ಆದರೆ ಇದಕ್ಕೆ ದೇಶ ಸಿದ್ಧವಾಗಿದೆಯೇ?

2024ರ ವೇಳೆಗೆ ಭಾರತ ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ

ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶವೆಂಬ ‘ಹೆಗ್ಗಳಿಕೆ’ 21ನೆ ಶತಮಾನದ ಉದ್ದಕ್ಕೂ ಭಾರತಕ್ಕಿರುತ್ತದೆ. ಈಗ ದೇಶದ ಜನಸಂಖ್ಯೆ 1.34 ಬಿಲಿಯ, ಇದು 70 ವರ್ಷಗಳ ಹಿಂದೆ ದೇಶಕ್ಕೆ ಸ್ವಾತಂತ್ರ ದೊರಕಿದಾಗ ಇದ್ದ ಜನಸಂಖ್ಯೆಯ ನಾಲ್ಕು ಪಟ್ಟು. ಇದೇ ಅವಧಿಯಲ್ಲಿ ಜನಸಂಖ್ಯೆ ದ್ವಿಗುಣಗೊಂಡ ಚೀನಾದ ಜನಸಂಖ್ಯೆ ಈಗ 1.41 ಬಿಲಿಯ, ಈಗ ವಾರ್ಷಿಕ 15 ಮಿಲಿಯ ಜನಸಂಖ್ಯೆ ಹೆಚ್ಚುತ್ತಿರುವ ಭಾರತದ ಜನಸಂಖ್ಯಾ ಹೆಚ್ಚಳದ ಗತಿ ವಿಶ್ವದಲ್ಲೇ ಅತ್ಯಂತ ಬೃಹತ್ತಾಗಿದೆ. ಭಾರತ ಮತ್ತು ಚೀನಾ ಈ ಎರಡೇ ದೇಶಗಳಲ್ಲಿ ಒಂದು ಬಿಲಿಯಕ್ಕಿಂತಲೂ ಹೆಚ್ಚು ಜನರಿದ್ದಾರೆ ಮತ್ತು 2100ರ ವೇಳೆಗೆ ಈ ದೇಶಗಳ ನಡುವಣ ಜನಸಂಖ್ಯಾ ಅಂತರ 500 ಮಿಲಿಯದಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಎರಡು ದೇಶಗಳಿಗೆ ಹೋಲಿಸಿದರೆ, 2100ರ ವೇಳೆಗೆ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮೂರನೆಯ ಮತ್ತು ನಾಲ್ಕನೆಯ ದೇಶಗಳಾಗಲಿರುವ ನೈಜೀರಿಯಾ ಮತ್ತು ಅಮೆರಿಕದ ಜನಸಂಖ್ಯೆ, ಅನುಕ್ರಮವಾಗಿ, 800 ಮಿಲಿಯ ಮತ್ತು 450 ಮಿಲಿಯ ಆಗಲಿದೆ ಎಂದು ಅಂದಾಜಿಸಲಾಗಿದೆ.

ಗರ್ಭಧಾರಣಾ ಸಾಮರ್ಥ್ಯ
ವಿಶ್ವಸಂಸ್ಥೆಯ ಪ್ರಕಾರ, ಭಾರತದ ಮಹಿಳೆಯರ ಗರ್ಭಧಾರಣಾ ಸಾಮರ್ಥ್ಯ ಪ್ರತೀ ಮಹಿಳೆಗೆ ಈಗ ಇರುವ 2.3 ಜನನದರ ಇದೇ ಪ್ರಮಾಣದಲ್ಲಿ ಉಳಿದರೆ, 2050ರ ವೇಳೆಗೆ ದೇಶದ ಜನಸಂಖ್ಯೆ 1.8 ಬಿಲಿಯ ಮತ್ತು 2100ರ ವೇಳೆಗೆ 2.5 ಬಿಲಿಯ ಆಗಬಹುದು. ಆದರೆ ಒಂದು ಅಂದಾಜಿನ ಪ್ರಕಾರ ಜನನ ದರ ಕಡಿಮೆಯಾಗುತ್ತ ಹೋಗಿ 2035ರ ಸುಮಾರಿಗೆ ಪ್ರತೀ ಮಹಿಳೆಯಲ್ಲಿ ಇದು 1.8ಕ್ಕೆ ಇಳಿದಲ್ಲಿ, ಇದರ ಪರಿಣಾಮವಾಗಿ ಮುಂದಿನ ದಶಕಗಳಲ್ಲಿ ಜನಸಂಖ್ಯೆ ಕಡಿಮೆಯಾಗಿ 2060ರ ವೇಳೆಗೆ ಅದು 1.7 ಬಿಲಿಯ ತಲುಪಬಹುದು; ಮತ್ತು 2100ರಲ್ಲಿ 1.5 ಬಿಲಿಯಕ್ಕೆ ಇಳಿಯಬಹುದು.

1980ರ ದಶಕದ ಕೊನೆಯಲ್ಲಿ ಇದ್ದ ಭಾರತದ ಮಹಿಳೆಯರ ಫಲವತ್ತತೆ (ಫರ್ಟಿಲಿಟಿ)ಯಲ್ಲಿ ಇಳಿಕೆಯಾಗಿದೆಯಾದರೂ, ಈ ಇಳಿಕೆ ಮುಂದುವರಿಯದೆ ಹೋಗಬಹುದು. ಕಳೆದ ಎಂಟು ವರ್ಷಗಳಲ್ಲಿ ಗರ್ಭನಿರೋಧಕಗಳ ಬಳಕೆ ಸುಮಾರು ಶೇ.35 ಕಡಿಮೆಯಾಗಿ ಗರ್ಭಪಾತ ಮತ್ತು ತುರ್ತು ಗುಳಿಗೆೆಗಳ ಬಳಕೆ ದ್ವಿಗುಣಗೊಂಡಿತು. ಜನನ ನಿಯಂತ್ರಣ ಗುಳಿಗೆಗಳ ಮೇಲಿನ ಅವಲಂಬನೆ ಶೇ. 30ರಷ್ಟು, ಕಾಂಡೊಮ್‌ಗಳ ಬಳಕೆ ಶೇ. 52ರಷ್ಟು ಮತ್ತು ವ್ಯಾಸೆಕ್ಟಮಿ (ಶಸ್ತ್ರಚಿಕಿತ್ಸೆ)ಗಳ ಬಳಕೆ ಶೇ. 73ರಷ್ಟು ಕಡಿಮೆಯಾಯಿತು.

ಫಲವತ್ತತೆಯ ಇಳಿಕೆಯ ಪರಿಣಾಮವಾಗಿ ಭಾರತದ ಜನಸಂಖ್ಯೆಯಲ್ಲಿ ಮುದುಕ- ಮುದುಕಿಯರ ಸಂಖ್ಯೆ ಹೆಚ್ಚುತ್ತಿದೆ. 2050ರ ವೇಳೆಗೆ ದೇಶದಲ್ಲಿ 65 ವರ್ಷ ದಾಟಿದ ಹಿರಿಯರ ಸಂಖ್ಯೆ ದ್ವಿಗುಣಗೊಳ್ಳಲಿದೆ. ಈಗ ಮರಣದ ದರ ಕಡಿಮೆಯಾಗುತ್ತಿದೆ. 1960ರ ದಶಕದಲ್ಲಿ ಮಧ್ಯಭಾಗದಲ್ಲಿ ಆಯಷ್ಯದ ನಿರೀಕ್ಷೆ 44 ವರ್ಷಗಳಿತ್ತು, ಇವತ್ತು ಇದು 68 ವರ್ಷಗಳಿಗೆ ಏರಿದೆ.

ಅಸಮಾನ ಲಿಂಗ ದಾಮಾಶಯ
ಭಾರತ ಮತ್ತು ಚೀನಾದಲ್ಲಿ ಸ್ತ್ರೀಯರ ಸಂಖ್ಯೆಗಿಂತ ಪುರುಷರ ಸಂಖ್ಯೆ ಹೆಚ್ಚು ಇದೆ. ಎರಡೂ ದೇಶಗಳಲ್ಲಿ 2000ನೆ ಇಸವಿಯಲ್ಲಿ ಹೆಣ್ಣು ಶುಶುಗಳ ಮರಣ ಸಂಖ್ಯೆ ಗಂಡು ಶಿಶುಗಳ ಮರಣ ಸಂಖ್ಯೆಗಿಂತ ಜಾಸ್ತಿ ಇತ್ತು. ಶಿಶು ಜನಿಸುವ ಮೊದಲೇ ಸ್ಕಾನಿಂಗ್ ಮೂಲಕ ಶಿಶುವಿನ ಲಿಂಗವನ್ನು ಪತ್ತೆ ಹಚ್ಚಿ ನಡೆಸುವ ಹೆಣ್ಣು ಭ್ರೂಣಗಳ ಹತ್ಯೆ ಇದಕ್ಕೆ ಭಾಗಶಃ ಕಾರಣ. ಲಿಂಗ ಆಧಾರಿತ ಗರ್ಭಪಾತವನ್ನು ನಿಷೇಧಿಸಲಾಗಿದೆಯಾದರೂ, ಇದನ್ನು ನಿರ್ಮೂಲನ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಮುಂದಿನ ದಶಕಗಳಲ್ಲಿ ಭಾರತದಲ್ಲಿ ವಧುಗಳನ್ನು ಪಡೆಯಲಾರದ ‘ಹೆಚ್ಚಳ ಪುರುಷರ’ ಸಂಖ್ಯೆ 40 ಮಿಲಿಯ ತಲುಪಬಹುದೆಂದು ಅಂದಾಜಿಸಲಾಗಿದೆ.

ನಗರ ಪ್ರದೇಶಗಳಿಗೆ ವಲಸೆಗಳ, ವಿಶೇಷವಾಗಿ ನೌಕರಿಗಳನ್ನು ಅರಸುವ ಯುವ ಜನತೆಯ ವಲಸೆಯ ಪರಿಣಾಮವಾಗಿ, ಭಾರತದ ನಗರ ಪ್ರದೇಶಗಳ ಜನಸಂಖ್ಯಾದರದಲ್ಲಿ ಹೆಚ್ಚಳವಾಗಲಿದೆ. ಈ ಶತಮಾನದ ಮಧ್ಯದ ವೇಳೆಗೆ ಭಾರತದ ಜನಸಂಖ್ಯೆಯ ಅರ್ಧದಷ್ಟು, ಅಂದರೆ ಸುಮಾರು 800 ಮಿಲಿಯ ಜನರು, ನಗರವಾಸಿ ಜನರಾಗಿರುತ್ತಾರೆ. ಇದು ಪ್ರಾಥಮಿಕ ಸೇವೆಗಳನ್ನು ಮತ್ತು ಮೂಲ ಚೌಕಟ್ಟನ್ನು ಒದಗಿಸುವ ಸರಕಾರದ ಸಾಮರ್ಥ್ಯಗಳಿಗೆ ಪಂಥಾಹ್ವಾನ ಒಡ್ಡಲಿದೆ. ಈಗ ದೇಶದ ಒಟ್ಟು ಜನಸಂಖ್ಯೆಯ ಐದನೆಯ ಒಂದು ಪಾಲು ವಿದ್ಯುತ್ ಸೌಲಭ್ಯವಿಲ್ಲದೆ ಬದುಕುತ್ತಿದೆ.

ಆರೋಗ್ಯ ಸೇವೆಗೆ ಸವಾಲುಗಳು
ಈಗ ದೇಶದಲ್ಲಿ ಆರೋಗ್ಯ ಸೇವೆ ಕೂಡ ಸಮರ್ಪಕವಾಗಿಲ್ಲ. ಭಾರತದ ಒಟ್ಟು ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ; ಮೂರನೆ ಎರಡರಷ್ಟು ಪಾಲು ಮಕ್ಕಳಿಗೆ ಮಾತ್ರ ಡಿಫ್ತೀರಿಯಾ/ಟೆಟನಸ್‌ಗೆ ರೋಗ ನಿರೋಧಕಗಳನ್ನು ನೀಡಲಾಗುತ್ತಿದೆ. ಚೀನಾದಲ್ಲಿ ಬಹುಪಾಲು ಎಲ್ಲ ಮಕ್ಕಳಿಗೂ ಇದನ್ನು ನೀಡಲಾಗುತ್ತಿದೆ. ವಿಶ್ವದಾದ್ಯಂತ ವರದಿಯಾಗಿರುವ ಒಟ್ಟು ಕ್ಷಯ ರೋಗ ಪೀಡಿತರಲ್ಲಿ ನಾಲ್ಕನೆ ಒಂದು ಭಾಗಕ್ಕಿಂತಲೂ ಹೆಚ್ಚು ಮಂದಿ ಭಾರತೀಯರು. ಭಾರತದ ಗ್ರಾಮೀಣ ಜನತೆಯ ಅರ್ಧಕ್ಕಿಂತಲೂ ಹೆಚ್ಚು ಮಂದಿಗೆ ನೈರ್ಮಲ್ಯ ಸವಲತ್ತುಗಳಿಲ್ಲದಿರುವುದು ಸಾರ್ವಜನಿಕ ಆರೋಗ್ಯದ ಮುಂದಿರುವ ಇನ್ನೊಂದು ಪಂಥಾಹ್ವಾನ.

ಭೂಕಂಪ, ನೆರೆ, ಚಂಡ ಮಾರುತ, ಬರಗಾಲ, ಮತ್ತು ಸುನಾಮಿಯಂತಹ ನೈಸರ್ಗಿಕ ವಿಪತ್ತುಗಳು ಕೂಡ ದೊಡ್ಡ ಸವಾಲುಗಳಾಗಲಿವೆ. ಭಾರತದ ಜನಸಂಖ್ಯಾ ಹೆಚ್ಚಳದಲ್ಲಿ ಅಂತಾರಾಷ್ಟ್ರೀಯ ವಲಸೆಯ ಪಾತ್ರ ನಗಣ್ಯ. ಹದಿನಾರು ಮಿಲಿಯ ಭಾರತೀಯರು ವಿದೇಶಗಳಲ್ಲಿದ್ದಾರೆ; ಇನ್ನಷ್ಟು ಮಿಲಿಯ ಜನ ವಿದೇಶಕ್ಕೆ ವಲಸೆ ಹೋಗಲು ಯೋಚಿಸುತ್ತಿದ್ದಾರೆ. ವಾರ್ಷಿಕ 70 ಬಿಲಿಯ ಡಾಲರ್ ಈ ವಲಸಿಗರಿಂದ ಭಾರತಕ್ಕೆ ಬರುತ್ತಿದೆ. ಇಷ್ಟಾದರೂ, ಆರ್ಥಿಕ ಬೆಳವಣಿಗೆ 2017ರಲ್ಲಿ ಶೇ. 7 ಮೀರಬಹುದೆಂದು ಅಂದಾಜಿಸಲಾಗಿದ್ದರೂ, ಸುಮಾರು ಶೇ. 25 ಭಾರತೀಯರು ದಿನವೊಂದರ 2 ಡಾಲರ್‌ಗಿಂತಲೂ ಕಡಿಮೆ ಗಳಿಕೆಯಲ್ಲಿ ಬದುಕುತ್ತಿದ್ದಾರೆ.

ಮುಂದಿನ ಎರಡು ದಶಕಗಳಲ್ಲಿ, ದುಡಿಯುವ ಜನರ ಸಂಖ್ಯೆ 200 ಮಿಲಿಯದಷ್ಟು ಹೆಚ್ಚುತ್ತದೆಂದು ಅಂದಾಜಿಸಲಾಗಿದೆ. ಆದರೆ ಈಗ 15-30ರ ವಯೋಮಾನದ ಭಾರತೀಯರಲ್ಲಿ ಶೇ. 30ಕ್ಕಿಂತಲೂ ಹೆಚ್ಚು ಮಂದಿ ನೌಕರಿಯಲ್ಲೂ ಇಲ್ಲ; ಶಿಕ್ಷಣ ಮತ್ತು ತರಬೇತಿ ಪಡೆಯುತ್ತಲೂ ಇಲ್ಲ. ಹಾಗಾಗಿ ಯಾಂತ್ರೀಕರಣ (ಅಟೊಮೇಶನ್) ಮತ್ತು ಹೊಸ ತಂತ್ರಜ್ಞಾನಗಳು ನೌಕರಿ ಮತ್ತು ನೌಕರರ ಒಟ್ಟು ಸ್ವರೂಪವನ್ನೇ ಬದಲಿಸಿ, ನಿರುದ್ಯೋಗ ತಾಂಡವವಾಡುವ ಮುಂದಿನ ದಿನಗಳಲ್ಲಿ ಶಿಕ್ಷಣದ ಪಠ್ಯಕ್ರಮ ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಆ ಮೂಲಾಗ್ರ ಬದಲಾವಣೆ ಯಾಗಬೇಕಾಗಿದೆ. ಇದೇ ವೇಳೆ ಸರಕಾರ ಕುಟುಂಬ ಯೋಜನೆಗೆ ಒತ್ತು ನೀಡಿ, ಸಾರ್ವಜನಿಕ ಆರೋಗ್ಯ ಮತ್ತು ಮಹಿಳೆಯರ ಸ್ಥಾನ ಮಾನವನ್ನು ಸುಧಾರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ.

ಕೃಪೆ: scroll.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top