, ಕ್ರಿಯೆ-ಪ್ರತಿಕ್ರಿಯೆಗಳು ಯಾವ ಸ್ಥಳದಲ್ಲಿಯೇ ಇರಲಿ, ಯಾವ ರೂಪದಲ್ಲಿಯೇ ಇರಲಿ ಅವುಗಳ ಮೂಲೋತ್ಪಾಟನೆಯಾಗುವ ತನಕ ದಲಿತ ಚಳವಳಿ ವಿರಮಿಸುವುದಿಲ್ಲ, ಭ್ರಷ್ಟಗೊಳ್ಳುವುದಿಲ್ಲ ಹಾಗೂ ರಘೋತ್ತಮ ಹೇಳುವಂತೆ ರೂಪಾಂತರ ಕೂಡ ಹೊಂದುವುದಿಲ್ಲ. ಅದರ ಭವಿಷ್ಯದಲ್ಲಿ ಅಷ್ಟರಮಟ್ಟಿಗೆ ದಲಿತ ಚಳವಳಿ ತನಗೆ ತಾನೇ ಸ್ವಯಂಪೂರ್ಣ ಗುಣಗಳಿಂದ ಕೂಡಿರುತ್ತದೆ.
ದಲಿತ ಸಂಘರ್ಷ ಸಮಿತಿಯು ಸಂಘಟಿಸಿರುವ ದಲಿತ ಚಳವಳಿಗೆ ಹತ್ತಿರ ಹತ್ತಿರ ಐದು ದಶಕಗಳ ಇತಿಹಾಸವಿದೆ. ಅದನ್ನು ಗ್ರಹಿಸಲು ಸಾವಿರಾರು ಪುಟಗಳ ವಿವರಣೆ ಅಗತ್ಯವಾಗುತ್ತದೆ. ಆ ಇತಿಹಾಸ ಇನ್ನೂ ಅಕ್ಷರರೂಪ ಕಾಣದಿರುವ ಹಿನ್ನೆಲೆಯಲ್ಲಿ ಹಲವು ಅಪವ್ಯಾಖ್ಯಾನಗಳನ್ನು ನಿಯಂತ್ರಿಸಲಾಗುತ್ತಿಲ್ಲ. ಅಂತಹ ಅಪವ್ಯಾಖ್ಯಾನಗಳ ಸಾಲಿನಲ್ಲಿ ದಲಿತ ಚಳವಳಿಯ ಬಿಕ್ಕಟ್ಟು ಎಂಬ ವಿಷಯವೂ ಸೇರುತ್ತದೆ.
ಕರ್ನಾಟಕದ ದಲಿತ ಚಳವಳಿಯ ಗ್ರಹಿಕೆಗೆ, ವಿಶ್ಲೇಷಣೆಗೆ, ವಿಮರ್ಶೆ, ವ್ಯಾಖ್ಯಾನಗಳಿಗೆ ಅಂಬೇಡ್ಕರ್‌ರವರ ಪರಿಪೂರ್ಣ ದೃಷ್ಟಿಯೇ ಅಳತೆಗೋಲು. ಇತಿಹಾಸದುದ್ದಕ್ಕೂ ಜಾತಿಬಾಹಿರವಾಗಿ, ಅಸ್ಪಶ್ಯತೆ, ಹಸಿವು, ಅವಮಾನ, ದೌರ್ಜನ್ಯಗಳ ಯಾತನಾ ಶಿಬಿರಗಳಲ್ಲಿ ನರಳಿದ ಬೃಹತ್ ದಲಿತ ಸಮುದಾಯಗಳು ಸಂಘಟನೆ, ಹೋರಾಟಗಳಿಗೆ ಸಜ್ಜುಗೊಂಡಿರುವುದು ಅಂಬೇಡ್ಕರ್ ಮೂಲಕ. ಜಾತಿ-ಉಪಜಾತಿಗಳಲ್ಲಿ ಚದುರಿ ಹೋಗಿ ಒಂದುಗೂಡಲಾಗದ ಸನ್ನಿವೇಶದಲ್ಲಿ ಅಂಬೇಡ್ಕರ್‌ರವರ ಸಮಗ್ರ ಹೋರಾಟವು ದಲಿತರಿಗೆ ಮನುಷ್ಯರಾಗಿ ಬದುಕುವ ಅವಕಾಶಗಳನ್ನು ಸಂರಕ್ಷಿಸುವುದರ ಜತೆಗೆ ಅಸ್ಪಶ್ಯ ಸಮುದಾಯಗಳ ಐಕ್ಯ ಹೋರಾಟದ ಅಗತ್ಯವನ್ನು ಚೆನ್ನಾಗಿ ಮನಗಾಣಿಸಿದೆ. ಈ ಮಾತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳು ಪಟ್ಟಭದ್ರ ಹಿತಾಸಕ್ತಿಯ, ಭ್ರಷ್ಟತನದ, ಸ್ವಹಿತಾಸಕ್ತಿಯ ದುರುಳ ಆಶಯಗಳಿಂದ ಮುಕ್ತವಾಗಿರಲು ಸಾಧ್ಯವಿಲ್ಲ.

ದಲಿತ ಸಂಘರ್ಷ ಸಮಿತಿಯು ಸಾಮಾಜಿಕ ಕ್ರಾಂತಿಗೆ ಬದ್ಧವಾದ ಹೋರಾಟ ಸಂಸ್ಕೃತಿಯ ವಿಸ್ತರಣೆಗೆ ಮಾಧ್ಯಮವಾಗಿರುವ ವಿಶಿಷ್ಟ ಸಂಘಟನೆ. ಅದರ ಪ್ರಾಮಾಣಿಕತೆ, ಬೌದ್ಧಿಕ ಶಿಸ್ತು, ಬದ್ಧತೆ, ಹೋರಾಟಗಳ ಚರಿತ್ರೆಯನ್ನು ಹೀಯಾಳಿಸಿ, ಅಳಿಸಿಹಾಕಿ ದಲಿತ ಚಳವಳಿ ತಮ್ಮದು ಎಂದು ಸಾಧಿಸುವವರು ಖಂಡಿತವಾಗಿಯೂ ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿರುವ, ದಲಿತ ಸಮುದಾಯಗಳನ್ನು ದುರುಪಯೋಗಪಡಿಸಿಕೊಳ್ಳುವ ನಯವಂಚಕರೇ ಆಗಿರುತ್ತಾರೆ. ಕಳೆದ ನಾಲ್ಕು ದಶಕಗಳಲ್ಲಿ ಕರ್ನಾಟಕದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಆಗಿರುವ ಹಲವು ಮಹತ್ವದ ಬದಲಾವಣೆಗಳ ಹಿಂದೆ ದಲಿತ ಸಂಘರ್ಷ ಸಮಿತಿಯ ನಿರ್ಣಾಯಕ ಪಾತ್ರವಿದೆ. ಆ ಸಂಘಟನೆಯ ಹೆಸರು ಪ್ರಸ್ತಾಪಿಸದೆ ಬೀದಿ ಹೋರಾಟವೆಂದು ಅಣಕಿಸಿರುವ ರಘೋತ್ತಮ ಅವರ ಕ್ಷುದ್ರ ಚಿಂತನೆಗೆ ಕ್ಷಮೆಯೇ ಇಲ್ಲ. ದಲಿತ ಸಮುದಾಯದ ಆರ್ಥಿಕ ಸಬಲೀಕರಣ ಮತ್ತು ದಲಿತ ರಾಜಕಾರಣ ಕುರಿತು ರಘೋತ್ತಮ ನೀಡಿರುವ ಮಾಹಿತಿಗಳು ಬಹುಪಾಲು ವಾಸ್ತವವನ್ನು ಮರೆಮಾಚಿ, ಸುಳ್ಳುಗಳನ್ನು ವೈಭವೀಕರಿಸುವ ಕೆಟ್ಟ ಹಠಕ್ಕೆ ಬಿದ್ದಿವೆ. ಉದಾಹರಣೆಗೆ ಸ್ವಾತಂತ್ರ್ಯಾನಂತರ ಕರ್ನಾಟಕದಲ್ಲಿ ಅಧಿಕಾರ ನಡೆಸಿದವರಿಂದ ಮೀಸಲಾತಿಯ ಅಸಮರ್ಪಕ ಅನುಷ್ಠಾನ ಮತ್ತು ಭಡ್ತಿಯಲ್ಲಿ ಉನ್ನತ ಹುದ್ದೆಗಳನ್ನು ದಲಿತರಿಗೆ ನಿರಾಕರಿಸುವ ಆಡಳಿತಾತ್ಮಕ ಕರ್ತವ್ಯಲೋಪಗಳನ್ನು ಗುರುತಿಸಿ ತಾನು ಜನ್ಮತಳೆದ ಕಾಲದಿಂದಲೂ ದಲಿತ ಸಂಘರ್ಷ ಸಮಿತಿಯು ನಿರಂತರವಾಗಿ ರಾಜಿ ಇಲ್ಲದ ಹೋರಾಟಗಳನ್ನು ನಡೆಸಿದೆ. ತತ್ಫಲವಾಗಿ 1978ರಲ್ಲಿ ರೋಸ್ಟರ್ ಪದ್ಧತಿ, ಭಡ್ತಿ ಮೀಸಲಾತಿ ಕಾಯ್ದೆಗಳು ಜಾರಿಗೊಂಡವು. ಅರಸು ಅವರ ನಿಧನಾನಂತರ ಮತ್ತು ಇಲ್ಲಿಯವರೆಗೂ ದಲಿತ ಜನಾಂಗದ ಅರ್ಹ ವಿದ್ಯಾವಂತರ ನೇಮಕಾತಿ ಮತ್ತು ತತ್ಸಂಬಂಧ ಭಡ್ತಿ ನೀಡುವಿಕೆಯಲ್ಲಿ ಸರಕಾರಗಳ ನಿರ್ಲಕ್ಷ್ಯ ಮುಂದುವರಿದಿದೆ. ಮೀಸಲಾತಿಯ ಸಮರ್ಪಕ ಅನುಷ್ಠಾನ ಮತ್ತು ಭಡ್ತಿ ಮೀಸಲಾತಿಯ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಭಾಗಗಳಲ್ಲಿ 1999ರಲ್ಲಿ ದಲಿತ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ ಫಲವಾಗಿ 2002ರಲ್ಲಿ ಕರ್ನಾಟಕ ಸರಕಾರ ಭಡ್ತಿ ಮೀಸಲಾತಿ ಕಾಯ್ದೆ ರೂಪಿಸಿತು. ಆದರೆ, ಈ ಕಾಯ್ದೆಯ ಅನುಷ್ಠಾನದ ವಿರುದ್ಧ ಅಹಿಂಸಾ ಸಂಘಟನೆಯು ಕಾನೂನು ಸಮರಕ್ಕೆ ನಿಂತಾಗ, ಸುದೀರ್ಘ ಕಾಲದ ನಂತರ 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭಡ್ತಿ ಮೀಸಲಾತಿಯ ಅನುಷ್ಠಾನಕ್ಕಿದ್ದ ಹಲವಾರು ಕಾನೂನು ತೊಡಕುಗಳನ್ನು ಗಮನದಲ್ಲಿರಿಸಿ 2017ರಲ್ಲಿ ನೂತನ ಭಡ್ತಿ ಮೀಸಲಾತಿ ಕಾಯ್ದೆ ರೂಪಿಸಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top