ಅಸ್ತಿತ್ವ ಕಳಕೊಳ್ಳಲಿರುವ ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕ ಹಾಜಿ ಅಬ್ದುಲ್ಲಾರ ನೆನಪಿನಲ್ಲಿ... | Vartha Bharati- ವಾರ್ತಾ ಭಾರತಿ

ಅಸ್ತಿತ್ವ ಕಳಕೊಳ್ಳಲಿರುವ ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕ ಹಾಜಿ ಅಬ್ದುಲ್ಲಾರ ನೆನಪಿನಲ್ಲಿ...

ಒಂದು ಆದರ್ಶವನ್ನು ಸಾಕಾರಗೊಳಿಸಲು ಒಬ್ಬ ಮಹಾನ್ ವ್ಯಕ್ತಿ ಸ್ಥಾಪಿಸಿದ 113 ವರ್ಷಗಳ ಪರಂಪರೆ ಇರುವ ಒಂದು ಬ್ಯಾಂಕು ಈಗ ಇತಿಹಾಸದ ಪುಟಗಳನ್ನು ಸೇರಲಿದೆ. ಕರಾವಳಿಯ ಭಾವೈಕ್ಯ, ಇಲ್ಲಿನ ಜನರ ಧೀಮಂತಿಕೆ, ದೂರದೃಷ್ಟಿ, ಸಾಮಾಜಿಕ ಕಾಳಜಿ ಮತ್ತು ಪ್ರಜ್ಞೆಗಳ ಮೂರ್ತಸ್ವರೂಪವಾದ ಕಾರ್ಪೊರೇಶನ್ ಬ್ಯಾಂಕು ಇಲ್ಲಿನವರು ಕೇಳದೇ ಇರುವ ಇನ್ನೊಂದು ಸಂಸ್ಥೆಯೊಂದಿಗೆ ವಿಲೀನಗೊಂಡು ತನ್ನ ಅಸ್ತಿತ್ವವನ್ನು ಕಳಕೊಳ್ಳಬೇಕಾಗಿ ಬಂದುದು ನಮ್ಮ ಕಾಲದ ಒಂದು ದುರಂತ. ಬ್ಯಾಂಕು ಕಣ್ಮರೆಯಾಗುವ ಮೊದಲೇ ಅಬ್ದುಲ್ಲಾರ ನೆನಪಿನಲ್ಲಿ ಉಡುಪಿಯಲ್ಲಿದ್ದ ಸರಕಾರಿ ಆಸ್ಪತ್ರೆ ಖಾಸಗೀಕರಣವಾಗಿದೆ. ಅವರ ಹೆಸರಿನ ರಸ್ತೆ ಮತ್ತು ಶಾಲೆಗಳು ಹೊಸ ಹೆಸರುಗಳನ್ನು ಪಡೆದರೂ ಆಶ್ಚರ್ಯವಿಲ್ಲ.


ಒಂದು ದೇಶದ ಆರ್ಥಿಕತೆಗೆ ಸರಕಾರಕ್ಕಿಂತ ಮಹತ್ತರವಾದ ಕೊಡುಗೆಯನ್ನು ದೂರದೃಷ್ಟಿ ಹೊಂದಿದ ಮಹಾನುಭಾವರು ನೀಡಬಲ್ಲರು ಎಂಬುದಕ್ಕೆ ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರು ಒಂದು ಜ್ವಲಂತ ನಿದರ್ಶನ. ಅವರು ಹೋದ ಶತಮಾನದ ಆರಂಭದಲ್ಲಿ ಸ್ಥಾಪಿಸಿ, ಬೆಳೆಸಿ ಆ ಬಳಿಕ ರಾಷ್ಟ್ರಮಟ್ಟಕ್ಕೇರಿದ ಕಾರ್ಪೊರೇಶನ್ ಬ್ಯಾಂಕು ಸದ್ಯದಲ್ಲಿಯೇ ಮುಂಬೈಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ ವಿಲೀನವಾಗಿ ಬ್ಯಾಂಕಿಂಗ್ ಭೂಪಟದಿಂದ ಮರೆಯಾಗಲಿರುವ ಸಂದರ್ಭದಲ್ಲಿ ಅಬ್ದುಲ್ಲಾ ಅವರನ್ನು ಸ್ಮರಿಸಬೇಕಾದುದು ಕರಾವಳಿಯ ನಾಗರಿಕರ ಕರ್ತವ್ಯ.

ತಮ್ಮ ಕಾಲದಲ್ಲಿಯೇ ಅಬ್ದುಲ್ಲಾ ಅವರು ಹೊಸ ಚಿಂತನೆ, ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿ ಹೊಂದಿದ್ದ ಧೀಮಂತ ವ್ಯಕ್ತಿಯಾಗಿದ್ದರು. ಅವರ ಕಾಲದಲ್ಲಿ (1882-1935) ಒಂದು ಹೊಸ ಆರ್ಥಿಕ ಸಂಸ್ಥೆಯನ್ನು ಹುಟ್ಟುಹಾಕುವುದು ಸುಲಭವಾಗಿರಲಿಲ್ಲ. ಅದಕ್ಕೆ ಜನರ ಸಹಕಾರ ಅತೀ ಅಗತ್ಯವಾಗಿತ್ತು. ಸ್ವದೇಶೀ ಮನೋಭಾವ ಬೆಳೆಯುತ್ತಿದ್ದ ದಿನಗಳಲ್ಲಿ ತಮ್ಮ ಊರಿನವರೇ ಒಂದಾಗಿ ಹೊಸ ಬ್ಯಾಂಕನ್ನು ಸ್ಥಾಪಿಸಲು ಉತ್ತೇಜಿಸಿದ ಅವರು ಸಾರ್ವಜನಿಕರಿಗೆ ಮನವಿ ನೀಡಿ ಅವರಿಂದಲೇ ಅಗತ್ಯವಿದ್ದ ಮೂಲಧನವನ್ನು ಸಂಗ್ರಹಿಸಿದ್ದು ಅವರ ದೂರದೃಷ್ಟಿಯ ದ್ಯೋತಕವಾಗಿತ್ತು. ಜನಸಾಮಾನ್ಯರ ಬೆಂಬಲದಿಂದ ಒಂದು ಸಂಸ್ಥೆ ಹುಟ್ಟಿದರೆ ಅದರ ಬೆಳವಣಿಗೆಗೆ ಅವರೇ ಬಾಧ್ಯರಾಗುತ್ತಾರೆ ಎಂಬ ವಿಶ್ವಾಸ ಅವರದು. ಅವರಿಂದ ಮೂಲಧನ ಮಾತ್ರವಲ್ಲ, ಠೇವಣಿ ಸಂಗ್ರಹಿಸುವ ಮತ್ತು ಅಗತ್ಯವಿದ್ದವರಿಗೆ ಸಾಲ ನೀಡುವ ಆಶ್ವಾಸನೆಯನ್ನು ಅಬ್ದುಲ್ಲ್ಲಾರು ಕೊಟ್ಟು ಆ ಮೂಲಕ ಜನರಲ್ಲಿ ಬ್ಯಾಂಕಿನ ಉಪಯೋಗದ ಬಗ್ಗೆ ತಿಳಿವು ಉಂಟಾಗುವಂತೆ ಮಾಡಿದರು. ಅವರ ನಿಸ್ಪಹತೆ, ಜನಪರ ಕಾಳಜಿ, ಸೇವಾ ಮನೋಭಾವ ಮತ್ತು ಹೃದಯವೈಶಾಲ್ಯಗಳಿಂದಾಗಿ ಅವರ ಮನವಿಗೆ ಅಪೂರ್ವವಾದ ಜನಬೆಂಬಲ ಲಭಿಸಿತು; ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್(ಉಡುಪಿ), ಲಿಮಿಟೆಡ್, 1906ರಲ್ಲಿ ಹುಟ್ಟಿತು. ಅಬ್ದುಲ್ಲಾರ ನೇತೃತ್ವದ ಬ್ಯಾಂಕಿನ ನಿರ್ದೇಶಕ ಮಂಡಳಿಯು ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿ, ಜಿಲ್ಲೆಯ ಭಾವೈಕ್ಯದ ಪ್ರತೀಕವಾಗಿಯೇ ಬೆಳೆಯಿತು. ಕಾಲಕ್ರಮೇಣ ಹೆಸರು ಬದಲಾಯಿಸಿಕೊಂಡರೂ ಅದು ಜನಸಾಮಾನ್ಯರ ಬ್ಯಾಂಕಾಗಿಯೇ ಉಳಿಯಿತು.

ವ್ಯವಹಾರದಲ್ಲಿ ಅನುಸರಿಸುತ್ತಿದ್ದ ನಿಯತ್ತನ್ನು ತಾನು ಸ್ಥಾಪಿಸಿದ ಬ್ಯಾಂಕಿನಲ್ಲಿಯೂ ಅನುಸರಿಸಲು ತಮ್ಮ ಅಧ್ಯಕ್ಷತೆಯ ಸಮಯದಲ್ಲಿ ಅಬ್ದುಲ್ಲಾರು ತೋರಿಸಿಕೊಟ್ಟರು. ಜನರೊಂದಿಗೆ ವ್ಯವಹರಿಸುವ ಹಣಕಾಸು ಸಂಸ್ಥೆ ನಿಯತ್ತುಬದ್ಧವಾಗಿದ್ದರೆ ನಷ್ಟಸಂಭಾವ್ಯತೆ ದೂರವಾಗುತ್ತದೆ. ಸಂಸ್ಥೆಯ ಸಾಮರ್ಥ್ಯಕ್ಕನುಗುಣವಾಗಿಯೇ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕೆಂಬುದೂ ಅವರ ನೀತಿಯಾಗಿತ್ತು. ಬಹುಶಃ ಆ ಕಾರಣದಿಂದಾಗಿಯೇ ಆ ಮೇಲೆ ಸ್ಥಾಪನೆಗೊಂಡ ಬ್ಯಾಂಕುಗಳಷ್ಟು ದ್ರುತಗತಿಯಲ್ಲಿ ಕಾರ್ಪೊರೇಶನ್ ಬ್ಯಾಂಕು ಬೆಳೆಯಲಿಲ್ಲ. ಆದರೆ ಠೇವಣಿದಾರರ ಮತ್ತು ಗ್ರಾಹಕರ ವಿಶ್ವಾಸ ಬ್ಯಾಂಕಿನ ಮೇಲೆ ನಿರಂತರವಾಗಿ ಉಳಿದು ನಿಧಾನವಾಗಿ ಆದರೆ ಸದೃಢವಾಗಿ ಬೆಳೆಯಿತು.

ಇಂದಿನ ಪರಿಸ್ಥಿತಿಯಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸುವುದು ಸಾಮಾನ್ಯರಿಗೇಕೆ, ಸರಕಾರಕ್ಕೇ ಕಷ್ಟಸಾಧ್ಯವಾದ ಸವಾಲು. ಉದಾರೀಕರಣದ ಹೊಸ್ತಿಲಿನಲ್ಲಿ, ಅಂದರೆ 1994ರಲ್ಲಿ ಬಹಳ ಗದ್ದಲದಿಂದ ಆರಂಭವಾಗಿ ಆಗಿನ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್‌ರಿಂದ ‘‘ಹಣಕಾಸು ರಂಗದ ಧ್ರುವತಾರೆಯಾಗಲಿದೆ’’ ಎಂದೆಲ್ಲ ಹೇಳಿಸಿಕೊಂಡ ಸಿಕಂದರಾಬಾದಿನ ಗ್ಲೋಬಲ್ ಟ್ರಸ್ಟ್ ಬ್ಯಾಂಕು, ಹತ್ತೇ ವರ್ಷಗಳಲ್ಲಿ, ಅಂದರೆ 2004ರಲ್ಲಿ ಮುಳುಗಡೆಯಾಯಿತು. ಆ ಮೇಲೆ 2013ರಲ್ಲಿ ಕೇಂದ್ರ ಸರಕಾರವೇ ಸ್ಥಾಪಿಸಿದ ಭಾರತೀಯ ಮಹಿಳಾ ಬ್ಯಾಂಕು 2017ರಲ್ಲಿ ಸದ್ದಿಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಯಲ್ಲಿ ವಿಲೀನವಾಗಿ ಕಣ್ಮರೆಯಾಯಿತು.
ಇದಕ್ಕೆ ವ್ಯತಿರಿಕ್ತವಾಗಿ, ಹಾಜಿ ಅಬ್ದುಲ್ಲಾ ಅವರು ಆರಂಭಿಸಿದ ಕಾರ್ಪೊರೇಶನ್ ಬ್ಯಾಂಕು ಸುಮಾರು 75 ವರ್ಷ ಬೆಳೆದು, ಆಮೇಲೆ ರಾಷ್ಟ್ರೀಕರಣವಾದ ಬಳಿಕವೂ ತನ್ನ ಪ್ರಧಾನ ಕಚೆೇರಿಯನ್ನು ಕರಾವಳಿಯಲ್ಲಿಯೇ ಉಳಿಸಿಕೊಂಡು ರಾಷ್ಟ್ರಮಟ್ಟಕ್ಕೇರಿದ ಒಂದು ದಕ್ಷ ಬ್ಯಾಂಕು ಎಂದು ಹೆಸರು ಗಳಿಸಿದ್ದು ಅಬ್ದುಲ್ಲಾರ ದೂರದೃಷ್ಟಿಗೆ ಸಂದ ಗೌರವ.

ಕಾರ್ಪೊರೇಶನ್ ಬ್ಯಾಂಕಿಗೆ 90 ವರ್ಷವಾಗಿದ್ದಾಗ ನಮ್ಮ ಜಿಲ್ಲೆಯ ಪ್ರಾಧ್ಯಾಪಕರೂ, ಹಿರಿಯ ಚಿಂತಕರೂ ಆಗಿದ್ದ ಕು.ಶಿ.ಹರಿದಾಸ ಭಟ್ಟರು ಹೇಳಿದ ಮಾತು ಇಂದಿಗೂ ಪ್ರಸ್ತುತವಾಗುತ್ತದೆ: ‘‘ಅಬ್ದುಲ್ಲಾ ಸಾಹೇಬರ ಆದರ್ಶದ ಪ್ರಕಾರ ಬ್ಯಾಂಕು ಆರಂಭದ ದಿನಗಳಿಂದಲೇ ತನ್ನದೇ ವೃತ್ತಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿತ್ತು. ಉತ್ತಮ ಆಂತರಿಕ ನಿರ್ವಹಣೆ (ಏಟ್ಠಛಿ ಛಿಛಿಜ್ಞಿಜ), ಗ್ರಾಹಕ ಸ್ನೇಹಿ ಸೇವೆ, ಸಿಬ್ಬಂದಿಯೊಡನೆ ಸಾಮರಸ್ಯಪೂರ್ಣ ಸಂಬಂಧ ಮತ್ತು ಅವರ ಪ್ರಾಮಾಣಿಕತೆ ಹಾಗೂ ದಕ್ಷತೆಗಳಿಗೆ ಒತ್ತು ನೀಡಿ ತನ್ನ ವ್ಯವಹಾರವನ್ನು ನಡೆಸುತ್ತಿತ್ತು. ಈ ನೀತಿ ಬ್ಯಾಂಕು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಯಿತು.’’ ಈ ಕಾರಣದಿಂದಾಗಿಯೇ ಕರಾವಳಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆ ಬಳಿಕ ಅನೇಕ ಬ್ಯಾಂಕುಗಳು ಕಾರಣಾಂತರದಿಂದ ತಮ್ಮ ಅಸ್ತಿತ್ವವನ್ನು ಕಳಕೊಂಡರೂ ಕಾರ್ಪೊರೇಶನ್ ಬ್ಯಾಂಕು ಬೆಳೆಯುತ್ತಾ ಹೋಯಿತು.

ಅಬ್ದುಲ್ಲಾರು ರೂಢಿಸಿಕೊಂಡ ನೀತಿಯನ್ನು ಕಾಲಕ್ರಮೇಣ ಬ್ಯಾಂಕುಗಳು (ಕಾರ್ಪೊರೇಶನ್ ಬ್ಯಾಂಕಿನ ಇತ್ತೀಚೆಗಿನ ಆಡಳಿತ ಮಂಡಳಿ ಸಹಿತ) ಕಡೆಗಣಿಸಿದುದು ಅವುಗಳು 2014ರ ನಂತರ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣವೆಂದರೂ ತಪ್ಪಾಗಲಾರದು.
ಸಾಹೇಬರ ಕಾರ್ಯಕ್ಷೇತ್ರ ತಮ್ಮ ವ್ಯಾಪಾರ ಮತ್ತು ಬ್ಯಾಂಕಿನ ಸ್ಥಾಪನೆ ಹಾಗೂ ಅದರ ಉಸ್ತುವಾರಿಗೆ ಸೀಮಿತವಾಗಿರಲಿಲ್ಲ ಎಂಬುದು ಹಿಂದಿನ ತಲೆಮಾರಿನವರಿಗೆ ತಿಳಿದ ವಿಚಾರ. ಉಡುಪಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಮತ್ತು ಶಾಲೆಗಳ ಸ್ಥಾಪನೆ, ಕೃಷ್ಣ ದೇವಸ್ಥಾನದ ಲಕ್ಷದೀಪೋತ್ಸವಕ್ಕೆ ಅಕಾಲಮಳೆಯಿಂದಾಗಿ ವಿಘ್ನ ಬಂದಾಗ, ಸಾವಿರಾರು ಹಣತೆಗಳಿಗೆ ಎಣ್ಣೆ ಒದಗಿಸಿ ಉತ್ಸವವು ನಡೆಯುವಂತೆ ಮಾಡಿದುದು, ಫಸಲು ನಾಶವಾಗಿ ಒಕ್ಕಲುಗಳಿಗೆ ಗೇಣಿ ಕೊಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಗೇಣಿಯನ್ನೇ ಮನ್ನಾ ಮಾಡಿದುದು, ದಾರಿಯಲ್ಲಿ ಸಿಕ್ಕಿದ ಎಸೆಸೆಲ್ಸಿ ಓದಿದ ಹುಡುಗನನ್ನು ಮನೆಗೆ ಕರೆದು ಟೈಪಿಂಗ್ ಕಲಿಯಲು ತನ್ನ ಟೈಪ್ ರೈಟರನ್ನು ಉಪಯೋಗಿಸಲು ಉತ್ತೇಜಿಸಿದುದು-ಮುಂತಾದ ಹಲವಾರು ಘಟನೆಗಳು ಅಬ್ದುಲ್ಲಾರ ಮೇರು ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಅವರ ಈ ವ್ಯಕ್ತಿತ್ವವೇ ಅಂದಿನ ಮದ್ರಾಸಿನ ಶಾಸನ ಸಭೆಯ ಸದಸ್ಯರಾಗಿ ಅವರು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿತು. ಈ ಸಾಧನೆಗಳನ್ನು ಗಮನಿಸಿ ಪೇಜಾವರ ಮಠದ ಹಿರಿಯ ಸ್ವಾಮಿಗಳಾದ ಶ್ರೀ ವಿಶ್ವೇಶತೀರ್ಥರು ‘‘ಅಬ್ದುಲ್ಲಾ ಸಾಹೇಬರು ಪ್ರಾತಃಸ್ಮರಣೀಯರು’’ ಎಂದು 2006ರಲ್ಲಿ ನಡೆದ (ಈ ಲೇಖಕನೂ ಭಾಗವಹಿಸಿದ್ದ) ಬ್ಯಾಂಕಿನ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು.

ಕರಾವಳಿಯ ಜನಪ್ರಿಯ ವಾರಪತ್ರಿಕೆ ‘ತರಂಗ’ದ ಸಂಪಾದಕರಾಗಿದ್ದ ಸಂತೋಷಕುಮಾರ್ ಗುಲ್ವಾಡಿಯವರು ತಮ್ಮ ಅಜ್ಜಿ ತಮಗೆ ಹೇಳಿದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬೇಕು. ಅವರ ಅಜ್ಜಿಯ ಮನೆಯ ಎದುರು ಸುಡು ಬಿಸಿಲಿಗೆ ಅಬ್ದುಲ್ಲಾ ಸಾಹೇಬರು ನಡೆದು ಹೋಗುತ್ತಿದ್ದಾಗ ಮೊಮ್ಮಗ ಗುಲ್ವಾಡಿಯವರನ್ನು ಉದ್ದೇಶಿಸಿ ಅಜ್ಜಿ ಹೇಳಿದ್ದರು: ‘‘ಸಾಹೇಬರು ಬಿಸಿಲಲ್ಲೇ ಹೋಗುತ್ತಿದ್ದಾರೆ, ಅವರಿಗೆ ಈ ಕೊಡೆಯನ್ನು ಕೊಟ್ಟು ಬಾ.’’

ಆಗಸ್ಟ್ 1935ರಲ್ಲಿ ಅಕಾಲ ಮರಣದಿಂದ ಸಾಹೇಬರು ಈ ಜಗತ್ತಿನಿಂದ ನಿರ್ಗಮಿಸಿದಾಗ ಜಾತಿಮತಭೇದವಿಲ್ಲದೆ ಇಡೀ ಉಡುಪಿಯೇ ಕಣ್ಣೀರು ಸುರಿಸಿತ್ತು; ಅಂಗಡಿಗಳು ಎರಡು ದಿನ ಬಾಗಿಲು ಹಾಕಿ ಅವರಿಗೆ ಗೌರವವನ್ನು ಸೂಚಿಸಿದುವು. ಅಬ್ದುಲ್ಲಾರಷ್ಟು ಪ್ರೀತಿ, ವಿಶ್ವಾಸ, ಜನಪರ ಕಾಳಜಿ, ಹೃದಯ ವೈಶಾಲ್ಯ ಉಳ್ಳ ಮಹಾನುಭಾವರು ಹಿಂದೆ ಆಗಿರಲಿಲ್ಲ, ಮುಂದೆ ಬಹುಶಃ ಬರಲಾರರು ಎಂದು ಹರಿದಾಸ ಭಟ್ಟರು ಉಲ್ಲೇಖಿಸಿದ್ದನ್ನು ನಾವು ಜ್ಞಾಪಿಸಿಕೊಳ್ಳಬೇಕು. ಒಂದು ಆದರ್ಶವನ್ನು ಸಾಕಾರಗೊಳಿಸಲು ಒಬ್ಬ ಮಹಾನ್ ವ್ಯಕ್ತಿ ಸ್ಥಾಪಿಸಿದ 113 ವರ್ಷಗಳ ಪರಂಪರೆ ಇರುವ ಒಂದು ಬ್ಯಾಂಕು ಈಗ ಇತಿಹಾಸದ ಪುಟಗಳನ್ನು ಸೇರಲಿದೆ. ಕರಾವಳಿಯ ಭಾವೈಕ್ಯ, ಇಲ್ಲಿನ ಜನರ ಧೀಮಂತಿಕೆ, ದೂರದೃಷ್ಟಿ, ಸಾಮಾಜಿಕ ಕಾಳಜಿ ಮತ್ತು ಪ್ರಜ್ಞೆಗಳ ಮೂರ್ತಸ್ವರೂಪವಾದ ಕಾರ್ಪೊರೇಶನ್ ಬ್ಯಾಂಕು ಇಲ್ಲಿನವರು ಕೇಳದೇ ಇರುವ ಇನ್ನೊಂದು ಸಂಸ್ಥೆಯೊಂದಿಗೆ ವಿಲೀನಗೊಂಡು ತನ್ನ ಅಸ್ತಿತ್ವವನ್ನು ಕಳಕೊಳ್ಳಬೇಕಾಗಿ ಬಂದುದು ನಮ್ಮ ಕಾಲದ ಒಂದು ದುರಂತ. ಬ್ಯಾಂಕು ಕಣ್ಮರೆಯಾಗುವ ಮೊದಲೇ ಅಬ್ದುಲ್ಲಾರ ನೆನಪಿನಲ್ಲಿ ಉಡುಪಿಯಲ್ಲಿದ್ದ ಸರಕಾರಿ ಆಸ್ಪತ್ರೆ ಖಾಸಗೀಕರಣವಾಗಿದೆ. ಅವರ ಹೆಸರಿನ ರಸ್ತೆ ಮತ್ತು ಶಾಲೆಗಳು ಹೊಸ ಹೆಸರುಗಳನ್ನು ಪಡೆದರೂ ಆಶ್ಚರ್ಯವಿಲ್ಲ.

ಒಂದು ಜನೋಪಯೋಗಿ ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸಲು ಮನುಷ್ಯನು ಅದಮ್ಯವಾದ ಸಾಹಸ ಮಾಡಬೇಕಾಗುತ್ತದೆ. ಅಂತಹ ಒಂದು ರಾಷ್ಟ್ರಮಟ್ಟದ ಸಂಸ್ಥೆ ನಮ್ಮೆದುರಿನಿಂದ ಕಣ್ಮರೆಯಾಗುವಾಗ ಆ ಸಾಧಕನನ್ನು ಸ್ಮರಿಸುವ ಮೂಲಕವಾದರೂ ಕರಾವಳಿಯ ಜನತೆ ಹಾಜಿ ಅಬ್ದುಲ್ಲಾ ಸಾಹೇಬರಿಗೆ ಕೃತಜ್ಞತೆಯನ್ನು ಹೇಳಬೇಕಾಗುತ್ತದೆ. *ಲೇಖಕರು ಸುಮಾರು ಮೂರು ದಶಕಗಳಷ್ಟು ಕಾಲ ಕಾರ್ಪೊರೇಶನ್ ಬ್ಯಾಂಕು ಅಧಿಕಾರಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷ ಮತ್ತು ಐದು ವರ್ಷ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದರು. ಅಖಿಲ ಭಾರತ ಬ್ಯಾಂಕು ಅಧಿಕಾರಿಗಳ ಮಹಾಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top