ಬಿಗ್ ಬಿ ಗೆ ಪೋಸ್ಟ್ ಕಾರ್ಡ್ ಮೂಲಕ 'ವಾಸನೆಯ' ಆಹ್ವಾನ ನೀಡಲಿರುವ ಗುಜರಾತ್ ದಲಿತರು
ಅಹ್ಮದಾಬಾದ್, ಸೆ.11: ಗುಜರಾತ್ನ ಉನಾ ದಲಿತ ಅತ್ಯಾಚಾರ್ ಲಾದತ್ ಸಮಿತಿ (ಯುಡಿಎಎಲ್ಎಸ್) ನೇತೃತ್ವದಲ್ಲಿ ದಲಿತರು, ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರಿಗೆ, "ಬದ್ಬು ಗುಜರಾತ್ ಕಿ" (ಗುಜರಾತ್ ವಾಸನೆ) ಎಂಬ ಸಂದೇಶದ ಪೋಸ್ಟ್ ಕಾರ್ಡ್ಗಳನ್ನು ಸಾಮೂಹಿಕವಾಗಿ ಕಳುಹಿಸಲು ನಿರ್ಧರಿಸಿದ್ದಾರೆ.
"ಖುಶ್ಬೂ ಗುಜರಾತ್ ಕಿ" ಹಾಗೂ "ಕುಚ್ ದಿನ್ ತೊ ಗುಜರಿಯೆ ಗುಜರಾತ್ ಮೇ" ಎಂಬ ಘೋಷಣೆ ಮೂಲಕ ರಾಜ್ಯದ ಪ್ರವಾಸೋದ್ಯಮ ಪ್ರಚಾರ ಅಭಿಯಾನವನ್ನು ಬಿಗ್ ಬಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಯಾಗಿ ದಲಿತರು ಈ ವಿಶಿಷ್ಟ ಚಳವಳಿಗೆ ಮುಂದಾಗಿದ್ದಾರೆ.
"ಸೆಪ್ಟೆಂಬರ್ 13ರಂದು ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಸಾವಿರಾರು ಮಂದಿ ದಲಿತರು ಸಾಮೂಹಿಕವಾಗಿ ಈ ಪತ್ರ ಬರೆಯಲಿದ್ದಾರೆ" ಎಂದು ಯುಡಿಎಎಲ್ಎಸ್ ಸಂಚಾಲಕ ಜಿಗ್ನೇಶ್ ಮೇವಾನಿ ಪ್ರಕಟಿಸಿದ್ದಾರೆ. ಮೋದಿ ಮನವಿ ಮೇರೆಗೆ ಬಿಗ್ ಬಿ ಖುಶ್ಬೂ ಗುಜರಾತ್ ಕಿ ಜಾಹೀರಾತು ಸಿದ್ಧಪಡಿಸಿದ್ದಾರೆ. ಇದೀಗ ದಲಿತರು ಸತ್ತ ಹಸುಗಳನ್ನು ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಿದ್ದು, ಬಿಗ್ ಬಿ ಗುಜರಾತ್ಗೆ ಬಂದು, ಇಲ್ಲಿನ ವಾಸನೆಯನ್ನು ಅನುಭವಿಸಲಿ ಎಂದು ಹೇಳಿದ್ದಾರೆ.