ದಾಖಲೆಗಳನ್ನು ಮುರಿದ ಜನಪ್ರಿಯ ಮೆಗಾ ಸೀರಿಯಲ್ ‘ಡಿರಿಲಿಸ್ ಎರ್ತೂಗ್ರೂಲ್’ | Vartha Bharati- ವಾರ್ತಾ ಭಾರತಿ

ದಾಖಲೆಗಳನ್ನು ಮುರಿದ ಜನಪ್ರಿಯ ಮೆಗಾ ಸೀರಿಯಲ್ ‘ಡಿರಿಲಿಸ್ ಎರ್ತೂಗ್ರೂಲ್’

ಟರ್ಕಿಯ ಟಿವಿ ತಾರೆ,ಯುವ ನಟಿ ಇಸ್ರಾ ಬಿಲ್ಜಿಕ್ ಇತ್ತೀಚೆಗೆ ಭಾರೀ ವಿವಾದಕ್ಕೆ ತುತ್ತಾದರು.ಆಕೆ ಇನ್ ಸ್ಟಾಗ್ರಾಮ್ ನಲ್ಲಿ ವಿವಿಧ ಭಂಗಿಗಳಲ್ಲಿ ತನ್ನ ಕೆಲವು ಫೋಟೊಗಳನ್ನು ಪ್ರಕಟಿಸಿದ್ದರು.ಆ ಫೋಟೊಗಳಲ್ಲಿ ಆಕೆ ಉಟ್ಟಿದ್ದ ಉಡುಗೆಗಳು ಪಾಶ್ಚಿಮಾತ್ಯ ಫ್ಯಾಶನ್‌ಗನುಸಾರವಾಗಿದ್ದು ಮಡಿವಂತ ಮುಸಲ್ಮಾನರ ಮಾನದಂಡ ಪ್ರಕಾರ ಅಶ್ಲೀಲವಾಗಿದ್ದವು. ಗಮ್ಮತ್ತೆಂದರೆ, ಆಕೆಯ ಫೋಟೊಗಳನ್ನು ಆಕ್ಷೇಪಿಸಿ,ಆಕೆಯನ್ನು ಟೀಕಿಸುವ, ದೂಷಿಸುವ ಮತ್ತು ಆಕೆಗೆ ಧಾರ್ಮಿಕ ಉಪದೇಶಗಳನ್ನು ನೀಡುವ ನೂರಾರು ಪತ್ರಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಿದವರು ಆಕೆಯ ಟರ್ಕಿ ದೇಶದ ವಾಸಿಗಳಾಗಿರಲಿಲ್ಲ. ಅವರೆಲ್ಲಾ ಪಾಕಿಸ್ತಾನದವರಾಗಿದ್ದರು.

ಈರೀತಿ ಎಲ್ಲೋ ಮಳೆ,ಎಲ್ಲೋ ಕೊಡೆ ಎಂಬಂತಹ ಬೆಳವಣಿಗೆ ಏಕೆ ತಲೆದೋರಿತು? ಪಾಕಿಸ್ತಾನದ ಮಡಿವಂತರಿಗೂ ಟರ್ಕಿಯ ಟಿವಿ ನಟಿಯ ಉಡುಗೆಗೂ ಏನು ಸಂಬಂಧ?

ಆ ಸಂಬಂಧದ ಹೆಸರೇ ‘ಡಿರಿಲಿಸ್ ಎರ್ತೂಗ್ರೂಲ್’ (Dirilis: Ertugrul)ಎಂಬ ಟರ್ಕಿ ಯಲ್ಲಿ ನಿರ್ಮಿತ, ಭಾರೀ ಜನಪ್ರಿಯ, ಐತಿಹಾಸಿಕ ಮೆಗಾ ಸೀರಿಯಲ್. ಜಾಗತಿಕ ಮಟ್ಟದಲ್ಲಿ, ಜನಪ್ರಿಯತೆಯ ದೃಷ್ಟಿಯಿಂದ ಹಿಂದಿನ ಹಲವು ದಾಖಲೆಗಳನ್ನು ಪುಡಿಗಟ್ಟಿರುವ ಈ ಸರಣಿಯು ನಿಜವಾಗಿ,13ನೇ ಶತಮಾನದ ಕೊನೆಯಲ್ಲಿ ಟರ್ಕಿಯಲ್ಲಿ ಸ್ಥಾಪಿತವಾದ, ಉಸ್ಮಾನಿಯಾ ಸಾಮ್ರಾಜ್ಯದ (ಎಂಪಾಯರ್ 1301-1922) ಸ್ಥಾಪಕ ಉಸ್ಮಾನ್(ಪ್ರಥಮ)ನ ತಂದೆ ಎರ್ತೂಗ್ರೂಲ್ ಗಾಝಿಯ ಸಾಹ ಸಗಾಥೆಯಾಗಿದೆ.(ಅಂದರೆ ಯಶಸ್ವಿ ಹೋರಾಟಗಾರ) ಎರ್ತೂಗ್ರೂಲ್ ನ ಪುತ್ರ ಉಸ್ಮಾನ್ ಸ್ಥಾಪಿಸಿದ ಉಸ್ಮಾನಿಯಾ ಸಾಮ್ರಾಜ್ಯವು ತನ್ನ ಉತ್ತುಂಗ ಕಾಲದಲ್ಲಿ ಟರ್ಕಿ ಮಾತ್ರವಲ್ಲದೆ ಈಜಿಪ್ಟ ,ಗ್ರೀಸ್,ಬಲ್ಗೇರಿಯಾ,ರೊಮೇನಿಯಾ,ಮ್ಯಾಸೆಡೋನಿಯಾ,ಹಂಗೇರಿ,ಫೆಲೆಸ್ತೀನ್,ಜೋರ್ಡನ್, ಸಿರಿಯಾ,ಅರೇ ಬಿಯಾದ ಹಲವು ಭಾಗಗಳು ಮತ್ತು ಉತ್ತರ ಆಫ್ರಿಕಾದ ಕರಾವಳಿ ಪ್ರದೇಶಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿತ್ತು. ಸತತ ಆರು ಶತಮಾನಗಳ ಕಾಲ ಜಗತ್ತಿನ ದೊಡ್ಡ ಭಾಗವೊಂದನ್ನು ಆಳಿದ,ಉಸ್ಮಾನಿಯಾ ಸಾಮ್ರಾಜ್ಯದ ಸ್ಥಾಪನೆಗೆ ಬೇಕಾಗಿದ್ದ ವೇದಿಕೆಯನ್ನು ನಿರ್ಮಿಸಿಕೊಟ್ಟ ಎರ್ತೂಗ್ರೂಲ್ ನ ಸಾಧನೆಗಳ ಈ ರೋಮಾಂಚಕ ಕಥನ ಸ್ವಾಭಾವಿಕವಾಗಿಯೇ ಇತಿಹಾಸದಲ್ಲಿ ಆಸಕ್ತಿ ಉಳ್ಳವರನ್ನು ದೊಡ್ಡ ಸಂಖ್ಯೆಯಲ್ಲಿ ತನ್ನತ್ತ ಆಕರ್ಷಿಸಿದೆ.

ಟರ್ಕಿ ಸರಕಾರ ಈ ಸೀರಿಯಲ್‌ಗೆ ಸಂಪೂರ್ಣ ಬೆಂಬಲ ಮತ್ತು ಪ್ರೋನೀಡಿದೆ.ವಿಶೇಷವಾಗಿ ಟರ್ಕಿಯ ಅಧ್ಯಕ್ಷ ತಯ್ಯಿಬ್ ಎರ್ದೊಗಾನ್ ಅವರು ವೈಯಕ್ತಿಕವಾಗಿ ಈ ಸರಣಿಯ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ.ಚಿತ್ರ ನಿರ್ಮಾಣದ ಹಂತದಲ್ಲಿ ಅವರು ಹಲವು ಬಾರಿ ಕುಟುಂಬ ಸಮೇತ ಸೆಟ್‌ಗೆ ಭೇಟಿ ನೀಡಿದ್ದು,ದೇಶದ ಇತಿಹಾಸ ಮತ್ತು ಪರಂಪರೆಯನ್ನು ಗುಣಾತ್ಮಕವಾಗಿ ಪ್ರತಿಬಿಂಬಿಸುತ್ತಿರುವುದಕ್ಕಾಗಿ ಎರ್ತೂಗ್ರೂಲ್ ತಂಡವನ್ನು ಅಭಿನಂದಿಸಿದ್ದರು. ನಮ್ಮ ಇತಿಹಾಸವನ್ನು ಜಗತ್ತಿಗೆ ನಾವೇ ಹೇಳಬೇಕು ಎಂಬ ತವಕ, ಐತಿಹಾಸಿಕ ಪ್ರಜ್ಞೆ ಇರುವ ಜಗತ್ತಿನ ಹಲವು ಜನಾಂಗಗಳಲ್ಲಿದೆ. ನಮ್ಮ ಇತಿಹಾಸ ತಿಳಿಸುವ ಕಾರ್ಯವನ್ನು ನಾವು ಅನ್ಯರಿಗೆ ಬಿಟ್ಟು ಕೊಟ್ಟಾಗ ಜಗತ್ತಿನ ಮುಂದೆ ನಮ್ಮ ಚಿತ್ರ ತೀರಾ ವಿಕೃತ ಸ್ವರೂಪದಲ್ಲಿ ಮೂಡುತ್ತದೆ ಎಂದು ಅವರು ನಂಬಿರುತ್ತಾರೆ. ಇದೇ ಹಿನ್ನೆಲೆಯಲ್ಲಿ ಅಧ್ಯಕ್ಷ ಎರ್ದೊಗಾನ್,ಸಿಂಹಗಳು ಸ್ವತಃ ತಮ್ಮ ಇತಿಹಾಸವನ್ನು ಹೇಳುವ ತನಕ ಬೇಟೆಗಾರರೇ ಹೀರೊ ಗಳಾಗಿರುತ್ತಾರೆಎಂದು ಮಾರ್ಮಿಕವಾಗಿ ಹೇಳಿದ್ದರು . ಈ ಸೀರಿಯಲ್ ಪಾಕಿಸ್ತಾನದಲ್ಲಿ ಭಾರೀ ಜನಪ್ರಿಯತೆ ಪಡೆಯಿತು.ಎಷ್ಟೆಂದರೆ, ಪಾಕಿಸ್ತಾನದಲ್ಲಿ ಇದರ ವೀಕ್ಷಕರ ಸಂಖ್ಯೆ ಕೆಲವೇ ವಾರಗಳಲ್ಲಿ ಟರ್ಕಿಯ ವೀಕ್ಷಕರ ಸಂಖ್ಯೆಯ ದಾಖಲೆಯನ್ನೂ ಹಿಂದಿಕ್ಕಿ ಬಿಟ್ಟಿತು.ಮಾತ್ರವಲ್ಲ,ವೀಕ್ಷಕರ ಸಂಖ್ಯೆಯ ದೃಷ್ಟಿಯಿಂದ ಅದು ಸ್ವತಃ ಪಾಕಿಸ್ತಾನದ ಈ ಹಿಂದಿನ ಎಲ್ಲ ಸೀರಿಯಲ್‌ಗಳ ದಾಖಲೆಯನ್ನೂ ಮುರಿದು ಬಿಟ್ಟಿತು.

ಹಲವಾರು ಕಂತುಗಳನ್ನೊಳಗೊಂಡ 5 ಅಧ್ಯಾಯಗಳಲ್ಲಿರುವ ಈ ಮೆಗಾ ಸೀರಿಯಲ್ ನ ಪ್ರಥಮ ಕಂತು ಟರ್ಕಿಯಲ್ಲಿ 2014 ಡಿಸೆಂಬರ್ ತಿಂಗಳಲ್ಲಿ ಪ್ರಸಾರವಾಗಿತ್ತು.2018ರ ಕೊನೆಯೊಳಗೆ,ತಲಾ ಎರಡು ಗಂಟೆಗಳಷ್ಟು ದೀರ್ಘವಾಗಿರುವ ಇದರ 150 ಕಂತುಗಳು ಪ್ರಸಾರವಾಗಿದ್ದವು.ಈ ಸೀರಿಯಲ್ ಮುಂದೆ ‘ನೆಟ್ ಫ್ಲಿಕ್ಸ್’ನಲ್ಲಿ ತಲಾ ಸುಮಾರು 40 ನಿಮಿಷಗಳ 458 ಕಂತುಗಳ ರೂಪದಲ್ಲಿ ಪ್ರಸಾರವಾಯಿತು.ಟರ್ಕಿಯಲ್ಲಿ ಈ ಸೀರಿಯಲ್ ಗೆ ಆರಂಭದಲ್ಲೇ ಭಾರೀ ಉತ್ಸಾಹದ ಸ್ವಾಗತ ಸಿಕ್ಕಿತು.ಕ್ರಮೇಣ ಇತರ ಅನೇಕ ದೇಶಗಳಲ್ಲೂ ವೀಕ್ಷಕರು ಅದನ್ನು ಸ್ವಾಗತಿಸಲು ಆರಂಭಿಸಿದರು.ಈಗಾಗಲೇ 25 ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಡಬ್ಬಿಂಗ್ ಆಗಿರುವ ‘ಡಿರಿಲಿಸ್ ಎರ್ತೂಗ್ರೂಲ್’ ಸರಣಿ ಯನ್ನು ಜಗತ್ತಿನ 70 ಕ್ಕೂ ಹೆಚ್ಚಿನ ದೇಶಗಳು ಆಮದು ಮಾಡಿಕೊಂಡವು.ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಜಗತ್ತಿನ ವಿವಿಧೆಡೆ 50 ಕೋಟಿಗಿಂತಲೂ ಹೆಚ್ಚಿನ ಜನ ಇದನ್ನು ವೀಕ್ಷಿಸಿದ್ದಾರೆ.ಇದರಿಂದಾಗಿ ಮನರಂಜನಾ ಕ್ಷೇತ್ರದಲ್ಲಿ ಟರ್ಕಿಯ ವರ್ಚಸ್ಸು ಹೆಚ್ಚಿರುವುದು ಮಾತ್ರವಲ್ಲ ಟರ್ಕಿಗೆ ಹಲವಾರು ಕೋಟಿ ಡಾಲರ್ ಗಳ ವಿದೇಶವಿನಿಮಯ ಕೂಡ ಹರಿದು ಬಂದಿದೆ.ಕೆಲವು ತಜ್ಞರ ಅಂದಾಜು ಪ್ರಕಾರ ಈ ವರ್ಷದ ಅಂತ್ಯದೊಳಗೆ ಪ್ರಸ್ತುತ ಸರಣಿಯ ಗಳಿಕೆಯು ಶತಕೋಟಿ ಡಾಲರ್ ಮೀರುವ ಸಾಧ್ಯತೆ ಇದೆ.ಈ ಸೀರಿಯಲ್ ನಿಂದಾಗಿ ಜಗತ್ತಿನ ವಿವಿಧೆಡೆಯ ಪ್ರವಾಸಿ ಸಮುದಾಯಗಳಲ್ಲಿ ಟರ್ಕಿಯ ಇತಿಹಾಸ,ಕಲೆ,ಸಂಸ್ಕೃತಿ,ಸಂಗೀತ,ಆಹಾರಾಭ್ಯಾಸ ಇತ್ಯಾದಿಗಳ ಬಗ್ಗೆ ಆಸಕ್ತಿ ಕೆರಳಿದ್ದು ಟರ್ಕಿ ದೇಶವನ್ನು ಸಂದರ್ಶಿಸಲು ಬರುವ ವಿದೇಶಿ ಪ್ರವಾಸಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.‘ಡಿರಿಲಿಸ್ ಎರ್ತೂಗ್ರೂಲ್’ಸರಣಿಯು ಇಷ್ಟೊಂದು ವ್ಯಾಪಕ ಜನಪ್ರಿಯತೆ ಗಳಿಸಿರುವುದರ ಹಿಂದೆ ಹಲವು ಸ್ವಾರಸ್ಯಕರ ಕಾರಣಗಳಿವೆ. ಮೊದಲನೆಯದಾಗಿ,ಇದರ ಉತ್ಪಾದನೆ ಯಲ್ಲಿ ಅತ್ಯಾಧುನಿಕ ಉಪಕರಣ,ತಂತ್ರಗಾರಿಕೆ ಮತ್ತು ತಂತ್ರಜ್ಞಾನವನ್ನು ಬಳಸಲಾಗಿದ್ದು,ಗುಣ ಮಟ್ಟದ ದೃಷ್ಟಿಯಿಂದ ಇದು ಹಾಲಿವುಡ್ ನ ಯಾವುದೇ ಸೀರಿಯಲ್ ಗಿಂತ ಕಡಿಮೆ ಇಲ್ಲ. ಪ್ರೇಮ,ಸಾಹಸ,ಬೇಟೆ,ಕತ್ತಿವರಸೆ,ಯುದ್ಧ,ಸಾಂತ್ವನ ದಾಯಕ ಸಂಗೀತ,ರಾಜ ಮಹಾರಾಜರ ವೈಭವ,ಭವ್ಯ ಅರಮನೆಗಳು,ಭದ್ರ ಕೋಟೆಗಳು,ಕುದುರೆಗಳು,ಲಘು ಹಾಸ್ಯ, ನಿಸರ್ಗದ ಸುಂದರ ದೃಶ್ಯಾವಳಿ,ಕುತೂಹಲ ಕೆರಳಿಸುವ ರೋಮಾಂಚಕ ತಿರುವುಗಳು,ದೃಶ್ಯ ಮತ್ತು ಧ್ವನಿಯ ಜೊತೆ ಉಪ ಶೀರ್ಷಿಕೆಗಳು -ಹೀಗೆ ಜನಸಾಮಾನ್ಯನಿಗೆ ಮನರಂಜನೆ ಒದಗಿಸುವ ಮತ್ತು ದೀರ್ಘಕಾಲ ಅವರ ಆಸಕ್ತಿಯನ್ನು ಜೀವಂತವಿಡುವ ಎಲ್ಲ ಅಂಶಗಳನ್ನುಈ ಸರಣಿಯು ಅಳವಡಿಸಿಕೊಂಡಿದೆ.ಪ್ರಮುಖ ಪಾತ್ರಗಳನ್ನು,ಸಮರ್ಥ ಹಾಗೂ ಪ್ರತಿಭಾವಂತ ನಟರಿಗೆ ವಹಿಸಿಕೊಡಲಾಗಿದೆ. ಎರಡನೆಯದಾಗಿ, ಈ ಸರಣಿ ಟರ್ಕಿ ಕೇಂದ್ರಿತವಾಗಿದ್ದರೂ ಇದು ಜಾಗತಿಕ ಮಟ್ಟದಲ್ಲಿ ಆಡಳಿತ ನಡೆಸಿದ್ದ ಉಸ್ಮಾನಿಯಾ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಚಿತ್ರವಾದ್ದರಿಂದ,ಆ ಸಾಮ್ರಾಜ್ಯದ ಜೊತೆ ಯಾವುದಾದರೂ ಬಗೆಯ ಐತಿಹಾಸಿಕ ನಂಟಿರುವ,ಟರ್ಕಿಯ ಹೊರಗಿನ ಜನರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮೂರನೆಯದಾಗಿ,ಈ ಸರಣಿ ಟರ್ಕಿಯ ಸಂಸ್ಕೃತಿ ಮತ್ತು ಇತಿಹಾಸದ ಜೊತೆ ಭಾಗಶಃ ಮುಸ್ಲಿಮ್ ಸಂಸ್ಕೃತಿ ಹಾಗೂ ಇತಿಹಾಸವನ್ನೂ ಪ್ರತಿನಿಧಿಸುತ್ತದೆ.ಮುಸ್ಲಿಮ್ ನಾಗರಿಕತೆ,ಶಿಷ್ಟಾಚಾರಗಳು ಮತ್ತು ಮುಸ್ಲಿಮ್ ಸಮಾಜದೊಳಗಿನ ಜನಪ್ರಿಯ ವೌಲ್ಯಗಳನ್ನು ಬಹಳ ಪರಿಣಾಮಕಾರಿಯಾಗಿ ಮುಂದಿಡುವ ದೃಶ್ಯಾವಳಿಗಳು ಸರಣಿಯುದ್ದಕ್ಕೂ ಕಾಣಲು ಸಿಗುತ್ತವೆ.

ಎಲ್ಲಕ್ಕಿಂತ ಮಿಗಿಲಾಗಿ, ಜಾಗತಿಕ ಮಾನ್ಯತೆ ಇರುವ ಸತ್ಯ,ನ್ಯಾಯ, ಸಚ್ಚಾರಿತ್ರ, ದಯೆ, ಔದಾರ್ಯ, ತ್ಯಾಗ, ಸಹಿಷ್ಣುತೆ, ಸಜ್ಜನಿಕೆ ಮುಂತಾದ ವೌಲ್ಯಗಳನ್ನು ಈ ಸರಣಿಯಲ್ಲಿ ಬಹಳಷ್ಟು ಒತ್ತುಕೊಟ್ಟು ನಿರೂಪಿಸಲಾಗಿದೆ.

ಸಾಮಾನ್ಯವಾಗಿ ಮುಸ್ಲಿಮರನ್ನು ಮತ್ತು ಏಶ್ಯಯಾದ ಜನರನ್ನು ಅವಹೇಳನಕಾರಿಯಾಗಿ, ಖಳನಾಯಕರಾಗಿ ಅಥವಾ ವಿದೂಷಕರಾಗಿ ಚಿತ್ರಿಸುವ ಹಾಲಿವುಡ್ ಚಿತ್ರಗಳನ್ನು ನೋಡಿ ಬೇಸತ್ತಿದ್ದವರಿಗೆ ‘ಡಿರಿಲಿಸ್ ಎರ್ತೂಗ್ರೂಲ್’ ಒಂದು ಹಿತಕರವಾದ ಭಿನ್ನ ಅನುಭವವನ್ನು ಒದಗಿಸುತ್ತದೆ. ಅಶ್ಲೀಲತೆಯಿಂದ ಸಂಪೂರ್ಣ ಮುಕ್ತವಾಗಿದೆ ಎನ್ನಬಹುದಾದ ಈ ಸರಣಿ ಆ ಕಾರಣಕ್ಕಾಗಿಯೂ ಪ್ರಶಂಸೆಗೆ ಪಾತ್ರವಾಗಿದೆ. ಆದ್ದರಿಂದಲೇ ಹಲವರು ಇದನ್ನು, ಯುರೋಪ್‌ಮತ್ತು ಅಮೆರಿಕದ ‘ಇಸ್ಲಾಮೊಫೋಬಿಯಾ’ಪೀಡಿತ ಸಿನೆಮಾ ಮತ್ತು ಸೀರಿಯಲ್ ಗಳಿಗೆ ಟರ್ಕಿ ನೀಡಿದ ದಿಟ್ಟ ಉತ್ತರ ಎಂದು ಬಣ್ಣಿಸಿದ್ದಾರೆ.ಇತಿಹಾಸದ ದೃಷ್ಟಿಯಿಂದ ಹೇಳುವುದಾದರೆ ಇದು ಒಂದು ಶುದ್ಧ ಐತಿಹಾಸಿಕ ದಾಖಲೆ ಎಂದು ಹೇಳಲು ಖಂಡಿತ ಸಾಧ್ಯವಿಲ್ಲ. ಹೆಚ್ಚೆಂದರೆ ಇದನ್ನು ಒಂದು ಐತಿಹಾಸಿಕ ಕಾದಂಬರಿಯ ಸಾಲಲ್ಲಿ ನಿಲ್ಲಿಸಬಹುದು. ಏಕೆಂದರೆ ಇತಿಹಾಸವನ್ನು ಸ್ವಾರಸ್ಯಕರವಾಗಿಸಲಿಕ್ಕಾಗಿ ಸಾಕಷ್ಟು ಮಸಾಲೆಯನ್ನು ಇದರಲ್ಲಿ ಸೇರಿಸಲಾಗಿದೆ. ಸಜ್ಜನರನ್ನು ಯಾವ ದೋಷವೂ ಇಲ್ಲದ, ಅತಿಯಾದ ಸಜ್ಜನಿಕೆಯ ಪ್ರತಿರೂಪಗಳಾಗಿ ಮತ್ತು ಕೆಟ್ಟವರನ್ನು ಕಿಂಚಿತ್ತೂ ಒಳಿತಿಲ್ಲದವರಾಗಿ, ಉತ್ಪ್ರೇಕ್ಷಿತವಾಗಿ ಬಿಂಬಿಸಲಾಗಿದೆ. ಆದ್ದರಿಂದ ಹೆಚ್ಚೆಂದರೆ ಇದನ್ನು ಇತಿಹಾಸ, ಆದರ್ಶ, ಕಥೆ, ಕಲ್ಪನೆ ಮತ್ತು ಕಲೆಯ ಸುಂದರ ಮಿಶ್ರಣ ಎಂದು ಪರಿಗಣಿಸಬಹುದು.

ಸರಣಿಯಲ್ಲಿ ಕೇಂದ್ರ ಪಾತ್ರ ಕಾಯಿ ಎಂಬ ಬುಡಕಟ್ಟು ಗೋತ್ರದವರ ಪಾಳೆಯಗಾರನಾಗಿದ್ದ ಸುಲ್ತಾನ್ ಸುಲೇಮಾನ್ ಶಾ ನ ಪುತ್ರ ಎರ್ತೂಗ್ರೂಲ್ ಗಾಝಿಯದ್ದು. ಒಂದು ಸಣ್ಣ ಗೋತ್ರದ ಆ ಒಬ್ಬ ಸಾಹಸಿ ಯುವ ಯೋಧ ಯಾವ ರೀತಿಯಲ್ಲಿ, ಏಕಕಾಲದಲ್ಲಿ ಒಂದೆಡೆ ಬೈಝನ್ ಟಾಯ್ನ್ ಸಾಮ್ರಾಜ್ಯದ ದೈತ್ಯ ಶಕ್ತಿಯನ್ನು, ಇನ್ನೊಂದೆಡೆ ಯೂರೋಪಿನ ಶಿಲುಬೆ ಯೋಧರ (crusaders)  

 ಬಲಿಷ್ಠ ಪಡೆಗಳನ್ನು, ಮತ್ತೊಂದೆಡೆ ಮಂಗೋಲ್ ಯುದ್ಧಕೋರರನ್ನು ಮತ್ತು ಮಗದೊಂದೆಡೆ ಸ್ವತಃ ತನ್ನದೇ ಗೋತ್ರದೊಳಗಿನ ವಿದ್ರೋಹಿ ಶಕ್ತಿಗಳನ್ನು ಎದುರಿಸಿ ತನ್ನ ಜನತೆಯ ಹಿತಾಸಕ್ತಿಗಳನ್ನು ಕಾಪಾಡಿ ಅವರಿಗೆ ಸುರಕ್ಷಿತ ನೆಲೆಯೊಂದನ್ನು ಒದಗಿಸಿ ಕೊಡುತ್ತಾನೆ ಎಂಬುದನ್ನು ಸರಣಿಯಲ್ಲಿ ಬಹಳ ಸುಂದರವಾಗಿ ನಿರೂಪಿಸಲಾಗಿದೆ. ಕೊರೋನ ತಂದುಕೊಟ್ಟ ಬಲವಂತದ ದೀರ್ಘ ರಜೆಯ ಅವಧಿಯಲ್ಲಿ ಲೋಕದೆಲ್ಲೆಡೆ ಜನರು ಟಿವಿ, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳ ಮುಂದೆ ಕುಳಿತು ಎರ್ತೂಗ್ರ್ರೂಲ್ ಸರಣಿಯನ್ನು ಆಸ್ವಾದಿಸಿದ್ದಾರೆ. ಭಾರತದಲ್ಲಿ ಈ ಸರಣಿಯ ಕುರಿತು ದೊಡ್ಡ ಮಟ್ಟದ ಚರ್ಚೆ, ಸಂವಾದಗಳೇನೂ ನಡೆದಿಲ್ಲವಾದರೂ ನೆಟ್‌ಫ್ಲಿಕ್ಸ್, ಯೂಟ್ಯೂಬ್ ಇತ್ಯಾದಿಗಳ ಮೂಲಕ ಲಕ್ಷಾಂತರ ಭಾರತೀಯರು ಇದನ್ನು ವೀಕ್ಷಿಸಿದ್ದಾರೆ. ಪಾಕಿಸ್ತಾನ, ಮಲೇಶ್ಯ, ಇಂಡೋನೇಶ್ಯಯಾ, ಆಝರ್ ಬೈಜಾನ್ ಮುಂತಾದ ದೇಶಗಳಲ್ಲಿನ ಹೆಚ್ಚಿನ ವೀಕ್ಷಕರು ಈ ಸರಣಿ ಮತ್ತು ಅದರಲ್ಲಿನ ಪಾತ್ರಗಳ ಜೊತೆ ಭಾವನಾತ್ಮಕ ನಂಟನ್ನೂ ಬೆಳೆಸಿಕೊಂಡಿದ್ದಾರೆ.ಸರಣಿಯಲ್ಲಿರುವ ನೈತಿಕ ಹಾಗೂ ಆಧ್ಯಾತ್ಮಿಕ ಪಾಠಗಳಿಂದ ಪ್ರೇರಣೆ ಪಡೆದಿದ್ದಾರೆ.ಈ ಸರಣಿಯ ಅರೇಬಿಕ್ ಆವೃತ್ತಿಯು ಅರಬ್ ವೀಕ್ಷಕ ವಲಯಗಳಲ್ಲಿ ಬಹಳಷ್ಟು ಆಸಕ್ತಿ ಕೆರಳಿಸಿದೆ. ಆದರೆ ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ವಾಣಿಜ್ಯ ಕಾರಣಗಳಿಂದ ಟರ್ಕಿಯನ್ನು ತಮ್ಮ ಪ್ರತಿಸ್ಪರ್ಧಿಯಾಗಿ ಕಾಣುವ ಈಜಿಫ್ಟ್, ಸೌದಿಅರೇಬಿಯ, ಯುಎಇ ಮುಂತಾದ ಕೆಲವು ಅರಬ್ ದೇಶಗಳ ಸರಕಾರಗಳು ವಿವಿಧ ಸಬೂಬುಗಳನ್ನೊಡ್ಡಿ ಈ ಸರಣಿಗೆ ನಿಷೇಧ ಹೇರಿವೆ. ಸೌದಿ ಅರೇಬಿಯ, ಎರ್ತೂಗ್ರೂಲ್ ಸರಣಿಗೆ ಎದಿರೇಟು ನೀಡಲು ‘ಮಮಾಲಿಕ್ ಅನ್ನಾರ್’ (ನರಕದ ಸಾಮ್ರಾಜ್ಯಗಳು)ಎಂಬ ತನ್ನದೇ ಆದ ಸರಣಿಯೊಂದನ್ನು ನಿರ್ಮಿಸಿದೆ. ಅದರಲ್ಲಿ, ಉಸ್ಮಾನಿಯಾ ಸಾಮ್ರಾಜ್ಯವು ಅರಬ್ ನಾಡುಗಳ ಜನರ ಮೇಲೆ ನಡೆಸಿದೆ ಎನ್ನಲಾದ ದೌರ್ಜನ್ಯಗಳನ್ನು ತೋರಿಸಲಾಗಿದೆ. ಅತ್ತ ಟರ್ಕಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಕಾಲಿಟ್ಟಿದ್ದು, ಎರ್ತೂಗ್ರೂಲ್ ಪುತ್ರ ಹಾಗೂ ಉಸ್ಮಾನಿಯಾ ಸಾಮ್ರಾಜ್ಯದ ಸ್ಥಾಪಕ ಉಸ್ಮಾನ್ (ಸಾಹಸಗಾಥೆಯನ್ನು ಮೊಯುವ ‘ಕುರುಲುಸ್ :’(ಸ್ಥಾಪಕ ಉಸ್ಮಾನ್)ಎಂಬ ಇನ್ನೊಂದು ಮೆಗಾ ಸೀರಿಯಲ್ ಅನ್ನು ನಿರ್ಮಿಸಿ ಪ್ರಸಾರ ಮಾಡಲು ಆರಂಭಿಸಿದ್ದಾರೆ. ತಂದೆಯ ಕುರಿತಾದ ಸೀರಿಯಲಿ ನೆದುರು ಮಗನ ಕುರಿತಾದ ಸೀರಿಯಲ್ ಯಾವಮಟ್ಟಿಗೆ ಜನ ಮನ್ನಣೆ ಪಡೆಯುತ್ತದೆಂಬುದನ್ನೀಗ ಕಾದು ನೋಡಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top