---

ಸೀಮಿತ ಐತಿಹಾಸಿಕ ಪ್ರಜ್ಞೆ ಮತ್ತು ಕೆಂಪೇಗೌಡನ ಸಮಾಧಿ

ಸಾಮಾನ್ಯವಾಗಿ ಕೆಲವು ಪ್ರದೇಶಗಳ ಹೆಸರುಗಳನ್ನು ಕೇಳಿದ ಕೂಡಲೇ ಅವುಗಳ ಜೊತೆಗೆ ಬೆಸೆದುಕೊಂಡ ಐತಿಹಾಸಿಕ ವ್ಯಕ್ತಿಗಳು ನಮ್ಮ ಕಣ್ಮುಂದೆ ಬರುತ್ತಾರೆ. ಹಂಪೆ ಎಂದರೆ ಕೃಷ್ಣದೇವರಾಯ, ಕಿತ್ತೂರು ಎಂದರೆ ಚನ್ನಮ್ಮ, ಚಿತ್ರದುರ್ಗ ಎಂದರೆ ಮದಕರಿ ನಾಯಕ, ಶ್ರೀರಂಗಪಟ್ಟಣ ಎಂದರೆ ಟಿಪ್ಪು ಸುಲ್ತಾನ್, ಮಾಗಡಿ ಎಂದರೆ ಕೆಂಪೇಗೌಡ ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಐತಿಹಾಸಿಕ ವ್ಯಕ್ತಿಗಳ ಸಂಬಂಧವನ್ನು ನಿರ್ದಿಷ್ಟ ಸ್ಥಳದ ಜೊತೆಗೆ ತಳಕುಹಾಕುವುದು ಜನಸಾಮಾನ್ಯರ ಸಹಜ ತಿಳುವಳಿಕೆಯಾಗಿದೆ. ಇದನ್ನು ‘ಸೀಮಿತ ಐತಿಹಾಸಿಕ ಪ್ರಜ್ಞೆ’ ಎಂದು ಕರೆಯಬಹುದು. ನಿಶ್ಚಿತ ಪರಿಸರದಲ್ಲಿ ದೊರೆಯುವ ಯಾವುದೇ ಅವಶೇಷಗಳನ್ನು ಆ ಪ್ರದೇಶಕ್ಕೆ ಸಂಬಂಧಿಸಿದ ಐತಿಹಾಸಿಕ ವ್ಯಕ್ತಿಗಳೊಂದಿಗೆ ತಳುಕು ಹಾಕುವುದು ಜನರ ಸಹಜ ಸ್ವಭಾವವಾಗಿರುತ್ತದೆ. ಅಂದರೆ ಮಾಗಡಿ ಮತ್ತು ಬೆಂಗಳೂರು ಪರಿಸರದಲ್ಲಿ ಯಾವುದೇ ಸ್ಮಾರಕ ದೊರೆತರೆ ಅದು ಕೆಂಪೇಗೌಡ ಕಟ್ಟಿದ್ದು; ಚಿತ್ರದುರ್ಗ ಪರಿಸರದಲ್ಲಿ ಖಡ್ಗ ಸಿಕ್ಕರೆ ಅದು ಮದಕರಿ ನಾಯಕನದು; ಶ್ರೀರಂಗಪಟ್ಟಣದ ಪರಿಸರದಲ್ಲಿ ಫಿರಂಗಿ ದೊರೆತರೆ ಅದು ಟಿಪ್ಪು ಸುಲ್ತಾನನದು... ಹೀಗೆ ಜನರು ಕಣ್ಮಚ್ಚಿ ಹೇಳಿಬಿಡುತ್ತಾರೆ. ಏಕೆಂದರೆ ಆ ಪ್ರದೇಶಗಳೊಂದಿಗೆ ಬೆಸೆದುಕೊಂಡಿರುವ ವ್ಯಕ್ತಿಗಳನ್ನು ಹೊರತುಪಡಿಸಿ ಮತ್ತಾವ ಐತಿಹಾಸಿಕ ವ್ಯಕ್ತಿಗಳ ಪರಿಚಯ ಅವರಿಗಿರುವುದಿಲ್ಲ. ಈ ‘ಸೀಮಿತ ಐತಿಹಾಸಿಕ ಪ್ರಜ್ಞೆ’ಯು ಇತಿಹಾಸಕಾರರ ಐತಿಹಾಸಿಕ ಪ್ರಜ್ಞೆಯನ್ನು ಕೂಡ ಸೀಮಿತಗೊಳಿಸಿದ ನಿದರ್ಶನಗಳಿವೆ! ಅದಕ್ಕೆ ಒಂದು ಉದಾಹರಣೆ ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ದೊರೆತ ಸ್ಮಾರಕ. 2015ರಲ್ಲಿ ಬೆಳಕಿಗೆ ಬಂದ ಕೆಂಪಾಪುರದ ಸ್ಮಾರಕದ ಮೇಲೆ ಒಂದು ಸಾಲಿನ ಶಾಸನ ಕೂಡ ಇದೆ. ಅದು ಹೀಗಿದೆ: ‘‘ಹಿರಿಯ ಕೆಂಪೆಯಗಉಡರಯ್ಯನ ವರು ಕುಣಿಗಿಲಿಂದ ಬಂದು ಯಿ ಬಳಿಯ ಜಗಳವಂನು ಮಾಡಿ ಅಯಿಕ್ಯವಾಗಿ ಕೈಲಾಸಕೆ ಹೋದಸ್ತಳ’’.

ಈ ಶಾಸನದಲ್ಲಿ ಹಿರಿಯ ಕೆಂಪೇಗೌಡ ಎಂದು ಇರುವುದರಿಂದ ಇದು ಬೆಂಗಳೂರು ಕಟ್ಟಿದ ಕೆಂಪೇಗೌಡನ ಸಮಾಧಿ ಎಂದು ಜನಸಾಮಾನ್ಯರಾದಿಯಾಗಿ ಬಹುತೇಕ ಇತಿಹಾಸಕಾರರು ಕೂಡ ಘೋಷಿಸಿಯೇ ಬಿಟ್ಟರು! ಆದರೆ ಬೆಂಗಳೂರು ಕೆಂಪೇಗೌಡನ ಮನೆತನದಲ್ಲಿ ಅವನ ಹೆಸರಿನಿಂದಲೇ ಬರುವ ಎಂಟು ಮಂದಿ ಇದ್ದರು ಎಂಬುದನ್ನು ಮರೆತೇಬಿಟ್ಟರು!! ಬಿ.ಬಿ.ಎಂ.ಪಿ. ನೇಮಿಸಿದ ತಜ್ಞರ ಸಮಿತಿ ಕೂಡ ಯಾವುದೇ ವಿಮರ್ಶೆಗೆ ಮುಂದಾಗದೆ ಇದೆಲ್ಲ ಹಿರಿಯ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಇದು ಕೆಂಪೇಗೌಡರ ವೀರ ಸಮಾಧಿ ಸ್ಮಾರಕ!!! ಎಂದು ವರದಿ ನೀಡುವ ತನ್ನ ಮೂಲಕ ‘ಸೀಮಿತ ಐತಿಹಾಸಿಕ ಪ್ರಜ್ಞೆ’ಯನ್ನು ಪ್ರದರ್ಶಿಸಿತು. ಈ ವರದಿಯನ್ನು ವಿಮರ್ಶಿಸುತ್ತಲೇ ಅಧ್ಯಯನದ ಆಳಕ್ಕೆ ಇಳಿದ ನನಗೆ ‘‘ಇದು ಬೆಂಗಳೂರು ಕಟ್ಟಿದ ಕೆಂಪೇಗೌಡನ ಸಮಾಧಿಯಲ್ಲ; ಬದಲಿಗೆ ಕುಣಿಗಲ್‌ನಿಂದ ಆಳುತ್ತಿದ್ದ ಅವನ ಮೊಮ್ಮಗ ಇಮ್ಮಡಿ ಹಿರಿಯ ಕೆಂಪೇಗೌಡನ ಸಮಾಧಿ’’ ಎಂಬುದಾಗಿ ತೋರಿತು. ಆ ಅಧ್ಯಯನದ ಸಂಕ್ಷಿಪ್ತ ರೂಪವೇ ಈ ಬರವಣಿಗೆಯಾಗಿದೆ.

ಚಾರಿತ್ರಿಕ ಹಿನ್ನೋಟ: ಯಲಹಂಕ ನಾಡಪ್ರಭುಗಳ ಮನೆತನವು ರಣಭೈರೇಗೌಡನಿಂದ ಆರಂಭವಾಯಿತೆಂದು ನಂಬಲಾಗಿದೆ. ಈ ಮನೆತನದಲ್ಲಿ ಮುಂದೆ ಜಯಗೌಡ, ಗಿಡ್ಡೇಗೌಡ, ಕೆಂಪನಾಚೇ(ನಂಜೇ)ಗೌಡ ಮೊದಲಾದವರು ಆಳಿದರೆಂದು ಹೇಳಲಾಗುತ್ತದೆ. ಬೆಂಗಳೂರು ಕೆಂಪೇಗೌಡ: ಕೆಂಪನಾಚೇ(ನಂಜೇ)ಗೌಡನ ಮಗನೇ ಬೆಂಗಳೂರು ಕೆಂಪೇಗೌಡ. ಅವನು ಹೊಸ ಬೆಂಗಳೂರು ಪಟ್ಟಣವನ್ನು 1537ರಲ್ಲಿ ಸ್ಥಾಪಿಸಿದ್ದರಿಂದ ಮುಂದೆ ಬೆಂಗಳೂರು ಕೆಂಪೇಗೌಡನೆಂದೇ ಪ್ರಸಿದ್ಧನಾದನು. ಅವನ ನಂತರ ಯಲಹಂಕ ನಾಡಪ್ರಭುಗಳ ಮನೆತನದಲ್ಲಿ ಹಲವು ಮಂದಿ ಕೆಂಪೇಗೌಡ ಹೆಸರಿನಿಂದಲೇ ಅಧಿಕಾರಕ್ಕೆ ಬಂದರು. ಆದ್ದರಿಂದ ಬೆಂಗಳೂರು ಕೆಂಪೇಗೌಡನನ್ನು ಹಿರಿಯ ಕೆಂಪೇಗೌಡನೆಂದೂ ಗುರುತಿಸಲಾರಂಭಿಸಿದರು. ಹಿರಿಯ ಕೆಂಪೇಗೌಡನು 1532 ರಿಂದ 1597ರವರೆಗೆ ಆಳಿದ ಬಗೆಗೆ ಶಾಸನ ಮತ್ತು ಸಮಕಾಲೀನ ಸಾಹಿತ್ಯಗಳು ಸುಳುಹುಗಳನ್ನು ನೀಡುತ್ತವೆ. ಅವನು ಸುಮಾರು ನೂರು ವರ್ಷಗಳ ಕಾಲ ಬದುಕಿದ್ದನೆಂದು ಶಾಸನಗಳ ಆಧಾರದ ಮೇಲೆ ನಿರ್ಧರಿಸಬಹುದಾಗಿದೆ.

ಇಮ್ಮಡಿ ಕೆಂಪೇಗೌಡ: ಹಿರಿಯ ಕೆಂಪೇಗೌಡನ ನಂತರ ಇಮ್ಮಡಿ ಕೆಂಪೇಗೌಡನ ಆಳ್ವಿಕೆ 1597ರಿಂದ ಆರಂಭವಾಯಿತು. 1639ರಲ್ಲಿ ಬಿಜಾಪುರದ ದಂಡನಾಯಕ ರಣದುಲ್ಲಾಖಾನ್ ಬೆಂಗಳೂರನ್ನು ಆಕ್ರಮಿಸಿಕೊಂಡ ನಂತರ ಮಾಗಡಿ ಮತ್ತು ಕುಣಿಗಲ್ ಪ್ರಾಂತಗಳತ್ತ ಸರಿದ ಇಮ್ಮಡಿ ಕೆಂಪೇಗೌಡನು ಮಾಗಡಿಯಲ್ಲಿ ನೆಲದುರ್ಗವನ್ನು ನಿರ್ಮಿಸಿ ಆಳಲಾರಂಭಿಸಿದನು. ಆದ್ದರಿಂದಲೇ ಅವನನ್ನು ಮಾಗಡಿ ಕೆಂಪೇಗೌಡನೆಂದು ಕರೆಯಲಾಗಿದೆ. ಇಮ್ಮಡಿ ಕೆಂಪೇಗೌಡನಿಗೆ ಇಬ್ಬರು ಮಡದಿಯರು. ಕೆಂಪಮ್ಮನಲ್ಲಿ ಮುಮ್ಮಡಿ ಕೆಂಪೇಗೌಡ ಮತ್ತು ಹಲಸ ಎಂಬ ಮಕ್ಕಳು ಜನಿಸಿದರೆ, ಲಿಂಗಮ್ಮನಲ್ಲಿ ಇಮ್ಮಡಿ ಹಿರಿಯ ಕೆಂಪೇಗೌಡ ಜನಿಸಿದ (ವಂಶವೃಕ್ಷ ನೋಡಿ). ಮುಂದೆ ಮಾಗಡಿ ಪ್ರಾಂತವನ್ನು ಮುಮ್ಮಡಿ ಕೆಂಪೇಗೌಡ ಮತ್ತು ಕುಣಿಗಲ್ ಪ್ರಾಂತವನ್ನು ಇಮ್ಮಡಿ ಹಿರಿಯ ಕೆಂಪೇಗೌಡ ಆಳಲಾರಂಭಿಸಿದರು. ಇಮ್ಮಡಿ ಹಿರಿಯ ಕೆಂಪೇಗೌಡ: ಇಮ್ಮಡಿ ಹಿರಿಯ ಕೆಂಪೇಗೌಡನ ಸಾಧನೆಗಳೆಲ್ಲವನ್ನೂ ತಾತನಾದ ಹಿರಿಯ ಕೆಂಪೇಗೌಡನಿಗೆ ಆರೋಪಿಸುವ ಮೂಲಕ ಇವನಿಗೆ ಚರಿತ್ರೆಯಲ್ಲಿ ಅನ್ಯಾಯವೆಸಗಲಾಗಿದೆ. ಕುಣಿಗಲ್‌ನಿಂದ ಆಳುತ್ತಿದ್ದ ಇಮ್ಮಡಿ ಹಿರಿಯ ಕೆಂಪೇಗೌಡನ ವ್ಯಕ್ತಿತ್ವವನ್ನು ನಿರೂಪಿಸುವ ಕೆಲವೇ ಕೆಲವು ಶಾಸನ ಮತ್ತು ಸಾಹಿತ್ಯಾಧಾರಗಳಿವೆ. ಸಾಹಿತ್ಯಾಧಾರಗಳಲ್ಲಿ ಏಕಾಂಬರ ದೀಕ್ಷಿತನ ‘ವೀರಭದ್ರ ವಿಜಯ’, ಗೋವಿಂದ ವೈದ್ಯನ ‘ಕಂಠೀರವ ನರಸರಾಜ ವಿಜಯ’ ಪ್ರಮುಖವಾದವು.

ಕುಣಿಗಲ್‌ನಿಂದ ಇಮ್ಮಡಿ ಹಿರಿಯ ಕೆಂಪೇಗೌಡನು ಆಳ್ವಿಕೆ ಆರಂಭಿಸಿದ್ದರಿಂದ ಅವನನ್ನು ಕುಣಿಗಲ್ ಕೆಂಪೇಗೌಡನೆಂದು ‘ಕಂಠೀರವ ನರಸರಾಜ ವಿಜಯ’ದಲ್ಲಿ ಕರೆಯಲಾಗಿದೆ. ‘ವೀರಭದ್ರ ವಿಜಯ’ದಲ್ಲಿ ಇವನನ್ನು ಅಪ್ರತಿಮ ವೀರ ಮಾತ್ರವಲ್ಲ; ಪ್ರಬುದ್ಧ ಕವಿಯೂ ಆಗಿದ್ದನೆಂದು ಹೇಳಿದೆ. ತೆಲುಗಿನಲ್ಲಿರುವ ‘ಗಂಗಾಗೌರಿ ವಿಲಾಸಮು’ ಕೃತಿಯನ್ನು ಬರೆದಿರುವವನು ಇಮ್ಮಡಿ ಹಿರಿಯ ಕೆಂಪೇಗೌಡನೇ ವಿನಃ ಹಿರಿಯ ಕೆಂಪೇಗೌಡನಲ್ಲ. ಏಕೆಂದರೆ, ಹಿರಿಯ ಕೆಂಪೇಗೌಡ ವಿದ್ವಾಂಸನಾಗಿದ್ದ ಎನ್ನುವುದಕ್ಕೆ ಯಾವ ಆಕರಗಳೂ ಇಲ್ಲ.

ಇಮ್ಮಡಿ ಹಿರಿಯ ಕೆಂಪೇಗೌಡನು ಹುಲಿಯೂರಿನ ಕುಂಭಿ ಬೆಟ್ಟದಲ್ಲಿ ಕೋಟೆಯನ್ನು ನಿರ್ಮಿಸಿದ. ಆನಂತರ ಅದು ಹುಲಿಯೂರುದುರ್ಗ ಎಂದಾಯಿತು. ಅದೇ ರೀತಿಯಲ್ಲಿ ಹುತ್ರಿದುರ್ಗದ ಕೋಟೆ ಕೂಡ ಇವನ ಕಾಲದಲ್ಲಿ ಅಭಿವೃದ್ಧಿ ಹೊಂದಿರಬಹುದು. ಇಮ್ಮಡಿ ಹಿರಿಯ ಕೆಂಪೇಗೌಡನ ಧರ್ಮಪತ್ನಿ ವೆಂಕಟಕೃಷ್ಣಾಜಮ್ಮ. ಈಕೆಯು ಕುಣಿಗಲ್‌ನಲ್ಲಿ ಅಗ್ರಹಾರ ಮಾಡಿಸಿ, ಕುಣಿಗಲ್ ದೊಡ್ಡಕೆರೆಯ ಹಿಂದಿನ ಗದ್ದೆ ಮತ್ತು ಹೊಲಗಳನ್ನು ಬ್ರಾಹ್ಮಣರಿಗೆ ದಾನ ನೀಡಿದಳೆಂದು ಪಟ್ಟಣದ ಕೃಷ್ಣಸಾಗರ ಅಗ್ರಹಾರದಲ್ಲಿರುವ ಶಾಸನವು ತಿಳಿಸುತ್ತದೆ. ಅದೇ ರೀತಿ ಹುಲಿಯೂರುದುರ್ಗದಲ್ಲಿ ಅವನ ಉಪಪತ್ನಿಯಾದ ಪಟ್ಟದ ನಾಟಕ ಶಾಲೆಯ ಶೃಂಗಾರಮ್ಮ ಎಂಬಾಕೆಯು ಶೃಂಗಾರಸಾಗರ ಎಂಬ ಅಗ್ರಹಾರ, ಕೆರೆ ಮತ್ತು ಬಸವ ಮಂಟಪವನ್ನು ಮಾಡಿಸಿದ ಬಗೆಗೆ ಶಾಸನಗಳು ತಿಳಿಸುತ್ತವೆ. ಪರಾಕ್ರಮಿಯಾದ ಇಮ್ಮಡಿ ಹಿರಿಯ ಕೆಂಪೇಗೌಡನ ಅಂತ್ಯ ಕೂಡ ಅಷ್ಟೇ ಸ್ವಾಭಿಮಾನಯುತವಾಗಿತ್ತು. ಕುಣಿಗಲ್ ನಾಡಿನ ಮೇಲೆ ದಂಡೆತ್ತಿ ಬಂದ ಮೈಸೂರ ದಳವಾಯಿ ದೊಡ್ಡಯ್ಯ ಮತ್ತು ಇಮ್ಮಡಿ ಹಿರಿಯ ಕೆಂಪೇಗೌಡನ ನಡುವೆ ಕದನ ಜರುಗಿತು. ಇಮ್ಮಡಿ ಹಿರಿಯ ಕೆಂಪೇಗೌಡನು ಸೋಲನ್ನಪ್ಪುವ ಮುನ್ನ ತನ್ನನ್ನು ತಾನು ಇರಿದುಕೊಂಡನು. ಅವನ ಪರಾಕ್ರಮ ಮತ್ತು ಸ್ವಾಭಿಮಾನಕ್ಕೆ ಮಾರುಹೋದ ದಳವಾಯಿಯು ಕೆಂಪೇಗೌಡನನ್ನು ಸಂತೈಸಿದನಾದರೂ ಬದುಕಿಸಿಕೊಳ್ಳಲಾಗಲಿಲ್ಲ. ಕೊನೆಗೆ ದಳವಾಯಿಯು ಸಮೀಪದ ಮಾವಿನ ತೋಪಿನಲ್ಲಿ ಶವಸಂಸ್ಕಾರಮಾಡಿ, ಗೋರಿ ಕಟ್ಟಿಸಿದ ಬಗೆಗೆ ಲಾವಣಿಗಳು ಮಾಹಿತಿ ನೀಡುತ್ತವೆ. ಇದೇ ಪ್ರಸ್ತುತ ಪತ್ತೆಯಾಗಿರುವ ಸಮಾಧಿ ಎಂಬುದು ನನ್ನ ವಾದ. ಕೆಂಪಾಪುರದಲ್ಲಿ ಪತ್ತೆಯಾಗಿರುವ ಸಮಾಧಿಯ ಮೇಲಿನ ಶಾಸನದಲ್ಲಿ ಹಿರಿಯ ಕೆಂಪೇಗೌಡನು ಕುಣಿಗಲಿಂದ ಬಂದು ಇಲ್ಲಿ ಜಗಳ(ಕದನ)ವನ್ನು ಮಾಡಿ ಐಕ್ಯವಾಗಿ ಕೈಲಾಸಕ್ಕೆ ಹೋದನೆಂದು ಹೇಳುತ್ತದೆ. ಈ ಸಮಾಧಿ ಶಾಸನದಲ್ಲಿ ಉಲ್ಲೇಖಿಸಿರುವ ಹಿರಿಯ ಕೆಂಪೇಗೌಡ ಬೇರಾರೂ ಅಲ್ಲ; ಅವನೇ ಕುಣಿಗಲ್‌ನಿಂದ ಆಳುತ್ತಿದ್ದ ಇಮ್ಮಡಿ ಹಿರಿಯ ಕೆಂಪೇಗೌಡ. ಈ ಬಗ್ಗೆ ಕೆಲವು ತಾರ್ಕಿಕ ಪ್ರಶ್ನೆಗಳನ್ನು ಎತ್ತಬೇಕು. ಮುಖ್ಯವಾಗಿ-

ಹಿರಿಯ (ಬೆಂಗಳೂರು) ಕೆಂಪೇಗೌಡ 100ನೇ ವಯಸ್ಸಿನಲ್ಲಿಯೂ ಬದುಕಿದ್ದ ಎಂಬುದಕ್ಕೆ ಶಿವಗಂಗೆಯ ಶಾಸನವೊಂದರಿಂದ ಸ್ಪಷ್ಟವಾಗುತ್ತದೆೆ. ನೂರರ ಆಸುಪಾಸು ಯುದ್ಧ ಮಾಡುವ ವಯಸ್ಸಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮಿಗಿಲಾಗಿ ಆ ಹೊತ್ತಿಗೆ ಅವನ ಮಗ ಇಮ್ಮಡಿ ಕೆಂಪೇಗೌಡ ಅಧಿಕಾರಕ್ಕೆ ಬಂದಿದ್ದನಾದ್ದರಿಂದ ವೃದ್ಧ ಕೆಂಪೇಗೌಡ ಕಾದಾಡುವ ಪ್ರಮೇಯ ಬರುವುದೇ ಇಲ್ಲ.

ಹಿರಿಯ ಕೆಂಪೇಗೌಡನ ರಾಜಧಾನಿ ಬೆಂಗಳೂರು. ಆದರೆ ಶಾಸನದಲ್ಲಿ ಕುಣಿಗಲ್‌ನಿಂದ ಬಂದು ಜಗಳ(ಕದನ) ಮಾಡಿದ ಬಗ್ಗೆ ತಿಳಿಸುತ್ತದೆ. ಸಮಾಧಿ ಸ್ಥಳವಿರುವ ಕೆಂಪಾಪುರ ಬೆಂಗಳೂರು  ಕುಣಿಗಲ್ ಮಾರ್ಗ ಮಧ್ಯೆ ಇದೆ. ಹಾಗಾದರೆ, ಕುಣಿಗಲ್‌ನಲ್ಲಿ ಆಳುತ್ತಿದ್ದ ಕೆಂಪೇಗೌಡನ ಹೆಸರಿನ ಮತ್ತೊಬ್ಬನು ಬಂದು ಕದನವಾಡಿರಬೇಕು ಎಂಬ ತರ್ಕಕ್ಕೆ ಬರಬೇಕಾಗುತ್ತದೆ.

 ಸಾಮಾನ್ಯವಾಗಿ ತಾತನ ಹೆಸರನ್ನು ಮೊಮ್ಮಕ್ಕಳಿಗೆ ಇಡುವ ರೂಢಿ ಇರುವುದರಿಂದ ಹಿರಿಯ ಕೆಂಪೇಗೌಡನ ಹೆಸರನ್ನೆ ಇಮ್ಮಡಿ ಹಿರಿಯ ಕೆಂಪೇಗೌಡನಿಗೆ ಇಡಲಾಗಿದೆ. ಒಂದೇ ಹೆಸರಿನ ಹಲವು ವ್ಯಕ್ತಿಗಳಿದ್ದಾಗ ಗುರುತಿಸುವ ಸಲುವಾಗಿ ಇಮ್ಮಡಿ, ಮುಮ್ಮಡಿ ಮುಂತಾದ ಸಂಖ್ಯಾವಾಚಕಗಳನ್ನು ಪ್ರಯೋಗಿಸುವುದುಂಟು. ಆದರೆ ಅದನ್ನು ಸಾದಾ ರೂಢಿಯಲ್ಲಿ ಬಳಸುವುದಿಲ್ಲ. ಆದ್ದರಿಂದ ಇಮ್ಮಡಿ ಹಿರಿಯ ಕೆಂಪೇಗೌಡನನ್ನು ಶಾಸನದಲ್ಲಿ ‘ಹಿರಿಯ ಕೆಂಪೇಗೌಡ’ ಎಂದಷ್ಟೇ ಕರೆದಿರುವುದರಲ್ಲಿ ವಿಶೇಷ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ.

 ಮೈಸೂರಿನ ದಳವಾಯಿ ಮತ್ತು ಇಮ್ಮಡಿ ಹಿರಿಯ ಕೆಂಪೇಗೌಡನ ನಡುವಿನ ಕದನವು 1660ರ ದಶಕದ ಆರಂಭಿಕ ವರ್ಷಗಳಲ್ಲಿ ಸಂಭವಿಸಿರುವಂತೆ ಲಾವಣಿ ಮತ್ತು ಶಾಸನಗಳ ವಿಶ್ಲೇಷಣೆ ಹಾಗೂ ಸಮಕಾಲೀನ ಚರಿತ್ರೆಯ ಅಧ್ಯಯನಗಳಿಂದ ತಿಳಿಯುತ್ತದೆ.

ಸಮಾಧಿ ಸ್ಮಾರಕದ ಮೇಲಿರುವ ಶಾಸನದ ಲಿಪಿ ಕೂಡ 17ನೆಯ ಶತಮಾನಕ್ಕೆ ಸರಿಹೊಂದುವುದರಿಂದ ಇದು ಇಮ್ಮಡಿ ಹಿರಿಯ ಕೆಂಪೇಗೌಡನಿಗೆ ಸಮೀಕರಿಸಬಹುದೇ ವಿನಃ ಹಿರಿಯ ಕೆಂಪೇಗೌಡನ ಕಾಲಕ್ಕೆ ಅಲ್ಲ.

ಒಟ್ಟಾರೆ, ಕೆಂಪಾಪುರದ ಸಮಾಧಿ ಸ್ಮಾರಕ ಕುಣಿಗಲ್‌ನಿಂದ ಆಳುತ್ತಿದ್ದ ಇಮ್ಮಡಿ ಹಿರಿಯ ಕೆಂಪೇಗೌಡನಿಗೆ ಸಂಬಂಧಿಸಿದ್ದಾಗಿದೆಯೇ ಹೊರತು ಬೆಂಗಳೂರು ಕೆಂಪೇಗೌಡನಿಗಲ್ಲ. ಯಾವುದೇ ಐತಿಹಾಸಿಕ ಘಟನೆಯನ್ನು ವಿವಿಧ ಆಕರ ಮೂಲಗಳ ಸಹಾಯದಿಂದ ಅಂತರ್‌ಶಿಸ್ತೀಯ ಅಧ್ಯಯನ ನಡೆಸಿದಾಗ ಮಾತ್ರ ಚರಿತ್ರೆಯ ವಾಸ್ತವಾಂಶವನ್ನು ಗ್ರಹಿಸಲು ಸಾಧ್ಯವಿರುತ್ತದೆಯೇ ವಿನಃ ಸೀಮಿತ ಐತಿಹಾಸಿಕ ಪ್ರಜ್ಞೆಯಿಂದ ಅಲ್ಲ. ಮುಖ್ಯವಾಗಿ ಈ ಎಚ್ಚರ ಇತಿಹಾಸಕಾರರಿಗೆ ಇರಬೇಕಾಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top