ಕಥೆ

ಸಂಬಂಧ

ಮುಂಬೈಗೆ ಬಂದು ಒಂದು ವಾರ ಕಳೆದು ಹೋಗಿದೆ. ಯಾವ ಹೊಟೆ ೀ ಲಿನಲ್ಲಿ ಕೆಲಸ ಕೇಳಿದರೂ ‘ಇಲ್ಲ’ವೆನ್ನುವ ಉತ್ತರ. ಬರಿಕೈಯಲ್ಲಿ ಬಂದವನನ್ನು ಕೆಲಸಕ್ಕೆ ಸೇರಿಸುವುದಿಲ್ಲವಂತೆ; ಅಲ್ಲದೆ ಪರಿಚಯ ವಿವರ ಚೀಟಿ ಬೇಕಂತೆ. ಇಲ್ಲದಿದ್ದರೆ ಒಂದೆರಡು ದಿನ ಕೆಲಸ ಮಾಡಿ ರಾತ್ರಿ ಹೊತ್ತು ಎಲ್ಲರೂ ನಿದ್ರೆಯ ಗುಂಗಿನಲ್ಲಿದ್ದಾಗ ಹೊಟೇಲಿನ ಕ್ಯಾಶ್ ಹಣವನ್ನು ಎಗರಿಸಿ ನಾಪತ್ತೆಯಾಗುವವರೂ ಇದ್ದಾರಂತೆ.

ಊರಿನಿಂದ ಬರುವಾಗ ಒಂದು ಕೈಚೀಲವಿದ್ದದ್ದು ಸರಿ; ಅದರಲ್ಲಿ ಎರಡು ಚಡ್ಡಿ ಮತ್ತು ಎರಡು ಅಂಗಿ, ಒಂದು ಪಂಚೆ, ಒಂದು ಹೊದೆಯುವ ಚಾದರು. ಮುಂಬೈ ಸೆಂಟ್ರಲ್ ರೈಲು ನಿಲ್ದಾಣದ ಎದುರಿಗಿರುವ ಉದ್ಯಾನದಲ್ಲಿ ಮಧ್ಯಾಹ್ನದ ಹೊತ್ತು ಮಲಗಿದವನಿಗೆ ಅಲ್ಲಿಯೇ ಎಲ್ಲಿಲ್ಲದ ನಿದ್ರೆ. ಎದ್ದು ನೋಡುವಾಗ ತಲೆಯ ಅಡಿಗೆ ದಿಂಬಾಗಿ ಇಟ್ಟಿದ್ದ ಚೀಲ ಮಾಯ. ಅದೃಷ್ಟವಶಾತ್ ತನ್ನ ಎಸೆಸೆಲ್ಸಿ ಸರ್ಟಿಫಿಕೇಟನ್ನು ಒಂದು ದಪ್ಪ ಲಕೋಟೆಯೊಳಗೆ ಹಾಕಿ ಚಡ್ಡಿಕಿಸೆಯೊಳಗೆ ಭದ್ರವಾಗಿ ಇಟ್ಟಿದ್ದ. ‘ಸದ್ಯ ಬಚಾವಾದೆ’ ಎಂದು ನಿಟ್ಟುಸಿರು ಬಿಟ್ಟ ಆತ.

ಇನ್ನು ಹೋಗುವುದಾದರೂ ಎಲ್ಲಿಗೆ? ಮಾಡುವುದಾದರೂ ಏನನ್ನು? ಹೊಟ್ಟೆಗೆ ಗತಿಯೇನು? ಅವನು ಜನರ ಗುಂಪಿನಲ್ಲಿಯೇ ಮುಂದೆ ಹೋಗುತ್ತಿದ್ದ. ಯಾರಾದರೂ ಪರಿಚಯದವರು ಸಿಗಬಹುದು ಎನ್ನುವ ಆಸೆ. ಇಲ್ಲ; ಯಾರೂಇಲ್ಲ. ಎಲ್ಲ ಅಪರಿಚಿತರು.

ಅವನು ಸುಮಾರು ಇಪ್ಪತ್ತು ನಿಮಿಷ ದಾರಿ ಸವೆದು ಬಲಪಕ್ಕಕ್ಕೆ ಕಣ್ಣು ಹಾಯಿಸಿದ. ಹೆಚ್ಚಿನವು ಹಳೆಯ ಕಟ್ಟಡಗಳು. ಅಲೊಂ್ಲದು ಎಲ್ಲ ಕಟ್ಟಡಗಳನ್ನು ಮೀರಿನಿಂತ ಒಂದು ಮಸೀದಿ. ನಮಾಝ್ ಮಾಡಲು ಜನರು ಬರುತ್ತಾರೆ; ಸಾಮೂಹಿಕವಾಗಿ ಮೊಣಕಾಲೂರಿ ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸಿ ಹೊರಟು ಹೋಗುತ್ತಾರೆ. ಹೋಗುವಾಗ ಮಸೀದಿಯ ಹೊರಗೆ ಫುಟ್‌ಪಾತ್‌ನಲ್ಲಿ ಸಾಲಾಗಿ ಕುಳಿತ ಭಿಕ್ಷುಕರಿಗೆ ದಾನಧರ್ಮ ಮಾಡುತ್ತಾರೆ. ಕೆಲವರು ಪಕ್ಕದ ಬೇಕರಿಯಿಂದ ಬ್ರೆಡ್ ಖರೀದಿಸಿ ಭಿಕ್ಷುಕರಿಗೆ ಹಂಚುತ್ತಾರೆ. ಅಂತಹವರಲ್ಲಿ ಅಬ್ದುಲ್ಲಾನೂ ಒಬ್ಬನಾಗಿದ್ದ.

ಅವನು ಪಕ್ಕದ ಮರದ ನೆರಳಿನಲ್ಲಿ ನಿಂತು ಇದನ್ನೆಲ್ಲ ನೋಡುತ್ತಿದ್ದಾನೆ. ಹೊಟ್ಟೆ ಹಸಿವೆಯಿಂದ ತಾಳಹಾಕುತ್ತಿದೆ. ಅಬ್ದುಲ್ಲಾ ಅವನ ಮುಖವನ್ನು ನೋಡಿ ಅಥರ್ಮಾಡಿಕೊಂಡ. ರೋಟಿ ತಿನ್ನದೆ ಎಷ್ಟು ದಿನವೊ, ಆದರೆ ಭಿಕ್ಷುಕರ ಹುಡುಗನ ಹಾಗೆ ಕಾಣುವುದಿಲ್ಲವಲ್ಲ?

‘ಬ್ರೆಡ್ ತಿನ್ತಿಯಾ ಬೇಟಾ?’ ಅಬ್ದುಲ್ಲಾ ಕೇಳಿದ.

ಹಾಂ ನೂ ಇಲ್ಲ; ಹೂಂ ನೂ ಇಲ್ಲ. ಅವನು ನಾಚಿಕೆಯಿಂದ ತಲೆ ತಗ್ಗಿಸಿದ. ಅಬ್ದುಲ್ಲಾನಿಗೆ ಹುಡುಗನ ಬಗ್ಗೆ ಕನಿಕರ ಎನಿಸಿತು. ಬ್ರೆಡ್‌ನ್ನು ತೆಗೆದುಕೊಳ್ಳಲು ಸಿದ್ಧನಿಲ್ಲ. ತಾನು ಬೇಡಲು ಬಂದ ಭಿಕಾರಿಯಲ್ಲವೆನ್ನುವ ಭಾವನೆಯಿರಬಹುದು.

‘ಏ ಚೋಕ್ರಾ.....ಮುಂಬೈಗೆ ಹೊಸಬನಂತೆ ಕಾಣುತ್ತಿಯಾ? ಎಲ್ಲಿಂದ ಬಂದೆ? ಎಂದು ಅಬ್ದುಲ್ಲಾ ಹತ್ತಿರ ನಿಂತು ಅವನ ಭುಜದ ಮೇಲೆ ಕೈಯಿಟ್ಟು ವಿಚಾರಿಸಿದ.

‘ಉಡುಪಿಯಿಂದ; ಬಂದು ಒಂದು ವಾರ; ಕೆಲಸ ಇಲ್ಲ; ಯಾವ ಕೆಲಸಾನೂ ಆಗ್ಬೌದು’ ಎಂದು ಅವನು ಅಬ್ದುಲ್ಲಾನಲ್ಲಿ ದೈನ್ಯಭಾವದಿಂದ ವಿನಂತಿಸಿಕೊಂಡ.

‘ಅಷ್ಟೇ ತಾನೇ? ಸರಿ; ನನ್ನೊಟ್ಟಿಗೆ ಬಾ. ನಾನು ಕೆಲ್ಸ ಕೊಡ್ತೀನಿ, ಊಟನೂ ಕೊಡ್ತೀನಿ’ ಅಬ್ದುಲ್ಲಾ ಹೇಳಿದ.

ಅವನು ಅಬ್ದುಲ್ಲಾನನ್ನು ಹಿಂಬಾಲಿಸಿದ. ನಾಗ್‌ಪಾಡಾದ ಒಂದು ಕಿಕ್ಕಿರಿದ ಓಣಿಯಲ್ಲಿ ಅಬ್ದುಲ್ಲಾನ ಮನೆ. ಮನೆಯ ಪಕ್ಕದಲ್ಲಿಯೇ ‘ಅಬ್ದುಲ್ಲಾ ಮಟನ್ ಶಾಪ್’ ಇದೆ. ಆದರೆ ಅಬ್ದುಲ್ಲಾ ನಿಯತಿನ ಮನುಷ್ಯ. ಗಿರಾಕಿ ಗಳಿಗೆ ಮೋಸ ಮಾಡಿದರೆ ಅಲ್ಲಾಹು ಮೆಚ್ಚಲಾರನೆಂದು ಅವನ ನಂಬಿಕೆ.

ಈದ್, ರಮಝಾನ್ ಉಪವಾಸ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ. ಮುಂಜಾನೆ, ಮಧ್ಯಾಹ್ನ, ಸಂಜೆ ತಪ್ಪದೇ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ. ಶುಕ್ರವಾರ ಮತ್ತು ಹಬ್ಬಹರಿದಿನಗಳಲ್ಲಿ ಬಡವರಿಗೆ ದಾನ ಮಾಡುತ್ತಿದ್ದ. ಉಲೆಮಾ, ಖಾಝಿ, ಹಾಜಿಮಲಂಗ್, ಬಾಬಾಗಳು, ಫಕೀರರು, ಸೂಫಿಗಳು, ಅವನ ಆತಿಥ್ಯಕ್ಕೆ ಬೆರಗಾಗುತ್ತಿದ್ದರು.

‘ಏ ರುಕ್ಸಾನಾ....ಇಲ್ಲಿ ನೋಡೇ...ಒಬ್ಬ ಅತಿಥಿಯನ್ನು ಕರ್ಕೊಂಡು ಬಂದಿದ್ದೇನೆ’ ಎಂದು ಹೆಂಡತಿಗೆ ಅವನ ಪರಿಚಯವನ್ನು ಮಾಡಿಕೊಟ್ಟ ಅಬ್ದುಲ್ಲಾ.

‘ಅಂದಹಾಗೆ ಬೇಟಾ...ನಿನ್ನ ಹೆಸರು ಹೇಳಲೇ ಇಲ್ಲವಲ್ಲ’? ಅಬ್ದುಲ್ಲ್ಲಾ ಕೇಳಿದ.

‘ರಾಮ...’

ರುಕ್ಸಾನಾ ರಾಮನಿಗೆ ಹೊಟ್ಟೆ ತುಂಬ ಉಣಬಡಿಸಿದಳು; ಹಸಿವೆ ಇಂಗಿತು; ‘ಇವರು ನಮ್ಮವರಲ್ಲ ಎನ್ನುವುದು ನಿಜ. ಆದರೆ ಅವರ ಅನುಕಂಪ ದಯೆ ಇನ್ನೆಲ್ಲಿ ಸಿಗಬಹುದು? ಅವರು ನನ್ನನ್ನು ಒಬ್ಬ ಅನಾಥ ಹುಡುಗನೆಂದೆ ಗುರುತಿಸಿದರೇ ವಿನಾ ಬೇರೆ ಧರ್ಮದವನೆಂದಲ್ಲ. ‘ಮಾನವತೆಗಿಂತ ದೊಡ್ಡ ಧರ್ಮವೇ ಇಲ್ಲ’ ಎಂದಿತು ಅವನ ಒಳ ಮನಸ್ಸು.

‘ರಾಮ, ನಿನಗಾಗಿ ಒಂದು ಬೇರೆಯೇ ಕೋಣೆ ಇದೆ. ಆ ಕೋಣೆಯಲ್ಲಿ ನೀನಿದ್ದು ಬಿಡು. ನಿನ್ನ ದೇವರ ಫೋಟೋ ಅಲ್ಲಿಯೇ ತೂಗು ಹಾಕು, ನಾಳೆಯಿಂದ ನಿನ್ನ ಕೆಲಸ ಶುರು. ಯಾವ ಯಾವ ಹೊಟೇಲಿಗೆ ಎಷ್ಟು ಕಿಲೋ ಮಟನ್ ಸಪ್ಲೈ ಆಗಿದೆ. ಎಷ್ಟು ಬಿಲ್ ಆಗಿದೆ; ಇನ್ನೆಷ್ಟು ಬಾಕಿ ಇದೆ; ಅಂತೆಯೇ ದಿನ ನಿತ್ಯದ ಮಟನ್ ಶಾಪ್‌ನ ಒಟ್ಟು ವ್ಯಾಪಾರ; ವಾರದಲ್ಲಿ ತೆಗೆದುಕೊಂಡ ಒಟ್ಟು, ಕುರಿ ಆಡು ಹಾಗೂ ಪಾವತಿಸಿದ ಹಣ, ಬಾಕಿ ಇರುವ ಮೊಬಲಗು ಇತ್ಯಾದಿ ಬರೆದು ಲೆಕ್ಕ ಪತ್ರ ಇಡುವ ಕೆಲಸ ನಿನ್ನದು’ ಎಂದ ಅಬ್ದುಲ್ಲಾ.

ರಾಮನ ಪ್ರಾಮಾಣಿಕತೆ, ನಮ್ರತೆಯನ್ನು ಅಬ್ದುಲ್ಲಾ ಮೆಚ್ಚಿಕೊಂಡ. ‘ನೋಡಪ್ಪ ರಾಮ, ನಾವು ಶುಕ್ರವಾರ ತಪ್ಪದೇ ಮಸೀದಿಗೆ ಹೋಗಿ ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ನೀನು ಕೂಡ ನಿನ್ನ ಧರ್ಮದ ನಿಷ್ಠೆಯನ್ನು ಬಿಡಬಾರದು. ನೀನು ಕೂಡ ವಾರಕ್ಕೊದು ಸಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ದೇವಿಗೆ ಪ್ರಾರ್ಥನೆ ಸಲ್ಲಿಸು’ ಎಂದು ಅಬ್ದುಲ್ಲಾ ರಾಮನಿಗೆ ಸಲಹೆ ಮಾಡಿದ.

ರಾಮ ಅಂದಿನಿಂದ ಪ್ರತಿ ಶುಕ್ರವಾರ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನವನ್ನು ಪಡೆಯುತ್ತಿದ್ದ. ‘ಏ ದೇವೀ..ಪರದೇಶಿಯಾಗಿ ತಿರುಗುತ್ತಿದ್ದ ನನ್ನನ್ನು ಅಬ್ದುಲ್ಲಾ ಚಾಚಾ ಅವನ ಮನೆಗೆ ತಂದು ಆಶ್ರಯ ಕೊಟ್ಟ; ಆದರೆ ನಿನ್ನಲ್ಲಿ ನನ್ನದೊಂದು ಬೇಡಿಕೆ ಇದೆ; ನನಗೆ ನಿನ್ನ ಧನ ಕನಕ ಯಾವುದೂ ಬೇಡ; ನನಗೆ ತುಂಬ ಕಲಿಯುವ ಆಸೆ. ಅದಕ್ಕಾಗಿ ಕಾಲೇಜಿಗೆ ಸೇರಬೇಕು. ಚಾಚಾನ ಕೂಡ ಹೇಳಿದರೆ ಒಪ್ಪುತ್ತಾನೋ ಇಲ್ಲವೋ, ಚಾಚಾ ತುಂಬ ಒಳ್ಳೆಯವ; ಅವನಿಗೆ ನೀನೂ ಸ್ವಲ್ಪ ಬುದ್ಧಿ ಕೊಡಪ್ಪ’ ಎಂದು ದೇವಿಯನ್ನು ಬೇಡಿಕೊಳ್ಳುತ್ತಿದ್ದ. ಅಂತೂ ಇಂತು ಜೂನ್ ತಿಂಗಳ ಪ್ರಾರಂಭ. ಕಾಲೇಜು ಸೇರುವ ತರಾತುರಿ; ಒಂದು ಆದಿತ್ಯವಾರ ರಾಮ ಬೆಳಗ್ಗೆ ಎದ್ದವನೇ ಮಟನ್ ಶಾಪಿಗೆ ಹೋದ. ಅಬ್ದುಲ್ಲಾ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಆದಿತ್ಯವಾರ ಗಿರಾಕಿ ಜಾಸ್ತಿ. ಎಲ್ಲರೂ ಸಾಲಾಗಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದರು.

ರಾಮ ಅಬ್ದುಲ್ಲಾನ ಪಕ್ಕದಲ್ಲಿ ಮುಖ ತಗ್ಗಿಸಿ ಅವನನ್ನೇ ನೋಡುತ್ತಿದ್ದ. ಆದರೆ ಕೇಳಲು ಧೈರ್ಯ ಸಾಲದು. ಅಬ್ದುಲ್ಲಾನ ದೃಷ್ಟಿ ರಾಮನ ಕಡೆಗೆ ಬಿತ್ತು. ಅಂಗಡಿ ತನಕ ಯಾವತ್ತೂ ಬಾರದವನು ಇಂದೇಕೆ ಬಂದ? ಎನ್ನುವ ತವಕ ಅಬ್ದುಲ್ಲಾನಿಗೆ.

‘ಏನಾಗ್‌ಬೇಕಿತ್ತು ಬೇಟಾ...? ಎಂದು ಕೇಳಿದ ಅಬ್ದುಲ್ಲಾ; ಕೈ ತನ್ನ ಕೆಲಸವನ್ನು ಮಾಡುತ್ತಲೇ ಇತ್ತು; ತಕ್ಕಡಿ ತನ್ನ ಕೆಲಸದಲ್ಲಿ ಲೀನವಾಗಿತ್ತು.

‘ಏನಿಲ್ಲ...ಚಾಚಾ..ನನಗೆ ಕಾಲೇಜು ಸೇರಬೇಕಂತ ತುಂಬ ಆಸೆ; ನಾನು ಬೆಳಗಿನ ಕಾಲೇಜಿಗೆ ಹೋಗಿ ಕಲಿಯುತ್ತೇನೆ. ಹತ್ತು ಗಂಟೆಯೊಳಗೆ ಕೆಲಸಕ್ಕೆ ಹಾಜರಾಗುತ್ತೇನೆ’ ಎಂದು ತಲೆ ಬಾಗಿಸಿ ಕೈ ಹಿಸುಕುತ್ತ ನಿವೇದಿಸಿಕೊಂಡ ರಾಮ.

‘ಓಹೋ..ಅಷ್ಟೇನಾ..?ಹೆಚ್ಚು ಕಲಿಯುವುದೂ ಬಹಳ ಕತರ್ನಾಕ್ ಬೇಟಾ..ಏಕೆ ಗೊತ್ತಾ? ಕಲ್ತಮೇಲೆ ಅವರಿಗೆ ಜನ್ಮ ಕೊಟ್ಟ ತಂದೆ ತಾಯಿ, ಆಶ್ರಯ ಕೊಟ್ಟ ಯಜಮಾನ, ಸೃಷ್ಟಿಸಿದ ಅಲ್ಲಾಹನ ನೆನಪು ಉಳಿಯುವುದಿಲ್ಲ. ಮೊಹಬತ್, ಪ್ಯಾರ್ ಅಂತ ಪೋರಿಗಳ ಹಿಂದೆ ಸುತ್ತು ತಿರುಗುತ್ತಾರೆ. ನೀತಿ, ನಿಯತ್ತು, ಧರ್ಮ ಎಲ್ಲ ಮರ್ತುಬಿಡ್ತ್ತಾರೆ. ಕಲ್ತು ಒಳ್ಳೆ ಕೆಲ್ಸ ಸಿಕ್ಕಿದ ಮೇಲೆ ಮದುವೆಯಾಗಿ ಹೆಂಡ್ತಿ ಮಕ್ಳನ್ನ ಕಟ್ಟಿಕೊಂಡು ಅವರ ಪೂಜೆ ಮಾಡ್ತಾರೆ. ಮನುಷ್ಯ ನಮಕ್ ಹರಾಮ್ ಆಗ್‌ಬಾರ್ದಪ್ಪಾ..ನಿನ್‌ಗಂತ ಹೇಳ್ತಿಲ್ಲ. ಈಗಿನ ಜಮಾನವೇ ಹಾಗಿದೆ’ ಎಂದು ಬುದ್ಧಿವಾದ ಹೇಳಿದ ಅಬ್ದುಲ್ಲ.

‘ನಾನು ಶ್ರೀರಾಮ ಚಂದ್ರನ ಆಣೆಯಾಗಿಯೂ ಹಾಗೆ ಆಗೋಲ್ಲ ಚಾಚಾ...ನನ್ನನ್ನು ನಂಬು’ ಎಂದು ರಾಮ ವಿನಂತಿಸಿಕೊಂಡ.

‘ನಿನ್ನ ಇಷ್ಟವಿದ್ದಂತೆ ಆಗಲಿ; ಅಲ್ಲಾಹ್ ನಿನಗೆ ಒಳ್ಳೆದು ಮಾಡಲಿ’ ಎಂದು ಕಚಾ ಕಚ್ ಮಾಂಸದ ತುಂಡುಗಳನ್ನು ಕೊಚ್ಚುತ್ತಿದ್ದಂತೆಯೇ ಹೇಳಿದ ಅಬ್ದುಲ್ಲಾ.

ರಾಮನ ಸಂತೋಷಕ್ಕೆ ಅಂದು ಮಿತಿಯೇ ಇಲ್ಲ. ‘ಇಡೀ ರಾತ್ರಿ ಕಾಲೇಜಿನದೇ ಚಿಂತೆ. ಬೆಳಗ್ಗೆ ಎದ್ದವನೇ ಸ್ನಾನಮಾಡಿ ಶ್ರೀರಾಮಚಂದ್ರನ ಫೋಟೋಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ. ಊದುಬತ್ತಿ ಹಚ್ಚಿ ಪ್ರಾರ್ಥನೆ ಮಾಡಿದ, ರುಕ್ಸಾನಾ ಮತ್ತು ಅಬ್ದುಲ್ಲಾನ ಕಾಲಿಗೆ ಅಡ್ಡ ಬಿದ್ದ. ‘ಅಲ್ಲಾಹ್ ನಿನ್ನನ್ನು ಕಾಪಾಡಲಿ; ಹೋಗಿ ಬಾ ಎಂದು ಅಬ್ದುಲ್ಲಾ ರಾಮನನ್ನ ಹರಸಿದ.

ರಾಮ ಪ್ರತಿನಿತ್ಯ ತಪ್ಪದೇ ಕಾಲೇಜಿಗೆ ಹೋಗುತ್ತಿದ್ದ. ಕಾಲೇಜು ಬಿಟ್ಟ ತಕ್ಷಣ ಮನೆಗೆ ಬಂದು ಬೆಳಗಿನ ನಾಸ್ಟಾ ಮುಗಿಸಿ ತನ್ನ ಲೆಕ್ಕ ಪತ್ರದಲ್ಲಿ ಲೀನನಾಗುತ್ತಿದ್ದ. ಮಧ್ಯರಾತ್ರಿಯವರೆಗೂ ತನ್ನ ಕೋಣೆಯಲ್ಲಿ ಕುಳಿತು ಓದುತ್ತಿದ್ದ. ಪರೀಕ್ಷೆಯಲ್ಲಿಯೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತಿದ್ದ. ಕಾಲೇಜಿನಲ್ಲಿ ಯಾರೊಡನೆಯೂ ಹೆಚ್ಚು ಬೆರೆಯುತ್ತಿದ್ದಿಲ್ಲ. ಮಾತಿಗೆ ಮಾತು; ಮುಗುಳ್ನಗೆಗೆ ಮುಗುಳ್ನಗೆ, ಹಲೋ..ಹಲೋ..ಅಷ್ಟೇ. ಅವನ ಕ್ಲಾಸಿನ ವಿದ್ಯಾರ್ಥಿಗಳಿಗೆ ಅವನೊಂದು ರೀತಿಯ ನಿಗೂಢ ವ್ಯಕ್ತಿ. ನಗೆಚಟಾಕಿ, ತಮಾಷೆ, ಹುಡುಗಿಯರಿಗೆ ಮಸ್ಕಿರಿ-ಮಜಾ ಯಾವುದೂ ಇಲ್ಲ.

ಅದೊಂದು ದಿನ ಬೆಳಗ್ಗೆ ಎರಡನೆಯ ಪಿರಿಯಡ್ ಪ್ರಾಧ್ಯಾಪಕರು ರಜೆಯಲ್ಲಿದ್ದರು. ಕ್ಲಾಸಿನ ಹುಡುಗ ಹುಡುಗಿಯರು ಕಾಲೇಜ್ ಕ್ಯಾಂಟೀನ್‌ಗೆ ಹೋದರು. ಯಾಕೋ ಏನೋ ಅವನಿಗೂ ಕಾಲೇಜು ಕ್ಯಾಂಟೀನ್ ನೋಡಬೇಕೆಂದು ಕಾತರ. ಅವನೂ ಹೋದ. ವಿದ್ಯಾರ್ಥಿಗಳ ಮಧ್ಯೆ ಒಂದು ಕುರ್ಚಿ ಖಾಲಿ ಇತ್ತು.ಕುಳಿತುಕೊಂಡ. ಅವನ ಪಕ್ಕದ ಕುರ್ಚಿಯಲ್ಲಿ ಸುರೇಶ್ ಬಾಪಟ್ ಕುಳಿತಿದ್ದ. ಎಲ್ಲರಿಗೂ ಅವನ ‘ಜಾತಕ’ ಕೇಳಬೇಕೆಂಬ ಕುತೂಹಲ. ಬಾಪಟ್‌ಪೀಠಿಕೆ ಹಾಕಿದ.

‘ಅಂದಹಾಗೆ ನಿನ್ನ ಮನೆ ಎಲ್ಲಿ ಮಿಸ್ಟರ್ ರಾಮ್?

‘ನಾಗ್‌ಪಾಡಾ ಐದನೇ ಗಲ್ಲಿ; ಅಬ್ದುಲ್ಲಾ ಅವರ ಮನೆಯಲ್ಲಿ.

‘ಕೆಲಸ?

‘ಅಬ್ದುಲ್ಲಾ ಅವರ ಮಟನ್ ಶಾಪ್ ವ್ಯಾಪಾರದ ಲೆಕ್ಕ ಪತ್ರ.

ವಿದ್ಯಾರ್ಥಿಗಳೆಲ್ಲರೂ ಆವನ ಮುಖವನ್ನೇ ನೋಡುತ್ತಿದ್ದರು. ‘ಮಟನ್ ಶಾಪಿ’ನಲ್ಲಿ ಲೆಕ್ಕ ಪತ್ರ

ಛೀ....

‘ಅವರು ನಿನಗೆ ಏನಾಗಬೇಕು?

‘ಒಂದು ಲೆಕ್ಕದಲ್ಲಿ ಅವರು ನನಗೆ ಯಾರೂ ಅಲ್ಲ. ಮತ್ತೊಂದು ಲೆಕ್ಕದಲ್ಲಿ ಅವರು ನನಗೆ ಸರ್ವಸ್ವ.

‘ಅವರೊಟ್ಟಿಗೆ ಯಾಕೆ ಇರ್ತಿಯಾ? ಅವರ ಆ ಕೆಲ್ಸ ನಿನಗೆ ಹೇಳಿದ್ದಲ್ಲ. ನಿನಗೆ ಒಪ್ಪಿಗೆ ಇದ್ದರೆ ನಾನು ನಿನಗೆ ನಮ್ಮ ಕಂಪೆನಿಯಲ್ಲಿ ಕೆಲ್ಸ ಕೊಡ್ಸಿತೀನಿ’ ಎಂದ ಬಾಪಟ್.

‘ಅವರು ಬೇರೆ ಮನೆ ಮಾಡು; ಬೇರೆ ಕೆಲ್ಸಕ್ಕೆ ಸೇರು’ ಎಂದಾಗ ಮಾತ್ರ ಆ ಬಗ್ಗೆ ಆಲೋಚನೆ. ನನ್ನ ಅಬ್ದುಲ್ಲಾ ಚಾಚಾ ಹಾಗೆಂದೂ ಹೇಳುವವರಲ್ಲ’ ಎಂದು ಖಂಡತುಂಡವಾಗಿ ಹೇಳಿದ ರಾಮ.

‘ಅವ ಡೊಂಕು ಬಾಲದ ನಾಯಕ; ಯಾಕೆ ಶ್ವಾಸ ಖರ್ಚು ಮಾಡ್ತಿಯಾ? ಎಂದು ಒಬ್ಬ ಚಟಾಕಿ ಹಾರಿಸಿದ. ಹುಡುಗಿಯರು ಗೊಳ್ಳೆಂದು ನಕ್ಕರು. ರಾಮನಿಗೆ ಎಲ್ಲಿಲ್ಲದ ಅಪಮಾನ. ಆದರೆ ತಾನು ಒಂಟಿ. ಪ್ರತಿಭಟಿಸಿದರೆ ಅಲ್ಲಿ ಬದುಕುವುದು ಕಷ್ಟ. ತನಗೆ ಏಕೆ ಲೇವಡಿ ಮಾಡಿದರು? ಯಾತಕ್ಕಾಗಿ ತನ್ನನ್ನು ತಾತ್ಸಾರ ಭಾವನೆಯಿಂದ ನೋಡಿದರು. ಎಲ್ಲ ಪೂರ್ವಗ್ರಹ. ಜಗತ್ತಿನಲ್ಲಿ ಒಳ್ಳೆಯವರೂ ಇದ್ದಾರೆ; ಕೆಟ್ಟವರೂ ಇದ್ದಾರೆ; ಪ್ರತಿಯೊಂದು ಧರ್ಮದಲ್ಲಿಯೂ ಒಳ್ಳೆದೂ ಇದೆ. ಕೆಟ್ಟದೂ ಇದೆ. ಪರಿಪೂರ್ಣ, ಪರಿಶುದ್ದ ಎನ್ನುವುದು ಅವರವರ ಭ್ರಮೆ. ಎಲ್ಲರೂ ನನ್ನ ಅಬ್ದುಲ್ಲಾ ಚಾಚಾ ತರ ಆಗಿದ್ದರೆ ಈ ನನ್ನ ಕ್ಲಾಸ್‌ಮೇಟ್‌ಗಳು ನನ್ನನ್ನು ಈ ದೃಷ್ಟಿಯಿಂದ ನೋಡುತ್ತಿದ್ದಿಲ್ಲ. ಯೋಚನೆಗಳು ರಾಮನ ಸ್ಮತಿ ಪಟಲದ ಮೇಲೆ ಹಾದು ಹೋದವು.

ಕಾಲಚಕ್ರ ಉರುಳುತ್ತಿತ್ತು. ರಾಮ ತತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸ್ ಮಾಡಿದ, ಜಗತ್ತಿನ ವಿವಿಧ ಧರ್ಮ, ಮತ, ತತ್ವಜ್ಞಾನಿಗಳ ಪರಿಚಯವನ್ನು ಮಾಡಿಕೊಂಡ.

‘ಚಾಚಾ, ನನ್ನ ಶಿಕ್ಷಣ ಮುಗಿಯಿತು’ ಎಂದು ಅಬ್ದುಲ್ಲಾನಿಗೆ ಸಂತೋಷದ ಸುದ್ದಿಯನ್ನು ಮುಟ್ಟಿಸಿದ. ರಾಮನ ಮುಖದಲ್ಲಿ ಕೃತಜ್ಞತೆಯ ಭಾವವಿತ್ತು.

‘ಸರಿ; ನಿನ್ನ ಕರ್ತವ್ಯ ಮಾಡಿದೆ, ಇದೀಗ ನನ್ನ ಸರದಿ. ಇನ್ನು ನೀನು ಒಳ್ಳೆಯ ಕೆಲಸಕ್ಕೆ ಸೇರಬೇಕು. ನಿನ್ನ ಸ್ವಂತ ಮನೆ ಮಾಡಬೇಕು. ಮದುವೆಯಾಗಿ ಸಂಸಾರವಂದಿಗನಾಗಬೇಕು’. ಎಂದು ಮುಂದಿನ ಜೀವನದ ಬಗ್ಗೆ ಅಬ್ದುಲ್ಲಾ ಸಲಹೆ ಕೊಟ್ಟ.

ಅದೊಂದು ದಿನ ಕಾಲೇಜಿನಿಂದ ಮನೆಗೆ ಒಂದು ಪತ್ರ. ‘ತತ್ವಜ್ಞಾನ ವಿಭಾಗದಲ್ಲಿ ಉಪನ್ಯಾಸಕ ಹುದ್ದೆಯೊಂದು ಖಾಲಿ ಇದೆ. ಆಸಕ್ತಿ ಇದ್ದಲ್ಲಿ ಕೂಡಲೇ ಪ್ರಾಚಾರ್ಯರನ್ನು ಸಂಪರ್ಕಿಸುವುದು.

ರಾಮ ತಾನು ಕಲಿತ ಕಾಲೇಜಿನಲ್ಲಿಯೇ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದ. ಕಾಲೇಜು ಬಿಟ್ಟ ತಕ್ಷಣ ಚಾಚಾನ ಮನೆಗೆ ಬಂದು ಅವನ ಲೆಕ್ಕಪತ್ರ ಬರೆಯುತ್ತಿದ್ದ. ಚಾಚಾಗೆ ಕೆಲಸದಲ್ಲಿ ನೆರವಾಗುತ್ತಿದ್ದ.

‘ಹಾಂ -ರಾಮ, ಒಂದು ಕೆಲಸವಿದೆ; ನಾಳೆ ಕಾಲೇಜ್ ಬಿಟ್ಟವನೇ ನೇರವಾಗಿ ವಿಜಯ ಶೆಟ್ಟಿಯವರ ಹೊಟೇಲಿಗೆ ಹೋಗಬೇಕು. ಅವರ ಬಾಕಿ ಇರುವ ಮಟನ್ ಬಿಲ್ಲು ಸಾಯಂಕಾಲ ಕೊಡುತ್ತಾರಂತೆ’ ಎಂದು ಅಬ್ದುಲ್ಲಾ ಒಂದು ದಿನ ರಾಮನಿಗೆ ಹೇಳಿದ. ರಾಮ ತಪ್ಪದೇ ಮರುದಿವಸ ಸಾಯಂಕಾಲ ಕಲ್ಬಾದೇವಿಯಲ್ಲಿರುವ ಅವರ ಹೊಟೇಲಿಗೆ ಹೋದ. ಶೆಟ್ಟ್ರು ಕ್ಯಾಶಿನಲ್ಲಿರಲಿಲ್ಲ. ವಿಚಾರಿಸಿದ. ಮನೆಗೆ ಬರಲು ಹೇಳಿದ್ದಾರೆಂದು ಮ್ಯಾನೇಜರ್ ಹೇಳಿದ. ರಾಮ ಪೆಡ್ಡರ್‌ರೋಡ್‌ನಲ್ಲಿರುವ ಅವರ ಮನೆಗೆ ಹೋದ. ಪೆಡ್ಡರ್ ರೋಡ್ ಶ್ರೀಮಂತರ ಬಡಾವಣೆ. ಮುಂಬೈಯ ಮಾಯಾಪುರಿ.ವಿಲಾಸ ಜೀವನದ ನರ್ತನ ಶಾಲೆ.

ಏಳನೇ ಅಂತಸ್ತಿನ ಸುಸಜ್ಜಿತ ಫ್ಲಾಟ್‌ನಲ್ಲಿ ವಿಜಯ ಶೆಟ್ಟಿಯವರ ವಾಸ್ತವ್ಯ. ಲಿಫ್ಟಿನಿಂದ ಮೇಲೆ ಹೋಗಿ ಕಾಲಿಂಗ್ ಬೆಲ್ ಒತ್ತಿದ. ಒಳಗಿನಿಂದ ಒಂದು ನಾಯಿ ಬೊಗಳಲಾರಂಭಿಸಿತು. ಶೆಟ್ಟರ ಮಗಳು ಪ್ರಿಯದರ್ಶಿನಿ ಬಾಗಿಲು ತೆರೆದಳು. ಎರಡೂ ಕೈಗಳಿಂದ ಅಲ್ಸೇಶಿಯನ್ ನಾಯಿಯನ್ನು ಅಪ್ಪಿ ಹಿಡಿದಿದ್ದಳು. ‘ಶಟ್ ಅಪ್’ ಎಂದು ನಾಯಿಗೆ ಎಚ್ಚರಿಕೆ ಕೊಟ್ಟಳು. ಯಾರು ಬೇಕಿತ್ತು? ಎಂದು ರಾಮನನ್ನು ಕೇಳಿದಳು ಕುತೂಹಲದಿಂದ.

‘ವಿಜಯ ಶೆಟ್ಟಿಯವರ ಮನೆ ಇದೇ ತಾನೆ? ಅವರಲ್ಲಿ ಸ್ವಲ್ಪ ಮಾತನಾಡುವ ಕೆಲಸವಿದೆ.

ಪ್ರಿಯದರ್ಶಿನಿ ರಾಮನನ್ನು ಹಾಲ್‌ನ ಸೋಫಾದಲ್ಲಿ ಕುಳಿತುಕೊಳ್ಳಲು ಹೇಳಿದಳು. ಶೆಟ್ಟರು ಬೆಡ್ ರೂಮಿನಲ್ಲಿ ಮಲಗಿಕೊಂಡಿದ್ದರು. ಪ್ರಿಯದರ್ಶಿನಿ ಒಳಗೆ ಹೋಗಿ, ಡ್ಯಾಡಿ..ರಾಮ ಬಂದಿದ್ದಾನೆ; ನಿಮ್ಮನ್ನು ಕಾಣಬೇಕಂತೆ.

ಯಾವ ರಾಮ? ಹಾಂ..ಮನೆ ಕೆಲಸದ ‘ರಾಮ’ನೋ. ಅವನ ತಿಂಗಳ ಪಗಾರ ನಿನ್ನೆ ಕೊಟ್ಟಿದ್ದೆ.

‘ಅಲ್ಲ ಡ್ಯಾಡಿ..ಬೇರೆ ರಾಮ; ನೀವು ಹಾಲ್‌ಗೆ ಬನ್ನಿ, ಆಗ ನಿಮಗೆ ಗೊತ್ತಾಗುತ್ತೆ.

ಶೆಟ್ಟರು ಬೇಸಿನ್‌ನಲ್ಲಿ ಮುಖ ತೊಳೆದು ತಲೆಗೂದಲನ್ನು ಬಾಚಿ ಹಾಲ್‌ಗೆ ಬಂದರು.

‘ಅಂದ ಹಾಗೆ ನಿಮ್ಮ ಪರಿಚಯ? ಶೆಟ್ಟರು ರಾಮನನ್ನು ಕೇಳಿದರು.

ನನ್ನ ಹೆಸರು ರಾಮ. ನಾನು ಅಬ್ದುಲ್ಲಾ ಅವರ ಮನೆಯವನು. ಅವರು ನನ್ನ ಚಾಚಾ.

ಓ ತಿಳಿಯಿತು ಬಿಡಿ. ನಿಮ್ಮ ಬಗ್ಗೆ ನಮ್ಮ ಅಬ್ದುಲ್ಲಾ ಅವರಿಗೆ ಮಾತಾಡಿದಷ್ಟು ಇಲ್ಲ. ಅಂದಹಾಗೆ ಕಾಲೇಜಿನಲ್ಲಿ ಕಲಿಸುವ ಕೆಲಸಕ್ಕೆ ಸೇರಿದ್ದೀರಂತೆ. ಮನೆ ಎಲ್ಲಿ ಮಾಡಿದ್ದೀರಿ?

ನಿಮ್ಮ ಊರು? ತಂದೆ ತಾಯಿ?

ರಾಮ ಎಲ್ಲಾ ವರದಿ ಒಪ್ಪಿಸಿದ. ‘ ಓಹೋ ಅವರು ನನ್ನ ತಂದೆಯ ಜಿಗಾರ್ ದೋಸ್ತಿ. ನಿಮ್ಮ ತಂದೆ ತುಂಬಾ ಒಳ್ಳೆಯ ಮನುಷ್ಯ ಎನ್ನುವುದನ್ನು ಕೇಳಿದ್ದೆ. ತುಂಬಾ ಸಂತೋಷ ನಿಮ್ಮನ್ನು ನೋಡಿ. ನಿಮಗೆ ಚಾನೋ, ಕಾಫಿನೋ ಅಥವಾ ಕೋಲ್ಡ್‌ಡ್ರಿಂಕ್ಸ್ ಆಗಬಹುದೋ ಎಂದು ಸತ್ಕಾರದ ಮಾತುಗಳನ್ನು ಹೇಳಿದರು ಶೆಟ್ಟರ್.

‘ಟೀ ಆಗಬಹುದು’ ಎಂದ ರಾಮ. ‘ಪ್ರಿಯಾ... ಎರಡು ಕಪ್ ಟೀ ತಾ ಮಗೂ...’ ಎಂದು ಶೆಟ್ಟರ್ ಮಗಳನ್ನು ಕರೆದರು.

ಮಗಳು ಎರಡು ಕಪ್ ಟೀ ಮತ್ತು ಬಿಸ್ಕಿಟ್ಸ್ ಟ್ರೇಯಲ್ಲಿ ತಂದು ವಯ್ಯ್‌ರದಿಂದ ಟೀಪಾಯ್ ಮೇಲೆ ತಂದಿಟ್ಟಳು. ‘ನೋಡೆ ರಾಜೀವಿ ಇಲ್ಲಿ ಬಾರೆ’ ಎಂದು ಹೆಂಡತಿಯನ್ನು ಕರೆದರು ಶೆಟ್ಟರ್. ರಾಮನ ಪರಿಚಯ ಊರಿನ ಪರಿಚಯ, ಅವನ ಹುದ್ದೆ, ಶಿಕ್ಷಣವನ್ನು ಹೇಳಿದರು. ನೋಡಲು ಲಕ್ಷಣವಾಗಿದ್ದಾನೆ .ಆದರೆ ಬಹಳ ಸಾದಾ ಸರಳ. ಆ ಮೇಲೆ ದಾರಿಗೆ ಬರುತ್ತಾನೆ ಎಂದಿತು ರಾಜೀವಿ ಶೆಟ್ಟರ ಮನಸ್ಸು. ಶೆಟ್ಟರು ಪ್ರಭಾವಶಾಲಿ ವ್ಯಕ್ತಿ. ಹಣವಿದೆ ಅಂದಮೇಲೆ ಎಲ್ಲವೂ ಇದೆ. ಒಂದು ತಿಂಗಳೊಳಗೆ ಅಬ್ದುಲ್ಲಾನನ್ನು ಬಲೆಗೆ ಹಾಕಿಕೊಂಡರು. ನೆಪಿಯನ್ಸ್ ಸೀ ರೋಡ್‌ನಲ್ಲಿ ಒಂದು ಸುಸಜ್ಜಿತ ಫ್ಲಾಟನ್ನು ರಾಮನಿಗೆ ಖರೀದಿಸಿದರು. ಪ್ರಿಯದರ್ಶಿನಿಗೂ ಗಂಡು ನೋಡಿ ನೋಡಿ ಸುಸ್ತಾಗಿತ್ತು. ಅವಳೂ ಒಪ್ಪಿದಳು. ಇನ್ನೋಸೆಂಟ್ ಹಾಗೆ ಕಾಣುತ್ತಾನೆ. ಹಾಗಾಗಿ ಕಿರಿಕಿರಿ ಇಲ್ಲ.’ ಎಂದಿತು ಅವಳ ವ್ಯವಹಾರ ಬುದ್ದಿ.

ರಾಮ ಮತ್ತು ಪ್ರಿಯದರ್ಶಿನಿಗೂ ವಿವಾಹ ವಿಜೃಂಭಣೆಯಿಂದ ಜರುಗಿತು. ಮದುವೆಗೆ ಊರಿನಿಂದ ಅವನ ತಂದೆ, ತಾಯಿ ಮತ್ತು ಮಾವ ಬಂದಿದ್ದರು. ಅಂತೆಯೇ ಕಾಲೇಜಿನ ಅವನ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿ ಮಿತ್ರರು. ಅಬ್ದುಲ್ಲಾ ಮತ್ತು ರುಕ್ಸಾನಾ ಅವರಿಗೆ ಎಲ್ಲಿಲ್ಲದ ಸಂಭ್ರಮ ಸಂತೋಷ. ನಿಮ್ಮ ರಾಮ ಶ್ರೀಮಂತ ಹುಡುಗಿಯನ್ನು ಮದುವೆಯಾದನೆನ್ನುವ ಉಲ್ಲಾಸ ಹರ್ಷ ಹೆಮ್ಮೆ. ರಾಮ ಸಂಸಾರ ಜೀವನದಲ್ಲಿ ಕಾಲಿರಿಸಿದ. ಅದೊಂದು ಈದ್ ಹಬ್ಬ ಅಬ್ದುಲ್ಲಾ ಮತ್ತು ರುಕ್ಸಾನ ಊಟ ಮಾಡುವಾಗ ಇದ್ದಕ್ಕಿದ್ದಂತೆ ರಾಮನ ನೆನಪಾಯಿತು. ತುತ್ತು ಒಳಗೆ ಹೋಗಲೊಲ್ಲದು.

ಇಷ್ಟು ವರ್ಷ ನಮ್ಮ ಬೇಟಾ ರಾಮನೊಂದಿಗೆ ಕುಳಿತು ಊಟ ಮಾಡುತ್ತಿದ್ದೆವು. ಇಂದು ಅವನನ್ನು ಬಿಟ್ಟು ಊಟ ಮಾಡುವ ಬದ್‌ಕಿಸ್‌ಮತ್ ನಮಗೆ ಬಂದೊದಗಿತು. ಎಲ್ಲಾದರೂ ರಾಮ ಸುಖದಲ್ಲಿದ್ದರೆ ಅದೇ ಸಂತೋಷ. ಆದರೂ ತುತ್ತು ಇಬ್ಬರಿಗೂ ಬಾಯಿಯೊಳಗೆ ಸೇರದು. ಇಬ್ಬರಿಗೂ ತಡೆಯಲಾರದ ದುಃಖ. ಅಮೂಲ್ಯ ನಿಧಿಯನ್ನು ಕಳೆದುಕೊಂಡಿದ್ದೇವೆ ಎನ್ನುವ ಮಾನಸಿಕ ನೋವು. ರುಕ್ಸಾನಾ.... ಒಂದು ಬುತ್ತಿಕಟ್ಟು,ತುಪ್ಪದ ಅನ್ನ,ಮಟನ್ ಬಿರಿಯಾನಿ ಅಂದರೆ ಅವನಿಗೆ ಇಷ್ಟ. ನಾವು ಈಗಲೇ ಬಸ್ ಹಿಡಿದು ಅವನ ಮನೆಗೆ ಹೋಗೋಣ. ಅವನಿಗೆ ಈ ಬುತ್ತಿಕಟ್ಟು ಅವ ಸಂಸಾರ ಮಾಡುವುದನ್ನು ನೋಡಿ ಸಂತೋಷ ಪಡುವ. ಆಮೇಲೆ ನಮ್ಮ ಊಟ ಎಂದು ಅಬ್ದುಲ್ಲಾ ಹೆಂಡತಿಗೆ ಹೇಳಿದ. ರುಕ್ಸಾನಾ ಸಮ್ಮತಿಸಿದಳು. ಅಬ್ದುಲ್ಲಾ ಮತ್ತು ರುಕ್ಸಾನಾ ರಾಮನ ಫ್ಲಾಟಿಗೆ ಬಂದು ಕಾಲಿಂಗ್ ಬೆಲ್ ಒತ್ತಿದರು. ರಾಮ ಬಾಗಿಲು ತೆರೆದ.

ನೋಡುವುದೇನು? ತನ್ನ ಚಾಚಾ ಅಬ್ದುಲ್ಲಾ ಮತ್ತು ಚಾಚಿ ರುಕ್ಸಾನಾ ಬಂದಿದ್ದಾರೆ. ಪ್ರಿಯಾ...ನೋಡಿದೆಯಾ ಯಾರು ಬಂದದ್ದು? ಚಾಚಾ ಮತ್ತು ಚಾಚಿ ಬಂದಿದ್ದಾರೆ ’ ಎಂದು ಹೆಂಡತಿಯ ಎದುರಿನಲ್ಲಿ ಅವರಿಗೆ ತನ್ನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಿದ. ‘ಬೇಟಾ ನಿನಗೆ ಈದ್ ಮುಬಾರಕ್ ಹೇಳಲು ನಾವು ಬಂದಿದ್ದೇವೆ. ಅಂತೆಯೇ ನಿನಗೆ ಬಿರಿಯಾನಿ, ತುಪ್ಪದ ಅನ್ನ ತಂದಿದ್ದೀವಿ. ನಿನಗೆ ಬಿರಿಯಾನಿ ಅಂದ್ರೆ ಇಷ್ಟ ಅಲ್ವಾ? ಎಂದು ಚೀಲದಿಂದ ಬುತ್ತಿಯನ್ನು ತೆಗೆದು ರಾಮನ ಕೈಗೆ ಕೊಡಲು ಹೋದ ಅಬ್ದುಲ್ಲಾ. ಪ್ರಿಯಾದರ್ಶಿನಿ ಸಿಡುಕು ಮೊರೆ ಮಾಡಿ ಬುತ್ತಿಯನ್ನು ಕಸಿದುಕೊಂಡು ಅವರಿಗೆ ಬಿರಿಯಾನಿ ಬೇಕಿದ್ದರೆ ನಾನೇ ನಮ್ಮ ಹೊಟೇಲ್‌ನಿಂದ ಫೋನ್ ಮಾಡಿ ತರಿಸ್ತೀನಿ, ಬುತ್ತಿ ಕೊಂಡುಹೋಗಿ ಎಂದು ಬುತ್ತಿಯನ್ನು ಚೀಲದಲ್ಲಿ ಹಾಕಿ ಅಬ್ದುಲ್ಲಾನ ಕೈಗೆ ಕೊಟ್ಟಳು.

‘ದೇವರು ನಿಮಗೆ ಒಳ್ಳೆದು ಮಾಡಲಿ‘ ಎಂದು ಅಬ್ದುಲ್ಲಾ ದಂಪತಿ ರಾಮನಿಗೆ ವಿದಾಯ ಹೇಳಿದರು. ಲಿಫ್ಟಿನಿಂದ ಕೆಳಗೆ ಬರುವಾಗ ಇಬ್ಬರಿಗೂ ಬತ್ತದ ಕಣ್ಣೀರು, ಅವ್ಯಕ್ತ ವೇದನೆ. ರಾಮನಿಗೆ ಇದ್ದಕ್ಕಿದ್ದಂತೆ ಮನಸ್ಸಿಗೆ ಕತ್ತಲು ಕವಿದಂತಾಯಿತು. ತನ್ನ ಪತ್ನಿಯ ಮೇಲೆ ರೇಜಿಗೆ, ಜಿಗುಪ್ಸೆ ಹುಟ್ಟಿತು. ಇವಳು ಪ್ರಿಯದರ್ಶಿನಿಯಲ್ಲ. ಇವಳು ಹೆಣ್ಣು ಕ್ರಿಮಿ ವಿಷಜಂತು. ‘ಪ್ರಿಯದರ್ಶಿನಿ... ಅಬ್ದುಲ್ಲಾ ಚಾಚಾ ಕೊಟ್ಟ ಬುತ್ತಿ ಬರೇ ಬಿರ್ಯಾನಿ ಅಲ್ಲ. ಆ ಬಿರ್ಯಾನಿ ನನ್ನ ಮತ್ತು ಆ ದಂಪತಿಯ ಪ್ರೀತಿಯ ದ್ಯೋತಕ. ಅದನ್ನು ನೀನು ತಿರಸ್ಕರಿಸಿದೆ ಅಂದರೆ ನನ್ನನ್ನೇ ತಿರಸ್ಕರಿಸಿದಂತೆ ಎಂದು ಭಾವಿಸುತ್ತೇನೆ’ ಎಂದು ನೇರವಾಗಿ ಹೇಳಿದ.

‘ಅಬ್ದುಲ್ಲಾ ಚಾಚಾ ಮತ್ತು ರುಕ್ಸಾನಾ ಚಾಚಿಯಿಂದ ನೀನು ಕ್ಷಮೆ ಕೇಳದೆ ನಾನು ಈ ಮನೆಗೆ ಕಾಲಿಡಲಾರೆ . ಇಲ್ಲದಿದ್ದರೆ ಇದೇ ಕೊನೆಯ ವಿದಾಯ’ ಎಂದು ಲಿಫ್ಟಿನಿಂದ ಕೆಳಗೆ ಹೋಗಿ ಜನಸ್ತೋಮದಲ್ಲಿ ರಾಮ ಲೀನನಾದ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top