ಶತಮಾನದ ವಿಸ್ಮಯ ಡಾಪುರಿ ಡ್ರಾಯಿಂಗ್ಸ್ | Vartha Bharati- ವಾರ್ತಾ ಭಾರತಿ

ಶತಮಾನದ ವಿಸ್ಮಯ ಡಾಪುರಿ ಡ್ರಾಯಿಂಗ್ಸ್

ಹೂವು ಪ್ರಕೃತಿಯ ಒಂದು ಅನನ್ಯ ಕೊಡುಗೆ. ಹೂವು ಸೃಷ್ಟಿಶೀಲತೆಯ ಸಂಕೇತ. ಇಂಥ ವರ್ಣಮಯ, ಪರಿಮಳ ಭರಿತ ಹೂಗಳನ್ನು ಬೆಳೆಯುವುದು ನಮ್ಮಲ್ಲಿ ಅನೂಚಾನವಾಗಿ ನಡೆದು ಬಂದಿದೆ. ಒಂದು ದೊಡ್ಡ ಉದ್ಯಾನವನವೇ ಆಗಲಿ ಅಥವಾ ನಮ್ಮ ಮನೆ ಸುತ್ತಲೂ ನಾವು ಕೈಯಾರೆ ಬೆಳೆಸುವ ಫಲಪುಷ್ಪಗಳ ಕೈ ತೋಟವೇ ಆಗಲಿ ಅವುಗಳ ನಿರ್ಮಾಣದ ಪ್ರಥಮ ಉದ್ದೇಶ ಆನಂದ. ಉಳಿದ ಪ್ರಯೋಜನಗಳು ನಂತರ. ಹೀಗಿರುವಾಗ ಹೂ ಸಸ್ಯಗಳ ಬಗ್ಗೆ ಈ ಲೇಖನದಲ್ಲಿ ಏನಿರಬಹುದೆಂಬ ಕುತೂಹಲದಿಂದ ನೋಡ ಹೊರಟಾಗ, ‘‘ಇದೇನಿದು ಡಾಪುರಿ ಎಂದರೆ? ಎಂದು ನಿಮಗೆ ಅನ್ನಿಸಬ ಹುದು. ವರ್ತಮಾನದಲ್ಲಿ ಗಿಡಮರ ಬಳ್ಳಿಗಳ ಬಗ್ಗೆ ಆಸಕ್ತರಾಗಿರುವ ನಿಮಗೆ ಹಿಂದೆ ನಮ್ಮಲ್ಲಿ ಆಗಿಹೋದ ತೋಟಗಳು, ಅವುಗಳು ನಮಗೆ ಬೀರುತ್ತಿರುವ ವೌನ ಸಂದೇಶದ ಬಗ್ಗೆ ಹೇಳುವುದೇ ಈ ಲೇಖನದ ಉದ್ದೇಶವಾಗಿದೆ.

ಡಾಪುರಿ ಎಂದರೆ ಒಂದು ಕಾಲದಲ್ಲಿ ನಮ್ಮ ದೇಶದಲ್ಲೇ ಇದ್ದು ಇಂದು ಇಲ್ಲವಾಗಿರುವ ಒಂದು ತೋಟ. ಡಾಪುರಿ ತೋಟವೆಂದರೆ ಕಾಲದ ಪರೀಕ್ಷೆಯನ್ನು ಗೆದ್ದು ಇಂದಿಗೂ ಸರ್ವಾಂಗ ಸುಂದರವಾಗಿ ಕಂಗೊಳಿಸುತ್ತಿರುವ ಲಾಲ್‌ಬಾಗ್, ಶಾಲಿಮಾರ್ ಗಾರ್ಡನ್ ತರಹದ್ದಲ್ಲ. ಡಾಪುರಿ ತೋಟ ತಾನಿರುವವರೆಗೆ ಪ್ರಯೋಜನಕಾರಿಯಾಗಿದ್ದು, ಹಲವು ಜನ, ಚರಿತ್ರೆ, ಸಂಸ್ಕೃತಿಗಳನ್ನು ವೌನದ ಕಡಲಲ್ಲಿ ಅಡಗಿಸಿ, ಕಾಲಾನುಗತಿಯಲ್ಲಿ ಕಣ್ಮರೆಯಾದ ಒಂದು ಅಲ್ಪಾಯು ತೋಟ.

ಮಹಾರಾಷ್ಟ್ರದ ಪುಣೆ ನಗರದ ಸಮೀಪದ ಡಾಪೊಡಿಯಲ್ಲಿ ಅಂದಿನ ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ನಿವಾಸದ ಸುತ್ತ ರಚಿಸಲ್ಪಟ್ಟ ಉದ್ಯಾನವನವೇ ಡಾಪುರಿ ಬಟಾನಿಕಲ್ ಗಾರ್ಡನ್. ಈ ತೋಟದ ಅಸ್ತಿತ್ವ ಕೇವಲ ಮೂವತ್ತೇಳು ವರ್ಷಗಳ ಅವಧಿ ಮಾತ್ರ. ಅಲೆಗ್ಸಾಂಡರ್ ಗಿಬ್ಸನ್ ಎಂಬ ಈಸ್ಟ್ ಇಂಡಿಯಾ ಕಂಪೆನಿಯ ವೈದ್ಯ ಡಾಪುರಿ ತೋಟದ ಮೇಲ್ವಿಚಾರಕನಾಗಿದ್ದಾಗ ಚಿತ್ರಕಲಾವಿದರಿಂದ ಚಿತ್ರಿಸಿದ ಸಸ್ಯ ಚಿತ್ರಗಳು ಸ್ಕಾಟ್ಲೆಂಡಿನ ಎಡಿನ್‌ಬರಾದ ರಾಯೆಲ್ ಬಟಾನಿಕ್ ಗಾರ್ಡನ್ನಿಗೆ ಹೇಗೊ ಬಂದು ಸೇರಿ, ಸುಮಾರು ಒಂದೂವರೆ ಶತಮಾನಗಳಷ್ಟು ದೀರ್ಘ ಕಾಲ ಯಾರ ಕಣ್ಣಿಗೂ ಬೀಳದೆ ಕಾದು ಕುಳಿತು ಇತ್ತೀಚೆಗೆ ಎಡಿನ್‌ಬರಾ ತೋಟದ ಕ್ಯುರೇಟರ್ ಹಾಗೂ ಸಸ್ಯಶಾಸ್ತ್ರಜ್ಞ ಎಚ್.ಜೆ.ಹೆನ್ರಿ ನಾಲ್ಟಿಯವರಿಗೆ ಆಕಸ್ಮಿಕವಾಗಿ ಸಿಕ್ಕಿ ಬೆಳಕಿಗೆ ಬಂದ ಬಗೆ ನಿಜಕ್ಕೂ ಒಂದು ಕುತೂಹಲಕಾರಿ ಸಸ್ಯ ಪತ್ತೇದಾರಿ ಕಥೆಯೇ ಸರಿ. ಈ ಸಸ್ಯ ಚಿತ್ರಗಳು ‘ಡಾಪುರಿ ಡ್ರಾಯಿಂಗ್ಸ್’ ಎಂದೇ ಹೆಸರಾಗಿದೆ.

ಎಡಿನ್‌ಬರಾದ ರಾಯೆಲ್ ಬಟಾನಿಕ್ ಗಾರ್ಡನ್‌ನಲ್ಲಿ 1998ರಲ್ಲಿ ನಡೆದ ಒಂದು ಸಸ್ಯ ಪ್ರದರ್ಶನಕ್ಕಾಗಿ ಹೆನ್ರಿ ನಾಲ್ಟಿಯವರು ಅಲ್ಲಿನ ಸಸ್ಯಚಿತ್ರಗಳ ಸಂಗ್ರಹದಿಂದ ಕೆಲವು ಚಿತ್ರಗಳನ್ನು ಆರಿಸಿಕೊಳ್ಳುವಾಗ ‘ಬಟಾನಿಕ್ ಗಾರ್ಡನ್ಸ್’ ಎಂಬ ಶೀರ್ಷಿಕೆಯ ಒಂದು ಚಿತ್ರಗಳ ಕಟ್ಟು ಸಿಕ್ಕಿತು. ಇದರಿಂದ ಕೆಲವು ಚಿತ್ರಗಳನ್ನು ಆಯ್ದು ಪ್ರದರ್ಶಿಸಿ, ಅವುಗಳ ಸಂರಕ್ಷಣೆ, ಹೆಚ್ಚಿನ ಸಂಶೋಧನೆಗಳ ಅಗತ್ಯದ ಬಗ್ಗೆ ಬರೆದಿದ್ದರು. ಈ ಬಗ್ಗೆ ಆಸಕ್ತಿ ತಳೆದ ಶ್ರೀಮತಿ ದಿನ್‌ಶಾ (ಬಾಲ್ಯದಲ್ಲಿ ಪುಣೆ, ಮುಂಬೈಗಳಲ್ಲಿ ಬೆಳೆದವರು)ರವರ ಧನಸಹಾಯದಿಂದ ಹೆನ್ರಿ ನಾಲ್ಟಿಯವರು ನಡೆಸಿದ ಸಂಶೋಧನೆಯ ಫಲವಾಗಿ ಸುಮಾರು 150 ವರ್ಷಗಳ ಹಿಂದೆ ಅಲೆಗ್ಸಾಂಡರ್ ಗಿಬ್ಸನ್ ಈಸ್ಟ್ ಇಂಡಿಯಾ ಕಂಪೆನಿಯ ಸರ್ಜನ್ ಆಗಿ ಇಂಡಿಯಾಕ್ಕೆ ಬಂದು ನಿರ್ವಹಿಸಿದ ಅನೇಕ ಕಾರ್ಯಗಳು, ಅವನು ನಿರ್ಮಿಸಿದ ತೋಟ ಗಳು, ಬೆಳೆದ ಬೆಳೆಗಳು, ಅವನಿಂದ ನಿಯೋಜಿಸಲ್ಪಟ್ಟ ಅನಾಮಿಕ ಸಸ್ಯಕಲಾವಿದ ರಚಿಸಿದ ಸಸ್ಯಚಿತ್ರಗಳ ಕೊಡುಗೆ, ಗಿಬ್ಸನ್ನನ ಕಾಲದಲ್ಲಿ ಸಮೃದ್ಧವಾಗಿದ್ದ ಈಗ ಇಲ್ಲವಾಗಿರುವ ಡಾಪುರಿ ಮತ್ತು ಇನ್ನೂ ಕೆಲವು ಉದ್ಯಾನವನಗಳ ತೋಟಗಳ ಕಥೆ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಹೆನ್ರಿ ನಾಲ್ಟಿಯವರು ಇಂಡಿಯಾಕ್ಕೆ ಬಂದು ಮುಂಬೈ, ಪುಣೆ ಮತ್ತು ಗಿಬ್ಸನ್ ಒಂದು ಕಾಲದಲ್ಲಿ ಕಾರ್ಯ ನಿರ್ವಹಿಸಿದ ಅನೇಕ ಸ್ಥಳಗಳನ್ನು ಭೇಟಿಮಾಡಿ ಮಹಾರಾಷ್ಟ್ರ ಸ್ಟೇಟ್ ಆರ್ರ್ಕೇಡ್, ಲಂಡನ್‌ನ ಬ್ರಿಟಿಷ್ ಲೈಬ್ರರಿಯಲ್ಲಿರುವ ಗಿಬ್ಸನ್ನನ ಪತ್ರ ವ್ಯವಹಾರ ಮುಂತಾದ ಕಡತಗಳನ್ನು ಪರಿಶೀಲಿಸಿದಾಗ ಮೂಲತಃ ಸ್ಕಾಟ್ಲೆಂಡಿನ ಒಬ್ಬ ರೈತನ ಮಗನಾಗಿ ಹುಟ್ಟದ ಗಿಬ್ಸನ್ ಇಂಡಿಯಾಕ್ಕೆ ಸರ್ಜನ್ ಆಗಿ ಬಂದು ಇಲ್ಲಿಯೂ ತನಗೆ ಸಹಜವೆಂಬಂತೆ ಹೊಸ ಸಸ್ಯತಳಿಗಳನ್ನು ಬೆಳೆಸಿದ್ದು, ಕಬ್ಬು ಎಣ್ಣೆ ಕಾಳು ಇತರ ಬೆಳೆಗಳ ವ್ಯವಸಾಯ ಪ್ರಯೋಗ ನಿರತನಾಗಿ ರೈತರಿಗೆ ಸಹಾಯಕಾರಿಯಾಗಿದ್ದ ವಿಷಯಗಳ ತುಣುಕುಗಳನ್ನ ಸೇರಿಸಿ ಹೆಣೆದು ಗಿಬ್ಸನ್ ಮತ್ತವನ ಅನೇಕ ಸಾಧನೆಗಳಾದ ವ್ಯವಸಾಯ, ತೋಟ ಮುಂತಾದವುಗಳ ಒಂದು ಸಮಗ್ರ ಚಿತ್ರವನ್ನು ಹೆನ್ರಿ ನಾಲ್ಟಿಯವರು ಕಟ್ಟಿಕೊಟ್ಟಿದ್ದಾರೆ.

ಅಲೆಗ್ಸಾಂಡರ್ ಗಿಬ್ಸನ್ 1800ರಲ್ಲಿ ಸ್ಕಾಟ್ಲೆಂಡಿನ ಮಿಯೊರ್ನ್ಸ್ ಎಂಬಲ್ಲಿ ಪರಂಪರಾನುಗತ ರೈತ ದಂಪತಿಯ ಮಗನಾಗಿ ಹುಟ್ಟಿದ. ಗಿಬ್ಸನ್ ಅವರ ತಂದೆಯ ಮೂರನೆ ಹೆಂಡತಿಯ ಮಗ ಹಾಗೂ ಇಪ್ಪತ್ತನೆಯ ಸಂತಾನ! ಇವನ ತಂದೆ ಮರ್ಫಿ ಎಂಬ ಎಸ್ಟೇಟಿನ ಗೇಣಿದಾರನಾಗಿದ್ದ. ಮತ್ತು ಅವನಿಗೆ ಸ್ವಂತ ಭೂಮಿಯೂ ಇತ್ತು. ವಾಕರ್ ಎಂಬವನ ಕೃತಿ ‘ಸ್ಯಾಟಿಸ್ಟಿಕಲ್ ಅಕೌಂಟ್’ನಲ್ಲಿ ಗಿಬ್ಸನ್ ಕಾಲದ ಸ್ಕಾಟ್ಲೆಂಡಿನಲ್ಲಿ ವ್ಯವಸಾಯದಲ್ಲಿ ಆಗಿದ್ದ ಸುಧಾರಣೆ, ಉತ್ತಮ ಸ್ಥಿತಿಯಲ್ಲಿದ್ದ ರೈತ ಸಮುದಾಯ ಮತಾಂಧತೆ ಅಥವಾ ವೌಢ್ಯಗಳ ಅತಿರೇಕವಿಲ್ಲದ ಶಾಚಿತ, ಸಮೃದ್ಧ ಸಮುದಾಯದ ಚಿತ್ರಣ ಸಿಗುತ್ತದೆ. ಇಂತಹ ಉತ್ತಮ ಪರಿಸ್ಥಿತಿಯಲ್ಲಿ ಜನಿಸಿ, ಭಾರತಕ್ಕೆ ಬಂದು ಭಾರತದ ವ್ಯವಸಾಯವನ್ನು ಆಧುನಿಕತೆ, ಸಮೃದ್ಧಿಯತ್ತ ಒಯ್ಯುವ ಪ್ರಯತ್ನವನ್ನು ಯಾವ ಸದ್ದುಗದ್ದಲವಿಲ್ಲದೆ ಮಾಡಿದ್ದಾನೆ. 1808ರಲ್ಲಿ ತಂದೆಯನ್ನು ಕಳೆದುಕೊಂಡು ಸಹೋದರಿ ಕ್ಯಾಥರೀನಳ ಪಾಲನೆ ಯಲ್ಲಿ ಬೆಳೆದ ಗಿಬ್ಸನ್ ಅವನ ವಾತಾವರಣಕ್ಕೆ ಸಹಜವಾದ ಕೃಷಿಪರ ಒಲವಿನ ಜೊತೆಗೆ ಅಂದಿನ ಸ್ಕಾಟ್ಲೆಂಡಿನ ಉತ್ತಮ ವಿದ್ಯಾಸಂಸ್ಥೆ ವೌಂಟ್‌ರೋಸ್ ಅಕಾಡಮಿಯಲ್ಲಿ ಶಿಕ್ಷಣ ಪಡೆದ. ಮಾಂಟ್‌ರೋಸ್ ಅಂದು ಅನೇಕ ಸಸ್ಯಶಾಸ್ತ್ರಜ್ಞರು, ಪ್ರಾಚ್ಯಶಾಸ್ತ್ರಜ್ಞರು ಶಿಕ್ಷಣ ಪಡೆದ ಹೆಮ್ಮೆಯ ಸಂಸ್ಥೆಯಾಗಿತ್ತು. ಇಂತಹ ಒಂದು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಗಿಬ್ಸನ್ನನ ನಿಧನಾನಂತರ ಮಾಂಟ್‌ರೋಸ್‌ನ ಸಂತಾಪ ಸೂಚಕ ವಾರ್ತೆ ಹೀಗಿತ್ತು ‘‘ಹಲವು ಭಾಷೆೆಗಳನ್ನು ತಿಳಿದಿದ್ದ ಗಿಬ್ಸನ್ ಒಬ್ಬ ಅದ್ಭುತ ವಿದ್ವಾಂಸನಾಗಿದ್ದ. ಯುರೋಪಿನ ಯಾವುದೇ ಭಾಷೆೆಯಲ್ಲಿ ಪರಿಭಾಷಿಸಬಲ್ಲವನಾಗಿದ್ದ. ಗಿಬ್ಸನ್ ಪ್ರತಿದಿನ ತನ್ನ ಖುಷಿಗಾಗಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆೆಗಳ ಕೃತಿಗಳನ್ನು ಓದುತ್ತಿದ್ದ’’. ಲಂಡನ್ನಿನ ‘ಕ್ಯೂ’ ಗಾರ್ಡನ್ ಮುಖ್ಯಸ್ಥ ಸರ್. ವಿಲಿಯಂ ಹುಕರ್‌ಗೆ ಗಿಬ್ಸನ್ ಬರೆದ ಪತ್ರದಲ್ಲಿ ಉದ್ಧರಿಸಿದ ಹೊರೇಸ್ ಮತ್ತು ವರ್ಜಿಲನ ವಾಕ್ಯಗಳು, ಹೀವ್ರಾ ತೋಟದಲ್ಲಿ ಅವನ ಸಾಕು ನಾಯಿಗಳ ಸಮಾಧಿಗಳ ಮೇಲೆ ಲ್ಯಾಟಿನ್ ಭಾಷೆೆಯಲ್ಲಿ ಗಿಬ್ಸನ್ ಬರೆಸಿರುವ ಚರಮ ವಾಕ್ಯಗಳು ಅವನ ಭಾಷಾ ಪ್ರೌಢಿಮೆಗೆ ಇಂದಿಗೂ ಸಾಕ್ಷಿಯಾಗಿ ನಿಂತಿವೆ.

1815ರಲ್ಲಿ ಶಾಲೆಯನ್ನು ಮುಗಿಸಿದ ಗಿಬ್ಸನ್ ಅಬರ್ಡೀನ್‌ನ ಮೆಡಿಕಲ್ ಕಾಲೇಜನ್ನು ಸೇರಿ ಅಂದಿನ ವಿದ್ಯಾಭ್ಯಾಸ ಪದ್ಧತಿಯ ಪ್ರಕಾರ ಮೊದಲನೆ ವರ್ಷ ಗಣಿತ, ಲಾಜಿಕ್, ಮೆಟ್ರಿರಿಯಾ ಮೆಡಿಕಲ್ ಓದಿ, ಅನಾಟಮಿ ಮತ್ತು ಸಸ್ಯಶಾಸ್ತ್ರ ಓದಿದನು. ಇವನು ಎಂ.ಡಿ ಪದವಿ ಪಡೆದಿದ್ದಾನೆ ಎಂದು ಜನ ನಂಬಿರುತ್ತಾರೆ. ಈಸ್ಟ್ ಇಂಡಿಯಾ ಕಂಪೆನಿಯ ಸರ್ಜನ್ ಆಗಿ ಸೇರಿದ ಮೇಲೆ ಡಾಕ್ಟರ್ ಎನ್ನುವುದು ಅವನಿಗೆ ಗೌರವಾರ್ಥವಾಗಿ ಸಿಕ್ಕ ಪದವಿ ಎಂದು ಕಾಣುತ್ತದೆ. ಅವನು ಮೃತನಾದಾಗ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ಚರಮವಾಕ್ಯದಲ್ಲಿ ‘‘ಗಿಬ್ಸನ್ ಅವನ ಕಾಲದಲ್ಲಿ ಅಲ್ಲಿನ ಜನ ಹಾತೊರೆಯುತ್ತಿದ್ದ ಯಾವ ಪದವಿಯನ್ನೂ ಪಡೆಯಲಿಲ್ಲ. ವಿದ್ಯಾಭ್ಯಾಸದ ನಂತರ ಎಡಿನ್‌ಬರಾದ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನಿಂದ ಒಂದು ಪರವಾನಿಗೆ ಮಾತ್ರ ಪಡೆದ’’ ಎಂದಿತ್ತು.

ವಿದ್ಯಾಭ್ಯಾಸದ ನಂತರ 1820ರಲ್ಲಿ ಗಿಬ್ಸನ್ ರಾಯಲ್ ಜಾರ್ಜ್ ಎಂಬ ಹಡಗಿನ ಸರ್ಜನ್‌ಗೆ ಸಹಾಯಕನಾಗಿ ಕೆಲಸಕ್ಕೆ ಸೇರಿದ. ಆ ಹಡಗಿನಲ್ಲಿ ಇಂಗ್ಲೆಂಡಿನಿಂದ ಇಂಡಿಯಾ, ಮಲಕ್ಕಾ, ವ್ಯಾಂಪೊವಾ ಮುಂತಾದ ಕಡೆಗಳಿಗೆ ಮತ್ತು ಅಲ್ಲಿಂದ ವಾಪಸ್ ಪ್ರಯಾಣ ಮಾಡಿ ಹಡಗಿನಲ್ಲಿ ಅನೇಕ ಸಾವು ನೋವುಗಳಿಗೆ ಸಾಕ್ಷಿಯಾಗುತ್ತಾನೆ. ನಂತರ ಅರಕ್ಕನ್ ಪ್ಲೂಟಿಲ್ಲಾ ಎಂಬ ಸೈನ್ಯದ ವೈದ್ಯನಾಗಿ ಬರ್ಮಾದಲ್ಲಿ ನಡೆದ ಯುದ್ಧದಲ್ಲಿ ಗಾಯಾಳುಗಳ ಸೇವೆ ಸಲ್ಲಿಸಿ ಆವಾ ಮೆಡಲ್ ಎಂಬ ಪ್ರಶಸ್ತಿ ಪಡೆಯುತ್ತಾನೆ. ಮುಂದೆ ಗಿಬ್ಸನ್ ಈಸ್ಟ್ ಇಂಡಿಯಾ ಕಂಪೆನಿಯ ಸಹಾಯಕ ಸರ್ಜನ್ ಹುದ್ದೆಗೆ ಅರ್ಜಿ ಹಾಕಿಕೊಂಡದ್ದೇ ಅವನ ಮುಂದಿನ ಎಲ್ಲ ಮಹತ್ವ ಪೂರ್ಣ ಕಾರ್ಯಗಳಿಗೆ ಸಿಕ್ಕಿದ ಒಂದು ಅದೃಷ್ಟಶಾಲಿ ತಿರುವು.

ಸಸ್ಯಪ್ರೇಮಿಗಳು ಗಿಬ್ಸನ್‌ನ ಡಾಪುರಿ ತೋಟ ಮತ್ತು ಅವನು ಬರೆಸಿದ ಸಸ್ಯಚಿತ್ರಗಳ ಬಗ್ಗೆ ತಿಳಿದುಕೊಳ್ಳುವ ಮೊದಲು, ಅವನು ಬೆಳೆಗಳು, ಹವಾಮಾನ ಪರಿಸರಗಳ ಬಗ್ಗೆ ತೋರಿದ ಅಪರಿಮಿತ ಕಾಳಜಿ, ಶ್ರಮಗಳ ಬಗ್ಗೆ ಒಂದು ನೋಟ ಹಾಯಿಸುವುದು ಸೂಕ್ತವೆನಿಸುತ್ತದೆ.

ಈಸ್ಟ್ ಇಂಡಿಯಾ ಕಂಪೆನಿಗೆ ವೈದ್ಯನಾಗಿ ಸೇರಿದ ಗಿಬ್ಸನ್ ಅನೇಕ ವರ್ಣರಂಜಿತ, ಶ್ರಮದಾಯಕ ಕಾರ್ಯಗಳನ್ನೇ ತನ್ನ ಅವಧಿಯಲ್ಲಿ ಮಾಡಿದ. ಮೊದಲು ಮಾತುಂಗಾದ ಸೈನ್ಯದಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿದ. ಈ ಸೈನ್ಯ ಗುಜರಾತ್ ಮತ್ತು ರಾಜಪುಟಾಣದ ಪಶ್ಚಿಮ ಭಾಗದಲ್ಲಿ ‘ಭಿಲ್ಲ’ ಬುಡಕಟ್ಟಿನ ಜನಾಂಗದ ಗಲಭೆಯನ್ನು ಹತ್ತಿಕ್ಕಲು ಹೊರಟಾಗ ಸೈನ್ಯದೊಡನಿದ್ದ ಗಿಬ್ಸನ್ ಒಂದು ರೋಚಕ ಪ್ರಸಂಗವನ್ನು ಬರೆಯುತ್ತಾನೆ. ಭಿಲ್ಲ ಜನರು ಬಂಡೆದ್ದಾಗ ಬ್ರಿಟಿಷರು ಅವರನ್ನು ಮಣಿಸಲು ಅಲ್ಲಿನ ಹಿಪ್ಪೆಮರಗಳನ್ನೇ ಕಡಿದು ಹಾಕುವುದಾಗಿ ಬೆದರಿಕೆ ಹಾಕಿದರು. ಹಿಪ್ಪೆಹೂವುಗಳು ಭಿಲ್ಲರ ಆಹಾರ ಮತ್ತು ಹಿಪ್ಪೆಹೂವುಗಳಿಂದ ಅವರು ಒಂದು ವಿಧದ ಮದ್ಯವನ್ನು ತಯಾರಿಸುತ್ತಿದ್ದರು. ಹಿಪ್ಪೆಮರ ಗಳನ್ನು ಕಡಿದರೆ ತಮ್ಮ ಸರ್ವಸ್ವವನ್ನೂ ಕಳೆದು ಕೊಂಡಂತೆ ಎಂದು ನಿರ್ವಾಹವಿಲ್ಲದೆ ಭಿಲ್ಲರ ಪ್ರತಿರೋಧ ತಣ್ಣಗಾಗುತ್ತಿತ್ತು.

ಆನಂತರ ಗುಜರಾತ್‌ಗೆ ವರ್ಗಾವಣೆಗೊಂಡ ಗಿಬ್ಸನ್ ಮುಂದಿನ ಏಳು ವರ್ಷಗಳ ಕಾಲ ಸೈನಿಕರಿಗೆ ಸಿಡುಬು ನಿರೋಧಕ ಚುಚ್ಚುಮದ್ದು ಹಾಕುವ ವ್ಯಾಕ್ಸಿನೇಟರ್ ಕೆಲಸ ಮಾಡಿದ. ಈ ಅವಧಿಯಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಬಹುಭಾಗ ಸಂಚರಿಸಿ ಅಲ್ಲಿಯ ಜನಜೀವನ, ಪ್ರಾಕೃತಿಕ ಲಕ್ಷಣಗಳನ್ನು ಅಧ್ಯಯನ ಮಾಡಿ, ಗುಜರಾತಿ, ಮರಾಠಿ ಭಾಷೆೆಗಳನ್ನು ಕಲಿತ. ಇಂಡಿಯಾಕ್ಕೆ ವೈದ್ಯನಾಗಿ ಬಂದರೂ ಅಂದಿನ ಬ್ರಿಟಿಷ್ ಸರಕಾರದ ಪರಿಪಾಠದಂತೆ ತೋಟಗಳ ಮೇಲ್ವಿಚಾರಕನಾಗಿಯೂ ಕಾರ್ಯ ನಿರ್ವಹಿಸ ತೊಡಗಿದ. ಆಗಲೂ ವೈದ್ಯಕೀಯವನ್ನು ಮರೆತಿರಲಿಲ್ಲ. ಒಂದು ಮನಮುಟ್ಟುವ ಸನ್ನಿವೇಶ- ನಿವೃತ್ತನಾದ ಮೇಲೂ ದೂರದಿಂದ ವೈದ್ಯಕೀಯ ನೆರವಿಗಾಗಿ ಬರುವ ಸ್ಥಳೀಯರಿಗಾಗಿ ಕೆಲವು ಔಷಧ, ಉಪಕರಣಗಳನ್ನು ತೆಗೆದುಕೊಂಡು ಹೋಗಲು ಸರಕಾರದ ಅನುಮತಿ ಕೇಳುತ್ತಾನೆ.

ಔಷಧೀಯ ಸಸ್ಯಗಳು ಹಾಗೂ ಆ ಸಸ್ಯಗಳ ಬಗ್ಗೆ ಸ್ಥಳೀಯರ ಜ್ಞಾನವನ್ನು ಗಿಬ್ಸನ್ ಮನಗಂಡಿದ್ದನು. 1838ರಲ್ಲಿ ಗಿಬ್ಸನ್ ಬೊಟಾನಿಕ್ ಗಾರ್ಡನ್‌ನ ಮೇಲ್ವಿಚಾರಕನಾದಾಗ ಔಷಧೀಯ ಸಸ್ಯಗಳಾದ ಕ್ಯಾಸಿಯೊ ಸೆನ್ನಾ ಮತ್ತು ಹೆನ್‌ಬೇನ್ ಸಸ್ಯಗಳನ್ನು ಸೈನ್ಯದ ಉಪಯೋಗಕ್ಕಾಗಿ ಬೆಳೆಯಲಾರಂಭಿಸಿದ. ಇದರಿಂದ ತೋಟದ ನಿರ್ವಹಣೆ ಖರ್ಚನ್ನು ಭರಿಸಬಹುದಾಯಿತು. ಆ್ಯಂಟಿಬಯಾಟಿಕ್ ಇಲ್ಲದ, ಕೆಲವೇ ಔಷಧಗಳು ಲಭ್ಯವಿದ್ದ ಗಿಬ್ಸನ್‌ನ ಕಾಲದಲ್ಲಿ ಸೆನ್ನಾದಂತಹ ವಿರೇಚಕಗಳೇ ಪರವೌಷಧಗಳಾಗಿದ್ದವು! ಸುದೀರ್ಘಕಾಲ ಕೆಲಸ ಮಾಡಿದ ಗಿಬ್ಸನ್ ಸರ್ಜನ್ ಮೇಜರ್ ಸ್ಥಾನವನ್ನು ಪಡೆದು ವಿಶ್ರಾಂತನಾದ. ಈ ಕಾಲದಲ್ಲಿ ಗಿಬ್ಸನ್ ಸಸ್ಯಗಳ ಒಣ ಮಾದರಿಗಳನ್ನು ಲಂಡನ್ನಿನ ಕ್ಯೂಗಾರ್ಡನ್‌ಗೆ ಕಳಿಸಲಾರಂಭಿಸಿದ. ಆ ದಿನಗಳಲ್ಲಿ ಇಂಗ್ಲೆಂಡಿನಿಂದ ಪ್ರಪಂಚದ ವಿವಿಧ ಭಾಗಗಳಿಗೆ ಹೋಗುತ್ತಿದ್ದ ಸಸ್ಯಶಾಸ್ತ್ರಜ್ಞರು ವೈದ್ಯರುಗಳಿಗೆ ಕ್ಯೂಗಾರ್ಡನ್ ಸೊಸೈಟಿ ಒಂದು ಮಾತೃಸಂಸ್ಥೆಯಾಗಿತ್ತು. ಕ್ಯೂಗಾರ್ಡನ್ನಿನ ಮುಖ್ಯಸ್ಥ ಸರ್ ವಿಲಿಯಂ ಹುಕರ್‌ಗೆ ಸಸ್ಯಗಳು, ಸಸ್ಯಗಳ ಒಣಮಾದರಿಗಳು, ಬೀಜಗಳನ್ನು ಕಳಿಸಿ ಮಾನ್ಯತೆ ಪಡೆಯುವುದು ಗುರಿಯಾಗಿತ್ತು. ಸಸ್ಯ ವಿನಿಮಯ, ಜ್ಞಾನಾರ್ಜನೆ ಅಂದಿನ ಅನ್ವೇಷಕರು, ಸಸ್ಯಶಾಸ್ತ್ರಜ್ಞರುಗಳ ಪರಮೋದ್ದೇಶವಾಗಿತ್ತು. ಹೀಗಿರುವಾಗ ಗಿಬ್ಸನ್ ಕಳಿಸಿದ್ದ ಸಸ್ಯ ಮಾದರಿ, ಕಾಗದ ಪತ್ರಗಳು ಇಂದಿಗೂ ಇದ್ದರೂ ಅವನ ಭಾವಚಿತ್ರ ಕಳೆದು ಹೋಗಿರುವುದು ಎಲ್ಲವನ್ನೂ ಕ್ರಮಬದ್ಧವಾಗಿ ಕಾಪಾಡಿಕೊಂಡು ಬರುವ ಸಂಸ್ಥೆಯಲ್ಲಿ ಇದೊಂದು ಊಹಿಸಲಾಗದ ವಿಪರ್ಯಾಸ.

ಇಂಡಿಯಾದಲ್ಲಿ ಗಿಬ್ಸನ್ ನಿರ್ವಹಿಸಿದ ಅನೇಕ ಖಾತೆಗಳಲ್ಲಿ ಅರಣ್ಯ ಇಲಾಖೆಯೂ ಒಂದು. ಸರಕಾರದ ನಿಷ್ಠಾವಂತ ನೌಕರನಾಗಿ ಕಂಪೆನಿಯ ಹಡಗುಗಳ ನಿರ್ಮಾಣಕ್ಕೆ ಬೇಕಾದ ಮರಮುಟ್ಟುಗಳ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿದರೂ, ಸಾಮಾನ್ಯ ಜನರಿಗೆ ಅಗತ್ಯವಾಗುವ ಉರುವಲು, ಕಟ್ಟಡ ಕಟ್ಟಲು ಬೇಕಾದ ಮರಮುಟ್ಟುಗಳನ್ನು ಒದಗಿಸಬೇಕಾದುದರ ಬಗ್ಗೆಯೂ ಸಹ ಅರಿವು ಇದ್ದಿತು. ಗಿಬ್ಸನ್‌ನ ವಿಚಕ್ಷಣೆ, ಮುನ್ನೋಟಗಳಿಗೆ ಒಂದು ಉದಾಹರಣೆ ಕೊಡಬಹುದು. ಕಂಪೆನಿ ಸರಕಾರದ ಗವರ್ನರ್ ಆ್ಯಂಡರ್‌ಸನ್ ಮರಮುಟ್ಟುಗಳಿಗಾಗಿ ಹೊಸ ಪ್ಲಾಂಟೇಶನ್ ಮಾಡಬೇಕೆಂದು ತೀರ್ಮಾನಿಸಿದಾಗ ಗಿಬ್ಸನ್ ಅವನ ತಿಳುವಳಿಕೆ ಪ್ರಕಾರ ಸದ್ಯಕ್ಕೆ ಇರುವ ತೇಗದ ಮರಗಳ ಕಾಡಿನಿಂದಲೇ ಹೆಚ್ಚಿನ ಪ್ರಯೋಜನ ಹೇಗೆ ಪಡೆಯಬಹುದೆಂದು ಯೋಚಿಸಿ, ತೇಗದ ಕಾಡಿನಲ್ಲಿ ಹೆಚ್ಚಾಗಿದ್ದ ಮರಗಳನ್ನೇ ಕಡಿದು ಉಳಿದ ಮರಗಳು ಚೆನ್ನಾಗಿ ಬೆಳೆಯುವ ವಾತಾವರಣ ನಿರ್ಮಿಸಿದ. ಜೊತೆಗೆ ಅಲ್ಲಿದ್ದ ಕುರುಚಲು ಕಾಡುಗಳನ್ನು ಗಮನಿಸುವುದು, ಹೊಸದಾಗಿ ಬೀಜಗಳನ್ನು ಚೆಲ್ಲುವುದನ್ನು ಮಾಡಿದ. ಇದರಿಂದ ಕಂಪೆನಿ ಸರಕಾರದ ಆದಾಯ ಹೆಚ್ಚಿತು ಮತ್ತು ಇವನು ಯಾವಾಗಲೂ ಹಣ ಗಳಿಸುವ ದಿಕ್ಕಿನಲ್ಲೇ ಕೆಲಸ ಮಾಡುತ್ತಾನೆ ಎಂಬ ಟೀಕೆಗೂ ಒಳಗಾದ. ಗಿಬ್ಸನ್ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕೊಂಕಣ ಪ್ರದೇಶ, ಮದರಾಸ್ ಪ್ರೆಸಿಡೆನ್ಸಿಯ ಉತ್ತರಭಾಗ, ಸಿಂಧ್ ಪ್ರದೇಶದಿಂದ ಮಲಬಾರ್‌ವರೆಗೆ ಕಾರ್ಯ ನಿರ್ವಹಿಸಬೇಕಾದ್ದು ನಿಜಕ್ಕೂ ಪ್ರಯಾಸಕರ ಸಂಗತಿಯಾಗಿತ್ತು. ಎಷ್ಟೊ ವೇಳೆ ಏಕಾಂಗಿಯಾಗಿ ಸಂಚರಿಸಬೇಕಿತ್ತು. 1849 ರಿಂದ 1854ರವರೆಗೆ ಗಿಬ್ಸನ್ ನಮ್ಮ ಕೆನರಾ ಜಿಲ್ಲೆಯಲ್ಲಿ ಸಂಚರಿಸಿದಾಗ ಅವನೊಡನೆ ಪೌಲ್ಟನ್ ಎಂಬ ಸಹಾಯಕನಿದ್ದ. 1858ರಲ್ಲಿ ಗಿಬ್ಸನ್ ಕೈಕೊಂಡ ದೀರ್ಘ, ದುರ್ಗಮ ಪ್ರಯಾಣದ ವಿವರವನ್ನೇ ವಿಲಿಯಂ ಹುಕರ್‌ಗೆ ಹೀಗೆ ಬರೆಯುತ್ತಾನೆ. ‘‘ಕ್ಯಾಲಿಕಟ್‌ನಿಂದ ಕೊಡಗಿಗೆ ಕೈಗೊಂಡ ಪ್ರಯಾಣದಲ್ಲಿ ಬೆಳಗ್ಗೆ ಮೂರು ಗಂಟೆಗೆ ಎದ್ದು ಟಾರ್ಚ್ ಬೆಳಕಿನಲ್ಲಿ ಎಂಟು ಮೈಲಿ ನಡೆದೆ. ಅನಂತರ ಕುದುರೆಯ ಮೇಲೆ ಮೂರು ಮೈಲಿ ಕ್ರಮಿಸಿ ನಿಗದಿತ ಜಾಗವನ್ನು ಬೆಳಿಗ್ಗೆ ಎಂಟು ಗಂಟೆಗೆ ಮುಂಚೆ ತಲುಪುತ್ತಿದ್ದೆ. ಹೀಗೆ ಇನ್ನೂ ನೂರು ದಿನಗಳನ್ನು ಕಳೆಯಬೇಕು’’. ಈ ರೀತಿ ಅವನು ಅರಣ್ಯದಲ್ಲಿ ಪಯಣಿಸಿ ಕ್ಯಾಲಿಕಟ್‌ನಿಂದ ಕೊಡಗನ್ನು ಮೂರು ತಿಂಗಳುಗಳಲ್ಲಿ ತಲುಪುವಷ್ಟರಲ್ಲಿ ಕ್ರಮಿಸಿದ ದೂರ ಎಂಟು ನೂರು ಮೈಲಿಗಳು!

ಇಂತಹ ದುರ್ಗಮ ಪ್ರಯಾಣಗಳಲ್ಲಿ ಗಿಬ್ಸನ್ ಅನೇಕ ಅಪಾಯಕಾರಿ ಸನ್ನಿವೇಶಗಳು, ಗಲಭೆಕೋರರನ್ನ ಎದುರಿಸಬೇಕಿತ್ತು. ಸೊಳ್ಳೆಗಳಿಂದ ಮಲೇರಿಯಾ ಜ್ವರ ಬರುತ್ತದೆ ಎಂದು ತಿಳಿಯದಿದ್ದ ಕಾಲದಲ್ಲಿ ಸೊಳ್ಳೆಗಳ ಕಡಿತವನ್ನು ತಪ್ಪಿಸಿಕೊಳ್ಳಲು ಅವನು ತಲೆ ಮುಖವನ್ನೆಲ್ಲಾ ಮುಚ್ಚಿ ಕೊಂಡು ದಟ್ಟಕಾಡಿನಲ್ಲಿ ಬೆಳಗ್ಗೆ 3 ರಿಂದ ರಾತ್ರಿ 8 ಗಂಟೆವರೆಗೆ ಪ್ರಯಾಣ ಮಾಡುತ್ತಿದ್ದುದು ಇಂದು ತಮಾಷೆಯಾಗಿ ಕಂಡರೂ ತನ್ನ ಕೆಲಸದಲ್ಲಿ ಅವನು ತೋರುತ್ತಿದ್ದ ಕಷ್ಟಸಹಿಷ್ಣುತೆಯನ್ನು ಮೆಚ್ಚದಿರಲು ಸಾಧ್ಯವೇ?

ಸ್ಥಳೀಯ ಭಾಷೆೆಗಳನ್ನು ಬಲ್ಲವನಾಗಿ, ಸಾಮಾನ್ಯ ಜನರ ಬಗ್ಗೆ ಸಹಾನುಭೂತಿ ಉಳ್ಳವನಾಗಿದ್ದರೂ ಗಿಬ್ಸನ್‌ಗೆ ಅರಣ್ಯ ಸಂರಕ್ಷಣೆ ಯಶಸ್ವಿಯಾಗಿ ನಿಭಾಯಿಸಲಾಗಲಿಲ್ಲ. ಹಿಡಿತವಿಲ್ಲದೆ ಮರಗಳನ್ನು ಕಡಿಯುವುದು, ಗುತ್ತಿಗೆ ದಾರರ ವಂಚನೆ, ಕೈಕೆಳಗಿನ ನೌಕರರ ಭ್ರಷ್ಟಾಚಾರ ಗಳು ಅಡೆತಡೆಯಿಲ್ಲದೆ ಸಾಗಿತು. ಇದಕ್ಕೆ ಕಾರಣ ಒಬ್ಬನೇ ನಿಭಾಯಿಸಲಾಗದಷ್ಟು ವಿಸ್ತಾರವಾದ ಅರಣ್ಯಪ್ರದೇಶ ಹಾಗೂ ಕಂಪೆನಿ ಸರಕಾರ ನೌಕರ ವರ್ಗಕ್ಕೆ ಕೊಡುತ್ತಿದ್ದ ಅತ್ಯಲ್ಪ ವೇತನ. ಇಂಥ ಅಡಚಣೆಗಳ ಮಧ್ಯೆ ಒಬ್ಬನ ಒಂಟಿ ಕೂಗು ನಿರರ್ಥಕವೆನಿಸಿದರೂ, ಪಶ್ಚಿಮ ಇಂಡಿಯಾದ ಅಗಾಧ ಭೂವಿಸ್ತಾರ ವನ್ನು ಒಬ್ಬನೇ ಪರಿಶೀಲಿ ಸುತ್ತಿದ್ದ ಗಿಬ್ಸನ್‌ನ ಏಕಾಂಗಿ ಹೋರಾಟ ಇಂದಿಗೂ ಸ್ಫೂರ್ತಿದಾಯಕ.

ಅರಣ್ಯ ಸಂರಕ್ಷಣೆ ಬಗ್ಗೆ ವಹಿಸಿದಷ್ಟೆ ಆಸಕ್ತ್ತಿಯಿಂದ ಗಿಬ್ಸನ್ ಹವಾಮಾನಗಳ ಬದಲಾವಣೆ ಬಗ್ಗೆ ಚಿಂತಿಸಿ ಕಾಲಕಾಲಕ್ಕೆ ಸರಕಾರಕ್ಕೆ ವರದಿ ಸಲ್ಲಿಸುತ್ತಿದ್ದುದನ್ನು ಇಂದಿಗೂ ಉಳಿದುಕೊಂಡು ಬಂದಿರುವ ದಾಖಲೆಗಳಿಂದ ತಿಳಿಯಬಹುದು. ಅರಣ್ಯ ಸಂರಕ್ಷಣೆಯಿಂದ ಆಗುವ ಆರ್ಥಿಕ ಲಾಭವನ್ನು ಸರಕಾರಕ್ಕೆ ಮನದಟ್ಟು ಮಾಡಲು ಅವನ ಒಂದು ವರದಿಯಲ್ಲಿ ಕೊಂಕಣದ ಒಂದು ಹಳ್ಳಿಯಲ್ಲಿ, ಹಳ್ಳಿಯ ಮುಖ್ಯಸ್ಥ ಒಂದು ಬೆಟ್ಟಸಾಲಿನ ಗಿಡಮರಗಳನ್ನು ಕಡಿಯದೆ ಅದರ ಸೊಪ್ಪುಸದೆಯನ್ನು ಕೃಷಿ ಉದ್ದೇಶಕ್ಕೆ ಉಪಯೋಗಿಸುತ್ತಿದ್ದುದನ್ನು ಹೇಳಿದ್ದಾನೆ. ಅರಣ್ಯನಾಶದ ಪರಿಣಾಮವಾಗಿ ಮಲಬಾರಿನ ನದಿಗಳಲ್ಲಿ ಹೂಳು ತುಂಬಿಕೊಂಡು ಇದರ ಪರಿಣಾಮವಾಗಿ ಬಂದರುಗಳು ಸಹ ತೊಂದರೆಗೆ ಒಳಗಾಗುವುದನ್ನು ಗಿಬ್ಸನ್ ತೋರಿಸಿಕೊಟ್ಟಿದ್ದ. ಕಾಡುಗಳು ನಾಶವಾಗಿ ಬೆಟ್ಟಗಳಿಂದ ಹರಿದು ಬರುವ ನೀರಿನ ಒರತೆಗಳು ಕ್ರಮೇಣ ಬತ್ತುವುದನ್ನು ಅವನು ಗಮನಿಸಿದ್ದ. ನಮ್ಮ ಕರ್ನಾಟಕದ ಬಗ್ಗೆ ಗಿಬ್ಸನ್ ಅಂದಿನ ದಿನಗಳಲ್ಲೇ ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ. ‘‘ಕೆನರಾದಲ್ಲಿ (ಉ.ಕನ್ನಡ) ಸಮುದ್ರದ ಗಾಳಿಯಲ್ಲಿರುವ ತೇವಾಂಶದಿಂದ ಅರಣ್ಯನಾಶದಿಂದ ಬೋಳಾಗಿರುವ ಬೆಟ್ಟಗಳಲ್ಲಿ ಕ್ರಮೇಣ ಸಣ್ಣಪೊದೆ, ಕುರುಚಲು ಕಾಡುಗಳು ಬೆಳೆಯುತ್ತವೆ. ಆದರೆ ಕೆನರಾಗಿಂತ ಮೇಲಿನ ಘಟ್ಟ ಪ್ರದೇಶದವರೆಗೂ ಈ ಸಮುದ್ರದ ಗಾಳಿಯ ತೇವಾಂಶದ ಪ್ರಚೋದನೆ ಇರುತ್ತದೆ. ಇದಕ್ಕೆ ಉದಾಹರಣೆಯಾಗಿ ಧಾರವಾಡ ಜಿಲ್ಲೆಯ ದಕ್ಷಿಣ ಮತ್ತು ಪಶ್ಚಿಮ ಭಾಗಗಳ ಅರಣ್ಯಗಳು ಹುಲುಸಾಗಿ ಬೆಳೆದಿರುವುದನ್ನು ನೋಡಬಹುದು’’ ಎಂದು ಹೇಳುತ್ತಾನೆ.

ವೈದ್ಯನಾಗಿ ಇಂಡಿಯಾಕ್ಕೆ ಬಂದ ಗಿಬ್ಸನ್ ತೋಟಗಳ ಮೇಲ್ವಿಚಾರಕ ನಾಗಿ ತೋಟಗಳನ್ನು ನಿರ್ಮಿಸಿ, ರೂಢಿಸಿದ್ದು ಒಂದು ಬೆಟ್ಟದಂತ ಅಗಾಧ ಕೆಲಸ. ಅದರಿಂದಲೇ ಇಂದಿಗೂ ಗಿಬ್ಸನ್‌ಗೂ ನಮಗೂ ಒಂದು ಅಜ್ಞಾತ ಕೊಂಡಿ ಬೆಸೆದುಕೊಂಡಿರುವುದು. ಇದನ್ನು ವಿಶದವಾಗಿ ತಿಳಿಯಲು ಡಾಪುರಿ ತೋಟದ ಹಿನ್ನೆಲೆಗೆ ಕೊಂಚ ಕಣ್ಣು ಹಾಯಿಸೋಣ. ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ ಪತನದ ನಂತರ ಬ್ರಿಟಿಷರಿಗೆ ಇಂಡಿಯಾದಲ್ಲಿ ಮುಖ್ಯವಾಗಿ ಮರಾಠರಿಂದ ಪ್ರತಿರೋಧ ಹೆಚ್ಚಿತು. ಮುಂದೆ ಪಿಂಡಾರಿಗಳ ಕಾಟವೂ ಅಧಿಕವಾಗಿ ಗವರ್ನರ್ ಮಾರ್ಕ್ವೆಸ್ ಹೇಸ್ಟಿಂಗ್ಸ್ ಮರಾಠರ ಮೇಲೆ ಯುದ್ಧ ಘೋಷಿಸಿ ಬ್ರಿಟಿಷರು ಜಯಶಾಲಿಗಳಾದರು. ಈ ಸಮಯದಲ್ಲಿ ಯುದ್ಧದಲ್ಲಿ ಮರಾಠರನ್ನು ಪರಾಭವಗೊಳಿಸಿದ್ದ ಕ್ಯಾಪ್ಟನ್ ಫೋರ್ಡ್ ಎಂಬ ಸೈನ್ಯಾಧಿಕಾರಿ ತನಗೆ ಸಿಕ್ಕಿದ ಪಾರಿತೋಷಕ ಹಣದಲ್ಲಿ ಪುಣೆಗೆ ಸಮೀಪದ ಡಾಪುರಿ ಎಂಬಲ್ಲಿ ಒಂದು ಬಂಗ್ಲೆ ಕಟ್ಟಿಕೊಂಡ. ಹತ್ತು ವರ್ಷಗಳ ನಂತರ ಕ್ಯಾಪ್ಟನ್ ಫೋರ್ಡ್ ನ ಮರಣದ ನಂತರ ಬಾಂಬೆಯ ಗವರ್ನರ್ ಆಗಿದ್ದ ಸರ್. ಜೋನ್ ಮ್ಯಾಲ್ಕಂ ಡಾಪುರಿ ಬಂಗ್ಲೆಯನ್ನು ಖರೀದಿಸಿದ. ಮಳೆಗಾಲದಲ್ಲಿ ದುರ್ಭರವಾಗುವ ಬಾಂಬೆಯ ವಾಸ್ತವ್ಯದಿಂದ ದೂರ ಇರಲು ಮ್ಯಾಲ್ಕಂ ಈ ಯೋಜನೆ ಹಾಕುತ್ತಾನೆ. ಅನೇಕ ತಿಂಗಳುಗಳು ಒಬ್ಬ ಗವರ್ನರ್ ತನ್ನ ಕಾರ್ಯಕ್ಷೇತ್ರದಿಂದ ದೂರವಿರುವುದರ ಬಗ್ಗೆ ಸರಕಾರ ತೋರಿದ ಅಸಮಾಧಾನದ ನಡುವೆಯೂ ಮ್ಯಾಲ್ಕಂ ಡಾಪುರಿ ತೋಟವನ್ನು ಸಿದ್ಧಗೊಳಿಸಿ ವಿಲಿಯಂಮ್ಸ್ ಎಂಬ ಸರ್ಜನ್‌ನನ್ನು ಮೇಲ್ವಿಚಾರಕನಾಗಿ ನೇಮಿಸಿದ.

ಮೇಲ್ವಿಚಾರಕ ವಿಲಿಯಂಮ್ಸ್ ಕೊಲ್ಕತದ ಬೊಟಾನಿಕ್ ಗಾರ್ಡನ್‌ನ ಮುಖ್ಯಸ್ಥ ನೆಥಾನಿಯಲ್ ವೆಲ್ಲಿಚ್‌ನ ಸಹಾಯ ಪಡೆದು ವೈಜ್ಞಾನಿಕ ಅರಿವನ್ನು ಪಡೆಯುವುದೇ ಡಾಪುರಿ ತೋಟದ ಮುಖ್ಯ ಗುರಿ ಎಂದು ಕಾರ್ಯಮಗ್ನನಾಗುತ್ತಾನೆ. ಡಾಪುರಿ ತೋಟದ ಮುಖ್ಯಗುರಿ ವೈಜ್ಞಾನಿಕ ಪ್ರಯೋಗಗಳು ಎಂದು ಹೊರಟರೂ ಅಲ್ಲಿ ಆರ್ಥಿಕ ಸಸ್ಯಗಳನ್ನು ಬೆಳೆಯಲು ಪ್ರಮುಖ ಆದ್ಯತೆ ಸಿಕ್ಕಿತು. ವಿಲಿಯಂಮ್ಸ್ ಡಾಪುರಿ ತೋಟದಲ್ಲಿ ಕಾಫಿ ಬೆಳೆಯಲು ಮತ್ತು ಎರಡು ಎಕರೆಯಷ್ಟು ಜಾಗವನ್ನು ಅದುವರೆಗೆ ಇಂಡಿಯಾದಲ್ಲಿ ಬೆಳೆಯದಿದ್ದ ಔಷಧೀಯ ಸಸ್ಯಗಳನ್ನು ಬೆಳೆಸುವುದಕ್ಕೆ ಮೀಸಲಿಟ್ಟ. ಇವನು ಹಾಕಿಕೊಟ್ಟ ಯೋಜನೆಯನ್ನು ಚಾರ್ಲ್ಸ್ ಲಷ್ ಎಂಬವನು ಮುಂದುವರಿಸಿ ಮೇವಿನ ಹುಲ್ಲು, ಎಣ್ಣೆಕಾಳು, ಹಿಪ್ಪುನೇರಳೆ, ಔಷಧೀಯ ಸಸ್ಯಗಳನ್ನು ಬೆಳೆಯುವ ಕೆಲಸದಲ್ಲಿ ಒಂಬತ್ತು ವರ್ಷಗಳನ್ನು ಕಳೆದ. ಈ ಕೆಲಸಗಳಿಗೆ ಮುಂದೆ ಗಿಬ್ಸನ್ ಹೆಗಲು ಕೊಟ್ಟ.

(ಮುಂದಿನ ವಾರಕ್ಕೆ....)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top