ಈ ಕೋಣದ ತೂಕ, ಬೆಲೆ ಊಹಿಸಬಲ್ಲಿರಾ?
ಕ್ವಿಂಟಾಲ್ನಲ್ಲಲ್ಲ ಇದರ ತೂಕ, ಸಾವಿರದಲ್ಲಲ್ಲ ಇದರ ಬೆಲೆ!
ಮೀರಠ್, ಸೆ.13: ಬಕ್ರೀದ್ ಸಂದರ್ಭ ನಗರದಲ್ಲೆಲ್ಲ ಬಾಹುಬಲಿಯದ್ದೇ ಚರ್ಚೆ. ಈತ ಇಡೀ ನಗರದ ಆಕರ್ಷಣೆಯ ಕೇಂದ್ರ. ಏಕೆ ಗೊತ್ತೇ? ಪಂಜಾಬ್ನ ಲೂಧಿಯಾನಾದಿಂದ ತಂದಿದ್ದ ಈ ಅಸಾಮಾನ್ಯ ಕೋಣದ ತೂಕ 15 ಕ್ವಿಂಟಲ್. ಬೆಲೆ 11 ಲಕ್ಷ ರೂಪಾಯಿ!
ತಾವು ಖರೀದಿಸಿದ ಮೌಲ್ಯಕ್ಕಿಂತ ಕೆಲವು ಲಕ್ಷವಾದರೂ ಅಧಿಕ ಬೆಲೆ ನೀಡಿ ಇದನ್ನು ಖರೀದಿಸುವವರಿಗಾಗಿ ಬಾಹುಬಲಿಯ ಮಾಲಕರು ಎದುರು ನೋಡುತ್ತಿದ್ದರು. ಇಲ್ಲದಿದ್ದರೆ ಹಬ್ಬದ ದಿನದಂದು ಬಾಹುಬಲಿಯನ್ನು ಬಲಿನೀಡಲು ನಿರ್ಧರಿಸಿದ್ದರು. ಮುಹಮ್ಮದ್ ತೌಫೀಕ್ ಖುರೇಷಿ ಹಾಗೂ ನದೀಂ ಎಂಬುವವರು ಲೂಧಿಯಾನದಿಂದ, ಮೊರದಾಬಾದ್ ಸಮೀಪದ ತಮ್ಮ ಮನೆಗೆ ಶನಿವಾರ ಈ ಕೋಣವನ್ನು ತಂದಿದ್ದರು. ಆ ಬಳಿಕ ಈ ಮುರ್ರಾ ತಳಿಯ ಕೋಣ ಇಡೀ ನಗರದ ಹಾಗೂ ಅಕ್ಕಪಕ್ಕದ ಜಿಲ್ಲೆಯ ಜನರ ಆಕರ್ಷಣೆಯ ಕೇಂದ್ರವಾಗಿತ್ತು.
ಪ್ರತಿದಿನ ಗುಂಪುಗುಂಪಾಗಿ ಜನ ಈತನನ್ನು ನೋಡಲು ಬರುತ್ತಿದ್ದರು. ಹಲವು ಮಂದಿ ಇದರ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು. ಪ್ರತಿ ದಿನ ಈ ಕೋಣ ಸಾಮಾನ್ಯ ಆಹಾರದ ಜತೆಗೆ 20 ಲೀಟರ್ ಹಾಲು ಕುಡಿದು 20 ಕೆಜಿ ಸೇಬು ತಿನ್ನುತ್ತಿತ್ತು. ಸೆಖೆಯ ಕಾರಣದಿಂದ ವಾಟರ್ ಕೂಲರ್ ಮತ್ತು ಸೀಲಿಂಗ್ ಫ್ಯಾನ್ ಸೌಲಭ್ಯ ಇದ್ದ ಕೊಠಡಿಯಲ್ಲಿ ಬಾಹುಬಲಿಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.