ಸಮಾಜದ ಮನಸ್ಸು, ಮೆದುಳನ್ನು ಗೊಡ್ಡು ಮಾಡಲಾಗಿದೆ | Vartha Bharati- ವಾರ್ತಾ ಭಾರತಿ

ಸಮಾಜದ ಮನಸ್ಸು, ಮೆದುಳನ್ನು ಗೊಡ್ಡು ಮಾಡಲಾಗಿದೆ

 ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದೆ. ಈ ಮರೀಚಿಕೆಯಿಂದ ಭಾರತ ಕಳಚಿಕೊಳ್ಳದೆ ಹೋದರೆ ಪರಿಸ್ಥಿತಿ ಕೈಮೀರುತ್ತದೆ. ಆದರೆ ಎಲ್ಲರನ್ನೂ ಕಾಡುವ ಪ್ರಶ್ನೆ ಯಾಕೆ ಜನತೆ ಈ ಮರೆಮೋಸವನ್ನು ನಂಬುತ್ತಿದ್ದಾರೆ? ಈ ದಕ್ಷ ಆಡಳಿತವೆಂಬ ಕಣ್ಕಟ್ಟಿನಿಂದ ಜನತೆಯನ್ನು ಬಿಡುಗಡೆಗೊಳಿಸುವ ಕಾಣ್ಕೆ ಯಾವುದು? ಮೋದಿ 2.0ರ 100 ದಿನಗಳು ನಮ್ಮೆಳಗಿನ ಕಗ್ಗತ್ತಲನ್ನು ಬಯಲು ಮಾಡುತ್ತಿದೆ ಎಂಬುದು ಯಾತಕ್ಕೆ ಅರಿವಿಗೆ ಬರುತ್ತಿಲ್ಲ? ಭಾರತದ ಒಕ್ಕೂಟದ ಅಡಿಪಾಯವೇ ಕುಸಿದು ಬೀಳುತ್ತಿದ್ದರೂ ಬಹುಸಂಖ್ಯಾತರು ಯಾಕೆ ಮಂದಸ್ಮಿತರಾಗಿದ್ದಾರೆ? ಬಹುಶಃ ಈ ಪ್ರಶ್ನೆಗಳಿಗೆ ನೇರವಾದ ಉತ್ತರಗಳು ಇರಲಾರವು. 


ಪೋಲ್ಯಾಂಡ್‌ನ ಮಾರ್ಕ್ಸಿಸ್ಟ್ ಚಿಂತಕ Leszek Kolakowski ‘‘ವೈಯಕ್ತಿಕ ಸ್ವಾತಂತ್ರಕ್ಕೆ ಮಾನವಶಾಸ್ತ್ರೀಯತೆಯ (anthropological) ಅಡಿಪಾಯವಿದೆ. ಇದು ನಾವೆಲ್ಲ ಒಪ್ಪಿಕೊಳ್ಳುವಂತಹ ತತ್ವವಾಗಿದೆ. ಇದನ್ನು ಕೇವಲ ‘ಸಾಬೀತು’ ಎನ್ನುವ ಶಬ್ದದ ಮೂಲಕ ಸಾಬೀತಾಗಿದೆ ಅಥವಾ ಸಾಬೀತಾಗಿಲ್ಲ ಎಂದು ಹೇಳಲು ಸಾದ್ಯವಿಲ್ಲ. ನಿರಂಕುಶ ಪ್ರಭುತ್ವ ಮತ್ತು ಅಧಿಕಾರಶಾಹಿಕರಣದ ಜಂಟಿ ಒತ್ತಡದಿಂದ ಸ್ವಾತಂತ್ರ್ಯವನ್ನ್ನು ದ್ವಂಸಗೊಳಿಸಲು ಸಾಧ್ಯವಿಲ್ಲ. ಮನುಷ್ಯನಾಗುವುದರಲ್ಲೇ ಆ ವೈಯಕ್ತಿಕ ಸ್ವಾತಂತ್ರ್ಯವು ಬೇರು ಬಿಟ್ಟಿದೆ’’ ಎಂದು ಬರೆಯುತ್ತಾನೆ. ಆದರೆ ಮೋದಿ-ಆರೆಸ್ಸೆಸ್‌ನ ನಿರಂಕುಶ ಆಡಳಿತದ ಇಂದಿನ ಭಾರತದಲ್ಲಿ ಆತಂಕದಲ್ಲಿ ಬದುಕುತ್ತ, ಬಹಿರಂಗವಾಗಿ ಸ್ವಾತಂತ್ರ್ಯವಿದೆ ಎಂದು ಭಾವಿಸಿದರೆ ನಾವು ಮನುಷ್ಯತ್ವದ ಸಂವೇದನೆ ಕಳೆದುಕೊಂಡಿದ್ದೇವೆ ಎಂದರ್ಥ. ಔಛಿಠ್ಢಛಿ  ಮತ್ತೊಂದು ಸಂದರ್ಭದಲ್ಲಿ ಹೇಳಿದಂತೆ ‘‘ಸಮಾಜದ ಮನಸ್ಸು, ಮೆದುಳನ್ನು ಗೊಡ್ಡು (sterilization) ಮಾಡಲಾಗಿದೆ.’’

ಇಂದು ಭಾರತ ದೇಶವನ್ನು ಗೊಡ್ಡುಗೊಳಿಸಿ ಆಡಳಿತ ನಡೆಸುತ್ತಿರುವ ಮೋದಿ 2.0 ಸರಕಾರಕ್ಕೆ 100 ದಿನ ತುಂಬಿದೆಯಂತೆ. ಈ ಕುರಿತು ಅವರವರ ‘ಭಕುತಿ’ಗೆ ತಕ್ಕಂತೆ ಅಭಿಪ್ರಾಯಗಳು, ಬರಹಗಳು ಪುಂಖಾನುಪುಂಖವಾಗಿ ಬರುತ್ತಿವೆ. ಈ ಕುರಿತು ಬರೆಯುತ್ತ ಅಶೋಕ ವಿವಿಯ ಉಪಕುಲಪತಿ ಪ್ರತಾಪ್ ಬಾನು ಮೆಹ್ತಾ ಅವರು (2014ಕ್ಕೂ ಮುಂಚೆ ಮೋದಿ ಬೆಂಬಲಿಗರಾಗಿದ್ದರು) ‘‘ಮೋದಿ ಆಡಳಿತ ತುಂಬಾ ಜನಪ್ರಿಯವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ, ಇವರು ನಮ್ಮ ಮನಸ್ಸನ್ನು ಎಷ್ಟರ ಮಟ್ಟಿಗೆ ಕಲೋನೈಸ್ ಮಾಡಿದ್ದಾರೆಂದರೆ ಇವರ ವಿರುದ್ಧ ಟೀಕೆಯೂ ಸಹ ಮೋದಿಯ ಪ್ರಾಮುಖ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಎರಡನೆಯದಾಗಿ ಈ ಆಡಳಿತದ ನಿರಂಕುಶ ಉಕ್ಕಿನ ಹಿಡಿತ ಮತ್ತಷ್ಟು ಪ್ರಬಲವಾಗಿದೆ ಮತ್ತು ಅಬಾಧಿತವಾಗಿದೆ. ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಶೂನ್ಯಕ್ಕಿಳಿಸಲಾಗಿದೆ. ನಿರಂಕುಶ ಪ್ರಭುತ್ವದ ದರ್ಪ ತೀವ್ರಗೊಂಡಿದೆ. ರಾಷ್ಟ್ರದ ಏಕ ಉದ್ದೇಶವನ್ನು ಪ್ರಭುತ್ವ ನಿರ್ಧರಿಸುತ್ತಿದೆ ಮತ್ತು ಮಿಕ್ಕವರೆಲ್ಲರೂ ಈ ಡೋಲು ಬಡಿತಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕಾಗಿದೆ. ಸಾಮಾಜಿಕ-ಆರ್ಥಿಕ ವೈಫಲ್ಯಗಳನ್ನು ಮರೆಸಲು ಜನತೆಯನ್ನು ರಾಷ್ಟ್ರೀಯತೆಯ ಉನ್ಮಾದದಲ್ಲಿ ತೋಯಿಸಲಾಗಿದೆ. ಬಹುಸಂಖ್ಯಾತವಾದವನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳಲಾಗಿದೆ’’ ಎಂದು ಬರೆಯುತ್ತಾರೆ.

ಮೋದಿ 2.0 ಸರಕಾರದ ಈ 100 ದಿನಗಳನ್ನು ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಿತ್ತುಕೊಳ್ಳುವ, ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಶಾಸನಗಳ ಅನುಷ್ಠಾನದ ಪರ್ವ ಎಂದೇ ಕರೆಯಬಹುದು ಮತ್ತು ಮೋದಿಯವರ ಸಹೋದ್ಯೋಗಿಗಳೂ ಇದನ್ನೇ ಎದೆ ತಟ್ಟಿಕೊಳ್ಳುತ್ತಾರೆ ಮತ್ತು ಬಹುಸಂಖ್ಯಾತರು ಅದನ್ನು ಬೆಂಬಲಿಸುತ್ತಿದ್ದಾರೆ. ನೆನಪಿರಲಿ ‘‘ಸಮಾಜದ ಮನಸ್ಸು, ಮೆದುಳನ್ನು ಗೊಡ್ಡು ಮಾಡಲಾಗಿದೆ.’’ ಕಳೆದ 100 ದಿನಗಳಲ್ಲಿ ಸಂಸತ್ತಿನಲ್ಲಿ 38 ಮಸೂದೆಗಳನ್ನು ಮಂಡಿಸಲಾಯಿತು. ಅದರಲ್ಲಿ 28 ಮಸೂದೆಗಳನ್ನು ಬಿಜೆಪಿಯು ತಮಗಿರುವ ಬಹುಮತವನ್ನು ಬಳಸಿಕೊಂಡು ಬಲಾತ್ಕಾರವಾಗಿ ಅನುಮೋದನೆ ಪಡೆದುಕೊಂಡಿತು. ಬೆನ್ನುಮೂಳೆ ಮುರಿದುಕೊಂಡಿರುವ ವಿರೋಧ ಪಕ್ಷಗಳು ಕ್ಷೀಣ ಧ್ವನಿಯಲ್ಲಿ ಪ್ರತಿಭಟಿಸಿದರೂ ಅದಕ್ಕೆ ಯಾವುದೇ ಕಿಮ್ಮತ್ತಿಲ್ಲದೆ ಹೋಯಿತು.

ಸ್ವತಃ ವಿರೋಧ ಪಕ್ಷಗಳಿಗೆ ಆತ್ಮವಿಶ್ವಾಸ ಉಡುಗಿ ಹೋಗಿದೆ. ತಮ್ಮ ಸಂಸದರನ್ನು, ಶಾಸಕರನ್ನು ಪಕ್ಷ ತೊರೆಯದಂತೆ ಕಾಪಾಡಿಕೊಳ್ಳುವುದರಲ್ಲೇ ಈ 100 ದಿನಗಳನ್ನು ಪೂರೈಸಿದ ವಿರೋಧ ಪಕ್ಷಗಳು ಅತ್ಯಂತ ದಯನೀಯ ಸ್ಥಿತಿಯಲ್ಲಿವೆ. ಭಾರತದ ಪ್ರಜಾಪ್ರಭುತ್ವ ಇವರಿಂದ ಬದುಕುಳಿಯುತ್ತದೆ ಎಂಬುದು ಸದ್ಯಕ್ಕಂತೂ ಸುಳ್ಳು. ಮುಸ್ಲಿಂ ಸಮುದಾಯವನ್ನು ಅಪರಾಧೀಕರಣಕ್ಕೊಳಪಡಿಸುವ ‘ತ್ರಿವಳಿ ತಲಾಖ್’ ಮಸೂದೆ, ಸೈದ್ಧಾಂತಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ತನ್ನ ದುಷ್ಟ ನೀತಿಗಳನ್ನು ವಿರೋಧಿಸುವ ಪ್ರತಿ ನಾಗರಿಕನನ್ನು ಭಯೋತ್ಪಾದಕ ಎಂದು ಹಣೆೆಪಟ್ಟಿ ಹಚ್ಚಬಹುದಾದ ಭಯಾನಕ ಯುಎಪಿಎ ಮಸೂದೆ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಂಡು ಅದರ ಸ್ವಾಯತ್ತೆೆಯನ್ನು ನಿರ್ಧರಿಸುವ ಕಲಮು 370 ಕಾಯ್ದೆಯ ರದ್ದತಿ, ತನ್ನದೇ ನಾಗರಿಕರನ್ನು ರಕ್ತ ಹೀರುವಂತಹ ಜುಲ್ಮಾನೆಗಳ ಮೂಲಕ ಹಿಂಸಿಸುವ ಮೋಟರ್ ವಾಹನ ತಿದ್ದುಪಡಿ ಮಸೂದೆ ಹೀಗೆ ಇದೇ ಮಾದರಿಯ ಅನೇಕ ಮಾನವ ಹಕ್ಕುಗಳ ವಿರೋಧಿ ಶಾಸನಗಳಿಗೆ ವಿಧಿವತ್ತಾಗಿ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಲಾಗಿದೆ ಮತ್ತು ಇದನ್ನು ಅತ್ಯಂತ ದಿಟ್ಟ ನಿರ್ಧಾರ ಎಂದು ಮಾಧ್ಯಮಗಳು ಮತ್ತು ಬಹುಸಂಖ್ಯಾತರು ಒಕ್ಕೊರಲಿನಿಂದ ಹೊಗಳುತ್ತಿದ್ದಾರೆ. ನೆನಪಿರಲಿ ‘‘ಸಮಾಜದ ಮನಸ್ಸು ಮೆದುಳನ್ನು ಗೊಡ್ಡು ಮಾಡಲಾಗಿದೆ.’’

100 ದಿನಗಳ ನೆನಪಿಗೆ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಕಾಶ್‌ಜಾವಡೇಕರ್ ‘‘ಈ ದಿನಗಳು ವೇಗ, ಕೌಶಲ್ಯ ಮತ್ತು ಅಳತೆ’’ ಎಂದು ಬೆನ್ನುತಟ್ಟಿಕೊಂಡಿದ್ದೂ ಆಯಿತು. ಪ್ರಜಾಪ್ರಭುತ್ವವನ್ನು ದ್ವಂಸಗೊಳಿಸುವ ಈ ವೇಗ, ತನ್ನ ವೈಫಲ್ಯವನ್ನು ಯಶಸ್ಸು ಎಂಬಂತೆ ಜನರನ್ನು ಮರಳುಗೊಳಿಸುವ ಈ ಕೌಶಲ್ಯ ಮತ್ತು ವಾಸ್ತವದಲ್ಲಿ ಸೋಲುಗಳನ್ನು ಬಟವಾಡೆ ಮಾಡಿದ ಇವರ ಆಡಳಿತದ ಅಳತೆ ಇವುಗಳಿಂದ ತತ್ತರಿಸಿರುವ ಭಾರತ ದೇಶ ಸುಧಾರಿಸಿಕೊಳ್ಳಲು ದಶಕಗಳು ಬೇಕಾಗುತ್ತವೆ. ಮೋದಿಯವರ ಕಳೆದ ಐದು ವರ್ಷಗಳ ಹಿಂದಿನ ಆಡಳಿತ ಮತ್ತು 100ದಿನಗಳ ಹಾಲಿ ಸರಕಾರವನ್ನು ಅವಲೋಕಿಸಿದಾಗ ಒಂದಂತೂ ಸ್ಪಷ್ಟವಾಗುತ್ತದೆ. ಯಾವುದೇ ಬಗೆಯ ಬಿಕ್ಕಟ್ಟುಗಳು, ತೊಂದರೆಗಳಿಗೆ ಪರಿಹಾರ ಕಂಡುಹಿಡಿಯುವ ಗೋಜಿಗೆ ಹೋಗದೆ ಆ ಬಿಕ್ಕಟ್ಟುಗಳನ್ನೇ ಮುಚ್ಚಿ ಹಾಕಿಬಿಡುವುದು ಮತ್ತು ಇದಕ್ಕಾಗಿ ಸರ್ವಾಧಿಕಾರದ ಅಧಿಕಾರವನ್ನು ಪ್ರಯೋಗಿಸುವುದು. ಇದು ಮೂರು ವಷರ್ಗಳ ಹಿಂದಿನ ನೋಟಿನ ಅಮಾನ್ಯೀಕರಣ, ಜಿಎಸ್‌ಟಿಯಿಂದ ಮೊದಲುಗೊಂಡು ಇತ್ತೀಚಿನ ಕಾಶ್ಮೀರದ ಮೇಲಿನ ದಬ್ಬಾಳಿಕೆಯವರೆಗೂ ಈ ಬಲಪ್ರಯೋಗದ ಮೂಲಕ ದೇಶವನ್ನೇ ಹತ್ತಿಕ್ಕುವ ನಿರ್ಧಾರಗಳ ಉದಾಹರಣೆಗಳನ್ನು ಕಾಣಬಹುದು.

ಈ ಎಲ್ಲಾ ಸರ್ವಾಧಿಕಾರದ ಆಡಳಿತ ಒಂದೆಡೆಯಾದರೆ ಈಗಿನ ಆರ್ಥಿಕ ಕುಸಿತದ ಬಿಕ್ಕಟ್ಟು ಮತ್ತೊಂದು ದುರಂತ ಕತೆಯಾಗಿದೆ. ಉದ್ಯೋಗ ನಷ್ಟ (ಶೇಕಡಾ 9 ಪ್ರಮಾಣದ ನಿರುದ್ಯೋಗ, 3,50,000 ಜನ ಉದ್ಯೋಗ ಕಳೆದುಕೊಂಡಿದ್ದಾರೆ), ಉದ್ಯಮಗಳು ನೆಲಕಚ್ಚುತ್ತಿವೆ, ಸೇವಾ ವಲಯವು ನಿಶ್ಯಕ್ತಿಗೊಂಡಿದೆ, ದೇಶವೇ ಇಂದು ಆರ್ಥಿಕ ತುರ್ತುಪರಿಸ್ಥಿತಿಯಲ್ಲಿದೆ. ಪರಿಸ್ಥಿತಿ ಭಯಾನಕವಾಗಿದೆ. ಆದರೆ ಈ ವಾಸ್ತವವನ್ನು ಮೋದಿ ಸರಕಾರ ಒಪ್ಪಿಕೊಳ್ಳುತ್ತಿಲ್ಲ. ನಿರಾಕರಣೆಯ ಮನಸ್ಥಿತಿಯಲ್ಲಿದೆ. ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಮುಂಗಡಪತ್ರವೇ ಬರಲಿರುವ ದುರಂತದ ದಿನಗಳ ಮುನ್ಸೂಚನೆಯಂತಿತ್ತು. ದೇಶದ ಬೊಕ್ಕಸವನ್ನು ತೆರಿಗೆ ಭಯೋತ್ಪಾದನೆಯ ಮೂಲಕ ತುಂಬಿಸುತ್ತೇವೆ ಎಂದು ಬಹಿರಂಗವಾಗಿ ಬೆನ್ನು ಚಪ್ಪರಿಸಿಕೊಂಡಿದ್ದು ಭವಿಷ್ಯದ ಆರ್ಥಿಕ ದಿವಾಳಿತನಕ್ಕೆ ಮುನ್ನುಡಿ ಬರೆದಂತಿತ್ತು

ಸಾಮಾಜಿಕವಾಗಿ ನಾಗರಿಕರಿಗೆ ಬದುಕುವ ಹಕ್ಕನ್ನೇ ಮೊಟಕುಗೊಳಿಸುವ ಎನ್‌ಆರ್‌ಸಿ, ನಾನಿನ್ನೂ ಉಸಿರಾಡುತ್ತಿದ್ದೇನೆ ಎಂದು ಗರ್ಜಿಸುತ್ತಿರುವ ರಾಮಜನ್ಮಭೂಮಿ ವಿವಾದವು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುತ್ತಿದೆ. ಜಾತಿ ಹಲ್ಲೆಗಳು, ಆಹಾರದ ಕಾರಣಕ್ಕೆ ಗೋರಕ್ಷಕರು ನಡೆಸುತ್ತಿರುವ ಗುಂಪು ಹತ್ಯೆಗಳ ಸರಣಿ ಮುಂದುವರಿಯುತ್ತಲೆ ಇದೆ. ಇಂದು ವೈಚಾರಿಕ, ಸೃಜನಶೀಲ ಪುಸ್ತಕಗಳನ್ನು ಓದುವುದನ್ನೇ ಪ್ರಶ್ನಿಸಲಾಗುತ್ತಿದೆ. ಕಳೆದ ವರ್ಷ ಮಾನವ ಹಕ್ಕುಗಳ ಹೋರಾಟಗಾರರನ್ನು, ನ್ಯಾಯವಾದಿಗಳನ್ನು ‘ನಗರ ನಕ್ಸಲ’ರೆಂದು ಬಂಧಿಸಿದ ಮೋದಿ 1.0 ಸರಕಾರ ತನ್ನ ಎರಡನೇ ಅವತಾರದಲ್ಲಿಯೂ ನಿರಪರಾಧಿಗಳ ಬಂಧನದ ಪ್ರಕ್ರಿಯೆ ಮುಂದುವರಿಸಿದೆ. 10.9.2019ರಂದು ದಿಲ್ಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಹನಿ ಬಾಬು ಅವರ ಮನೆಗೆ ದಾಳಿ ಮಾಡಿದ ಪುಣೆ ಪೊಲೀಸರು ಯಾವುದೇ ಸರ್ಚ್ ವಾರಂಟ್ ಇಲ್ಲದೆ ಅವರ ಮನೆಯನ್ನು ಶೋಧಿಸಿದರು. ಅವರ ಪುಸ್ತಕಗಳು, ಕಂಪ್ಯೂಟರ್, ಮೊಬೈಲ್‌ಗಳನ್ನು ವಶಪಡಿಸಿಕೊಂಡರು. ಇದನ್ನು ಪ್ರಶ್ನಿಸಿದರೆ ‘‘ನಿಮ್ಮನ್ನು ಬಂಧಿಸಿಲ್ಲ ಸುಮ್ಮನಿರಿ’’ ಎಂದು ಗದರಿದ್ದಾರೆ. ಇದನ್ನು ಕಾನೂನುಬಾಹಿರ ಎಂದು ತೀರ್ಮಾನಿಸುವಂತಹ ನ್ಯಾಯಾಂಗವೇ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ.

ಮೋದಿ 2.0 ಅವಧಿಯಲ್ಲಿ ಪೊಲೀಸ್ ಯಾವ ಸಂದರ್ಭದಲ್ಲಿಯಾದರೂ ನಿಮ್ಮ ಮನೆ ಪ್ರವೇಶಿಸಬಹುದು, ಬಂಧಿಸಬಹುದು, ಅನಿರ್ದಿಷ್ಟ ಅವಧಿಗೆ ಜೈಲಿನಲ್ಲಿ ಕೂಡಿ ಹಾಕಬಹುದು, ಏಕೆಂದರೆ ಎಲ್ಲವೂ ಕಾನೂನಾತ್ಮಕವಾಗಿ, ಇದು ಮೋದಿ 2.0 ಸರಕಾರ. ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದೆ. ಈ ಮರೀಚಿಕೆಯಿಂದ ಭಾರತ ಕಳಚಿಕೊಳ್ಳದೆ ಹೋದರೆ ಪರಿಸ್ಥಿತಿ ಕೈಮೀರುತ್ತದೆ. ಆದರೆ ಎಲ್ಲರನ್ನೂ ಕಾಡುವ ಪ್ರಶ್ನೆ ಯಾಕೆ ಜನತೆ ಈ ಮರೆಮೋಸವನ್ನು ನಂಬುತ್ತಿದ್ದಾರೆ? ಈ ದಕ್ಷ ಆಡಳಿತವೆಂಬ ಕಣ್ಕಟ್ಟಿನಿಂದ ಜನತೆಯನ್ನು ಬಿಡುಗಡೆಗೊಳಿಸುವ ಕಾಣ್ಕೆ ಯಾವುದು? ಮೋದಿ 2.0ರ 100 ದಿನಗಳು ನಮ್ಮೆಳಗಿನ ಕಗ್ಗತ್ತಲನ್ನು ಬಯಲು ಮಾಡುತ್ತಿದೆ ಎಂಬುದು ಯಾತಕ್ಕೆ ಅರಿವಿಗೆ ಬರುತ್ತಿಲ್ಲ? ಭಾರತದ ಒಕ್ಕೂಟದ ಅಡಿಪಾಯವೇ ಕುಸಿದು ಬೀಳುತ್ತಿದ್ದರೂ ಬಹುಸಂಖ್ಯಾತರು ಯಾಕೆ ಮಂದಸ್ಮಿತರಾಗಿದ್ದಾರೆ? ಬಹುಶಃ ಈ ಪ್ರಶ್ನೆಗಳಿಗೆ ನೇರವಾದ ಉತ್ತರಗಳು ಇರಲಾರವು.

ಮೊದಲಿಗೆ ಈ ಭ್ರಷ್ಟ ಮಾಧ್ಯಮಗಳ ಬೌದ್ಧ್ದಿಕ ದಿವಾಳಿತನವನ್ನು ನಿಭಾಯಿಸುವುದು ಮತ್ತು ಇದರಿಂದ ಹೊರಬರುವ ಸವಾಲು ಪ್ರಜ್ಞಾವಂತರ ಮುಂದಿದೆ. ಮಾಧ್ಯಮಗಳು ನಿರ್ಭೀತಿಯಿಂದ, ನಿಷ್ಪಕ್ಷಪಾತದಿಂದ ಒಂದು ವಿರೋಧ ಪಕ್ಷವಾಗಿ ತಮ್ಮ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಇದು ಮೊದಲ ಆದ್ಯತೆ. ಎರಡನೆಯದಾಗಿ ಇಲ್ಲಿನ ಯುವಜನತೆಯನ್ನು ಆವರಿಸಿಕೊಂಡಿರುವ ಮಂಪರಿನಿಂದ ಬಿಡುಗಡೆಗೊಳಿಸಬೇಕಾಗಿದೆ. ಇದು ದೊಡ್ಡ ಸವಾಲು. ಇದಕ್ಕಾಗಿ ಹೊಸ ಗ್ರಹಿಕೆಯ, ಹೊಸ ಒಳನೋಟದ ಕಲಿಕೆಯರಿಮೆಯನ್ನು ರೂಪಿಸಬೇಕು. ನಿರಂಕುಶ ಪ್ರಭುತ್ವ, ಅರಾಜಕತೆ, ಮತಾಂಧತೆ, ಜಾತಿ ತಾರತಮ್ಯ ಕುರಿತು ಬಹುಪಾಲು ಯುವಜನತೆಗೆ ಸ್ಪಷ್ಟ್ಟವಾದ ತಿಳುವಳಿಕೆಯಿಲ್ಲ. ಪ್ರಜಾಪ್ರಭುತ್ವ, ಮಾನವೀಯತೆಯನ್ನು ನಾಶ ಮಾಡುವ ಪೆಡಂಭೂತಗಳನ್ನು ಜಗದೋದ್ಧ್ದಾರಕ ಶಕ್ತಿಗಳೆಂದು ಯುವಜನತೆ ನಂಬಿದ್ದಾರೆ. ಈ ನಂಬಿಕೆಯಿಂದಲೇ ಸ್ಪಂದಿಸುತ್ತಿದ್ದಾರೆ. ಈ ಹದಿಹರೆಯದವರನ್ನು ಮಾನವೀಯಗೊಳಿಸುವ ಸವಾಲು ಪ್ರಜ್ಞಾವಂತರ ಹೆಗಲ ಮೇಲಿದೆ. 1930ರ ತನ್ನ ಕಾಲಘಟ್ಟದ ಕುರಿತು ಗ್ರಾಮ್ಶಿ ವೈಶಿಷ್ಟ್ಯಪೂರ್ಣವಾಗಿ ಹೇಳಿದ್ದಾನೆ: ‘‘ಫ್ಯಾಶಿಸಂನ ಏಳಿಗೆ - ಹಳೆಯ ಜಗತ್ತು ತೀರಿಕೊಂಡು ಹೊಸದು ಇನ್ನೂ ಹುಟ್ಟಿರದ ಕಾಲದಲ್ಲಿ ಆ ಜಗತ್ತು ವ್ಯಾದಿಗ್ರಸ್ತ ಕುರುಹುಗಳ ಸಮೂಹದಿಂದ ಸುತ್ತುವರಿಯಲ್ಪಟ್ಟಿರುತ್ತದೆ. ಜನಾಂಗ ದ್ವೇಷ, ಧಾರ್ಮಿಕ ಹಗೆತನ ಮತ್ತು ಹಿಂಸೆ ಆ ಕುರುಹುಗಳು.’’ ಭಾರತ ಇಂದು ಇಂತಹ ಕುರುಹುಗಳ ವ್ಯಾದಿಯಿಂದ ನರಳುತ್ತಿದೆ. ಹಳೆ ಜಗತ್ತು ಸಾಯುತ್ತಿದೆ. ಹೊಸ ಜಗತ್ತು ಕಟ್ಟುವ ಜವಾಬ್ದಾರಿ ಇಲ್ಲಿನ ಪ್ರಜ್ಞಾವಂತರ ಮೇಲಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top