ದೇವಳದ ಆದಾಯ: ವಾಸ್ತವವೇನು?

ಇದು ಪೂರ್ಣ ಸುಳ್ಳೆಂದು ಒಂದು ಮಾತಲ್ಲಿ ಹೇಳಿ ಮುಗಿಸಬಹುದಿತ್ತು ಆದರೆ ಈ ಅಪಪ್ರಚಾರದ ಮುಂದೆ ಆಸ್ತಿಕರೆಂದು ಕರೆದುಕೊಳ್ಳುವ ಹೀಗೆ ಬರೆಯುವ ಗೋಮುಖವ್ಯಾಘ್ರರಾದ ನಾಸ್ತಿಕರ ವ್ಯವಸ್ಥಿತ ಹುನ್ನಾರ ಇರುವುದರಿಂದ ನಾನಂದದ್ದೆಲ್ಲ ಸುಳ್ಳು ಅನ್ನುವ ಅವರ ಮಾತನ್ನು ತಳ್ಳಿಹಾಕುವ ವಿವರಣೆಗಳೊಂದಿಗೆ ಈ ಬರಹ ಇದೆ.


ಬಹಳ ದಿನಗಳಿಂದ ಗಮನಿಸುತ್ತಿದ್ದೇವೆ. ದೇವಸ್ಥಾನಗಳ ಕುರಿತಾಗಿ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಯದ್ವಾತದ್ವಾ ಲೇಖನಗಳು ಬರುತ್ತಿವೆ. ದೇವಳದ ಆದಾಯ ಸರಕಾರದ ಪಾಲಾಗುತ್ತಿದೆ. ಸರಕಾರವು ಅದನ್ನು ಮಸೀದಿ ಚರ್ಚುಗಳಿಗೆ ಹಜ್ ಯಾತ್ರೆಗೆ ಕೊಡುತ್ತಿದೆ. ಆದ್ದರಿಂದ ಹಿಂದೂಗಳು ಯಾರೂ ಹುಂಡಿಯಲ್ಲಿ ಹಣ ಹಾಕಬೇಡಿ ಎಂದು ಕರೆ ಕೊಡುವ ಸಂದೇಶಗಳನ್ನು ನೀವೂ ಓದುತ್ತಿದ್ದೀರಿ. ಕೊಲ್ಲೂರು ದೇವಸ್ಥಾನದ ಆದಾಯ ರೂ. 44.26ಕೋಟಿಗಳು. ಸರಕಾರದಿಂದ ಖರ್ಚು ಮಾಡುವುದು ಕೇವಲ ರೂ. 65,810 ಎನ್ನುವ ವರದಿಯನ್ನೂ ನೋಡಿದ್ದೀರಿ. ಇದರ ವಸ್ತುಸ್ಥಿತಿಯ ವಿವರಣೆಯೊಂದಿಗೆ ದೇವಳದ ಭಕ್ತರನ್ನು ಹೇಗೆ ದಾರಿತಪ್ಪಿಸಲಾಗುತ್ತದೆ ಎಂಬ ಕುರಿತು ತಮ್ಮ ಮುಂದೆ ರಾಜ್ಯಧಾರ್ಮಿಕ ಪರಿಷತ್ ಸದಸ್ಯನಾಗಿ, ಓರ್ವ ಜವಾಬ್ದಾರಿಯುತ ವ್ಯಕ್ತಿಯಾಗಿ ಸ್ಪಷ್ಟೀಕರಣ ನೀಡುವುದಕ್ಕಾಗಿ ಬರೆಯುತ್ತಿದ್ದೇನೆ ಸ್ನೇಹಿತರೆ.

ಇದು ಪೂರ್ಣ ಸುಳ್ಳೆಂದು ಒಂದು ಮಾತಲ್ಲಿ ಹೇಳಿ ಮುಗಿಸಬಹುದಿತ್ತು. ಆದರೆ ಈ ಅಪಪ್ರಚಾರದ ಮುಂದೆ ಆಸ್ತಿಕರೆಂದು ಕರೆದುಕೊಳ್ಳುವ ಹೀಗೆ ಬರೆಯುವ ಗೋಮುಖವ್ಯಾಘ್ರರಾದ ನಾಸ್ತಿಕರ ವ್ಯವಸ್ಥಿತ ಹುನ್ನಾರ ಇರುವುದರಿಂದ ನಾನಂದದ್ದೆಲ್ಲ ಸುಳ್ಳು ಅನ್ನುವ ಅವರ ಮಾತನ್ನು ತಳ್ಳಿಹಾಕುವ ವಿವರಣೆಗಳೊಂದಿಗೆ ಈ ಬರಹ ಇದೆ.
ದಯವಿಟ್ಟು ಓದಿ.
  
ಕರ್ನಾಟಕ ಹಿಂದೂ ಧರ್ಮಾದಾಯ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ 1997 ಜಾರಿಯಾದದ್ದು 2003ರಲ್ಲಿ. ಈ ಕಾಯ್ದೆಯು ಎರಡು ಬಾರಿ ತಿದ್ದುಪಡಿಯಾಗಿ 2011ರಲ್ಲಿ ಮಾನ್ಯ ಮುಜರಾಯಿ ಸಚಿವರಾದ ವಿ. ಎಸ್. ಆಚಾರ್ಯ ಅವರ ಮುತುವರ್ಜಿಯಿಂದ ಜಾರಿಗೆ ಬಂದಿದೆ. ಆ ತಿದ್ದುಪಡಿಯ ಕಾಯ್ದೆಯಂತೆ ರಚನೆಯಾದ ರಾಜ್ಯ ಧಾರ್ಮಿಕ ಪರಿಷತ್ತು ಎರಡನೆ ಬಾರಿಗೆ ರಚನೆಯಾದಾಗ ನಾನೂ ಒಬ್ಬ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಕಾಯ್ದೆಯಂತೆ ಭಕ್ತರು ಹುಂಡಿಯಲ್ಲಿ ಹಾಕುವ ಹಣ, ಸೇವಾರೂಪವಾಗಿ ಕೊಡಮಾಡುವ ಹಣದ ಶೇಕಡಾ ನೂರುಭಾಗವೂ ದೇವಳದ ಖಾತೆಯಲ್ಲೇ ಜಮೆಯಾಗುತ್ತದೆ. ಕೊಲ್ಲೂರು ದೇವಳದಲ್ಲೂ ಈ ವರೆಗೆ ಬಂದ ಆದಾಯ ದೇವಳದ ಖಾತೆಗೇನೇ ಜಮೆಯಾಗಿದೆ. ಸರಕಾರದಿಂದ ಆದ ಖರ್ಚು ಎಂದು ತೋರಿಸಿದ ಮಾಹಿತಿ ಏನಿದೆ ಅದು ಸರಕಾರದ ಖಾತೆಯಿಂದ ತಸೀಕು ಹಾಗೂ ವರ್ಷಾಸನದ ಕುರಿತಾಗಿ ದೇವಳಕ್ಕೆ ಆದಾಯ ರೂಪವಾಗಿ ಆಗಿರುವ ಸರಕಾರದ ಖರ್ಚು ಅಂದರೆ ದೇವಳದ ಖಾತೆಗೆ ಜಮೆಯಾದ ಸರಕಾರದ ಪ್ರತ್ಯೇಕ ಹಣ. ಇದು ದೇವಳದ ಆದಾಯಕ್ಕೇನೇ ಹೆಚ್ಚುವರಿಯಾಗಿ ಸೇರಿರುವಂಥದ್ದು.

ಮುಜರಾಯಿ ಕಾಯ್ದೆಯಂತೆ ದೇವಳಗಳನ್ನು ಅವುಗಳ ಆದಾಯದ ಆಧಾರದಲ್ಲಿ ‘ಎ’, ‘ಬಿ’, ‘ಸಿ’ ಗ್ರೇಡ್‌ಗಳ ದೇವಾಲಯಗಳಾಗಿ ವಿಂಗಡಿಸಲಾಗಿದೆ. ರೂ.25 ಲಕ್ಷಕ್ಕಿಂತ ಹೆಚ್ಚಿನ ಆದಾಯದ ದೇವಸ್ಥಾನಗಳು ‘ಎ’ ಗ್ರೇಡ್ ಎಂದೂ, ರೂ. 10ರಿಂದ 25ಲಕ್ಷ ವರೆಗಿನ ಆದಾಯದ ದೇವಸ್ಥಾನಗಳು ‘ಬಿ’ ಗ್ರೇಡ್ ಎಂದೂ, ಅದಕ್ಕಿಂತ ಕೆಳಗಿನ ಆದಾಯದ ದೇವಸ್ಥಾನಗಳು ‘ಸಿ’ ಗ್ರೇಡ್ ಎಂದೂ ವರ್ಗೀಕರಣ ಮಾಡಲಾಗಿದೆ. ಕಾಯ್ದೆಯ ಸೆಕ್ಷನ್ 17ರಂತೆ ದೇವಸ್ಥಾನಗಳಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚಿನ ಆದಾಯ ಬರುವ ಆದಾಯದಲ್ಲಿ ವಾರ್ಷಿಕವಾಗಿ ಆದ ಖರ್ಚುಗಳೆಲ್ಲವನ್ನೂ ಕಳೆದು ಉಳಿಕೆಯಾದ ನಿವ್ವಳ ಲಾಭದ ಶೇಕಡಾ ಹತ್ತು ಹಣ ಹಾಗೂ ಐದು ಲಕ್ಷಕ್ಕಿಂತ ಹತ್ತು ಲಕ್ಷದ ವರೆಗಿನ ಶ್ರೇಣಿಯ ದೇವಸ್ಥಾನಗಳ ನಿವ್ವಳ ಆದಾಯದ ಶೇಕಡಾ ಐದು ಮಾತ್ರ ಸರಕಾರದ ಮುಜರಾಯಿ ಖಾತೆಯ ಸಾಮಾನ್ಯ ಸಂಗ್ರಹಣಾನಿಧಿಗೆ (ಸರಕಾರದ ಸಾಮಾನ್ಯವಾದ ನೇರಖಾತೆ ಅಲ್ಲ) ಜಮೆಯಾಗುತ್ತದೆ.

ಐದು ಲಕ್ಷಕ್ಕಿಂತ ಕಡಿಮೆ ಆದಾಯದ ದೇವಸ್ಥಾನಗಳಿಂದ ಈ ಹಣ ಪಡೆಯು ವಂತಿಲ್ಲ. ಈ ಹಣ ಹೊರತುಪಡಿಸಿ ಉಳಿದ ಹಣ ದೇವಳದ ಖಾತೆಯಲ್ಲೇ ನಿರಖು ಠೇವಣಿಯಾಗಿ ಇದ್ದು ದೇವಳದ ಅಭಿವೃದ್ಧಿಗೆ ಮಾತ್ರ ಖರ್ಚು ಮಾಡಬಹುದಾಗಿದ್ದು ಸರಕಾರ ಈ ಹಣವನ್ನು ಈ ವರೆಗೂ ಸ್ವಾಧೀನಕ್ಕೆ ಪಡೆದುಕೊಂಡಿಲ್ಲ. ಅಂತಹ ಯೋಚನೆಯೂ ಸರಕಾರಕ್ಕಿಲ್ಲ. ಬೇರೆ ಉದ್ದೇಶಕ್ಕಾಗಿ ಉಪಯೋಗಿಸಲು ಕಾಯ್ದೆಯಲ್ಲಿ ಅವಕಾಶವೂ ಇಲ್ಲ. ಸಾಮಾನ್ಯ ಸಂಗ್ರಹಣಾ ನಿಧಿ ಅಥವಾ commonpool fund ಎಂಬುದು ಮೇಲೆ ಹೇಳಿದಂತೆ ಸರಕಾರ ದೇವಳದ ದೇವಾಲಯಗಳಿಂದ ಸಂಗ್ರಹವಾದ ಹಣವು ಸರಕಾರದ ಖಜಾನೆಗೆ ಸೇರದೆ ಮುಜರಾಯಿ ಇಲಾಖೆಯಲ್ಲೇ ಇರುತ್ತದೆ. ಆಯುಕ್ತರು ಈ ಖಾತೆಯನ್ನು ನಿರ್ವಹಿಸುತ್ತಾರೆ. ಈ ಹಣವನ್ನು ಉಪಯೋಗಿಸುವಲ್ಲಿಯೂ ಕಾಯ್ದೆಯಲ್ಲಿರುವ ನಿಯಮಾವಳಿಗಳೇ ಅನ್ವಯವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಕಾಯ್ದೆಯ ಸೆಕ್ಷನ್ 17 ಹಾಗೂ ನಿಯಮ 18 ಹಾಗೂ 19 ನೋಡಬಹುದಾಗಿದೆ. ಈ ನಿಯಮಾವಳಿಗಳು ಹಿಂದಿನ ಬಿಜೆಪಿ ಸರಕಾರವೇ ಮಾಡಿದ್ದಾಗಿದ್ದು ಈ ಕ್ರಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದೇ ಇಲ್ಲ.

ದೇವಸ್ಥಾನದ ಪೂಜಾವಿಧಿಗಳಿರುವ ಆಗಮ ಪ್ರವರ ಪ್ರವೀಣ ತರಗತಿಗಳನ್ನು ನಡೆಸಲು, ವೇದ ಪಾಠಶಾಲೆಗಳಿಗಾಗಿ, ಹಿಂದೂ ಧಾರ್ಮಿಕ ತರಗತಿ, ಉಪನ್ಯಾಸಗಳಿಗಾಗಿ ವೃದ್ಧಾಶ್ರಮ ಅನಾಥಾಶ್ರಮಗಳನ್ನು ನಡೆಸಲು ಮತ್ತು ಆರ್ಥಿಕವಾಗಿ ಹಿಂದುಳಿದ ‘ಸಿ’ ಗ್ರೇಡ್ ದೇವಸ್ಥಾನಗಳ ಹಾಗೂ ಇತರ ಬಡ ಖಾಸಗಿ ಹಿಂದೂ ದೇವಾಲಯಗಳ ಜೀರ್ಣೋದ್ಧಾರಗಳಿಗಾಗಿ ಅಥವಾ ಇತರ ಯಾವುದೇ ಹಿಂದೂ ಧರ್ಮದ ಉದ್ದೇಶಗಳಿಗಾಗಿ ಖರ್ಚುಮಾಡಲು ಕಾಯ್ದೆಯಲ್ಲಿ ಅವಕಾಶವಿದೆ. ಅದೂ ಕೂಡ ಧಾರ್ಮಿಕ ಪರಿಷತ್‌ನಲ್ಲಿ ನಿರ್ಣಯವಾದಂತೆ ಇಲಾಖೆ ಖರ್ಚುಮಾಡಬೇಕಿದೆ. ಅದೇ ರೀತಿ ನಿಯಮಗಳನ್ನು ಈ ವರೆಗೂ ಮುಜರಾಯಿ ಇಲಾಖೆ ಪಾಲಿಸುತ್ತಿದೆ.

ಆದ್ದರಿಂದ ಹಿಂದೂ ದೇವಸ್ಥಾನಗಳಲ್ಲಿ ಬರುವ ಆದಾಯವು ಮಸೀದಿ ಅಥವಾ ಚರ್ಚ್‌ಗಳಿಗೆ ಹೋಗುತ್ತವೆ, ಹಜ್ ಯಾತ್ರೆಗಾಗಿ ಉಪಯೋಗಿಸ ಲಾಗುತ್ತದೆ ಎನ್ನುವ ಎಲ್ಲ ಮಾಹಿತಿಗಳೂ ಶುದ್ಧ ಸುಳ್ಳು. ಭಕ್ತಾದಿಗಳು ಇಂತಹ ಅಪಪ್ರಚಾರಗಳಿಗೆ ಕಿವಿ ಕೊಡಬಾರದಾಗಿ ಈ ಮೂಲಕ ವಿನಂತಿಸುತ್ತೇನೆ.

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top