ಮೂರು ವಾರಗಳಾದರೂ ಬಿಡುಗಡೆಯಾಗಿದ್ದು ರದ್ದಾದ ನೋಟುಗಳ ಮೌಲ್ಯದ ಶೇ.10ರಷ್ಟು ಹೊಸನೋಟುಗಳು ಮಾತ್ರ
ನೋಟು ನಿಷೇಧ
ಹೊಸದಿಲ್ಲಿ,ನ.27: 500 ಮತ್ತು 1,000 ನೋಟುಗಳು ನಿಷೇಧಗೊಂಡು ಮೂರು ವಾರಗಳಾಗುತ್ತಿವೆ. ಈ ಅವಧಿಯಲ್ಲಿ ಚಲಾವಣೆ ರದ್ದುಗೊಂಡಿರುವ ನೋಟುಗಳ ವೌಲ್ಯದ ಕೇವಲ ಶೇ.10ರಷ್ಟು ಅಥವಾ 1.5 ಲಕ್ಷ ಕೋ.ರೂಗಳ ಹೊಸನೋಟುಗಳು ಬಿಡುಗಡೆಯಾಗಿವೆ. ಸರಕಾರದ ಕ್ರಮದಿಂದಾಗಿ ಸುಮಾರು 14.18 ಲಕ್ಷ ಕೋಟಿ ರೂ.ವೌಲ್ಯದ ಹಳೆಯ 500 ಮತ್ತು 1,000 ರೂ.ನೋಟುಗಳು ಅಸ್ತಿತ್ವವನ್ನು ಕಳೆದುಕೊಂಡಿವೆ.
ಕ್ರೆಡಿಟ್ ಸುಯಿಸ್ಸೆಯ ಇತ್ತೀಚಿನ ವರದಿಯೊಂದು ಈ ಅಂಶವನ್ನು ಬೆಟ್ಟು ಮಾಡಿದೆ. ಚಲಾವಣೆಯಿಂದ ಹಿಂದೆಗೆದುಕೊಳ್ಳಲಾಗಿರುವ ಅಷ್ಟೂ ನೋಟುಗಳ ಬದಲು ಹೊಸನೋಟುಗಳನ್ನು ದೇಶದ ಆರ್ಥಿಕತೆಯಲ್ಲಿ ಸೇರ್ಪಡೆಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕಿಗೆ ಹಲವಾರು ತಿಂಗಳುಗಳೇ ಬೇಕಾಗಬಹುದು ಎಂದು ಕ್ರೆಡಿಟ್ ಸುಯಿಸ್ಸೆ ವರದಿಯನ್ನು ಉಲ್ಲೇಖಿಸಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಬಿಡುಗಡೆಯಾಗಿರುವ ಹೊಸನೋಟುಗಳ ಪೈಕಿ ಸಿಂಹಪಾಲು 2000 ರೂ.ನೋಟಿ ನದಾಗಿದ್ದು, ಚಿಲ್ಲರೆ ಕೊರತೆಯಿಂದಾಗಿ ವಹಿವಾಟು ನಡೆಸುವುದೇ ಕಷ್ಟವಾಗಿದೆ. ಕಡಿಮೆ ಮುಖಬೆಲೆಗಳ ನೋಟುಗಳ ಕೊರತೆ ಹಣದ ಕೊರತೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
ನ.8ರಂದು ನೋಟು ನಿಷೇಧವನ್ನು ಘೋಷಿಸುವ ಮುನ್ನ ಭಾರತದಲ್ಲಿ ಚಲಾವಣೆ ಯಲ್ಲಿದ್ದ ಒಟ್ಟು ನೋಟುಗಳ ಪೈಕಿ ಶೇ.86ರಷ್ಟು 500 ಮತ್ತು 1,000 ರೂ.ನೋಟು ಗಳಾಗಿದ್ದು, ಕಡಿಮೆ ಮುಖಬೆಲೆಗಳ ನೋಟುಗಳ ಪ್ರಮಾಣ ಕೇವಲ ಶೇ.14ರಷ್ಟಿತ್ತು. ಈಗಲೂ ಕಡಿಮೆ ಮುಖಬೆಲೆಯ ಇಷ್ಟೇ ನೋಟುಗಳು ಚಲಾವಣೆಯಲ್ಲಿವೆ.
ಆರ್ಬಿಐಗೆ ಈವರೆಗೆ 150 ಕೋಟಿ ನೋಟುಗಳನ್ನು ಮುದ್ರಿಸಲು ಸಾಧ್ಯವಾಗಿದ್ದು, ಹೆಚ್ಚಿನವು 2,000 ರೂ.ನೋಟುಗಳಾಗಿವೆ. ವಹಿವಾಟು ಸಹಜ ಸ್ಥಿತಿಗೆ ಮರಳಬೇಕಾದರೆ ಆರ್ಬಿಐನ ನೋಟು ಮುದ್ರಣ ಘಟಕಗಳು ಹೊಸ 500 ರೂ.ಗಳ ಕನಿಷ್ಠ ಒಂದರಿಂದ ಎರಡು ಸಾವಿರ ಕೋಟಿ ನೋಟುಗಳನ್ನು ಮುದ್ರಿಸುವ ಅಗತ್ಯವಿದೆ ಎಂದು ವರದಿಯು ಹೇಳಿದೆ.
ಜನವರಿಗೆ ಮೊದಲು ನಗದು ಕೊರತೆಯು ನೀಗಬೇಕಾದರೆ ಆರ್ಬಿಐ ಮುದ್ರಣ ಘಟಕಗಳು ತಮ್ಮ ಶೇ.150ರಷ್ಟು ಮುದ್ರಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸ ಬೇಕಾಗುತ್ತದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್ನ ಸಂಶೋಧನಾ ವರದಿಯು ಹೇಳಿದೆ. ಮುದ್ರಣ ಘಟಕಗಳು ತಮ್ಮ ಈಗಿನ ಶೇ.100 ಸಾಮರ್ಥ್ಯದೊಂದಿಗೆ ಕೆಲಸ ಮಾಡಿದರೆ ಹಣಕಾಸು ಸ್ಥಿತಿ ಸಹಜ ಸ್ಥಿತಿಗೆ ಮರಳಲು ಇನ್ನೂ ಕನಿಷ್ಠ ನಾಲ್ಕು ತಿಂಗಳುಗಳು ಬೇಕು ಎಂದು ಅದು ತಿಳಿಸಿದೆ.
ಚಲಾವಣೆಯಲ್ಲಿ ಹಣದ ಕೊರತೆಯು ಅಲ್ಪಾವಧಿಯಿಂದ ಮಧ್ಯಮ ಅವಧಿಯಲ್ಲಿ ಆರ್ಥಿಕತೆ ಮತ್ತು ಗ್ರಾಹಕ ಬೇಡಿಕೆಗಳನ್ನು ಮಂದಗೊಳಿಸುವ ಜೊತೆಗೆ ಭಾರತದ ಜಿಡಿಪಿಯು ಶೇ.4ರಷ್ಟು ಕುಸಿಯಬಹುದು ಎಂದು ಕೆಲವು ಆರ್ಥಿಕ ತಜ್ಞರು ಅಂದಾಜಿಸಿ ದ್ದಾರೆ.