ವಕೀಲರು, ಅವರ ಪತ್ನಿ ಮೇಲೆ ಹಲ್ಲೆ: ಮೂವರು ಯುವತಿಯರ ಬಂಧನ !
ಕೊಚ್ಚಿ,ಜುಲೈ 17: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಕೀಲರು ಮತ್ತು ಅವರ ಪತ್ನಿ ಮೇಲೆ ಹಲ್ಲೆ ಎಸಗಿದ ಆರೋಪದಲ್ಲಿ ಮೂವರು ಯುವತಿಯರನ್ನು ಕೊಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಚ್ಚಿಯ ಕಡವತ್ರ ಎಂಬಲ್ಲಿ ಸಂಜೆ ಐದು ಗಂಟೆಗೆ ಈ ಘಟನೆ ನಡೆದಿದ್ದು ಹಲ್ಲೆ ಆರೋಪಿಗಳಾದ ಕೋಟ್ಟಾಯಂ ಶ್ರೀಲಾ(30),ಕೊಚ್ಚಿಯ ಸಾಂದ್ರಾ(26), ತೃಶೂರ್ನ ಅಜಿತಾ(25) ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ವರದಿಯಾಗಿದೆ. ಸೆರೆಯಾದ ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆಗುರಿಪಡಿಸಲಾಗಿದ್ದು ಇವರು ತ್ರಿಬಲ್ ರೈಡ್ನಲ್ಲಿ ಪ್ರಯಾಣಿಸುತ್ತಿದ್ದ ಸ್ಕೂಟರ್ನಲ್ಲಿ ಮೂರು ಬಾಟ್ಲಿ ಬಿಯರ್ಗಳು ದೊರಕಿವೆ ಹಾಗೂ ಯುವತಿಯರು ತಾವು ಸಿನೆಮಾ ನಟಿಯರು ಎಂದು ಹೇಳಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆಂದು ವರದಿ ತಿಳಿಸಿದೆ. ಕುಟುಂಬ ಸಹಿತ ವಕೀಲರು ಪ್ರಯಾಣಿಸುತ್ತಿದ್ದ ಕಾರು ಇವರು ಸಂಚರಿಸುತ್ತಿದ್ದ ಸ್ಕೂಟರ್ಗೆ ಅಡ್ಡಬಂತೆಂದು ಜಗಳ ಆರಂಭವಾಗಿತ್ತು. ಕಾರಿನೊಳಗಿದ್ದ ವಕೀಲರ ಪತ್ನಿಯ ಮೇಲೆ ಹಲ್ಲೆಎಸಗಲು ಯುವತಿಯರು ಮುಂದಾಗಿದ್ದು ಅಶ್ಲೀಲವಾಗಿ ಬೈದು ಅವರಿಗೆ ಹೆಲ್ಮೆಟ್ನಿಂದ ಹೊಡೆದಿದ್ದಾರೆನ್ನಲಾಗಿದೆ. ಸ್ಥಳೀಯರು ಮಧ್ಯಪ್ರವೇಶಿಸಿ ಯುವತಿಯರನ್ನು ಸಮಾಧಾನಿಸಿದ್ದು ನಂತರ ಪೊಲೀಸರು ಬಂದು ಈ ಯುವತಿಯರನ್ನು ವಶಕ್ಕೆ ಪಡೆದುಕೊಂಡರು. ವಕೀಲರು ನೀಡಿದ ದೂರಿನ ಪ್ರಕಾರ ಕೇಸು ದಾಖಲಿಸಿದ್ದಲ್ಲದೆ ಸ್ಕೂಟರ್ನಲ್ಲಿ ಮೂವರು ಪ್ರಯಾಣಿಸಿದ್ದಕ್ಕೂ ಯುವತಿಯರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.