ಕೊರೋನ ಮತ್ತು ಸಾಮಾಜಿಕ ಭಯೋತ್ಪಾದನೆ

ರೋಗ ಕಾಣಿಸಿಕೊಂಡ ಆರಂಭದಲ್ಲಿ ನಮ್ಮ ಮೀಡಿಯಾಗಳು, ನೀತಿ ನಿರೂಪಕರು ಈ ವೈರಸನ್ನು ಎದುರಿಸಲು ಬೇಕಾದ ಇಮ್ಯುನಿಟಿ ಮನುಷ್ಯನ ದೇಹದಲ್ಲಿಲ್ಲ, ಹಾಗಾಗಿ ಇದು ಮಾರಣಾಂತಿಕ ಎಂದು ಜನರಲ್ಲಿ ಭೀಕರ ಭಯ ಹುಟ್ಟಿಸಿದ್ದರು. ಈಗಲೂ ಅದು ಮುಂದುವರಿದಿದೆ. 


ಸ್ವಿಟ್ಸರ್‌ಲ್ಯಾಂಡಿನ ಪ್ರಮುಖ ಜೀವಶಾಸ್ತ್ರಜ್ಞ ಮತ್ತು ಇಮ್ಯುನಾಲಜಿಯಲ್ಲಿ ಅದ್ವಿತೀಯನೆನಿಸಿರುವ ಬೇಡಾ ಎಂ. ಸ್ಟಾಡ್ಲರ್ ಕಳೆದ ತಿಂಗಳು ವೈರಾಲಜಿಸ್ಟರು, ಮಾಧ್ಯಮಗಳು ಮತ್ತು ಆಡಳಿತಗಾರರ ವಿರುದ್ಧ ಸಿಟ್ಟಿಗೆದ್ದು ಲೇಖನವೊಂದನ್ನು ಬರೆದಿದ್ದಾರೆ. ಈ ಮೂರೂ ಜನ ಕೊರೋನ ವಿಚಾರವಾಗಿ ಜಗತ್ತಿನ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಟ್ರಂಪ್ ಆಡಳಿತದಲ್ಲಿ ಮುಖ್ಯ ಸಲಹೆಗಾರರಾಗಿರುವ ಆಂಟನಿ ಫೌಚಿಯಿಂದ ಹಿಡಿದು ಎಲ್ಲರೂ ಸುಳ್ಳು ಹೇಳಿದರು, ಭೀತಿ ಹುಟ್ಟಿಸಿದರು ಎಂಬುದು ಈತನ ಸಿಟ್ಟಿಗೆ ಕಾರಣ. ಒಂದೆರಡು ವಿಷಯಗಳ ಹೊರತಾಗಿ ಉಳಿದಂತೆ ಈತ ಹೇಳುತ್ತಿರುವುದು ಸರಿಯಿದೆ ಅನ್ನಿಸುತ್ತದೆ. ಕೊರೋನ ವೈರಸ್ ಹೊಸ ನೋವೆಲ್. ಅದಕ್ಕೆ ಮನುಷ್ಯರ ದೇಹದಲ್ಲಿ ಪ್ರತಿರೋಧ ಶಕ್ತಿಯಿಲ್ಲ ಎಂದು ಹೇಳಿ ಇಡೀ ಜಗತ್ತನ್ನು ತಲ್ಲಣಗೊಳಿಸಲಾಯಿತು. ಇದು ಸರಿಯಲ್ಲ ಎಂಬುದು ಸ್ಟಾಡ್ಲರ್‌ವಾದ. ಕೊರೋನ ಸಾರ್ಸ್ ಗುಂಪಿಗೆ ಸೇರಿದ ವೈರಸ್. 2002ರಲ್ಲಿ 30 ದೇಶಗಳಿಗೆ ಹರಡಿದ್ದ ಸಾರ್ಸ್ 1 ವೈರಸ್ ರೂಪಾಂತರ ಹೊಂದಿ ಸಾರ್ಸ್ 2 ಆಗಿದೆ. ಹಾಗಾಗಿ ಇದು ಹೊಸದಲ್ಲ. ಇದು ಸೀಸನಲ್ಲಾಗಿ ನೆಗಡಿ ಉಂಟು ಮಾಡುವ ಸಾಧಾರಣ ವೈರಸ್. ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಂಡು ಬೇಸಿಗೆ ಹೊತ್ತಿಗೆ ಶಕ್ತಿ ಕ್ಷೀಣಿಸಿಕೊಳ್ಳುವ ವೈರಸ್ ಇದು. ಹಾಗಾಗಿ ಜಗತ್ತನ್ನು ಇಷ್ಟೊಂದು ತಲ್ಲಣಗೊಳಿಸುವ ಅಗತ್ಯವಿರಲಿಲ್ಲ ಎನ್ನುವುದು ಆತನ ವಾದ.

ರೋಗ ಲಕ್ಷಣಗಳಿಲ್ಲದವರನ್ನು ರೋಗಿಗಳು ಎಂದು ಕರೆಯುವ ಬಗ್ಗೆಯೂ ಆತನ ತಕರಾರಿದೆ. ಕರ್ನಾಟಕದ ಉದಾಹರಣೆಯನ್ನು ನೋಡಿದರೂ ಸುಮಾರು ಶೇ.80 ಜನರಿಗೆ ಯಾವುದೇ ರೋಗ ಲಕ್ಷಣಗಳಿಲ್ಲವೆಂದು ದಾಖಲೆಗಳು ಹೇಳುತ್ತಿವೆ. ಇವರನ್ನು ರೋಗಿಗಳೆನ್ನಬಾರದು. ಮನುಷ್ಯರ ದೇಹದೊಳಗೆ ಕ್ರಿಯಾಶೀಲವಾಗಿರುವ ಪ್ರತಿರೋಧ ಶಕ್ತಿಯು ಈ ವೈರಸನ್ನು ಸಣ್ಣ ಹೋರಾಟದ ಮೂಲಕ ಹೊಡೆದು ಹಾಕುತ್ತದೆ. ಎಲ್ಲೋ ಕೆಲವರಿಗೆ ಮಾತ್ರ ದೇಹದ ಎರಡನೇ ರಕ್ಷಣಾ ವ್ಯವಸ್ಥೆಯಾದ ಟಿ ಸೆಲ್ಲುಗಳು ಅಥವಾ ಬಿಳಿ ರಕ್ತ ಕಣಗಳು ದಾಳಿಗಿಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ವೈರಸ್‌ಗಳು ದೇಹದ ವಿವಿಧ ಕೋಶಗಳ ಮೇಲೆ ದಾಳಿ ಮಾಡಿ ನಾಶ ಮಾಡುತ್ತಿದ್ದಾಗ ಅದನ್ನು ತಡೆಯಲು ಈ ಟಿ ಸೆಲ್ಲುಗಳು ದಂಗೆ ಎದ್ದಂತೆ ಎಲ್ಲಾ ಕೋಶಗಳ ಮೇಲೂ ದಾಳಿ ಮಾಡಲಾರಂಭಿಸುತ್ತವೆ. ಈ ಪ್ರಕ್ರಿಯೆಯನ್ನು ಸೈಟೋಕಿನ್ ಪ್ರವಾಹ ಎನ್ನಲಾಗುತ್ತದೆ. ಇದು ಬಹಳ ಅಪರೂಪಕ್ಕೆಂಬ್ಬಂತೆ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ, ಇದನ್ನು ಕವಾಸಕಿ ಸಿಂಡ್ರೋಮ್ ಎನ್ನುತ್ತಾರೆ. ರಕ್ತ ಹೆಪ್ಪುಗಟ್ಟುವುದು ಇದರ ಮುಖ್ಯ ಲಕ್ಷಣ. ಇವೆಲ್ಲ ಬಹಳ ಅಪರೂಪದ ಪ್ರಕರಣಗಳು. ಇದನ್ನು ಈಗಾಗಲೇ ರೋಗ ಬಂದು ವಾಸಿಯಾಗಿರುವವರ ರಕ್ತವನ್ನು ಈ ಸಿಂಡ್ರೋಮಿಗೆ ತುತ್ತಾದವರಿಗೆ ನೀಡುವ ಮೂಲಕ ಸುಲಭವಾಗಿ ವಾಸಿ ಮಾಡಬಹುದು.

ಸ್ಟಾಡ್ಲರ್ ಪ್ರಕಾರ ಎಲ್ಲ ವೈರಸ್‌ಗಳಂತೆ ಕೊರೋನ ಕೂಡ ವಯಸ್ಸಾದವರನ್ನು, ಅಪೌಷ್ಟಿಕತೆಯಿಂದ ಬಳಲುವವರನ್ನು, ಇಮ್ಯುನಿಟಿ ಕಡಿಮೆ ಇರುವವರನ್ನು ತುಸು ಬಾಧಿಸುತ್ತದೆ. ಜೊತೆಗೆ ಇದರ ನಿಭಾವಣೆ ದೇಶವೊಂದರ ಸಾಮಾಜಿಕ ಸಮಸ್ಯೆಯ ಜೊತೆಗೆ ವೈದ್ಯಕೀಯ ಸಮಸ್ಯೆಗಳ ಆಧಾರದ ಮೇಲೆಯೂ ನಿಂತಿದೆ. ಈ ಕುರಿತು ಬಹುಪಾಲು ಜನರಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಸೋಂಕು ತಗಲಿ ವಾಸಿಯಾದವರಲ್ಲೂ ಪಾಸಿಟಿವ್ ಬರುತ್ತದಲ್ಲ ಯಾಕೆ? ಎಂಬುದು ಹಲವರನ್ನು ಕಾಡುವ ಇನ್ನೊಂದು ವಿಚಾರ. ಆಗಂತುಕ ವೈರಸ್ ಜೀವಕೋಶಗಳ ಮೇಲೆ ದಾಳಿ ಮಾಡಿ ಅವುಗಳಲ್ಲಿ ಅಡಗಿ ಒಂದಕ್ಕೆರಡಾಗಿ ದ್ವಿಗುಣಗೊಳ್ಳುತ್ತಾ ಹೋಗುತ್ತವೆ. ಬಿಳಿ ರಕ್ತಕಣಗಳು ಅವುಗಳನ್ನು ತಲಾಶು ಮಾಡಿ ಒಡೆದು ಚಿಂದಿ ಮಾಡುತ್ತವೆ. ಹಾಗಾಗಿ ಕೈ ಕಾಲು ಕಳೆದುಕೊಂಡ ವೈರಸ್‌ಗಳು ದೇಹದೊಳಗೆ ರಾಶಿಯಾಗುತ್ತವೆ. ಅವು ಏನನ್ನೂ ಮಾಡಲಾಗದಷ್ಟು ನಿಷ್ಕ್ರಿಯ ರೂಪದಲ್ಲಿರುತ್ತವೆ. ಅಳಿದುಳಿದ ನಿಷ್ಕ್ರಿಯ ವೈರಾಣುಗಳನ್ನು ಗುಣಿಸಿ ಲೆಕ್ಕ ಹಾಕುವುದರಿಂದ ಪಿ.ಸಿ.ಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬರುತ್ತದೆ. ಇದೇನೂ ಆತಂಕಕಾರಿಯಾದ ಸಂಗತಿಯಲ್ಲ. ಆದರೆ ಕೊರಿಯಾದಲ್ಲಿ ವಾಸಿಯಾದ 200 ಜನರಿಗೆ ಪಾಸಿಟಿವ್ ಬಂದಾಗ ಅಲ್ಲೋಲ ಕಲ್ಲೋಲ ಮಾಡಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನು ತನ್ನ ವಿವಿಧ ಮಾಧ್ಯಮಗಳ ಮೂಲಕ ಹಂಚಿಕೊಂಡಿತ್ತು. ಸ್ಟಾಡ್ಲರ್ ತನ್ನ ಪ್ರಮೇಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಪಿ.ಎ.ಇಯೋನಾಡಿಸ್ ಎಂಬ ಸ್ಟಾನ್ ಫೋರ್ಡ್ ವಿವಿಯ ವಿಜ್ಞಾನಿ ಮಾಡಿದ ಅಧ್ಯಯನದ ಮಾಹಿತಿಗಳನ್ನು ಬಳಸಿಕೊಳ್ಳುತ್ತಾರೆೆ. ಇಷ್ಟೆಲ್ಲ ಹೇಳಿದ ಮೇಲೂ ಆತ ಅಪಾಯ ವಲಯದಲ್ಲಿರುವವರನ್ನು ರಕ್ಷಿಸಿಕೊಳ್ಳಲು ಈ ಸೋಂಕಿಗೆ ಲಸಿಕೆಯೊಂದರ ಅಗತ್ಯವಿದೆ ಎನ್ನುತ್ತಾರೆ.

 ಆಂಟನಿ ಫೌಚಿ ಗುಂಪಿನವರು ಸ್ಟಾಡ್ಲರ್ ಗುಂಪಿನವರನ್ನು ಮೇವರಿಕ್‌ಗಳು ಎಂದು ಟೀಕಿಸುತ್ತಾರೆ. ಸ್ವತಂತ್ರ ಚಿಂತಕ ಎಂಬುದು ಈ ಮೇವರಿಕ್ ಪದದ ಪಾಸಿಟಿವ್ ಅರ್ಥವಾದರೆ, ಲಂಗು ಲಗಾಮಿಲ್ಲದವರು ಎಂಬುದು ನೆಗೆಟಿವ್ ಅರ್ಥ. ವಿಜ್ಞಾನ ವಿಷಯಗಳಲ್ಲಿ ಮೇವರಿಕ್ ಸ್ವಭಾವದವರನ್ನು ತುಸು ಆತಂಕದಿಂದ ನೋಡಲಾಗುತ್ತದೆ. ಈ ಸ್ವಭಾವದಿಂದ ಎಲ್ಲವೂ ಸೆಕ್ಸಸ್ ಆಗುವುದಿಲ್ಲ. ನ್ಯೂಟನ್ ಜೀವನದ ಬಹುಭಾಗವನ್ನು ಅಲ್ ಕೆಮಿಯ ಅಧ್ಯಯನದಲ್ಲಿ ಕಳೆದ. ಆದರೆ ಜಗತ್ತು ಆತನ ಗುರುತ್ವಾಕರ್ಷಣೆಯ ಪ್ರಮೇಯಗಳನ್ನು ಮಾತ್ರ ಹೆಕ್ಕಿಕೊಂಡಿತು. ಅನೇಕ ವಿಜ್ಞಾನಿಗಳು ಸ್ವಭಾವತಃ ರೇಸಿಸ್ಟರಾಗಿದ್ದರು. ಜಗತ್ತು ಅದನ್ನು ಬಿಟ್ಟು ಅವರ ಸಿದ್ಧಾಂತಗಳನ್ನು ಮಾತ್ರ ಆರಿಸಿಕೊಂಡಿತು. ಹೀಗಿರುವಾಗ ಸ್ಟಾಡ್ಲರ್ ಹೇಳುತ್ತಿರುವ ಪ್ರಮೇಯಗಳ ಸತ್ಯಾಸತ್ಯತೆಯನ್ನು ಈ ಐದು ತಿಂಗಳ ನಮ್ಮ ಅನುಭವದ ಬೆಳಕಿನಲ್ಲಿ ಪರೀಕ್ಷಿಸಿ ನೋಡಿದರೆ ಅದರ ಸಾಚಾತನ ಅರ್ಥವಾಗುತ್ತದೆ.

ರೋಗ ಕಾಣಿಸಿಕೊಂಡ ಆರಂಭದಲ್ಲಿ ನಮ್ಮ ಮೀಡಿಯಾಗಳು, ನೀತಿ ನಿರೂಪಕರು ಈ ವೈರಸನ್ನು ಎದುರಿಸಲು ಬೇಕಾದ ಇಮ್ಯುನಿಟಿ ಮನುಷ್ಯನ ದೇಹದಲ್ಲಿಲ್ಲ, ಹಾಗಾಗಿ ಇದು ಮಾರಣಾಂತಿಕ ಎಂದು ಜನರಲ್ಲಿ ಭೀಕರ ಭಯ ಹುಟ್ಟಿಸಿದ್ದರು. ಈಗಲೂ ಅದು ಮುಂದುವರಿದಿದೆ. ಚೀನಾ ಕೂಡ ಲಾಕ್ ಡೌನ್‌ನಂತಹ ಕಠಿಣ ಕ್ರಮ ಕೈಗೊಂಡು ಮತ್ತು ಸೋಂಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಿದ್ದರಿಂದ ಸಮರ್ಥವಾಗಿ ನಿಯಂತ್ರಿಸಲಾಯಿತು ಎಂದು ಪೋಸು ಕೊಟ್ಟಿತು. ಇದೇ ಮಾದರಿಯನ್ನು ಜಗತ್ತಿನ ಬಹುಪಾಲು ದೇಶಗಳು ಅನುಸರಿಸಿದವು. ಅನೇಕವು ಫೇಲ್ ಆದವು. ಕೊನೆಗೆ ನಮ್ಮಲ್ಲಿ ಗೊತ್ತಾಗಿದ್ದೆಂದರೆ ಸೋಂಕು ಬಂದ ಶೇ.98 ಜನರಿಗೆ ಇದರಿಂದ ಯಾವ ಸಮಸ್ಯೆಯೂ ಆಗುತ್ತಿಲ್ಲ ಎಂಬುದು. ಅಂದರೆ ಅಷ್ಟೂ ಜನರಲ್ಲಿ ಇಮ್ಯುನಿಟಿ ಇತ್ತು ಎಂದು ಅರ್ಥವಲ್ಲವೇ? ಅಂದರೆ ಸ್ಟಾಡ್ಲರ್ ಹೇಳುತ್ತಿರುವುದು ಸರಿಯಾಗಿದೆ ಎಂದಾಯಿತು. ಈ ಫಲಿತಾಂಶದ ಮೂಲಕ ಗಮನಿಸಿದರೆ ಇದು ನೋವೆಲ್ ವೈರಸ್ ಅಲ್ಲ ಎಂಬುದು ನಿಜವಾಯಿತು. ಉಳಿದ ವಿಜ್ಞಾನಿಗಳು ಈ ವಾದವನ್ನು ತುಸು ಭಿನ್ನವಾಗಿ ನೋಡುತ್ತಿದ್ದಾರೆ. ತಳಿಶಾಸ್ತ್ರದಲ್ಲಿ ಈ ರೂಪಾಂತರ ಎನ್ನುವುದು ಶೇಕಡಾ ಒಂದೆರಡರಷ್ಟಾದರೂ ಅದು ಗಂಭೀರವಾದುದೆಂದೇ ಪರಿಗಣಿಸಬೇಕೆಂದು ಅವರು ಹೇಳುತ್ತಾರೆ. ಸ್ಟಾಡ್ಲರ್ ಗುಂಪಿನವರು ಈ ಆತಂಕವನ್ನು ಸಾವಿನ ಅಂಕಿ ಸಂಖ್ಯೆಗಳನ್ನು ಮುಂದಿಟ್ಟು ಉತ್ತರ ಹೇಳುತ್ತಿದ್ದಾರೆ.

ಎರಡನೆಯದಾಗಿ ಇದೊಂದು ಚಳಿಗಾಲದ ವೈರಸ್ಸು ಎಂಬುದು ಅವರ ವಾದ. ಆದರೆ ಭಾರತದಲ್ಲಿ ಕೊರೋನ ಬೇಸಿಗೆಯಲ್ಲೂ ತೀವ್ರ ಪರಿಣಾಮ ಬೀರಿದ ದಾಖಲೆ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು ಗಳಲ್ಲಿವೆ. ಹಾಗಾಗಿ ಈ ವಿಚಾರದಲ್ಲಿ ಸ್ಟಾಡ್ಲರ್‌ರ ವಿಚಾರಗಳು ತುಸು ವೈರುಧ್ಯ ಪೂರ್ಣವಾಗಿ ನಮಗೆ ಕಾಣುತ್ತವೆ. ಆದರೆ ಮಾನ್ಸೂನ್ ಶುರುವಾದ ಕೂಡಲೇ ನಮ್ಮಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದನ್ನು ನೋಡಿದರೆ ವಾತಾವರಣದ ಉಷ್ಣಾಂಶಕ್ಕೂ ಸೋಂಕಿಗೂ ಸಂಬಂಧವಿರಬಹುದೇ ಎಂಬ ಅನುಮಾನವೂ ಹುಟ್ಟುತ್ತದೆ.

ಉಳಿದಂತೆ ಸ್ಟಾಡ್ಲರ್‌ರ ಬಹುಪಾಲು ವಿಷಯಗಳನ್ನು ಒಪ್ಪಬಹುದು. ಸಾಮಾಜಿಕ ಕಾರಣಗಳಾದ ಅಪೌಷ್ಟಿಕತೆ, ಕಳಪೆ ಆರೋಗ್ಯ ವ್ಯವಸ್ಥೆ, ವಯಸ್ಸು ಮುಂತಾದವುಗಳು ಸಾವು ನೋವಿನ ಸಂಖ್ಯೆಯನ್ನು ಹೆಚ್ಚಿಸುತ್ತವೆ ಎಂಬ ಅವರ ವಾದವನ್ನು ಹೌದೆನ್ನಿಸಲು ಅಮೆರಿಕದ ಆಫ್ರೋ ಅಮೆರಿಕನ್ ಜನರ ಉದಾಹರಣೆಗಳು ಸಾಕಷ್ಟಿವೆ. ಭಾರತದ ಮತ್ತು ಕರ್ನಾಟಕದ ಅಂಕಿ ಅಂಶಗಳು ಬೇರೆಯದೇ ಸತ್ಯಗಳನ್ನು ಹೇಳುತ್ತಿವೆ. ಜುಲೈ 30ರವರೆಗಿನ ಅಂಕಿ ಅಂಶಗಳಂತೆ ಭಾರತದಲ್ಲಿ ಸೋಂಕಿನಿಂದ ಮಡಿದವರ ಶೇಕಡಾವಾರು ಪ್ರಮಾಣ ಈಶಾನ್ಯ ಭಾರತದ ರಾಜ್ಯಗಳಲ್ಲಿ 0.3, ದಕ್ಷಿಣ ಭಾರತದಲ್ಲಿ 1.1, ಪಶ್ಚಿಮ ಭಾರತದಲ್ಲಿ 2.6, ಪೂರ್ವ ಭಾರತದಲ್ಲಿ 1.5, ಉತ್ತರ ಭಾರತದಲ್ಲಿ 1.5 ಮತ್ತು ಮಧ್ಯ ಭಾರತದಲ್ಲಿ 2.2 ಇದೆ. ಗುಜರಾತಿನಲ್ಲಿ ಇದು 4.1 ಮತ್ತು ಮಹಾರಾಷ್ಟ್ರದಲ್ಲಿ 3.6 ರಷ್ಟಿದೆ. ಪಶ್ಚಿಮ ಬಂಗಾಳದಲ್ಲಿ 2.3 ರಷ್ಟಿದೆ. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಶೇ.1.9 ರಷ್ಟಿದೆ.

ಕರ್ನಾಟಕದ ವಿಷಯಕ್ಕೆ ಬಂದರೆ ಹಳೆ ಮೈಸೂರು ಭಾಗದಲ್ಲಿ ಶೇ 1.86, ಮುಂಬೈ ಕರ್ನಾಟಕದಲ್ಲಿ 2.21, ಕಲ್ಯಾಣ ಕರ್ನಾಟಕದಲ್ಲಿ 1.6 ಮತ್ತು ಕರಾವಳಿ ಕರ್ನಾಟಕದ ದ.ಕ.ದಲ್ಲಿ 2.3, ಉಡುಪಿಯಲ್ಲಿ 0.6 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.1.1 ರಷ್ಟಿದೆ. ಜಿಲ್ಲಾವಾರು ನೋಡಿದರೆ ಮೈಸೂರು 3.6, ಬೀದರ್ 3.5, ತುಮಕೂರು 3.2, ಧಾರವಾಡ 3.1 ಮತ್ತು ಬಾಗಲಕೋಟೆಯಲ್ಲಿ ಶೇ.3ರಷ್ಟು ಮರಣ ಪ್ರಮಾಣ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ಯಾದಗಿರಿಯಲ್ಲಿ 0.5 ಮತ್ತು ಉಡುಪಿ ಮತ್ತು ಮಂಡ್ಯಗಳಲ್ಲಿ ಕ್ರಮವಾಗಿ 0.6 ಮತ್ತು 0.7 ರಷ್ಟು ಕಡಿಮೆ ಮರಣ ಪ್ರಮಾಣ ದಾಖಲಾಗಿದೆ.
  
ಈ ಅಂಕಿ ಅಂಶಗಳು ಏನನ್ನು ಹೇಳುತ್ತಿವೆ? ಮಾಂಸಾಹಾರದ ಮೂಲಕ ಪ್ರೊಟೀನು ಹೆಚ್ಚು ಸೇವಿಸುವವರಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ ಎಂತಲೇ? ಈಶಾನ್ಯ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಮಾಂಸಾಹಾರದ ಪ್ರಮಾಣ ಹೆಚ್ಚಿರುವುದರಿಂದ ಈ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆಯೇ? ಹಾಗಿದ್ದರೆ ಪಶ್ಚಿಮ ಬಂಗಾಳದಲ್ಲಿ ಸ್ವಲ್ಪ ಹೆಚ್ಚಿದೆಯಲ್ಲ ಯಾಕೆ? ಕಾಸ್ಮೋಪಾಲಿಟನ್ ನಗರಗಳಲ್ಲಿ ಸಾವಿನ ಪ್ರಮಾಣ ಹೆಚ್ಚಿದೆಯೇ? ಅಂದರೆ ನಾಗರಿಕತೆಯ ಹೆಸರಲ್ಲಿ ಸೋಮಾರಿತನವನ್ನು ಮತ್ತು ಆರೋಗ್ಯ ವಿರೋಧಿ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡ ಕಡೆ ಸಾವಿನ ಪ್ರಮಾಣ ಹೆಚ್ಚಾಗಿದೆಯೇ? ಮನುಷ್ಯನ ಚೇಹದಲ್ಲಿ ಗಟ್ ಮೈಕ್ರೋಬ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಬುಡಕಟ್ಟು ಮತ್ತು ಸಾಂಪ್ರಾದಾಯಿಕ ಆಹಾರ ಪದ್ಧತಿ ಇರುವವರಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆಯೇ? ಮೇಲಿನ ಅಂಕಿ ಅಂಶಗಳು ಈ ರೀತಿಯ ಅನೇಕ ಪ್ರಶ್ನೆಗಳನ್ನು ಎತ್ತುತ್ತವೆ. ಪಶ್ಚಿಮ ಭಾರತ ಮತ್ತು ಮುಂಬೈ ಕರ್ನಾಟಕದಲ್ಲಿ ಮಾಂಸಾಹಾರ ಕಡಿಮೆ ಇದೆ. ಮಧ್ಯಮ ವರ್ಗದ ಪ್ರಮಾಣವೂ ಹೆಚ್ಚಾಗಿದೆ. ಆದರೆ ಸಾವಿನ ಪ್ರಮಾಣ ಈ ಭಾಗದಲ್ಲಿ ಉಳಿದ ಕಡೆಗಳಿಗಿಂತ ತುಸು ಹೆಚ್ಚಿದೆ. ಕಲ್ಯಾಣ ಕರ್ನಾಟಕದಲ್ಲಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಉಡುಪಿ ಮುಂತಾದ ಕಡೆ ಯಾಕೆ ಕಡಿಮೆ ಇದೆ. ಆದರೆ ದ.ಕ; ಬೀದರ್‌ನಲ್ಲಿ ಜಾಸ್ತಿ ಯಾಕೆ? ಬೀದರ್, ಧಾರವಾಡ, ಬೆಂಗಳೂರಿನ ಉಷ್ಣತೆ ಏಕ ರೂಪದ್ದು. ಮಾನ್ಸೂನ್ ಶುರುವಾಗುತ್ತಿದ್ದಂತೆ ಈ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾದವು. ವಾತಾವರಣ, ಪ್ರೊಟೀನ್ ಬಳಕೆ, ಸಾಂಪ್ರಾದಾಯಿಕ ಆಹಾರ ಪದ್ಧತಿ, ದುಡಿಯುವ ವರ್ಗ ಮತ್ತು ಮಧ್ಯಮ ವರ್ಗದ ಪ್ರಮಾಣ ವಲಸೆ, ಲಿಂಗ ವ್ಯವಸ್ಥೆ, ಉತ್ತಮ ಆರೋಗ್ಯ ವ್ಯವಸ್ಥೆ ಮತ್ತು ಮನುಷ್ಯನ ತಳಿ ಮೂಲ ಮುಂತಾದವೆಲ್ಲ ಕಾರಣವಾಗಿರಬಹುದಾದ ಸಾಧ್ಯತೆಗಳನ್ನು ಈ ಅಂಕಿ ಅಂಶಗಳು ತೋರಿಸುತ್ತಿವೆ. ಈ ರೀತಿಯ ಅನೇಕ ಆಯಾಮಗಳಿಂದ ಇದನ್ನು ಅಧ್ಯಯನ ಮಾಡಬೇಕಾಗಿದೆ.

ವಯಸ್ಸಿನ ಆಧಾರದಲ್ಲಿ ಜುಲೈ 14ರವರೆಗೆ ಮರಣದ ಪ್ರಮಾಣ ನೋಡಿದರೆ 10 ವರ್ಷಗಳ ಒಳಗಿನವರಲ್ಲಿ ಶೇ.0.0, 20 ವರ್ಷಗಳ ಒಳಗಿನವರಲ್ಲಿ ಶೇ.0.01, 20ರಿಂದ 30 ವರ್ಷದೊಳಗಿನವರಲ್ಲಿ 0.003, 30 ರಿಂದ 40 ವಯಸ್ಸಿನವರಲ್ಲಿ0.007, 40 ರಿಂದ 50ವರೆಗಿನವರಲ್ಲಿ 1.54, 50ರಿಂದ 60ರ ಗುಂಪಿನವರಲ್ಲಿ 3.44 ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.7.9 ರಷ್ಟು ಮಾತ್ರ ಇದೆ. ಹಾಗಾಗಿ ಮನೆಯ ಮಾಡು ಹಾರಿ ಹೋಗುವಂತೆ, ಧೈರ್ಯವಂತರ ಗುಂಡಿಗೆ ಒಡೆದು ಹೋಗುವಂತೆ ಅರಚಾಡಿ ಭೀತಿ ಹುಟ್ಟಿಸಿ ಜನರನ್ನು ಕೊಲ್ಲುತ್ತಿರುವವರೇ ಜನರ ನಿಜವಾದ ದ್ರೋಹಿಗಳಲ್ಲವೇ? ಇದರ ಮಧ್ಯೆಯೇ ನೂರು ವರ್ಷ ದಾಟಿದವರು ಹುಷಾರಾಗಿ ಮನೆಗೆ ಹೋಗುತ್ತಿದ್ದಾರೆ.

ಮುಂಬೈನ ಕೊಳೆಗೇರಿಗಳ ಶೇ.40 ಕ್ಕಿಂತಹೆಚ್ಚಿನವರಿಗೆ ಪ್ರತಿಕಾಯ ವ್ಯವಸ್ಥೆ ವೃದ್ಧಿಯಾಗಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ ಕಳೆದ ಕೆಲವು ದಿನಗಳಿಂದ ಒಂದೂ ಪ್ರಕರಣ ದಾಖಲಾಗಿಲ್ಲ. ಕಾರ್ಮಿಕರೇ ಹೆಚ್ಚಾಗಿರುವ ಪೀಣ್ಯದಲ್ಲೂ ಉಳಿದ ಕಡೆಗಿಂತ ಸುಧಾರಿಸಿದ ಪರಿಸ್ಥಿತಿ ಇದೆ. ಹಾಗಾಗಿ ಜನ ಭೀತಿ ತೊರೆದು, ತುಸು ಎಚ್ಚರ ವಹಿಸಿ, ವಿವೇಕಿಗಳ ಮಾತು ಕೇಳಿ, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ನಿಸರ್ಗ ತತ್ವಕ್ಕೆ ತಲೆ ಬಾಗಿ, ಎಲ್ಲರನ್ನೂ ಒಳಗೊಂಡು, ಸಹಕಾರ ತತ್ವವನ್ನು ಅಳವಡಿಸಿಕೊಂಡು ಬದುಕಿದರೆ ಈ ರೋಗಗಳನ್ನು ಎದುರಿಸುವುದು ಸುಲಭ. ಕಳೆದ ಎರಡು ದಶಕಗಳಲ್ಲಿ ಒಂದೂವರೆ ಡಜನ್ ವೈರಸ್‌ಗಳು ರೂಪಾಂತರ ಹೊಂದಿ ಮನುಕುಲವನ್ನು ಕಾಡುತ್ತಿವೆ. ಮನುಷ್ಯ ಬುದ್ಧಿ ಕಲಿಯದಿದ್ದರೆ ಮುಂದೆ ಅತಿ ದೊಡ್ಡ ಬೆಲೆ ತೆರಬೇಕಾಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top