ಅಮೆರಿಕದಲ್ಲಿದ್ದೂ ಭಾರತದ ತುರ್ತುಪರಿಸ್ಥಿತಿಯ ಬಗ್ಗೆ ಧ್ವನಿಯೆತ್ತಿದವರು | Vartha Bharati- ವಾರ್ತಾ ಭಾರತಿ

ಅಮೆರಿಕದಲ್ಲಿದ್ದೂ ಭಾರತದ ತುರ್ತುಪರಿಸ್ಥಿತಿಯ ಬಗ್ಗೆ ಧ್ವನಿಯೆತ್ತಿದವರು

ಭಾರತದಲ್ಲಿ ಹೇರಲ್ಪಟ್ಟಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಲು ಅಂದು ಹುಟ್ಟುಹಾಕಲಾಗಿದ್ದ ಐಎಫ್‌ಡಿ ಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೆಂದರೆ ಚಿಕಾಗೊದಲ್ಲಿ ಉನ್ನತ ನಿರ್ವಹಣಾ ಸಲಹೆಗಾರ ಹುದ್ದೆಯಲ್ಲಿದ್ದ ಎಸ್. ಆರ್. ಹಿರೇಮಠ, ಸಮಾಜಶಾಸ್ತ್ರದಲ್ಲಿ ಪಿಎಚ್.ಡಿ. ವಿದ್ಯಾರ್ಥಿಯಾಗಿದ್ದ ಆನಂದ್ ಕುಮಾರ್, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ರವಿ ಚೋಪ್ರಾ, ವೈದ್ಯಕೀಯ ಪರೀಕ್ಷಕರಾಗಿದ್ದ ಡಾ. ಫಾರೂಕ್ ಬಿ. ಪ್ರೆಸ್‌ವಾಲಾ, ಮನೋವೈದ್ಯರಾಗಿದ್ದ ಡಾ. ಹಸ್ಮುಖ್ ಷಾ, ಇಂಜಿನಿಯರಿಂಗ್ ಸಲಹೆಗಾರರಾಗಿದ್ದ ಜಿತೇಂದ್ರ ಕುಮಾರ್, ಅಲೆಕ್ಸಾಂಡ್ರಿಯಾದಲ್ಲಿ ನೆಲೆಸಿದ್ದ ಶರಣ್ ನಂದಿ, ಮಿಚಿಗಾನ್ ನಿವಾಸಿಯಾಗಿದ್ದ ಎಸ್. ಕೆ. ಪೋದ್ದಾರ್, ಮೇರಿಲ್ಯಾಂಡ್‌ನ ರಾಮ್ ಗೆಹಾನಿ ಮತ್ತು ಇಲಿನಾಯ್ಸಾನ ಡಾ. ಕೆ. ವಿ. ಎಸ್. ರಾಜು ಮತ್ತು ಇತರರು.


ಯಾವುದೇ ಐತಿಹಾಸಿಕ ಘಟನೆಗಳ ವಾರ್ಷಿಕೋತ್ಸವಗಳು ಮಾಮೂಲಾಗಿ ಬಂದು ಹೋಗುತ್ತಿರುತ್ತವೆ. ಅವು ಹೆಚ್ಚಾಗಿ ವರ್ತಮಾನದ ಸದ್ದುಗದ್ದಲಗಳಿಗೆ ಅನುಗುಣವಾಗಿ ಅವುಗಳೊಳಗಿನ ದೋಷ ನಿವಾರಣೆ ಮಾಡಿಕೊಳ್ಳುವುದರೊಂದಿಗೆ ತಮ್ಮನ್ನು ತಾವು ನವೀಕರಿಸಿಕೊಳ್ಳುತ್ತವೆ. ಇದೇ ಜೂನ್ 25ರಂದು 45 ವರ್ಷಗಳು ಪೂರೈಸಿದ ತುರ್ತುಪರಿಸ್ಥಿತಿಯ ನೆನಪೂ ಕೂಡ ಇದೇ ರೀತಿ ಎಂದು ಹೇಳಬಹುದಾಗಿದೆ. ಆದಾಗ್ಯೂ, ಅಂದಿನ ತುರ್ತುಪರಿಸ್ಥಿತಿಯ ಕಥೆಯ ಒಂದು ಅಂಶಕ್ಕೆ ಎಂದಿಗೂ ಪ್ರಚಾರ ಕೊಡಲಾಗಿಲ್ಲ? ಆದರೆ ಆ ಅಂಶವು ನಮ್ಮ ಇತಿಹಾಸಕ್ಕೆ ಹೊಸ ಹೊಳಪು ಮತ್ತು ದೃಷ್ಟಿಕೋನವನ್ನು ಸೇರಿಸುವ ಸಾಮರ್ಥ್ಯ ಹೊಂದಿದೆ. 45 ವರ್ಷಗಳ ಹಿಂದೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕಿತ್ತುಹಾಕಿದ್ದ ಪ್ರಕ್ರಿಯೆಯ ವಿರುದ್ಧ ಹೋರಾಡಿ ಅಂತರ್‌ರಾಷ್ಟ್ರೀಯ ಅಭಿಪ್ರಾಯವನ್ನು ರೂಪಿಸಿದ್ದ ಅಮೆರಿಕದಲ್ಲಿ ಮರೆತುಹೋದ ಭಾರತೀಯರ ಗುಂಪಿನ ಬಗ್ಗೆ ನಾವು ಹೆಚ್ಚಿಗೆ ತಿಳಿದುಕೊಳ್ಳಬೇಕಿದೆ.

ಇತ್ತೀಚೆಗೆ ಅಮೆರಿಕದಲ್ಲಿ ಆಯೋಜಿಸಲಾಗಿದ್ದ ‘ಹೌಡಿ ಮೋದಿ’ ಎಂಬ ಕಾರ್ಯಕ್ರಮಕ್ಕೆ ಅಲ್ಲಿನ ಭಾರತೀಯ ಮೂಲದ ವಲಸಿಗರು ಒಡ್ಡಿಕೊಂಡ ಪ್ರಸಂಗವನ್ನು ಅವಲೋಕಿಸಿದಾಗ ಈಗಿನ ಕಾಲದ ವಲಸಿಗರ ಗುಂಪು ಬೇರೊಂದು ವಿಶ್ವದಿಂದ ಬಂದವರು ಎಂಬಂತೆ ಭಾಸವಾಗುತ್ತದೆ. ಈಗಿನ ಕಾಲದ ವಲಸಿಗರನ್ನು ಹೋಲಿಸಿದಾಗ ಆಗಿನವರ ಆದರ್ಶಗಳು, ಮೌಲ್ಯಗಳು, ಬೌದ್ಧಿಕ ಮಟ್ಟದ ಹರವು, ಸಂಘಟನಾ ಕೌಶಲ್ಯಗಳು, ಪ್ರಗತಿಶೀಲತೆ ಮತ್ತು ವೈಯಕ್ತಿಕ ತ್ಯಾಗದ ಶಕ್ತಿ ಸಂಪೂರ್ಣವಾಗಿ ಭಿನ್ನ ನೆಲೆಯಲ್ಲಿ ನಿಲ್ಲುತ್ತವೆ. ಪ್ರಸ್ತುತ ಪ್ರಭುತ್ವವನ್ನು ಓಲೈಸುವ ಇಂದಿನ ಭಾರತದ ವಲಸಿಗರಂತೆ ಯುಎಸ್‌ನಲ್ಲಿ ಆ ಸಮಯದಲ್ಲಿ ಯಾವುದೇ ‘ಹೀಲ್ ಇಂದಿರಾ’ ಮನಸ್ಥಿತಿಯ ವಲಸೆಗಾರರಿರಲಿಲ್ಲ ಅಥವಾ ಅವರು ಸ್ವ-ಹಿತಾಸಕ್ತಿಯಿಂದ ಭಾರತದ ರಾಜಕೀಯ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಪ್ರತಿಭಟಿಸದೆ ಮೌನ ತಾಳಿರಲಿಲ್ಲ. ಆಗಿನ ವಲಸಿಗರು ಆಳುವ ಸರಕಾರದ ವಿರುದ್ಧ ಎದ್ದುನಿಂತು, ಮಾತನಾಡುವ ಎದೆಗಾರಿಕೆ ಹೊಂದಿದ್ದರು.
ವಲಸೆ ವ್ಯವಹಾರಗಳ ಇಲಾಖಾ ವರದಿಯ ಪ್ರಕಾರ, ಆ ಸಮಯದಲ್ಲಿ ಯುಎಸ್‌ನಲ್ಲಿ ಶಾಶ್ವತ-ನಿವಾಸ ಸ್ಥಾನಮಾನ ಹೊಂದಿದ್ದ ಭಾರತೀಯ ವಲಸಿಗ ನಾಗರಿಕರ ಸಂಖ್ಯೆ 95,000 ಇತ್ತು. ಹೋಲಿಕೆ ಮಾಡಿ ನೋಡಿದಾಗ ಇಂದು ಆ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಮತ್ತು ಸಹಜವಾಗಿ, ಹೊಸದಾಗಿ ಕಲಾಯಿ ಮಾಡಿದ ಭಾರತೀಯ ಮೂಲದ ಜನರ ಗುಂಪು ಅಲ್ಲಿದೆ. ಅಂದು ರಾಜಕೀಯ ಕ್ಷೇತ್ರದ ಮೇಲೆ ಭಾರತೀಯರ ಹತೋಟಿ ಇಂದಿನ ಮಟ್ಟಕ್ಕೆ ಹೋಲಿಸಿದರೆ ಸೀಮಿತವಾಗಿತ್ತು, ಆದರೆ ಅದು ಬಹುಮುಖ್ಯವಾಗಿ ಗಾತ್ರ ಅಥವಾ ಸಂಖ್ಯಾ ಬಲವಲ್ಲದೆ, ಆ ಗುಂಪಿನ ಬದ್ಧತೆ ಮತ್ತು ನೈತಿಕ ಅಳತೆಗೋಲಾಗಿತ್ತು.

ಭಾರತದಲ್ಲಿ ತುರ್ತು ಪರಿಸ್ಥಿತಿಯ ಕಾರ್ಮೋಡಗಳು ಕವಿಯುತ್ತಿದ್ದ ಕೆಲವು ವಾರಗಳ ಮೊದಲು, ಅಲ್ಲಿನ 810 ಜನ ವಲಸಿಗರ ಗುಂಪು ಚಿಕಾಗೊದಲ್ಲಿ ಒಟ್ಟಿಗೆ ಸೇರಿ ಇಂಡಿಯನ್ಸ್ ಫಾರ್ ಡೆಮಾಕ್ರಸಿ (ಐಎಫ್‌ಡಿ) ಎಂಬ ಸಂಘಟನೆ ಯನ್ನು ಹುಟ್ಟುಹಾಕಿತ್ತು ಮತ್ತು ಅದು ಅತಿ ಶೀಘ್ರದಲ್ಲಿ ಯುಎಸ್‌ನಾದ್ಯಂತ ತನ್ನ ಸಂಘಟನೆಯನ್ನು ವಿಸ್ತರಿಸಿತ್ತು. ಭಾರತದಲ್ಲಿ ಹೇರಲ್ಪಟ್ಟಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಲು ಅಂದು ಹುಟ್ಟುಹಾಕಲಾಗಿದ್ದ ಐಎಫ್‌ಡಿ ಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೆಂದರೆ ಚಿಕಾಗೊದಲ್ಲಿ ಉನ್ನತ ನಿರ್ವಹಣಾ ಸಲಹೆಗಾರ ಹುದ್ದೆಯಲ್ಲಿದ್ದ ಎಸ್. ಆರ್. ಹಿರೇಮಠ, ಸಮಾಜಶಾಸ್ತ್ರದಲ್ಲಿ ಪಿಎಚ್.ಡಿ. ವಿದ್ಯಾರ್ಥಿಯಾಗಿದ್ದ ಆನಂದ್ ಕುಮಾರ್, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ರವಿ ಚೋಪ್ರಾ, ವೈದ್ಯಕೀಯ ಪರೀಕ್ಷಕರಾಗಿದ್ದ ಡಾ. ಫಾರೂಕ್ ಬಿ. ಪ್ರೆಸ್‌ವಾಲಾ, ಮನೋವೈದ್ಯರಾಗಿದ್ದ ಡಾ. ಹಸ್ಮುಖ್ ಷಾ, ಇಂಜಿನಿಯರಿಂಗ್ ಸಲಹೆಗಾರರಾಗಿದ್ದ ಜಿತೇಂದ್ರ ಕುಮಾರ್, ಅಲೆಕ್ಸಾಂಡ್ರಿಯಾದಲ್ಲಿ ನೆಲೆಸಿದ್ದ ಶರಣ್ ನಂದಿ, ಮಿಚಿಗಾನ್ ನಿವಾಸಿಯಾಗಿದ್ದ ಎಸ್. ಕೆ. ಪೋದ್ದಾರ್, ಮೇರಿಲ್ಯಾಂಡ್‌ನ ರಾಮ್ ಗೆಹಾನಿ ಮತ್ತು ಇಲಿನಾಯ್ಸಾನ ಡಾ. ಕೆ. ವಿ. ಎಸ್. ರಾಜು ಮತ್ತು ಇತರರು.

ಐಎಫ್‌ಡಿಗೆ ಅಂದು ಎಸ್. ಆರ್. ಹಿರೇಮಠ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿತ್ತು. ಈ ಗುಂಪು ಒಂದಷ್ಟು ಜನಪ್ರಿಯತೆ ಗಳಿಸಲು ಸುಮಾರು ಒಂದು ವರ್ಷ ತೆಗೆದುಕೊಂಡಿತು, ಆದರೆ ಮಾರ್ಚ್ 1976ರ ಹೊತ್ತಿಗೆ, ಗುಂಪಿನ ಸದಸ್ಯರು ನ್ಯೂಯಾರ್ಕ್ ಟೈಮ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್ ನಂತಹ ಪ್ರಮುಖ ಪತ್ರಿಕೆಗಳಲ್ಲಿ ಮುಖಪುಟದ ಹೆಡ್ಲೈನ್‌ನಲ್ಲಿ ಮಿಂಚತೊಡಗಿದರು ಮತ್ತು ಪಿಬಿಎಸ್ ನೆಟ್‌ವರ್ಕ್‌ನಲ್ಲಿ ಸಂದರ್ಶನಗಳನ್ನು ನೀಡುವ ಮಟ್ಟಿಗೆ ಬೆಳೆದು ನಿಂತರು. ಈ ಗುಂಪಿನ ಸದಸ್ಯರು ಗಾಂಧೀಜಿಯವರ ದಕ್ಷಿಣ ಆಫ್ರಿಕಾ ಹೋರಾಟದ ಮಾದರಿಯಿಂದ ಪ್ರಭಾವಿತರಾಗಿದ್ದು ‘ಇಂಡಿಯನ್ ಒಪಿನಿಯನ್’ ಎಂಬ ಪಾಕ್ಷಿಕವನ್ನು ಸಹ ಅಲ್ಲಿ ಪ್ರಾರಂಭಿಸಿದ್ದರು.

ಯುಎಸ್‌ನಲ್ಲಿ ಸ್ಥಾಪನೆಗೊಂಡ ಐಎಫ್‌ಡಿ ಆಗಸ್ಟ್ 15, 1975ರಂದು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರಿಯ ನಿವಾಸಕ್ಕೆ ಮೆರವಣಿಗೆ ನಡೆಸಿದ್ದು, ಇದು ಅದರ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮಕ್ಕಾಗಿ ಐಎಫ್‌ಡಿ ರೂಪಿಸಿದ್ದ ಭಿತ್ತಿ ಪತ್ರದಲ್ಲಿ ಒಂದು ವೃತ್ತವಿತ್ತು, ಆ ವೃತ್ತದ ಅರ್ಧದಷ್ಟು ಕಪ್ಪುಬಣ್ಣದಿಂದ ಆವೃತ್ತವಾಗಿದ್ದರೆ ಉಳಿದ ಅರ್ಧ ವೃತ್ತದಲ್ಲಿ ಹೀಗೆ ಬರೆಸಲಾಗಿತ್ತು: ‘‘ಭಾರತೀಯ ಪ್ರಜಾಪ್ರಭುತ್ವದ ಬೆಳಕು ನಂದದಂತೆ ನೋಡಿಕೊಳ್ಳಿ.’’ ಈ ಪ್ರತಿಭಟನೆ ನಡೆದ ಮಾರನೇ ದಿನದ ಬೆಳಗ್ಗೆ ವಾಷಿಂಗ್ಟನ್ ಪೋಸ್ಟ್ ‘‘ಭಾರತೀಯ ನಾಗರಿಕರ ಮೂಲಭೂತ ಹಕ್ಕುಗಳನ್ನು ನಿಗ್ರಹಿಸುವುದರ ಮತ್ತು ಭಾರತೀಯ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಕ್ರಿಯೆಯ ವಿರುದ್ಧ ಪ್ರಬಲ ಪ್ರತಿಭಟನೆ’’ ಎಂಬ ತಲೆಬರಹದಡಿಯಲ್ಲಿ ಈ ಪ್ರತಿಭಟನೆಯ ಸುದ್ದಿಯನ್ನು ವರದಿ ಮಾಡಿತ್ತು. ‘‘ಈ ಸಂಘಟನೆಯು ಭಾರತದ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡುವಂತಹ ಯುಎಸ್‌ನಲ್ಲಿ ನೆಲೆಸಿದ್ದ ಒಂದು ಲಕ್ಷ ಹೊಸ ಸದಸ್ಯರ ಹುಡುಕಾಟದಲ್ಲಿದೆ’’ ಎನ್ನುವ ಮಾತನ್ನು ಕೂಡ ವರದಿಯಲ್ಲಿ ಸೇರಿಸಿತ್ತು. ಅಷ್ಟರ ಮಟ್ಟಿಗೆ ಈ ಸಂಘಟನೆ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡುವ ಮೂಲಕ ಯುಎಸ್‌ನಲ್ಲಿ ಜನಪ್ರಿಯಗೊಂಡಿತ್ತು.

ಈ ಸಂಸ್ಥೆ ಒಂದು ನಿರ್ದಿಷ್ಟ ಕಾರ್ಯ ಯೋಜನೆಯ ಮೂಲಕ ತನ್ನ ಸಂಘಟನೆಯನ್ನು ವಿಸ್ತರಿಸಿತ್ತು. ತನ್ನ ಒಬ್ಬ ಪ್ರತಿನಿಧಿ ಯುನೈಟೆಡ್ ಸ್ಟೇಟ್ಸ್ ನ ಕನಿಷ್ಠ 25 ಪ್ರಮುಖ ನಗರಗಳಲ್ಲಿರುವಂತೆ ಮತ್ತು ಪ್ರತಿ ನಗರದಲ್ಲಿ 50ರಿಂದ 100 ವಲಸಿಗ ಭಾರತೀಯರೊಂದಿಗೆ ಸಂವಹನ ನಡೆಸುವಂತೆ ಯೋಜನೆ ರೂಪಿಸಿ ಯಶಸ್ವಿಯಾಗಿತ್ತು. ಎಸ್. ಕೆ. ಪೋದ್ದಾರ್ ಅವರು ಮಿಚಿಗಾನ್‌ನ ಈಸ್ಟ್ ಲ್ಯಾನ್ಸಿಂಗ್‌ನಿಂದ ನಿರ್ವಹಿಸಲ್ಪಡುತ್ತಿದ್ದ ನಿಯತಕಾಲಿಕಕ್ಕೆ ಚಂದಾದಾರರನ್ನು ಕ್ರೋಡೀಕರಿಸುವ ಕೆಲಸ ಮಾಡುವ ಮೂಲಕ ಸಂಘಟನೆಯ ಹರವನ್ನು ವಿಸ್ತರಿಸಿದ್ದರು. ಸಂಘಟನೆಯ ಉದ್ದೇಶದಿಂದ ಯುಎಸ್‌ನ ಪ್ರತಿಯೊಂದು ನಗರಗಳಿಗೆ ಸಂಚರಿಸಿದ ಆನಂದ್ ಕುಮಾರ್ ಮುಂದಿನ ಕೆಲವು ತಿಂಗಳುಗಳಲ್ಲಿ ಅತಿ ಹೆಚ್ಚು ಜಾಗ್ರತಾ ಕಾರ್ಯಕ್ರಮಗಳು ಆಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆ ಸಮಯದಲ್ಲಿ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾರತದಿಂದ ಹೋಗಿ ಭಾಗವಹಿಸಿದ್ದ ಪ್ರಮುಖರೆಂದರೆ ರಜನಿ ಕೊಠಾರಿ, ರಾಮ್ ಜೇಠ್ಮಲಾನಿ, ಸುಬ್ರಮಣಿಯನ್ ಸ್ವಾಮಿ ಮತ್ತು ಯು. ಆರ್. ಅನಂತಮೂರ್ತಿ.

ಎಸ್. ಆರ್. ಹಿರೇಮಠ ಅವರು ಕೇವಲ ಯುಎಸ್‌ನಲ್ಲಿ ಮಾತ್ರ ಪ್ರತಿಭಟನೆ ಮತ್ತು ಸಂಘಟನೆ ಹಮ್ಮಿಕೊಳ್ಳುವ ಕಾರ್ಯಕ್ಕೆ ಸೀಮಿತಗೊಳ್ಳದೆ, ಜಿನೀವಾ ಸೇರಿದಂತೆ ಒಂಭತ್ತು ಯುರೋಪಿಯನ್ ನಗರಗಳಿಗೆ ಅವಿರತ ಸಂಚರಿಸಿದ್ದರು ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆ ಕುರಿತು ವರದಿಯೊಂದನ್ನು ಸಲ್ಲಿಸಿದ್ದರು. ಲಂಡನ್‌ನಲ್ಲಿ, ಅವರು 1973ರಿಂದ ತಮಗೆ ಪರಿಚಯಸ್ಥರಾಗಿದ್ದ ಅರ್ಥಶಾಸ್ತ್ರಜ್ಞ ಇ. ಎಫ್. ಷೂಮ್ಯಾಚರ್ ಅವರನ್ನು ಭೇಟಿಯಾಗಿ ತಮ್ಮ ಹೋರಾಟಕ್ಕೆ ಅವರ ಬೆಂಬಲವನ್ನು ಪಡೆದಿದ್ದರು. ಎಸ್. ಆರ್. ಹಿರೇಮಠ ಅವರ ಈ ಸಂಘಟನಾ ಕಾರ್ಯ ಕೇವಲ ಅನಿವಾಸಿ ಭಾರತೀಯರಷ್ಟೇ ಅಲ್ಲದೆ, ಪ್ರಜಾಪ್ರಭುತ್ವವನ್ನು ಗೌರವಿಸುವ ಎಲ್ಲ ಯುರೋಪಿಯನ್ನರ ಜಾಲವನ್ನು ಸ್ಥಾಪಿಸಲು ನೆರವಾಗಿತ್ತು. ಎಸ್. ಆರ್. ಹಿರೇಮಠ ಅವರು ಅಟ್ಲಾಂಟಿಕ್‌ನಾದ್ಯಂತ ಪ್ರವಾಸ ಮುಗಿಸಿದ ತರುವಾಯ, ಅವರು ಯುಎಸ್‌ಗೆ ಹಿಂದಿರುಗಿದ ಮಾರನೆಯ ದಿನ, ಅಂದರೆ ಜುಲೈ 8, 1976ರಂದು ಎಸ್. ಆರ್. ಹಿರೇಮಠ, ಎಸ್. ಕೆ. ಪೋದ್ದಾರ್, ಶರಣ್ ನಂದಿ ಮತ್ತು ರಾಮ್ ಗೆಹಾನಿಯವರ ಪಾಸ್‌ಪೋರ್ಟ್‌ಗಳನ್ನು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಇದೇ ಕಾರಣಕ್ಕೆ ಈ ಹಿಂದೆ, ಆನಂದ್ ಕುಮಾರ್ ಅವರಿಗೆ ಭಾರತ ಸರಕಾರ ನೀಡಲಾಗುತ್ತಿದ್ದ ಮೆರಿಟ್ ವಿದ್ಯಾರ್ಥಿವೇತನವನ್ನು ಸಹ ರದ್ದುಗೊಳಿಸಲಾಗಿತ್ತು.

ಈ ಘಟನೆಯ ನಂತರ ಚಿಕಾಗೊ ಸನ್-ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಎಸ್. ಆರ್. ಹಿರೇಮಠ ಅವರು ತನ್ನ ಎಂದಿನ ಅಚಲ ನಿರ್ಧಾರದಿಂದ ಹೀಗೆ ಹೇಳಿದ್ದರು: ‘‘ನನ್ನಂತಹ ಕೆಲವು ತತ್ವಬದ್ಧ ವ್ಯಕ್ತಿಗಳು ಭಾರತದ ರಾಷ್ಟ್ರೀಯ ಸರಕಾರದ ಮೇಲೆ ಈ ರೀತಿಯ ಪ್ರಭಾವ ಬೀರಬಹುದು ಎಂದು ತಿಳಿದಾಗ ನನಗೆ ಸಂತೋಷವಾಗಿದೆ.’’ ಪತ್ರಿಕೆಯು ಈ ಸಂದರ್ಶನದ ಶೀರ್ಷಿಕೆಯಲ್ಲಿ ಹಿರೇಮಠರನ್ನು ‘ಇಂದಿರಾ ಗಾಂಧಿಯ ಬದ್ಧ ವೈರಿ’ ಎಂದು ಕರೆದಿತ್ತು. ಭಾರತ ಸರಕಾರದ ಆ ದಂಡನಾತ್ಮಕ ಕ್ರಮವನ್ನು ವಿರೋಧಿಸಿ ನ್ಯೂಯಾರ್ಕ್‌ನಲ್ಲಿ ವಿತರಿಸಲಾದ ಕರಪತ್ರವೊಂದರಲ್ಲಿ ಹೀಗೆ ಬರೆಸಲಾಗಿತ್ತು: ‘‘ಐಎಫ್‌ಡಿ ಸದಸ್ಯರು ಆತ್ಮಸಾಕ್ಷಿಗೆ ಅನುಸಾರವಾಗಿ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.’’ ಆನಂದ್ ಕುಮಾರ್ ಅವರಿಗೆ ಭಾರತ ಸರಕಾರ ನೀಡಲಾಗುತ್ತಿದ್ದ ಮೆರಿಟ್ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿದ ಘಟನೆಯ ಕುರಿತು ಮಾರ್ಚ್ 8, 1976ರಂದು ನ್ಯೂಯಾರ್ಕ್ ಟೈಮ್ಸ್ ಈ ರೀತಿಯಲ್ಲಿ ಒಂದು ಚಿಕ್ಕ ವರದಿ ಹಾಕಿತ್ತು: ‘‘ಮಿ. ಆನಂದ್ ಕುಮಾರ್ ಅವರು ಚಿಕಾಗೊದ ಅಮೆರಿಕನ್ನರು ಮನ್ನಣೆ ನೀಡಿದ ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ‘ಅದ್ಭುತ’ ಅಭ್ಯರ್ಥಿ ಎಂದು ಬಣ್ಣಿಸಿತ್ತು. ಆನಂದ್ ಕುಮಾರ್, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷರಾಗಿದ್ದರು.

ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ ನಂತರ, ಎಸ್. ಆರ್. ಹಿರೇಮಠ ಅವರು ಯುಎಸ್‌ನಲ್ಲಿ ತಮ್ಮ ಲಾಭದಾಯಕ ಕೆಲಸವನ್ನು ತ್ಯಜಿಸಿ, ಭಾರತಕ್ಕೆ ಮರಳಿದರು. ಇಲ್ಲಿಗೆ ಬಂದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ವಿವಿಧ ಪರಿಸರ ಸಂಬಂಧಿತ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಕಳೆದ ಒಂದು ದಶಕದಲ್ಲಿ, ಕರ್ನಾಟಕದ ಬಳ್ಳಾರಿಯಲ್ಲಿ ನಡೆದ ಮಹಾ ಬ್ರಹ್ಮಾಂಡ ಭ್ರಷ್ಟಾಚಾರದ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿ ಹಿರೇಮಠ ಅವರು ಮಂಡಿಸಿದ ಕಾನೂನು ಹೋರಾಟದಿಂದ ಗಣಿ ಅಕ್ರಮಗಳಿಗೆ ಒಂದಷ್ಟು ಕಡಿವಾಣ ಬಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರಾಸಂಗಿಕವಾಗಿ, ಹಿರೇಮಠ ಅವರು 1974ರಲ್ಲಿ ಜಯಪ್ರಕಾಶ್ ನಾರಾಯಣ್ ಪ್ರಾರಂಭಿಸಿದ ‘ಸಿಟಿಜನ್ಸ್ ಫಾರ್ ಡೆಮಾಕ್ರಸಿ’ ಎಂಬ ಸಂಸ್ಥೆಯ ಈಗಿನ ಮುಖ್ಯಸ್ಥರಾಗಿದ್ದಾರೆ. ಆನಂದ್ ಕುಮಾರ್ ಅವರು ಜೆಎನ್‌ಯು ನಲ್ಲಿ ಪ್ರಾಧ್ಯಾಪಕರಾಗಿ ಮರಳಿದರು. 70ರ ದಶಕದ ಪ್ರಕ್ಷುಬ್ಧತೆಯ ಸಂದರ್ಭದ ಆನಂದ್ ಕುಮಾರ್ ಅವರು ಬರೆದ ಪತ್ರಿಕಾ ಬರಹಗಳು ಶೀಘ್ರದಲ್ಲೇ ಹೊಸದಿಲ್ಲಿಯ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಲಭ್ಯವಾಗಬಹುದು.

(ಇತ್ತೀಚೆಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟಿತ ಲೇಖನದ ಕನ್ನಡಾನುವಾದ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top