2019ರ ಆಯವ್ಯಯ ಪತ್ರದಲ್ಲಿ ಯಾರಿಗೆ ಆಯ?! ಯಾರಿಗೆ ವ್ಯಯ?!! | Vartha Bharati- ವಾರ್ತಾ ಭಾರತಿ

2019ರ ಆಯವ್ಯಯ ಪತ್ರದಲ್ಲಿ ಯಾರಿಗೆ ಆಯ?! ಯಾರಿಗೆ ವ್ಯಯ?!!

ಉದ್ಯೋಗಾವಕಾಶಗಳ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಕೃಷಿ ಹಾಗೂ ರೈತರ ಸಮಸ್ಯೆ ಪರಿಹಾರ, ಕೃಷಿಯ ಬೆಳವಣಿಗೆಯ ಬಗ್ಗೆಯಾಗಲೀ ಏನನ್ನೂ ಹೇಳದಿರುವ ಆಯವ್ಯಯವಿದು ಎಂದು ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆಗಳಿಗೆ ನಾಮಮಾತ್ರದ ಹಣಕಾಸು ಅನುದಾನ ನೀಡಿರುವ ವಿಚಾರ ಕೂಡ ವಿವಾದವನ್ನು ಸೃಷ್ಟಿಸಿದೆ. ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ವಾಗ್ದಾನವನ್ನು ಮೋದಿ ಹಿಂದೆ ನೀಡಿದ್ದರೂ ಆಯವ್ಯಯದಲ್ಲಿ ಅದರ ಬಗ್ಗೆ ಚಕಾರವೆತ್ತಿಲ್ಲ.


ಭಾರತದ ಬಹು ವಿವಾದಿತ 2019ರ ಚುನಾವಣೆ ಮುಗಿದು ಮೋದಿಯ ಬಿಜೆಪಿ ಮತ್ತೊಮ್ಮೆ ಸರಕಾರ ರಚಿಸಿ ತನ್ನ ಕಾರ್ಯಗಳನ್ನು ಆರಂಭಿಸಿದೆ. 2019-20ನೇ ಸಾಲಿನ ಆಯವ್ಯಯವನ್ನು ಹೊಸ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿಯಾಗಿದೆ. ಅದರಲ್ಲಿ ಲಕ್ಷಾಂತರ ಕೋಟಿಗಳ ಲೆಕ್ಕ ವ್ಯತ್ಯಾಸವೂ ಇದೆಯೆಂಬ ವಿವಾದವೂ ಜೊತೆಗಿದೆ. ಮುಂದಿನ ದಿನಗಳಲ್ಲಿ ರೋಚಕವೆನಿಸುವಂತಹ 5 ಟ್ರಿಲಿಯನ್ ಗಟ್ಟಲೆ ಆರ್ಥಿಕ ಬೆಳವಣಿಗೆಯನ್ನು ಜನರ ಮುಂದೆ ಇಟ್ಟಿದೆ. ಇದೇ ಸಾಲಿನಲ್ಲೇ 3 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹೇಳಿಕೊಂಡಿದೆ. ಅಂದರೆ 3ರ ಮುಂದೆ 12 ಸೊನ್ನೆಗಳಿರುವಷ್ಟು ದೊಡ್ಡ ಆರ್ಥಿಕತೆಯಾಗುತ್ತದೆ ಭಾರತ ಎನ್ನಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆಂದೇ ಈ ಬಾರಿಯ ಆಯವ್ಯಯದಲ್ಲಿ ತಲಾ ಶೇ. 35.6 ಹಾಗೂ ಶೇ. 28ರಷ್ಟು ಅನುದಾನಗಳನ್ನು ಹೆಚ್ಚು ಮಾಡಿದೆ. ಅದು ಸಫಾಯಿ ಕರ್ಮಚಾರಿಗಳ ಪುನರ್ವಸತಿ, ಸಂಸ್ಕೃತಿ ರಕ್ಷಣೆ ಇತ್ಯಾದಿಗಳಿಗೆಂದು ಹೇಳಿದೆ. ಆದರೆ ಅನುಷ್ಠಾನದ ಕುರಿತು ಯಾವುದೇ ಸ್ಪಷ್ಟ ವಿವರಗಳನ್ನು ಆಯವ್ಯಯದಲ್ಲಿ ಹೇಳಿಲ್ಲ. ಪರಿಶಿಷ್ಟ ವರ್ಗಗಳಡಿ ಬರುವ ಕೋಟ್ಯಂತರ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಸೇರಿದ ಜನರ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಯಾವುದೇ ಅನುದಾನವನ್ನು ಒದಗಿಸಿಲ್ಲ. ಸರ್ವೋಚ್ಚ ನ್ಯಾಯಾಲಯ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು 11.6 ದಶಲಕ್ಷ ಜನರನ್ನು ಅವರ ಮೂಲಗಳಿಂದ ಒಕ್ಕಲೆಬ್ಬಿಸುವಂತೆ ಇತ್ತೀಚೆಗೆ ತೀರ್ಪಿತ್ತ ವಿಚಾರ ಆ ಜನಸಮುದಾಯಕ್ಕೆ ಭಾರೀ ಆತಂಕವನ್ನೇ ಸೃಷ್ಟಿಸಿ ಬಿಟ್ಟಿದೆ. ಆ ಸಮುದಾಯಗಳ ಇಂತಹ ತುರ್ತು ವಿಚಾರಗಳಿಗೆ ಸರಕಾರ ಗಮನ ಹರಿಸಿಲ್ಲ. ಹಾಗಾಗಿ ಸರಕಾರ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಬಗ್ಗೆ ಹೆಚ್ಚಿನ ಹಣ ಒದಗಿಸಿರುವಂತೆ ತೋರಿಸಿರುವುದು ಕೇವಲ ತೋರುಗಾಣಿಕೆಯಂತೆ ಕಾಣುತ್ತದೆ.

ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ ಎನಿಸುತ್ತದೆ. ಉದ್ಯೋಗಾವಕಾಶಗಳ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಕೃಷಿ ಹಾಗೂ ರೈತರ ಸಮಸ್ಯೆ ಪರಿಹಾರ, ಕೃಷಿಯ ಬೆಳವಣಿಗೆಯ ಬಗ್ಗೆಯಾಗಲೀ ಏನನ್ನೂ ಹೇಳದಿರುವ ಆಯವ್ಯಯವಿದು ಎಂದು ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆಗಳಿಗೆ ನಾಮಮಾತ್ರದ ಹಣಕಾಸು ಅನುದಾನ ನೀಡಿರುವ ವಿಚಾರ ಕೂಡ ವಿವಾದವನ್ನು ಸೃಷ್ಟಿಸಿದೆ. ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ವಾಗ್ದಾನವನ್ನು ಮೋದಿ ಹಿಂದೆ ನೀಡಿದ್ದರೂ ಆಯವ್ಯಯದಲ್ಲಿ ಅದರ ಬಗ್ಗೆ ಚಕಾರವೆತ್ತಿಲ್ಲ. ರಾಷ್ಟ್ರೀಯ ಸ್ವಾಸ್ಥ್ಯಬಿಮಾ ಯೋಜನೆಯಂತಹವುಗಳಿಗೆ 2018-19ರ ಪರಿಷ್ಕೃತ ಅಂದಾಜಿಗಿಂತಲೂ ಶೇ. 48.0 ಕಡಿಮೆ ಹಣ ಒದಗಿಸಲಾಗಿದೆ. ಅದೇ ರೀತಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ 2018-19ರ ಪರಿಷ್ಕೃತ ಅಂದಾಜಿಗಿಂತಲೂ ಶೇ.1.8ರಷ್ಟು ಕಡಿಮೆ ಹಣ ಒದಗಿಸಲಾಗಿದೆ. ರಾಷ್ಟ್ರೀಯ ಕುಟುಂಬ ಅನುಕೂಲತಾ ಯೋಜನೆಗೆ, ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ವೇತನ ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ವಿಕಲಾಂಗ ವೇತನ ಯೋಜನೆಗಳಿಗೆ ತಲಾ ಶೇ 0.4, 1.5, ಹಾಗೂ 4.6ರಷ್ಟು 2018-19ರ ಪರಿಷ್ಕೃತ ಅಂದಾಜಿಗಿಂತಲೂ ಕಡಿಮೆ ಹಣ ಒದಗಿಸಲಾಗಿದೆ. ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟತೆ ಇಲ್ಲದ, ಆದಾಯದ ಮೂಲಗಳನ್ನು ಸ್ಪಷ್ಟಪಡಿಸದ ಆಯವ್ಯಯ ಇದಾಗಿದೆ. ಉತ್ಪಾದನಾ ವಲಯವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಈ ಆಯವ್ಯಯ ಗಮನ ಹರಿಸಿಲ್ಲ. ಈಗಾಗಲೇ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ. 50ರಷ್ಟು ಕೇವಲ ಸೇವಾ ವಲಯದಿಂದಲೇ ಆಗಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ.

ಉತ್ಪಾದನೆ ಇಲ್ಲದ ಆರ್ಥಿಕ ಅಭಿವೃದ್ಧಿ ಎನ್ನುವುದು ಮುಂದೆ ಅರ್ಥ ವ್ಯವಸ್ಥೆಯ ಪೂರ್ಣ ಕುಸಿತಕ್ಕೆ ಕಾರಣವಾಗಬಹುದು. ಆದರೆ ಜನಸಾಮಾನ್ಯರನ್ನು ಮರುಳುಗೊಳಿಸಲು ಪ್ರಯತ್ನಿಸುವ ಹಲವು ಅಂಶಗಳನ್ನು ಸೇರಿಸಲಾಗಿದೆ. ಅದರಲ್ಲಿ ಸ್ವಲ್ಪರೋಚಕವೆನಿಸುವಂತೆ ಇರುವುದು ವಾರ್ಷಿಕ 2 ಕೋಟಿಗಿಂತಲೂ ಹೆಚ್ಚು ಆದಾಯವಿರುವ ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿರುವ ವಿಚಾರ. ಇಲ್ಲಿ ಭಾರತದಲ್ಲಿ ಆದಾಯ ತೆರಿಗೆ ಕಟ್ಟುವವರ ಪ್ರಮಾಣ ಶೇ. 1ರ ಆಜೂಬಾಜೂ ಇದೆಯೆಂಬ ವಿಚಾರ ನಾವು ಮರೆತಾಗ ಮಾತ್ರ ಇದು ರೋಚಕವೆನಿಸುತ್ತದೆ. ಅಲ್ಲದೆ ವಾರ್ಷಿಕ 2 ಕೋಟಿ ರೂ. ಆದಾಯವಿರುವವರೆಂದರೆ ಈಗಿನ ಕಾಲದಲ್ಲಿ ಮೇಲ್ಮಧ್ಯಮ ವರ್ಗವೆಂದು ಗುರುತಿಸಬಹುದೇ ಹೊರತು ಶ್ರೀಮಂತರೆಂದು ಗುರುತಿಸಲಾಗದು. ಇದು ಸರಕಾರಕ್ಕೂ ಗೊತ್ತಿರುವ ವಿಚಾರವೇ. ಹಾಗಾಗಿ ಇದೊಂದು ಆಯವ್ಯಯಕ್ಕೆ ರೋಚಕತೆ ಒದಗಿಸಲು ಮಾತ್ರ ಸೇರಿಸಲಾಗಿದೆ ಎನ್ನಬಹುದು. ಇನ್ನು ಭಾರೀ ಶ್ರೀಮಂತರ ಮೇಲೆ ಶೇ. 40ಕ್ಕಿಂತಲೂ ಹೆಚ್ಚು ತೆರಿಗೆ ವಿಧಿಸಿ ಅದರ ಆದಾಯದಿಂದ ಬ್ಯಾಂಕುಗಳನ್ನು ಪುನರುಜ್ಜೀವನಗೊಳಿಸುವುದು, ಸಣ್ಣ ವ್ಯಾಪಾರ ವ್ಯವಹಾರಗಳನ್ನು ಬೆಂಬಲಿಸಿ ಕುಸಿಯುತ್ತಿರುವ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವುದು ಕೇಂದ್ರ ಸರಕಾರದ ಗುರಿಯಾಗಿದೆ ಎಂದೆಲ್ಲಾ ಹೇಳಿಕೊಳ್ಳಲಾಗಿದೆ. ಅದು ಕೂಡ ಜನರಿಗೆ ರೋಚಕಗೊಳಿಸುವ ಪ್ರಕಟನೆ ಯಾಗಿದೆ. ಲಕ್ಷಾಂತರ ಕೋಟಿ ಅನುತ್ಪಾದಕ ಸಾಲ, ವ್ಯಾಪಕ ಭ್ರಷ್ಟಾಚಾರ, ಪಕ್ಷಪಾತಿ ಧೋರಣೆ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಹೇರಿಕೆ, ಉದ್ಯೋಗ ಹಾಗೂ ಬದುಕಿನ ಭದ್ರತೆಯ ಕುಸಿತ, ಇತ್ಯಾದಿಗಳಿಂದ ಜನಸಾಮಾನ್ಯರ ಮಧ್ಯೆ ಕುಸಿದುಹೋಗಿರುವ ದೇಶದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಮೇಲಿನ ಭರವಸೆಗೆ ಮುಲಾಮು ಹಚ್ಚುವ ಕಾರ್ಯವಾಗಿದೆ. ಅಲ್ಲದೆ ಕಳೆದ 5 ವರ್ಷಗಳ ಮೋದಿ ಸರಕಾರದ ಕಾಲದಲ್ಲಿ ಭಾರೀ ಕಾರ್ಪೊರೇಟು ಪರ ಆಡಳಿತ ಹಾಗೂ ಅನುಸರಿಸಿದ ನೀತಿಗಳನ್ನು ಗಮನಿಸಿದಾಗ ಕೇಂದ್ರ ಸರಕಾರದ ಇಂತಹ ಯಾವ ಪ್ರಕಟನೆಗಳನ್ನೂ ಹಲವರು ನಂಬಲಾರರು.

ಆಯವ್ಯಯ ಮಂಡನೆಯ ಜೊತೆ ಜೊತೆಗೆ ಏರ್ ಇಂಡಿಯಾ ಹಾಗೂ ಭಾರತೀಯ ರೈಲ್ವೆಯನ್ನು ಕಾರ್ಪೊರೇಟುಗಳಿಗೆ ವಹಿಸಿಕೊಡುವ ನಡೆಗಳೂ ಶುರುವಾಗಿವೆ. ಬಿಎಸ್ಸೆನ್ನೆಲ್ ಅನ್ನು ಸಂಪೂರ್ಣವಾಗಿ ನಷ್ಟದಲ್ಲಿ ಮುಳುಗಿಸಿ ಮುಖೇಶ್ ಅಂಬಾನಿಗೆ ಅನುಕೂಲ ಮಾಡುವ ಕೆಲಸಗಳೂ ಮೊದಲಿಗಿಂತಲೂ ಈಗ ಬಿರುಸುಗೊಂಡಿವೆ. ಜೊತೆಗೆ ಭಾರೀ ಕಾರ್ಪೊರೇಟ್‌ಗಳಿಗೆ ಬಂಡವಾಳದ ಕೊರತೆಯಾಗದಂತೆ ನೋಡಿಕೊಳ್ಳಲು ಅನುತ್ಪಾದಕ ಸಾಲದ ಭಾರದಿಂದ ನಷ್ಟದಲ್ಲಿರುವ ಬ್ಯಾಂಕುಗಳನ್ನು ಲಾಭದಲ್ಲಿರುವ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಕಾರ್ಯಗಳು ಕೂಡ ಇನ್ನಷ್ಟು ಬಿರುಸಾಗುತ್ತಿದೆ.

ಆದರೆ ಪ್ರಸ್ತುತ ಬಜೆಟ್‌ನಲ್ಲಿ ಬಿಎಸ್ಸೆನ್ನೆಲ್ ಹಾಗೂ ಎಮ್‌ಟಿಎನ್ನೆಲ್ ಗಳನ್ನು ಪುನರುಜ್ಜೀವನಗೊಳಿಸಲು 14,025.90 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ ಎಂದು ತೋರಿಸಲಾಗಿದೆ. ಆದರೆ ಅದೇ ವೇಳೆಯಲ್ಲಿ ಪ್ರಸ್ತುತ ವರ್ಷದಲ್ಲಿ ಅದಕ್ಕಿರುವ ಆಯವ್ಯಯ ಬೆಂಬಲ ಕೇವಲ 105 ಕೋಟಿಗಳಷ್ಟೇ ಇದೆ. ಅದು ಕೂಡ ದೂರಸಂಪರ್ಕ ಉಪಕರಣಗಳ ತಯಾರಿಕಾ ಕಂಪೆನಿ ಐಐಗಾಗಿದೆ. ಉಳಿದ ಹತ್ತಾರು ಸಾವಿರ ಕೋಟಿ ಹಣಕಾಸನ್ನು ಹೊಂದಿಸುವುದು ಬಾಹ್ಯ ಮೂಲಗಳಿಂದ ಎಂದು ಹೇಳಲಾಗಿದೆ. ಅದು ಭಾರೀ ಕಾರ್ಪೊರೇಟ್ ಮೂಲ ಅಲ್ಲವೆನ್ನಲು ಸಾಧ್ಯವಿಲ್ಲ. ಯಾಕೆಂದರೆ ಇದೇ ಆಯವ್ಯಯ ಪತ್ರದಲ್ಲಿಯೇ ಸಾರ್ವಜನಿಕ ವಲಯವನ್ನು ಅಪಹೂಡಿಕೆ(ಜಿಜ್ಞಿಛಿಠಿಞಛ್ಞಿಠಿ) ಮಾಡಿ ಅದರಿಂದ ಸುಮಾರು 47 ದಶಲಕ್ಷ ಡಾಲರುಗಳ ಅಂದರೆ 3.25 ಟ್ರಿಲಿಯನ್ ಭಾರತೀಯ ರೂಪಾಯಿಗಳಷ್ಟು ಹಣಕಾಸು ಮೊತ್ತವನ್ನು ಸಂಗ್ರಹಿಸಲಾಗುವುದು ಎಂದು ಸರಕಾರ ಹೇಳಿಕೊಂಡಿದೆ. ಮೋದಿ ಸರಕಾರ ಕಳೆದ ಅಧಿಕಾರಾವಧಿಯಲ್ಲೇ 40.92 ದಶಲಕ್ಷ ಡಾಲರುಗಳಷ್ಟು ಮೌಲ್ಯದ ಹಣವನ್ನು ಅಪಹೂಡಿಕೆ ಮಾಡಿತ್ತು. ಇದು ಇದುವರೆಗಿನ ಅತೀ ಹೆಚ್ಚಿನ ದಾಖಲೆಯ ಅಪಹೂಡಿಕೆಯಾಗಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ 2009-2014ರ ವರೆಗಿನ ಅವಧಿಯಲ್ಲಿ 14.52 ದಶಲಕ್ಷ ಡಾಲರುಗಳಷ್ಟು ಅಪಹೂಡಿಕೆ ಮಾಡಿತ್ತು.

ಉಳಿದ ಹಣಕಾಸನ್ನು ಆಯವ್ಯಯೇತರ ಮೂಲಗಳಿಂದ ಹೊಂದಿಸಲಾಗುವು ದೆಂದು ಹೇಳಲಾಗುತ್ತಿದೆ. ಇತರ ಮೂಲಗಳೆಂದಾಗ ಅದು ಹಲವು ಅನುಮಾನಗಳಿಗೆ ಸಹಜವಾಗಿ ಕಾರಣವಾಗುತ್ತದೆ. ಈಗಾಗಲೇ ಬಿಎಸ್ಸೆನ್ನೆಲ್‌ನ ಗೋಪುರಗಳನ್ನು ಮುಖೇಶ್ ಅಂಬಾನಿಯ ಜಿಯೋಗೆ ವಹಿಸಿಕೊಡುವ ಮಾತುಗಳು ಹೊರಬಿದ್ದಿವೆ. ಅಲ್ಲದೇ ಜಿಯೋ ಆಗುವ ಖರ್ಚಿಗಿಂತಲೂ ಕಡಿಮೆ ದರ ನಿಗದಿ ಮಾಡಿ ದೊಡ್ಡ ಮಟ್ಟದ ಅನಾರೋಗ್ಯಕರ ಪೈಪೋಟಿ ನೀಡಿ ದೂರಸಂಪರ್ಕ ರಂಗದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಹೊರಟಿರು ವುದು ಅಲ್ಲದೆ ಅದಕ್ಕೆ ಮೋದಿ ಸರಕಾರದ ನೇರ ಬೆಂಬಲ ಇರುವುದು ಕೂಡ ಬಹಿರಂಗ ಸತ್ಯ. ದೂರ ಸಂಪರ್ಕ ನಿಯಂತ್ರಣ ಪಾಧಿಕಾರ (ಟ್ರಾಯ್)ವಾಗಲೀ, ಭಾರತೀಯ ಪೈಪೋಟಿ ಆಯೋಗವಾಗಲೀ ಈ ಬಗ್ಗೆ ಯಾವ ಕ್ರಮಗಳನ್ನೂ ಇದುವರೆಗೆ ತೆಗೆದುಕೊಂಡ ಬಗ್ಗೆ ತಿಳಿದು ಬಂದಿಲ್ಲ. ಹಾಗಾಗಿ ಬಿಎಸ್ಸೆನ್ನೆಲ್ ಪುನರುಜ್ಜೀವನ ಯೋಜನೆಯೆನ್ನುವುದು ಭಾರೀ ಕಾರ್ಪೊರೇಟ್ ಪರ ನೀತಿಯ ಭಾಗವಲ್ಲ ಎನ್ನಲಾಗದು. ಅಂದರೆ ಸರಕಾರಿ ಹಿಡಿತವಿರುವ ಸಾರ್ವಜನಿಕರಂಗವನ್ನು ಸಂಪೂರ್ಣವಾಗಿ ಭಾರೀ ಕಾರ್ಪೊರೇಟ್‌ಗಳಿಗೆ ಮಾರುವ ಕೆಲಸವನ್ನೇ ಮುಂದಿನ ಐದು ವರ್ಷಗಳಲ್ಲಿ ಮೋದಿ ಸರಕಾರ ಪ್ರಧಾನವಾಗಿ ಮಾಡುವುದು ಎಂದೇ ಅರ್ಥ. ಈಗಾಗಲೇ 10ರಷ್ಟು ಸಾರ್ವಜನಿಕರಂಗದ ಉದ್ದಿಮೆಗಳನ್ನು ಖಾಸಗೀಕರಿಸಲು ಪಟ್ಟಿ ಮಾಡಲಾಗಿದೆ ಎಂದು ಅಧಿಕೃತ ವರದಿಗಳು ಹೇಳುತ್ತವೆ.

ಅಲ್ಲದೇ ಟಿಎಚ್‌ಡಿಸಿ ಇಂಡಿಯಾ, ಮಝಗನ್ ಶಿಪ್ ಬಿಲ್ಡರ್ಸ್, ಗೋವಾ ಶಿಪ್ ಯಾರ್ಡ್, ಎನ್‌ಇಇಪಿಸಿಒ ಲಿಮಿಟೆಡ್, ವಾಟರ್ ಆ್ಯಂಡ್ ಪವರ್ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಎಫ್‌ಸಿಐ ಅರಾವಳಿ ಜಿಪ್ಸಂ ಮೊದಲಾದ ಸರಕಾರಿ ಕಂಪೆನಿಗಳನ್ನು ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸಲು ಮುಂದಿನ ಪಟ್ಟಿಯಲ್ಲಿ ಸೇರಿಸಲು ತಯಾರಿ ನಡೆದಿದೆ.

ಇದಕ್ಕೆ ಪೂರಕವೆನ್ನುವಂತೆ ಎಲ್ಲಾ ಕಾರ್ಮಿಕ ಕಾಯ್ದೆಗಳನ್ನು ವಿಲೀನಗೊಳಿಸಿ ಒಂದೇ ಕಾಯ್ದೆಯನ್ನಾಗಿ ಮಾಡಿ ಕಾರ್ಪೊರೇಟ್‌ಗಳಿಗೆ ಹಿಂದಿದ್ದ ಅಲ್ಪಸ್ವಲ್ಪಕಾನೂನು ಕಗ್ಗಂಟುಗಳನ್ನು ಬಿಡಿಸಿ ಸರಳಗೊಳಿಸಿ ಕೊಡಲಾಗುತ್ತಿದೆ. ಅಂದರೆ ಕಾರ್ಮಿಕರಿಗಿದ್ದ ಅಲ್ಪಸ್ವಲ್ಪಕಾನೂನು ರಕ್ಷಣೆಯನ್ನು ಕೂಡ ಇಲ್ಲವಾಗಿಸಲಾಗುತ್ತಿದೆ. ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸುವುದನ್ನು ತಡೆಯಲು, ಹೆರಿಗೆ ರಜೆ, ಹೆರಿಗೆ ಭತ್ತೆ ಹೆಚ್ಚಳಗಳಿಗೆ ಅನುಕೂಲವಾಗುವಂತೆ ಅದನ್ನು ಮಾಡಲಾಗುತ್ತದೆ ಎನ್ನಲಾಗುತ್ತಿದ್ದರೂ ಅದು ವಾಸ್ತವದಲ್ಲಿ ಮಕ್ಕಳು ಹಾಗೂ ಮಹಿಳೆಯರನ್ನು ಹೆಚ್ಚು ಹೆಚ್ಚುಕೆಲಸಗಳಲ್ಲಿ ತೊಡಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ತಿದ್ದುಪಡಿಗಳು ಅಸ್ಪಷ್ಟತೆಗಳಿಂದ ಕೂಡಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತವನ್ನು ಜಾಗತಿಕ ವ್ಯಾಪಾರಿ ಸ್ನೇಹಿ ದೇಶವಾಗಿ ಮಾರ್ಪಡಿಸುವ ಉದ್ದೇಶಗಳನ್ನು ಈ ತಿದ್ದುಪಡಿಗಳು ಹೊಂದಿವೆ, ಭಾರತದ ಕಾರ್ಮಿಕ ಮಾರುಕಟ್ಟೆಯನ್ನು ವಿದೇಶಿ ನೇರ ಬಂಡವಾಳಕ್ಕೆ ಪೂರಕವಾಗಿರುವಂತೆ ಮಾಡಲಾಗುತ್ತಿದೆ ಎಂದೆಲ್ಲಾ ಸರಕಾರವೇ ಹೇಳಿಕೊಂಡಿರುವುದರಿಂದ ಭಾರೀ ಕಾರ್ಪೊರೇಟ್ ಪರ ಉದ್ದೇಶವೇ ಈ ತಿದ್ದುಪಡಿಗಳಿಗಿರುವುದು ಎನ್ನಲು ಬೇರೆ ಉದಾಹರಣೆ ಬೇಕಿಲ್ಲ.

ಇವೆಲ್ಲವನ್ನೂ ದೇಶೀಯ ಸ್ವಾವಲಂಬನೆ ಹಾಗೂ ದೇಶೀಯ ಉತ್ಪಾದಕತೆ ಯನ್ನು ಉತ್ತೇಜಿಸುವ ಬದಲು ವಿದೇಶಿ ನೇರ ಬಂಡವಾಳ ಹರಿದುಬರುವಂತೆ ಅನುಕೂಲ ಮಾಡಿಕೊಡಲು ಎಂದಾಗ ಸಹಜವಾಗಿ ಕಾರ್ಮಿಕರು ತಮ್ಮ ಇದುವರೆಗೂ ಇದ್ದ ಕಾನೂನು ರಕ್ಷಣೆಗಳನ್ನೂ ಕಳೆದುಕೊಳ್ಳುತ್ತಾರೆಂದೇ ಅರ್ಥ.
ಇದಲ್ಲದೆ ಭೂ ಸ್ವಾಧೀನವನ್ನು ಸುಗಮಗೊಳಿಸುವ ಹೊಸ ತಿದ್ದುಪಡಿಗ ಳೊಂದಿಗೆ ಭೂಮಸೂದೆಯನ್ನು ಜಾರಿಗೆ ತರಲು ಹೊರಟಿದ್ದಾರೆ. ಇದಕ್ಕೆ ಕಾಂಗ್ರೆಸ್ ನೀಡಿರುವ ಪ್ರಸ್ತಾವನೆಗಳನ್ನು ಸೇರಿಸಲು ಮೋದಿ ಸರಕಾರ ಒಪ್ಪಿರುವುದರಿಂದ ಆ ಪಕ್ಷ ಕೂಡ ಇದನ್ನು ಬೆಂಬಲಿಸುತ್ತದೆ ಎಂದು ಹೇಳಿಕೊಂಡಿದೆ. ಈ ನಡೆ ಕೂಡ ಭಾರೀ ಕಾರ್ಪೊರೇಟ್ ಪರವೇ ಆಗಿದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.

ಆರ್ಥಿಕ ರಂಗದಲ್ಲಿ, ಕಂಪೆನಿಗಳ ಹಾಗೂ ಕಾರ್ಮಿಕ ಕಾನೂನು ರಂಗದಲ್ಲಿ ಭಾರೀ ಮಾರ್ಪಾಟುಗಳನ್ನು ತರುತ್ತಲೇ ದೇಶದ ರಾಜಕೀಯದ ಮೇಲೆ ಪೂರ್ಣ ಹಿಡಿತ ಸಾಧಿಸಲು ಸಂಘಪರಿವಾರದ ಬಿಜೆಪಿ ಇನ್ನಿಲ್ಲದ ಎಲ್ಲಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದೆ. ದಕ್ಷಿಣ ಭಾರತದಲ್ಲಿ ಒಂದು ಮಟ್ಟದಲ್ಲಿ ಕರ್ನಾಟಕ ಬಿಟ್ಟರೆ ಬೇರೆಡೆ ಅದಕ್ಕೆ ಅಸ್ತಿತ್ವ ನಾಮ ಮಾತ್ರದ್ದಾಗಿದೆ. ಹಾಗಾಗಿ ಎಲ್ಲಾ ವಾಮಮಾರ್ಗಗಳನ್ನು ಅದು ಬಳಸುತ್ತಿದೆ. ಕರ್ನಾಟಕ ಹಾಗೂ ಗೋವಾದ ಅಧಿಕಾರ ರಾಜಕಾರಣದಲ್ಲಿನ ಈಗಿನ ಬೆಳವಣಿಗೆಗಳು ವಾಕರಿಕೆ ಬರುವಷ್ಟು ಅಸಹ್ಯವಾಗಿ ಬೀದಿಗೆ ಬಂದಿದೆ. ಕಾನೂನು, ಸಂವಿಧಾನ, ವಿಧಾನ ಮಂಡಲ ಹಾಗೂ ಅವರು ಪ್ರತಿಪಾದಿಸುವ ಪ್ರಜಾಪ್ರಭುತ್ವದ ಯಾವ ನಿಯಮಗಳನ್ನೂ ಪಾಲಿಸಲು ಸಾಧ್ಯವಿಲ್ಲದಂತಹ ಸ್ಥಿತಿ ಅವರದಾಗಿದೆ. ಇದು ಕೇವಲ ಬಿಜೆಪಿ ಪಕ್ಷದ ವಿಚಾರ ಮಾತ್ರವಲ್ಲ. ಅಧಿಕಾರ ರಾಜಕಾರಣದ ಎಲ್ಲಾ ರಾಜಕೀಯ ಪಕ್ಷಗಳ ಕತೆಯೂ ಹೆಚ್ಚೂ ಕಡಿಮೆ ಇದೇ ಆಗಿದೆ. ಇಂತಹ ಆರ್ಥಿಕ ಹಾಗೂ ಅಧಿಕಾರ ರಾಜಕೀಯಗಳ ಭಾರೀ ಡೋಲಾಯಮಾನ ಹಾಗೂ ಅನಿಶ್ಚಿತ ಸ್ಥಿತಿಯಲ್ಲಿ ಜನಸಾಮಾನ್ಯರು ಸಕ್ರಿಯರಾಗಿ ತಮ್ಮ ಪಾತ್ರ ವಹಿಸಲು ಹಿಂಜರಿದರೆ ಯಾವ ರಕ್ಷಣೆಯೂ ಇರಲು ಸಾಧ್ಯವಿಲ್ಲ. ಜನಸಾಮಾನ್ಯರು ಸಂಘಟಿತ ರೂಪದಲ್ಲಿ ಇದನ್ನೆಲ್ಲ ಅರ್ಥ ಮಾಡಿಕೊಂಡು ಕಾರ್ಯಶೀಲರಾಗದೇ ಇದ್ದರೆ ಪರಿಣಾಮ ಭೀಕರ.


ಮಿಂಚಂಚೆ: nandakumarnandana67gmail.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top