ಭಾರತೀಯ ಪೌರತ್ವ: ಬಿಡಿಸಲಾಗದ ಒಗಟು | Vartha Bharati- ವಾರ್ತಾ ಭಾರತಿ

ಭಾರತೀಯ ಪೌರತ್ವ: ಬಿಡಿಸಲಾಗದ ಒಗಟು

ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಸ್ಸಾಮಿನಲ್ಲಿ ಅಕ್ರಮ ವಲಸಿಗರ ಸಮಸ್ಯೆ ನೈಜವಾದುದಾದರೂ, ಅಸ್ಸಾಮಿನಲ್ಲಿ ಬಂಗಾಳಿ ಮಾತನಾಡುವವರೆಲ್ಲರೂ ಅಕ್ರಮ ವಲಸಿಗರೆಂದು ಸಾಬೀತುಪಡಿಸುವುದು ಇನ್ನೂ ತುಂಬಾ ಕಷ್ಟಕರ. ಅವರ ವಲಸೆಯು ದೇಶವಿಭಜನೆಗೆ ಮುನ್ನವೇ ನಡೆದಿರಬಹುದಾದ ಸಾಧ್ಯತೆ ಇದೆ. ಆದಾಗ್ಯೂ, ಒಂದು ವೇಳೆ ಮುಸ್ಲಿಮರನ್ನು ಹೊರತುಪಡಿಸಿ ಹಿಂದೂಗಳಿಗೆ ಹಾಗೂ ಸಿಖ್ಖರಿಗೆ ಮಾತ್ರ ಆಶ್ರಯವನ್ನು ಹಾಗೂ ಭಾರತದ ಪೌರತ್ವವನ್ನು ನೀಡುವ ಕಾನೂನು ರೂಪಿಸಿದಲ್ಲಿ ಅದು ರಾಜಕೀಯ ಪ್ರೇರಿತವಾಗಲಿದ್ದು, ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಲಿದೆ.


ಆಡಳಿತಾರೂಢ ಮೈತ್ರಿಕೂಟ ಸರಕಾರವು ತನ್ನ ಕೆಲವು ಸಂಚು ಹಾಗೂ ಚಿತಾವಣೆಗಳನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆಯನ್ನು ಈ ಲೇಖನವು ವಿವರಿಸುತ್ತದೆ. ಇದು ಪೂರ್ವಭಾವಿ ಎಚ್ಚರಿಕೆಯೂ ಆಗಿದೆ. ಸಮಾಜವು ಈ ವಿಷಯದಲ್ಲಿ ತನ್ನ ಪ್ರತಿರೋಧವನ್ನು ಮುಂದೂಡುತ್ತಾ ಹೋದರೆ ದೇಶಾದ್ಯಂತ ಗಂಭೀರವಾದ ಸಾಮಾಜಿಕ ಹಾಗೂ ಕೌಟುಂಬಿಕ ಅಸ್ಥಿರತೆ ತಲೆದೋರುವ ಸಾಧ್ಯತೆ ಇದೆ. ಕರ್ನಾಟಕದ ನಾಗರಿಕರು ಮತದಾರ ಗುರುತುಚೀಟಿಗಾಗಿ 2017ರ ನವೆಂಬರ್‌ನಿಂದ ರಾಜ್ಯ ಚುನಾವಣಾ ಕಚೇರಿಗೆ ಸಲ್ಲಿಸಿದ್ದ ನೂತನ ಅರ್ಜಿಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ನಾನು 2018ರ ಆಗಸ್ಟ್‌ನಲ್ಲಿ ಡೌನ್‌ಲೋಡ್ ಮಾಡಿದ್ದೆ. ದತ್ತಾಂಶಗಳ ಪ್ರಕಾರ, ಕೆಲವರಿಗೆ ಗುರುತು ಚೀಟಿ ನೀಡಲಾಗಿದ್ದು, ಬಹುತೇಕ ಅರ್ಜಿಗಳು ತಿರಸ್ಕರಿಸಲ್ಪಟ್ಟಿದ್ದವು. ಅವರು ಭಾರತೀಯ ನಾಗರಿಕರಲ್ಲವೆಂಬುದೇ ಈ ರೀತಿ ಅವರ ಅರ್ಜಿಗಳನ್ನು ತಿರಸ್ಕರಿಸುವುದಕ್ಕೆ ನೀಡಲಾದ ಒಂದು ಪ್ರಮುಖ ಕಾರಣವಾಗಿತ್ತು. ಈ ಕುರಿತು ವಿಶ್ಲೇಷಣಾತ್ಮಕವಾದ ಸಂಶೋಧನೆ ಹಾಗೂ ದತ್ತಾಂಶಗಳಿಂದ ಸಜ್ಜಿತವಾದ ವಿವರಗಳೊಂದಿಗೆ ಸಂಬಂಧಪಟ್ಟ ಮುಖ್ಯ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಲಾಯಿತು. ಆಗ ಅವರು ಈ ಬಗ್ಗೆ ತನಿಖೆಗೆ ಆಜ್ಞಾಪಿಸಿದರು ಹಾಗೂ 2018ರ ಡಿಸೆಂಬರ್‌ನಲ್ಲಿ ನನ್ನ ಜೊತೆ ನಡೆದ ಸಭೆಯಲ್ಲಿ ತನಿಖೆಯ ಫಲಿತಾಂಶಗಳನ್ನು ಹಂಚಿಕೊಳ್ಳಲಾಯಿತು.

ಅನೇಕ ಮಂದಿ ತಾವು ಭಾರತೀಯ ಪೌರರಲ್ಲವೆಂಬ ಹಣೆಪಟ್ಟಿ ಧರಿಸಬೇಕಾಗಿ ಬಂದಿರುವುದು ಅಸ್ಸಾಂ ಹಾಗೂ ಇತರ ಈಶಾನ್ಯ ಭಾರತದ ರಾಜ್ಯಗಳಲ್ಲಿ ಅತ್ಯಂತ ಸಂಕೀರ್ಣವಾದ ಹಾಗೂ ಪ್ರಮುಖವಾದ ಸಮಸ್ಯೆಯಾಗಿಬಿಟ್ಟಿದೆ. ಭಾರತೀಯ ಜನಗಣತಿಯು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಘೆಕ್ಕೃ ) ಎಂಬ ದಾಖಲೆಯನ್ನು ರೂಪಿಸುತ್ತದೆ. ಇದು ಪೌರತ್ವದ ಕುರಿತಾದ ಅಧಿಕೃತ ಸರಕಾರಿ ದಾಖಲೆಯಾಗಿದೆ. ಈ ವಿಷಯದಲ್ಲಿ ಅನುಸರಿಸಲಾದ ಕಾರ್ಯವಿಧಾನ ಹಾಗೂ ಪ್ರಕ್ರಿಯೆಗಳನ್ನು ಎನ್‌ಪಿಆರ್ ಜೊತೆಗೆ ಆಧಾರ್ ಅನ್ನುಜೋಡಿಸಲು ಅನುಸರಿಸಲಾಗುವುದು ಹಾಗೂ ಇವೆಲ್ಲವೂ, ರಾಜ್ಯ ಸರಕಾರವು ರಾಷ್ಟ್ರೀಯ ಪೌರರ ನೋಂದಣಿ (ಘ್ಕೆಇ) ಸಿದ್ಧಪಡಿಸುವುದಕ್ಕೆ ದಾರಿ ಮಾಡಿಕೊಡಲಿದೆ.

ಆಶ್ಚರ್ಯಕರವೆಂದರೆ, ಕರ್ನಾಟಕದ ಪ್ರಕರಣದ ಕುರಿತಂತೆ ನಡೆಸಲಾದ ಅಧ್ಯಯನವು ಸೂಚಿಸುವಂತೆ, ಭಾರತೀಯ ಚುನಾವಣಾ ಆಯೋಗ ಹಾಗೂ ರಾಜ್ಯ ಮಟ್ಟದ ಚುನಾವಣಾ ಅಧಿಕಾರಿಗಳು ಕೂಡಾ ತಥಾಕಥಿತ ಭಾರತೀಯ ಪೌರರಲ್ಲದವರನ್ನು ಗುರುತಿಸುವ ಕಾರ್ಯದಲ್ಲಿ ಮೇಲೆ ಉಲ್ಲೇಖಿಸಲಾದ ಮೂರು ಏಜೆನ್ಸಿಗಳನ್ನು ಬದಿಗೊತ್ತಿವೆ. ಇಂತಹ ಕಾರ್ಯಕ್ರಮವು ಭಾರತದ ಕೋಟ್ಯಂತರ ಪೌರರ ಮತದಾನದ ಹಕ್ಕನ್ನು ಅಸಿಂಧುಗೊಳಿಸುತ್ತದೆ ಹಾಗೂ ಖಂಡಿತವಾಗಿಯೂ ಇದು ಎಲ್ಲಾ ಪ್ರಭಾವಿತ ರಾಜ್ಯಗಳಲ್ಲಿ ಸಾಮಾಜಿಕ ಅಶಾಂತಿಗೆ ಕಾರಣವಾಗಲಿದೆ.

ಒಟ್ಟು 2.8 ಲಕ್ಷ ನೂತನ ಅರ್ಜಿಗಳ ಪೈಕಿ, ಅಭೂತಪೂರ್ವವೆಂಬಂತೆ ಸುಮಾರು ಶೇ. 62ರಷ್ಟು ಅರ್ಜಿಗಳನ್ನು ತಿರಸ್ಕರಿಸಲಾಯಿತು. ಶೇ.18ರಷ್ಟು ದಾವೆದಾರ ಅರ್ಜಿಗಳನ್ನು ಅವರು ‘ಭಾರತೀಯ ಪೌರರಲ್ಲ’ ಎಂಬ ನೆಲೆಯಲ್ಲಿ ತಿರಸ್ಕರಿಸಲಾಯಿತು ಹಾಗೂ ಶೇ.24 ಮಂದಿಗೆ ಅನರ್ಹರೆಂದು ಹಣೆಪಟ್ಟಿ ಕಟ್ಟಲಾಯಿತು. ಮತದಾರ ಪಟ್ಟಿಯಲ್ಲಿ ನೋಂದಣಿಗೆ ತಿರಸ್ಕರಿಸಲ್ಪಟ್ಟ ಒಟ್ಟು ವ್ಯಕ್ತಿಗಳ ಪೈಕಿ ಶೇ.30ರಷ್ಟು ಮಂದಿಯನ್ನು ಭಾರತೀಯ ಪೌರರಲ್ಲವೆಂಬ ನೆಲೆಯಲ್ಲಿ ತಿರಸ್ಕರಿಸಲಾಯಿತು ಹಾಗೂ ಶೇ.39 ಮಂದಿಯನ್ನು ಅನಿರ್ದಿಷ್ಟ ಕಾರಣಗಳಿಗಾಗಿ ಕೈಬಿಡಲಾಯಿತು.

 ಇಂತಹ ಕಠಿಣ ನಿರ್ಧಾರವನ್ನು ಕೈಗೊಳ್ಳುವ ಮೊದಲು ಚುನಾವಣಾ ಆಯೋಗವು ಅನುಸರಿಸಿದ ಪ್ರಕ್ರಿಯೆಗಳನ್ನು ಅಂದಾಜಿಸಲು ನಾನು ಹಾಗೂ ನಮ್ಮ ತಂಡವು, ಡೌನ್‌ಲೋಡ್ ಮಾಡಲ್ಪಟ್ಟ ಕಚ್ಚಾ ದತ್ತಾಂಶ ಪಟ್ಟಿಯೊಂದಿಗೆ, ಮತದಾರಪಟ್ಟಿಯಿಂದ ತಿರಸ್ಕೃತವಾದ ಆಯ್ದ ಕುಟುಂಬಗಳನ್ನು ಸಂಪರ್ಕಿಸಿತು. ಆಶ್ಚರ್ಯಕರವೆಂಬಂತೆ, ಯಾವ ಅರ್ಜಿದಾರರಿಗೂ ತಮ್ಮನ್ನು ಯಾವ ನೆಲೆಯಲ್ಲಿ ಮತದಾರ ನೋಂದಣಿ ಪಟ್ಟಿಗೆ ಸೇರ್ಪಡೆಗೊಳಿಸಲಾಗಿಲ್ಲವೆಂಬುದರ ಬಗ್ಗೆ ಅರಿವಿರಲಿಲ್ಲ. ತಾವು ಭಾರತೀಯ ಪೌರರೆಂಬುದಕ್ಕೆ ಪುರಾವೆಗಳನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲು ಅವರಿಗೆ ಅವಕಾಶ ನೀಡಲಾಗಿರಲಿಲ್ಲ. ಇನ್ನಷ್ಟು ಅಚ್ಚರಿಯ ಸಂಗತಿ ಏನೆಂದರೆ, ಅರ್ಜಿ ತಿರಸ್ಕೃತಗೊಂಡ ವ್ಯಕ್ತಿಗಳ ಬಳಿ, ತಮ್ಮ ವಾಸ್ತವ್ಯ ವಿಳಾಸಕ್ಕೆ ಪುರಾವೆಯಾಗಿ ಆಧಾರ್ ಇತ್ತು ಹಾಗೂ ಹಲವರು ವಿದ್ಯುತ್ ಶುಲ್ಕದ ಬಿಲ್‌ನಂತಹ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಶಕ್ತರಾಗಿದ್ದರು. ಈ ದಾಖಲೆಗಳನ್ನು ವಿಳಾಸ ದೃಢೀಕರಣಕ್ಕಾಗಿ ಬಳಸಿಕೊಳ್ಳಬಹುದಾಗಿತ್ತು. ಇತರರು ತಾವು ನೋಂದಾಯಿತ ವಸತಿ ವಿಳಾಸಗಳಲ್ಲಿ ಜನಿಸಿರುವುದಾಗಿ ವರದಿ ನೀಡಿದ್ದರು ಹಾಗೂ ಜನನ ಪ್ರಮಾಣಪತ್ರದ ಜೊತೆಗೆ ಶಾಲಾ ಸರ್ಟಿಫಿಕೇಟ್‌ಗಳನ್ನು ಕೂಡಾ ಹಾಜರುಪಡಿಸಲು ಶಕ್ತರಾಗಿದ್ದರು.

ಅತ್ಯಂತ ಮಹತ್ವದ ವಿಷಯವೆಂದರೆ, ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ವಿವಿಧ ಕಾರಣಗಳಿಂದಾಗಿ ಹಲವಾರು ಮಂದಿ ಮತದಾರರ ಹೆಸರುಗಳನ್ನು ನೋಂದಣಿ ಪಟ್ಟಿಯಲ್ಲಿ ಸೇರಿಸದೆ ಸೇರ್ಪಡೆಗೆ ತಿರಸ್ಕರಿಸಿರುವುದು ಕಂಡುಬಂದಿದೆ ಹಾಗೂ ಅವು ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರ ವೆಬ್‌ಸೈಟ್‌ನಲ್ಲಿ ಕ್ರೋಡೀಕರಣಗೊಳ್ಳುವ ಮುನ್ನ 600 ಮಂದಿ ಅಧಿಕೃತ ಸರಕಾರಿ ಅಧಿಕಾರಿಗಳು ಸಹಿ ಮಾಡುವ ಮೂಲಕ ಈ ಪಟ್ಟಿಗಳಿಗೆ ತಮ್ಮ ಅನುಮೋದನೆ ನೀಡಿರುತ್ತಾರೆ!

ಭಾರತೀಯ ಚುನಾವಣಾ ಕಾನೂನಿನಡಿ, ಒಬ್ಬ ವ್ಯಕ್ತಿಯು ಭಾರತೀಯ ಪೌರನಾ/ಳಾಗಿರದೆ ಇದ್ದಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿಗೊಳ್ಳಲು ಅನರ್ಹನಾ/ಳಾಗುತ್ತಾರೆ. ಮತದಾರಪಟ್ಟಿಯನ್ನು ಅಪ್‌ಡೇಟ್ ಮಾಡುವ ಹೊಣೆ ಹೊಂದಿರುವ ಚುನಾವಣಾ ಆಯೋಗವು ಪೌರತ್ವದ ಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇದನ್ನು ಸಹಜ ನ್ಯಾಯದ ತತ್ವದಡಿ ಕೈಗೊಳ್ಳಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಪಾರದರ್ಶಕತೆಯನ್ನು ಪ್ರದರ್ಶಿಸಬೇಕಾಗಿದೆ ಮತ್ತು ಮತದಾರಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ತಿರಸ್ಕರಿಸಿದ್ದಕ್ಕೆ ಕಾರಣವನ್ನು ನೀಡಬೇಕಾಗಿದೆ. ತಾನು ನೀಡಿರುವ ಕಾರಣಗಳ ಕುರಿತ ಅಧಿಸೂಚನೆ, ವ್ಯತಿರಿಕ್ತವಾದ ಪುರಾವೆಗಳು ಹಾಗೂ ನ್ಯಾಯೋಚಿತವಾದ ವಿಚಾರಣೆಯನ್ನು ಜಾಗರೂಕತೆಯಿಂದ ನಡೆಸಬೇಕಾಗಿದೆ.

1950ರ ಜನತಾ ಪ್ರಾತಿನಿಧ್ಯ ಕಾಯ್ದೆಯು, ನೋಂದಣಿ ಅಧಿಕಾರಿಗಳು ವಾಸ್ತವಾಂಶಗಳನ್ನು ಸಮರ್ಪಕವಾಗಿ ದೃಢೀಕರಿಸಿದ ಬಳಿಕವಷ್ಟೇ ಮತದಾರಪಟ್ಟಿಗೆ ನೋಂದಣಿಗಾಗಿನ ಹೊಸ ದಾವೆಗಳ ವೌಲ್ಯಮಾಪನ ನಡೆಸುವುದಕ್ಕೆ ಅವಕಾಶವನ್ನು ಒದಗಿಸುತ್ತದೆ. 1960ರ ಮತದಾರರ ನೋಂದಣಿಯ ನಿಯಮದಡಿ, ದಾವೆದಾರರಿಗೆ ಅಧಿಸೂಚನೆ, ವೈಯಕ್ತಿಕವಾಗಿ ಆಲಿಕೆ ಹಾಗೂ ಕಾರಣಗಳ ದಾಖಲಾತಿ ಸೇರಿದಂತೆ ಮತ್ತಷ್ಟು ವಿಸ್ತೃತವಾದ ಒಂದು ಪ್ರಕ್ರಿಯೆಯನ್ನೇ ಒದಗಿಸಲಾಗುತ್ತದೆ.

***

ಮತದಾರರ ಪಟ್ಟಿಯಲ್ಲಿ ಈ ಹಿಂದೆ ಸೇರ್ಪಡೆಗೊಂಡಿದ್ದ ವ್ಯಕ್ತಿಗಳ ಪ್ರಕರಣದಲ್ಲಿ, ಅವರನ್ನು ಭಾರತೀಯ ಪೌರರೆಂಬ ಗ್ರಹಿಕೆಯೊಂದಿಗೆ ಕಾಣಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ. ತಮ್ಮನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವ್ಯಕ್ತಿಗಳಿಗೆ, ಅವರು ಪೌರರಲ್ಲವೆಂದು ಯಾವ ಕಾರಣಕ್ಕೆ ಶಂಕಿಸಲಾಯಿತೆಂಬುದಕ್ಕೆ ಕಾರಣಗಳನ್ನು ನೀಡಬೇಕು ಹಾಗೂ ತಾವು ಬಯಸುವ ಎಲ್ಲಾ ಪುರಾವೆಗಳನ್ನು ಮಂಡಿಸಲು ಅವರಿಗೆ ಅವಕಾಶ ನೀಡಬೇಕೆಂದು ಅದು ಹೇಳಿದೆ. ತಮ್ಮ ಪೌರತ್ವವನ್ನು ದೃಢಪಡಿಸಲು ವ್ಯಕ್ತಿಗಳು ಸಲ್ಲಿಸಬಹುದಾದ ದಾಖಲೆಗಳ ಮಿತಿಯನ್ನು ಸೀಮಿತಗೊಳಿಸುವ ಯಾವುದೇ ಪ್ರಯತ್ನವನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಂತಿಮವಾಗಿ ಚುನಾವಣಾ ಆಯೋಗವು ಪ್ರತಿಯೊಂದು ವೈಯಕ್ತಿಕ ಪ್ರಕರಣದಲ್ಲಿಯೂ ಸ್ವತಂತ್ರವಾದ ಮನಸ್ಥಿತಿಯನ್ನು ತಾಳಬೇಕೇ ಹೊರತು, ಬಾಹ್ಯ ಸೂಚನೆಗಳನ್ನು ಅವಲಂಬಿಸಕೂಡದು. ಪೊಲೀಸ್ ವರದಿಗಳನ್ನು ಆಧರಿಸಿದ ಸಾರ್ವತ್ರೀಕರಿಸಿದ ಅಂಶಗಳನ್ನು ಆಯೋಗವು ಅವಲಂಬಿಸುವುದು ಅಸ್ವೀಕಾರಾರ್ಹವೆಂದು ನ್ಯಾಯಾಲಯ ಅಭಿಪ್ರಾಯಿಸಿದೆ.

ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಪಾಲ್ಗೊಳ್ಳುವುದು, ನಮ್ಮ ಪೌರತ್ವವನ್ನು ಅಭಿವ್ಯಕ್ತಗೊಳಿಸುವ ಪ್ರಾಥಮಿಕ ಮಾಧ್ಯಮವಾಗಿದೆ. ನಿರ್ಲಕ್ಷಿತ ಜನರು ಹಾಗೂ ಸಮುದಾಯಗಳು ಸರಕಾರದ ನೀತಿಯ ಮೇಲೆ ಪ್ರಭಾವ ಬೀರಲು ಹಾಗೂ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಇರುವ ಏಕೈಕ ದಾರಿ ಇದಾಗಿದೆ. ಹೀಗೆ, ಓರ್ವ ಪೌರನಿಗೆ ಮತದಾನದ ಹಕ್ಕನ್ನು ನಿರಾಕರಿಸುವುದು ಗಂಭೀರವಾದ ಕಾನೂನು ಹಾಗೂ ರಾಜಕೀಯ ಪರಿಣಾಮಗಳಿಗೆ ಕಾರಣವಾಗುತ್ತವೆ.
ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ನಿಯಮಗಳ ಕುರಿತಂತೆ ನಿಷ್ಠೆಯೊಂದಿಗೆ ಎಚ್ಚರ ವಹಿಸದೆ ಇದ್ದಲ್ಲಿ, ಅಧಿಕಾರದ ದುರುಪಯೋಗ ಹಾಗೂ ಸಮಾಜದ ದುರ್ಬಲ ವರ್ಗಗಳ ಹಕ್ಕುಗಳ ನಿರಾಕರಣೆಯಾಗುತ್ತದೆ. ಮತದಾರ ಪಟ್ಟಿಗೆ ಸೇರ್ಪಡೆಗೆ ನಿರಾಕರಣೆಯು ಪ್ರಬಲವಾದ ಸಾಂಸ್ಥಿಕ ಪ್ರಕ್ರಿಯೆಯನ್ನು ಆಹ್ವಾನಿಸುತ್ತದೆ. ಅಸಾಧಾರಣವೆಂಬಂತೆ ಅಧಿಕ ಪ್ರಮಾಣದ ವ್ಯಕ್ತಿಗಳನ್ನು ಭಾರತೀಯ ಪೌರರಲ್ಲವೆಂಬ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ. ತಮ್ಮನ್ನು ಮತದಾರ ಪಟ್ಟಿಯಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸಲು ಯೋಗ್ಯವಾದ ಹಾಗೂ ನ್ಯಾಯಯುತವಾದ ಅವಕಾಶವನ್ನು ಅವರಿಗೆ ನೀಡದೆ ಇರುವುದು ಪ್ರಜಾಪ್ರಭುತ್ವದ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಚುನಾವಣಾ ಆಯೋಗವು ಈ ಕುರಿತಂತೆ ತಕ್ಷಣವೇ ತ್ವರಿತವಾದ ಹಾಗೂ ನಿರ್ದಿಷ್ಟ ತಿದ್ದುಪಡಿ ಸಂಹಿತೆಯನ್ನು ರೂಪಿಸುವ ಮೂಲಕ ತಕ್ಷಣವೇ ಸ್ಪಂದಿಸಬೇಕಾಗಿದೆ ಹಾಗೂ ಪೌರರು ಮತದಾನದ ಅವಕಾಶದಿಂದ ವಂಚಿತರಾಗದಂತೆ ಖಾತರಿಪಡಿಸಬೇಕಾಗಿದೆ.

ಕರ್ನಾಟಕದಲ್ಲಿ ಮತದಾರರ ಪಟ್ಟಿಯಿಂದ ಹೊರತುಪಡಿಸುವಿಕೆಯ ಮಾದರಿಯನ್ನು ಅರಿತುಕೊಳ್ಳುವ ಮೂಲಕ ನಾವು ಇಂತಹ ಪಟ್ಟಿಗಳು ದೇಶದ ಇತರ ರಾಜ್ಯದಲ್ಲೂ ಲಭ್ಯವಿರುವುದನ್ನು ಅರಿತುಕೊಂಡೆವು. ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಸ್ಸಾಮಿನಲ್ಲಿ ಅಕ್ರಮ ವಲಸಿಗರ ಸಮಸ್ಯೆ ನೈಜವಾದುದಾದರೂ, ಅಸ್ಸಾಮಿನಲ್ಲಿ ಬಂಗಾಳಿ ಮಾತನಾಡುವವರೆಲ್ಲರೂ ಅಕ್ರಮ ವಲಸಿಗರೆಂದು ಸಾಬೀತುಪಡಿಸುವುದು ಇನ್ನೂ ತುಂಬಾ ಕಷ್ಟಕರ. ಅವರ ವಲಸೆಯು ದೇಶವಿಭಜನೆಗೆ ಮುನ್ನವೇ ನಡೆದಿರಬಹುದಾದ ಸಾಧ್ಯತೆ ಇದೆ. ಆದಾಗ್ಯೂ, ಒಂದು ವೇಳೆ ಮುಸ್ಲಿಮರನ್ನು ಹೊರತುಪಡಿಸಿ ಹಿಂದೂಗಳಿಗೆ ಹಾಗೂ ಸಿಖ್ಖರಿಗೆ ಮಾತ್ರ ಆಶ್ರಯವನ್ನು ಹಾಗೂ ಭಾರತದ ಪೌರತ್ವವನ್ನು ನೀಡುವ ಕಾನೂನು ರೂಪಿಸಿದಲ್ಲಿ ಅದು ರಾಜಕೀಯ ಪ್ರೇರಿತವಾಗಲಿದ್ದು, ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಲಿದೆ.

ಒಂದು ವೇಳೆ ಇದೇ ಮಾನದಂಡಗಳನ್ನು ಇತರ ರಾಜ್ಯಗಳಲ್ಲಿಯೂ ಬಳಸಿದಲ್ಲಿ ಅದು ರಾಷ್ಟ್ರೀಯ ವಿನಾಶವೆನಿಸುವುದು ಹಾಗೂ ಸಾಮಾಜಿಕ ಬಹಿಷ್ಕಾರಕ್ಕೆ ದಾರಿ ಮಾಡಿಕೊಡುತ್ತದೆ ಅಥವಾ ಹಿಂಸೆ, ಹತ್ಯಾಕಾಂಡ ಹಾಗೂ ಮೃತ್ಯುಗಳಿಂದ ಕೂಡಿದ ಸಾಮಾಜಿಕ ಕ್ರಾಂತಿಗೂ ಕಾರಣವಾಗುವ ಸಾಧ್ಯತೆಯಿದೆ.

ಭಾರತೀಯ ಜನಗಣತಿ, ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತಕ್ಕೆ ಸೇರಿದ ಸ್ಥಳೀಯ ಸರಕಾರಿ ಅಧಿಕಾರಿಗಳು ತಥಾಕಥಿತ ಭಾರತೀಯ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ರಾಜ್ಯ ಮಟ್ಟದ ಪ್ರಾಧಿಕಾರಗಳು, ಆಯಾ ರಾಜ್ಯದ ಪೌರರ ರಾಷ್ಟ್ರೀಯ ನೋಂದಣಿಪಟ್ಟಿ (ರಿಜಿಸ್ಟರ್) ಅನ್ನು ಪ್ರಕಟಿಸುತ್ತವೆ. ಬಳಿಕ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಹೆಸರುಗಳು ನೋಂದಣಿ ಪಟ್ಟಿಯಲ್ಲಿರುವುದನ್ನು ತಪಾಸಣೆ ನಡೆಸುವುದು ವ್ಯಕ್ತಿಗಳ ಹೊಣೆಗಾರಿಕೆಯಾಗಿರುತ್ತದೆ. ಪಟ್ಟಿಯಲ್ಲಿ ತಮ್ಮ ಅಥವಾ ತಮ್ಮ ಕುಟುಂಬಿಕರ ಹೆಸರು ನಾಪತ್ತೆಯಾಗಿದ್ದಲ್ಲಿ ಅವರು ಒಂದೋ ತಾವು ಭಾರತೀಯ ಪೌರರಲ್ಲವೆಂಬ ತಮ್ಮ ಸ್ಥಾನಮಾನವನ್ನು ಒಪ್ಪಿಕೊಳ್ಳಬೇಕು ಅಥವಾ ತಮ್ಮನ್ನು ಪಟ್ಟಿಯಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸಿ ವಿದೇಶಿಯರ ನ್ಯಾಯಾಧಿಕರಣದ ಮೆಟ್ಟಲೇರಬೇಕು. ಈ ನ್ಯಾಯಾಧಿಕರಣದ ನಿರ್ಧಾರವು ಅಂತಿಮವಾದುದು, ಆದಾಗ್ಯೂ ಯಾರಾದರೂ ಕಾನೂನಿನ ನ್ಯಾಯಾಲಯಗಳ ಶ್ರೇಣೀಕೃತ ವ್ಯವಸ್ಥೆಯಲ್ಲಿ ನ್ಯಾಯ ಕೋರಬಹುದಾಗಿದೆ ಹಾಗೂ ಭಾರತೀಯ ಪೌರನಾಗಿ ತನ್ನ ಹಕ್ಕನ್ನು ಗಳಿಸಬಹುದಾಗಿದೆ.

ನೂತನ ಪೌರತ್ವ (ತಿದ್ದುಪಡಿ) ವಿಧೇಯಕ 2019ರಂತಹ ಹಲವಾರು ಪೌರತ್ವದ ಅಂಶಗಳನ್ನು ನಿರ್ಧರಿಸುವಲ್ಲಿ ಪ್ರಸ್ತುತತೆಯನ್ನು ಹೊಂದಿರುವ ಹಲವಾರು ಕಾಯ್ದೆಗಳು, ಕಾನೂನುಗಳು ಹಾಗೂ ವಿಧಾನಗಳಿವೆ. ಈ ಕಾಯ್ದೆಯು ಬಾಂಗ್ಲಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಹಿಂದೂಗಳು, ಜೈನರು, ಕ್ರೈಸ್ತರು, ಸಿಖ್ಖರು, ಬೌದ್ಧರು ಹಾಗೂ ಪಾರ್ಸಿಗಳಿಗೆ ಭಾರತದಲ್ಲಿ 12 ವರ್ಷಗಳ ಬದಲಿಗೆ ಏಳು ವರ್ಷಗಳ ವಾಸ್ತವ್ಯದ ಬಳಿಕ ಅವರು ಯಾವುದೇ ದಾಖಲೆಗಳನ್ನು ಹೊಂದಿರದಿದ್ದರೂ ಪೌರತ್ವಕ್ಕೆ ಅರ್ಹರಾಗುತ್ತಾರೆ ಎಂದು ಪ್ರತಿಪಾದಿಸುತ್ತದೆ. 2019ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯು ಇನ್ನೊಂದು ಕಾರ್ಯವಿಧಾನವಾಗಿದ್ದು, ಅದನ್ನು ಬಳಸಿಕೊಂಡು ಸ್ಥಳೀಯ ಪೊಲೀಸ್ ಸಿಬ್ಬಂದಿಯು, ವ್ಯಕ್ತಿಯನ್ನು ಅಥವಾ ಕುಟುಂಬವನ್ನು ತೀವ್ರ ತೊಂದರೆಗೆ ಸಿಲುಕಿಸಬಹುದಾಗಿದೆ.

ಹೊರನೋಟಕ್ಕೆ ಈ ವಿಧಾನಗಳು ಕಾನೂನುಬದ್ಧ ಹಾಗೂ ತೃಪ್ತಿಕರವೆಂಬಂತೆ ಕಾಣುತ್ತದೆ. ಆದರೆ ಎನ್‌ಆರ್‌ಸಿಯಿಂದ ಹೊರಗಿಟ್ಟಿರಬಹುದಾದ ಸಾಧ್ಯತೆಯಿರುವ ಲಕ್ಷಾಂತರ ಹೆಸರುಗಳನ್ನು ಈ ನ್ಯಾಯಾಧಿಕರಣಗಳು ಹಾಗೂ ಆನಂತರ ನ್ಯಾಯಾಲಯಗಳು ಹೇಗೆ ನಿಭಾಯಿಸಬಹುದೆಂಬುದನ್ನು ಗಮನಿಸುವುದು ಅಗತ್ಯವಾಗಿದೆ. ಈ ಪ್ರಕ್ರಿಯೆಗಳು ಒಂದು ತೀರ್ಮಾನಕ್ಕೆ ಬರಲು ಹಲವಾರು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು.

ಒಂದು ವೇಳೆ ಎನ್‌ಆರ್‌ಸಿ ಕಾರ್ಯಸೂಚಿಯನ್ನು ದೇಶದ 30 ರಾಜ್ಯಗಳ ಪೈಕಿ ಕೇವಲ ನಾಲ್ಕರಲ್ಲಿ ಅಂದರೆ ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣದಂತಹ ರಾಜ್ಯಗಳಲ್ಲಿ ಎನ್‌ಆರ್‌ಸಿ ಕಾರ್ಯತಂತ್ರವನ್ನು ಜಾರಿಗೆ ತಂದಲ್ಲಿ, ಬಂಡಾಯ ರೂಪದ ಸಾಮಾಜಿಕ ಚಳವಳಿ ಅಥವಾ ಕ್ರಾಂತಿಗೆ ಕಡಿಮೆಯಲ್ಲದಂತಹ ಬೃಹತ್ ಗಾತ್ರದ ಬಿಕ್ಕಟ್ಟನ್ನು ಸೃಷ್ಟಿಸಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ ಪೂರ್ಣ ಪ್ರಮಾಣದ ತನಿಖೆ ನಡೆಸಿದ ಬಳಿಕ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯವರು ಕಂಡುಕೊಂಡಂತೆ ಮತದಾರ ಪಟ್ಟಿಗೆ ನೋಂದಣಿ ಕೋರಿ ಸಲ್ಲಿಸಲಾದ 2.8 ಲಕ್ಷ ಅರ್ಜಿಗಳ ಪೈಕಿ ಕೇವಲ 9 ಅರ್ಜಿಗಳು ಮಾತ್ರವೇ ಭಾರತೀಯೇತರ ಪ್ರಜೆಗಳದ್ದಾಗಿದ್ದವು. ಅವುಗಳಲ್ಲಿ ಆರು ನೇಪಾಳಿಗಳಾಗಿದ್ದರೆ, ಉಳಿದ ಮೂವರು ಟಿಬೆಟಿಯನ್ನರು. ಇವರೆಲ್ಲರೂ ಕಾನೂನುಬದ್ಧ ನಿವಾಸಿಗಳಾಗಿದ್ದರೂ, ತಪ್ಪಾಗಿ ಮತದಾರರ ಗುರುತುಚೀಟಿಗಾಗಿ ಅರ್ಜಿ ಸಲ್ಲಿಸಿದ್ದರು.

ಭಾರತದ ಸುಶಿಕ್ಷಿತ ಪೌರರು ಶೀಘ್ರದಲ್ಲೇ ಕಾರ್ಯಪ್ರವೃತ್ತರಾಗುವುದಕ್ಕೆ ಹಾಗೂ ಬೌದ್ಧಿಕ ಮತ್ತು ಶೈಕ್ಷಣಿಕ ಸಂವಾದ ಹಾಗೂ ದಾಖಲೀಕರಣಕ್ಕೆ ಇದು ಸಕಾಲವಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top