ಸುರೇಶ್ ಕುಮಾರ್ ಅವರಿಗೆ ದಿನೇಶ್ ಕುಮಾರ್ ದಿನೂ ಅವರ ಬಹಿರಂಗ ಪತ್ರ | Vartha Bharati- ವಾರ್ತಾ ಭಾರತಿ

ಬೋಳು ಮಂಡೆ, ಮಟ್ಟು, ಬೌದ್ಧಿಕ ವಿಕಾರತೆಯ ಅನಾವರಣ, ಈಶ್ವರಪ್ಪ, ಪ್ರತಾಪ್ ಸಿಂಹ, ಮೋದಿ, ಅಡ್ವಾಣಿ, ತೊಗಾಡಿಯಾ, ಮಾನವೀಯ ಸೂಕ್ಷ್ಮಗಳು...

ಸುರೇಶ್ ಕುಮಾರ್ ಅವರಿಗೆ ದಿನೇಶ್ ಕುಮಾರ್ ದಿನೂ ಅವರ ಬಹಿರಂಗ ಪತ್ರ

ಸಹೃದಯರಾದ ಶ್ರೀ ಸುರೇಶ್ ಕುಮಾರ್ ಅವರಿಗೆ

ಪ್ರೀತಿಯ ನಮಸ್ಕಾರಗಳು.

ಈ ಬಹಿರಂಗ ಪತ್ರದ ಉದ್ದೇಶ ತಾವು ಆಗಸ್ಟ್ 30ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆದ ಎರಡು ಪ್ರತ್ಯೇಕ ಸ್ಟೇಟಸ್ಗಳು. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದು ಕೆಲವೇ ಸಮಯದಲ್ಲಿ ಅಳಿಸಿ ಹಾಕಿದ ಒಂದು ಸಾಲು ಮಾತಿನ ಕುರಿತು ಆ ನಡುರಾತ್ರಿಯಲ್ಲಿ ತಾವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೀರಿ. ನಿಮ್ಮ ಕನ್ನಡದ ಸ್ಟೇಟಸ್ ಹೀಗೆ ಹೇಳುತ್ತದೆ: ತನ್ನ ಶತ್ರುವಿಗೂ ಈ ರೀತಿ ಅವಹೇಳನಕಾರಿ ಮಾತುಗಳನ್ನು ಹೇಳಬಾರದಲ್ಲವೇ ದಿನೇಶ್. ಪ್ರತಾಪ್ ಸಿಂಹರ ಪತ್ನಿಯವರ ದುರದೃಷ್ಟಕರ ದೈಹಿಕ ಸ್ಥಿತಿಯನ್ನು ಉಪಯೋಗಿಸಿ ಪ್ರತಾಪಸಿಂಹರ ಮೇಲೆ ನಿಮ್ಮ ಬೌದ್ಧಿಕ(?) ಹಲ್ಲೆ ನಿಮ್ಮ ಬಗ್ಗೆಯೇ ಕನಿಕರ ಹುಟ್ಟಿಸುತ್ತಿದೆ. ಇದು ಬೌದ್ಧಿಕ ವಿಕಾರತೆಯ ಅನಾವರಣ.

ಅದೇ ರೀತಿ ನೀವು ಇಂಗ್ಲಿಷ್ ನಲ್ಲಿ ಬರೆದ ಸಾಲುಗಳು ಹೀಗಿವೆ: It is crass crudity of the Media Advisor to CM of Karnataka to ridicule a woman's unfortunate physical condition to attack her husband.

ಈ ಕುರಿತು ನಿಮ್ಮ ವಾಲ್ ನಲ್ಲಿ ಕಮೆಂಟ್ ಮಾಡಬಹುದಿತ್ತು. ಆದರೆ ಹೇಳಬೇಕಾದ ವಿಷಯಗಳು ತುಸು ಹೆಚ್ಚೇ ಇರುವುದರಿಂದ ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮ ಸ್ಟೇಟಸ್ಗಳ ವಿಷಯಕ್ಕೆ ಮತ್ತೆ ಬರುತ್ತೇನೆ. ಈಗ ಹಿಂದೆ ನಡೆದ ಎರಡು ಘಟನೆಗಳನ್ನು ನೆನಪಿಸಲು ಬಯಸುತ್ತೇನೆ.

ಮೊದಲನೆಯ ಘಟನೆ ನಡೆದಿದ್ದು 2014ರ ನವೆಂಬರ್ 8ರಂದು. ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲವದು. ನಿಮ್ಮ ಪಕ್ಷದ ನೇತಾರರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಒಂದು ಹೇಳಿಕೆ ನೀಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಪುತ್ರಿಯರ ಮೇಲೆ ಅತ್ಯಾಚಾರವಾಗುವವರೆಗೆ ಇವರಿಗೆ ಬುದ್ಧಿಬರಲ್ಲ ಎಂದು ಹೇಳಿದ್ದರು ನಿಮ್ಮ ಈಶ್ವರಪ್ಪನವರು. ಕುತೂಹಲಕ್ಕೆ ನಿಮ್ಮ ಟೈಮ್ ಲೈನ್ಗೆ ಹೋಗಿ ಆ ದಿನಗಳಲ್ಲಿ ಈ ಕುರಿತು ನೀವು ಏನನ್ನಾದರೂ ಬರೆದಿದ್ದೀರಾ ಎಂದು ಪರೀಕ್ಷಿಸಿದೆ. ನಿಮ್ಮ ಮೌನವಷ್ಟೇ ಕಣ್ಣಿಗೆ ರಾಚಿತು. ಇದು ಈಶ್ವರಪ್ಪನವರ ಬೌದ್ಧಿಕ ವಿಕಾರತೆಯ ಅನಾವರಣ ಎಂದು ನೀವು ಬರೆದಿರಬಹುದು ಅಥವಾ It is crass crudity of our own leader Eshwarappa ಎಂದು ಬರೆದಿರಬಹುದು ಎಂದು ನಿರೀಕ್ಷೆ ಮಾಡಿದ್ದೆ. ನನ್ನ ನಿರೀಕ್ಷೆ ಸುಳ್ಳಾಯಿತು.

ಇನ್ನೊಂದು ಘಟನೆ ಇನ್ನೊಂದು ವರ್ಷದ ನಂತರ ನಡೆದದ್ದು. 2015ರ ಅಕ್ಟೋಬರ್ 17ರಂದು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಲ್ಲಾಪುರಕ್ಕೆ ಇದೇ ನಿಮ್ಮ ಕೆ.ಎಸ್ ಈಶ್ವರಪ್ಪನವರು ತೆರಳಿದ್ದರು. ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚಾಗುತ್ತಿದೆ, ವಿರೋಧ ಪಕ್ಷದ ಮುಖಂಡರಾದ ನಿಮ್ಮ ಪ್ರತಿಕ್ರಿಯೆ ಏನು ಎಂದು ಚಾನಲ್ ಒಂದರ ಮಹಿಳಾ ವರದಿಗಾರರು ಈಶ್ವರಪ್ಪನವರನ್ನು ಪ್ರಶ್ನಿಸಿದ್ದರು. ನಿಮ್ಮ ಮುಖಂಡರ ಉತ್ತರ ಹೀಗಿತ್ತು: ಅಲ್ಲಮ್ಮಾ, ನಿನ್ನನ್ನು ಯಾವನೋ ಕರೆದುಕೊಂಡು ಹೋಗಿ ರೇಪ್ ಮಾಡಿದರೆ ನಾವೇನು ಮಾಡಕ್ಕಾಗುತ್ತೆ. ನಾನು ಎಲ್ಲೋ ಇರ್ತೀನಿ.

ಈ ವಿಷಯಕ್ಕೆ ಸಂಬಂಧಿಸಿದಂತೆಯೂ ನೀವು ಏನನ್ನಾದರೂ ಬರೆದಿರಬಹುದು ಎಂಬ ಕುತೂಹಲದಿಂದ ನಿಮ್ಮ ಟೈಮ್ ಲೈನ್ ತಡಕಾಡಿದೆ. ಅಲ್ಲಿ ಅಕ್ಟೋಬರ್ 18ರಂದು ಸಿಕ್ಕಿದ್ದು ಇಷ್ಟು, ನೀವು ಬರೆದಿರೋದೇ ಇಷ್ಟು: ಮಾತನಾಡಲು ಕಲಿಯಲು - ಪ್ರಾರಂಭಿಸಲು ಬಾಲ್ಯದಲ್ಲಿ 3 ಮೊದಲ ವರ್ಷಗಳು ಬೇಕು. ಏನು ಮಾತನಾಡಬೇಕು - ಏನು ಮಾತನಾಡಬಾರದು ಎಂಬುದನ್ನು ಅರಿಯಲು ಇಡೀ ಜೀವಮಾನವೇ ಸಾಲದು.

ನೀವು ಈಶ್ವರಪ್ಪನವರ ಕುರಿತೇ ಈ ಸ್ಟೇಟಸ್ ಹಾಕಿದ್ದೀರೆಂಬುದು ಗೊತ್ತಾಗಿದ್ದು ಅಲ್ಲಿ ನಿಮ್ಮ ಸ್ನೇಹಪಟ್ಟಿಯಲ್ಲಿರುವವರು ಮಾಡಿರುವ ಕಮೆಂಟುಗಳಿಂದ! ಏನನ್ನು ಮಾತನಾಡಬೇಕು, ಏನನ್ನು ಮಾತನಾಡಬಾರದು ಎಂಬುದನ್ನು ಅರಿಯಲು ಇಡೀ ಜೀವಮಾನವೇ ಸಾಲದು ಎಂಬ ಈ ಆತ್ಮವಿಮರ್ಶೆಯ ಮಾತುಗಳು ಈಶ್ವರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆಯಾ ಎಂದೆನಿಸಿ ಆಶ್ಚರ್ಯವೆನಿಸಿತು.

ಮುಖ್ಯಮಂತ್ರಿ, ಗೃಹಸಚಿವರ ಪುತ್ರಿಯರು, ಚಾನೆಲ್ ಒಂದರ ವರದಿಗಾರ್ತಿಯ ಕುರಿತು ಅತ್ಯಾಚಾರದಂಥ ಅತಿಸೂಕ್ಷ್ಮ ವಿಷಯಗಳನ್ನು ಇಟ್ಟುಕೊಂಡು ಆಡಿದ ಮಾತುಗಳು ತಮಗೆ ಬೌದ್ಧಿಕ ವಿಕಾರತೆ ಎನಿಸದೇ ಹೋಗಿದ್ದು ನಿಜಕ್ಕೂ ಆಶ್ಚರ್ಯ. ಅಥವಾ ಅತಿ ಸುಲಭವಾಗಿ ಒಂದು ನಿರ್ಣಯಕ್ಕೆ ಬರಬಹುದು. ನಿಮ್ಮ ಪಕ್ಷದವರು ಮಾಡಿದರೆ ಅದು ಆತ್ಮಾವಲೋಕನಕ್ಕೆ ದಾರಿ, ಬೇರೆಯವರು ಮಾಡಿದರೆ ಮಾತ್ರ ತೀವ್ರ ಸ್ವರೂಪದ ಟೀಕೆ-ವಿಮರ್ಶೆಗಳಿಗೆ ಅವಕಾಶ. ಇಂಥ ವಿಷಯಗಳಲ್ಲೂ ನೀವು ಎಷ್ಟು ಸೆಲೆಕ್ಟಿವ್ ಆಗಿರಲು ಬಯಸುತ್ತೀರಿ ನೋಡಿ. ರಾಜಕೀಯ ಅಂದರೆ ಇಷ್ಟೇನಾ ಸರ್? ಅಥವಾ ಸುರೇಶ್ ಕುಮಾರ್ ಅವರನ್ನು ಈ ಕೊಳಕು ರಾಜಕಾರಣದಿಂದ ಹೊರತಾಗಿರುವ ಮನುಷ್ಯ ಎಂದು ನಾವು ಭಾವಿಸಿದ್ದೇ ತಪ್ಪಾ?

ಈಗ ಮುಖ್ಯವಾದ ವಿಷಯಕ್ಕೆ ಬಂದುಬಿಡುತ್ತೇನೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಮೈಸೂರಿನ ಸಂಸದ ಪ್ರತಾಪ ಸಿಂಹ ಅವರನ್ನು ಕುರಿತು ಬರೆಯುವಾಗ “ಮನೆಯಲ್ಲೇ ಅಂಗವಿಕಲ ಪತ್ನಿ ಇರುವಾಗ ಬೇರೆಯವರ ಬೋಳುಮಂಡೆಯಲ್ಲಿ ಕೂದಲು ಹುಡುಕುವಾತ” ಎಂದು ಬರೆದಿದ್ದರು, ನಂತರ ಒಬ್ಬ ಹೆಣ್ಣುಮಗಳ ಈ ಉಲ್ಲೇಖ ಸರಿಯಿಲ್ಲವೆಂದು ಹೇಳಿದ ನಂತರ ಆ ಸಾಲನ್ನು ಕೂಡಲೇ ಡಿಲೀಟ್ ಮಾಡಿದ್ದರು. ಕನ್ನಡ ಬಲ್ಲ ಯಾರಿಗೇ ಆದರೂ ಅರ್ಥವಾಗುವುದು ಏನೆಂದರೆ ಮನೆಯಲ್ಲೇ ಅಂಗವೈಕಲ್ಯದ ಸಮಸ್ಯೆಯನ್ನು ಎದುರಿಸುತ್ತಿರುವವರ ಬೇರೆಯವರ ದೇಹದ ವೈಕಲ್ಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ, ಏಕೆಂದರೆ ಬೇರೆಯವರನ್ನು ಮೂದಲಿಸುವಾಗ ಅದೇ ಸ್ಥಿತಿಯಲ್ಲಿರುವ ಮನೆಯವರು ಏನೆಂದುಕೊಂಡಾರು ಎಂಬ ಬಗ್ಗೆ ಕನಿಷ್ಟ ಪ್ರಜ್ಞೆ ಇರಬೇಕು - ಎಂಬುದು. ಆದರೂ ಇಲ್ಲಿ ‘ಅಂಗವಿಕಲ ಪತ್ನಿ’ ಎಂಬ ಉಲ್ಲೇಖ ಬಹಳಷ್ಟು ಜನರಿಗೆ ಇಷ್ಟವಾಗಲಿಲ್ಲ, ದಿನೇಶ್ ಅವರು ಅದನ್ನು ಕೂಡಲೇ ಸರಿಪಡಿಸಿದರು ಕೂಡ.

ಈಗ ಬೋಳುಮಂಡೆ ವಿಷಯಕ್ಕೆ ಬರೋಣ ಸರ್. ಇದರ ಹಿನ್ನೆಲೆಗಳನ್ನು ಸ್ವಲ್ಪ ವಿವರವಾಗಿಯೇ ನಿಮಗೆ ಹೇಳಬೇಕು. ಪ್ರತಾಪಸಿಂಹ ಅವರು ಪತ್ರಿಕೆಯೊಂದರ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಅವರನ್ನು ಕುಟುಕುವ ಸಲುವಾಗಿ ಮೊದಲು ಈ ‘ಬೋಳುಮಂಡೆ’ ಪದವನ್ನು ಬಳಸಿದ್ದರು. ಅದನ್ನೂ ಒಂದು ವೈಕಲ್ಯ ಎಂದಿಟ್ಟುಕೊಳ್ಳೋಣ. ದಿನೇಶ್ ಅವರನ್ನು ಟೀಕಿಸಲು ಪ್ರತಾಪ್ ಅವರಿಗೆ ಎಲ್ಲ ಹಕ್ಕುಗಳೂ ಇವೆ. ಅವರು ಟೀಕಿಸಲಿ, ಅವರ ದೇಹದ ಊನದ ಕುರಿತು ಮಾತನಾಡುವ ಅಗತ್ಯವೇನಿತ್ತು? ಪ್ರತಾಪಸಿಂಹ ಅವರು ಹೀಗೆ ಬರೆದ ನಂತರ ಅವರನ್ನು ಅನುಸರಿಸುವ ನೂರಾರು ಮಂದಿ ಬಲಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ಈ ‘ಬೋಳುಮಂಡೆ’ ಪದವನ್ನು ಪದೇಪದೇ ಬಳಸಿ ಅಣಕಿಸಿದರು, ಈಗಲೂ ಅಣಕಿಸುತ್ತಲೇ ಇದ್ದಾರೆ.

ದಿನೇಶ್ ಅವರನ್ನು ಹೀಗೆ ‘ಬೋಳುಮಂಡೆ’ ಎಂದು ಟ್ರಾಲ್ ಮಾಡಲು ಒಂದು ಕಾರಣವಿದೆ ಸರ್. ಅದು ಬಹುಶಃ ನಿಮಗೆ ಗೊತ್ತಿಲ್ಲದೆಯೇ ಇರಬಹುದು. ಸ್ವತಃ ನಿಮ್ಮ ಪಕ್ಷದ ದೊಡ್ಡ ನಾಯಕರಾದ ಎಲ್.ಕೆ.ಅಡ್ವಾಣಿ, ವಿ ಎಚ್ ಪಿ ಮುಖಂಡರಾದ ಪ್ರವೀಣ್ ತೊಗಾಡಿಯಾ ಅಂಥವರಿಗೂ ತಲೆಯಲ್ಲಿ ಕೂದಲಿಲ್ಲ. ಇದು ಗೊತ್ತಿದ್ದೂ ದಿನೇಶ್ ಅವರನ್ನು ‘ಬೋಳುಮಂಡೆ’ ಎಂದು ಕರೆಯಲು ಕಾರಣವಿದೆ. ದಿನೇಶ್ ಅಮೀನ್ ಮಟ್ಟು ಅವರು ಕ್ಯಾನ್ಸರ್ ಎಂಬ ಭೀಕರ ಕಾಯಿಲೆಯಿಂದ ನರಳಿದವರು. ಪ್ರಜಾವಾಣಿಯಲ್ಲಿ ಅವರು ಕಾರ್ಯನಿರ್ವಹಿಸುವಾಗಲೇ ಅವರಿಗೆ ಈ ರೋಗವಿತ್ತು. ಸತತ ಔಷಧೋಪಚಾರಗಳ ನಂತರ ಅವರು ಗುಣಮುಖರಾದರು. ಕ್ಯಾನ್ಸರ್ನಿಂದ ಪಾರಾಗಲು ಇರುವ ಐದುವರ್ಷಗಳ ‘ಅಪಾಯಕಾರಿ ಅವಧಿ’ಯನ್ನು ಅವರು ದಾಟಿದ್ದಾರೆ. ಇದು ಗೊತ್ತಿದ್ದೇ ನಾವೆಲ್ಲ ಭಕ್ತರೆಂದು ಕರೆಯುವ ಬಲಪಂಥೀಯ ಶಕ್ತಿಗಳು ‘ಕ್ಯಾನ್ಸರ್ನಿಂದ ಈತನ ತಲೆ ಬೋಳಾಗಿದೆ, ಆದರೂ ಬುದ್ಧಿಬಂದಿಲ್ಲ’ ಎಂದು ಬರೆದರು. ಅದಕ್ಕೆ ಸಾಕ್ಷಿಗಳನ್ನು ಒದಗಿಸಬಲ್ಲೆ.

ಕ್ಯಾನ್ಸರ್ ಕುರಿತು ತಮಗೆ ವಿವರವಾಗಿ ಹೇಳಬೇಕಾಗಿ ಇಲ್ಲ ಸರ್. ಆದರೂ ಇದು ಬಹಿರಂಗ ಪತ್ರವಾದ್ದರಿಂದ ಗೊತ್ತಿಲ್ಲದವರಿಗೆ ಒಂದಷ್ಟು ವಿಷಯಗಳು ತಿಳಿಯಲಿ ಎಂಬ ಕಾರಣಕ್ಕೆ ಒಂದೆರಡು ಸಾಲುಗಳನ್ನು ಹೇಳಿಬಿಡುತ್ತೇನೆ. ಇಡೀ ಜಗತ್ತಿನಲ್ಲಿ ಕ್ಯಾನ್ಸರ್ನಷ್ಟು ಭೀಕರವಾದ ಖಾಯಿಲೆ ಇನ್ನೊಂದಿಲ್ಲ. ಅದನ್ನು ಜಯಿಸುವುದು ಅಷ್ಟು ಸುಲಭವೂ ಅಲ್ಲ. ಅದಕ್ಕೆ ಈಗಲೂ ಇರುವ ಸಾಂಪ್ರದಾಯಿಕ ಚಿಕಿತ್ಸೆಗಳೆಂದರೆ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ರೇಡಿಯೋಥೆರಪಿಗಳು ಮಾತ್ರ. ಕ್ಯಾನ್ಸರ್ ರೋಗದ ಹಾಗೆಯೇ ಈ ಚಿಕಿತ್ಸೆಗಳೂ ಸಹ ರೋಗಿಯನ್ನು ಜೀವಂತ ಶವ ಮಾಡಿಬಿಡುತ್ತವೆ. ಕ್ಯಾನ್ಸರ್ ಬಹುತೇಕ ರೋಗಿಗಳನ್ನು ಕೊಲ್ಲುತ್ತದೆ, ಆದರೆ ಈ ಕೊಲ್ಲುವ ಮಾದರಿಯೂ ಭೀಕರ. ದೇಹದ ಒಂದೊಂದೇ ಅವಯವಗಳನ್ನು ಅದು ನಿಷ್ಕ್ರಿಯಗೊಳಿಸುತ್ತ ಇಂಚುಇಂಚಾಗಿ ಮನುಷ್ಯನನ್ನು ಕೊಲ್ಲುತ್ತದೆ.

ನೀವು ಒಮ್ಮೆ ಕಿದ್ವಾಯಿ ಆಸ್ಪತ್ರೆಗೋ ಅಥವಾ ಶೃಂಗೇರಿ ಶಂಕರಮಠದವರು ನಡೆಸುವ ಶಂಕರ ಕ್ಯಾನ್ಸರ್ ಆಸ್ಪತ್ರೆಗೋ ಒಮ್ಮೆ ಹೋಗಿಬನ್ನಿ. ಅಲ್ಲಿ ಸಾವಿರ ಸಾವಿರಗಟ್ಟಲೆ ಕ್ಯಾನ್ಸರ್ ರೋಗಿಗಳನ್ನು ನೋಡಬಹುದು. ಎಲ್ಲರ ತಲೆಯೂ ಕೀಮೋಥೆರಪಿ ಎಂಬ ಭಯಾನಕ ಚಿಕಿತ್ಸೆಗೆ ಒಳಗಾಗಿ ಬೋಳಾಗಿರುತ್ತದೆ. ಬಹುಶಃ ನಿಮ್ಮ ಸಂಸದರ ಭಾಷೆಯಲ್ಲಿ ಹೇಳುವುದಾದರೆ ಇವರೆಲ್ಲರೂ ಬೋಳುಮಂಡೆಗಳೇ. ಕ್ಯಾನ್ಸರ್ ಕಣಗಳನ್ನು ಸಾಯಿಸಲೆಂದೇ ದೇಹಕ್ಕೆ ವಿಷವನ್ನು ಹರಿಸುವ ಚಿಕಿತ್ಸೆಯೇ ಕೀಮೋಥೆರಪಿ. ಅದು ಕ್ಯಾನ್ಸರ್ ಕಣಗಳ ಜತೆ ಗುದ್ದಾಡುವುದರ ಜತೆಗೆ ದೇಹದ ಇನ್ನಿತರ ಜೀವಕಣಗಳನ್ನೂ ಘಾಸಿಗೊಳಿಸುತ್ತದೆ. ಅದರ ಪರಿಣಾಮವಾಗಿಯೇ ಕ್ಯಾನ್ಸರ್ ರೋಗಿಗಳು ತಮ್ಮ ಕೂದಲು ಕಳೆದುಕೊಳ್ಳುತ್ತಾರೆ. ಕೂದಲು ಮಾತ್ರವಲ್ಲ, ಅವರ ದೇಹದ ಇಮ್ಯುನಿಟಿಯನ್ನೇ ಅದು ಕೊಲ್ಲುತ್ತ ಬರುತ್ತದೆ.

ಕೂದಲು ಕಳೆದುಕೊಳ್ಳುವುದೇನು ದೊಡ್ಡ ವಿಷಯವಲ್ಲ ಬಿಡಿ ಸರ್, ಜೀವ ಉಳಿಯಬೇಕಲ್ಲ. ಅದಕ್ಕಾಗಿ ಕೋಟ್ಯಂತರ ಕ್ಯಾನ್ಸರ್ ರೋಗಿಗಳು ಬಡಿದಾಡುತ್ತಲೇ ಇರುತ್ತಾರೆ. ಕಂಡಕಂಡ ಕಡೆ ಚಿಕಿತ್ಸೆಗೆ ಹೋಗುತ್ತಾರೆ. ಇದೊಂಥರ ಸಾವಿನ ಜತೆಗಿನ ಯುದ್ಧ. ಇಂಥ ಜೀವಗಳನ್ನು ‘ಬೋಳುಮಂಡೆ’ಗಳು ಎಂದು ಕರೆಯಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಾ ಸರ್? ಇದೊಂದು ಪ್ರಶ್ನೆಗೆ ನೀವು ಉತ್ತರ ಕೊಟ್ಟರೆ ಸಾಕು, ಈ ಸುದೀರ್ಘ ಪತ್ರ ಬರೆದಿದ್ದೂ ಸಾರ್ಥಕವಾಗುತ್ತದೆ.

ದಿನೇಶ್ ಅವರು ಕ್ಯಾನ್ಸರ್ ಜತೆ ಗುದ್ದಾಡಿ, ನಂತರ ಅದರಿಂದ ಪಾರಾದ ನಂತರ ನನಗೆ ಗೊತ್ತಿರುವಂತೆ ವಾರಕ್ಕೆ ಇಬ್ಬರು ಕ್ಯಾನ್ಸರ್ ರೋಗಿಗಳು, ಸಂಬಂಧಿಗಳ ಜತೆಗಾದರೂ ಮಾತನಾಡುತ್ತಾರೆ. ಗಂಟೆಗಟ್ಟಲೆ ಅವರ ಅನುಭವವನ್ನು ಹೇಳುತ್ತ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ವೈದ್ಯರ ಜತೆ ಮಾತನಾಡಿ ರೋಗಿಗಳಿಗೆ ಸಹಾಯ ಮಾಡಲು ಮನವಿ ಮಾಡುತ್ತಾರೆ. ಸರ್ಕಾರದಿಂದ ಚಿಕಿತ್ಸಾ ವೆಚ್ಚವನ್ನು ಕೊಡಿಸಲು ಯತ್ನಿಸುತ್ತಾರೆ. ಇದೆಲ್ಲವನ್ನೂ ಅವರು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ನೊಂದ ನೋವು ನೋಯದವರಿಗೇನು ಗೊತ್ತು ಅಲ್ವಾ ಸರ್?

ಇದೆಲ್ಲ ವಿಷಯ ಒಂದೆಡೆ ಇರಲಿ, ಈಗ ಇಷ್ಟೆಲ್ಲ ವಿವರವಾಗಿ ಹೇಳಿದ ಮೇಲೂ ನೀವು ನಿಮ್ಮ ಸಂಸದರಿಂದ ಈ ‘ಬೋಳುಮಂಡೆ’ ಪ್ರಯೋಗದ ಬಗ್ಗೆ ಒಂದು ವಿಷಾದದ ಹೇಳಿಕೆ ಕೊಡಿಸುವಿರಾ? ಅದು ನಿಮ್ಮಿಂದ ಸಾಧ್ಯವಾ? ದಿನೇಶ್ ಅವರೇನೋ ತಾವು ಬರೆದ ಸಾಲಿನ ಧ್ವನಿ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ಡಿಲೀಟ್ ಮಾಡಿದರು. ಪ್ರತಾಪ್ ಸಿಂಹ ಅವರಿಂದ ಇದೇ ಕೆಲಸ ಮಾಡಿಸಲು ಸಾಧ್ಯವೇ ನಿಮ್ಮಿಂದ?

ಅದೆಲ್ಲ ಹೋಗಲಿ, ನೀವಾದರೂ ಬಲಪಂಥೀಯ ಹುಡುಗರು ತೀರಾ ಕೆಟ್ಟಾಕೊಳಕಾಗಿ ದಿನೇಶ್ ಅವರ ಕುರಿತು ಬರೆಯುವುದನ್ನು ನಿಲ್ಲಿಸಿ ಎಂದು ಒಂದು ಮನವಿ ಮಾಡಬಲ್ಲಿರಾ? ಖಂಡಿತಾ ಇಲ್ಲ. ನಿಮ್ಮ ಸ್ಟೇಟಸ್ಗೆ ಒಬ್ಬಾತ ದಿನೇಶ್ ಅವರ ದೇಹವನ್ನು ಸೀಳಿ, ಸಿದ್ಧರಾಮಯ್ಯ ಅವರ ಕೊರಳಿಗೆ ನೇತುಹಾಕಬೇಕು ಎಂದು ಕಮೆಂಟು ಬರೆಯುತ್ತಾನೆ. ನೀವು ಅದನ್ನು ಡಿಲೀಟ್ ಮಾಡುವ ಗೋಜಿಗೂ ಹೋಗುವುದಿಲ್ಲ. ಹೀಗೆಲ್ಲ ಬರೀಬೇಡ್ರಪ್ಪ ಎಂದು ನೀವು ಮನವಿ ಮಾಡಿದರೆ, ರಾಕೇಶ್ ಸಿದ್ಧರಾಮಯ್ಯ ತೀರಿಕೊಂಡಾಗ ಸಾವಿನ ಸಂಭ್ರಮ ಕೂಡದು ಎಂದು ಬರೆದ ಮಾಜಿ ಮುಖ್ಯಮಂತ್ರಿ ಶ್ರೀ ಸದಾನಂದಗೌಡರ ಮೇಲೆ ನಡೆದ ಅಕ್ಷರದಾಳಿಯೇ ನಿಮ್ಮ ಮೇಲೂ ನಡೆಯುತ್ತದೆ. ಯಾಕೆಂದರೆ ಈ ಹುಚ್ಚುಪಡೆಯ ವಿಕಾರಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಲೇ ಇದೆ. ಈ ಪಡೆಗೆ ಇವತ್ತು ಅಮೀನ್ ಮಟ್ಟು ಅವರು ಗುರಿ, ನಾಳೆ ಸ್ವತಃ ನರೇಂದ್ರ ಮೋದಿಯವರೇ ಆದರೂ ಆಶ್ಚರ್ಯವಿಲ್ಲ. ನಮಗೆ ಕನಿಕರ ಹುಟ್ಟಬೇಕಿರುವುದು ನಮ್ಮ ಬಗ್ಗೆಯೇ ಸರ್. ಇಂಥ ವಿಷವನ್ನು ಸಮಾಜದಲ್ಲಿ ಹರಡುತ್ತ ಹೋದ ನಮ್ಮ ಬೇಜವಾಬ್ದಾರಿಯ ಕುರಿತು.

ನಮ್ಮ ಮೌನವೇ ನಮ್ಮಲ್ಲಿ ಅಸಹ್ಯವನ್ನು ಹುಟ್ಟಿಸಬೇಕು ಸರ್. ಡಾ.ಯು.ಆರ್.ಅನಂತಮೂರ್ತಿ, ಡಾ.ಎಂ.ಎಂ.ಕಲ್ಬುರ್ಗಿ, ರಾಕೇಶ್ ಸಿದ್ಧರಾಮಯ್ಯ ಅವರುಗಳು ತೀರಿಕೊಂಡಾಗ ಈ ವರ್ಚುಯಲ್ ಜಗತ್ತಿನಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಬರಬರುತ್ತ ಇದೊಂದು ಟ್ರೆಂಡ್ ಖಾಯಂ ಆಗಿ ಜಾರಿಯಲ್ಲಿರಲಿದೆ. ನಿಮ್ಮಂಥವರು ಇಂಥ ಸಂದರ್ಭಗಳಲ್ಲಿ ಮೌನಕ್ಕೆ ಶರಣಾಗುತ್ತೀರಿ, ಯಾಕೆಂದರೆ ನೀವೂ ಕೂಡ ಸದಾನಂದಗೌಡರ ಹಾಗೆ ದಾಳಿಗೆ ಒಳಗಾಗುವ ಭೀತಿಯಲ್ಲಿರಬಹುದು. ಆದರೂ ನನ್ನದೊಂದು ಮನವಿ. ಈ ವಿಕಾರಗಳ ಕುರಿತು ಯಾವಾಗಲಾದರೂ ಮಾತನಾಡಿ ಸರ್; ಪಕ್ಷ-ಸಂಸ್ಥೆ-ಸಿದ್ಧಾಂತಗಳಿಂದ ಆಚೆ ಬಂದು.

ನೀವು ರಾಜಕಾರಣದಲ್ಲಿ ಇದ್ದರೂ ಮಾನವೀಯ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಬಲ್ಲವರು ಎನ್ನುವ ಕಾರಣಕ್ಕೆ ಇಷ್ಟನ್ನು ಬರೆದಿದ್ದೇನೆ. ಉತ್ತರಿಸುತ್ತೀರಿ ಎಂಬ ನಿರೀಕ್ಷೆಗಳೇನೂ ಇಲ್ಲ.

ಸಾವಿತ್ರಿ ಮೇಡಂಗೆ ನನ್ನ ನಮಸ್ಕಾರಗಳನ್ನು ತಿಳಿಸಿ.

ಪ್ರೀತಿಯಿಂದ

ದಿನೇಶ್ ಕುಮಾರ್ ಎಸ್.ಸಿ. (ದಿನೂ)

(ಇದು ಲೇಖಕರು ಗುರುವಾರ ಬರೆದ ಫೇಸ್ ಬುಕ್ ಪೋಸ್ಟ್ )

 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top