ಅಪ್ರಾಪ್ತ ವಯಸ್ಸಿನ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಗೆ ಅವಳಿ ಜೀವಾವಧಿ ಶಿಕ್ಷೆ
ಕೋಝಿಕ್ಕೋಡ್, ಅಕ್ಟೋಬರ್ 26: ಅಪ್ರಾಪ್ತ ವಯಸ್ಕಳಾದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಾಲಕಿಯ ತಂದೆಗೆ ಅವಳಿ ಜೀವಾವಧಿಶಿಕ್ಷೆಯನ್ನು ಕೋಝಿಕ್ಕೋಡ್ ಒಂದನೆ ಅಡಿಷನಲ್ ಸೆಷನ್ಸ್ ಕೋರ್ಟು ವಿಧಿಸಿದೆ ಎಂದು ವರದಿಯಾಗಿದೆ. ಕೋಝಿಕ್ಕೋಡ್ ಮಣ್ಣೂರ್ ಎಂಬಲ್ಲಿನ ಯುವಕನಿಗೆ ಅಡಿಷನಲ್ ಸೆಷನ್ಸ್ ಜಡ್ಜ್ ಎ.ಶಂಕರನ್ ನಾಯರ್ ಐಪಿಸಿ ಕಲಂ 376,377 ಅನ್ವಯ ಲೈಂಗಿಕ ದುಷ್ಕರ್ಮದಿಂದ ಮಕ್ಕಳಿಗೆ ರಕ್ಷಣೆ ನೀಡುವ ಸೆಕ್ಷನ್ ಪ್ರಕಾರ ಏಳುವರ್ಷ ಕಠಿಣ ಶಿಕ್ಷೆ ಮತ್ತು ಅವಳಿ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಭರಿಸದಿದ್ದರೆ ಎರಡು ವರ್ಷ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಿದೆ. 2014ರಲ್ಲಿ ಫರೋಕ್ ಎಂಬಲ್ಲಿನ ಪೊಲೀಸರು ದುಷ್ಕರ್ಮಿಯ ವಿರುದ್ಧ ಕೇಸು ದಾಖಲಿಸಿದ್ದರು.
ಅರನೆ ಕ್ಲಾಸಿನಲ್ಲಿ ಕಲಿಯುವ ಬಾಲಕಿ ಶಾಲೆ ಅಧ್ಯಾಪಕರಿಗೆ ನೀಡಿದ್ದ ವಿವರದಂತೆ ಅಧ್ಯಾಪಕರು ಚೈಲ್ಡ್ಲೈನ್ಗೆ ಸುದ್ದಿ ಮುಟ್ಟಿಸಿದ್ದರು. ಚೈಲ್ಡ್ಲೈನ್ ಫಾರೋಕ್ ಪೊಲೀಸರಿಗೆ ದೂರು ನೀಡಿದ್ದರು. ತಾಯಿ ಮನೆಯಲ್ಲಿಲ್ಲದಾಗ ತಂದೆ ಬಾಲಕಿಗೆ ಕಿರುಕುಳ ನೀಡಿದ್ದಾನೆ. ಕಿರುಕುಳ ನೀಡಿದ್ದನ್ನು ಯಾರಲ್ಲಾದರೂ ಹೇಳಿದರೆ ನಿನ್ನ ತಾಯಿ ಮತ್ತು ತಂಗಿಯನ್ನುಕೊಲ್ಲುವುದಾಗಿ ದುಷ್ಕರ್ಮಿ ಪುತ್ರಿಗೆ ಬೆದರಿಕೆಯೊಡ್ಡಿದ್ದ ಎಂದು ವರದಿ ತಿಳಿಸಿದೆ.