ಹಿಮಾಲಯವೆಂಬ ದನವನ್ನು ಕರೆಯಲು ಹೊರಟ ಧನದಾಹಿಗಳು! | Vartha Bharati- ವಾರ್ತಾ ಭಾರತಿ

ಹಿಮಾಲಯವೆಂಬ ದನವನ್ನು ಕರೆಯಲು ಹೊರಟ ಧನದಾಹಿಗಳು!

ಭಾರತೀಯ ಸಂಸ್ಕೃತಿ ಪ್ರಕೃತಿಯಲ್ಲೇ ದೇವರನ್ನು ಕಾಣುತ್ತಾ ಬಂದಿದೆ. ನದಿ, ಮರ ಗಿಡ, ಪ್ರಾಣಿ ಪಕ್ಷಿ, ಪರ್ವತ ಎಲ್ಲದರ ಹಿಂದೆಯೂ ಪುರಾಣಕತೆಗಳನ್ನು ಕಟ್ಟಿ ಅದಕ್ಕೆ ಪಾವಿತ್ರವನ್ನು ನೀಡುತ್ತಾ ಬಂದಿದೆ. ದುರದೃಷ್ಟವಶಾತ್ ಈ ಪಾವಿತ್ರವೇ ಇಲ್ಲಿನ ಪ್ರಕೃತಿಗೆ ಕುತ್ತಾಗಿ ಪರಿಣಮಿಸಿದೆ. ಯಾವುದನ್ನೆಲ್ಲ ವೈದಿಕ ಧರ್ಮ ಪವಿತ್ರ ಎಂದು ಘೋಷಿಸುತ್ತಾ ಬಂತೋ ಅವೆಲ್ಲವೂ ಧರ್ಮೋದ್ಯಮಗಳ ಕೇಂದ್ರವಾಗಿ ನಾಶವಾಗುತ್ತಾ ಬಂದಿವೆ. ಗಂಗಾ ನದಿಯ ಪಾವಿತ್ರವೇ ಅದಕ್ಕೆ ಹೇಗೆ ಮುಳ್ಳಾಗಿದೆ ಎನ್ನುವುದನ್ನು ನೋಡಿದ್ದೇವೆ. ಗಂಗೆಯಲ್ಲಿ ಅಂತ್ಯಸಂಸ್ಕಾರ ಮಾಡಿದರೆ ನೇರ ಸ್ವರ್ಗ ಸೇರುವ ಕಲ್ಪನೆಯಿಂದಾಗಿ ಅರ್ಧ ಬೆಂದ ಮೃತದೇಹಗಳನ್ನು ಈ ನದಿಗೆ ಎಸೆಯುತ್ತಾ ಬಂದವರು ನಾವು. ನದಿಗಳು ಪವಿತ್ರ ಎನ್ನುವ ಕಾರಣಕ್ಕಾಗಿಯೇ ಮನುಷ್ಯನ ಮೃತದೇಹ ತ್ಯಾಜ್ಯಗಳನ್ನು ನದಿಗಳಿಗೆ ಎಸೆಯುತ್ತಾ ಅವುಗಳನ್ನು ಮಲಿನಗೊಳಿಸುತ್ತಿದ್ದೇವೆ. ಗಂಗೆ ಮಾತ್ರವಲ್ಲ, ಯಾವುದೇ ಪುಣ್ಯ ಕ್ಷೇತ್ರಗಳ ಪಕ್ಕದಲ್ಲಿರುವ ನದಿಗಳ ನೀರು ಇಂದು ಕುಡಿಯುವುಕ್ಕೆ ಯೋಗ್ಯವಾಗಿಲ್ಲ ಎನ್ನುವುದನ್ನು ಪರಿಸರ ಇಲಾಖೆಯೇ ಹೇಳುತ್ತಿದೆ. ಗೋವನ್ನು ಪವಿತ್ರ ಎಂದು ಸಾರಿ ಅದನ್ನು ಉದ್ಯಮ ಮತ್ತು ರಾಜಕೀಯಗಳೆರಡಕ್ಕೂ ಬಳಸುವ ಮೂಲಕ ಈ ದೇಶದಲ್ಲಿ ಹೈನೋದ್ಯಮವೇ ನಾಶವಾಗುವ ಹಂತದಲ್ಲಿದೆ. ‘ಗೋಮಾತೆ’ಯ ರಕ್ಷಣೆಯ ಹೆಸರಿನಲ್ಲಿ ಗೋಶಾಲೆಗಳಿಗಾಗಿ ಬಿಡುಗಡೆಯಾಗುವ ಹಣವನ್ನು ಕಂಡಕಂಡವರು ಉಂಡು ತಿಂದು ತೇಗುತ್ತಿದ್ದಾರೆ. ನಿಜಕ್ಕೂ ಗೋವುಗಳನ್ನು ಸಾಕುವ ರೈತರು ಆ ವೃತ್ತಿಯಿಂದಲೇ ದೂರ ಸರಿಯುತ್ತಿದ್ದಾರೆ.

ಹಿಮಾಲಯ ಭಾರತದ ಪಾಲಿಗೆ ಹಲವು ಕಾರಣಗಳಿಗಾಗಿ ಮುಖ್ಯವಾದುದು. ಈ ದೇಶದ ರಕ್ಷಣೆಯಲ್ಲಿ ಹಿಮಾಲಯ ಪರ್ವತದ ಪಾತ್ರ ಬಹುದೊಡ್ಡದು. ಶತ್ರುಗಳಿಗೆ ಎದೆಕೊಟ್ಟು ಈ ದೇಶವನ್ನು ಶತಮಾನಗಳಿಂದ ಕಾಯುತ್ತಾ ಬಂದುದು ಹಿಮಾಲಯ ಪರ್ವತ. ಗಂಗಾನದಿಯ ಮೂಲವೂ ಇಲ್ಲಿಂದಲೇ ಆರಂಭವಾಗುತ್ತದೆ. ಭಾರತೀಯರ ಪಾಲಿಗೆ ಶಿವನ ಆವಾಸಸ್ಥಾನ ಹಿಮಾಲಯ. ಮಾನಸಸರೋವರವನ್ನು ಹಿಮಾಲಯ ತನ್ನೆದೆಯಲ್ಲಿ ಬಚ್ಚಿಟ್ಟುಕೊಂಡಿದೆ. ಆದುದರಿಂದ ಧಾರ್ಮಿಕ ನೆಲೆಯಲ್ಲಿ ಈ ಪರ್ವತ ಭಾರತೀಯರಿಗೆ ಪವಿತ್ರ. ಆದರೆ, ಜನರ ಕೈಗೆಟುಕದಷ್ಟು ದೂರವಿರುವುದರಿಂದ, ಪ್ರವಾಸಿಗರಿಂದ, ಭಕ್ತರಿಂದ ಈ ಹಿಮಾಲಯದ ಸೌಂದರ್ಯ, ಸ್ವಚ್ಚತೆಗೆ ಧಕ್ಕೆ ಬಂದಿರಲಿಲ್ಲ. ಆದರೆ ಇದೀಗ ಸರಕಾರ ಹಿಮಾಲಯವನ್ನು ಪ್ರವಾಸೋದ್ಯಮಗಳಿಗೆ, ಭಕ್ತರಿಗೆ ಪೂರ್ಣ ಪ್ರಮಾಣದಲ್ಲಿ ತೆರೆದಿಡಲು ಮುಂದಾಗಿರುವುದು, ಮುಂದಿನ ದಿನಗಳಲ್ಲಿ ಹಿಮಾಲಯಕ್ಕೆ ಒದಗಿ ಬರಲಿರುವ ಅಪಾಯಗಳ ಸೂಚನೆ ನೀಡಿದೆ. ಹಿಮಾಲಯ ಪರ್ವತಗಳು ಜಗತ್ತಿನಲ್ಲೇ ಮೂರನೇ ಅತಿದೊಡ್ಡ ಹಿಮಸಾಂಧ್ರತೆಯುನ್ನು ಹೊಂದಿದ್ದು,46,298 ನೀರ್ಗಲ್ಲು ಶಿಖರಗಳನ್ನು ಹೊಂದಿವೆ ಹಾಗೂ ಭೂಮಿಯ ಒಟ್ಟು ಮೇಲ್ಮೈ ಪ್ರದೇಶದ 0.4 ಶೇಕಡದಷ್ಟು ಪ್ರದೇಶವನ್ನು ವ್ಯಾಪಿಸಿದೆ. ಸುಮಾರು 5.27 ಕೋಟಿ ಜನರ ಅವಾಸಸ್ಥಾನವೂ ಹೌದು. ಹಿಮಾಲಯ ಶಿಖರಗಳಲ್ಲಿ ಹುಟ್ಟುವ ನದಿಗಳು ಹರಿದುಹೋಗುವ ಪ್ರದೇಶಗಳಲ್ಲಿ 60 ಕೋಟಿಗೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಹಿಮಾಲಯ ಪರ್ವತಗಳು ಪರಿಣಾಮಕಾರಿಯಾಗಿ ಪರಿಸರ ಭದ್ರತೆಳನ್ನು ಜಗತ್ತಿಗೆ ಒದಗಿಸುತ್ತಿದೆ.ಈಗ ಹಿಮಾಲಯದ 137 ಶಿಖರಗಳನ್ನು ಪ್ರವಾಸಿಗರಿಗಾಗಿ ತೆರೆದಿಡಲಾಗಿದೆ. ರಾಜ್ಯಗಳು ಹಾಗೂ ಕೇಂದ್ರ ಸರಕಾರವು ಮುಂಬರುವ ದಿನಗಳಲ್ಲಿ ಇಲ್ಲಿ ವಾಕ್‌ವೇಗಳು ಹಾಗೂ ರಸ್ತೆಗಳನ್ನು ನಿರ್ಮಿಸಲಿವೆ ಹಾಗೂ ಪ್ರವಾಸಿಗರ ಶಿಬಿರಗಳಿಗಾಗಿ ಪರ್ವತ ಪ್ರದೇಶಗಳಲ್ಲಿ ಕಾಡುಗಳನ್ನು ಕಡಿಯಲಾಗುತ್ತಿದೆ. ಹೀಗೆ ಶಿಖರಗಳಲ್ಲಿ ಕಂಗೊಳಿಸುವ ಹಸಿರು ಹೊದಿಕೆ ನಿಧಾನವಾಗಿ ಕಣ್ಮರೆಯಾಗಲಿದೆ, ಪರ್ವತದ ಮಣ್ಣು ಸವಕಳಿಯಾಗಲಿದೆ, ತೊರೆಗಳು ದಿಕ್ಕು ಬದಲಿಸಿ ಹರಿಯಲಿವೆ, ಪರಿಸರ ಮಲಿನಗೊಳ್ಳಲಿದೆ ಹಾಗೂ ವನ್ಯಜೀವಿ ಸಂಪತ್ತಿಗೆ ಗಂಡಾಂತರ ಕಾದಿದೆ.

ಹಿಮಾಲಯವು ಲಾಭದಾಯಕ ಹಸು ಎನ್ನುವುದನ್ನು ಕೊನೆಗೂ ಕೇಂದ್ರ ಕಂಡುಕೊಂಡಿದೆ. ಅದರ ಕೆಚ್ಚಲ ತುಂಬ ತುಳುಕುವ ‘ಧನ’ದ ಹಾಲನ್ನು ಕರೆಯುವ ಅತ್ಯುತ್ಸಾಹದಲ್ಲಿದೆ. ಪರ್ವತ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಸದ್ಯ ಭಾರತದಲ್ಲಿ ಅಸ್ತಿತ್ವದಲ್ಲಿರುವ ಮಾರ್ಗದರ್ಶಿ ಸೂತ್ರಗಳು ತೃಪ್ತಿಕರವಾಗಿಲ್ಲವೆಂಬುದಂತೂ ವಾಸ್ತವ. ಕಳೆದ ವರ್ಷ ಉತ್ತರಾಖಂಡ ಹೈಕೋರ್ಟ್ ತನ್ನ ರಾಜ್ಯದಲ್ಲಿ ಸಾಹಸ ಕ್ರೀಡೆಗಳನ್ನು ನಿಷೇಧಿಸಿತ್ತು. ಸಾಹಸ ಕ್ರೀಡಾ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ರಾಜ್ಯ ಸರಕಾರ ರೂಪಿಸಿರುವ ನಿಯಮಗಳು ಅಸಮರ್ಪಕವಾಗಿವೆ ಹಾಗೂ 137 ಶಿಖರಗಳನ್ನು ಪರ್ವತ ಪ್ರವಾಸೋದ್ಯಮಕ್ಕೆ ತೆರೆಯುವ ಕೇಂದ್ರ ಸರಕಾರದ ನೂತನ ನಿರ್ಧಾರವು ಪರಿಸರ ಸೂಕ್ಷ್ಮವಾದ ಪರ್ವತಗಳು ಹಾಗೂ ಅದನ್ನು ಅವಲಂಬಿಸಿರುವ ಜನರ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಹಿಮಾಲಯ ಪರ್ವತಗಳ ಪರಿಸರ ಸಂರಕ್ಷಣೆಯ ಬಗ್ಗೆ ಕೇಂದ್ರ ಸರಕಾರವು ನಿರಾಸಕ್ತಿ ವಹಿಸಿದೆಯೆಂಬುದಕ್ಕೆ ವರ್ಷದಿಂದ ಪರ್ವತಾರೋಹಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದೇ ಸೂಕ್ತ ನಿದರ್ಶನವಾಗಿದೆ. 2012ರ ಮೇ 19ರಂದು ಎವರೆಸ್ಟ್ ಶಿಖರವನ್ನು 234 ಮಂದಿ ಏರಿದ್ದರು ಇದಕ್ಕಿಂತ ಕೇವಲ ಎರಡು ದಶಕಗಳ ಮೊದಲು ಅಂದರೆ 1993ರಲ್ಲಿ ಅದೇ ಶಿಖರವನ್ನು 38 ಮಂದಿ ಪರ್ವತಾರೋಹಿಗಳ ತಂಡವೊಂದು ಏರಿತ್ತು. ಈ ವರ್ಷದ ಮೇ ತಿಂಗಳೊಳಗೆ ಸುಮಾರು 200 ಪರ್ವತಾರೋಹಿಗಳ ಹೆಸರನ್ನು ನೆರೆಯ ರಾಷ್ಟ್ರವಾದ ನೇಪಾಳ ನೋಂದಾಯಿಸಿಕೊಂಡಿದೆ.ಜಗತ್ತಿನಲ್ಲಿನ ಎಲ್ಲಾ ಪ್ರವಾಸಿಗರ ಪೈಕಿ ಐದನೇ ಒಂದಂಶದಷ್ಟು ಮಂದಿ ಪರ್ವತ ಪ್ರದೇಶಗಳನ್ನು ಸಂದರ್ಶಿಸುತ್ತಾರೆ. ಬಹುರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಸಂಸ್ಥೆಗಳು ಸತತವಾಗಿ ಗರಿಷ್ಠ ಮಟ್ಟದ ಲಾಭವನ್ನು ಪಡೆಯಲು ತುದಿಗಾಲಲ್ಲಿ ನಿಂತಿವೆ.

ಪರ್ವತಾರೋಹಣಕ್ಕೆ ವಿದೇಶಿ ಪ್ರವಾಸಿಗರ ಆಗಮನದಿಂದಾಗಿ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ ಹಾಗೂ ಸ್ಥಳೀಯ ಯುವಜನರಿಗೆ ಉದ್ಯೋಗವಕಾಶಗಳು ಲಭಿಸಲಿವೆಯೆಂದು ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಪ್ರತಿಪಾದಿಸುತ್ತಾರೆ. ಆದರೆ ಅದಕ್ಕೆ ಹಿಮಾಲಯ ತೆರುವ ಬೆಲೆ ಅವರಿಗೆ ಗೊತ್ತಿಲ್ಲದ್ದೇನೂ ಅಲ್ಲ. ಧಾರ್ಮಿಕ ಪ್ರವಾಸ ಸ್ಥಾನವಾದ ಗಂಗಾ ತಟದ ಸ್ಥಿತಿಯನ್ನು ನಾವು ಒಮ್ಮೆ ಅವಲೋಕಿಸೋಣ. ಗಂಗೆಯ ಸಂದರ್ಶನಕ್ಕಾಗಿ ಕಾಶಿಗೆ ಆಗಮಿಸುವ ಭಕ್ತರಿಂದಾಗುವ ಲಾಭಕ್ಕಿಂತಲೂ ಹಲವು ಪಟ್ಟು ಹಣವನ್ನು ಗಂಗಾನದಿಯ ಶುದ್ಧೀಕರಣಕ್ಕಾಗಿ ಸರಕಾರ ತೆರುತ್ತಿದೆ. ಆದರೂ ಅದನ್ನು ಪೂರ್ಣವಾಗಿ ಶುದ್ಧಗೊಳಿಸಲಾಗುತ್ತಿಲ್ಲ. ಈಗಾಗಲೇ ಹಿಮಾಲಯದ ಕೆಲವು ಪರ್ವತಗಳು ಪ್ರವಾಸಿಗರಿಂದಾಗಿ ತಿಪ್ಪೆಗುಂಡಿಗಳಾಗಿ ಪರಿವರ್ತನೆಗೊಂಡಿವೆ. ಹಿಮಾಚಲ ಪ್ರದೇಶದ ಟ್ರಯಂಡ್ ಭಾಗ ಇದಕ್ಕೆ ಉದಾಹರಣೆಯಾಗಿದೆ.

ಕಾಂಗ್ರಾ ಕಣಿವೆಯ ಅದ್ಭುತ ನೋಟಕ್ಕಾಗಿ 3000ಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಾರೆ. ರಾತ್ರಿಯೂ ಈ ಭಾಗದಲ್ಲಿ ಉಳಿಯುತ್ತಾರೆ. ಮುಕ್ತ ಮಲವಿಸರ್ಜನೆ, ಪ್ಲಾಸ್ಟಿಕ್ ಸೇರಿದಂತೆ ಬೃಹತ್ ತ್ಯಾಜ್ಯಗಳ ಆವಾಸಸ್ಥಾನವಾಗಿ ನಿಧಾನಕ್ಕೆ ಈ ಭಾಗ ಬದಲಾಗುತ್ತಿದೆ. ಮೊಗೆದಷ್ಟೂ ಸೇರ್ಪಡೆಯಾಗುತ್ತಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಹಣದೋಚುವುದಕ್ಕಿರುವ ಆಸಕ್ತಿ ತ್ಯಾಜ್ಯ ನಿರ್ವಹಣೆಯಲ್ಲಿ ಸರಕಾರ ತೋರುತ್ತಿಲ್ಲ. ಇದು ಹೀಗೆ ಮುಂದುವರಿದರೆ, ಹಿಮಾಲಯವನ್ನು ಶುದ್ಧೀಕರಿಸುವುದಕ್ಕಾಗಿ ಶಿವನೇ ಗೌರಿಶಂಕರದಿಂದ ಇಳಿದು ಬರಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಎಲ್ಲವನ್ನೂ ಹಣದ ವೌಲ್ಯದಿಂದ ಅಳೆಯುವುದು ತಪ್ಪು. ಹಿಮಾಲಯ ನಮ್ಮನ್ನು ಈವರೆಗೆ ಶತ್ರುಗಳಿಂದ ಕಾಪಾಡಿದೆ. ಅದನ್ನು ಕಾಪಾಡುವುದು ನಮ್ಮ ಕರ್ತವ್ಯ ಕೂಡ. ಹಿಮಾಲಯದ ಪರಿಸರ ಸೂಕ್ಷ್ಮತೆಗಳಿಗೆ ಧಕ್ಕೆ ತರುವುದೆಂದರೆ ಆತ್ಮಹತ್ಯೆಯ ದಾರಿ ಹಿಡಿಯುವುದೆಂದು ಅರ್ಥ. ನಮ್ಮನ್ನು ನಾವೇ ಕಾಪಾಡಿಕೊಳ್ಳುವ ಭಾಗವಾಗಿ ಹಿಮಾಲಯ ಪರಿಸರವನ್ನು ಕಾಪಾಡುವುದು ಸರಕಾರದ ಹೊಣೆಗಾರಿಕೆಯಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top