ಲುಂಗಿ ಧರಿಸಿದ ವ್ಯಕ್ತಿಗೆ ಕೇರಳ ಅಸೆಂಬ್ಲಿಗೆ ಪ್ರವೇಶ ನಿರಾಕರಣೆ
ತಿರುವನಂತಪುರಂ, ನ.25: ಬಿಳಿ ಲುಂಗಿ (ಮುಂಡು) ಧರಿಸಿಕೊಂಡು ವಿಧಾನಸಭೆಯ ಕಲಾಪ ವೀಕ್ಷಿಸಲು ಬಂದ ವ್ಯಕ್ತಿಗೆ ಅಸೆಂಬ್ಲಿಯ ವೀಕ್ಷಕರ ಗ್ಯಾಲರಿಗೆ ಪ್ರವೇಶ ನಿರಾಕರಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಘಟನೆಯ ಕುರಿತು ಮಾನವ ಹಕ್ಕುಗಳ ಆಯೋಗ ವಿಧಾನಸಭೆಯ ಅಧಿಕಾರಿಗಳಿಂದ ವಿವರಣೆ ಕೇಳಿದೆ. ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಗ್ರಾಮದವರಾದ ಕುಂಜಿಮೊಯಿನ್ ಎಂಬವರು ತನ್ನ 38 ಮಂದಿ ಸ್ನೇಹಿತರೊಂದಿಗೆ ನ.8ರಂದು ಕೇರಳ ವಿಧಾನಸಭೆಯ ಕಲಾಪ ವೀಕ್ಷಿಸಲು ಬಂದಿದ್ದರು. ಇವರು ಬಿಳಿ ಲುಂಗಿ ಧರಿಸಿದ್ದ ಕಾರಣ ವೀಕ್ಷಕರ ಗ್ಯಾಲರಿಗೆ ಪ್ರವೇಶ ನಿರಾಕರಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಕುಂಜಿಮೊಯಿನ್ ಕೇರಳ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
ಅಸೆಂಬ್ಲಿಯ ಗೇಟು ಅಥವಾ ಪ್ರವೇಶದ್ವಾರದಲ್ಲಿ ನನ್ನನ್ನು ಯಾರೂ ತಡೆಯಲಿಲ್ಲ. ಆದರೆ ವೀಕ್ಷಕರ ಗ್ಯಾಲರಿಗೆ ಪ್ರವೇಶ ನಿರಾಕರಿಸಿರುವ ಕ್ರಮ ಸರಿಯಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶುಭ ಸಂದರ್ಭಗಳಲ್ಲಿ ಬಿಳಿ ಶರ್ಟ್ ಮತ್ತು ಲುಂಗಿ ಧರಿಸುವುದು ಮಲಬಾರ್ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಪದ್ದತಿಯಾಗಿದೆ. ಒಂದು ವೇಳೆ ಲುಂಗಿ ಧರಿಸಿಕೊಂಡು ವೀಕ್ಷಕರ ಗ್ಯಾಲರಿಗೆ ಬರಬಾರದು ಎಂಬ ನಿಯಮವಿದ್ದರೆ ಇದನ್ನು ತಿದ್ದುಪಡಿ ಮಾಡಬೇಕು ಎಂದವರು ಕೋರಿದ್ದಾರೆ. ವಿಧಾನಸಭೆಯಲ್ಲಿ ವಸ್ತ್ರಸಂಹಿತೆ ಇದೆಯೇ ಎಂದು ವಿವರಣೆ ನೀಡುವಂತೆ ವಿಧಾನಸಭೆಯ ಕಾರ್ಯದರ್ಶಿ ವಿ.ಕೆ.ಬಾಬು ಅವರಿಗೆ ಆಯೋಗ ತಿಳಿಸಿದೆ. ಅಸಾಂಪ್ರದಾಯಿಕ ಬಟ್ಟೆ ಧರಿಸಿರುವವರು ಅಸೆಂಬ್ಲಿಯ ಒಳಗೆ ಅಥವಾ ವೀಕ್ಷಕರ ಗ್ಯಾಲರಿಗೆ ಪ್ರವೇಶಿಸುವಂತಿಲ್ಲ. ಇದು ವಾಡಿಕೆಯಾಗಿದೆ. ಶಿಷ್ಟಾಚಾರದ ಪಾಲನೆ ಅಗತ್ಯ. ಮುಂಡು (ಲುಂಗಿ) ಅಸಾಂಪ್ರದಾಯಿಕ ದಿರಿಸು ಆಗಿರುವ ಕಾರಣ ಪ್ರವೇಶ ನಿರಾಕರಿಸಲಾಗಿದೆ. ಧಾರ್ಮಿಕ ಪ್ರತೀಕದ ದಿರಿಸುಗಳಿಗೆ ವಿನಾಯತಿ ನೀಡಲಾಗುತ್ತದೆ ಎಂದು ವಿಧಾನಸಭೆಯ ಸ್ಪೀಕರ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.