ಹೃತಿಕ್ ರೋಷನ್ ರ ಕಾಬಿಲ್ ಹಾಗು ಪುಲಿಮುರುಗನ್ ಮೋಹನ್ ಲಾಲ್ ಗೆ ಏನು ಸಂಬಂಧ ?
ತಿರುವನಂತಪುರಂ, ನ.1: ತಮ್ಮ ಈ ಹಿಂದಿನ ಚಿತ್ರ ಪುಲಿಮುರುಗನ್ ಮೂಲಕ ದಾಖಲೆಯನ್ನೇ ಸೃಷ್ಟಿಸಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಇದೀಗ ಹೃತಿಕ್ ರೋಷನ್ ಅವರ ಮುಂಬರುವ ಚಿತ್ರ ‘ಕಾಬಿಲ್’ನ ಥಿಯೇಟರ್ ಹಕ್ಕುಗಳನ್ನು ಕೇರಳದಲ್ಲಿ ದಾಖಲೆ ಮೊತ್ತಕ್ಕೆ ಕೊಂಡುಕೊಂಡಿದ್ದಾರೆ.
ಮೋಹನ್ ಲಾಲ್ ಅವರ ಸ್ವಂತ ಬ್ಯಾನರ್ ಮ್ಯಾಕ್ಸ್ ಲ್ಯಾಬ್ ಸಿನೆಮಾಸ್ ಆ್ಯಂಡ್ ಎಂಟರ್ಟೈನ್ಮೆಂಟ್ಸ್ ಹಾಗೂ ಅವರ ಸ್ನೇಹಿತ ಆಂಟನಿ ಪೆರುಂಬವೂರ್ರ ಆಶೀರ್ವಾದ್ ಸಿನೆಮಾಸ್ ಈ ಹಕ್ಕುಗಳನ್ನು ಪಡೆದುಕೊಂಡಿವೆ.
ಇದಕ್ಕಾಗಿ ಎಷ್ಟು ಹಣವನ್ನು ನೀಡಲಾಗಿದೆಯೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಡೀಲ್ ಇತಿಹಾಸವನ್ನೇ ಸೃಷ್ಟಿಸಿದೆಯೆನ್ನಬಹುದು. ಸಂಜಯ್ ಗುಪ್ತಾ ನಿರ್ದೇಶನದ ಈ ಚಿತ್ರವು ಆಶೀರ್ವಾದ್ ಸಿನೆಮಾಸ್ ಹಾಗೂ ಮ್ಯಾಕ್ಸ್ ಲ್ಯಾಬ್ ಸಿನೆಮಾಸ್ ಬಿಡುಗಡೆಗೊಳಿಸುತ್ತಿರುವ ಪ್ರಪ್ರಥಮ ಬಾಲಿವುಡ್ ಚಿತ್ರವಾಗಿದೆ. ಚಿತ್ರ ಕೇರಳದಲ್ಲಿ 2017ರ ಜನವರಿ 26ರಂದು ಬಿಡುಗಡೆಯಾಗಲಿದೆ.
ಈ ಡೀಲ್ ಬಗ್ಗೆ ಆಶೀರ್ವಾದ್ ಸಿನೆಮಾಸ್ ತನ್ನ ಫೇಸ್ಬುಕ್ ಪುಟದಲ್ಲಿ ಹೇಳಿಕೊಂಡು ಸುದ್ದಿಯನ್ನು ದೃಢಪಡಿಸಿದೆ.
ಈ ಹಿಂದೆ ಮ್ಯಾಕ್ಸ್ ಲ್ಯಾಬ್ ಸಿನೆಮಾಸ್ ಕೇರಳದಲ್ಲಿ ರಜನೀಕಾಂತ್ ಅವರ ‘ಕಬಾಲಿ’ ಚಿತ್ರದ ಥಿಯೇಟರ್ ಹಕ್ಕುಗಳನ್ನು 7.5 ಕೋಟಿ ರೂ.ಗೆ ಪಡೆದುಕೊಂಡಿತ್ತಲ್ಲದೆರೂ 17 ಕೋಟಿ ಬಾಕ್ಸಾಫೀಸ್ ಗಳಿಕೆ ಮಾಡಿತ್ತು.