ವಂಚನೆಯ ಮತ್ತೊಂದು ಮಾರ್ಗ | Vartha Bharati- ವಾರ್ತಾ ಭಾರತಿ

ವಂಚನೆಯ ಮತ್ತೊಂದು ಮಾರ್ಗ

ಅವಕಾಶಗಳ ಬಳಕೆಗಳಿಗೆ ಪೂರಕವಾದ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳದೆ ಕೇವಲ ‘ಸ್ವಭಾವ ಬದಲಾವಣೆ’ಗಳ ಬಗ್ಗೆ ಮಾತ್ರ ಮಾತಾಡುವುದು ದುರುದ್ದೇಶಪೂರಿತವಾದದ್ದು.


ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರಕಾರವೊಂದು ಹಿಂದಿಗಿಂತಲೂ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಕಾರಣದಿಂದಾಗಿ 2018-19ರ ಆರ್ಥಿಕ ಸಮೀಕ್ಷೆಯು ತನ್ನ ವರದಿಯಲ್ಲಿ ಸರಕಾರದ ಆಡಳಿತ ನಿರ್ವಹಣೆಗೆ ಉದ್ದೇಶಪೂರ್ವಕವಾಗಿ ‘ಮಾನವೀಯ ಮುಖವಾಡ’ವನ್ನು ತೊಡಿಸುತ್ತಿದೆಯೇ ಎಂಬ ಅನುಮಾನ ಆ ವರದಿಯನ್ನು ನೋಡಿದ ಯಾರಿಗಾದರೂ ಮೂಡುತ್ತದೆ. ಜನಸಾಮಾನ್ಯರೆಂಬವರು ಕೇವಲ ‘ಆರ್ಥಿಕ ಮನುಷ್ಯ’ರೆಂದು ಕರೆಯಲ್ಪಡುವ ತಾರ್ಕಿಕ ಉಪಭೋಗಿಗಳಲ್ಲ. ಬದಲಿಗೆ ರಕ್ತ-ಮಾಂಸ ಮತ್ತು ಮನುಷ್ಯ ಸಹಜ ಅತಾರ್ಕಿಕ ತಪ್ಪುಗಳನ್ನು ಮಾಡಬಲ್ಲ ‘ಮನುಷ್ಯ ಜೀವಿಗಳು’ ಮತ್ತು ಅವರಿಗೆ ದೇಶದಲ್ಲಿ ಸಕಾರಾತ್ಮಕ ಸಾಮಾಜಿಕ-ಆರ್ಥಿಕ ಬದಲಾವಣೆ ತರಬಲ್ಲ ಆಯ್ಕೆಯನ್ನು ಮಾಡಲು ಉತ್ತೇಜನ ನೀಡುವ ಅಗತ್ಯವಿರುತ್ತದೆ ಎಂಬುದು ಹೊಸ ತಿಳುವಳಿಕೆಯೇನಲ್ಲ. ಮನುಷ್ಯ ಸ್ವಭಾವದ ಅಧ್ಯಯನವು ಕೊಡುವ ಈ ಒಳನೋಟಗಳನ್ನು ಜಗತ್ತಿನ ಹಲವಾರು ದೇಶಗಳು ಕಳೆದೊಂದು ದಶಕದಿಂದ ತಮ್ಮ ನೀತಿ-ನಿರೂಪಣೆಗಳ ಅಂತರ್ಗತ ಭಾಗವನ್ನಾಗಿ ಮಾಡಿಕೊಳ್ಳುತ್ತಿವೆ. ಇದರ ಹಿಂದಿನ ಉದ್ದೇಶವೆಂದರೆ ಸರಕಾರದ ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ನಾಗರಿಕರ ಪಾಲುದಾರಿಕೆಯನ್ನು ಹೆಚ್ಚಿಸುತ್ತಾ ಅವರಲ್ಲಿ ಸಕಾರಾತ್ಮಕ ಸ್ವಭಾವ-ಬದಲಾವಣೆಯನ್ನು ಮೈಗೂಡಿಸಿಕೊಳ್ಳುವ ಕಡೆಗೆ ದೂಡುವುದಾಗಿದೆ.

ಹಾಲಿ ಸರಕಾರವು ತನ್ನ ‘ಸ್ವಚ್ಛ ಭಾರತ್’ ಅಥವಾ ‘ ಬೇಟಿ ಬಚಾವೋ-ಬೇಟಿ ಪಢಾವೋ’ದಂಥ ಯೋಜನೆಗಳ ಮೂಲಕ ಜನರಲ್ಲಿ ಅಂಥ ಸಕಾರಾತ್ಮಕ ಸ್ಪಂದನೆಗಳನ್ನು ಮೂಡಿಸಿದೆಯೆಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ಆ ಯೋಜನೆಗಳ ಭೌಗೋಳಿಕ ವ್ಯಾಪ್ತಿಯು ಒಂದಷ್ಟು ಸಮರ್ಥನೆಗಳನ್ನುಒದಗಿಸಬಹುದಾದರೂ ಫಲಾನುಭವಿಗಳ ಮಟ್ಟದ ಪುರಾವೆಗಳು ಮಾತ್ರ ಪರಸ್ಪರ ತದ್ವಿರುದ್ಧವಾದ ಕಥಾನಕಗಳನ್ನು ಒದಗಿಸುತ್ತವೆ. ಉದಾಹರಣೆಗೆ 2018-19ರ ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆಯು ಮಾಡಿರುವ ಸ್ವಚ್ಛ ಭಾರತ್ ಯೋಜನೆಯ ಮೌಲ್ಯಮಾಪನದ ಪ್ರಕಾರ ಶೌಚಾಲಯ ಹೊಂದಿರುವ ಶೇ.93ರಷ್ಟು ಗ್ರಾಮೀಣ ವಸತಿಗಳಲ್ಲಿ ಶೇ.96.5ರಷ್ಟು ಜನ ಅದನ್ನು ಬಳಸುತ್ತಿದ್ದಾರೆ. ಹೀಗಾಗಿ ಭಾರತದ ಶೇ.90.7ರಷ್ಟು ಹಳ್ಳಿಗಳು ಈಗ ಬಯಲು ಶೌಚಾಲಯ ಮುಕ್ತವಾಗಿವೆ. ಆದರೆ ಭಾರತದ ಮಹಾಲೇಖಪಾಲರು ಈ ಲೆಕ್ಕಾಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೌಚಾಲಯ ಮುಕ್ತ ಗ್ರಾಮ ಯೋಜನೆಯ ಮಾನದಂಡಗಳನ್ನು ಅನ್ವಯಿಸಿದಾಗ ಮನೆಗಳ ಮಟ್ಟದಲ್ಲಿ ಶೌಚಾಲಯ ಬಳಕೆಯನ್ನು ಮತ್ತು ಅದಕ್ಕಾಗಿ ಒದಗಿಸಿದ ಹಣದಿಂದ ಕಟ್ಟಿದ ಶೌಚಾಲಯವನ್ನು ಮಾತ್ರ ಲೆಕ್ಕ ಹಾಕಿ ಬಯಲು ಶೌಚ ಮುಕ್ತ ಸಾಧನೆಯನ್ನು ಹೇಗೆ ತೋರಿಸಲು ಸಾಧ್ಯ ಎಂದು ಅವರು ತಮ್ಮ 2017-18ರ ವರದಿಯಲ್ಲಿ ಪ್ರಶ್ನಿಸಿದ್ದಾರೆ.

ಸ್ವಚ್ಛ ಭಾರತ ಯೋಜನೆಯ ಮಾನದಂಡಗಳ ಪ್ರಕಾರ ಒಂದು ಗ್ರಾಮವನ್ನು ಬಯಲು ಶೌಚಮುಕ್ತವೆಂದು ಘೋಷಿಸಬೇಕೆಂದರೆ ಗ್ರಾಮದ ಸುತ್ತಮುತ್ತಲಲ್ಲಿ ಎಲ್ಲೂ ಮಲವಿಸರ್ಜನೆಯಾಗಿರಬಾರದು ಮತ್ತು ಶೌಚಾಲಯದಲ್ಲಿ ಸಂಗ್ರಹದ ಮಲವನ್ನು ವಿಲೇವಾರಿ ಮಾಡಲು ಮನೆಯ ಮಟ್ಟದಲ್ಲಿ ಮತ್ತು ಸಾರ್ವಜನಿಕ ಅಥವಾ ಸಮುದಾಯ ಮಟ್ಟದಲ್ಲಿ ಸುರಕ್ಷಿತ ತಂತ್ರಜ್ಞಾನವನ್ನು ಬಳಸುತ್ತಿರಬೇಕು. ಆ ಯೋಜನೆಯ ಇಡೀ ಮಾರ್ಗದರ್ಶಿ ಸೂತ್ರಗಳಲ್ಲಿ ಒಳ ಶೌಚಾಲಯವನ್ನು ಬಳಸಿದರೆ ಸಾಕು ಅದನ್ನು ಬಯಲು ಶೌಚ ಮುಕ್ತವೆಂದು ಘೋಷಿಸಬಹುದೆಂದು ಎಲ್ಲಿಯೂ ಹೇಳಲಾಗಿಲ್ಲ. ಇದೇ ಬಗೆಯ ವೈರುಧ್ಯಮಯವಾದ ಉದಾಹರಣೆಗಳು ‘ಬೇಟಿ ಬಚಾವೋ-ಬೇಟಿ ಪಢಾವೋ’ ಯೋಜನೆಯಲ್ಲೂ ಹೇರಳವಾಗಿ ಲಭ್ಯವಾಗುತ್ತದೆ. ಉದಾಹರಣೆಗೆ ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ರಾಜಸ್ಥಾನದ ಬಿಜೆಪಿಯು ‘ಹೆಣ್ಣುಮಗುವಿನ ಶಿಕ್ಷಣಕ್ಕೆ ಸಹಕರಿಸಲು’ ಆ ರಾಜ್ಯದ ಹನುಮಾನ್‌ಘರ್ ಜಿಲ್ಲೆಯನ್ನು ದತ್ತು ತೆಗೆದುಕೊಂಡಿತ್ತು.

‘ಬೇಟಿ ಬಚಾವೋ-ಬೇಟಿ ಪಢಾವೋ’ ಯೋಜನೆಯ ಪ್ರಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದೆಂದರೆ ಶಿಕ್ಷಕರ ತರಬೇತಿ, ಶಾಲೆಯಲ್ಲಿ ನಿರ್ಮಲವಾದ ಶೌಚಾಲಯ ಮತ್ತು ಹೆಣ್ಣು ಮಕ್ಕಳು ಶಾಲೆಗೆ ಬಂದುಹೋಗಲು ವಾಹನ ಸೌಕರ್ಯಗಳಿರಬೇಕಾದದ್ದು ಕಡ್ಡಾಯ. ಆದರೆ ಬಿಜೆಪಿ ದತ್ತು ತೆಗೆದುಕೊಂಡಿದ್ದ ಜಿಲ್ಲೆಯು ಈ ಯಾವ ಮಾನದಂಡಗಳಲ್ಲೂ ಪ್ರಗತಿಯನ್ನು ಸಾಧಿಸಿರಲಿಲ್ಲ. ಆದರೆ ಜಿಲ್ಲಾ ಶಿಕ್ಷಣ ಇಲಾಖೆಯು ಮಾತ್ರ 2016-17ರಲ್ಲಿ 56,038 ಹೆಣ್ಣುಮಕ್ಕಳು ಶಾಲೆಯಲ್ಲಿ ನೋಂದಾಯಿತರಾಗಿದ್ದರೆ 2018-19ರ ಸಾಲಿನಲ್ಲಿ ಅದು 95,469ಕ್ಕೆ ಹೆಚ್ಚಿತು ಎಂಬ ಪುರಾವೆಯನ್ನು ಒದಗಿಸಿದೆ. ಆದರೆ ಅದೇ ಅವಧಿಯಲ್ಲಿ ಎಷ್ಟು ಹೆಣ್ಣು ಮಕ್ಕಳು ಶಾಲೆಯನ್ನು ತೊರೆದರು ಎಂಬ ಅಂಕಿಸಂಖ್ಯೆಯನ್ನು ಮಾತ್ರ ಅವರು ಉಲ್ಲೇಖಿಸಿಲ್ಲ.

ವಿಪರ್ಯಾಸವೆಂದರೆ 2014ರ ನಂತರ ಹೆಣ್ಣುಮಕ್ಕಳು ಶಾಲೆಯನ್ನು ತೊರೆಯುತ್ತಿರುವವರ ಸಂಖ್ಯೆ ರಾಜಸ್ಥಾನದಲ್ಲಿ ಹೆಚ್ಚಾಗುತ್ತಿದೆೆ. ಇದಕ್ಕೆ ಅಲ್ಲಿನ ಬಿಜೆಪಿ ಸರಕಾರವು ಅಸ್ತಿತ್ವದಲ್ಲಿದ್ದ ಶೇ.20ರಷ್ಟು ಶಾಲೆಗಳನ್ನು ಹತ್ತಿರದ ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸಿದ್ದೇ ಕಾರಣ. ವಿಲೀನಗೊಂಡ ಶಾಲೆ ದೂರದಲ್ಲಿದ್ದರೆ ಶಾಲೆ ತೊರೆಯುವವರಲ್ಲಿ ಹೆಣ್ಣುಮಕ್ಕಳೇ ಜಾಸ್ತಿ. ಏಕೆಂದರೆ ಹೆಣ್ಣುಮಕ್ಕಳ ಪೋಷಕರು ಹಲವಾರು ಸಾಮಾಜಿಕ-ಸಾಂಸ್ಕೃತಿಕ ಕಾರಣಗಳಿಂದಾಗಿ ಹೆಣ್ಣುಮಕ್ಕಳನ್ನು ದೂರದೂರಿಗೆ ಶಾಲೆ ಕಲಿಯಲು ಕಳಿಸುವುದಿಲ್ಲ. ಇಂತಹ ಪುರಾವೆಗಳು ರಾಚುವಂತೆ ಕಣ್ಣ ಮುಂದಿರುವಾಗ ಆರ್ಥಿಕ ಸಮೀಕ್ಷೆಯು ಅಥವಾ ಸರಕಾರವು ಪದೇಪದೇ ಪ್ರತಿಪಾದಿಸುವ ಸ್ವಭಾವ ಬದಲಾವಣೆಯ ಅಧಿಕೃತತೆಯ ಮೇಲೆ ವಿಶ್ವಾಸ ಹುಟ್ಟುವುದು ಕಷ್ಟ. ಹೆಚ್ಚೆಂದರೆ ಇಂತಹ ಯೋಜನೆಗಳ ಆಡಂಬರದ ಉದ್ಘಾಟನಾ ಕಾರ್ಯಕ್ರಮಗಳು ಸಿಹಿ ಹಂಚಿಕೆಗಳು, ಪ್ರಮಾಣ ಪತ್ರ ವಿತರಣೆಗಳು, ಸಂಬಂಧಪಟ್ಟ ಸಾರ್ವಜನಿಕ ಕಾರ್ಯಕ್ರಮಗಳು, ಬೈಕ್ ಮೆರವಣಿಗೆಗಳು, ಸ್ಪರ್ಧೆಗಳು ಮೂಡಿಸುವ ಭಾವನೆಗಳಲ್ಲಿ ಬದಲಾವಣೆಯಾಗಿರಬಹುದೇ ವಿನಃ ತಳಮಟ್ಟದಲ್ಲಿ ಬದಲಾವಣೆ ತರಬಹುದಾದ ಯಾವ ಕ್ರಮಗಳೂ ಜಾರಿಯಾಗಿಲ್ಲ.

ಹಾಗಿದ್ದಲ್ಲಿ ಸಾಮಾಜಿಕ ಆರ್ಥಿಕ ಬದಲಾವಣೆಯನ್ನು ಸ್ವಾಗತಿಸುವಂಥ ರೀತಿಯಲ್ಲಿ ಜನರ ಸ್ವಭಾವದಲ್ಲಿ ಬದಲಾವಣೆಯನ್ನು ಉತ್ತೇಜಿಸುವ ಕ್ರಮಗಳಿಗೂ ಹಾಗೂ ಜನರ ಸಾರ್ವಜನಿಕ ವರ್ತನೆಗಳನ್ನು ರಾಜಕೀಯ ಲಾಭಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುವಂಥ ಕ್ರಮಗಳಿಗೂ ನಡುವೆ ವ್ಯತ್ಯಾಸವೇನಿರುತ್ತದೆ? ಉದಾಹರಣೆಗೆ ಹೆಂಗಸರ ಓಡಾಟಗಳ ಮೇಲೆ ಸಮಾಜದ ಸಂಪ್ರದಾಯಗಳು ಹೇರುವ ಕಟ್ಟುಪಾಡುಗಳಿಂದಾಗಿ ಬೇಟಿ ಪಢಾವೋ ಯೋಜನೆಯ ಮೂಲಕ ಹೆಣ್ಣುಮಕ್ಕಳು ಸೈಕಲ್ ಪಡೆದುಕೊಳ್ಳುವ ಯೋಜನೆಯ ಫಲಾನುಭವಿಯಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಬದಲಿಗೆ ಆ ಸೈಕಲನ್ನು ಆ ಮನೆಯ ಇತರ ಸದಸ್ಯರು ಬಳಸುವಂತಾಗುತ್ತದೆ ಮತ್ತು ಆ ಮೂಲಕ ಅವರ ರಾಜಕೀಯ ಪಕ್ಷಗಳ ಆಯ್ಕೆಯೂ ಪ್ರಭಾವಿತವಾಗುತ್ತದೆ. ವ್ಯಕ್ತಿಯ ಸ್ವಭಾವ ಮತ್ತು ವರ್ತನೆಗಳು ಸಾಮಾಜಿಕ-ಸಾಂಸ್ಕೃತಿಕ ಪದ್ಧತಿಗಳಲ್ಲಿ ಆಳವಾದ ಬೇರುಗಳನ್ನು ಹೊಂದಿರುವಂತಹ ನಮ್ಮ ದೇಶದಲ್ಲಿ ಹಣಕಾಸು ಸಹಾಯ, ಹಣಕಾಸು ವರ್ಗಾವಣೆಯಂಥ ಕಾರ್ಯಕ್ರಮಗಳು ವ್ಯಕ್ತಿಗಳ ವರ್ತನೆಗಳಲ್ಲಿ ಯಾವುದೇ ಮೂಲಭೂತ ಬದಲಾವಣೆಗಳನ್ನು ತರುವುದಿಲ್ಲ.

ಬದಲಿಗೆ ಅದರ ಫಲಾನುಭವಿಗಳು ಆಳದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳದೆ ಕೇವಲ ಯೋಜನೆಯ ಲಾಭಗಳನ್ನು ಪಡೆಯಲೋಸುಗ ತೋರಿಕೆಯ ಬದಲಾವಣೆಗಳನ್ನು ಪ್ರದರ್ಶಿಸುವಂತೆ ಪ್ರಚೋದಿಸುವ ಮೂಲಕ ಸಾರ್ವಜನಿಕರ ನಡವಳಿಕೆಗಳನ್ನೇ ಭ್ರಷ್ಟಗೊಳಿಸಬಹುದು. ಸೀಮಿತವಾದ ಸಂಪನ್ಮೂಲ, ವ್ಯಾಪ್ತಿ ಮತ್ತು ಸಾಮರ್ಥ್ಯಗಳಿಂದ ಕೂಡಿದ ಸಂದರ್ಭವೊಂದರಲ್ಲಿ ಒಬ್ಬ ಮನುಷ್ಯ ಜೀವಿಯನ್ನು ಒಬ್ಬ ಆರ್ಥಿಕ ಜೀವಿಯಿಂದ ಬೇರ್ಪಡಿಸಿ ನೋಡಲಾಗುವುದಿಲ್ಲ. ಏಕೆಂದರೆ ಅಂತಹ ಸೀಮಿತ ಸಂದರ್ಭಗಳಲ್ಲಿ ತಾನು ಮಾತ್ರ ಉಳಿದುಕೊಳ್ಳುವ ಸಲುವಾಗಿ ಸಮುದಾಯದ ಹಿತಾಸಕ್ತಿಯನ್ನು ಬದಿಗೊತ್ತಿ ಗರಿಷ್ಠ ಮಟ್ಟದಲ್ಲಿ ತನ್ನ ಸ್ವಾರ್ಥ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುವ ಕಡೆಗೆ ವ್ಯಕ್ತಿಗಳು ತಳ್ಳಲ್ಪಡುತ್ತಾರೆ. ಆಳುವ ಸರಕಾರ ಈ ನೈಜ ವಾಸ್ತವಗಳ ಬಗ್ಗೆ ಸರಿಯಾದ ಮೌಲ್ಯಂದಾಜನ್ನು ಮಾಡಿಲ್ಲ ಅಥವಾ ಆರ್ಥಿಕ ಅವಕಾಶಗಳನ್ನು, ಹಕ್ಕುಗಳನ್ನು ಮತ್ತು ಸಾಮರ್ಥ್ಯಗಳನ್ನೂ ವಿಸ್ತರಿಸುವಂತಹ ಯಾವ ಯೋಜನೆಗಳಿಗೂ ಮುಂದಾಗಿಲ್ಲ. ಅದೇನನ್ನೂ ಮಾಡದೆ ತನ್ನ ಒತ್ತು ‘ಆರ್ಥಿಕ ಮನುಷ್ಯ’ನಿಂದ ‘ಮನುಷ್ಯ ಜೀವಿ’ಯಾಗಿಸುವ ಕಡೆಗೆ ಮೂಲಭೂತವಾಗಿ ಬದಲಾಗುತ್ತಿದೆ ಎನ್ನುವ ಸರಕಾರದ ಹೆಗ್ಗಳಿಕೆಗಳು ಕೇವಲ ದುರುದ್ದೇಶದಿಂದ ಪೂರಿತವಾಗಿದೆ. ಇನ್ನೆಷ್ಟು ಕಾಲ ಈ ಸರಕಾರವು ತನ್ನ ನಿಷ್ಕ್ರಿಯತೆಯನ್ನು ಇಂತಹ ರಾಜಕೀಯ ಪದಪುಂಜಗಳು ಮತ್ತು ಹೆಸರು ಬದಲಾವಣೆಗಳಂತಹ ಹೀನಾಯವಾದ ತಂತ್ರಗಳ ಹಿಂದೆ ಬಚ್ಚಿಡಲು ಸಾಧ್ಯ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top