ಮುಂಬೈನಲ್ಲಿ ಕೊರೋನ ಸ್ಫೋಟಗೊಂಡಾಗ..... | Vartha Bharati- ವಾರ್ತಾ ಭಾರತಿ

ಮುಂಬೈನಲ್ಲಿ ಕೊರೋನ ಸ್ಫೋಟಗೊಂಡಾಗ.....

ಆದರೆ ಇದೀಗ ಕರ್ನಾಟಕ ಸರಕಾರ ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕಕ್ಕೆ ಬರುವವರನ್ನು ಕೆಲವು ದಿನಗಳ ಕಾಲ ತಡೆಹಿಡಿದಿದೆ. ಅತ್ತ ಉಡುಪಿ ಡಿಸಿಯವರು ಮುಂಬೈ ಕನ್ನಡಿಗರ ಕೆಲವರ ವಾಟ್ಸ್‌ಆ್ಯಪ್ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಮುಂಬೈ ಕನ್ನಡಿಗರೂ ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಎಂದೂ ತಮ್ಮ ಸಂಕಷ್ಟವನ್ನು ಹೇಳದೆ ನಗುನಗುತ್ತಾ ಊರಿಗೆ ಹೋಗಿ ಬರುತ್ತಿದ್ದವರು ಇಂದು ಅನಿವಾರ್ಯವಾಗಿ ತಮ್ಮ ಸಂಕಷ್ಟ ಹೇಳಬೇಕಾದ ದಿನ ಬಂದಿದೆ.


ಮೇ 22 ರಂದು ಮುಂಬೈಯಲ್ಲಿ ಒಂದೇ ದಿನ 1,751 ಕೊರೋನ ರೋಗಿಗಳು ಪತ್ತೆಯಾಗಿ ದಾಖಲೆಯ ಸಂಖ್ಯೆ ಎನಿಸಿತು. ಅದಕ್ಕಿಂತ ಮೊದಲು ಮೇ 19 ರಂದು 24 ಗಂಟೆಗಳಲ್ಲಿ 1,411 ಕೊರೋನ ಪಾಸಿಟಿವ್ ರೋಗಿಗಳದ್ದು ದಾಖಲೆ ಸಂಖ್ಯೆ ಆಗಿತ್ತು. ನಾಳೆಯ ದಿನ ಇನ್ನೇನೋ.....

 ಕೊರೋನ ಮಹಾಮಾರಿಯಿಂದ ತತ್ತರಿಸುತ್ತಿರುವ ಮುಂಬೈ ಮಹಾನಗರದಲ್ಲಿ ಈಗ ರೋಗಿಗಳ ಸ್ಥಿತಿ ಎಲ್ಲಿಯ ತನಕ ಬಂದಿದೆ ಅಂದರೆ ರೋಗಿಗಳಿಗೆ ಶುಶ್ರೂಷೆ ಆರಂಭಿಸುವ ಮುನ್ನವೇ ಅವರ ಸಾವು ಸಂಭವಿಸುತ್ತಿವೆ. ಹೊಸ ರೋಗಿಗೆ ಬೆಡ್ ಸಿಗಲು ದಿನವಿಡೀ ಕಾಯುವ ಸ್ಥಿತಿ ಬಂದಿದೆ. ಎಲ್ಲಿಯತನಕ ಅಂದರೆ 24 ಗಂಟೆಗಳ ಕಾಲ ವೀಲ್ಚೇರ್‌ನಲ್ಲೇ ಕೂತ ರೋಗಿಯನ್ನು ಹಾಸಿಗೆ ಸಿಗುವಾಗ ಐಸಿಯುಗೆ ಭರ್ತಿಗೊಳಿಸುವ ಅಸಹಾಯಕ ಸ್ಥಿತಿ ಕಂಡು ಬರುತ್ತಿದೆ. ರೋಗಿಗಳ ಸಂಬಂಧಿಕರಿಗೆ ರೋಗಿಯನ್ನು ಎಲ್ಲಿ ಭರ್ತಿ ಗೊಳಿಸುತ್ತಿದ್ದಾರೆ ಎಂದೇ ಕೆಲವೊಮ್ಮೆ ತಿಳಿದು ಬರುತ್ತಿಲ್ಲ.

ಕ್ರಿಕೆಟ್ ಆಟಗಾರರ ಪ್ರೀತಿಯ ಗ್ರೌಂಡ್ ಮುಂಬೈಯ ವಾಂಖೆಡೆ ಸ್ಟೇಡಿಯಂ ಕೂಡ ಇದೀಗ ಕ್ವಾರಂಟೈನ್ ಸೆಂಟರ್ ಆಗುತ್ತಿದೆ ಎಂದರೆ ಮುಂಬೈಯಲ್ಲಿ ಕೋವಿಡ್-19ರ ಭಯಾನಕ ಸ್ಥಿತಿ ಈಗಾಗಲೇ ಅರ್ಥ ಆಗಿರಬಹುದು. ಆಸ್ಪತ್ರೆಗಳಲ್ಲಿ ಬೆಡ್ ಮತ್ತುಆ್ಯಂಬುಲೆನ್ಸ್‌ಗಳ ತೀವ್ರ ಕೊರತೆ ಅನೇಕ ಕಡೆ ಕಂಡು ಬರುತ್ತಿದೆ. ಮನಪಾ ಎ ವಾರ್ಡ್ ಆಫೀಸರ್ ಚಂದಾ ಜಾದವ್ ಈ ಬಗ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಪತ್ರ ಬರೆದು ವಾಂಖೆಡೆ ಸ್ಟೇಡಿಯಂ ಅನ್ನು ತಮ್ಮ ವಶಕ್ಕೆ ನೀಡುವಂತೆ ಸೂಚಿಸಿದರು. ಬಿಎಂಸಿ ಉಪಾಯುಕ್ತ ಹರ್ಷದ ಕಾಲೆ ಅವರು ಸ್ಟೇಡಿಯಂನಲ್ಲಿ 800 ಹಾಸಿಗೆಯುಳ್ಳ ಕ್ವಾರಂಟೈನ್ ಸೆಂಟರ್ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ವರ್ಲಿಯ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾವನ್ನು ಕೂಡಾ ಕ್ವಾರಂಟೈನ್ ಸೆಂಟರ್ ಮಾಡಲಾಗಿದೆ.

ಆದರೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬಿಕೆಸಿ ಮೈದಾನದಲ್ಲಿ 15 ದಿನಗಳಲ್ಲಿ 1,026 ಬೆಡ್‌ಗಳ ಕ್ವಾರಂಟೈನ್ ಸೆಂಟರ್ ನಿರ್ಮಿಸಿ ಕೆಲವು ದಿನ ಆದರೂ ರೋಗಿಗಳಿಗೆ ಎಂಟ್ರಿ ಸಿಕ್ಕಿಲ್ಲ. ಕಾರಣ ಗ್ರಾಮೀಣ ಭಾಗಗಳಿಂದ ಬಂದ ವೈದ್ಯರುಗಳಿಗೆ ಎಕ್ಸ್ರೇ ಮೆಷಿನ್, ಪೆಥಾಲಾಜಿಕಲ್ ಉಪಕರಣಗಳನ್ನು ಬಳಸುವ ಟ್ರೇನಿಂಗ್ ನೀಡಲು ಕಂಪೆನಿಯವರು ಬಂದಿಲ್ಲವಂತೆ.

ಅತ್ತ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಸಮರ್ಪಕ ಹೊಂದಾಣಿಕೆಗಾಗಿ ರಾಜ್ಯ ಮತ್ತು ಜಿಲ್ಲಾ ಸ್ಥರದಲ್ಲಿ ಎರಡು ಸಮಿತಿಗಳನ್ನು ಸ್ಥಾಪನೆ ಮಾಡಲಾಗಿದೆ. ಈ ನಡುವೆ ವಾಂಖೆಡೆ ಸ್ಟೇಡಿಯಂನಂತೆ ಬ್ರಬೋರ್ನ್ ಸ್ಟೇಡಿಯಂನಲ್ಲೂ ಕ್ವಾರಂಟೈನ್ ಸೆಂಟರ್ ಮಾಡುವಂತೆ ಸಂಸದ ಸಂಜಯ ರಾವತ್ ತಿಳಿಸಿದರೆ ಅದಕ್ಕೆ ಆದಿತ್ಯ ಠಾಕ್ರೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲಿ ಮಣ್ಣಿನ ನೆಲ ಇದೆ. ಮಳೆಗಾಲದಲ್ಲಿ ಕಷ್ಟ ಆಗಲಿದೆ ಎಂದು ಆದಿತ್ಯ ಕಾರಣ ತಿಳಿಸಿದ್ದಾರೆ. ಇಂದು ಮಹಾರಾಷ್ಟ್ರದಲ್ಲಿ ಹೋಮ್ ಕ್ವಾರಂಟೈನ್ ಮತ್ತು ಇನ್‌ಸ್ಟಿಟ್ಯೂಟನ್ ಕ್ವಾರಂಟೈನ್ ಪ್ರಕರಣಗಳು ಹೆಚ್ಚುತ್ತಿವೆ.

ಕಳೆದ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಹೋಮ್ ಕ್ವಾರಂಟೈನ್ ಪ್ರಕರಣಗಳಲ್ಲಿ 60 ಪ್ರತಿಶತ ಏರಿದೆ. ಮೇ 20ರ ಸುಮಾರಿಗೆ 4 ಲಕ್ಷದಷ್ಟು ಹೋಮ್ ಕ್ವಾರಂಟೈನ್ ವರದಿಯಾಗಿದೆ. ಪೊಲೀಸರು ಸಾಕಾಗದೆ ಸಿಐಎಸ್‌ಎಫ್ ತುಕಡಿಗಳು ಈಗಾಗಲೇ ಮುಂಬೈಗೆ ಬಂದಿವೆ.ಧಾರಾವಿಯಲ್ಲಿ ಇವರನ್ನು ಕಾಣಬಹುದು.
  
  ಮುಂಬೈಯ ಸ್ಲಮ್ ಕ್ಷೇತ್ರ ಧಾರಾವಿಯಲ್ಲಿ ‘ಡೋರ್ ಟು ಡೋರ್ ಸ್ಕ್ರೀನಿಂಗ್’ ಅನ್ನು ಮನಪಾ ಕೈಗೊಂಡಿದೆ. ಧಾರಾವಿಯಲ್ಲಿ ಈಗಾಗಲೇ ಒಂದೂವರೆ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್‌ಗಳು ಕಂಡುಬಂದಿವೆ. 24 ವಾರ್ಡ್ ಆಫೀಸರ್ ಗಳ ಜೊತೆ ಮನಪಾ ಕಮಿಷನರ್ ಐ.ಎಸ್. ಚಹಲ್ ನಿರಂತರ ಸಂಪರ್ಕ ಇರಿಸಿದ್ದಾರೆ. ಧಾರಾವಿ, ವರ್ಲಿ, ಕೋಳಿವಾಡ , ಅಂಬೇಡ್ಕರ್ ನಗರ, ಕಫ್ ಪರೆಡ್, ಬೈಕಲಾ, ಕುರ್ಲಾ, ದಹಿಸರ್, ಗೋರೆಗಾಂವ್, ಮಲಾಡ್, ಚೆಂಬೂರು, ಗೋವಂಡಿ..... ಇಲ್ಲೆಲ್ಲ ಜೋಪಡಪಟ್ಟಿ ಕ್ಷೇತ್ರಗಳು ಹೆಚ್ಚಿಗಿದ್ದು ತಲೆನೋವು ತಂದಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಬಿಎಂಸಿ ಕಮಿಷನರ್ ಇಲ್ಲಿ ಮಿಷನ್ ಸ್ಲಮ್ ಕೈಗೊಂಡಿದ್ದು ತಾವೇ ಕೆಲಸಕಾರ್ಯಗಳನ್ನು ಪರಿಶೀಲಿಸಲು ಜೋಪಡಿ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

ಈ ನಡುವೆ ಮನಪಾ ಕಮಿಷನರ್ ಖಾಸಗಿ ನರ್ಸಿಂಗ್ ಹೋಮ್, ಪ್ರೈವೇಟ್ ಆಸ್ಪತ್ರೆ, ಪ್ರೈವೇಟ್ ಕ್ಲಿನಿಕ್‌ಗಳನ್ನು ತೆರೆಯಲು ಅನುಮತಿ ನೀಡಿದರೂ ಹಲವರು ಇನ್ನೂ ತೆರೆಯಲು ಸಿದ್ಧರಿಲ್ಲ. ಈ ಆದೇಶವನ್ನು ಧಿಕ್ಕರಿಸಿದ ಹಲವು ಹಾಸ್ಪಿಟಲ್, ಕ್ಲಿನಿಕ್‌ಗಳ ವಿರುದ್ಧ ಅಪರಾಧ ಪ್ರಕರಣವನ್ನು ಕಮಿಷನರ್‌ರು ದಾಖಲಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಕೊರೋನ ರೋಗಿಗಳಿಂದ ಸಿಕ್ಕಾಪಟ್ಟೆ ಹಣ ದೋಚುವುದನ್ನು ಕಂಡು ಖರ್ಚನ್ನು ಇಂತಿಷ್ಟೇ ಎಂದು ಸರಕಾರ ದರ ನಿಗದಿಪಡಿಸಿದೆ. ಈ ನಡುವೆ ಮುಂಬೈಯ ಕ್ವಾರಂಟೈನ್ ಕೇರ್ ಸೆಂಟರ್‌ಗಳಲ್ಲಿ ಗುತ್ತಿಗೆ ಪಡೆಯಲು ಸಾವಿರಾರು ಕೋಟಿ ರೂ.ಯ ಹಗರಣಗಳು ನಡೆದಿವೆ ಎಂಬ ಆರೋಪ ಕೇಳಿ ಬರುತ್ತಿದೆ. ವಿಭಿನ್ನ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಊಟ-ತಿಂಡಿಯ ಗುತ್ತಿಗೆ ಪಡೆದವರು ಬೇರೆ-ಬೇರೆ ಕಡೆ ಬೇರೆ ಬೇರೆ ದರವನ್ನು ವಸೂಲಿ ಮಾಡುತ್ತಿದ್ದಾರೆಂಬ ದೂರುಗಳು ಬರುತ್ತಿವೆ. ಈ ಗುತ್ತಿಗೆ ಪಡೆಯಲೂ ರಾಜಕೀಯ ಪಾರ್ಟಿಗಳು ಸಕ್ರಿಯವಾಗಿವೆ.

ಪೊಲೀಸರಿಗೆ, ಬೆಸ್ಟ್ ಕಾರ್ಮಿಕರಿಗೆ ಕೊರೋನ ಭಯ:
ಮುಂಬೈಯ ಪ್ರಮುಖ ಸಾರಿಗೆ ಸಂಸ್ಥೆ ಬೆಸ್ಟ್ ಬಸ್ ಕಾರ್ಮಿಕರಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿದ್ದು ಬೆಸ್ಟ್ ಯೂನಿಯನ್ ಇದೀಗ ಮುಷ್ಕರಕ್ಕೆ ಮುಂದಾಗಿದೆ. ದಿನಕ್ಕೆ 1.50 ಲಕ್ಷ ದಷ್ಟು ಪೊಲೀಸ್, ಅತ್ಯವಶ್ಯಕ ಸೇವೆಗಳ ಜನರು ಈಗ ಬೆಸ್ಟ್ ನಲ್ಲಿ ಪ್ರಯಾಣಿಸುತ್ತಿದ್ದಾರೆ. 400 ಬಸ್‌ಗಳನ್ನು ಲೀಸ್‌ನಲ್ಲಿ ಬೆಸ್ಟ್ ಪಡೆದಿದೆ. ಬೆಸ್ಟ್ ಯೂನಿಯನ್ ಅಧ್ಯಕ್ಷ ಶಶಾಂಕ್ ರಾವ್ ತಿಳಿಸಿದಂತೆ ಬೆಸ್ಟ್‌ನ 120 ಜನರಿಗೆ ಈಗಾಗಲೇ ಪಾಸಿಟಿವ್ ಬಂದಿದೆ. ಐವತ್ತು ಜನ ಗುಣವಾಗಿ ವಾಪಸ್ ಬಂದಿದ್ದರೂ ಈಗಾಗಲೇ ಎಂಟು ಜನ ಸತ್ತಿದ್ದಾರೆ. ನಮಗೆ ಭದ್ರತೆ ಬೇಕು. ಹಾಗಿದ್ದರೆ ಮಾತ್ರ ಡ್ಯೂಟಿ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂಬೈನಲ್ಲಿ 48,000 ಪೊಲೀಸರು ಇದ್ದಾರೆ. ಇವರಲ್ಲಿ 43,000 ಪೊಲೀಸರು ಕೊರೋನ ಡ್ಯೂಟಿಯಲ್ಲಿ ಇದ್ದಾರೆ. ಇವರಲ್ಲಿ 950 ಪೊಲೀಸರು ಕೊರೋನ ಸೋಂಕಿತರಾಗಿದ್ದಾರೆ. ಈಗಾಗಲೇ 12 ಜನ ಪೊಲೀಸರು ಸಾವಿಗೀಡಾಗಿದ್ದಾರೆ. ಇವೆಲ್ಲದರ ನಡುವೆ ರಾಜಕೀಯ ರಂಗವು ಬಿಸಿಗೊಂಡಿದೆ. ಉದ್ಧವ್ ಠಾಕ್ರೆಯ ಸರಕಾರವು ಕೊರೋನ ನಿಯಂತ್ರಿಸಲು ವಿಫಲವಾಗಿದೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಅವರು ‘ಮಹಾರಾಷ್ಟ್ರ ಬಚಾವೋ ಆಂದೋಲನ’ ಆರಂಭಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಪ್ರಭಾವಿ ತಗೊಂಡಿದೆ. ಅದಕ್ಕೆ ವಿರುದ್ಧವಾಗಿ ಮಹಾ ವಿಕಾಸ ಅಘಾಡಿಯಿಂದ ‘ಮಹಾರಾಷ್ಟ್ರ ದ್ರೋಹಿ ಬಿಜೆಪಿ’ ಎನ್ನುವ ಪ್ರತಿದಾಳಿಯನ್ನು ಆಡಳಿತವು ಹಮ್ಮಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ‘ಮಹಾರಾಷ್ಟ್ರ ದ್ರೋಹಿ ಬಿಜೆಪಿಗೆ’ ಹೆಚ್ಚು ಪ್ರತಿಕ್ರಿಯೆಗಳು ಬಂದಿದ್ದು ಬಿಜೆಪಿಗೆ ಮುಜುಗರವಾಗಿದೆ. ಈ ದಿನಗಳಲ್ಲಿ ಜೊತೆಯಾಗಿ ಸಹಕರಿಸಿ ಮುಂಬೈಯಿಂದ ಕೊರೋನ ಓಡಿಸಿ. ರಾಜಕೀಯ ಬೇಡ ಎನ್ನುವುದು ಅನೇಕರ ಅಭಿಪ್ರಾಯ.

ಮುಂಬೈ ಆರ್ಥಿಕ ರಾಜಧಾನಿ. ಈಗ ಸಂಕಷ್ಟದಲ್ಲಿದೆ. ಇದರಿಂದ ಮೇಲೇಳಲು ಕೆಲವು ವರ್ಷ ಬೇಕಾದೀತು. ವಲಸೆ ಕಾರ್ಮಿಕರು ಹೆಚ್ಚಿನವರು ಮುಂಬೈ ತ್ಯಜಿಸಿ ಹೋಗಿದ್ದಾರೆ. ಮತ್ತೆ ಅವರೆಲ್ಲ ಬರುತ್ತಾರೋ? ಬಂದರೆ ಯಾವಾಗ ಬರುತ್ತಾರೆ? ಹೇಳುವಂತಿಲ್ಲ. ಹೋಟೆಲ್ ಉದ್ಯಮ, ರಿಯಲ್ ಎಸ್ಟೇಟ್ ಕಷ್ಟದಲ್ಲಿದೆ. ಇದೇ ಸಮಯ ಸಿಮೆಂಟ್, ಸ್ಟೀಲ್ ಕಂಪೆನಿಗಳು 25 ರಿಂದ 30 ಪ್ರತಿಶತ ಬೆಲೆ ಏರಿಸಿದ್ದರಿಂದ ಬಿಲ್ಡರ್‌ಗಳು ಕಂಗಾಲಾಗಿದ್ದು ಕೇಂದ್ರ ಮಂತ್ರಿ ಹರ್ದೀಪ್ ಸಿಂಗ್‌ರಿಗೆ ಮಧ್ಯೆ ಪ್ರವೇಶಿಸುವಂತೆ ವಿನಂತಿಸಿದ್ದಾರೆ. ಇಲ್ಲವಾದರೆ ಫ್ಲಾಟ್‌ಗಳ ಬೆಲೆ ಮತ್ತಷ್ಟು ಏರಿಸಬೇಕಾಗು ವುದೆಂದು ಬಿಲ್ಡರ್‌ಗಳು ತಮ್ಮ ಅಸಹಾಯಕತೆ ತಿಳಿಸಿದ್ದಾರೆ. ತನ್ನ ಆರ್ಥಿಕ ಸ್ಥಿತಿ ಸುಧಾರಿಸಲು ಮಹಾರಾಷ್ಟ್ರ ಸರಕಾರ ಮೇ 23 ರಿಂದ ಆನ್‌ಲೈನ್ ಶರಾಬು ಮಾರಾಟಕ್ಕೆ ಅನುಮತಿ ನೀಡಿದೆ. ಕೌಂಟರ್ ಶರಾಬು ಮಾರಾಟ ಇಲ್ಲ. ಅತ್ತ ಭಿವಂಡಿಯಲ್ಲಿಯೂ ಕಂಟೈನ್ಮೆಂಟ್ ವಲಯ ಬಿಟ್ಟು ಪವರ್ಲೂಮ್ ಕಾರ್ಖಾನೆಗೆ ಕೆಲವೆಡೆ ಅನುಮತಿ ನೀಡಿದೆ. ಮುಂಬೈ ಮಾಯಾನಗರಿ. ಬದುಕನ್ನು ಅರಸುತ್ತಾ ದೇಶಾದ್ಯಂತದಿಂದ ಇಲ್ಲಿಗೆ ಜನರು ಹೊಸ ಕನಸುಗಳೊಂದಿಗೆ ಪ್ರತೀ ದಿನ ಬರುತ್ತಿದ್ದರು. ಬಂದವರನ್ನು ಮುಂಬೈ ಎಂದೂ ಕೈಬಿಟ್ಟಿರಲಿಲ್ಲ ಕೊರೋನ ದಾಳಿಯ ತನಕ.

ಕರ್ನಾಟಕದ ಕರಾವಳಿಯಿಂದಲೂ ಮುಂಬೈ ಮಹಾನಗರಕ್ಕೆ ಮೊನ್ನೆ ಮೊನ್ನೆಯ ತನಕವೂ ಬರುತ್ತಲಿದ್ದರು. ಕರ್ನಾಟಕ ರಾಜ್ಯ ಉದಯವಾಗುವ ಮೊದಲು ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ಮುಂಬೈ ಪ್ರಾಂತದಲ್ಲಿ ಸೇರಿತ್ತು. ಎರಡು ಶತಮಾನಗಳ ಹಿಂದೆಯೇ ಕರಾವಳಿಯವರು ಮುಂಬೈಗೆ ಬಂದು ಮುಂಬೈಯಲ್ಲಿ ಕನ್ನಡವನ್ನು ಗಟ್ಟಿಯಾಗಿ ಕಟ್ಟಿದವರು, ಬೆಳೆಸಿದವರು. ಮುಂಬೈ ಮತ್ತು ಆಸುಪಾಸಿನ ಒಟ್ಟು ಕನ್ನಡಿಗರ ಸಂಖ್ಯೆ 20 ಲಕ್ಷ ಅಂದಾಜು ಅನ್ನುತ್ತಾ ಇದ್ದೇವೆ. ಮುಂಬೈಯ ಪ್ರಗತಿಯಲ್ಲಿ ಕರಾವಳಿ ಕರ್ನಾಟಕದ ಜನರ ಕೊಡುಗೆಯೂ ಮಹತ್ವದ್ದು. ಊರಿನ ತಮ್ಮ ಕುಟುಂಬದ ಆಗು ಹೋಗುಗಳಿಗೆ ಈ ತುಳುವರು ಸದಾ ಸ್ಪಂದಿಸಿದವರು. ಊರಿನ ಅನೇಕ ಸಂಘ-ಸಂಸ್ಥೆಗಳು, ಗುಡಿ ಗೋಪುರಗಳು, ದೇವಸ್ಥಾನಗಳು ದೈವಸ್ಥಾನಗಳ ಅಭಿವೃದ್ಧಿಯಲ್ಲಿ ಕರಾವಳಿ ಭಾಗದ ಈ ಕನ್ನಡಿಗರ ಪಾಲು ಬಹುದೊಡ್ಡದು. ಆದರೆ ಇದೀಗ ಕರ್ನಾಟಕ ಸರಕಾರ ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕಕ್ಕೆ ಬರುವವರನ್ನು ಕೆಲವು ದಿನಗಳ ಕಾಲ ತಡೆಹಿಡಿದಿದೆ.

ಅತ್ತ ಉಡುಪಿ ಡಿಸಿಯವರು ಮುಂಬೈ ಕನ್ನಡಿಗರ ಕೆಲವರ ವಾಟ್ಸ್‌ಆ್ಯಪ್ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಮುಂಬೈ ಕನ್ನಡಿಗರೂ ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಎಂದೂ ತಮ್ಮ ಸಂಕಷ್ಟವನ್ನು ಹೇಳಿಕೊಳ್ಳದೆ ನಗುನಗುತ್ತಾ ಊರಿಗೆ ಹೋಗಿ ಬರುತ್ತಿದ್ದವರು ಇಂದು ಅನಿವಾರ್ಯವಾಗಿ ತಮ್ಮ ಸಂಕಷ್ಟ ಹೇಳಿಕೊಳ್ಳಬೇಕಾದ ದಿನ ಬಂದಿದೆ. ಇವರ ಪ್ರಥಮ ಆದ್ಯತೆಯಾದ ಹೋಟೆಲ್ ಉದ್ಯಮವೇ ಭಾರೀ ಸಂಕಷ್ಟದಲ್ಲಿರುವ ಲಕ್ಷಣ ಕಂಡುಬರುತ್ತಿದೆ. ಲಾಕ್‌ಡೌನ್ ಮುಗಿದರೂ ಹೋಟೆಲ್ ಉದ್ಯಮಕ್ಕೆ ಮತ್ತೆ ಹಿಂದಿನ ಸ್ಥಿತಿಗೆ ಮರಳಲು ಬಹಳ ಕಷ್ಟ ಇದೆ. ಕನ್ನಡಿಗರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳೂ ತೊಂದರೆ ಅನುಭವಿಸುತ್ತಿವೆ.

ವಾಟ್ಸ್‌ಆ್ಯಪ್ ವೀರರು ಊರಿಗೆ ಸದ್ಯ ಬರಬೇಡಿ ಎನ್ನುವ ಮಾತನ್ನು ಹಿಡಿದು ಊರಿನ ಮತ್ತು ಮುಂಬೈ ಜನರ ನಡುವಿನ ಭಿನ್ನಾಭಿಪ್ರಾಯಗಳಿಗೆ ತಮ್ಮತಮ್ಮ ಅನಿಸಿಕೆಗಳನ್ನು ಹೇಳಿ ಇನ್ನಷ್ಟು ರಾದ್ದಾಂತ ಮಾಡಿ ಏನೋ ಖುಷಿ ಪಡುತ್ತಿರುವ ದೃಶ್ಯಗಳನ್ನೂ ನೋಡಬಹುದಾಗಿದೆ.

ಕೊನೆಯ ಮಾತು: ಪ್ರತೀದಿನ ತವರು ರಾಜ್ಯಕ್ಕೆ ರೈಲು ಬರುವುದೋ ಎಂದು ಸಿಎಸ್‌ಟಿ, ಬಾಂದ್ರಾ, ಕುರ್ಲಾ, ವಸಾಯಿ... ಮೊದಲಾದ ರೈಲು ನಿಲ್ದಾಣಗಳಲ್ಲಿ ನಿರೀಕ್ಷಿಸುತ್ತಿರುವ ಹೊರರಾಜ್ಯಗಳ ಸಾವಿರಾರು ಭಾರತೀಯ ಪ್ರಜೆಗಳ ಸಂಕಷ್ಟದ ವರದಿಗೆ ಆ ಕ್ಷಣ ಕಣ್ಣೀರ ಹನಿಯೊಂದಿಗೆ ಮೂಖನಾಗುತ್ತೇನೆ. ಕನಸು ಹೊತ್ತು ಬಂದ ಅನೇಕ ಬಡ ಪ್ರಜೆಗಳು ಮುಂಬೈನಿಂದ ಇದೀಗ ಮರಳಿ ತಮ್ಮೂರಿಗೆ ಮುಖ ಮಾಡುತ್ತಿದ್ದಾರೆ ಎನ್ನುವ ಸತ್ಯ ಮರೆಮಾಚುವಂತಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top