ಆರೋಗ್ಯ ಸಹಾಯಕರ ಸೇವೆ ಗುರುತಿಸುವ ಕಣ್ಣುಗಳಿಲ್ಲ | Vartha Bharati- ವಾರ್ತಾ ಭಾರತಿ

ಆರೋಗ್ಯ ಸಹಾಯಕರ ಸೇವೆ ಗುರುತಿಸುವ ಕಣ್ಣುಗಳಿಲ್ಲ

ಕೊರೋನ ಎಂಬ ಕರಾಳ ನೆರಳಿನಲ್ಲಿ ಯುದ್ಧೋಪಾದಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರನ್ನು ‘ಕೊರೋನ ವಾರಿಯರ್ಸ್’ಎಂದೇ ಬಣ್ಣಿಸಿ ಎಲ್ಲ ಕಡೆಗೂ ಅವರ ಸೇವಾ ಬಾಹುಳ್ಯ ಕೊಂಡಾಡಿ ಗೌರವಿಸುವುದನ್ನು ನಿತ್ಯವೂ ಕಾಣುತ್ತಿದ್ದೇವೆ. ಇದು ಸಂತಸ ಪಡುವ ವಿಷಯವೇ. ಆದರೆ ಇದೇ ಸಂದರ್ಭದಲ್ಲಿ ಅದೇ ಕೊರೋನ ಯುದ್ಧ ಭೂಮಿಯೊಳಗೆ ಅಕ್ಷರಶಃ ರಣರಂಗದ ಯೋಧರಂತೆ ಕೆಲಸ ಮಾಡುತ್ತಿರುವ ಬಹು ದೊಡ್ಡದಾದ ಮತ್ತೊಂದು ಆರೋಗ್ಯ ಸಮುದಾಯವೇ ಇಲ್ಲಿದೆ ಎಂಬುದನ್ನು ನಾವು ಮರೆತಿದ್ದೇವೆ. ನಾವು ಮರೆತ ಆ ಸಮುದಾಯದ ಹೆಸರು ಆರೋಗ್ಯ ಸಹಾಯಕರು. ಪ್ರಸ್ತುತ ಕೊರೋನ ಸಮರ ಭೂಮಿಯಲ್ಲಿ ಆರೋಗ್ಯ ಇಲಾಖೆಯ ಹದಿನೈದು ಸಾವಿರ ಮಹಿಳಾ ಮತ್ತು ಆರೇಳು ಸಾವಿರ ಪುರುಷ ಆರೋಗ್ಯ ಸಹಾಯಕರು ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಜನಾರೋಗ್ಯ ಕಾಪಾಡುವ, ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಹುಟ್ಟು, ಬೆಳವಣಿಗೆ, ರೋಗ ಹರಡುವಿಕೆಯ ವಿವಿಧ ಹಂತಗಳ ಕುರಿತಾಗಿ ಮೂರು ವರ್ಷಗಳ ಅವಧಿಯ ನಿಪುಣ ತರಬೇತಿಯನ್ನು ಇವರು ಸರಕಾರದ ತರಬೇತಿ ಕೇಂದ್ರಗಳಲ್ಲಿ ಪಡೆದಿದ್ದಾರೆ. ಐದುಸಾವಿರ ಜನಸಂಖ್ಯೆಗೆ ಓರ್ವ ಮಹಿಳಾ, ಓರ್ವ ಪುರುಷ ಆರೋಗ್ಯ ಸಹಾಯಕರನ್ನು ಸರಕಾರ ಜನಾರೋಗ್ಯ ಸೇವಾ ರಕ್ಷಣೆಗೆಂದು ನೇಮಿಸಿರುತ್ತದೆ. ಅದು ಅವರ ದಿನನಿತ್ಯದ ಕರ್ತವ್ಯ. ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ಹಳ್ಳಿಗಳ ಮನೆ ಮನೆ ಭೇಟಿ ಮೂಲಕ ಸೇವೆ ಮುಟ್ಟಿಸುವಲ್ಲಿ ಇವರು ಕರ್ತವ್ಯನಿರತರಾಗಿರುತ್ತಾರೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಪಿಡುಗಿನ ತೀವ್ರತೆ ಬಗ್ಗೆ ಆರೋಗ್ಯ ಸಹಾಯಕರಿಗೆ ಅಗತ್ಯ ಮಾಹಿತಿ, ಜ್ಞಾನ ಇರುವುದು ಸಹಜ.

ಆರೋಗ್ಯ ಸಹಾಯಕರು ಈಗ ಹಳ್ಳಿ, ನಗರ, ಪಟ್ಟಣಗಳೆನ್ನದೇ ತಳಮಟ್ಟದಲ್ಲಿ ಮನೆ, ಮನೆ ಭೇಟಿ ಕೊಟ್ಟು ಕೊರೋನ ಸಮೀಕ್ಷೆ ಮಾಡುವ ಕಾರ್ಯದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಜೀವದ ಹಂಗು ತೊರೆದು ಹಗಲು ರಾತ್ರಿಗಳನ್ನು ಲೆಕ್ಕಿಸದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಕೊರೋನ ರೋಗದ ತಪಾಸಣೆ, ಕ್ವಾರಂಟೈನ್ ಡ್ಯೂಟಿ, ಹಾಟ್‌ಸ್ಪಾಟ್ ಡ್ಯೂಟಿ, ಚೆಕ್‌ಪೋಸ್ಟ್ಟ್, ರಾಷ್ಟ್ರೀಯ ಹೆದ್ದಾರಿ ಡ್ಯೂಟಿ... ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ರಿಸ್ಕ್‌ಗಳ ನಡುವೆ ವೈಯಕ್ತಿಕ ರಕ್ಷಾಕವಚ (ಪಿಪಿಇ ಕಿಟ್)ಗಳಿಲ್ಲದೇ ಗಲ್ಲಿ, ಮೊಹಲ್ಲಾಗಳೆನ್ನದೇ, ತಮ್ಮ ಕುಟುಂಬಗಳ ಹಿತಾಸಕ್ತಿ ಮರೆತು ಕೊರೋನ ನಿರ್ಮೂಲನಕ್ಕೂ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಮಂದಿ ಕರ್ತವ್ಯನಿರತ ಆರೋಗ್ಯ ಸಹಾಯಕರು ಸಾರ್ವಜನಿಕರ, ಪೊಲೀಸರ ಏಟುಗಳಿಗೆ ತಮ್ಮ ಕೈ ಕಾಲುಗಳನ್ನು ಬಲಿ ಕೊಟ್ಟಿದ್ದಾರೆ.

ಉದಾ: ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಯ ಸೇಡಂ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಘಟನೆಗಳು. ಇದು ಆರೋಗ್ಯ ಸಹಾಯಕರ ಪಾಲಿನ ವರ್ತಮಾನದ ಕೊರೋನ ಯುದ್ಧ ಮಾತ್ರವಲ್ಲ. ಶತಮಾನದಷ್ಟು ಹಳತಾದ ಸಾಮಾಜಿಕ ಪಿಡುಗುಗಳಾಗಿಯೂ ಮನುಷ್ಯ ಕುಲವನ್ನು ಕಾಡಿದ, ಮನುಷ್ಯರ ಅಂಗವಿಕಲತೆಗೆ ಕಾರಣವಾಗುತ್ತಿದ್ದ ಸಿಡುಬು, ಕುಷ್ಠ, ನಾರುಹುಣ್ಣು, ಪೋಲಿಯೊ ಹೀಗೆ ಹತ್ತಾರು ಭಯಾನಕ ಮತ್ತು ಸಾಮಾಜಿಕವಾಗಿ ಕಳಂಕ ಭಾವಗಳ ಮೊತ್ತವೇ ಆಗಿದ್ದ ಅನೇಕ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಯಲ್ಲಿ ಆರೋಗ್ಯ ಸಹಾಯಕರ ಪಾತ್ರ ಅಕ್ಷರಶಃ ಸ್ಮರಣೀಯ. ಹೀಗೆ ನೂರೈವತ್ತಕ್ಕೂ ಹೆಚ್ಚು ವರ್ಷಗಳಿಂದ ಜನಾರೋಗ್ಯ ರಕ್ಷಣಾ ಕಾರ್ಯದಲ್ಲಿ ತಮ್ಮ ಆರೋಗ್ಯದ ಕಡೆಗೂ ಹೆಚ್ಚು ನಿಗಾವಹಿಸದೇ ಆರೋಗ್ಯ ಸಹಾಯಕರು ನಿರಂತರವಾಗಿ ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿದ ಇತಿಹಾಸವಿದೆ. ಅದೇ ರೀತಿ ಇವತ್ತು ಸೈನಿಕರೋಪಾದಿಯಲ್ಲಿ ಕೋವಿಡ್-19 ರ ವಿರುದ್ಧ ಹೋರಾಡುತ್ತಿದ್ದಾರೆ. ಈ ಆರೋಗ್ಯ ಸಹಾಯಕ ಸೇನಾನಿಗಳು ಯಾವೊಂದು ಪ್ರಶಸ್ತಿ, ಸನ್ಮಾನ, ಶ್ಲಾಘನೆಗಳ ನಿರೀಕ್ಷೆಗಳಿಲ್ಲದೇ ಇಲಾಖೆಯ ಹುಟ್ಟಿನಿಂದಲೂ ತಮ್ಮ ಸೇವಾ ಅಸ್ಮಿತೆಯನ್ನು ಕಾಪಿಟ್ಟುಕೊಂಡಿದ್ದಾರೆ. ಇಂತಹವರ ಕುರಿತು ಹೊಗಳಿಕೆ, ಗೌರವ, ಸನ್ಮಾನಗಳು ಒತ್ತಟ್ಟಿಗಿರಲಿ. ಮಾಧ್ಯಮಗಳಿಂದಾಗಲಿ, ಮಂತ್ರಿಗಳಿಂದಾಗಲಿ ಸಣ್ಣದೊಂದು ಶಹಬ್ಬಾಶ್ ಎನ್ನುವ ಸ್ಫೂರ್ತಿ, ಪ್ರೋತ್ಸಾಹದಾಯಕ ಮಾತುಗಳು ಕೇಳಿ ಬರುತ್ತಿಲ್ಲ.

ಆರೋಗ್ಯ ಸಹಾಯಕರ ಸಮರೋಪಾದಿ ಸೇವಾ ಕೈಂಕರ್ಯ ಗುರುತಿಸುವ ಕಣ್ಣುಗಳೇ ಮಾಯವಾದವೇ? ಆರೋಗ್ಯ ಇಲಾಖೆ ಎಂದೊಡನೆ ಮಂತ್ರಿಗಳಿಗೆ ಮತ್ತು ಮಾಧ್ಯಮಗಳಿಗೆ ಥಟ್ಟಂತ ಕಾಣಿಸುವುದು ಡಾಕ್ಟರ್ಸ್ ಮತ್ತು ನರ್ಸ್‌ಗಳು ಹೆಚ್ಚೆಂದರೆ ಕಂಪೌಂಡರ್ಸ್. ಈ ಕಾಣುವಿಕೆ ನಾಲ್ಕು ಗೋಡೆಗಳ ನಡುವಿನ ಆಸ್ಪತ್ರೆಯ ಜಗತ್ತು. ಗುಡ್ಡಗಾಡು, ಹಳ್ಳಿ, ಮೊಹಲ್ಲಾ, ನಗರ, ಪಟ್ಟಣಗಳಲ್ಲಿ ಎಲ್ಲೆಲ್ಲಿ ಮನುಷ್ಯರು ವಾಸವಾಗಿರುವರೋ ಅಲ್ಲೆಲ್ಲ ಆರೋಗ್ಯ ಸಹಾಯಕರ ಸೇವಾ ಕೈಂಕರ್ಯ ನಾಡಿನ ಸಮಸ್ತ ಸಮುದಾಯಕ್ಕೆ ಸಲ್ಲುತ್ತಲಿದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ (2005ರಿಂದ) ಹೊರಗುತ್ತಿಗೆಯಾಗಿ ನೇಮಕಗೊಂಡಿರುವ ಆಶಾ ಕಾರ್ಯಕರ್ತೆಯರು ಮಾತ್ರ ಸಮುದಾಯದ ನಿಕಟ ಸಂಪರ್ಕದ ಫ್ರಂಟ್ಲೈನ್ ಸೇನಾನಿಗಳು ಎಂಬಂತೆ ಮಾಧ್ಯಮಗಳಲ್ಲಿ, ಪ್ರಭುತ್ವದ ಕಣ್ಣುಗಳಲ್ಲಿ ಬಿಂಬಿತವಾಗಿ ಆರೋಗ್ಯ ಸಹಾಯಕರ ಚರಿತ್ರಾರ್ಹ ಸೇವಾ ಕೈಂಕರ್ಯವು ನೇಪಥ್ಯಕ್ಕೆ ಸರಿದಿರಬಹುದು? ಕಾರಣ ಏನೇ ಇರಲಿ ಆರೋಗ್ಯ ಸಹಾಯಕರು ಸಲ್ಲಿಸುತ್ತಿರುವ ಗುಣಮಟ್ಟದ ಸೇವೆಗಳನ್ನು ಮಾಧ್ಯಮಗಳು, ಮಂತ್ರಿ ಮಹೋದಯರು ಗುರುತಿಸದಿದ್ದರೆ ಹೇಗೆ? ಆರೋಗ್ಯ ಇಲಾಖೆಯ ಬಹುದೊಡ್ಡ ಸೇವಾವಲಯ ಕುರಿತು ಯಾಕೆ ಮೀನಾಮೇಷ...? ಇದೇ ಕಾಲಘಟ್ಟದಲ್ಲಿ ಆರೋಗ್ಯ ಮಂತ್ರಿ ಶುಶ್ರೂಷಕರ ಸೇವೆ ಮೆಚ್ಚಿ ಭಕ್ಷೀಸೆಂಬಂತೆ ಶುಶ್ರೂಷಾಧಿಕಾರಿ ಎಂದು ಅವರ ಪದನಾಮ ಬದಲಾವಣೆ ಮಾಡುವ ಬೇಡಿಕೆ ಕುರಿತು ಸುದ್ದಿ ಕೇಳಿ ಬಂದ ಮರುದಿನವೇ ಅಸ್ತು ಎಂದಿದ್ದಾರೆ ಮೊನ್ನೆಯಷ್ಟೇ ಶುಶ್ರೂಷಾ ದಿನಾಚರಣೆಯಂದು ಸರಕಾರ ಶುಶ್ರೂಷಾಧಿಕಾರಿ ಎಂದು ಪದನಾಮ ಬದಲಾಯಿಸಿ ಆದೇಶ ಹೊರಡಿಸಿದೆ. ಆದರೆ ಕಳೆದೊಂದು ವರ್ಷದಿಂದ ಸಮುದಾಯ ಆರೋಗ್ಯಾಧಿಕಾರಿ ಎಂದು ತಮ್ಮ ಪದನಾಮ ಬದಲಾವಣೆ ಮಾಡುವ ಕುರಿತು ಆರೋಗ್ಯ ಸಹಾಯಕರು ಬೇಡಿಕೆ ಸಲ್ಲಿಸಿದ್ದರೂ ಆರೋಗ್ಯ ಮಂತ್ರಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ತೋರಿಲ್ಲ. ಹೀಗಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿರುವ ಆರೋಗ್ಯ ಸಹಾಯಕರಿಗೆ ತಾವು ಸಲ್ಲಿಸುತ್ತಿರುವ ಸೇವೆಗಳ ಕುರಿತಾಗಲಿ ಅವರ ಅಸ್ತಿತ್ವ ಕುರಿತಾಗಲಿ ಪ್ರಭುತ್ವಕ್ಕೆ ಯಾಕಿಂಥ ಉದಾಸೀನ ಎಂಬುದು ಅನಾರೋಗ್ಯದ ಪ್ರಶ್ನೆಯಾಗಿ ಕಾಡತೊಡಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top